ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೩೬
ಸೊಕ್ಕಿನಿಂದ ವಿನಾಶಹೊಂದುತ್ತೀಯೆ ಎಂದೂ ರೈಭ್ಯ ಮತ್ತು ಅವನ ಮಕ್ಕಳನ್ನು ಮೀರಿಸಲು ಪ್ರಯತ್ನಪಡಬೇಡವೆಂದು ಭರದ್ವಾಜನು ಮಗನಿಗೆ ಹೇಳುವುದು; ಯವಕ್ರಿಯು ಒಪ್ಪಿಕೊಳ್ಳುವುದು (೧-೧೮).
03136001 ಯವಕ್ರೀರುವಾಚ|
03136001a ಪ್ರತಿಭಾಸ್ಯಂತಿ ವೈ ವೇದಾ ಮಮ ತಾತಸ್ಯ ಚೋಭಯೋಃ|
03136001c ಅತಿ ಚಾನ್ಯಾನ್ಭವಿಷ್ಯಾವೋ ವರಾ ಲಬ್ಧಾಸ್ತಥಾ ಮಯಾ||
ಯವಕ್ರಿಯು ಹೇಳಿದನು: “ತಂದೇ! ನಮಗಿಬ್ಬರಿಗೂ ವೇದಗಳು ಪ್ರಕಟಗೊಳ್ಳುತ್ತವೆ, ಮತ್ತು ಇತರರಿಗಿಂತ ಮೇಲಾಗಬಹುದು. ಈ ರೀತಿಯ ವರವನ್ನು ನಾನು ಪಡೆದಿದ್ದೇನೆ.”
03136002 ಭರದ್ವಾಜ ಉವಾಚ|
03136002a ದರ್ಪಸ್ತೇ ಭವಿತಾ ತಾತ ವರಾಽಲ್ಲಬ್ಧ್ವಾ ಯಥೇಪ್ಸಿತಾನ್|
03136002c ಸ ದರ್ಪಪೂರ್ಣಃ ಕೃಪಣಃ ಕ್ಷಿಪ್ರಮೇವ ವಿನಶ್ಯಸಿ||
ಭರದ್ವಾಜನು ಹೇಳಿದನು: “ಮಗೂ! ನೀನು ಬಯಸಿದ ವರಗಳನ್ನು ಪಡೆದು ನಿನಗೆ ಹೆಮ್ಮೆಯಿನಿಸಿರಬಹುದು. ಆ ಸೊಕ್ಕು ತುಂಬಿ ನೀನು ಬೇಗನೇ ಅತಿ ಕೆಟ್ಟದಾಗಿ ವಿನಾಶವನ್ನು ಹೊಂದುತ್ತೀಯೆ.
03136003a ಅತ್ರಾಪ್ಯುದಾಹರಂತೀಮಾ ಗಾಥಾ ದೇವೈರುದಾಹೃತಾಃ|
03136003c ಋಷಿರಾಸೀತ್ಪುರಾ ಪುತ್ರ ಬಾಲಧಿರ್ನಾಮ ವೀರ್ಯವಾನ್||
ಇದರ ಮೇಲೆ ಹಿಂದೆ ದೇವತೆಗಳು ಹೇಳಿದ ಗಾಥೆಯನ್ನು ಹೇಳುತ್ತಾರೆ: ಮಗನೇ! ಹಿಂದೆ ಬಾಲಧಿ ಎಂಬ ಹೆಸರಿನ ವೀರ್ಯವಂತ ಋಷಿಯಿದ್ದನು.
03136004a ಸ ಪುತ್ರಶೋಕಾದುದ್ವಿಗ್ನಸ್ತಪಸ್ತೇಪೇ ಸುದುಶ್ಚರಂ|
03136004c ಭವೇನ್ಮಮ ಸುತೋಽಮರ್ತ್ಯ ಇತಿ ತಂ ಲಬ್ಧವಾಂಶ್ಚ ಸಃ||
ಅವನು ಪುತ್ರಶೋಕದಿಂದ ಉದ್ವಿಗ್ನನಾಗಿ ನನಗೆ ಅಮರನಾದ ಮಗನಾಗಲಿ ಎಂದು ದುಷ್ಕರ ತಪಸ್ಸನ್ನು ತಪಿಸಿದನು ಮತ್ತು ಅಂಥವನು ಅವನಿಗೆ ದೊರಕಿದ ಕೂಡ.
