ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೨೨
ಚ್ಯವನ
ದೀರ್ಘಕಾಲದಿಂದ ತಪಸ್ಸನ್ನಾಚರಿಸುತ್ತಿದ್ದ ಭೃಗುಮಹರ್ಷಿಯ ಮಗ ಚ್ಯವನನ ಸುತ್ತ ಹುತ್ತವು ಬೆಳೆದುದು (೧-೪). ಬಹುಕಾಲದ ನಂತರ ಅದೇ ಪ್ರದೇಶಕ್ಕೆ ರಾಜ ಶರ್ಯಾತಿಯು ತನ್ನ ಮಗಳು ಸುಕನ್ಯೆಯನ್ನೂ ಸೇರಿ ನಾಲ್ಕುಸಾವಿರ ಸ್ತ್ರೀಯರೊಂದಿಗೆ ವಿಹಾರಕ್ಕಾಗಿ ಬಂದುದು (೫-೬). ಕುತೂಹಲದಿಂದ ಹುತ್ತದೊಳಗಿನಿಂದ ಹೊಳೆಯುತ್ತಿದ್ದ ಚ್ಯವನನ ಕಣ್ಣುಗಳನ್ನು ಸುಕನ್ಯೆಯು ಮುಳ್ಳಿನಿಂದ ಚುಚ್ಚಿದುದು (೭-೧೨). ಕೋಪಿಷ್ಟನಾದ ಚ್ಯವನನು ಶರ್ಯಾತಿಯ ಸೈನಿಕರ ಮಲಮೂತ್ರಗಳನ್ನು ನಿಲ್ಲಿಸಿದುದು (೧೩). ಸುಕನ್ಯೆಯು ತಿಳಿಯದೇ ತಾನು ಮಾಡಿದುದನ್ನು ತಿಳಿಸಲು, ಚ್ಯವನನ ಕೇಳಿಕೆಯಂತೆ ಸುಕನ್ಯೆಯನ್ನು ಅವನಿಗೆ ವಿವಾಹಮಾಡಿ ಕೊಟ್ಟಿದುದು (೧೪-೨೭).
03122001 ಲೋಮಶ ಉವಾಚ|
03122001a ಭೃಗೋರ್ಮಹರ್ಷೇಃ ಪುತ್ರೋಽಭೂಚ್ಚ್ಯವನೋ ನಾಮ ಭಾರ್ಗವಃ|
03122001c ಸಮೀಪೇ ಸರಸಃ ಸೋಽಸ್ಯ ತಪಸ್ತೇಪೇ ಮಹಾದ್ಯುತಿಃ||
ಲೋಮಶನು ಹೇಳಿದನು: “ಭೃಗು ಮಹರ್ಷಿಗೆ ಚ್ಯವನ ಭಾರ್ಗವನೆಂಬ ಹೆಸರಿನ ಮಗನಿದ್ದನು[1] ಮತ್ತು ಆ ಮಹಾದ್ಯುತಿಯು ಇದೇ ಸರೋವರದ ಬಳಿ ತಪಸ್ಸನ್ನಾಚರಿಸುತ್ತಿದ್ದನು.
03122002a ಸ್ಥಾಣುಭೂತೋ ಮಹಾತೇಜಾ ವೀರಸ್ಥಾನೇನ ಪಾಂಡವ|
03122002c ಅತಿಷ್ಠತ್ಸುಬಹೂನ್ಕಾಲಾನೇಕದೇಶೇ ವಿಶಾಂ ಪತೇ||
ಪಾಂಡವ! ವಿಶಾಂಪತೇ! ಆ ಮಹಾತೇಜಸ್ವಿಯು ವೀರಾಸನದಲ್ಲಿ ಅಚಲವಾಗಿದ್ದು ಒಂದೇ ಸ್ಥಳದಲ್ಲಿ ಬಹಳಷ್ಟು ಕಾಲ ನಿಂತು ತಪಸ್ಸನ್ನಾಚರಿಸುತ್ತಿದ್ದನು.
03122003a ಸ ವಲ್ಮೀಕೋಽಭವದೃಷಿರ್ಲತಾಭಿರಭಿಸಂವೃತಃ|
03122003c ಕಾಲೇನ ಮಹತಾ ರಾಜನ್ಸಮಾಕೀರ್ಣಃ ಪಿಪೀಲಿಕೈಃ||
ರಾಜನ್! ಬಹು ಸಮಯದ ನಂತರ ಅವನ ಮೇಲೆ ಬಳ್ಳಿಗಳು ಬೆಳೆದು, ಇರುವೆಗಳ ತಂಡವು ವಾಸಮಾಡುವ ಹುತ್ತವಾದನು.
