ಆರಣ್ಯಕ ಪರ್ವ: ಕೈರಾತ ಪರ್ವ
೨೬
ವನಕ್ಕೆ ಮಾರ್ಕಂಡೇಯನ ಆಗಮನ
ಸರಸ್ವತೀ ತೀರದ ಶಾಲವನದಲ್ಲಿ ವಾಸಿಸುತ್ತಿರುವಾಗ ಯಧಿಷ್ಠಿರನನ್ನು ಕಾಣಲು ಮುನಿ ಮಾರ್ಕಂಡೇಯನು ಆಗಮಿಸಿದ್ದುದು (೧-೪). ಪಾಂಡವರನ್ನು ನೋಡಿ ಮುನಿಯು ಮುಗುಳ್ನಕ್ಕಿದುದು (೫); ಯುಧಿಷ್ಠಿರನು ಕಾರಣವನ್ನು ಕೇಳಿದುದು (೬). ಶ್ರೀರಾಮನನ್ನು ನೆನಪಿಸಿಕೊಂಡು ಮುಗುಳ್ನಕ್ಕೆನೆಂದೂ, ಬಲವಿದೆಯೆಂದು ಅಧರ್ಮದಲ್ಲಿ ನಡೆದುಕೊಳ್ಳಬಾರದೆಂದೂ ಮಾರ್ಕಂಡೇಯನು ಹೇಳಿ ಹೊರಟುಹೋದುದು (೭-೧೯).
03026001 ವೈಶಂಪಾಯನ ಉವಾಚ|
03026001a ತತ್ಕಾನನಂ ಪ್ರಾಪ್ಯ ನರೇಂದ್ರಪುತ್ರಾಃ |
ಸುಖೋಚಿತಾ ವಾಸಮುಪೇತ್ಯ ಕೃಚ್ಚ್ರಂ||
03026001c ವಿಜಹ್ರುರಿಂದ್ರಪ್ರತಿಮಾಃ ಶಿವೇಷು |
ಸರಸ್ವತೀಶಾಲವನೇಷು ತೇಷು||
ವೈಶಂಪಾಯನನು ಹೇಳಿದನು: “ಹಿಂದೆ ಸುಖಜೀವನಕ್ಕೆ ಹೊಂದಿಕೊಂಡು ಈಗ ಕಷ್ಟಕ್ಕೊಳಗಾದ ಆ ಇಂದ್ರಪ್ರತಿಮ ನರೇಂದ್ರಪುತ್ರರು ಕಾನನವನ್ನು ಸೇರಿ ಮಂಗಳಕರ ಸರಸ್ವತೀ ತೀರದ ಶಾಲವನದಲ್ಲಿ ವಾಸಿಸತೊಡಗಿದರು.
03026002a ಯತೀಂಶ್ಚ ಸರ್ವಾನ್ಸ ಮುನೀಂಶ್ಚ ರಾಜಾ |
ತಸ್ಮಿನ್ವನೇ ಮೂಲಫಲೈರುದಗ್ರೈಃ||
03026002c ದ್ವಿಜಾತಿಮುಖ್ಯಾನೃಷಭಃ ಕುರೂಣಾಂ |
ಸಂತರ್ಪಯಾಮಾಸ ಮಹಾನುಭಾವಃ||
ಆ ವನದಲ್ಲಿ ಕುರುವೃಷಭ ಮಹಾನುಭಾವ ರಾಜನು ಆರಿಸಿದ ಫಲಮೂಲಗಳಿಂದ ಸರ್ವ ಯತಿಗಳನ್ನೂ, ಮುನಿಗಳನ್ನೂ, ದ್ವಿಜಾತಿಪ್ರಮುಖ್ಯರನ್ನೂ ಸತ್ಕರಿಸಿದನು.
