Aranyaka Parva: Chapter 102

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೨

ಅಗಸ್ತ್ಯನು ವಿಂಧ್ಯ ಪರ್ವತವನ್ನು ಬೆಳೆಯದಂತೆ ತಡೆದುದು (೧-೧೪). ದೇವತೆಗಳ ಬೇಡಿಕೆಯಂತೆ ಸಮುದ್ರವನ್ನು ಕುಡಿಯಲು ಅಗಸ್ತ್ಯನು ಸಮುದ್ರದ ಬಳಿ ಬಂದುದು (೧೫-೨೩).

03102001 ಯುಧಿಷ್ಠಿರ ಉವಾಚ|

03102001a ಕಿಮರ್ಥಂ ಸಹಸಾ ವಿಂಧ್ಯಃ ಪ್ರವೃದ್ಧಃ ಕ್ರೋಧಮೂರ್ಚಿತಃ|

03102001c ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾಮುನೇ||

ಯುಧಿಷ್ಠಿರನು ಹೇಳಿದನು: “ಕ್ರೋಧಮೂರ್ಛಿತ ವಿಂಧ್ಯವು ಏಕೆ ತಕ್ಷಣವೇ ಬೆಳೆಯಲು ಪ್ರಾರಂಭಿತು? ಮಹಾಮುನೇ! ಇದರ ಕುರಿತು ವಿಸ್ತಾರವಾಗಿ ತಿಳಿಯ ಬಯಸುತ್ತೇನೆ.”

03102002 ಲೋಮಶ ಉವಾಚ|

03102002a ಅದ್ರಿರಾಜಂ ಮಹಾಶೈಲಂ ಮರುಂ ಕನಕಪರ್ವತಂ|

03102002c ಉದಯಾಸ್ತಮಯೇ ಭಾನುಃ ಪ್ರದಕ್ಷಿಣಮವರ್ತತ||

ಲೋಮಶನು ಹೇಳಿದನು: “ಭಾನುವು ಉದಯವಾಗುವ ಮತ್ತು ಅಸ್ತನಾಗುವ ಸಮಯಗಳಲ್ಲಿ ಅದ್ರಿರಾಜ, ಮಹಾಶೈಲ ಕನಕಪರ್ವತ ಮೇರುವನ್ನು ಪ್ರದಕ್ಷಿಣೆ ಮಾಡುತ್ತಿದ್ದನು.

03102003a ತಂ ತು ದೃಷ್ಟ್ವಾ ತಥಾ ವಿಂಧ್ಯಃ ಶೈಲಃ ಸೂರ್ಯಮಥಾಬ್ರವೀತ್|

03102003c ಯಥಾ ಹಿ ಮೇರುರ್ಭವತಾ ನಿತ್ಯಶಃ ಪರಿಗಮ್ಯತೇ||

03102003e ಪ್ರದಕ್ಷಿಣಂ ಚ ಕ್ರಿಯತೇ ಮಾಮೇವಂ ಕುರು ಭಾಸ್ಕರ||

ಅದನ್ನು ಕಂಡ ವಿಂಧ್ಯ ಪರ್ವತನು ಸೂರ್ಯನಿಗೆ ಹೇಳಿದನು: “ಭಾಸ್ಕರ! ಹೇಗೆ ಮೇರುವನ್ನು ಪ್ರತಿದಿನ ಸುತ್ತುವರೆಯುತ್ತೀಯೋ ಹಾಗೆ ನನ್ನನ್ನೂ ಕೂಡ ಪ್ರದಕ್ಷಿಣೆ ಮಾಡು.”

03102004a ಏವಮುಕ್ತಸ್ತತಃ ಸೂರ್ಯಃ ಶೈಲೇಂದ್ರಂ ಪ್ರತ್ಯಭಾಷತ|

03102004c ನಾಹಮಾತ್ಮೇಚ್ಚಯಾ ಶೈಲ ಕರೋಮ್ಯೇನಂ ಪ್ರದಕ್ಷಿಣಂ||

03102004e ಏಷ ಮಾರ್ಗಃ ಪ್ರದಿಷ್ಟೋ ಮೇ ಯೇನೇದಂ ನಿರ್ಮಿತಂ ಜಗತ್||

ಸೂರ್ಯನು ಶೈಲೇಂದ್ರನ ಈ ಮಾತಿಗೆ ಉತ್ತರಿಸಿದನು: “ಶೈಲ! ನನ್ನ ಇಚ್ಛೆಯಿಂದ ನಾನು ಅವನಿಗೆ ಪ್ರದಕ್ಷಿಣೆ ಮಾಡುತ್ತಿಲ್ಲ. ಈ ಜಗತ್ತನ್ನು ಯಾರು ಸೃಷ್ಟಿಸಿದನೋ ಅವನೇ ನನಗೆ ಈ ಮಾರ್ಗವನ್ನು ಹಾಕಿ ಕೊಟ್ಟಿದ್ದಾನೆ.”

