ವಿರಾಟ ಪರ್ವ: ವೈರಾಟ ಪರ್ವ
೭
ವಿರಾಟಸಭೆಗೆ ಭೀಮಸೇನನ ಪ್ರವೇಶ
ತನ್ನ ಆಸ್ಥಾನವನ್ನು ಪ್ರವೇಶಿಸಿದ ಭೀಮಸೇನನನ್ನು ಯಾರೆಂದು ರಾಜಾ ವಿರಾಟನು ತರ್ಕಿಸಿದುದು (೧-೪). ಭೀಮಸೇನ-ವಿರಾಟರ ಸಂಭಾಷಣೆ ಮತ್ತು ಭೀಮನು ಬಲ್ಲವನೆಂಬ ಹೆಸರಿನಲ್ಲಿ ವಿರಾಟನ ಅಡುಗೆಮನೆಯಲ್ಲಿ ಅಡುಗೆಯವನಾಗಿ ಸೇರಿಕೊಳ್ಳುವುದು (೫-೧೧).
04007001 ವೈಶಂಪಾಯನ ಉವಾಚ|
04007001a ಅಥಾಪರೋ ಭೀಮಬಲಃ ಶ್ರಿಯಾ ಜ್ವಲನ್ನ್|
ಉಪಾಯಯೌ ಸಿಂಹವಿಲಾಸವಿಕ್ರಮಃ|
04007001c ಖಜಂ ಚ ದರ್ವೀಂ ಚ ಕರೇಣ ಧಾರಯನ್ನ್|
ಅಸಿಂ ಚ ಕಾಲಾಂಗಮಕೋಶಮವ್ರಣಂ||
ವೈಶಂಪಾಯನನು ಹೇಳಿದನು: “ಬಳಿಕ ಭೀಮಬಲನೂ, ಸಿಂಹದ ನಡುಗೆಯ ವಿಲಾಸಿಯೂ ಆದ, ಕಾಂತಿಯಿಂದ ಜ್ವಲಿಸುತ್ತಿದ್ದ ಇನ್ನೊಬ್ಬನು ಕೈಯಲ್ಲಿ ಕಡೆಗೋಲನ್ನೂ, ಸೌಟನ್ನೂ, ಒರೆಹಚ್ಚಿದ, ಕಲೆಯಿಲ್ಲದೇ ಹೊಳೆಯುತ್ತಿರುವ ಕತ್ತಿಯನ್ನೂ ಹಿಡಿದು ಅಲ್ಲಿಗೆ ಆಗಮಿಸಿದನು.
04007002a ಸ ಸೂದರೂಪಃ ಪರಮೇಣ ವರ್ಚಸಾ|
ರವಿರ್ಯಥಾ ಲೋಕಮಿಮಂ ಪ್ರಭಾಸಯನ್|
04007002c ಸುಕೃಷ್ಣವಾಸಾ ಗಿರಿರಾಜಸಾರವಾನ್|
ಸ ಮತ್ಸ್ಯರಾಜಂ ಸಮುಪೇತ್ಯ ತಸ್ಥಿವಾನ್||
ಕಪ್ಪುಡುಗೆಯನ್ನುಟ್ಟು ಅಡುಗೆಯವನ ರೂಪಧರಿಸಿದ್ದ ಆ ಹಿಮಾಲಯದಂತೆ ಸತ್ವಯುತನಾಗಿದ್ದ, ಪರಮ ತೇಜಸ್ಸಿನಿಂದ ರವಿಯಂತೆ ಲೋಕವನ್ನೇ ಬೆಳಗುತ್ತಾ ಅವನು ಮತ್ಸ್ಯರಾಜನ ಬಳಿಬಂದು ನಿಂತನು.