03026003a ಇಷ್ಟೀಶ್ಚ ಪಿತ್ರ್ಯಾಣಿ ತಥಾಗ್ರಿಯಾಣಿ |
ಮಹಾವನೇ ವಸತಾಂ ಪಾಂಡವಾನಾಂ||
03026003c ಪುರೋಹಿತಃ ಸರ್ವಸಮೃದ್ಧತೇಜಾಶ್ |
ಚಕಾರ ಧೌಮ್ಯಃ ಪಿತೃವತ್ಕುರೂಣಾಂ||
ಆ ಮಹಾವನದಲ್ಲಿ ಪಾಂಡವರು ವಾಸಿಸುತ್ತಿರುವಾಗ ಸರ್ವಸಮೃದ್ಧ ತೇಜಸ್ವಿ, ಕುರುಗಳಿಗೆ ತಂದೆಯಂತಿದ್ದ ಪುರೋಹಿತ ಧೌಮ್ಯನು ಪಿತೃಕಾರ್ಯಗಳನ್ನೂ, ಹೋಮಗಳನ್ನೂ, ಅಗ್ರಿಯಾಣಿಗಳನ್ನೂ ಮಾಡಿಸಿದನು.
03026004a ಅಪೇತ್ಯ ರಾಷ್ಟ್ರಾದ್ವಸತಾಂ ತು ತೇಷಾಂ |
ಋಷಿಃ ಪುರಾಣೋಽತಿಥಿರಾಜಗಾಮ||
03026004c ತಮಾಶ್ರಮಂ ತೀವ್ರಸಮೃದ್ಧತೇಜಾ |
ಮಾರ್ಕಂಡೇಯಃ ಶ್ರೀಮತಾಂ ಪಾಂಡವಾನಾಂ||
ಅವರು ಹೀಗೆ ರಾಷ್ಟ್ರದಿಂದ ಹೊರಗೆ ವಾಸಿಸುತ್ತಿರಲು ಶ್ರೀಮತ ಪಾಂಡವರಿಗೆ ಅತಿಥಿಯಾಗಿ ಆ ಆಶ್ರಮಕ್ಕೆ ತೀವ್ರ ಸಮೃದ್ಧ ತೇಜಸ್ವಿ ಪುರಾತನ ಋಷಿ ಮಾರ್ಕಂಡೇಯನು ಆಗಮಿಸಿದನು.
03026005a ಸ ಸರ್ವವಿದ್ದ್ರೌಪದೀಂ ಪ್ರೇಕ್ಷ್ಯ ಕೃಷ್ಣಾಂ |
ಯುಧಿಷ್ಠಿರಂ ಭೀಮಸೇನಾರ್ಜುನೌ ಚ||
03026005c ಸಂಸ್ಮೃತ್ಯ ರಾಮಂ ಮನಸಾ ಮಹಾತ್ಮಾ |
ತಪಸ್ವಿಮಧ್ಯೇಽಸ್ಮಯತಾಮಿತೌಜಾಃ||
ಆ ಸರ್ವವೇದವಿದುವು ದ್ರೌಪದಿ ಕೃಷ್ಣೆಯನ್ನು, ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರನ್ನು ನೋಡಿ ಮಹಾತ್ಮ ರಾಮನನ್ನು ಮನಸ್ಸಿನಲ್ಲಿಯೇ ನೆನೆದುಕೊಂಡು ಆ ಅಮಿತೌಜಸ ತಪಸ್ವಿಗಳ ಮಧ್ಯೆ ಮುಗುಳ್ನಕ್ಕನು.
03026006a ತಂ ಧರ್ಮರಾಜೋ ವಿಮನಾ ಇವಾಬ್ರವೀತ್ |
ಸರ್ವೇ ಹ್ರಿಯಾ ಸಂತಿ ತಪಸ್ವಿನೋಽಮೀ||
03026006c ಭವಾನಿದಂ ಕಿಂ ಸ್ಮಯತೀವ ಹೃಷ್ಟಸ್ |
ತಪಸ್ವಿನಾಂ ಪಶ್ಯತಾಂ ಮಾಮುದೀಕ್ಷ್ಯ||
ಮನಸ್ಸು ಕುಂದಿದ ಧರ್ಮರಾಜನು ಹೇಳಿದನು: “ಇಲ್ಲಿರುವ ಎಲ್ಲ ತಪಸ್ವಿಗಳೂ ನಾಚಿಕೆಯಿಂದ ಇದ್ದಾರೆ. ಇತರರ ಎದುರಿನಲ್ಲಿ, ನನ್ನನ್ನು ನೋಡುವಾಗ ಸಂತೋಷಗೊಂಡವನಂತೆ ನೀನು ಏಕೆ ಮುಗುಳ್ನಗುತ್ತಿರುವೆ?”
