ವಿರಾಟ ಪರ್ವ: ವೈರಾಟ ಪರ್ವ
೩
ನಕುಲ, ಸಹದೇವ, ದ್ರೌಪದಿಯರ ಪಾತ್ರ ನಿಶ್ಚಯ
ವಿರಾಟನೃಪನಲ್ಲಿ ಗ್ರಂಥಿಕನೆಂಬ ಹೆಸರನ್ನಿಟ್ಟುಕೊಂಡು ಅಶ್ವಬಂಧುವಾಗುತ್ತೇನೆಂದು ನಕುಲನು (೧-೪) ಮತ್ತು ವಿರಾಟನಲ್ಲಿ ತಂತಿಪಾಲನೆಂಬ ಗೋಸಂಖ್ಯಾತನಾಗುತ್ತೇನೆಂದು ಸಹದೇವನು (೫-೧೧) ನಿರ್ಧರಿಸುವುದು. ಕೇಶಕರ್ಮದಲ್ಲಿ ಕುಶಲಳಾದ ಸೈರಂಧ್ರಿ ಎಂದು ಹೇಳಿಕೊಂಡು ನನ್ನನ್ನು ಅಡಗಿಸಿಕೊಂಡಿರುತ್ತೇನೆ ಎಂದು ದ್ರೌಪದಿಯು ಹೇಳುವುದು (೧೨-೧೯).
04003001 ಯುಧಿಷ್ಠಿರ ಉವಾಚ|
04003001a ಕಿಂ ತ್ವಂ ನಕುಲ ಕುರ್ವಾಣಸ್ತತ್ರ ತಾತ ಚರಿಷ್ಯಸಿ|
04003001c ಸುಕುಮಾರಶ್ಚ ಶೂರಶ್ಚ ದರ್ಶನೀಯಃ ಸುಖೋಚಿತಃ||
ಯುಧಿಷ್ಠಿರನು ಹೇಳಿದನು: “ಮಗು ನಕುಲ! ಸುಕುಮಾರನೂ, ಸುಂದರನೂ, ಸುಖಾರ್ಹನೂ, ಶೂರನೂ ಆದ ನೀನು ಅಲ್ಲಿ ಏನು ಮಾಡುವೆ? ”
04003002 ನಕುಲ ಉವಾಚ|
04003002a ಅಶ್ವಬಂಧೋ ಭವಿಷ್ಯಾಮಿ ವಿರಾಟನೃಪತೇರಹಂ|
04003002c ಗ್ರಂಥಿಕೋ ನಾಮ ನಾಮ್ನಾಹಂ ಕರ್ಮೈತತ್ಸುಪ್ರಿಯಂ ಮಮ||
ನಕುಲನು ಹೇಳಿದನು: “ನಾನು ವಿರಾಟನೃಪನಲ್ಲಿ ಅಶ್ವಬಂಧುವಾಗುತ್ತೇನೆ. ಗ್ರಂಥಿಕನೆಂಬ ಹೆಸರನ್ನಿಟ್ಟುಕೊಂಡು ನನಗೆ ಪ್ರಿಯವಾದ ಈ ಕೆಲಸವನ್ನು ಮಾಡುತ್ತೇನೆ.
04003003a ಕುಶಲೋಽಸ್ಮ್ಯಶ್ವಶಿಕ್ಷಾಯಾಂ ತಥೈವಾಶ್ವಚಿಕಿತ್ಸಿತೇ|
04003003c ಪ್ರಿಯಾಶ್ಚ ಸತತಂ ಮೇಽಶ್ವಾಃ ಕುರುರಾಜ ಯಥಾ ತವ||
ಕುರುರಾಜ! ಅಶ್ವಶಿಕ್ಷೆಯಲ್ಲಿ ಹಾಗೂ ಅಶ್ವ ಚಿಕಿತ್ಸೆಯಲ್ಲಿ ಕುಶಲನಾಗಿರುವ ನನಗೂ ಕೂಡ ನಿನ್ನಂತೆ ಅಶ್ವಗಳು ಸತತವೂ ಪ್ರಿಯ.
04003004a ಯೇ ಮಾಮಾಮಂತ್ರಯಿಷ್ಯಂತಿ ವಿರಾಟನಗರೇ ಜನಾಃ|
04003004c ತೇಭ್ಯ ಏವಂ ಪ್ರವಕ್ಷ್ಯಾಮಿ ವಿಹರಿಷ್ಯಾಮ್ಯಹಂ ಯಥಾ||
ವಿರಾಟನಗರದ ಜನರು ನನ್ನನ್ನು ಕೇಳಿದರೆ ಇದನ್ನೇ ಹೇಳಿಕೊಂಡು ವಾಸಿಸುತ್ತೇನೆ.”
