Aranyaka Parva: Chapter 110

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೧೦

ಋಷ್ಯಶೃಂಗ

ಲೋಮಶನು ಋಷ್ಯಶೃಂಗನ ಚರಿತ್ರೆಯನ್ನು ಪ್ರಾರಂಭಿಸಿದುದು (೧-೧೦). ಅಪ್ಸರೆ ಊರ್ವಶಿಯನ್ನು ನೋಡಿ ಸ್ಖಲಿತಗೊಂಡ ಕಾಶ್ಯಪ ವಿಭಾಂಡಕನ ವೀರ್ಯದಿಂದ ಜಿಂಕೆಯೊಂದರಲ್ಲಿ ಋಷ್ಯಶೃಂಗನ ಜನನ; ತಂದೆಯನ್ನು ಬಿಟ್ಟು ಬೇರೆ ಯಾವ ಮನುಷ್ಯನನ್ನೂ ನೋಡದಿದ್ದ ಋಷ್ಯಶೃಂಗನು ಬ್ರಹ್ಮಚರ್ಯದಲ್ಲಿದ್ದುದು (೧೧-೧೮). ಬರಗಾಲದಿಂದ ಪೀಡಿತವಾದ ಅಂಗದೇಶದ ರಾಜ ಲೋಮಪಾದನಿಗೆ ಋಷ್ಯಶೃಂಗನನ್ನು ಕರೆಯಿಸಿಕೊಂಡರೆ ಮಳೆಯಾಗುವುದೆಂದು ಬ್ರಾಹ್ಮಣರು ಸಲಹೆ ನೀಡುವುದು (೧೯-೨೬). ಋಷ್ಯಶೃಂಗನನ್ನು ಮೋಹಿಸಿ ಕರೆತರಲು ಸ್ತ್ರೀಯರ ಗುಂಪೊಂದು ಹೊರಡುವುದು (೨೭-೩೬).

03110001 ಲೋಮಶ ಉವಾಚ|

03110001a ಏಷಾ ದೇವನದೀ ಪುಣ್ಯಾ ಕೌಶಿಕೀ ಭರತರ್ಷಭ|

03110001c ವಿಶ್ವಾಮಿತ್ರಾಶ್ರಮೋ ರಮ್ಯ ಏಷ ಚಾತ್ರ ಪ್ರಕಾಶತೇ||

ಲೋಮಶನು ಹೇಳಿದನು: “ಭರತರ್ಷಭ! ಇದು ದೇವನದಿ ಪುಣ್ಯ ಕೌಶಿಕೀ. ಇಲ್ಲಿ ವಿಶ್ವಾಮಿತ್ರನ ರಮ್ಯ ಆಶ್ರಮವು ಕಂಗೊಳಿಸುತ್ತಿದೆ.

03110002a ಆಶ್ರಮಶ್ಚೈವ ಪುಣ್ಯಾಖ್ಯಃ ಕಾಶ್ಯಪಸ್ಯ ಮಹಾತ್ಮನಃ|

03110002c ಋಶ್ಯಶೃಂಗಃ ಸುತೋ ಯಸ್ಯ ತಪಸ್ವೀ ಸಂಯತೇಂದ್ರಿಯಃ||

03110003a ತಪಸೋ ಯಃ ಪ್ರಭಾವೇನ ವರ್ಷಯಾಮಾಸ ವಾಸವಂ|

03110003c ಅನಾವೃಷ್ಟ್ಯಾಂ ಭಯಾದ್ಯಸ್ಯ ವವರ್ಷ ಬಲವೃತ್ರಹಾ||

ಇಲ್ಲಿ ಪುಣ್ಯ ಎಂದು ಕರೆಯಲ್ಪಡುವ ಮಹಾತ್ಮ ಕಾಶ್ಯಪ, ಸಂಯತೇಂದ್ರಿಯ, ತಪಸ್ವಿ, ಋಷ್ಯಶೃಂಗನ ತಂದೆಯ ಆಶ್ರಮವೂ ಇದೆ. ಋಷ್ಯಶೃಂಗನ ತಪಸ್ಸಿನ ಪ್ರಭಾವದಿಂದ ವಾಸವನು ಮಳೆಯನ್ನು ಸುರಿಸಿದನು. ಅವನ ಭಯದಿಂದ ಬಲವೃತ್ರಹನು ಅನಾವೃಷ್ಠಿಯಾಗಿರುವಾಗ ಮಳೆಯನ್ನು ಸುರಿಸಿದನು.

