ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೧
ವಿಭಾಂಡಕನಿಲ್ಲದಿರುವುದನ್ನು ನೋಡಿಕೊಂಡು ವೈಶ್ಯೆಯು ಋಷ್ಯಶೃಂಗನನ್ನು ಭೇಟಿಯಾಗಿ ಅವನ ಕಾಮವನ್ನು ಹೆಚ್ಚಿಸಲು ಪ್ರಯತ್ನಿಸಿ ಹಿಂದಿರುಗಿದುದು (೧-೧೭). ವಿಭಾಂಡಕನು ಹಿಂದಿರುಗಿ ಬಂದು ಮಂಕಾಗಿ ಕುಳಿತಿದ್ದ ಮಗನನ್ನು ಪ್ರಶ್ನಿಸಿದುದು (೧೮-೨೨).
03111001 ಲೋಮಶ ಉವಾಚ|
03111001a ಸಾ ತು ನಾವ್ಯಾಶ್ರಮಂ ಚಕ್ರೇ ರಾಜಕಾರ್ಯಾರ್ಥಸಿದ್ಧಯೇ|
03111001c ಸಂದೇಶಾಚ್ಚೈವ ನೃಪತೇಃ ಸ್ವಬುದ್ಧ್ಯಾ ಚೈವ ಭಾರತ||
ಲೋಮಶನು ಹೇಳಿದನು: “ಭಾರತ! ರಾಜಕಾರ್ಯವನ್ನು ಯಶಸ್ವಿಗೊಳಿಸಲೋಸುಗ ನೃಪತಿಯ ಆದೇಶದಂತೆ ಮತ್ತು ಸ್ವಂತ ಬುದ್ಧಿಯನ್ನು ಓಡಿಸಿ ಅವಳು ಒಂದು ದೋಣಿಯಲ್ಲಿ ಆಶ್ರಮವೊಂದನ್ನು ನಿರ್ಮಿಸಿದಳು.
03111002a ನಾನಾಪುಷ್ಪಫಲೈರ್ವೃಕ್ಷೈಃ ಕೃತ್ರಿಮೈರುಪಶೋಭಿತಂ|
03111002c ನಾನಾಗುಲ್ಮಲತೋಪೇತೈಃ ಸ್ವಾದುಕಾಮಫಲಪ್ರದೈಃ||
ಅದು ಕೃತ್ರಿಮವಾದ ನಾನಾ ಹೂವು-ಹಣ್ಣುಗಳ ಮರಗಳಿಂದ, ನಾನಾತರಹದ ಗೊಂಚಲು ಹೂವುಗಳಿರುವ ಬಳ್ಳಿಗಳಿಂದ, ಎಲ್ಲ ತರಹದ ರುಚಿಗಳಿರುವ ಹಣ್ಣುಗಳಿಂದ ತುಂಬಿತ್ತು.
03111003a ಅತೀವ ರಮಣೀಯಂ ತದತೀವ ಚ ಮನೋಹರಂ|
03111003c ಚಕ್ರೇ ನಾವ್ಯಾಶ್ರಮಂ ರಮ್ಯಮದ್ಭುತೋಪಮದರ್ಶನಂ||
ಆ ದೋಣಿಯ ಮೇಲಿನ ಆಶ್ರಮವು ಅತೀವ ರಮಣೀಯವಾಗಿಯೂ, ಅತೀವ ಮನೋಹರವಾಗಿಯೂ ಇದ್ದು ನೋಡಲು ಅದ್ಭುತವೂ ರಮ್ಯವೂ ಆಗಿತ್ತು.
03111004a ತತೋ ನಿಬಧ್ಯ ತಾಂ ನಾವಮದೂರೇ ಕಾಶ್ಯಪಾಶ್ರಮಾತ್|
03111004c ಚಾರಯಾಮಾಸ ಪುರುಷೈರ್ವಿಹಾರಂ ತಸ್ಯ ವೈ ಮುನೇಃ||
ಆ ನಾವೆಯನ್ನು ಕಾಶ್ಯಪಾಶ್ರಮದ ಸ್ವಲ್ಪವೇ ದೂರದಲ್ಲಿ ನಿಲ್ಲಿಸಿ, ಪುರುಷರು ಆ ಮುನಿಯ ಆಶ್ರಮದಲ್ಲಿ ತಿರುಗಾಡಿದರು.
