Aranyaka Parva: Chapter 109

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೯

ಪಾಂಡವರು ನಂದ-ಉಪನಂದಾ ನದಿಗಳಿಗೆ ಹೋದುದು; ಹೇಮಕೂಟದ ಮಹಿಮೆ (೧-೨೦).

03109001 ವೈಶಂಪಾಯನ ಉವಾಚ|

03109001a ತತಃ ಪ್ರಯಾತಃ ಕೌಂತೇಯಃ ಕ್ರಮೇಣ ಭರತರ್ಷಭ|

03109001c ನಂದಾಮಪರನಂದಾಂ ಚ ನದ್ಯೌ ಪಾಪಭಯಾಪಹೇ||

ವೈಶಂಪಾಯನನು ಹೇಳಿದನು: “ಭರತರ್ಷಭ! ಅನಂತರ ಕ್ರಮೇಣ ಕೌಂತೇಯನು ಪಾಪಭಯವನ್ನು ನಿವಾರಿಸುವ ನಂದ ಮತ್ತು ಅಪರನಂದಾ ನದಿಗಳಿಗೆ ಬಂದನು.

03109002a ಸ ಪರ್ವತಂ ಸಮಾಸಾದ್ಯ ಹೇಮಕೂಟಮನಾಮಯಂ|

03109002c ಅಚಿಂತ್ಯಾನದ್ಭುತಾನ್ಭಾವಾನ್ದದರ್ಶ ಸುಬಹೂನ್ನೃಪಃ||

ಆ ನೃಪನು ಅನಾಮಯ ಹೇಮಕೂಟವನ್ನು ತಲುಪಿ ಅಲ್ಲಿ ಯೋಚನೆಗೂ ಸಿಲುಕದ ಹಲವಾರು ಅದ್ಭುತ-ಭಾವಗಳನ್ನು ಕಂಡನು.

03109003a ವಾಚೋ ಯತ್ರಾಭವನ್ಮೇಘಾ ಉಪಲಾಶ್ಚ ಸಹಸ್ರಶಃ|

03109003c ನಾಶಕ್ನುವಂಸ್ತಮಾರೋಢುಂ ವಿಷಣ್ಣಮನಸೋ ಜನಾಃ||

ಅಲ್ಲಿ ಮಾತನಾಡಿದರೆ ಮೋಡಗಳು ಕವಿಯುವವು ಮತ್ತು ಸಹಸ್ರಾರು ಬಂಡೆಗಳು ಉರುಳುವವು. ಆದುದರಿಂದ ವಿಷಣ್ಣ ಮನಸ್ಕ ಜನರು ಅದನ್ನು ಏರಲು ಅಶಕ್ತರು.

03109004a ವಾಯುರ್ನಿತ್ಯಂ ವವೌ ಯತ್ರ ನಿತ್ಯಂ ದೇವಶ್ಚ ವರ್ಷತಿ|

03109004c ಸಾಯಂ ಪ್ರಾತಶ್ಚ ಭಗವಾನ್ದೃಶ್ಯತೇ ಹವ್ಯವಾಹನಃ||

ಅಲ್ಲಿ ವಾಯುವು ಸದಾ ಬೀಸುತ್ತಾನೆ, ದೇವತೆಗಳು ನಿತ್ಯವೂ ಮಳೆಸುರಿಸುತ್ತಾರೆ. ಬೆಳಿಗ್ಗೆ ಮತ್ತು ಸಾಯಂಕಾಲಗಳಲ್ಲಿ ಭಗವಾನ್ ಹವ್ಯವಾಹನನು ಕಾಣಿಸಿಕೊಳ್ಳುತ್ತಾನೆ.

03109005a ಏವಂ ಬಹುವಿಧಾನ್ಭಾವಾನದ್ಭುತಾನ್ವೀಕ್ಷ್ಯ ಪಾಂಡವಃ|

03109005c ಲೋಮಶಂ ಪುನರೇವ ಸ್ಮ ಪರ್ಯಪೃಚ್ಚತ್ತದದ್ಭುತಂ||

ಈ ರೀತಿಯ ಬಹುವಿಧದ ಭಾವ-ಅದ್ಭುತಗಳನ್ನು ನೋಡಿದ ಪಾಂಡವನು ಪುನಃ ಲೋಮಶನನ್ನು ಆ ಅದ್ಭುತಗಳ ಕುರಿತು ಕೇಳಿದನು.