04007003a ತಂ ಪ್ರೇಕ್ಷ್ಯ ರಾಜಾ ವರಯನ್ನುಪಾಗತಂ|
ತತೋಽಬ್ರವೀಜ್ಜಾನಪದಾನ್ಸಮಾಗತಾನ್|
04007003c ಸಿಂಹೋನ್ನತಾಂಸೋಽಯಮತೀವ ರೂಪವಾನ್|
ಪ್ರದೃಶ್ಯತೇ ಕೋ ನು ನರರ್ಷಭೋ ಯುವಾ||
ವರವನ್ನು ಕೇಳಲು ಬಂದಿದ್ದ ಅವನನ್ನು ನೋಡಿದ ರಾಜನು ಅಲ್ಲಿ ನೆರೆದಿದ್ದ ಪ್ರಜೆಗಳಲ್ಲಿ ಕೇಳಿದನು: “ಸಿಂಹದಂತೆ ಉನ್ನತವಾದ ಭುಜವುಳ್ಳವನೂ, ಅತೀವ ರೂಪವಂತನೂ ಆದ ಈ ನರರ್ಷಭ ಯುವಕನು ಯಾರು?
04007004a ಅದೃಷ್ಟಪೂರ್ವಃ ಪುರುಷೋ ರವಿರ್ಯಥಾ|
ವಿತರ್ಕಯನ್ನಾಸ್ಯ ಲಭಾಮಿ ಸಂಪದಂ|
04007004c ತಥಾಸ್ಯ ಚಿತ್ತಂ ಹ್ಯಪಿ ಸಂವಿತರ್ಕಯನ್|
ನರರ್ಷಭಸ್ಯಾದ್ಯ ನ ಯಾಮಿ ತತ್ತ್ವತಃ||
ರವಿಯಂತಿರುವ ಈ ವ್ಯಕ್ತಿಯನ್ನು ನಾನು ಹಿಂದೆಲ್ಲೂ ಕಂಡಿಲ್ಲ. ಎಷ್ಟೇ ವಿಚಾರ ಮಾಡಿದರೂ ಇವನ ಹುರುಳನ್ನು ನಾನು ಹಿಡಿಯಲಾರೆ. ಎಷ್ಟೇ ತರ್ಕ ಮಾಡಿದರೂ ಇವನ ಚಿತ್ತವೇನೆಂಬುದು ಇಂದು ನನಗೆ ಸರಿಯಾಗಿ ತಿಳಿಯುತ್ತಿಲ್ಲ.”
04007005a ತತೋ ವಿರಾಟಂ ಸಮುಪೇತ್ಯ ಪಾಂಡವಃ|
ಸುದೀನರೂಪೋ ವಚನಂ ಮಹಾಮನಾಃ|
04007005c ಉವಾಚ ಸೂದೋಽಸ್ಮಿ ನರೇಂದ್ರ ಬಲ್ಲವೋ|
ಭಜಸ್ವ ಮಾಂ ವ್ಯಂಜನಕಾರಮುತ್ತಮಂ||
ಆಗ ದೀನರೂಪನೂ ಮಹಾಮನಸ್ವಿಯೂ ಆದ ಆ ಪಾಂಡವನು ವಿರಾಟನನ್ನು ಸಮೀಪಿಸಿ ನುಡಿದನು: “ರಾಜ ! ನಾನು ಬಲ್ಲವ ಎನ್ನುವ ಅಡುಗೆಯವನು. ಉತ್ತಮ ಅಡುಗೆಯನ್ನು ಮಾಡುವ ನನ್ನನ್ನು ನೇಮಿಸಿಕೋ!”