03110004a ಮೃಗ್ಯಾಂ ಜಾತಃ ಸ ತೇಜಸ್ವೀ ಕಾಶ್ಯಪಸ್ಯ ಸುತಃ ಪ್ರಭುಃ|

03110004c ವಿಷಯೇ ಲೋಮಪಾದಸ್ಯ ಯಶ್ಚಕಾರಾದ್ಭುತಂ ಮಹತ್||

ಜಿಂಕೆಯಿಂದ ಜನಿಸಿದ ಆ ತೇಜಸ್ವಿ ಪ್ರಭು ಕಾಶ್ಯಪನ ಮಗನು ಲೋಮಪಾದನ ರಾಜ್ಯದಲ್ಲಿ ಮಹಾ ಅದ್ಭುತವನ್ನು ಮಾಡಿತೋರಿಸಿದನು.

03110005a ನಿವರ್ತಿತೇಷು ಸಸ್ಯೇಷು ಯಸ್ಮೈ ಶಾಂತಾಂ ದದೌ ನೃಪಃ|

03110005c ಲೋಮಪಾದೋ ದುಹಿತರಂ ಸಾವಿತ್ರೀಂ ಸವಿತಾ ಯಥಾ||

ಪುನಃ ಬೆಳೆಗಳು ಬೆಳೆಯುವಂತೆ ಮಾಡಿದ ಅವನಿಗೆ ನೃಪ ಲೋಮಪಾದನು ತನ್ನ ಮಗಳು ಶಾಂತಳನ್ನು ಸೂರ್ಯನು ಸಾವಿತ್ರಿಯನ್ನು ಹೇಗೋ ಹಾಗೆ ಕೊಟ್ಟನು”

03110006 ಯುಧಿಷ್ಠಿರ ಉವಾಚ|

03110006a ಋಶ್ಯಶೃಂಗಃ ಕಥಂ ಮೃಗ್ಯಾಮುತ್ಪನ್ನಃ ಕಾಶ್ಯಪಾತ್ಮಜಃ|

03110006c ವಿರುದ್ಧೇ ಯೋನಿಸಂಸರ್ಗೇ ಕಥಂ ಚ ತಪಸಾ ಯುತಃ||

ಯುಧಿಷ್ಠಿರನು ಹೇಳಿದನು: “ಕಾಶ್ಯಪನ ಮಗನಾಗಿ ಋಷ್ಯಶೃಂಗನು ಜಿಂಕೆಯಲ್ಲಿ ಹೇಗೆ ಜನಿಸಿದನು? ವಿರುದ್ಧ ಯೋನಿಗಳಲ್ಲಿ ಜನಿಸಿದ ಅವನು ಹೇಗೆ ತಪಸ್ವಿಯಾದನು?

03110007a ಕಿಮರ್ಥಂ ಚ ಭಯಾಚ್ಶಕ್ರಸ್ತಸ್ಯ ಬಾಲಸ್ಯ ಧೀಮತಃ|

03110007c ಅನಾವೃಷ್ಟ್ಯಾಂ ಪ್ರವೃತ್ತಾಯಾಂ ವವರ್ಷ ಬಲವೃತ್ರಹಾ||

ಯಾವ ಕಾರಣಕ್ಕೆ ಆ ಧೀಮಂತ ಬಾಲಕನ ಭಯದಿಂದ ಬಲವೃತ್ರಹನು ಅನಾವೃಷ್ಠಿಯಾಗಿದ್ದರೂ ಮಳೆಯನ್ನು ಸುರಿಸಿದನು?