03109006 ಲೋಮಶ ಉವಾಚ|

03109006a ಯಥಾಶ್ರುತಮಿದಂ ಪೂರ್ವಮಸ್ಮಾಭಿರರಿಕರ್ಶನ|

03109006c ತದೇಕಾಗ್ರಮನಾ ರಾಜನ್ನಿಬೋಧ ಗದತೋ ಮಮ||

ಲೋಮಶನು ಹೇಳಿದನು: “ಅರಿಕರ್ಶನ! ರಾಜನ್! ಹಿಂದೆ ನನಗೆ ಏನನ್ನು ಹೇಳಲಾಗಿತ್ತೋ ಅದನ್ನು ಏಕಾಗ್ರಮನಸ್ಕನಾಗಿ ಕೇಳು.

03109007a ಅಸ್ಮಿನ್ನೃಷಭಕೂಟೇಽಭೂದೃಷಭೋ ನಾಮ ತಾಪಸಃ|

03109007c ಅನೇಕಶತವರ್ಷಾಯುಸ್ತಪಸ್ವೀ ಕೋಪನೋ ಭೃಶಂ||

ಈ ಋಷಭ ಶಿಖರದಲ್ಲಿ ಋಷಭ ಎಂಬ ಹೆಸರಿನ ತಾಪಸನಿದ್ದನು. ಅನೇಕ ನೂರು ವರ್ಷಗಳು ತಪಸ್ಸಿನಲ್ಲಿ ನಿರತನಾಗಿದ್ದ ಅವನು ಬಹಳ ಕುಪಿತನಾಗಿದ್ದನು.

03109008a ಸ ವೈ ಸಂಭಾಷ್ಯಮಾಣೋಽನ್ಯೈಃ ಕೋಪಾದ್ಗಿರಿಮುವಾಚ ಹ|

03109008c ಯ ಇಹ ವ್ಯಾಹರೇತ್ಕಶ್ಚಿದುಪಲಾನುತ್ಸೃಜೇಸ್ತದಾ||

ಅಲ್ಲಿ ಬೇರೆಯವರು ಮಾತನಾಡುತ್ತಿದ್ದುದನ್ನು ನೋಡಿ ಕೋಪದಿಂದ ಪರ್ವತಕ್ಕೆ ಹೇಳಿದನು. ಇಲ್ಲಿ ಯಾರಾದರೂ ಏನಾದರೂ ಒಮ್ಮೆಯಾದರೂ ಮಾತನಾಡಿದರೆ ಕಲ್ಲು ಬಂಡೆಗಳನ್ನು ಉದುರಿಸಬೇಕು.

03109009a ವಾತಂ ಚಾಹೂಯ ಮಾ ಶಬ್ಧಮಿತ್ಯುವಾಚ ಸ ತಾಪಸಃ|

03109009c ವ್ಯಾಹರಂಶ್ಚೈವ ಪುರುಷೋ ಮೇಘೇನ ವಿನಿವಾರ್ಯತೇ||

ಆ ತಾಪಸನು ವಾಯುವನ್ನು ಕರೆದು “ಇಲ್ಲಿ ಶಬ್ಧ ಬೇಡ!” ಎಂದು ಹೇಳಿದನು. ಆದುದರಿಂದ ಮಾತನಾಡಿದ ನರನನ್ನು ಮೇಘಗಳು ತಡೆಯುತ್ತವೆ.

03109010a ಏವಮೇತಾನಿ ಕರ್ಮಾಣಿ ರಾಜಂಸ್ತೇನ ಮಹರ್ಷಿಣಾ|

03109010c ಕೃತಾನಿ ಕಾನಿ ಚಿತ್ಕೋಪಾತ್ಪ್ರತಿಷಿದ್ಧಾನಿ ಕಾನಿ ಚಿತ್||

ರಾಜನ್! ಹೀಗೆ ಆ ಮಹರ್ಷಿಯು ಕೋಪದಿಂದ ಕೆಲವು ಕೆಲಸಗಳನ್ನು ಮಾಡಿಸಿದನು ಮತ್ತು ಕೆಲವನ್ನು ಇನ್ನೊಬ್ಬರಿಗೆ ನಿಷೇದಿಸಿದನು.