03102005a ಏವಮುಕ್ತಸ್ತತಃ ಕ್ರೋಧಾತ್ಪ್ರವೃದ್ಧಃ ಸಹಸಾಚಲಃ|

03102005c ಸೂರ್ಯಾಚಂದ್ರಮಸೋರ್ಮಾರ್ಗಂ ರೋದ್ಧುಮಿಚ್ಚನ್ಪರಂತಪ||

ಪರಂತಪ! ಇದನ್ನು ಕೇಳಿ ಕೋಪಗೊಂಡ ಆ ಪರ್ವತವು ತಕ್ಷಣವೇ ಬೆಳೆದು ಸೂರ್ಯ ಮತ್ತು ಚಂದ್ರರ ಮಾರ್ಗಗಳನ್ನು ತಡೆಗಟ್ಟಿದನು.

03102006a ತತೋ ದೇವಾಃ ಸಹಿತಾಃ ಸರ್ವ ಏವ|

        ಸೇಂದ್ರಾಃ ಸಮಾಗಮ್ಯ ಮಹಾದ್ರಿರಾಜಂ|

03102006c ನಿವಾರಯಾಮಾಸುರುಪಾಯತಸ್ತಂ|

        ನ ಚ ಸ್ಮ ತೇಷಾಂ ವಚನಂ ಚಕಾರ||

ಆಗ ಇಂದ್ರನೂ ಸೇರಿ ಸರ್ವ ದೇವತೆಗಳೂ ಆ ಮಹಾ ಪರ್ವತರಾಜನಲ್ಲಿಗೆ ಹೋಗಿ ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರು ಹೇಳಿದಂತೆ ಮಾಡಲು ಅವನು ನಿರಾಕರಿಸಿದನು.

03102007a ಅಥಾಭಿಜಗ್ಮುರ್ಮುನಿಮಾಶ್ರಮಸ್ಥಂ|

        ತಪಸ್ವಿನಂ ಧರ್ಮಭೃತಾಂ ವರಿಷ್ಠಂ|

03102007c ಅಗಸ್ತ್ಯಮತ್ಯದ್ಭುತವೀರ್ಯದೀಪ್ತಂ|

        ತಂ ಚಾರ್ಥಮೂಚುಃ ಸಹಿತಾಃ ಸುರಾಸ್ತೇ||

ಅನಂತರ ಆ ಸುರರು ಒಟ್ಟಿಗೇ ಆಶ್ರಮದಲ್ಲಿದ್ದ ತಪಸ್ವಿ, ಧಾರ್ಮಿಕರಲ್ಲಿಯೇ ವರಿಷ್ಠ ಮುನಿ, ಅದ್ಭುತ ವೀರ್ಯದೀಪ್ತ ಅಗಸ್ತ್ಯನಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು.

03102008 ದೇವಾ ಊಚುಃ|

03102008a ಸೂರ್ಯಾಚಂದ್ರಮಸೋರ್ಮಾರ್ಗಂ ನಕ್ಷತ್ರಾಣಾಂ ಗತಿಂ ತಥಾ|

03102008c ಶೈಲರಾಜೋ ವೃಣೋತ್ಯೇಷ ವಿಂಧ್ಯಃ ಕ್ರೋಧವಶಾನುಗಃ||

ದೇವತೆಗಳು ಹೇಳಿದರು: “ಕ್ರೋಧವಶನಾದ ಶೈಲರಾಜ ವಿಂದ್ಯನು ಸೂರ್ಯ-ಚಂದ್ರರ ಮತ್ತು ನಕ್ಷತ್ರಗಳ ಗತಿಯನ್ನು ನಿಲ್ಲಿಸಿದ್ದಾನೆ.