03136005a ತಸ್ಯ ಪ್ರಸಾದೋ ದೇವೈಶ್ಚ ಕೃತೋ ನ ತ್ವಮರೈಃ ಸಮಃ|
03136005c ನಾಮರ್ತ್ಯೋ ವಿದ್ಯತೇ ಮರ್ತ್ಯೋ ನಿಮಿತ್ತಾಯುರ್ಭವಿಷ್ಯತಿ||
ದೇವತೆಗಳು ಅವನಿಗೆ ವರವನ್ನಿತ್ತರೂ ಅವನನ್ನು ಅಮರರಿಗೆ ಸಮನಾಗಿ ಮಾಡಲಿಲ್ಲ. ಮನುಷ್ಯರು ಅಮರರಾಗಿರುವುದಿಲ್ಲ. ಅವನ ಆಯಸ್ಸು ನಿಮಿತ್ತವಾಗುತ್ತದೆ.
03136006 ಬಾಲಧಿರುವಾಚ|
03136006a ಯಥೇಮೇ ಪರ್ವತಾಃ ಶಶ್ವತ್ತಿಷ್ಠಂತಿ ಸುರಸತ್ತಮಾಃ|
03136006c ಅಕ್ಷಯಾಸ್ತನ್ನಿಮಿತ್ತಂ ಮೇ ಸುತಸ್ಯಾಯುರ್ಭವೇದಿತಿ||
ಬಾಲಧಿಯು ಹೇಳಿದನು: “ಸುರಸತ್ತಮರೇ! ಎಲ್ಲಿಯವರೆಗೆ ಈ ಪರ್ವತಗಳು ಶಾಶ್ವತವಾಗಿ ನಿಂತಿರುತ್ತವೆಯೋ ಅಲ್ಲಿಯವರೆಗೆ ನನ್ನ ಮಗನ ಆಯಸ್ಸು ಅಕ್ಷಯವಾಗಿ ಇರಲಿ ಎಂದು ನಿಮಿತ್ತವಾಗಿಸಿ.””
03136007 ಭರದ್ವಾಜ ಉವಾಚ|
03136007a ತಸ್ಯ ಪುತ್ರಸ್ತದಾ ಜಜ್ಞೇ ಮೇಧಾವೀ ಕ್ರೋಧನಃ ಸದಾ|
03136007c ಸ ತಚ್ಛೃತ್ವಾಕರೋದ್ದರ್ಪಮೃಷೀಂಶ್ಚೈವಾವಮನ್ಯತ||
ಭರದ್ವಾಜನು ಹೇಳಿದನು: “ಅನಂತರ ಅವನಿಗೆ ಸದಾ ಕೋಪಿಷ್ಟನಾಗಿದ್ದ ಮೇಧಾವೀ ಮಗನು ಹುಟ್ಟಿದನು. ಅವನು ತನಗಿದ್ದ ವರದ ಕುರಿತು ಕೇಳಿ ಸೊಕ್ಕಿನಿಂದ ಋಷಿಗಳನ್ನು ಅಪಮಾನಿಸತೊಡಗಿದನು.
03136008a ವಿಕುರ್ವಾಣೋ ಮುನೀನಾಂ ತು ಚರಮಾಣೋ ಮಹೀಮಿಮಾಂ|
03136008c ಆಸಸಾದ ಮಹಾವೀರ್ಯಂ ಧನುಷಾಕ್ಷಂ ಮನೀಷಿಣಂ||
ಮುನಿಗಳನ್ನು ಬೈಯುತ್ತಾ ಅವನು ಭೂಮಿಯ ಮೇಲೆ ತಿರುಗಾಡಿದನು. ಆಗ ಅವನು ಮಹಾವೀರ ಮನೀಷಿಣೀ ಧನುಷಾಕ್ಷನನ್ನು ಭೇಟಿಯಾದನು.