03111005a ತತೋ ದುಹಿತರಂ ವೇಶ್ಯಾ ಸಮಾಧಾಯೇತಿಕೃತ್ಯತಾಂ|
03111005c ದೃಷ್ಟ್ವಾಂತರಂ ಕಾಶ್ಯಪಸ್ಯ ಪ್ರಾಹಿಣೋದ್ಬುದ್ಧಿಸಮ್ಮತಾಂ||
ಆಗ ವೇಶ್ಯೆಯು ಮಾಡಬೇಕಾದ ಕೆಲಸವನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವಕಾಶ ಹುಡುಕಿ ಬುದ್ಧಿವಂತೆ ಮಗಳನ್ನು ಕಾಶ್ಯಪನ ಹತ್ತಿರ ಕಳುಹಿಸಿದಳು.
03111006a ಸಾ ತತ್ರ ಗತ್ವಾ ಕುಶಲಾ ತಪೋನಿತ್ಯಸ್ಯ ಸನ್ನಿಧೌ|
03111006c ಆಶ್ರಮಂ ತಂ ಸಮಾಸಾದ್ಯ ದದರ್ಶ ತಮೃಷೇಃ ಸುತಂ||
ಆ ಕುಶಲೆಯು ತಪೋನಿತ್ಯನ ಸನ್ನಿಧಿಗೆ ಹೋಗಿ, ಅವನ ಆಶ್ರಮಕ್ಕೆ ಹೋಗಿ, ಅಲ್ಲಿ ಋಷಿಸುತನನ್ನು ಕಂಡಳು.
03111007 ವೇಶ್ಯೋವಾಚ|
03111007a ಕಚ್ಚಿನ್ಮುನೇ ಕುಶಲಂ ತಾಪಸಾನಾಂ|
ಕಚ್ಚಿಚ್ಚ ವೋ ಮೂಲಫಲಂ ಪ್ರಭೂತಂ|
03111007c ಕಚ್ಚಿದ್ಭವಾನ್ರಮತೇ ಚಾಶ್ರಮೇಽಸ್ಮಿಂಸ್|
ತ್ವಾಂ ವೈ ದ್ರಷ್ಟುಂ ಸಾಂಪ್ರತಮಾಗತೋಽಸ್ಮಿ||
ವೈಶ್ಯೆಯು ಹೇಳಿದಳು: “ತಾಪಸಿ ಮುನಿಯು ಕುಶಲದಿಂದಿದ್ದಾನೆಯೇ? ಸಾಕಷ್ಟು ಫಲಮೂಲಗಳು ದೊರೆಯುತ್ತವೆಯೇ? ಈ ಆಶ್ರಮದಲ್ಲಿ ನಿನಗೆ ಸಂತೋಷವಾಗುತ್ತಿದೆಯೇ? ನಿನ್ನನ್ನು ಭೇಟಿಯಾಗಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ.
03111008a ಕಚ್ಚಿತ್ತಪೋ ವರ್ಧತೇ ತಾಪಸಾನಾಂ|
ಪಿತಾ ಚ ತೇ ಕಚ್ಚಿದಹೀನತೇಜಾಃ|
03111008c ಕಚ್ಚಿತ್ತ್ವಯಾ ಪ್ರೀಯತೇ ಚೈವ ವಿಪ್ರ|
ಕಚ್ಚಿತ್ಸ್ವಾಧ್ಯಾಯಃ ಕ್ರಿಯತೇ ಋಶ್ಯಶೃಂಗ||
ತಾಪಸರ ತಪಸ್ಸು ವೃದ್ಧಿಯಾಗುತ್ತಿದೆಯೇ? ನಿನ್ನ ತಂದೆಯು ತನ್ನ ತೇಜಸ್ಸನ್ನು ಕಳೆದುಕೊಳ್ಳಲಿಲ್ಲ ತಾನೇ? ಆ ವಿಪ್ರನು ನಿನ್ನಿಂದ ಸಂತೋಷಗೊಂಡಿದ್ದಾನೆ ತಾನೇ? ಋಷ್ಯಶೃಂಗ! ನೀನು ಆಧ್ಯಾಯನವನ್ನು ಮಾಡಿಮುಗಿಸಿದ್ದೀಯಾ?”