03122004a ತಥಾ ಸ ಸಂವೃತೋ ಧೀಮಾನ್ಮೃತ್ಪಿಂಡ ಇವ ಸರ್ವಶಃ|
03122004c ತಪ್ಯತಿ ಸ್ಮ ತಪೋ ರಾಜನ್ವಲ್ಮೀಕೇನ ಸಮಾವೃತಃ||
ಹೀಗೆ ಆ ಧೀಮಂತನು ಎಲ್ಲೆಡೆಯಿಂದಲೂ ಹುತ್ತದಿಂದ ಮುಚ್ಚಿಕೊಂಡು ಮಣ್ಣಿನ ರಾಶಿಯಂತೆ ಆದನು. ರಾಜನ್! ಹುತ್ತದಿಂದ ಅವರಿಸಲ್ಪಟ್ಟ ಅವನು ತಪಸ್ಸನ್ನು ತಪಿಸುತ್ತಲೇ ಇದ್ದನು.
03122005a ಅಥ ದೀರ್ಘಸ್ಯ ಕಾಲಸ್ಯ ಶರ್ಯಾತಿರ್ನಾಮ ಪಾರ್ಥಿವಃ|
03122005c ಆಜಗಾಮ ಸರೋ ರಮ್ಯಂ ವಿಹರ್ತುಮಿದಮುತ್ತಮಂ||
ದೀರ್ಘಕಾಲದವರೆಗೆ ಹೀಗಿರಲು, ಶರ್ಯಾತಿ ಎಂಬ ಹೆಸರಿನ ರಾಜನು ಈ ಉತ್ತಮ ರಮ್ಯ ಸರೋವರಕ್ಕೆ ವಿಹರಿಸಲು ಬಂದನು.
03122006a ತಸ್ಯ ಸ್ತ್ರೀಣಾಂ ಸಹಸ್ರಾಣಿ ಚತ್ವಾರ್ಯಾಸನ್ಪರಿಗ್ರಹಃ|
03122006c ಏಕೈವ ಚ ಸುತಾ ಶುಭ್ರಾ ಸುಕನ್ಯಾ ನಾಮ ಭಾರತ||
ಭಾರತ! ಅವನೊಂದಿಗೆ ನಾಲ್ಕು ಸಾವಿರ ಸ್ತ್ರೀಯರಿದ್ದರು. ಅವರಲ್ಲಿ ಒಬ್ಬಳು ಸುಕನ್ಯಾ ಎಂಬ ಹೆಸರಿನ ಅವನ ಶುಭ್ರೆ ಮಗಳು.
03122007a ಸಾ ಸಖೀಭಿಃ ಪರಿವೃತಾ ಸರ್ವಾಭರಣಭೂಷಿತಾ|
03122007c ಚಂಕ್ರಮ್ಯಮಾಣಾ ವಲ್ಮೀಕಂ ಭಾರ್ಗವಸ್ಯ ಸಮಾಸದತ್||
ಸಖಿಯರಿಂದ ಸುತ್ತುವರೆದು ಸರ್ವಾಭರಣ ಭೂಷಿತಳಾಗಿ ಅಲ್ಲಿಯೇ ತಿರುಗಾಡುತ್ತಿದ್ದ ಅವಳು ಅಲ್ಲಿಯೇ ಇದ್ದ ಭಾರ್ಗವನ ಹುತ್ತವನ್ನು ನೋಡಿದಳು.
03122008a ಸಾ ಚೈವ ಸುದತೀ ತತ್ರ ಪಶ್ಯಮಾನಾ ಮನೋರಮಾನ್|
03122008c ವನಸ್ಪತೀನ್ವಿಚಿನ್ವಂತೀ ವಿಜಹಾರ ಸಖೀವೃತಾ||
ಅಲ್ಲಿ ಆ ಸುಂದರ ಹಲ್ಲಿನವಳು ಮನೋರಮ ಗಿಡಮರಗಳನ್ನು ಗಮನವಿಟ್ಟು ನೋಡುತ್ತಾ ತನ್ನ ಸಖಿಗಳೊಂದಗೂಡಿ ತಿರುಗಾಡಿದಳು.
