ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೦೫
ರಾಜಾ ಸಗರನ ಅಶ್ವಮೇಧದ ಕುದುರೆಯು ರಕ್ಷಣೆಯಲ್ಲಿರುವಾಗಲೇ ಅಂತರ್ಧಾನವಾದುದು (೧-೧೦). ಹುಡುಕಲು ಹೋದ ಸಗರ ಪುತ್ರರು ಭೂಮಿಯನ್ನು ಅಗೆದು ಪಾತಾಳಕ್ಕೆ ಹೋಗಿ ಅಲ್ಲಿ ಕಪಿಲಾಶ್ರಮದ ಬಳಿ ಮೇಯುತ್ತಿದ್ದ ಯಜ್ಞಾಶ್ವವನ್ನು ನೋಡಿದುದು (೧೧-೨೫).
03105001 ಲೋಮಶ ಉವಾಚ|
03105001a ಏತಚ್ಛೃತ್ವಾಂತರಿಕ್ಷಾಚ್ಚ ಸ ರಾಜಾ ರಾಜಸತ್ತಮ|
03105001c ಯಥೋಕ್ತಂ ತಚ್ಚಕಾರಾಥ ಶ್ರದ್ದಧದ್ಭರತರ್ಷಭ||
03105002a ಷಷ್ಟಿಃ ಪುತ್ರಸಹಸ್ರಾಣಿ ತಸ್ಯಾಪ್ರತಿಮತೇಜಸಃ|
03105002c ರುದ್ರಪ್ರಸಾದಾದ್ರಾಜರ್ಷೇಃ ಸಮಜಾಯಂತ ಪಾರ್ಥಿವ||
ಲೋಮಶನು ಹೇಳಿದನು: “ರಾಜಸತ್ತಮ! ಭರತರ್ಷಭ! ಈ ಆಕಾಶವಾಣಿಯನ್ನು ಕೇಳಿ ಆ ರಾಜನು ಹೇಳಿದಂತೆಯೇ ಶ್ರದ್ಧೆಯಿಂದ ಮಾಡಿದನು. ಪಾರ್ಥಿವ! ಹೀಗೆ ಆ ರಾಜರ್ಷಿಗೆ ರುದ್ರನ ಪ್ರಸಾದದಿಂದ ಅರವತ್ತು ಸಾವಿರ ಅಪ್ರತಿಮ ತೇಜಸ್ವಿ ಮಕ್ಕಳು ಜನಿಸಿದರು.
03105003a ತೇ ಘೋರಾಃ ಕ್ರೂರಕರ್ಮಾಣ ಆಕಾಶಪರಿಸರ್ಪಿಣಃ|
03105003c ಬಹುತ್ವಾಚ್ಚಾವಜಾನಂತಃ ಸರ್ವಾಽಲ್ಲೋಕಾನ್ಸಹಾಮರಾನ್||
ಅವರು ಘೋರರೂ, ಕ್ರೂರಕರ್ಮಿಗಳೂ, ಆಕಾಶದಲ್ಲಿ ಸರ್ಪಗಳಂತೆ ಹರಿದಾಡುವವರೂ ಆಗಿದ್ದರು. ಬಹುಸಂಖ್ಯೆಯಲ್ಲಿದ್ದ ಅವರು ಅಮರರನ್ನೂ ಸೇರಿ ಸರ್ವಲೋಕಗಳನ್ನೂ ಅಣಕಿಸಿದರು.
03105004a ತ್ರಿದಶಾಂಶ್ಚಾಪ್ಯಬಾಧಂತ ತಥಾ ಗಂಧರ್ವರಾಕ್ಷಸಾನ್|
03105004c ಸರ್ವಾಣಿ ಚೈವ ಭೂತಾನಿ ಶೂರಾಃ ಸಮರಶಾಲಿನಃ||
ಆ ಶೂರ ಸಮರಶಾಲಿಗಳು ದೇವತೆಗಳನ್ನೂ, ಗಂಧರ್ವ-ರಾಕ್ಷಸರನ್ನೂ ಮತ್ತು ಸರ್ವ ಜೀವಿಗಳನ್ನೂ ಬಾಧಿಸುತ್ತಿದ್ದರು.