03111009 ಋಶ್ಯಶೃಂಗ ಉವಾಚ|
03111009a ಋದ್ಧೋ ಭವಾಂ ಜ್ಯೋತಿರಿವ ಪ್ರಕಾಶತೇ|
ಮನ್ಯೇ ಚಾಹಂ ತ್ವಾಮಭಿವಾದನೀಯಂ|
03111009c ಪಾದ್ಯಂ ವೈ ತೇ ಸಂಪ್ರದಾಸ್ಯಾಮಿ ಕಾಮಾದ್|
ಯಥಾಧರ್ಮಂ ಫಲಮೂಲಾನಿ ಚೈವ||
ಋಷ್ಯಶೃಂಗನು ಹೇಳಿದನು: “ನೀನು ಅತಿ ದೊಡ್ಡ ದೀಪದಂತೆ ಬೆಳಗುತ್ತಿದ್ದೀಯೆ! ನಿನಗೆ ಸಮಸ್ಕರಿಸುವುದು ಸರಿ ಎಂದು ನನಗನ್ನಿಸುತ್ತಿದೆ. ನಾನು ಬಯಸಿದಂತೆ ನಿನಗೆ ಪಾದ್ಯವನ್ನು ನೀಡುತ್ತೇನೆ ಮತ್ತು ಯಥಾಧರ್ಮವಾಗಿ ಫಲಮೂಲಗಳನ್ನು ಅರ್ಪಿಸುತ್ತೇನೆ.
03111010a ಕೌಶ್ಯಾಂ ಬೃಸ್ಯಾಮಾಸ್ಸ್ವ ಯಥೋಪಜೋಷಂ|
ಕೃಷ್ಣಾಜಿನೇನಾವೃತಾಯಾಂ ಸುಖಾಯಾಂ|
03111010c ಕ್ವ ಚಾಶ್ರಮಸ್ತವ ಕಿಂ ನಾಮ ಚೇದಂ|
ವ್ರತಂ ಬ್ರಹ್ಮಂಶ್ಚರಸಿ ಹಿ ದೇವವತ್ತ್ವಂ||
ಕೃಷ್ಣಾಜಿನವನ್ನು ಹಾಸಿ ಸುಖವನ್ನು ನೀಡುವ ದರ್ಭೆಯ ಆಸನದಲ್ಲಿ ಸುಖಾಸೀನನಾಗು. ನಿನ್ನ ಆಶ್ರಮವು ಎಲ್ಲಿದೆ ಮತ್ತು ಬ್ರಹ್ಮನ್! ದೇವತೆಗಳಂತೆ ಆಚರಿಸುತ್ತಿರುವ ಈ ವ್ರತದ ಹೆಸರೇನು?”
03111011 ವೇಶ್ಯೋವಾಚ|
03111011a ಮಮಾಶ್ರಮಃ ಕಾಶ್ಯಪಪುತ್ರ ರಮ್ಯಸ್|
ತ್ರಿಯೋಜನಂ ಶೈಲಮಿಮಂ ಪರೇಣ|
03111011c ತತ್ರ ಸ್ವಧರ್ಮೋಽನಭಿವಾದನಂ ನೋ|
ನ ಚೋದಕಂ ಪಾದ್ಯಂ ಉಪಸ್ಪೃಶಾಮಃ||
ವೈಶ್ಯೆಯು ಹೇಳಿದಳು: “ಸುಂದರ ಕಾಶ್ಯಪಪುತ್ರ! ನನ್ನ ಆಶ್ರಮವು ಈ ಬೆಟ್ಟವನ್ನು ದಾಟಿ ಮೂರು ಯೋಜನ ದೂರದಲ್ಲಿದೆ. ಅಲ್ಲಿ ನಮ್ಮ ಧರ್ಮದ ಪ್ರಕಾರ ಇನ್ನೊಬ್ಬರಿಗೆ ನಮಸ್ಕರಿಸುವುದಿಲ್ಲ ಮತ್ತು ಕಾಲು ತೊಳೆಯಲು ನೀರನ್ನು ಬಳಸುವುದಿಲ್ಲ.”