04007006 ವಿರಾಟ ಉವಾಚ|
04007006a ನ ಸೂದತಾಂ ಮಾನದ ಶ್ರದ್ದಧಾಮಿ ತೇ|
ಸಹಸ್ರನೇತ್ರಪ್ರತಿಮೋ ಹಿ ದೃಶ್ಯಸೇ|
04007006c ಶ್ರಿಯಾ ಚ ರೂಪೇಣ ಚ ವಿಕ್ರಮೇಣ ಚ|
ಪ್ರಭಾಸಿ ತಾತಾನವರೋ ನರೇಷ್ವಿಹ||
ವಿರಾಟನು ಹೇಳಿದನು: “ಮಾನದ! ನೀನು ಅಡುಗೆಯವನು ಎನ್ನುವುದನ್ನು ನಾನು ನಂಬುವುದಿಲ್ಲ. ಇಂದ್ರನ ಹಾಗೆ ಕಾಣುತ್ತಿದ್ದೀಯೆ. ತಾತ! ಕಾಂತಿ, ರೂಪ, ಮತ್ತು ವಿಕ್ರಮಗಳಲ್ಲಿ ಇಲ್ಲಿರುವ ಎಲ್ಲರಿಗಿಂತಲೂ ಹೆಚ್ಚು ಹೊಳೆಯುತ್ತಿರುವೆ. ”
04007007 ಭೀಮ ಉವಾಚ|
04007007a ನರೇಂದ್ರ ಸೂದಃ ಪರಿಚಾರಕೋಽಸ್ಮಿ ತೇ|
ಜಾನಾಮಿ ಸೂಪಾನ್ಪ್ರಥಮೇನ ಕೇವಲಾನ್|
04007007c ಆಸ್ವಾದಿತಾ ಯೇ ನೃಪತೇ ಪುರಾಭವನ್|
ಯುಧಿಷ್ಠಿರೇಣಾಪಿ ನೃಪೇಣ ಸರ್ವಶಃ||
ಭೀಮನು ಹೇಳಿದನು: “ನರೇಂದ್ರ! ನಾನು ನಿನಗೆ ಅಡುಗೆಯವನು ಮತ್ತು ಪರಿಚಾರಕ. ಮೊದಲನೆಯದಾಗಿ ನನಗೆ ಉತ್ತಮ ಅಡುಗೆಗಳನ್ನು ಮಾಡಲು ಮಾತ್ರ ಗೊತ್ತು. ನೃಪತೇ! ಹಿಂದೆ ನೃಪ ಯುಧಿಷ್ಠಿರನೂ ಕೂಡ ಅವೆಲ್ಲವನ್ನೂ ಆಸ್ವಾದಿಸುತ್ತಿದ್ದ.
04007008a ಬಲೇನ ತುಲ್ಯಶ್ಚ ನ ವಿದ್ಯತೇ ಮಯಾ|
ನಿಯುದ್ಧಶೀಲಶ್ಚ ಸದೈವ ಪಾರ್ಥಿವ|
04007008c ಗಜೈಶ್ಚ ಸಿಂಹೈಶ್ಚ ಸಮೇಯಿವಾನಹಂ|
ಸದಾ ಕರಿಷ್ಯಾಮಿ ತವಾನಘ ಪ್ರಿಯಂ||
ಪಾರ್ಥಿವ! ಬಲದಲ್ಲಿ ನನ್ನ ಸರಿಸಮನಾದವರೂ ಯಾರೂ ಇಲ್ಲ, ಮತ್ತು ನಾನು ಯಾವಾಗಲೂ ಮಲ್ಲಯುದ್ಧದಲ್ಲಿ ತೊಡಗುತ್ತೇನೆ. ಅನಘ! ಆನೆ ಸಿಂಹಗಳನ್ನು ಎದುರಿಸಿ ಹೋರಾಡುವ ನಾನು ನಿನಗೆ ಯಾವಾಗಲೂ ಪ್ರಿಯವಾದುದ್ದನ್ನೇ ಮಾಡುವೆ.”