03109011a ನಂದಾಮಭಿಗತಾನ್ದೇವಾನ್ಪುರಾ ರಾಜನ್ನಿತಿ ಶ್ರುತಿಃ|

03109011c ಅನ್ವಪದ್ಯಂತ ಸಹಸಾ ಪುರುಷಾ ದೇವದರ್ಶಿನಃ||

ರಾಜನ್! ಹಿಂದೆ ದೇವತೆಗಳು ನಂದಾ ನದಿಗೆ ಬರುತ್ತಿದ್ದರೆಂದು ಕೇಳುತ್ತೇವೆ. ಅವರು ಬಂದ ಕೂಡಲೇ ದೇವತೆಗಳನ್ನು ನೋಡಲು ಜನರು ಬರುತ್ತಿದ್ದರು.

03109012a ತೇ ದರ್ಶನಮನಿಚ್ಚಂತೋ ದೇವಾಃ ಶಕ್ರಪುರೋಗಮಾಃ|

03109012c ದುರ್ಗಂ ಚಕ್ರುರಿಮಂ ದೇಶಂ ಗಿರಿಪ್ರತ್ಯೂಹರೂಪಕಂ||

ಶಕ್ರನೇ ಮೊದಲಾದ ದೇವತೆಗಳು ಈ ರೀತಿ ನೋಟಕ್ಕೊಳಗಾಗುವುದನ್ನು ಮೆಚ್ಚಲಿಲ್ಲ. ಆದುದರಿಂದ ಗಿರಿಗಳಿಂದ ಕೋಟೆಯಂತೆ ಮಾಡಿ ಈ ಪ್ರದೇಶಕ್ಕೆ ಯಾರೂ ಬಾರದಹಾಗೆ ಮಾಡಿದರು.

03109013a ತದಾ ಪ್ರಭೃತಿ ಕೌಂತೇಯ ನರಾ ಗಿರಿಮಿಮಂ ಸದಾ|

03109013c ನಾಶಕ್ನುವನಭಿದ್ರಷ್ಟುಂ ಕುತ ಏವಾಧಿರೋಹಿತುಂ||

ಕೌಂತೇಯ! ಅಂದಿನಿಂದ ಈ ಪರ್ವತಕ್ಕೆ ನರರು ಏರುವುದೇನು ಬರುವುದಕ್ಕೇ ಅಶಕ್ತರಾದರು

03109014a ನಾತಪ್ತತಪಸಾ ಶಕ್ಯೋ ದ್ರಷ್ಟುಮೇಷ ಮಹಾಗಿರಿಃ|

03109014c ಆರೋಢುಂ ವಾಪಿ ಕೌಂತೇಯ ತಸ್ಮಾನ್ನಿಯತವಾಗ್ಭವ||

ಕೌಂತೇಯ! ತಪಸ್ಸನ್ನು ತಪಿಸದ ಯಾರೂ ಈ ಮಹಾಗಿರಿಯನ್ನು ನೋಡಲಿಕ್ಕಾಗುವುದಿಲ್ಲ ಮತ್ತು ಹತ್ತಲಿಕ್ಕೂ ಆಗುವುದಿಲ್ಲ. ಆದುದರಿಂದ ನಿನ್ನ ಮಾತನ್ನು ನಿಯಂತ್ರಿಸಿಕೋ.

03109015a ಇಹ ದೇವಾಃ ಸದಾ ಸರ್ವೇ ಯಜ್ಞಾನಾಜಹ್ರುರುತ್ತಮಾನ್|

03109015c ತೇಷಾಮೇತಾನಿ ಲಿಂಗಾನಿ ದೃಶ್ಯಂತೇಽದ್ಯಾಪಿ ಭಾರತ||

ಇಲ್ಲಿ ಎಲ್ಲ ದೇವತೆಗಳೂ ಸದಾ ಉತ್ತಮ ಯಜ್ಞಗಳನ್ನು ಯಜಿಸುತ್ತಿದ್ದರು. ಭಾರತ! ಈಗಲೂ ಅವುಗಳ ಈ ಗುರುತುಗಳು ಕಾಣಿಸುತ್ತವೆ.