03102009a ತಂ ನಿವಾರಯಿತುಂ ಶಕ್ತೋ ನಾನ್ಯಃ ಕಶ್ಚಿದ್ದ್ವಿಜೋತ್ತಮ|

03102009c ಋತೇ ತ್ವಾಂ ಹಿ ಮಹಾಭಾಗ ತಸ್ಮಾದೇನಂ ನಿವಾರಯ||

ದ್ವಿಜೋತ್ತಮ! ಮಹಾಭಾಗ! ನಿನ್ನ ಹೊರತಾಗಿ ಬೇರೆ ಯಾರೂ ಅವನನ್ನು ನಿಲ್ಲಿಸಲು ಶಕ್ಯರಿಲ್ಲ. ಆದುದರಿಂದ ಇದನ್ನು ನಿಲ್ಲಿಸು.””

03102010 ಲೋಮಶ ಉವಾಚ|

03102010a ತಚ್ಛೃತ್ವಾ ವಚನಂ ವಿಪ್ರಃ ಸುರಾಣಾಂ ಶೈಲಮಭ್ಯಗಾತ್|

03102010c ಸೋಽಭಿಗಮ್ಯಾಬ್ರವೀದ್ವಿಂಧ್ಯಂ ಸದಾರಃ ಸಮುಪಸ್ಥಿತಃ||

ಲೋಮಶನು ಹೇಳಿದನು: “ಸುರರ ಆ ಮಾತುಗಳನ್ನು ಕೇಳಿದ ವಿಪ್ರನು ತನ್ನ ಪತ್ನಿಯೊಡನೆ ವಿಂಧ್ಯಪರ್ವತಕ್ಕೆ ಹೋಗಿ ಅವನಿಗೆ ಹೇಳಿದನು:

03102011a ಮಾರ್ಗಮಿಚ್ಚಾಮ್ಯಹಂ ದತ್ತಂ ಭವತಾ ಪರ್ವತೋತ್ತಮ|

03102011c ದಕ್ಷಿಣಾಮಭಿಗಂತಾಸ್ಮಿ ದಿಶಂ ಕಾರ್ಯೇಣ ಕೇನ ಚಿತ್||

“ಪರ್ವತೋತ್ತಮ! ನಿನ್ನಿಂದ ನಾನು ದಾರಿಯನ್ನು ಕೇಳುತ್ತಿದ್ದೇನೆ. ನೀಡು. ಯಾವುದೋ ಕಾರ್ಯಕ್ಕಾಗಿ ದಕ್ಷಿಣದಿಕ್ಕಿಗೆ ಹೋಗುತ್ತಿದ್ದೇನೆ.

03102012a ಯಾವದಾಗಮನಂ ಮಹ್ಯಂ ತಾವತ್ತ್ವಂ ಪ್ರತಿಪಾಲಯ|

03102012c ನಿವೃತ್ತೇ ಮಯಿ ಶೈಲೇಂದ್ರ ತತೋ ವರ್ಧಸ್ವ ಕಾಮತಃ||

03102013a ಏವಂ ಸ ಸಮಯಂ ಕೃತ್ವಾ ವಿಂಧ್ಯೇನಾಮಿತ್ರಕರ್ಶನ|

03102013c ಅದ್ಯಾಪಿ ದಕ್ಷಿಣಾದ್ದೇಶಾದ್ವಾರುಣಿರ್ನ ನಿವರ್ತತೇ||

ನಾನು ಹಿಂದಿರುಗಿ ಬರುವವರೆಗೆ ನಿನ್ನ ಎತ್ತರವನ್ನೂ ಹೀಗೆಯೇ ಇಟ್ಟಿರು. ಶೈಲೇಂದ್ರ! ನಾನು ಹಿಂದಿರುಗಿದ ನಂತರ ನಿನಗಿಷ್ಟವಾದಷ್ಟು ಬೆಳೆಯಬಹುದು!” ಹೀಗೆ ಆ ಅಮಿತ್ರಕರ್ಷಣನು ವಿಂಧ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಇದೂವರೆಗೂ ವಾರುಣಿಯು ದಕ್ಷಿಣದೇಶದಿಂದ ಹಿಂದಿರುಗಲಿಲ್ಲ!