04003005 ಯುಧಿಷ್ಠಿರ ಉವಾಚ|
04003005a ಸಹದೇವ ಕಥಂ ತಸ್ಯ ಸಮೀಪೇ ವಿಹರಿಷ್ಯಸಿ|
04003005c ಕಿಂ ವಾ ತ್ವಂ ತಾತ ಕುರ್ವಾಣಃ ಪ್ರಚ್ಛನ್ನೋ ವಿಚರಿಷ್ಯಸಿ||
ಯುಧಿಷ್ಠಿರನು ಹೇಳಿದನು: “ಮಗು ಸಹದೇವ! ಅವನಲ್ಲಿ ನೀನು ಹೇಗೆ ವಾಸಿಸುವೆ? ನೀನು ಹೇಗೆ ವೇಷ ಮರೆಸಿಕೊಂಡಿರುವೆ?”
04003006 ಸಹದೇವ ಉವಾಚ|
04003006a ಗೋಸಂಖ್ಯಾತಾ ಭವಿಷ್ಯಾಮಿ ವಿರಾಟಸ್ಯ ಮಹೀಪತೇಃ|
04003006c ಪ್ರತಿಷೇದ್ಧಾ ಚ ದೋಗ್ಧಾ ಚ ಸಂಖ್ಯಾನೇ ಕುಶಲೋ ಗವಾಂ||
ಸಹದೇವನು ಹೇಳಿದನು: “ಮಹೀಪತಿ ವಿರಾಟನ ಗೋಸಂಖ್ಯಾತನಾಗುತ್ತೇನೆ. ಗೋವುಗಳನ್ನು ಪಳಗಿಸುವುದರಲ್ಲಿ, ಹಾಲುಕರೆಯುವುದರಲ್ಲಿ ಮತ್ತು ಎಣಿಸುವುದರಲ್ಲಿ ನಾನು ಕುಶಲ.
04003007a ತಂತಿಪಾಲ ಇತಿ ಖ್ಯಾತೋ ನಾಮ್ನಾ ವಿದಿತಮಸ್ತು ತೇ|
04003007c ನಿಪುಣಂ ಚ ಚರಿಷ್ಯಾಮಿ ವ್ಯೇತು ತೇ ಮಾನಸೋ ಜ್ವರಃ||
ತಂತಿಪಾಲನೆಂಬ ಖ್ಯಾತನಾಮದಿಂದ ನಿಪುಣನಾಗಿ ನಡೆದುಕೊಳ್ಳುತ್ತೇನೆ. ಇದನ್ನು ತಿಳಿದು ನಿನ್ನ ಮಾನಸಿಕ ಕಳವಳ ತೊಲಗಲಿ.
04003008a ಅಹಂ ಹಿ ಭವತಾ ಗೋಷು ಸತತಂ ಪ್ರಕೃತಃ ಪುರಾ|
04003008c ತತ್ರ ಮೇ ಕೌಶಲಂ ಕರ್ಮ ಅವಬುದ್ಧಂ ವಿಶಾಂ ಪತೇ||
ವಿಶಾಂಪತೇ! ಹಿಂದೆ ನಾನೇ ನಿನ್ನ ಗೋವುಗಳ ಕೆಲಸವನ್ನು ಸತತವೂ ನಿರ್ವಹಿಸುತ್ತಿದ್ದೆ. ಆ ಕೆಲಸದಲ್ಲಿ ನನ್ನ ಕೌಶಲ್ಯವನ್ನು ನೀನು ತಿಳಿದಿದ್ದೀಯೆ.
04003009a ಲಕ್ಷಣಂ ಚರಿತಂ ಚಾಪಿ ಗವಾಂ ಯಚ್ಚಾಪಿ ಮಂಗಲಂ|
04003009c ತತ್ಸರ್ವಂ ಮೇ ಸುವಿದಿತಮನ್ಯಚ್ಚಾಪಿ ಮಹೀಪತೇ||
ಮಹೀಪತೇ! ಗೋವುಗಳ ಲಕ್ಷಣ, ಚರಿತ ಮತ್ತು ಮಂಗಲ ಎಲ್ಲವನ್ನೂ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ.