03122009a ರೂಪೇಣ ವಯಸಾ ಚೈವ ಮದನೇನ ಮದೇನ ಚ|
03122009c ಬಭಂಜ ವನವೃಕ್ಷಾಣಾಂ ಶಾಖಾಃ ಪರಮಪುಷ್ಪಿತಾಃ||
ರೂಪದಲ್ಲಿ ಮತ್ತು ವಯಸ್ಸಿನಲ್ಲಿ ಮದನನ ಮತ್ತೇರಿದ ಅವಳು ತುಂಬಾ ಹೂಬಿಟ್ಟು ಭಾರವಾಗಿ ಬಗ್ಗಿದ್ದ ಕಾಡು ಮರಗಳ ರೆಂಬೆಗಳನ್ನು ಮುರಿಯ ತೊಡಗಿದಳು.
03122010a ತಾಂ ಸಖೀರಹಿತಾಮೇಕಾಮೇಕವಸ್ತ್ರಾಮಲಂಕೃತಾಂ|
03122010c ದದರ್ಶ ಭಾರ್ಗವೋ ಧೀಮಾಂಶ್ಚರಂತೀಮಿವ ವಿದ್ಯುತಂ||
ಒಂದೇ ವಸ್ತ್ರವನ್ನುಟ್ಟು ಅಲಂಕೃತಳಾಗಿ ಮಿಂಚಿನಂತೆ ಓಡಾಡುತ್ತಿರುವ, ಸಖಿಯರಿಲ್ಲದೇ ಒಬ್ಬಳೇ ಇರುವ ಅವಳನ್ನು ಧೀಮಂತ ಭಾರ್ಗವನು ನೋಡಿದನು.
03122011a ತಾಂ ಪಶ್ಯಮಾನೋ ವಿಜನೇ ಸ ರೇಮೇ ಪರಮದ್ಯುತಿಃ|
03122011c ಕ್ಷಾಮಕಂಠಶ್ಚ ಬ್ರಹ್ಮರ್ಷಿಸ್ತಪೋಬಲಸಮನ್ವಿತಃ||
03122011e ತಾಮಾಬಭಾಷೇ ಕಲ್ಯಾಣೀಂ ಸಾ ಚಾಸ್ಯ ನ ಶೃಣೋತಿ ವೈ||
ಆ ನಿರ್ಜನಪ್ರದೇಶದಲ್ಲಿ ಅವಳನ್ನು ಕಂಡ ಪರಮದ್ಯುತಿ, ಬಾಯೊಣಗಿದ, ಬ್ರಹ್ಮರ್ಷಿ ತಪೋಬಲಸಮನ್ವಿತ ಚ್ಯವನನು ನೋಡಿ ಸಂತೋಷಗೊಂಡನು. ಆ ಕಲ್ಯಾಣಿಯನ್ನು ಉದ್ದೇಶಿಸಿ ಮಾತನಾಡಿಸಿದರೆ ಅವಳಿಗೆ ಅದು ಕೇಳದಾಯಿತು.
03122012a ತತಃ ಸುಕನ್ಯಾ ವಲ್ಮೀಕೇ ದೃಷ್ಟ್ವಾ ಭಾರ್ಗವಚಕ್ಷುಷೀ|
03122012c ಕೌತೂಹಲಾತ್ಕಂಟಕೇನ ಬುದ್ಧಿಮೋಹಬಲಾತ್ಕೃತಾ||
03122013a ಕಿಂ ನು ಖಲ್ವಿದಮಿತ್ಯುಕ್ತ್ವಾ ನಿರ್ಬಿಭೇದಾಸ್ಯ ಲೋಚನೇ|
ಆಗ ಸುಕನ್ಯೆಯು ಹುತ್ತದಲ್ಲಿ ಭಾರ್ಗವನ ಕಣ್ಣುಗಳನ್ನು ಕಂಡು ಕುತೂಹಲದಿಂದ ಮೋಹವು ಬುದ್ಧಿಯನ್ನು ಆವರಿಸಲು ಇದು ಏನಿರಬಹುದು ಎಂದು ಹೇಳುತ್ತಾ ಮುಳ್ಳಿನಿಂದ ಆ ಕಣ್ಣುಗಳನ್ನು ಚುಚ್ಚಿದಳು.