03110008a ಕಥಂರೂಪಾ ಚ ಶಾಂತಾಭೂದ್ರಾಜಪುತ್ರೀ ಯತವ್ರತಾ|

03110008c ಲೋಭಯಾಮಾಸ ಯಾ ಚೇತೋ ಮೃಗಭೂತಸ್ಯ ತಸ್ಯ ವೈ||

ಜಿಂಕೆಯ ರೂಪದಲ್ಲಿ ವಾಸಿಸುತ್ತಿದ್ದ ಅವನ ಚೇತನಕ್ಕೆ ಆಸೆತೋರಿಸಿದ ರಾಜಪುತ್ರಿ ಯತವ್ರತೆ ಶಾಂತಿಯ ರೂಪವಾದರೂ ಹೇಗಿತ್ತು

03110009a ಲೋಮಪಾದಶ್ಚ ರಾಜರ್ಷಿರ್ಯದಾಶ್ರೂಯತ ಧಾರ್ಮಿಕಃ|

03110009c ಕಥಂ ವೈ ವಿಷಯೇ ತಸ್ಯ ನಾವರ್ಷತ್ಪಾಕಶಾಸನಃ||

ಲೋಮಪಾದನಾದರೋ ರಾಜರ್ಷಿಯೂ ಧಾರ್ಮಿಕನೂ ಆಗಿದ್ದನೆಂದು ಕೇಳಿದ್ದೇವೆ. ಅವನ ರಾಜ್ಯದಲ್ಲಿ ಪಾಕಶಾಸನನು ಏಕೆ ಮಳೆಯನ್ನು ಸುರಿಸಲಿಲ್ಲ?

03110010a ಏತನ್ಮೇ ಭಗವನ್ಸರ್ವಂ ವಿಸ್ತರೇಣ ಯಥಾತಥಂ|

03110010c ವಕ್ತುಮರ್ಹಸಿ ಶುಶ್ರೂಷೋರೃಷ್ಯಶೃಂಗಸ್ಯ ಚೇಷ್ಟಿತಂ||

ಭಗವನ್! ಇವೆಲ್ಲವನ್ನೂ ಹೇಗೆ ನಡೆಯಿತೋ ಹಾಗೆ ವಿಸ್ತಾರವಾಗಿ ಹೇಳಬೇಕು. ಋಷ್ಯಶೃಂಗನ ಕ್ರಿಯೆಗಳನ್ನು ಕೇಳಿಸು.”

03110011 ಲೋಮಶ ಉವಾಚ|

03110011a ವಿಭಾಂಡಕಸ್ಯ ಬ್ರಹ್ಮರ್ಷೇಸ್ತಪಸಾ ಭಾವಿತಾತ್ಮನಃ|

03110011c ಅಮೋಘವೀರ್ಯಸ್ಯ ಸತಃ ಪ್ರಜಾಪತಿಸಮದ್ಯುತೇಃ||

03110012a ಶೃಣು ಪುತ್ರೋ ಯಥಾ ಜಾತ ಋಶ್ಯಶೃಂಗಃ ಪ್ರತಾಪವಾನ್|

03110012c ಮಹಾಹ್ರದೇ ಮಹಾತೇಜಾ ಬಾಲಃ ಸ್ಥವಿರಸಮ್ಮತಃ||

ಲೋಮಶನು ಹೇಳಿದನು: “ಬ್ರಹ್ಮರ್ಷಿ, ತಪಸ್ಸಿನಿಂದ ಆತ್ಮವನ್ನು ಅನುಭವಿಸಿದ ಅಮೋಘವೀರ್ಯ, ಸತ್ಯವಂತ, ಪ್ರಜಾಪತಿಯಂತೆ  ಬೆಳಗುವ ವಿಭಾಂಡಕನಲ್ಲಿ ಪ್ರತಾಪಿ, ಮಹಾಹ್ರದ, ಮಹಾತೇಜಸ್ವಿ, ಸ್ಥವಿರಸಂಹಿತ ಬಾಲಕ ಋಷ್ಯಶೃಂಗನು ಮಗನಾಗಿ ಹೇಗೆ ಜನಿಸಿದನು ಎನ್ನುವುದನ್ನು ಕೇಳು.