03105005a ವಧ್ಯಮಾನಾಸ್ತತೋ ಲೋಕಾಃ ಸಾಗರೈರ್ಮಂದಬುದ್ಧಿಭಿಃ|
03105005c ಬ್ರಹ್ಮಾಣಂ ಶರಣಂ ಜಗ್ಮುಃ ಸಹಿತಾಃ ಸರ್ವದೈವತೈಃ||
ಈ ಮಂದಬುದ್ದಿ ಸಾಗರರಿಂದ ಲೋಕಗಳು ಧ್ವಂಸಗೊಳಿಸಲ್ಪಟ್ಟಾಗ ದೇವತೆಗಳೊಂದಿಗೆ ಎಲ್ಲರೂ ಬ್ರಹ್ಮನ ಶರಣು ಹೊಕ್ಕರು.
03105006a ತಾನುವಾಚ ಮಹಾಭಾಗಃ ಸರ್ವಲೋಕಪಿತಾಮಹಃ|
03105006c ಗಚ್ಚಧ್ವಂ ತ್ರಿದಶಾಃ ಸರ್ವೇ ಲೋಕೈಃ ಸಾರ್ಧಂ ಯಥಾಗತಂ||
ಸರ್ವಲೋಕಪಿತಾಮಹ ಮಹಾಭಾಗನು ಅವರಿಗೆ ಹೇಳಿದನು: “ದೇವತೆಗಳೇ! ಎಲ್ಲರೂ ಲೋಕಗಳೊಂದಿಗೆ ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಮರಳಿ!
03105007a ನಾತಿದೀರ್ಘೇಣ ಕಾಲೇನ ಸಾಗರಾಣಾಂ ಕ್ಷಯೋ ಮಹಾನ್|
03105007c ಭವಿಷ್ಯತಿ ಮಹಾಘೋರಃ ಸ್ವಕೃತೈಃ ಕರ್ಮಭಿಃ ಸುರಾಃ||
ಸುರರೇ! ಸ್ವಲ್ಪವೇ ಸಮಯದಲ್ಲಿ ಮಹಾ ಸಾಗರರ ಮಹಾಘೋರ ಕ್ಷಯವು ಅವರೇ ಮಾಡುವ ಕರ್ಮದಿಂದ ನಡೆಯುತ್ತದೆ.”
03105008a ಏವಮುಕ್ತಾಸ್ತತೋ ದೇವಾ ಲೋಕಾಶ್ಚ ಮನುಜೇಶ್ವರ|
03105008c ಪಿತಾಮಹಮನುಜ್ಞಾಪ್ಯ ವಿಪ್ರಜಗ್ಮುರ್ಯಥಾಗತಂ||
ಮನುಜೇಶ್ವರ! ಇದನ್ನು ಕೇಳಿ ದೇವತೆಗಳೂ ಪ್ರಜೆಗಳೂ ಪಿತಾಮಹನ ಅಪ್ಪಣೆಪಡೆದು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
03105009a ತತಃ ಕಾಲೇ ಬಹುತಿಥೇ ವ್ಯತೀತೇ ಭರತರ್ಷಭ|
03105009c ದೀಕ್ಷಿತಃ ಸಗರೋ ರಾಜಾ ಹಯಮೇಧೇನ ವೀರ್ಯವಾನ್||
03105009e ತಸ್ಯಾಶ್ವೋ ವ್ಯಚರದ್ಭೂಮಿಂ ಪುತ್ರೈಃ ಸುಪರಿರಕ್ಷಿತಃ||
03105010a ಸಮುದ್ರಂ ಸ ಸಮಾಸಾದ್ಯ ನಿಸ್ತೋಯಂ ಭೀಮದರ್ಶನಂ|
03105010c ರಕ್ಷ್ಯಮಾಣಃ ಪ್ರಯತ್ನೇನ ತತ್ರೈವಾಂತರಧೀಯತ||
ಭರತರ್ಷಭ! ಬಹಳಷ್ಟು ದಿನಗಳು ಕಳೆದ ನಂತರ ವೀರ್ಯವಾನ್ ರಾಜಾ ಸಗರನು ಅಶ್ವಮೇಧಯಾಗದ ದೀಕ್ಷೆಯನ್ನು ತೆಗೆದುಕೊಂಡನು. ಆ ಅಶ್ವವು ಪುತ್ರರ ರಕ್ಷಣೆಯಲ್ಲಿ ಭೂಮಿಯನ್ನೆಲ್ಲಾ ತಿರುಗಾಡಿತು. ಅದು ನೀರೇ ಇಲ್ಲದೆ ಭಯಂಕರವಾಗಿ ಕಾಣುತ್ತಿದ್ದ ಸಮುದ್ರವನ್ನು ಪ್ರವೇಶಿಸಿತು. ಪ್ರಯತ್ನದಿಂದ ರಕ್ಷಣೆಗೊಳಗೊಂಡಿದ್ದರೂ ಅದು ಅಲ್ಲಿಯೇ ಅಂತರ್ಧಾನವಾಯಿತು.