03122013c ಅಕ್ರುಧ್ಯತ್ಸ ತಯಾ ವಿದ್ಧೇ ನೇತ್ರೇ ಪರಮಮನ್ಯುಮಾನ್||
03122013e ತತಃ ಶರ್ಯಾತಿಸೈನ್ಯಸ್ಯ ಶಕೃನ್ಮೂತ್ರಂ ಸಮಾವೃಣೋತ್||
03122014a ತತೋ ರುದ್ಧೇ ಶಕೃನ್ಮೂತ್ರೇ ಸೈನ್ಯಮಾನಾಹದುಃಖಿತಂ|
03122014c ತಥಾಗತಮಭಿಪ್ರೇಕ್ಷ್ಯ ಪರ್ಯಪೃಚ್ಚತ್ಸ ಪಾರ್ಥಿವಃ||
ಅವಳು ಕಣ್ಣುಗಳನ್ನು ಹೀಗೆ ಚುಚ್ಚಲು ಮೊದಲೇ ಕೋಪಿಷ್ಟನಾಗಿದ್ದ ಅವನು ಅತ್ಯಂತ ಕುಪಿತನಾಗಿ ಶರ್ಯಾತಿಯ ಸೈನಿಕರ ಮಲಮೂತ್ರಗಳನ್ನು ನಿಲ್ಲಿಸಿದನು. ಅನಂತರ ತನ್ನ ಸೇನೆಯು ಮಲಬದ್ಧತೆ ಮತ್ತು ಮೂತ್ರ ಬದ್ಧತೆಗಳಿಂದ ಬಳಲುತ್ತಿರುವುದನ್ನು ನೋಡಿ ರಾಜನು ಅದು ಏಕೆ ಹಾಗಾಯಿತೆಂದು ಪ್ರಶ್ನಿಸತೊಡಗಿದನು.
03122015a ತಪೋನಿತ್ಯಸ್ಯ ವೃದ್ಧಸ್ಯ ರೋಷಣಸ್ಯ ವಿಶೇಷತಃ|
03122015c ಕೇನಾಪಕೃತಮದ್ಯೇಹ ಭಾರ್ಗವಸ್ಯ ಮಹಾತ್ಮನಃ||
03122015e ಜ್ಞಾತಂ ವಾ ಯದಿ ವಾಜ್ಞಾತಂ ತದೃತಂ ಬ್ರೂತ ಮಾಚಿರಂ||
“ತಪೋನಿರತನಾಗಿರುವ ವೃದ್ಧನಾದ ಮತ್ತು ವಿಶೇಷವಾಗಿ ಕೋಪಿಷ್ಟನಾದ ಮಹಾತ್ಮ ಭಾರ್ಗವನಿಗೆ ಇಂದು ಮಾಡಬಾರದ್ದನ್ನು ಮಾಡಿದವರು ಯಾರು? ತಿಳಿದು ಅಥವಾ ತಿಳಿಯದೇ ಮಾಡಿದುದೆಲ್ಲವನ್ನೂ ನನಗೆ ವರದಿಮಾಡಿ.”
03122016a ತಮೂಚುಃ ಸೈನಿಕಾಃ ಸರ್ವೇ ನ ವಿದ್ಮೋಽಪಕೃತಂ ವಯಂ|
03122016c ಸರ್ವೋಪಾಯೈರ್ಯಥಾಕಾಮಂ ಭವಾಂಸ್ತದಧಿಗಚ್ಚತು||
ಆಗ ಸೈನಿಕರೆಲ್ಲರೂ ಹೇಳಿದರು: “ನಾವು ಯಾರೂ ಅಪಕೃತಿಯನ್ನು ಮಾಡಿದ್ದುದು ಗೊತ್ತಿಲ್ಲ. ನಿಮಗಿಷ್ಟವಿದ್ದರೆ ನೀವೇ ಕಂಡುಕೊಳ್ಳಬೇಕು.”
03122017a ತತಃ ಸ ಪೃಥಿವೀಪಾಲಃ ಸಾಮ್ನಾ ಚೋಗ್ರೇಣ ಚ ಸ್ವಯಂ|
03122017c ಪರ್ಯಪೃಚ್ಚತ್ಸುಹೃದ್ವರ್ಗಂ ಪ್ರತ್ಯಜಾನನ್ನ ಚೈವ ತೇ||
ಅನಂತರ ರಾಜನು ಸ್ವತಃ ಸಾಮ ಮತ್ತು ಉಗ್ರ ವಿಧಾನಗಳನ್ನು ಬಳಸಿ ತನ್ನ ಗುಂಪಿನಲ್ಲಿದ್ದ ಎಲ್ಲರನ್ನೂ, ಮಿತ್ರಗಣಗಳನ್ನೂ, ಪ್ರಶ್ನಿಸಿದನು.