03026007 ಮಾರ್ಕಂಡೇಯ ಉವಾಚ|
03026007a ನ ತಾತ ಹೃಷ್ಯಾಮಿ ನ ಚ ಸ್ಮಯಾಮಿ |
ಪ್ರಹರ್ಷಜೋ ಮಾಂ ಭಜತೇ ನ ದರ್ಪಃ||
03026007c ತವಾಪದಂ ತ್ವದ್ಯ ಸಮೀಕ್ಷ್ಯ ರಾಮಂ |
ಸತ್ಯವ್ರತಂ ದಾಶರಥಿಂ ಸ್ಮರಾಮಿ||
ಮಾರ್ಕಂಡೇಯನು ಹೇಳಿದನು: “ಮಗೂ! ನಾನು ಸಂತೋಷಗೊಳ್ಳಲೂ ಇಲ್ಲ, ನಾನು ನಗುತ್ತಲೂ ಇಲ್ಲ. ನನ್ನನ್ನು ಹೊಗಳಿಕೊಳ್ಳುವುದರಿಂದ ಅಥವಾ ದರ್ಪದಿಂದ ಈ ಹರ್ಷವು ಹುಟ್ಟಲಿಲ್ಲ. ಇಂದು ನಿನ್ನ ದುಃಖವನ್ನು ಕಂಡು ನನಗೆ ಸತ್ಯವತ ಧಾಶರಥಿ ರಾಮನ ನೆನಪಾಯಿತಷ್ಟೇ.
03026008a ಸ ಚಾಪಿ ರಾಜಾ ಸಹ ಲಕ್ಷ್ಮಣೇನ |
ವನೇ ನಿವಾಸಂ ಪಿತುರೇವ ಶಾಸನಾತ್||
03026008c ಧನ್ವೀ ಚರನ್ಪಾರ್ಥ ಪುರಾ ಮಯೈವ |
ದೃಷ್ಟೋ ಗಿರೇರೃಷ್ಯಮೂಕಸ್ಯ ಸಾನೌ||
ಪಾರ್ಥ! ಹಿಂದೆ ಆ ರಾಜನೂ ಕೂಡ ಲಕ್ಷ್ಮಣನೊಂದಿಗೆ ತಂದೆಯ ಆಜ್ಞೆಯಂತೆ ವನದಲ್ಲಿ ವಾಸಿಸಿ, ಧನ್ನುಸ್ಸನ್ನು ಹಿಡಿದು ಸಂಚರಿಸಿಸುತ್ತಿರುವಾಗ ನಾನು ಅವನನ್ನು ಗಿರಿ ಋಷ್ಯಮೂಕದಲ್ಲಿ ಕಂಡಿದ್ದೆ.
03026009a ಸಹಸ್ರನೇತ್ರಪ್ರತಿಮೋ ಮಹಾತ್ಮಾ |
ಮಯಸ್ಯ ಜೇತ ನಮುಚೇಶ್ಚ ಹಂತಾ||
03026009c ಪಿತುರ್ನಿದೇಶಾದನಘಃ ಸ್ವಧರ್ಮಂ |
ವನೇ ವಾಸಂ ದಾಶರಥಿಶ್ಚಕಾರ||
ಮಯನನ್ನು ಗೆದ್ದ ಮತ್ತು ನಮೂಚಿಯನ್ನು ಸಂಹರಿಸಿದ ಸಹಸ್ರನೇತ್ರನ ಸರಿಸಾಟಿಯಾದ ಆ ಮಹಾತ್ಮ ಅನಘ ದಾಶರಥಿಯು ತಂದೆಯ ನಿರ್ದೇಶನದಂತೆ ವನವಾಸವನ್ನು ಮಾಡಿ ಸ್ವಧರ್ಮದಂತೆ ನಡೆದುಕೊಂಡನು.