03111012 ಋಶ್ಯಶೃಂಗ ಉವಾಚ|
03111012a ಫಲಾನಿ ಪಕ್ವಾನಿ ದದಾನಿ ತೇಽಹಂ|
ಭಲ್ಲಾತಕಾನ್ಯಾಮಲಕಾನಿ ಚೈವ|
03111012c ಪರೂಷಕಾನೀಂಗುದಧನ್ವನಾನಿ|
ಪ್ರಿಯಾಲಾನಾಂ ಕಾಮಕಾರಂ ಕುರುಷ್ವ||
ಋಷ್ಯಶೃಂಗನು ಹೇಳಿದನು: “ನಾನು ಭಲ್ಲಾತಕ, ಪರೂಷಕ, ಇಂಗುಧ, ಧನ್ವನ, ಪ್ರಿಯಾಲ, ಮೊದಲಾದ ಗಳಿತ ಹಣ್ಣುಗಳನ್ನು ಮತ್ತು ಬೀಜಗಳನ್ನು ನಿನಗೆ ಋಚಿಯನ್ನು ಸವಿದು ಸಂತೋಷಪಡಲು ಕೊಡುತ್ತೇನೆ.””
03111013 ಲೋಮಶ ಉವಾಚ|
03111013a ಸಾ ತಾನಿ ಸರ್ವಾಣಿ ವಿಸರ್ಜಯಿತ್ವಾ|
ಭಕ್ಷಾನ್ಮಹಾರ್ಹಾನ್ಪ್ರದದೌ ತತೋಽಸ್ಮೈ|
03111013c ತಾನ್ಯೃಶ್ಯಶೃಂಗಸ್ಯ ಮಹಾರಸಾನಿ|
ಭೃಶಂ ಸುರೂಪಾಣಿ ರುಚಿಂ ದದುರ್ಹಿ||
ಲೋಮಶನು ಹೇಳಿದನು: “ಆ ಎಲ್ಲವನ್ನೂ ತಿರಸ್ಕರಿಸಿ ಅವಳು ಅವನಿಗೆ ಬೆಲೆಬಾಳುವ, ಅತ್ಯಂತ ರುಚಿಕರ ಮತ್ತು ನೋಡಲು ಸುಂದರವಾಗಿದ್ದ ತಿಂಡಿಗಳನ್ನು ಕೊಟ್ಟಳು. ಅವುಗಳು ಋಷ್ಯಶೃಂಗನಿಗೆ ಮಹಾ ಆನಂದವನ್ನು ನೀಡಿದವು.
03111014a ದದೌ ಚ ಮಾಲ್ಯಾನಿ ಸುಗಂಧವಂತಿ|
ಚಿತ್ರಾಣಿ ವಾಸಾಂಸಿ ಚ ಭಾನುಮಂತಿ|
03111014c ಪಾನಾನಿ ಚಾಗ್ರ್ಯಾಣಿ ತತೋ ಮುಮೋದ|
ಚಿಕ್ರೀಡ ಚೈವ ಪ್ರಜಹಾಸ ಚೈವ||
ಸುಗಂಧಯುಕ್ತ ಮಾಲೆಗಳನ್ನೂ, ಬಣ್ಣಬಣ್ಣದ ಹೊಳೆಯುವ ಬಟ್ಟೆಗಳನ್ನೂ, ಮತ್ತು ಉತ್ತಮ ಮಾದಕ ಪಾನೀಯಗಳನ್ನೂ ಕೊಟ್ಟು, ನಗುನಗುತ್ತಾ ಆಟವಾಡುತ್ತಾ ಅವನನ್ನು ರಂಜಿಸಿದಳು.
03111015a ಸಾ ಕಂದುಕೇನಾರಮತಾಸ್ಯ ಮೂಲೇ|
ವಿಭಜ್ಯಮಾನಾ ಫಲಿತಾ ಲತೇವ|
03111015c ಗಾತ್ರೈಶ್ಚ ಗಾತ್ರಾಣಿ ನಿಷೇವಮಾಣಾ|
ಸಮಾಶ್ಲಿಷಚ್ಚಾಸಕೃದೃಶ್ಯಶೃಂಗಂ||
ಅವನ ಹತ್ತಿರ ಒಂದು ಚೆಂಡನ್ನಿಟ್ಟು, ಅರಳುವ ಹೂಗಳ ಬಳ್ಳಿಯಂತೆ ಅವನ ಅಂಗಾಂಗಗಳಿಗೆ ತನ್ನ ಅಂಗಾಂಗಳನ್ನು ಮುಟ್ಟಿಸುತ್ತಾ ಋಷ್ಯಶೃಂಗನನ್ನು ಮತ್ತೆ ಮತ್ತೆ ಆಲಂಗಿಸಿದಳು.