03122018a ಆನಾಹಾರ್ತಂ ತತೋ ದೃಷ್ಟ್ವಾ ತತ್ಸೈನ್ಯಮಸುಖಾರ್ದಿತಂ|
03122018c ಪಿತರಂ ದುಃಖಿತಂ ಚಾಪಿ ಸುಕನ್ಯೇದಮಥಾಬ್ರವೀತ್||
ಆ ಸೇನೆಯು ಮಲಬದ್ಧತೆಯಿಂದ ಪೀಡೆಗೊಳಪಟ್ಟು ದುಃಖಿಸುತ್ತಿರುವುದನ್ನು ಮತ್ತು ತನ್ನ ತಂದೆಯೂ ದುಃಖಿತನಾಗಿರುವುದನ್ನು ಗಮನಿಸಿ ಸುಕನ್ಯೆಯು ಹೀಗೆ ಹೇಳಿದಳು:
03122019a ಮಯಾಟಂತ್ಯೇಹ ವಲ್ಮೀಕೇ ದೃಷ್ಟಂ ಸತ್ತ್ವಮಭಿಜ್ವಲತ್|
03122019c ಖದ್ಯೋತವದಭಿಜ್ಞಾತಂ ತನ್ಮಯಾ ವಿದ್ಧಮಂತಿಕಾತ್||
“ನಾನು ತಿರುಗಾಡುತ್ತಿರುವಾಗ ಹುತ್ತದ ಒಳಗಿಂದ ಹೊರಸೂಸುವ ಬೆಂಕಿಯತೆ ಹೊಳೆಯುತ್ತಿರುವುದನ್ನು ನೋಡಿದೆನು. ಅದೊಂದು ಬೆಂಕಿಯ ಹುಳುವಾಗಿರಬಹುದು ಎಂದು ತಿಳಿದು ಅದನ್ನು ಚುಚ್ಚಿದೆನು.”
03122020a ಏತಚ್ಛೃತ್ವಾ ತು ಶರ್ಯಾತಿರ್ವಲ್ಮೀಕಂ ತೂರ್ಣಮಾದ್ರವತ್|
03122020c ತತ್ರಾಪಶ್ಯತ್ತಪೋವೃದ್ಧಂ ವಯೋವೃದ್ಧಂ ಚ ಭಾರ್ಗವಂ||
ಇದನ್ನು ಕೇಳಿದ ಶರ್ಯಾತಿಯು ಕೂಡಲೇ ಹುತ್ತದೆಡೆಗೆ ಧಾವಿಸಿದನು ಮತ್ತು ಅಲ್ಲಿ ತಪೋವೃದ್ಧನೂ ವಯೋವೃದ್ಧನೂ ಆಗಿದ್ದ ಭಾರ್ಗವನನ್ನು ಕಂಡನು.
03122021a ಅಯಾಚದಥ ಸೈನ್ಯಾರ್ಥಂ ಪ್ರಾಂಜಲಿಃ ಪೃಥಿವೀಪತಿಃ|
03122021c ಅಜ್ಞಾನಾದ್ಬಾಲಯಾ ಯತ್ತೇ ಕೃತಂ ತತ್ ಕ್ಷಂತುಮರ್ಹಸಿ||
ರಾಜನು ಕೈಮುಗಿದು “ಅಜ್ಞಾನದಿಂದ ಬಾಲಕಿಯು ಮಾಡಿದುದನ್ನು, ಸೇನೆಗೋಸ್ಕರವಾಗಿ ಕ್ಷಮಿಸಬೇಕು” ಎಂದು ಯಾಚಿಸಿದನು.