03105011a ತತಸ್ತೇ ಸಾಗರಾಸ್ತಾತ ಹೃತಂ ಮತ್ವಾ ಹಯೋತ್ತಮಂ|
03105011c ಆಗಮ್ಯ ಪಿತುರಾಚಖ್ಯುರದೃಶ್ಯಂ ತುರಗಂ ಹೃತಂ||
03105011e ತೇನೋಕ್ತಾ ದಿಕ್ಷು ಸರ್ವಾಸು ಸರ್ವೇ ಮಾರ್ಗತ ವಾಜಿನಂ||
ಮಗೂ! ಆಗ ಸಾಗರರು ಆ ಉತ್ತಮ ಕುದುರೆಯನ್ನು ಯಾರೋ ಅಪಹರಿಸಿದ್ದಾರೆಂದು ಯೋಚಿಸಿ ತಂದೆಯಲ್ಲಿಗೆ ಬಂದು ಕುದುರೆಯು ಕಾಣದಂತೆ ಯಾರಿಂದಲೋ ಅಪಹರಿಸಲ್ಪಟ್ಟಿದೆ ಎಂದು ತಿಳಿಸಿದರು. ದೀಕ್ಷೆಯಲ್ಲಿದ್ದ ಅವನು ಎಲ್ಲರೂ ಸೇರಿ ಎಲ್ಲ ದಿಕ್ಕುಗಳಲ್ಲಿಯೂ ಕುದುರೆಯನ್ನು ಹುಡುಕಿ ಎಂದು ಆಜ್ಞಾಪಿಸಿದನು.
03105012a ತತಸ್ತೇ ಪಿತುರಾಜ್ಞಾಯ ದಿಕ್ಷು ಸರ್ವಾಸು ತಂ ಹಯಂ|
03105012c ಅಮಾರ್ಗಂತ ಮಹಾರಾಜ ಸರ್ವಂ ಚ ಪೃಥಿವೀತಲಂ||
ಮಹಾರಾಜ! ಅನಂತರ ತಂದೆಯ ಆಜ್ಞೆಯಂತೆ ಅವರು ಭೂಮಿಯ ಮೇಲೆಲ್ಲಾ, ಎಲ್ಲ ದಿಕ್ಕುಗಳಲ್ಲಿಯೂ ಆ ಕುದುರೆಯನ್ನು ಹುಡುಕಿದರು.
03105013a ತತಸ್ತೇ ಸಾಗರಾಃ ಸರ್ವೇ ಸಮುಪೇತ್ಯ ಪರಸ್ಪರಂ|
03105013c ನಾಧ್ಯಗಚ್ಚಂತ ತುರಗಮಶ್ವಹರ್ತಾರಮೇವ ಚ||
ಅನಂತರ ಆ ಸಾಗರರೆಲ್ಲರೂ ಪರಸ್ಪರರನ್ನು ಸೇರಿದರು. ಆದರೆ ಅವರು ಕುದುರೆಯನ್ನಾಗಲೀ ಕುದುರೆಯನ್ನು ಕದ್ದವರನ್ನಾಗಲೀ ಹುಡುಕಲಿಕ್ಕಾಗಲಿಲ್ಲ.
03105014a ಆಗಮ್ಯ ಪಿತರಂ ಚೋಚುಸ್ತತಃ ಪ್ರಾಂಜಲಯೋಽಗ್ರತಃ|
03105014c ಸಸಮುದ್ರವನದ್ವೀಪಾ ಸನದೀನದಕಂದರಾ||
03105014e ಸಪರ್ವತವನೋದ್ದೇಶಾ ನಿಖಿಲೇನ ಮಹೀ ನೃಪ||
03105015a ಅಸ್ಮಾಭಿರ್ವಿಚಿತಾ ರಾಜಂ ಶಾಸನಾತ್ತವ ಪಾರ್ಥಿವ|
03105015c ನ ಚಾಶ್ವಮಧಿಗಚ್ಚಾಮೋ ನಾಶ್ವಹರ್ತಾರಮೇವ ಚ||
ತಂದೆಯ ಬಳಿ ಮರಳಿಬಂದು ಕೈಜೋಡಿಸಿ ಹೇಳಿದರು: “ನೃಪ! ರಾಜನ್! ಪಾರ್ಥಿವ! ನಿನ್ನ ಶಾಸನದಂತೆ ನಾವು ಸಮುದ್ರ, ವನ, ದ್ವೀಪಗಳನ್ನೂ, ನದೀಕಂದರಗಳನ್ನೂ, ಪರ್ವತ ವನಪ್ರದೇಶಗಳನ್ನೂ ಸೇರಿ ಇಡೀ ಭೂಮಿಯನ್ನು ಹುಡುಕಿದೆವು. ಆದರೆ ಕುದುರೆಯಾಗಲೀ ಕುದುರೆಯನ್ನು ಅಪಹರಿಸಿದವರಾಗಲೀ ದೊರೆಯಲಿಲ್ಲ.”