03102014a ಏತತ್ತೇ ಸರ್ವಮಾಖ್ಯಾತಂ ಯಥಾ ವಿಂಧ್ಯೋ ನ ವರ್ಧತೇ|

03102014c ಅಗಸ್ತ್ಯಸ್ಯ ಪ್ರಭಾವೇನ ಯನ್ಮಾಂ ತ್ವಂ ಪರಿಪೃಚ್ಚಸಿ||

ನೀನು ನನ್ನನ್ನು ಕೇಳಿಕೊಂಡಂತೆ ಅಗಸ್ತ್ಯನ ಪ್ರಭಾವದಿಂದ ವಿಂಧ್ಯವು ಹೇಗೆ ಬೆಳೆಯುತ್ತಿಲ್ಲ ಎನ್ನುವುದನ್ನೆಲ್ಲವನ್ನೂ ಹೇಳಿದ್ದೇನೆ.

03102015a ಕಾಲೇಯಾಸ್ತು ಯಥಾ ರಾಜನ್ಸುರೈಃ ಸರ್ವೈರ್ನಿಷೂದಿತಾಃ|

03102015c ಅಗಸ್ತ್ಯಾದ್ವರಮಾಸಾದ್ಯ ತನ್ಮೇ ನಿಗದತಃ ಶೃಣು||

ರಾಜನ್! ಅಗಸ್ತ್ಯನಿಂದ ವರವನ್ನು ಪಡೆದು ಸುರರೆಲ್ಲರೂ ಹೇಗೆ ಕಾಲೇಯರನ್ನು ನಾಶಪಡೆಸಿದರು ಎಂದು ಹೇಳುತ್ತೇನೆ, ಕೇಳು.

03102016a ತ್ರಿದಶಾನಾಂ ವಚಃ ಶ್ರುತ್ವಾ ಮೈತ್ರಾವರುಣಿರಬ್ರವೀತ್|

03102016c ಕಿಮರ್ಥಮಭಿಯಾತಾಃ ಸ್ಥ ವರಂ ಮತ್ತಃ ಕಿಮಿಚ್ಚಥ||

03102016e ಏವಮುಕ್ತಾಸ್ತತಸ್ತೇನ ದೇವಾಸ್ತಂ ಮುನಿಮಬ್ರುವನ್||

ಮೂವತ್ತು ದೇವತೆಗಳ ಮಾತುಗಳನ್ನು ಕೇಳಿದ ಆ ಮೈತ್ರಾವರುಣಿಯು ಹೇಳಿದನು: “ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ನನ್ನಿಂದ ಏನು ವರವನ್ನು ಕೇಳುತ್ತಿದ್ದೀರಿ?” ಅವನು ಹೀಗೆ ಹೇಳಲು ದೇವತೆಗಳು ಮುನಿಗೆ ಹೇಳಿದರು:

03102017a ಏವಂ ತ್ವಯೇಚ್ಚಾಮ ಕೃತಂ ಮಹರ್ಷೇ|

        ಮಹಾರ್ಣವಂ ಪೀಯಮಾನಂ ಮಹಾತ್ಮನ್|

03102017c ತತೋ ವಧಿಷ್ಯಾಮ ಸಹಾನುಬಂಧಾನ್|

        ಕಾಲೇಯಸಂಜ್ಞಾನ್ಸುರವಿದ್ವಿಷಸ್ತಾನ್||

“ಮಹರ್ಷೇ! ಮಹಾತ್ಮನ್! ನೀನು ಸಮುದ್ರವನ್ನು ಕುಡಿಯಬೇಕು ಎಂದು ಬಯಸುತ್ತೇವೆ. ಅನಂತರ ನಾವು ಆ ಸುರದ್ವೇಷಿ ಕಾಲೇಯರನ್ನು ಅವರ ಬಾಂಧವರೊಂದಿಗೆ ವಧಿಸುತ್ತೇವೆ.”

03102018a ತ್ರಿದಶಾನಾಂ ವಚಃ ಶ್ರುತ್ವಾ ತಥೇತಿ ಮುನಿರಬ್ರವೀತ್|

03102018c ಕರಿಷ್ಯೇ ಭವತಾಂ ಕಾಮಂ ಲೋಕಾನಾಂ ಚ ಮಹತ್ಸುಖಂ||

ದೇವತೆಗಳ ಮಾತನ್ನು ಕೇಳಿ ಮುನಿಯು “ಹಾಗೆಯೇ ಆಗಲಿ! ಲೋಕಗಳ ಮಹಾ ಹಿತಕ್ಕಾಗಿ ನಿಮ್ಮ ಆಸೆಯನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.