03111016a ಸರ್ಜಾನಶೋಕಾಂಸ್ತಿಲಕಾಂಶ್ಚ ವೃಕ್ಷಾನ್|
ಪ್ರಪುಷ್ಪಿತಾನವನಾಮ್ಯಾವಭಜ್ಯ|
03111016c ವಿಲಜ್ಜಮಾನೇವ ಮದಾಭಿಭೂತಾ|
ಪ್ರಲೋಭಯಾಮಾಸ ಸುತಂ ಮಹರ್ಷೇಃ||
ಅವಳು ಸರ್ಜಾ, ಅಶೋಕ ಮತ್ತು ತಿಲಕ ವೃಕ್ಷಗಳ ರೆಂಬೆಗಳನ್ನು ಬಗ್ಗಿಸಿ ಹೂವನ್ನು ಕಿತ್ತಳು. ಮತ್ತೇರಿದವಳಾಗಿ ನಾಚಿಕೆಯೇ ಇಲ್ಲವೋ ಎನ್ನುವಂತೆ ಆ ಮಹರ್ಷಿಯ ಮಗನ ಕಾಮವನ್ನು ಹೆಚ್ಚಿಸಲು ಪ್ರಯತ್ನಿಸಿದಳು.
03111017a ಅಥರ್ಶ್ಯಶೃಂಗಂ ವಿಕೃತಂ ಸಮೀಕ್ಷ್ಯ|
ಪುನಃ ಪುನಃ ಪೀಡ್ಯ ಚ ಕಾಯಮಸ್ಯ|
03111017c ಅವೇಕ್ಷಮಾಣಾ ಶನಕೈರ್ಜಗಾಮ|
ಕೃತ್ವಾಗ್ನಿಹೋತ್ರಸ್ಯ ತದಾಪದೇಶಂ||
ಆಗ ಋಷ್ಯಶೃಂಗನ ದೇಹದಲ್ಲಿ ಬದಲಾವಣೆಗಳನ್ನು ಕಂಡು ಅವನ ದೇಹವನ್ನು ಪುನಃ ಪುನಃ ಅಪ್ಪಿ ಹಿಂಡಿದಳು. ಆಗ ನಿಧಾನವಾಗಿ ಅಗ್ನಿಹೋತ್ರದ ನೆಪವನ್ನು ಹೇಳಿ, ಅವನನ್ನೇ ನೋಡುತ್ತಾ, ಹಿಂದೆ ಹೋದಳು.
03111018a ತಸ್ಯಾಂ ಗತಾಯಾಂ ಮದನೇನ ಮತ್ತೋ|
ವಿಚೇತನಶ್ಚಾಭವದೃಶ್ಯಶೃಂಗಃ|
03111018c ತಾಮೇವ ಭಾವೇನ ಗತೇನ ಶೂನ್ಯೋ|
ವಿನಿಃಶ್ವಸನ್ನಾರ್ತರೂಪೋ ಬಭೂವ||
ಅವಳು ಹೋದನಂತರ ಮದನನಿಂದ ಮತ್ತನಾದ ಋಷ್ಯಶೃಂಗನು ತನ್ನ ಮನಸ್ಸನ್ನು ಕಳೆದುಕೊಂಡವನಂತಾದನು. ಅವಳು ಹೋದ ಕಡೆಯಲ್ಲಿಯೇ ಶೂನ್ಯ ದೃಷ್ಟಿಯಿಟ್ಟು ನೋಡುತ್ತಾ, ನಿಟ್ಟಿಸುರು ಬಿಡುತ್ತಾ, ಅವನ ಮುಖವು ಆರ್ತರೂಪವನ್ನು ತಾಳಿತು.
03111019a ತತೋ ಮುಹೂರ್ತಾದ್ಧರಿಪಿಂಗಲಾಕ್ಷಃ|
ಪ್ರವೇಷ್ಟಿತೋ ರೋಮಭಿರಾ ನಖಾಗ್ರಾತ್|
03111019c ಸ್ವಾಧ್ಯಾಯವಾನ್ವೃತ್ತಸಮಾಧಿಯುಕ್ತೋ|
ವಿಭಾಂಡಕಃ ಕಾಶ್ಯಪಃ ಪ್ರಾದುರಾಸೀತ್||
ಆಗ ಸ್ವಲ್ಪವೇ ಕ್ಷಣದಲ್ಲಿ ಸಿಂಹದಂತಿದ್ದ ಪಿಂಗಲಾಕ್ಷ, ಉಗುರುಗಳ ವರೆಗೆ ತಲೆಕೂದಲನ್ನು ಬಿಟ್ಟಿದ್ದ, ಸ್ವಾಧ್ಯಾಯದಲ್ಲಿ ನಿರತನಾದ, ಸಮಾಧಿಯುಕ್ತನಾದ, ಕಾಶ್ಯಪ ವಿಭಾಂಡಕನು ಹತ್ತಿರ ಬಂದನು.