03110013a ಮಹಾಹ್ರದಂ ಸಮಾಸಾದ್ಯ ಕಾಶ್ಯಪಸ್ತಪಸಿ ಸ್ಥಿತಃ|

03110013c ದೀರ್ಘಕಾಲಂ ಪರಿಶ್ರಾಂತ ಋಷಿರ್ದೇವರ್ಷಿಸಮ್ಮತಃ||

ಕಾಶ್ಯಪ ವಿಭಾಂಡಕನು ಈ ಮಹಾ ಸರೋವರವನ್ನು ಸೇರಿ ಅಲ್ಲಿ ದೀರ್ಘಕಾಲ ಪರಿಶ್ರಮಿಸಿ ಋಷಿ-ದೇವತೆಗಳಿಂದ ಗೌರವಿಸಲ್ಪಟ್ಟು ತಪಸ್ಸಿನಲ್ಲಿ ನಿರತನಾಗಿದ್ದನು.

03110014a ತಸ್ಯ ರೇತಃ ಪ್ರಚಸ್ಕಂದ ದೃಷ್ಟ್ವಾಪ್ಸರಸಮುರ್ವಶೀಂ|

03110014c ಅಪ್ಸೂಪಸ್ಪೃಶತೋ ರಾಜನ್ಮೃಗೀ ತಚ್ಚಾಪಿಬತ್ತದಾ||

03110015a ಸಹ ತೋಯೇನ ತೃಷಿತಾ ಸಾ ಗರ್ಭಿಣ್ಯಭವನ್ನೃಪ|

03110015c ಅಮೋಘತ್ವಾದ್ವಿಧೇಶ್ಚೈವ ಭಾವಿತ್ವಾದ್ದೈವನಿರ್ಮಿತಾತ್||

ರಾಜನ್! ಅವನು ನೀರಿನಲ್ಲಿ ಸ್ನಾನಮಾಡುತ್ತಿರುವಾಗ ಅಪ್ಸರೆ ಊರ್ವಶಿಯನ್ನು ನೋಡಿ ಅವನ ವೀರ್ಯವು ಸ್ಖಲನವಾಯಿತು. ಆಗಲೇ ಅಲ್ಲಿಗೆ ಬಾಯಾರಿಕೆಯಿಂದ ಬಂದು ನೀರನ್ನು ಕುಡಿಯುತ್ತಿದ್ದ ಹೆಣ್ಣು ಜಿಂಕೆಯೊಂದು ಅದನ್ನು ಕುಡಿಯಿತು ಮತ್ತು ನೃಪ! ಅದು ಗರ್ಭಿಣಿಯಾಯಿತು. ದೈವನಿರ್ಮಿತವಾದ ವಿಧಿಯು ನಿಶ್ಚಯಿಸಿದುದು ಎಷ್ಟೇ ಅಮೋಘವಾಗಿದ್ದರೂ ನಡೆಯುತ್ತದೆ.

03110016a ತಸ್ಯಾಂ ಮೃಗ್ಯಾಂ ಸಮಭವತ್ತಸ್ಯ ಪುತ್ರೋ ಮಹಾನೃಷಿಃ|

03110016c ಋಶ್ಯಶೃಂಗಸ್ತಪೋನಿತ್ಯೋ ವನ ಏವ ವ್ಯವರ್ಧತ||

ಆ ಜಿಂಕೆಯಲ್ಲಿ ಅವನ ಪುತ್ರ ಮಹಾನೃಷಿ ಋಷ್ಯಶೃಂಗನು ಜನಿಸಿದನು. ನಿತ್ಯವೂ ತಪಸ್ಸಿನಲ್ಲಿದ್ದ ಅವನು ವನದಲ್ಲಿಯೇ ಬೆಳೆದನು.