03136009a ತಸ್ಯಾಪಚಕ್ರೇ ಮೇಧಾವೀ ತಂ ಶಶಾಪ ಸ ವೀರ್ಯವಾನ್|
03136009c ಭವ ಭಸ್ಮೇತಿ ಚೋಕ್ತಃ ಸ ನ ಭಸ್ಮ ಸಮಪದ್ಯತ||
ಮೇಧಾವಿಯು ಅವನನ್ನು ಅಪಮಾನಿಸಲು ಆ ವೀರ್ಯವಂತನು ಭಸ್ಮವಾಗು ಎಂದು ಅವನಿಗೆ ಶಪಿಸಿದನು. ಆದರೂ ಅವನು ಭಸ್ಮವಾಗಲಿಲ್ಲ.
03136010a ಧನುಷಾಕ್ಷಸ್ತು ತಂ ದೃಷ್ಟ್ವಾ ಮೇಧಾವಿನಮನಾಮಯಂ|
03136010c ನಿಮಿತ್ತಮಸ್ಯ ಮಹಿಷೈರ್ಭೇದಯಾಮಾಸ ವೀರ್ಯವಾನ್||
ಶಾಪಕ್ಕೊಳಗಾಗದೇ ಇದ್ದ ಆ ಮೇಧಾವಿಯನ್ನು ಕಂಡು ಧನುಷಾಕ್ಷನು ಆ ವೀರ್ಯವಂತ ಮಹರ್ಷಿಯು ಅವನ ನಿಮಿತ್ತ ಗಿರಿಗಳನ್ನು ಒಡೆದನು.
03136011a ಸ ನಿಮಿತ್ತೇ ವಿನಷ್ಟೇ ತು ಮಮಾರ ಸಹಸಾ ಶಿಶುಃ|
03136011c ತಂ ಮೃತಂ ಪುತ್ರಮಾದಾಯ ವಿಲಲಾಪ ತತಃ ಪಿತಾ||
ತನ್ನ ನಿಮಿತ್ತವು ನಾಶಗೊಳ್ಳಲು ಆ ಬಾಲಕನು ತಕ್ಷಣವೇ ಸತ್ತು ಬಿದ್ದನು. ಆಗ ಆ ಮೃತ ಮಗನನ್ನು ಹಿಡಿದು ತಂದೆಯು ವಿಲಪಿಸಿದನು.
03136012a ಲಾಲಪ್ಯಮಾನಂ ತಂ ದೃಷ್ಟ್ವಾ ಮುನಯಃ ಪುನರಾರ್ತವತ್|
03136012c ಊಚುರ್ವೇದೋಕ್ತಯಾ ಪೂರ್ವಂ ಗಾಥಯಾ ತನ್ನಿಬೋಧ ಮೇ||
ಜೋರಾಗಿ ವಿಲಪಿಸುತ್ತಿದ್ದ ಅವನನ್ನು ನೋಡಿ ಮುನಿಗಳು ಪುನರಾವರ್ತಿಸಿದರು. ಅದನ್ನೇ ಹಿಂದೆ ವೇದಗಳಲ್ಲಿ ಹೇಳಿದೆ. ಅದನ್ನು ನಾನು ನಿನಗೆ ಹೇಳುತ್ತೇನೆ.
03136013a ನ ದಿಷ್ಟಮರ್ಥಮತ್ಯೇತುಮೀಶೋ ಮರ್ತ್ಯಃ ಕಥಂ ಚನ|
03136013c ಮಹಿಷೈರ್ಭೇದಯಾಮಾಸ ಧನುಷಾಕ್ಷೋ ಮಹೀಧರಾನ್||
ಮನುಷ್ಯನು ಎಂದೂ ವಿಧಿಯನ್ನು ಬದಲಿಸುವಷ್ಟು ಒಡೆಯನಾಗಲಾರ! ಮಹರ್ಷಿ ಧನುಷಾಕ್ಷನು ಪರ್ವತಗಳನ್ನೇ ತುಂಡರಿಸಿದನು.
03136014a ಏವಂ ಲಬ್ಧ್ವಾ ವರಾನ್ಬಾಲಾ ದರ್ಪಪೂರ್ಣಾಸ್ತರಸ್ವಿನಃ|
03136014c ಕ್ಷಿಪ್ರಮೇವ ವಿನಶ್ಯಂತಿ ಯಥಾ ನ ಸ್ಯಾತ್ತಥಾ ಭವಾನ್||
ಹೀಗೆ ಬಾಲಕರು ವರಗಳನ್ನು ಪಡೆದು ಸೊಕ್ಕಿನಿಂದ ತುಂಬಿ ಸಾಹಸಿಗಳಾಗುತ್ತಾರೆ ಮತ್ತು ಬೇಗನೇ ವಿನಾಶಹೊಂದುತ್ತಾರೆ. ಹೀಗೆ ನಿನಗೂ ಆಗಬಾರದು.