03111020a ಸೋಽಪಶ್ಯದಾಸೀನಮುಪೇತ್ಯ ಪುತ್ರಂ|
ಧ್ಯಾಯಂತಮೇಕಂ ವಿಪರೀತಚಿತ್ತಂ|
03111020c ವಿನಿಃಶ್ವಸಂತಂ ಮುಹುರೂರ್ಧ್ವದೃಷ್ಟಿಂ|
ವಿಭಾಂಡಕಃ ಪುತ್ರಮುವಾಚ ದೀನಂ||
ಅವನು ವಿಪರೀತಚಿತ್ತನಾಗಿ ಒಬ್ಬನೇ ಯೋಚಿಸುತ್ತಾ ಕುಳಿತಿರುವ ಮಗನನ್ನು ನೋಡಿದನು. ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತಾ ಮೇಲೆ ನೋಡುತ್ತಾ ದೀನನಾಗಿದ್ದ ಮಗನಿಗೆ ವಿಭಾಂಡಕನು ಹೇಳಿದನು.
03111021a ನ ಕಲ್ಪ್ಯಂತೇ ಸಮಿಧಃ ಕಿಂ ನು ತಾತ|
ಕಚ್ಚಿದ್ಧುತಂ ಚಾಗ್ನಿಹೋತ್ರಂ ತ್ವಯಾದ್ಯ|
03111021c ಸುನಿರ್ಣಿಕ್ತಂ ಸ್ರುಕ್ಸ್ರುವಂ ಹೋಮಧೇನುಃ|
ಕಚ್ಚಿತ್ಸವತ್ಸಾ ಚ ಕೃತಾ ತ್ವಯಾದ್ಯ||
“ಮಗೂ! ಇನ್ನೂ ಸಮಿಧೆಗಳನ್ನು ತರಲಿಲ್ಲ ಏಕೆ? ಇನ್ನೂ ಇಂದಿನ ಅಗ್ನಿಹೋತ್ರವನ್ನು ನಡೆಸಲಿಲ್ಲವೇ? ಹೋಮದ ಹುಟ್ಟುಗಳನ್ನು ತೊಳೆದಿಟ್ಟಿದ್ದೀಯಾ? ಹೋಮಕ್ಕೆ ಕರುವಿನೊಂದಿಗೆ ಹಸುವನ್ನು ತಂದಿದ್ದೀಯಾ?
03111022a ನ ವೈ ಯಥಾಪೂರ್ವಮಿವಾಸಿ ಪುತ್ರ|
ಚಿಂತಾಪರಶ್ಚಾಸಿ ವಿಚೇತನಶ್ಚ|
03111022c ದೀನೋಽತಿಮಾತ್ರಂ ತ್ವಮಿಹಾದ್ಯ ಕಿಂ ನು|
ಪೃಚ್ಚಾಮಿ ತ್ವಾಂ ಕ ಇಹಾದ್ಯಾಗತೋಽಭೂತ್||
ಮಗಾ! ಮೊದಲಿನಂತೆ ನೀನಿಲ್ಲ! ಚೇತನವನ್ನು ಕಳೆದುಕೊಂಡು ಚಿಂತಾಪರನಾಗಿ ಮನಸ್ಸನ್ನು ಕಳೆದುಕೊಂಡಿದ್ದೀಯೆ. ಇಂದು ನೀನು ತುಂಬಾ ದುಃಖಕ್ಕೊಳಗಾದ ಹಾಗಿದೆ. ಆದರೆ ಏಕೆ? ಇಂದು ಇಲ್ಲಿಯೇ ಇದ್ದ ನಿನ್ನನ್ನು ಕೇಳುತ್ತಿದ್ದೇನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ಏಕಾದಶಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹನ್ನೊಂದನೆಯ ಅಧ್ಯಾಯವು.