04007009 ವಿರಾಟ ಉವಾಚ|
04007009a ದದಾಮಿ ತೇ ಹಂತ ವರಂ ಮಹಾನಸೇ|
ತಥಾ ಚ ಕುರ್ಯಾಃ ಕುಶಲಂ ಹಿ ಭಾಷಸೇ|
04007009c ನ ಚೈವ ಮನ್ಯೇ ತವ ಕರ್ಮ ತತ್ಸಮಂ|
ಸಮುದ್ರನೇಮಿಂ ಪೃಥಿವೀಂ ತ್ವಮರ್ಹಸಿ||
ವಿರಾಟನು ಹೇಳಿದನು: “ನಿನಗೆ ನಾನು ವರವನ್ನು ನೀಡುತ್ತೇನೆ. ರಾಜಭವನದ ಅಡುಗೆಮನೆಯಲ್ಲಿ ನಿನಗೆ ಮನಬಂದಂತೆ ಮಾಡಿಕೊಂಡಿರು. ನೀನು ಬಹಳ ಕುಶಲವಾಗಿ ಮಾತನಾಡುತ್ತೀಯೆ. ಈ ಕೆಲಸವು ನಿನಗೆ ಸರಿಸಮನಾದುದೆಂದು ನನಗನ್ನಿಸುವುದಿಲ್ಲ. ನೀನು ಸಮುದ್ರವೇ ದಡವಾಗಿರುವ ಭೂಮಿಗೆ ಅರ್ಹನಾಗಿದ್ದೀಯೆ.
04007010a ಯಥಾ ಹಿ ಕಾಮಸ್ತವ ತತ್ತಥಾ ಕೃತಂ|
ಮಹಾನಸೇ ತ್ವಂ ಭವ ಮೇ ಪುರಸ್ಕೃತಃ|
04007010c ನರಾಶ್ಚ ಯೇ ತತ್ರ ಮಮೋಚಿತಾಃ ಪುರಾ|
ಭವಸ್ವ ತೇಷಾಮಧಿಪೋ ಮಯಾ ಕೃತಃ||
ನೀನು ಬಯಸಿದಂತೆಯೇ ಮಾಡಿದ್ದೇನೆ. ನನ್ನಿಂದ ಪುರಸ್ಕೃತನಾಗಿ ಅಡುಗೆಮನೆಯಲ್ಲಿ ಇರು. ನಿನಗಿಂತ ಮೊದಲು ನಿಯೋಜಿಸಿದವರಿಗೆ ನೀನು ಮುಖ್ಯಸ್ಥನಾಗಿ ನನ್ನಿಂದ ನೇಮಕಗೊಂಡಿರು.””
04007011 ವೈಶಂಪಾಯನ ಉವಾಚ|
04007011a ತಥಾ ಸ ಭೀಮೋ ವಿಹಿತೋ ಮಹಾನಸೇ|
ವಿರಾಟರಾಜ್ಞೋ ದಯಿತೋಽಭವದ್ದೃಢಂ|
04007011c ಉವಾಸ ರಾಜನ್ನ ಚ ತಂ ಪೃಥಗ್ಜನೋ|
ಬುಬೋಧ ತತ್ರಾನುಚರಶ್ಚ ಕಶ್ಚನ||
ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಭೀಮನು ರಾಜಭವನದ ಅಡುಗೆಮನೆಯಲ್ಲಿ ನೇಮಕಗೊಂಡು ವಿರಾಟರಾಜನಿಗೆ ತುಂಬಾ ಪ್ರಿಯನಾಗಿ ವಾಸಮಾಡುತ್ತಿದ್ದನು. ಅಲ್ಲಿ ಅವನನ್ನು ಸಾಮಾನ್ಯ ಪ್ರಜೆಗಳಾಗಲೀ ರಾಜನ ಅನುಚರರಾಗಲೀ ಗುರುತಿಸಲಿಲ್ಲ.””
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಭೀಮಪ್ರವೇಶೋ ನಾಮ ಸಪ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಭೀಮಪ್ರವೇಶವೆನ್ನುವ ಏಳನೆಯ ಅಧ್ಯಾಯವು.