03110017a ತಸ್ಯರ್ಶ್ಯಶೃಂಗಂ ಶಿರಸಿ ರಾಜನ್ನಾಸೀನ್ಮಹಾತ್ಮನಃ|

03110017c ತೇನರ್ಶ್ಯಶೃಂಗ ಇತ್ಯೇವಂ ತದಾ ಸ ಪ್ರಥಿತೋಽಭವತ್||

ರಾಜನ್! ಆ ಮಹಾತ್ಮನ ಶಿರದಲ್ಲಿ ಜೆಂಕೆಯ ಕೋಡುಗಳಿದ್ದವು. ಆದುದರಿಂದ ಋಷ್ಯಶೃಂಗ ಎಂಬ ಹೆಸರು ಅವನಿಗೆ ಬಂದಿತು.

03110018a ನ ತೇನ ದೃಷ್ಟಪೂರ್ವೋಽನ್ಯಃ ಪಿತುರನ್ಯತ್ರ ಮಾನುಷಃ|

03110018c ತಸ್ಮಾತ್ತಸ್ಯ ಮನೋ ನಿತ್ಯಂ ಬ್ರಹ್ಮಚರ್ಯೇಽಭವನ್ನೃಪ||

ತನ್ನ ತಂದೆಯ ಹೊರತಾಗಿ ಬೇರೆ ಯಾವ ಮನುಷ್ಯರನ್ನೂ ಅವನು ನೋಡಿರಲಿಲ್ಲ. ನೃಪ! ಆದುದರಿಂದ ಅವನ ಮನಸ್ಸು ನಿತ್ಯವೂ ಬ್ರಹ್ಮಚರ್ಯದಲ್ಲಿತ್ತು.

03110019a ಏತಸ್ಮಿನ್ನೇವ ಕಾಲೇ ತು ಸಖಾ ದಶರಥಸ್ಯ ವೈ|

03110019c ಲೋಮಪಾದ ಇತಿ ಖ್ಯಾತೋ ಅಂಗಾನಾಮೀಶ್ವರೋಽಭವತ್||

ಅದೇ ಸಮಯದಲ್ಲಿ ದಶರಥನ ಸಖ ಲೋಮಪಾದನೆಂದು ಖ್ಯಾತನು ಅಂಗದೇಶದ ರಾಜನಾಗಿದ್ದನು. 

03110020a ತೇನ ಕಾಮಃ ಕೃತೋ ಮಿಥ್ಯಾ ಬ್ರಾಹ್ಮಣೇಭ್ಯ ಇತಿ ಶ್ರುತಿಃ|

03110020c ಸ ಬ್ರಾಹ್ಮಣೈಃ ಪರಿತ್ಯಕ್ತಸ್ತದಾ ವೈ ಜಗತೀಪತಿಃ||

ಅವನು ತನ್ನ ಮನಬಂದಂತೆ ಬ್ರಾಹ್ಮಣರನ್ನು ನಡೆಸಿಕೊಳ್ಳುತ್ತಿದ್ದ ಎಂದು ಕೇಳಿದ್ದೇವೆ. ಆದುದರಿಂದ ಬ್ರಾಹ್ಮಣರು ಆ ರಾಜನನ್ನು ಪರಿತ್ಯಜಿಸಿದರು.

03110021a ಪುರೋಹಿತಾಪಚಾರಾಚ್ಚ ತಸ್ಯ ರಾಜ್ಞೋ ಯದೃಚ್ಚಯಾ|

03110021c ನ ವವರ್ಷ ಸಹಸ್ರಾಕ್ಷಸ್ತತೋಽಪೀಡ್ಯಂತ ವೈ ಪ್ರಜಾಃ||

ಆ ರಾಜನ ಪುರೋಹಿತನೇ ಹೊರಟು ಹೋದುದರಿಂದ ಸಹಸ್ರಾಕ್ಷನು ಅಲ್ಲಿ ಮಳೆಯನ್ನು ಸುರಿಸಲಿಲ್ಲ ಮತ್ತು ಪ್ರಜೆಗಳು ಪೀಡಿತರಾದರು.