03136015a ಏಷ ರೈಭ್ಯೋ ಮಹಾವೀರ್ಯಃ ಪುತ್ರೌ ಚಾಸ್ಯ ತಥಾವಿಧೌ|
03136015c ತಂ ಯಥಾ ಪುತ್ರ ನಾಭ್ಯೇಷಿ ತಥಾ ಕುರ್ಯಾಸ್ತ್ವತಂದ್ರಿತಃ||
ಈ ರೈಭ್ಯನೂ ಮತ್ತು ಹಾಗೆ ಅವನ ಮಕ್ಕಳಿಬ್ಬರೂ ವೀರ್ಯವಂತರು. ಮಗನೇ! ಅವನನ್ನು ಮೀರಿಸಲು ಪ್ರಯತ್ನಪಡದೇ ಇರು.
03136016a ಸ ಹಿ ಕ್ರುದ್ಧಃ ಸಮರ್ಥಸ್ತ್ವಾಂ ಪುತ್ರ ಪೀಡಯಿತುಂ ರುಷಾ|
03136016c ವೈದ್ಯಶ್ಚಾಪಿ ತಪಸ್ವೀ ಚ ಕೋಪನಶ್ಚ ಮಹಾನೃಷಿಃ||
ಮಗನೇ! ಯಾಕೆಂದರೆ ಆ ಮಹಾನೃಷಿಯು ಕೃದ್ಧನೂ, ರೋಷದಿಂದ ಪೀಡಿಸಲು ಸಮರ್ಥನೂ, ತಿಳಿದವನೂ, ತಪಸ್ವಿಯೂ ಮತ್ತು ಕ್ರೋಧನನೂ ಅಗಿದ್ದಾನೆ.”
03136017 ಯವಕ್ರೀರುವಾಚ|
03136017a ಏವಂ ಕರಿಷ್ಯೇ ಮಾ ತಾಪಂ ತಾತ ಕಾರ್ಷೀಃ ಕಥಂ ಚನ|
03136017c ಯಥಾ ಹಿ ಮೇ ಭವಾನ್ಮಾನ್ಯಸ್ತಥಾ ರೈಭ್ಯಃ ಪಿತಾ ಮಮ||
ಯವಕ್ರಿಯು ಹೇಳಿದನು: “ತಂದೇ! ಹಾಗೆಯೇ ಮಾಡುತ್ತೇನೆ. ನನ್ನ ಮೇಲೆ ಎಂದೂ ಭಿರುಸಾಗಬೇಡ. ನಿನ್ನನ್ನು ಹೇಗೆ ನಾನು ಮನ್ನಿಸುತ್ತೇನೋ ಹಾಗೆ ರೈಭ್ಯನನ್ನೂ ಕೂಡ ನನ್ನ ತಂದೆಯಂತೆ ಗೌರವಿಸುತ್ತೇನೆ.””
03136018 ಲೋಮಶ ಉವಾಚ|
03136018a ಉಕ್ತ್ವಾ ಸ ಪಿತರಂ ಶ್ಲಕ್ಷ್ಣಂ ಯವಕ್ರೀರಕುತೋಭಯಃ|
03136018c ವಿಪ್ರಕುರ್ವನ್ನೃಷೀನನ್ಯಾನತುಷ್ಯತ್ಪರಯಾ ಮುದಾ||
ಲೋಮಶನು ಹೇಳಿದನು: “ಈ ರೀತಿ ಯಾವುದಕ್ಕೂ ಭಯಪಡದ ಯವಕ್ರಿಯು ತನ್ನ ತಂದೆಗೆ ಮೆಚ್ಚುಗೆಯಾಗುವ ಈ ಮಾತುಗಳನ್ನಾಡಿ, ಇತರ ಋಷಿಗಳನ್ನು ಅವಹೇಳನೆ ಮಾಡುವುದರಲ್ಲಿ ಪರಮ ಸಂತೋಷವನ್ನು ಪಡೆದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಷಟ್ತ್ರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತಾರನೆಯ ಅಧ್ಯಾಯವು.