04003010a ವೃಷಭಾನಪಿ ಜಾನಾಮಿ ರಾಜನ್ಪೂಜಿತಲಕ್ಷಣಾನ್|
04003010c ಯೇಷಾಂ ಮೂತ್ರಮುಪಾಘ್ರಾಯ ಅಪಿ ವಂಧ್ಯಾ ಪ್ರಸೂಯತೇ||
ರಾಜನ್! ಯಾವುದರ ಕೇವಲ ಮೂತ್ರವನ್ನು ಮೂಸಿ ಗೊಡ್ಡು ಹಸುಗಳೂ ಕೂಡ ಈಯುತ್ತವೆಯೋ ಅಂಥಹ ಪೂಜಿತಲಕ್ಷಣಗಳನ್ನುಳ್ಳ ಹೋರಿಗಳನ್ನೂ ತಿಳಿದಿದ್ದೇನೆ.
04003011a ಸೋಽಹಮೇವಂ ಚರಿಷ್ಯಾಮಿ ಪ್ರೀತಿರತ್ರ ಹಿ ಮೇ ಸದಾ|
04003011c ನ ಚ ಮಾಂ ವೇತ್ಸ್ಯತಿ ಪರಸ್ತತ್ತೇ ರೋಚತು ಪಾರ್ಥಿವ||
ಸದಾ ನನಗೆ ಸಂತೋಷವನ್ನು ನೀಡುವ ಈ ರೀತಿಯಲ್ಲಿಯೇ ಅಲ್ಲಿ ವಾಸಿಸುವೆನು. ಇತರರು ನನ್ನನ್ನು ತಿಳಿಯಲಾರರು. ಪಾರ್ಥಿವ! ನಿನಗೆ ಇದು ಇಷ್ಟವಾಗುತ್ತದೆ.”
04003012 ಯುಧಿಷ್ಠಿರ ಉವಾಚ|
04003012a ಇಯಂ ತು ನಃ ಪ್ರಿಯಾ ಭಾರ್ಯಾ ಪ್ರಾಣೇಭ್ಯೋಽಪಿ ಗರೀಯಸೀ|
04003012c ಮಾತೇವ ಪರಿಪಾಲ್ಯಾ ಚ ಪೂಜ್ಯಾ ಜ್ಯೇಷ್ಠೇವ ಚ ಸ್ವಸಾ||
04003013a ಕೇನ ಸ್ಮ ಕರ್ಮಣಾ ಕೃಷ್ಣಾ ದ್ರೌಪದೀ ವಿಚರಿಷ್ಯತಿ|
04003013c ನ ಹಿ ಕಿಂ ಚಿದ್ವಿಜಾನಾತಿ ಕರ್ಮ ಕರ್ತುಂ ಯಥಾ ಸ್ತ್ರಿಯಃ||
ಯುಧಿಷ್ಠಿರನು ಹೇಳಿದನು: “ಮಾತೆಯಂತೆ ಪರಿಪಾಲನ ಯೋಗ್ಯಳಾದ, ಅಕ್ಕನಂತೆ ಪೂಜನೀಯಳಾದ, ನಮ್ಮ ಪ್ರಾಣಗಳಿಗಿಂಥಲೂ ದೊಡ್ಡವಳಾದ ನಮ್ಮ ಪ್ರಿಯ ಭಾರ್ಯೆ, ಇತರ ಸ್ತ್ರೀಯರಂತೆ ಯಾವ ಕೆಲಸವನ್ನೂ ಮಾಡಲರಿಯದ ದ್ರೌಪದಿ ಕೃಷ್ಣೆಯು ಯಾವ ಕಾರ್ಯವನ್ನು ಮಾಡುವಳು?
04003014a ಸುಕುಮಾರೀ ಚ ಬಾಲಾ ಚ ರಾಜಪುತ್ರೀ ಯಶಸ್ವಿನೀ|
04003014c ಪತಿವ್ರತಾ ಮಹಾಭಾಗಾ ಕಥಂ ನು ವಿಚರಿಷ್ಯತಿ||
04003015a ಮಾಲ್ಯಗಂಧಾನಲಂಕಾರಾನ್ವಸ್ತ್ರಾಣಿ ವಿವಿಧಾನಿ ಚ|
04003015c ಏತಾನ್ಯೇವಾಭಿಜಾನಾತಿ ಯತೋ ಜಾತಾ ಹಿ ಭಾಮಿನೀ||
ಹುಟ್ಟಿದಾಗಿನಿಂದ ಮಾಲೆ, ಸುಗಂಧ, ಅಲಂಕಾರ ಮತ್ತು ವಿವಿಧವಸ್ತ್ರಗಳ ಹೊರತಾಗಿ ಬೇರೆ ಏನನ್ನೂ ತಿಳಿಯದಿರುವ ಈ ಭಾಮಿನೀ, ಸುಕುಮಾರಿ, ಬಾಲಕಿ, ರಾಜಪುತ್ರಿ, ಯಶಸ್ವಿನೀ, ಪತಿವ್ರತೆ, ಮಹಾಭಾಗೆಯು ಹೇಗೆ ನಡೆದುಕೊಳ್ಳುವಳು?”