03110022a ಸ ಬ್ರಾಹ್ಮಣಾನ್ಪರ್ಯಪೃಚ್ಚತ್ತಪೋಯುಕ್ತಾನ್ಮನೀಷಿಣಃ|

03110022c ಪ್ರವರ್ಷಣೇ ಸುರೇಂದ್ರಸ್ಯ ಸಮರ್ಥಾನ್ಪೃಥಿವೀಪತಿಃ||

ಆ ರಾಜನು ಇಂದ್ರನಿಂದ ಮಳೆತರಿಸಲು ತಪೋಧನ, ತಿಳಿದ, ಸಮರ್ಥ ಬ್ರಾಹ್ಮಣರಲ್ಲಿ ಕೇಳಿದನು.

03110023a ಕಥಂ ಪ್ರವರ್ಷೇತ್ಪರ್ಜನ್ಯ ಉಪಾಯಃ ಪರಿದೃಶ್ಯತಾಂ|

03110023c ತಮೂಚುಶ್ಚೋದಿತಾಸ್ತೇನ ಸ್ವಮತಾನಿ ಮನೀಷಿಣಃ||

“ಮಳೆಯನ್ನು ಹೇಗೆ ಸುರಿಸಬಹುದು? ಉಪಾಯವನ್ನು ಹುಡುಕಿ!” ಈ ರೀತಿ ಪ್ರಶ್ನಿಸಲ್ಪಟ್ಟ ವಿವೇಕಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡರು.

03110024a ತತ್ರ ತ್ವೇಕೋ ಮುನಿವರಸ್ತಂ ರಾಜಾನಮುವಾಚ ಹ|

03110024c ಕುಪಿತಾಸ್ತವ ರಾಜೇಂದ್ರ ಬ್ರಾಹ್ಮಣಾ ನಿಸ್ಕೃತಿಂ ಚರ||

ಅವರಲ್ಲಿ ಒಬ್ಬ ಮುನಿಯು ರಾಜನಿಗೆ ಹೇಳಿದನು: “ರಾಜೇಂದ್ರ! ಬ್ರಾಹ್ಮಣರು ನಿನ್ನಮೇಲೆ ಕುಪಿತರಾಗಿದ್ದಾರೆ. ಅದನ್ನು ಸರಿಮಾಡು!

03110025a ಋಶ್ಯಶೃಂಗಂ ಮುನಿಸುತಮಾನಯಸ್ವ ಚ ಪಾರ್ಥಿವ|

03110025c ವಾನೇಯಮನಭಿಜ್ಞಂ ಚ ನಾರೀಣಾಮಾರ್ಜವೇ ರತಂ||

ಪಾರ್ಥಿವ! ವನದಲ್ಲಿಯೇ ಬೆಳೆದ, ನಾರಿಗಳ ಕುರಿತು ತಿಳಿಯದೇ ಇದ್ದ, ಸತ್ಯರತನಾದ, ಮುನಿಸುತ ಋಷ್ಯಶೃಂಗನನ್ನು ಕರೆಯಿಸು.

03110026a ಸ ಚೇದವತರೇದ್ರಾಜನ್ವಿಷಯಂ ತೇ ಮಹಾತಪಾಃ|

03110026c ಸದ್ಯಃ ಪ್ರವರ್ಷೇತ್ಪರ್ಜನ್ಯ ಇತಿ ಮೇ ನಾತ್ರ ಸಂಶಯಃ||

ರಾಜನ್! ಆ ಮಹಾತಪಸ್ವಿಯು ನಿನ್ನ ರಾಜ್ಯಕ್ಕೆ ಬಂದರೆ ತಕ್ಷಣವೇ ಮಳೆ ಸುರಿಯುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ!”