03102019a ಏವಮುಕ್ತ್ವಾ ತತೋಽಗಚ್ಚತ್ಸಮುದ್ರಂ ಸರಿತಾಂ ಪತಿಂ|

03102019c ಋಷಿಭಿಶ್ಚ ತಪಹ್ಸಿದ್ಧೈಃ ಸಾರ್ಧಂ ದೇವೈಶ್ಚ ಸುವ್ರತಃ||

ಹೀಗೆ ಹೇಳಿದ ನಂತರ ಅವನು ಋಷಿ, ತಪಃಸಿದ್ಧ, ಸುವ್ರತರು ಮತ್ತು ದೇವತೆಗಳೊಡಗೂಡಿ ಸರಿತಾಪತಿ ಸಮುದ್ರದಬಳಿ ಹೋದನು.

03102020a ಮನುಷ್ಯೋರಗಗಂಧರ್ವಯಕ್ಷಕಿಂಪುರುಷಾಸ್ತಥಾ|

03102020c ಅನುಜಗ್ಮುರ್ಮಹಾತ್ಮಾನಂ ದ್ರಷ್ಟುಕಾಮಾಸ್ತದದ್ಭುತಂ||

ಮನಷ್ಯ-ಉರಗ-ಗಂಧರ್ವ-ಯಕ್ಷ-ಕಿಂಪುರುಷರು ಆ ಮಹಾತ್ಮನ ಅದ್ಭುತ ಕಾರ್ಯವನ್ನು ನೋಡಲು ಅಲ್ಲಿಗೆ ಬಂದು ಸೇರಿದರು.

03102021a ತತೋಽಭ್ಯಗಚ್ಚನ್ಸಹಿತಾಃ ಸಮುದ್ರಂ ಭೀಮನಿಸ್ವನಂ|

03102021c ನೃತ್ಯಂತಮಿವ ಚೋರ್ಮೀಭಿರ್ವಲ್ಗಂತಮಿವ ವಾಯುನಾ||

03102022a ಹಸಂತಮಿವ ಫೇನೌಘೈಃ ಸ್ಖಲಂತಂ ಕಂದರೇಷು ಚ|

03102022c ನಾನಾಗ್ರಾಹಸಮಾಕೀರ್ಣಂ ನಾನಾದ್ವಿಜಗಣಾಯುತಂ||

ಅವರೆಲ್ಲರೂ ಒಟ್ಟಿಗೇ ಭಯಂಕರವಾಗಿ ಭೋರ್ಗರೆಯುತ್ತಿರುವ, ಗಾಳಿಯಿಂದ ಅಲ್ಲೋಲಕಲ್ಲೋಲಗೊಂಡ ಅಲೆಗಳು ನಾಟ್ಯಮಾಡುವಂತೆ ತೋರುತ್ತಿರುವ, ನಗುತ್ತಿರುವಂತಿರುವ ನೊರೆಯ, ಒಡೆದ ಕಂದರಗಳುಳ್ಳ, ನಾನಾ ತರಹದ ಮೀನುಗಳಿಂದ ಮತ್ತು ನಾನಾ ವಿಧದ ಪಕ್ಷಿಗಣಗಳಿಂದ ಕೂಡಿದ ಸಮುದ್ರದ ಬಳಿ ಬಂದರು.

03102023a ಅಗಸ್ತ್ಯಸಹಿತಾ ದೇವಾಃ ಸಗಂಧರ್ವಮಹೋರಗಾಃ|

03102023c ಋಷಯಶ್ಚ ಮಹಾಭಾಗಾಃ ಸಮಾಸೇದುರ್ಮಹೋದಧಿಂ||

ಅಗಸ್ತ್ಯನೊಂದಿಗೆ ದೇವತೆಗಳು, ಜೊತೆಗೆ ಗಂಧರ್ವರೂ, ಮಹಾ‌ಉರುಗಗಳೂ, ಮಹಾಭಾಗ ಋಷಿಗಳೂ ಸುಮುದ್ರತೀರದಲ್ಲಿ ಬಂದು ಸೇರಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ದ್ವಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಎರಡನೆಯ ಅಧ್ಯಾಯವು.

Related image

Comments are closed.