03122022a ತತೋಽಬ್ರವೀನ್ಮಹೀಪಾಲಂ ಚ್ಯವನೋ ಭಾರ್ಗವಸ್ತದಾ|
03122022c ರೂಪೌದಾರ್ಯಸಮಾಯುಕ್ತಾಂ ಲೋಭಮೋಹಬಲಾತ್ಕೃತಾಂ||
03122023a ತಾಮೇವ ಪ್ರತಿಗೃಹ್ಯಾಹಂ ರಾಜನ್ದುಹಿತರಂ ತವ|
03122023c ಕ್ಷಮಿಷ್ಯಾಮಿ ಮಹೀಪಾಲ ಸತ್ಯಮೇತದ್ಬ್ರವೀಮಿ ತೇ||
ಆಗ ಭಾರ್ಗವ ಚ್ಯವನನು ರಾಜನಿಗೆ ಹೇಳಿದನು: “ರಾಜನ್! ಮಹೀಪಾಲ! ರೂಪ ಮತ್ತು ಔದಾರ್ಯಗಳಿಂದ ಕೂಡಿದ ಆದರೆ ಲೋಭ ಮೋಹಗಳಿಗೆ ಸಿಲುಕಿದ ನಿನ್ನ ಈ ಮಗಳನ್ನು ನೀನಾಗಿಯೇ ನನಗೆ ಕೊಟ್ಟರೆ ನಿನ್ನನ್ನು ಕ್ಷಮಿಸುತ್ತೇನೆ. ಸತ್ಯವನ್ನೇ ಹೇಳುತ್ತಿದ್ದೇನೆ.”
03122024a ಋಷೇರ್ವಚನಮಾಜ್ಞಾಯ ಶರ್ಯಾತಿರವಿಚಾರಯನ್|
03122024c ದದೌ ದುಹಿತರಂ ತಸ್ಮೈ ಚ್ಯವನಾಯ ಮಹಾತ್ಮನೇ||
ಋಷಿಯ ಮಾತನ್ನು ಆಜ್ಞೆಯೆಂದು ತಿಳಿದು ಶರ್ಯಾತಿಯು ಏನೂ ವಿಚಾರಮಾಡದೇ ಆ ಮಹಾತ್ಮ ಚ್ಯವನನಿಗೆ ತನ್ನ ಮಗಳನ್ನು ಕೊಟ್ಟನು.
03122025a ಪ್ರತಿಗೃಹ್ಯ ಚ ತಾಂ ಕನ್ಯಾಂ ಚ್ಯವನಃ ಪ್ರಸಸಾದ ಹ|
03122025c ಪ್ರಾಪ್ತಪ್ರಸಾದೋ ರಾಜಾ ಸ ಸಸೈನ್ಯಃ ಪುನರಾವ್ರಜತ್||
ಆ ಕನ್ಯೆಯನ್ನು ಸ್ವೀಕರಿಸಿ ಚ್ಯವನನು ಶಾಂತನಾದನು. ಕ್ಷಮೆಯನ್ನು ಪಡೆದ ರಾಜನು ಸೈನ್ಯದೊಂದಿಗೆ ಮರಳಿದನು.
03122026a ಸುಕನ್ಯಾಪಿ ಪತಿಂ ಲಬ್ಧ್ವಾ ತಪಸ್ವಿನಮನಿಂದಿತಾ|
03122026c ನಿತ್ಯಂ ಪರ್ಯಚರತ್ಪ್ರೀತ್ಯಾ ತಪಸಾ ನಿಯಮೇನ ಚ||
ಅನಿಂದಿತೆ ಸುಕನ್ಯೆಯೂ ಕೂಡ ತಪಸ್ವಿಯನ್ನು ಪತಿಯನ್ನಾಗಿ ಪಡೆದು ಪ್ರೀತಿ, ತಪಸ್ಸು, ನಿಯಮಗಳಿಂದ ನಿತ್ಯವೂ ಅವನ ಸೇವೆ ಮಾಡಿದಳು.
03122027a ಅಗ್ನೀನಾಮತಿಥೀನಾಂ ಚ ಶುಶ್ರೂಷುರನಸೂಯಿಕಾ|
03122027c ಸಮಾರಾಧಯತ ಕ್ಷಿಪ್ರಂ ಚ್ಯವನಂ ಸಾ ಶುಭಾನನಾ||
ಬೇಗನೆ ಏನೂ ತಕರಾರಿಲ್ಲದೇ ಅಗ್ನಿ ಮತ್ತು ಅತಿಥಿಗಳ ಶುಶ್ರೂಷೆಯನ್ನು ಮಾಡುತ್ತಾ ಆ ಶುಭಾನನೆಯು ಚ್ಯವನನೊಂದಿಗೆ ಸಂತೋಷಪಟ್ಟಳು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ದ್ವಾವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ತೆರಡನೆಯ ಅಧ್ಯಾಯವು.
[1]ಚ್ಯವನನ ಜನ್ಮಕಥೆಯು ಆದಿಪರ್ವದಲ್ಲಿದೆ.