04003016 ದ್ರೌಪದ್ಯುವಾಚ|
04003016a ಸೈರಂಧ್ರ್ಯೋಽರಕ್ಷಿತಾ ಲೋಕೇ ಭುಜಿಷ್ಯಾಃ ಸಂತಿ ಭಾರತ|
04003016c ನೈವಮನ್ಯಾಃ ಸ್ತ್ರಿಯೋ ಯಾಂತಿ ಇತಿ ಲೋಕಸ್ಯ ನಿಶ್ಚಯಃ||
ದ್ರೌಪದಿಯು ಹೇಳಿದಳು: “ಭಾರತ! ಲೋಕದಲ್ಲಿ ರಕ್ಷಣೆಯಿಲ್ಲದ ಸೈರಂಧ್ರಿಯರೆಂಬ ದಾಸಿಯರಿರುತ್ತಾರೆ. ಇತರ ಸ್ತ್ರೀಯರು ಇವರಂತೆ ಇರುವುದಿಲ್ಲವೆನ್ನುವುದು ಲೋಕನಿಶ್ಚಯ.
04003017a ಸಾಹಂ ಬ್ರುವಾಣಾ ಸೈರಂಧ್ರೀ ಕುಶಲಾ ಕೇಶಕರ್ಮಣಿ|
04003017c ಆತ್ಮಗುಪ್ತಾ ಚರಿಷ್ಯಾಮಿ ಯನ್ಮಾಂ ತ್ವಮನುಪೃಚ್ಛಸಿ||
ನೀನು ನನ್ನನ್ನು ಕೇಳಿದುದಕ್ಕೆ ನಾನು ಕೇಶಕರ್ಮದಲ್ಲಿ ಕುಶಲಳಾದ ಸೈರಂಧ್ರಿ ಎಂದು ಹೇಳಿಕೊಂಡು ನನ್ನನ್ನು ಅಡಗಿಸಿಕೊಂಡಿರುತ್ತೇನೆ.
04003018a ಸುದೇಷ್ಣಾಂ ಪ್ರತ್ಯುಪಸ್ಥಾಸ್ಯೇ ರಾಜಭಾರ್ಯಾಂ ಯಶಸ್ವಿನೀಂ|
04003018c ಸಾ ರಕ್ಷಿಷ್ಯತಿ ಮಾಂ ಪ್ರಾಪ್ತಾಂ ಮಾ ತೇ ಭೂದ್ದುಃಖಮೀದೃಶಂ||
ಯಶಸ್ವಿನೀ ರಾಜಭಾರ್ಯೆ ಸುದೇಷ್ಣೆಯ ಬಳಿ ಇರುತ್ತೇನೆ. ನನ್ನನ್ನು ಪಡೆದ ಅವಳು ರಕ್ಷಿಸುತ್ತಾಳೆ. ಇದರ ಕುರಿತು ನಿನಗೆ ದುಃಖ ಬೇಡ.”
04003019 ಯುಧಿಷ್ಠಿರ ಉವಾಚ|
04003019a ಕಲ್ಯಾಣಂ ಭಾಷಸೇ ಕೃಷ್ಣೇ ಕುಲೇ ಜಾತಾ ಯಥಾ ವದೇತ್|
04003019c ನ ಪಾಪಮಭಿಜಾನಾಸಿ ಸಾಧು ಸಾಧ್ವೀವ್ರತೇ ಸ್ಥಿತಾ||
ಯುಧಿಷ್ಠಿರನು ಹೇಳಿದನು: “ಕೃಷ್ಣೇ! ಕುಲದಲ್ಲಿ ಹುಟ್ಟಿದವರಂತೆ ಮಂಗಳಕರ ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಸಾಧ್ವೀವ್ರತದಲ್ಲಿರುವ ನೀನು ಪಾಪವನ್ನರಿತಿಲ್ಲ.”
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ತೃತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಮೂರನೆಯ ಅಧ್ಯಾಯವು.