03105016a ಶ್ರುತ್ವಾ ತು ವಚನಂ ತೇಷಾಂ ಸ ರಾಜಾ ಕ್ರೋಧಮೂರ್ಚಿತಃ|
03105016c ಉವಾಚ ವಚನಂ ಸರ್ವಾಂಸ್ತದಾ ದೈವವಶಾನ್ನೃಪ||
ಅವರ ಆ ಮಾತುಗಳನ್ನು ಕೇಳಿ ಕ್ರೋಧಮೂರ್ಛಿತನಾದ ರಾಜನು ದೈವವಶನಾಗಿ ಅವರೆಲ್ಲರಿಗೆ ಈ ಮಾತನ್ನಾಡಿದನು:
03105017a ಅನಾಗಮಾಯ ಗಚ್ಚಧ್ವಂ ಭೂಯೋ ಮಾರ್ಗತ ವಾಜಿನಂ|
03105017c ಯಜ್ಞಿಯಂ ತಂ ವಿನಾ ಹ್ಯಶ್ವಂ ನಾಗಂತವ್ಯಂ ಹಿ ಪುತ್ರಕಾಃ||
“ಬರಬೇಡಿ! ಹೋಗಿ! ಮಕ್ಕಳೇ! ಇನ್ನೊಮ್ಮೆ ಕುದುರೆಯನ್ನು ಹುಡುಕಿ! ಯಜ್ಞದ ಕುದುರೆಯಿಲ್ಲದೇ ಹಿಂದಿರುಗಿ ಬರಬೇಡಿ!”
03105018a ಪ್ರತಿಗೃಹ್ಯ ತು ಸಂದೇಶಂ ತತಸ್ತೇ ಸಗರಾತ್ಮಜಾಃ|
03105018c ಭೂಯ ಏವ ಮಹೀಂ ಕೃತ್ಸ್ನಾಂ ವಿಚೇತುಮುಪಚಕ್ರಮುಃ||
03105019a ಅಥಾಪಶ್ಯಂತ ತೇ ವೀರಾಃ ಪೃಥಿವೀಮವದಾರಿತಾಂ|
03105019c ಸಮಾಸಾದ್ಯ ಬಿಲಂ ತಚ್ಚ ಖನಂತಃ ಸಗರಾತ್ಮಜಾಃ||
03105019e ಕುದ್ದಾಲೈರ್ಹ್ರೇಷುಕೈಶ್ಚೈವ ಸಮುದ್ರಮಖನಂಸ್ತದಾ||
ಆಗ ಆ ಸಗರಾತ್ಮಜರು ಅವನ ಸಂದೇಶವನ್ನು ಸ್ವೀಕರಿಸಿ, ಪುನಃ ಇಡೀ ಭೂಮಿಯಲ್ಲಿ ಅಲೆದಾಡಿ ಹುಡುಕಿದರು. ಅಲ್ಲಿ ಒಂದು ಬಿಲವನ್ನು ಕಂಡು ಸಗರಾತ್ಮಜರು ಆ ಸಮುದ್ರದ ತಳವನ್ನು ಹಾರೆ-ಗುದ್ದಲಿಗಳಿಂದ ಅಗೆಯತೊಡಗಿದರು.
03105020a ಸ ಖನ್ಯಮಾನಃ ಸಹಿತೈಃ ಸಾಗರೈರ್ವರುಣಾಲಯಃ|
03105020c ಅಗಚ್ಚತ್ಪರಮಾಮಾರ್ತಿಂ ದಾರ್ಯಮಾಣಃ ಸಮಂತತಃ||
ಹಾಗೆ ಸಾಗರರು ಒಟ್ಟಿಗೇ ಅಗೆಯುತ್ತಿರಲು ಸಮುದ್ರವು ಎಲ್ಲ ಕಡೆಯಿಂದಲೂ ನೋವನ್ನು ಅನುಭವಿಸಿ ಪರಮ ದುಃಖವನ್ನು ಅನುಭವಿಸಿತು.