03026010a ಸ ಚಾಪಿ ಶಕ್ರಸ್ಯ ಸಮಪ್ರಭಾವೋ |
ಮಹಾನುಭಾವಃ ಸಮರೇಷ್ವಜೇಯಃ||
03026010c ವಿಹಾಯ ಭೋಗಾನಚರದ್ವನೇಷು |
ನೇಶೇ ಬಲಸ್ಯೇತಿ ಚರೇದಧರ್ಮಂ||
ಪ್ರಭಾವದಲ್ಲಿ ಶಕ್ರನಿಗೆ ಸರಿಸಮನಾದ, ಸಮರದಲ್ಲಿ ಅಜೇಯನಾದ ಆ ಮಹಾನುಭಾವನೂ ಕೂಡ ಭೋಗಗಳನ್ನು ತೊರೆದು ವನದಲ್ಲಿ ಸಂಚರಿಸಿದನು. ನನ್ನಲ್ಲಿ ಬಲವಿದೆಯೆಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026011a ನೃಪಾಶ್ಚ ನಾಭಾಗಭಗೀರಥಾದಯೋ |
ಮಹೀಮಿಮಾಂ ಸಾಗರಾಂತಾಂ ವಿಜಿತ್ಯ||
03026011c ಸತ್ಯೇನ ತೇಽಪ್ಯಜಯಂಸ್ತಾತ ಲೋಕಾನ್ |
ನೇಶೇ ಬಲಸ್ಯೇತಿ ಚರೇದಧರ್ಮಂ||
ಮಗೂ! ನಾಭಾಗ, ಭಗೀರಥ ಮೊದಲಾದ ನೃಪರೂ ಕೂಡ ಸಾಗರಾಂತದವರೆಗಿನ ಈ ಭೂಮಿಯನ್ನು ಮತ್ತು ನಂತರ ಲೋಕಗಳನ್ನು ಸತ್ಯದಿಂದಲೇ ಗೆದ್ದರು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026012a ಅಲರ್ಕಮಾಹುರ್ನರವರ್ಯ ಸಂತಂ |
ಸತ್ಯವ್ರತಂ ಕಾಶಿಕರೂಷರಾಜಂ||
03026012c ವಿಹಾಯ ರಾಷ್ಟ್ರಾಣಿ ವಸೂನಿ ಚೈವ |
ನೇಶೇ ಬಲಸ್ಯೇತಿ ಚರೇದಧರ್ಮಂ||
ನರವರ್ಯ! ಸಂತ ಸತ್ಯವ್ರತ ಕಾಶಿಕರೂಷಗಳ ರಾಜನು ರಾಷ್ಟ್ರ ಮತ್ತು ಸಂಪತ್ತನ್ನು ತೊರೆದುದಕ್ಕೆ ಅಲರ್ಕನೆಂದು ಕರೆಯಲ್ಪಡುತ್ತಾನೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026013a ಧಾತ್ರಾ ವಿಧಿರ್ಯೋ ವಿಹಿತಃ ಪುರಾಣಸ್ |
ತಂ ಪೂಜಯಂತೋ ನರವರ್ಯ ಸಂತಃ||
03026013c ಸಪ್ತರ್ಷಯಃ ಪಾರ್ಥ ದಿವಿ ಪ್ರಭಾಂತಿ |
ನೇಶೇ ಬಲಸ್ಯೇತಿ ಚರೇದಧರ್ಮಂ||
ಪಾರ್ಥ! ನರವರ್ಯ! ಹಿಂದೆ ಧಾತ್ರನು ನಿಶ್ಚಯಿಸಿದ್ದ ವಿಧಿಯನ್ನು ಗೌರವಿಸಿದ ಸಂತ ಸಪ್ತ ಋಷಿಗಳು ಆಕಾಶದಲ್ಲಿ ಹೊಳೆಯುತ್ತಾರೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026014a ಮಹಾಬಲಾನ್ಪರ್ವತಕೂಟಮಾತ್ರಾನ್ |