03110027a ಏತಚ್ಛೃತ್ವಾ ವಚೋ ರಾಜನ್ಕೃತ್ವಾ ನಿಸ್ಕೃತಿಮಾತ್ಮನಃ|

03110027c ಸ ಗತ್ವಾ ಪುನರಾಗಚ್ಚತ್ಪ್ರಸನ್ನೇಷು ದ್ವಿಜಾತಿಷು||

03110027e ರಾಜಾನಮಾಗತಂ ದೃಷ್ಟ್ವಾ ಪ್ರತಿಸಂಜಗೃಹುಃ ಪ್ರಜಾಃ||

ಈ ಮಾತನ್ನು ಕೇಳಿದ ರಾಜನು ತನಗೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡನು. ಅವನು ಹೊರ ಹೋಗಿ ಬ್ರಾಹ್ಮಣರು ಪ್ರಸನ್ನರಾದ ನಂತರ ಹಿಂದಿರುಗಿದನು. ಆಗಮಿಸಿದ ರಾಜನನ್ನು ಪ್ರಜೆಗಳು ಸ್ವೀಕರಿಸಿದರು.

03110028a ತತೋಽಂಗಪತಿರಾಹೂಯ ಸಚಿವಾನ್ಮಂತ್ರಕೋವಿದಾನ್|

03110028c ಋಶ್ಯಶೃಂಗಾಗಮೇ ಯತ್ನಮಕರೋನ್ಮಂತ್ರನಿಶ್ಚಯೇ||

ಅನಂತರ ಅಂಗಪತಿಯು ಮಂತ್ರಕೋವಿದ ಸಚಿವರನ್ನು ಕರೆಯಿಸಿ ಋಷ್ಯಶೃಂಗನನ್ನು ಕರೆತರಿಸುವುದರ ಕುರಿತು ಮಂತ್ರಾಲೋಚನೆ ಮಾಡಿ ನಿಶ್ಚಯಿಸಿದನು.

03110029a ಸೋಽಧ್ಯಗಚ್ಚದುಪಾಯಂ ತು ತೈರಮಾತ್ಯೈಃ ಸಹಾಚ್ಯುತಃ|

03110029c ಶಾಸ್ತ್ರಜ್ಞೈರಲಮರ್ಥಜ್ಞೈರ್ನೀತ್ಯಾಂ ಚ ಪರಿನಿಷ್ಠಿತೈಃ||

ಶಾಸ್ತ್ರಜ್ಞರೂ, ಅರ್ಥಜ್ಞರೂ, ನೀತಿಪ್ರವೀಣರೂ ಆದ ಅಮಾತ್ಯರ ಸಹಾಯದಿಂದ ಆ ಅಚ್ಯುತನು ಒಂದು ಉಪಾಯವನ್ನು ತಯಾರಿಸಿದನು,

03110030a ತತ ಆನಾಯಯಾಮಾಸ ವಾರಮುಖ್ಯಾ ಮಹೀಪತಿಃ|

03110030c ವೇಶ್ಯಾಃ ಸರ್ವತ್ರ ನಿಷ್ಣಾತಾಸ್ತಾ ಉವಾಚ ಸ ಪಾರ್ಥಿವಃ||

ಆಗ ಆ ಪಾರ್ಥಿವ ಮಹೀಪತಿಯು ಅತ್ಯಂತ ಶ್ರೇಷ್ಠ, ಎಲ್ಲದರಲ್ಲಿ ಪಳಗಿದ ವೇಶ್ಯೆಯರನ್ನು ಕರೆಯಿಸಿ ಅವರಿಗೆ ಹೇಳಿದನು:

03110031a ಋಶ್ಯಶೃಂಗಮೃಷೇಃ ಪುತ್ರಮಾನಯಧ್ವಮುಪಾಯತಃ|

03110031c ಲೋಭಯಿತ್ವಾಭಿವಿಶ್ವಾಸ್ಯ ವಿಷಯಂ ಮಮ ಶೋಭನಾಃ||

“ಸುಂದರಿಯರೇ! ಏನಾದರೂ ಉಪಾಯದಿಂದ - ಆಸೆತೋರಿಸಿ ಅಥವಾ ಭರವಸೆಗಳನ್ನಿತ್ತು ಋಷಿಪುತ್ರ ಋಷ್ಯಶೃಂಗನನ್ನು ನನ್ನ ರಾಜ್ಯಕ್ಕೆ ಕರೆತರಬೇಕು!”