03105021a ಅಸುರೋರಗರಕ್ಷಾಂಸಿ ಸತ್ತ್ವಾನಿ ವಿವಿಧಾನಿ ಚ|
03105021c ಆರ್ತನಾದಮಕುರ್ವಂತ ವಧ್ಯಮಾನಾನಿ ಸಾಗರೈಃ||
ಅಸುರರು, ಉರಗಗಳು, ರಾಕ್ಷಸರು ಮತ್ತು ಇತರ ವಿವಿಧ ಜೀವಿಗಳು ಸಾಗರರಿಂದ ವಧಿಸಲ್ಪಡುವಾಗ ಆರ್ತನಾದಗೈದರು.
03105022a ಚಿನ್ನಶೀರ್ಷಾ ವಿದೇಹಾಶ್ಚ ಭಿನ್ನಜಾನ್ವಸ್ಥಿಮಸ್ತಕಾಃ|
03105022c ಪ್ರಾಣಿನಃ ಸಮದೃಶ್ಯಂತ ಶತಶೋಽಥ ಸಹಸ್ರಶಃ||
ನೂರಾರು ಸಹಸ್ರಾರು ಪ್ರಾಣಿಗಳು ತಲೆಗಳನ್ನು ಕಡಿದು, ದೇಹತುಂಡಾಗಿ, ಎಲುಬು ಮತ್ತು ಬುರುಡೆಗಳು ಪುಡಿಯಾಗಿ ಬಿದ್ದಿರುವುದು ಕಂಡುಬಂದಿತು.
03105023a ಏವಂ ಹಿ ಖನತಾಂ ತೇಷಾಂ ಸಮುದ್ರಂ ಮಕರಾಲಯಂ|
03105023c ವ್ಯತೀತಃ ಸುಮಹಾನ್ಕಾಲೋ ನ ಚಾಶ್ವಃ ಸಮದೃಶ್ಯತ||
ಈ ರೀತಿ ಅವರು ಮಕರಾಲಯದವರೆಗೂ ಸಮುದ್ರವನ್ನು ಅಗೆದು ತುಂಬಾ ಸಮಯವು ಕಳೆದರೂ ಕುದುರೆಯು ಕಾಣಲಿಲ್ಲ.
03105024a ತತಃ ಪೂರ್ವೋತ್ತರೇ ದೇಶೇ ಸಮುದ್ರಸ್ಯ ಮಹೀಪತೇ|
03105024c ವಿದಾರ್ಯ ಪಾತಾಲಮಥ ಸಂಕ್ರುದ್ಧಾಃ ಸಗರಾತ್ಮಜಾಃ||
03105024e ಅಪಶ್ಯಂತ ಹಯಂ ತತ್ರ ವಿಚರಂತಂ ಮಹೀತಲೇ||
03105025a ಕಪಿಲಂ ಚ ಮಹಾತ್ಮಾನಂ ತೇಜೋರಾಶಿಮನುತ್ತಮಂ|
03105025c ತಪಸಾ ದೀಪ್ಯಮಾನಂ ತಂ ಜ್ವಾಲಾಭಿರಿವ ಪಾವಕಂ||
ಮಹೀಪತೇ! ಆಗ ಸಮುದ್ರದ ಪೂರ್ವೋತ್ತರ ಪ್ರದೇಶದಲ್ಲಿ ಸಿಟ್ಟಿಗೆದ್ದ ಸಗರನ ಮಕ್ಕಳು ಪಾತಾಳದವರೆಗೂ ಅಗೆದರು. ಅಲ್ಲಿ ನೆಲದಮೇಲೆ ಮೇಯುತ್ತಿದ್ದ ಕುದುರೆಯನ್ನು ಕಂಡರು. ಅಲ್ಲಿಯೇ ತೇಜೋರಾಶಿಯ ಮಹಾತ್ಮ ಅನುತ್ತಮ ತಪಸ್ಸಿನಿಂದ ಉರಿಯುತ್ತಿರುವ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿರುವ ಕಪಿಲನನ್ನೂ ನೋಡಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಪಂಚಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಯ ಕಥನದಲ್ಲಿ ನೂರಾಐದನೆಯ ಅಧ್ಯಾಯವು.