03109016a ಕುಶಾಕಾರೇವ ದೂರ್ವೇಯಂ ಸಂಸ್ತೀರ್ಣೇವ ಚ ಭೂರಿಯಂ|

03109016c ಯೂಪಪ್ರಕಾರಾ ಬಹವೋ ವೃಕ್ಷಾಶ್ಚೇಮೇ ವಿಶಾಂ ಪತೇ||

ಈ ದೂರ್ವೆಗಳು ದರ್ಬೆಗಳ ಆಕಾರಗಳಲ್ಲಿದ್ದು ನೆಲವನ್ನು ಮುಚ್ಚಿವೆ. ವಿಶಾಂಪತೇ! ಈ ಹಲವಾರು ವೃಕ್ಷಗಳು ಯೂಪಗಳಂತಿವೆ.

03109017a ದೇವಾಶ್ಚ ಋಷಯಶ್ಚೈವ ವಸಂತ್ಯದ್ಯಾಪಿ ಭಾರತ|

03109017c ತೇಷಾಂ ಸಾಯಂ ತಥಾ ಪ್ರಾತರ್ದೃಶ್ಯತೇ ಹವ್ಯವಾಹನಃ||

ಭಾರತ! ದೇವತೆಗಳು ಮತ್ತು ಋಷಿಗಳು ಇಂದೂ ಇಲ್ಲಿ ವಾಸಿಸುತ್ತಿದ್ದಾರೆ. ಸಾಯಂಕಾಲ ಮತ್ತು ಬೆಳಗಿನ ವೇಳೆಗಳಲ್ಲಿ ಅವರ ಅಗ್ನಿಯನ್ನು ನೋಡುತ್ತೇವೆ.

03109018a ಇಹಾಪ್ಲುತಾನಾಂ ಕೌಂತೇಯ ಸದ್ಯಃ ಪಾಪ್ಮಾ ವಿಹನ್ಯತೇ|

03109018c ಕುರುಶ್ರೇಷ್ಠಾಭಿಷೇಕಂ ವೈ ತಸ್ಮಾತ್ಕುರು ಸಹಾನುಜಃ||

ಕೌಂತೇಯ! ಇಲ್ಲಿ ಸ್ನಾನಮಾಡಿದವರ ಪಾಪಗಳು ತಕ್ಷಣವೇ ನಾಶಗೊಳ್ಳುತ್ತವೆ. ಕುರುಶ್ರೇಷ್ಠ! ಆದುದರಿಂದ ನಿನ್ನ ತಮ್ಮಂದಿರೊಂದಿಗೆ ಇಲ್ಲಿ ಸ್ನಾನ ಮಾಡು.

03109019a ತತೋ ನಂದಾಪ್ಲುತಾಂಗಸ್ತ್ವಂ ಕೌಶಿಕೀಮಭಿಯಾಸ್ಯಸಿ|

03109019c ವಿಶ್ವಾಮಿತ್ರೇಣ ಯತ್ರೋಗ್ರಂ ತಪಸ್ತಪ್ತಮನುತ್ತಮಂ||

ನಂದಾ ನದಿಯಲ್ಲಿ ಕೈಕಾಲುಗಳನ್ನು ತೊಳೆದು ಕೌಶಿಕೀ ನದಿಗೆ ಹೋಗೋಣ. ಅಲ್ಲಿ ವಿಶ್ವಾಮಿತ್ರನು ಉತ್ತಮ ಘೋರ ತಪಸ್ಸನ್ನು ತಪಿಸಿದ್ದನು.””

03109020 ವೈಶಂಪಾಯನ ಉವಾಚ|

03109020a ತತಸ್ತತ್ರ ಸಮಾಪ್ಲುತ್ಯ ಗಾತ್ರಾಣಿ ಸಗಣೋ ನೃಪಃ|

03109020c ಜಗಾಮ ಕೌಶಿಕೀಂ ಪುಣ್ಯಾಂ ರಮ್ಯಾಂ ಶಿವಜಲಾಂ ನದೀಂ||

ವೈಶಂಪಾಯನನು ಹೇಳಿದನು: “ಆಗ ಅಲ್ಲಿ ನೃಪನು ತನ್ನ ತಂಡದವರೊಂದಿಗೆ ಸ್ನಾನಮಾಡಿದನು. ಅನಂತರ, ಪುಣ್ಯೆ, ರಮ್ಯ, ಮಂಗಳಕರ ನೀರಿನ ಕೌಶಿಕೀ ನದಿಗೆ ಹೋದನು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ನವಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ನೂರಾಒಂಭತ್ತನೆಯ ಅಧ್ಯಾಯವು.

Related image

Comments are closed.