03110032a ತಾ ರಾಜಭಯಭೀತಾಶ್ಚ ಶಾಪಭೀತಾಶ್ಚ ಯೋಷಿತಃ|

03110032c ಅಶಕ್ಯಮೂಚುಸ್ತತ್ಕಾರ್ಯಂ ವಿವರ್ಣಾ ಗತಚೇತಸಃ||

ಆ ಮಹಿಳೆಯರು ರಾಜನ ಭಯದಿಂದ ಮತ್ತು ಶಾಪದ ಭಯದಿಂದ ಹೆದರಿ ವಿವರ್ಣರಾಗಿ, ಮನಸ್ಸನ್ನು ಕಳೆದುಕೊಂಡು, “ಇದು ಸಾಧ್ಯವೇ ಇಲ್ಲ!” ಎಂದರು.

03110033a ತತ್ರ ತ್ವೇಕಾ ಜರದ್ಯೋಷಾ ರಾಜಾನಮಿದಮಬ್ರವೀತ್|

03110033c ಪ್ರಯತಿಷ್ಯೇ ಮಹಾರಾಜ ತಮಾನೇತುಂ ತಪೋಧನಂ||

ಆದರೆ ಅಲ್ಲಿದ್ದ ಓರ್ವ ವೃದ್ಧ ಮಹಿಳೆಯು ರಾಜನಿಗೆ ಹೇಳಿದಳು: “ಮಹಾರಾಜ! ಆ ತಪೋಧನನನ್ನು ಕರೆತರಲು ನಾನು ಪ್ರಯತ್ನಿಸುತ್ತೇನೆ.

03110034a ಅಭಿಪ್ರೇತಾಂಸ್ತು ಮೇ ಕಾಮಾನ್ಸಮನುಜ್ಞಾತುಮರ್ಹಸಿ|

03110034c ತತಃ ಶಕ್ಷ್ಯೇ ಲೋಭಯಿತುಮೃಶ್ಯಶೃಂಗಮೃಷೇಃ ಸುತಂ||

ನಾನು ಬಯಸಿದ ಕೆಲವು ಸೌಲಭ್ಯಗಳಿಗೆ ಅಪ್ಪಣೆ ಕೊಡಬೇಕು. ಆಗ ಆ ಋಷಿಸುತ ಋಷ್ಯಶೃಂಗನನ್ನು ಆಸೆತೋರಿಸಿ ಕರೆತರಬಲ್ಲೆ!”

03110035a ತಸ್ಯಾಃ ಸರ್ವಮಭಿಪ್ರಾಯಮನ್ವಜಾನಾತ್ಸ ಪಾರ್ಥಿವಃ|

03110035c ಧನಂ ಚ ಪ್ರದದೌ ಭೂರಿ ರತ್ನಾನಿ ವಿವಿಧಾನಿ ಚ||

ಆಗ ರಾಜನು ಅವಳ ಎಲ್ಲ ಬೇಡಿಕೆಗಳನ್ನೂ ಪೂರೈಸುವಂತೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಹಣ ಮತ್ತು ವಿವಿಧ ರತ್ನಗಳನ್ನು ಕೊಡಿಸಿದನು. 

03110036a ತತೋ ರೂಪೇಣ ಸಂಪನ್ನಾ ವಯಸಾ ಚ ಮಹೀಪತೇ|

03110036c ಸ್ತ್ರಿಯ ಆದಾಯ ಕಾಶ್ಚಿತ್ಸಾ ಜಗಾಮ ವನಮಂಜಸಾ||

ಆಗ ಮಹೀಪತೇ! ರೂಪ ಮತ್ತು ವಯಸ್ಸಿನಲ್ಲಿ ಸಂಪನ್ನರಾದ ಹಲವಾರು ಸ್ತ್ರೀಯರೊಂದಿಗೆ ಅಂಜಿಕೊಂಡೇ ವನಕ್ಕೆ ಹೋದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ದಶಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹತ್ತನೆಯ ಅಧ್ಯಾಯವು.

Related image

Comments are closed.