ವಿಷಾಣಿನಃ ಪಶ್ಯ ಗಜಾನ್ನರೇಂದ್ರ||
03026014c ಸ್ಥಿತಾನ್ನಿದೇಶೇ ನರವರ್ಯ ಧಾತುರ್ |
ನೇಶೇ ಬಲಸ್ಯೇತಿ ಚರೇದಧರ್ಮಂ||
ರಾಜನ್! ಪರ್ವತ ಶಿಖರಗಳಂತೆ ಇರುವ, ಮಹಾಬಲಶಾಲಿಗಳಾಗಿದ್ದರೂ, ಧಾತ್ರುವಿನ ನಿಯಮಗಳನ್ನು ಪಾಲಿಸುವ ಆನೆಗಳನ್ನು ನೋಡು. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026015a ಸರ್ವಾಣಿ ಭೂತಾನಿ ನರೇಂದ್ರ ಪಶ್ಯ |
ಯಥಾ ಯಥಾವದ್ವಿಹಿತಂ ವಿಧಾತ್ರಾ||
03026015c ಸ್ವಯೋನಿತಸ್ತತ್ಕುರುತೇ ಪ್ರಭಾವಾನ್ |
ನೇಶೇ ಬಲಸ್ಯೇತಿ ಚರೇದಧರ್ಮಂ||
ನರೇಂದ್ರ! ಸರ್ವ ಭೂತಗಳನ್ನೂ ನೋಡು. ವಿಧಾತ್ರನು ಮಾಡಿಟ್ಟ ನಿಯಮಗಳಂತೆ ಪ್ರಭಾವಶಾಲಿಗಳಾಗಿದ್ದರೂ ಸ್ವಯಂ ನಿಯಂತ್ರಣದಿಂದ ನಡೆಯುತ್ತಿವೆ. ನನ್ನಲ್ಲಿ ಬಲವಿದೆ ಎಂದು ಅಧರ್ಮದಲ್ಲಿ ನಡೆದುಕೊಳ್ಳಬಾರದು.
03026016a ಸತ್ಯೇನ ಧರ್ಮೇಣ ಯಥಾರ್ಹವೃತ್ತ್ಯಾ |
ಹ್ರಿಯಾ ತಥಾ ಸರ್ವಭೂತಾನ್ಯತೀತ್ಯ||
03026016c ಯಶಶ್ಚ ತೇಜಶ್ಚ ತವಾಪಿ ದೀಪ್ತಂ |
ವಿಭಾವಸೋರ್ಭಾಸ್ಕರಸ್ಯೇವ ಪಾರ್ಥ||
ಪಾರ್ಥ! ಸತ್ಯದಿಂದ, ಧರ್ಮದಿಂದ, ಯಥಾರ್ಹವಾಗಿ ನಡೆದುಕೊಳ್ಳುತ್ತಾ, ವಿನಯತೆಯಿಂದ ನೀನೂ ಕೂಡ ಸರ್ವಭೂತಗಳನ್ನೂ ಮೀರಿಸಿ ಯಶದಲ್ಲಿ, ತೇಜಸ್ಸಿನಲ್ಲಿ ವಿಭಾವಸು ಭಾಸ್ಕರನಂತೆ ಬೆಳಗಬಲ್ಲೆ.
03026017a ಯಥಾಪ್ರತಿಜ್ಞಂ ಚ ಮಹಾನುಭಾವ |
ಕೃಚ್ಚ್ರಂ ವನೇ ವಾಸಮಿಮಂ ನಿರುಷ್ಯ||
03026017c ತತಃ ಶ್ರಿಯಂ ತೇಜಸಾ ಸ್ವೇನ ದೀಪ್ತಾಂ |
ಆದಾಸ್ಯಸೇ ಪಾರ್ಥಿವ ಕೌರವೇಭ್ಯಃ||
ಮಹಾನುಭಾವ! ಪ್ರತಿಜ್ಞೆ ಮಾಡಿದ್ದಂತೆ ಈ ಕಷ್ಟಕರ ವನವಾಸವನ್ನು ಸಂಪೂರ್ಣವಾಗಿ ಪೂರೈಸು. ಪಾರ್ಥಿವ! ನಿನ್ನದೇ ತೇಜಸ್ಸಿನಿಂದ ನಂತರ ನೀನು ಕೌರವರಿಂದ ಸಂಪತ್ತನ್ನು ಪಡೆಯುತ್ತೀಯೆ.””
03026018 ವೈಶಂಪಾಯನ ಉವಾಚ|
03026018a ತಮೇವಮುಕ್ತ್ವಾ ವಚನಂ ಮಹರ್ಷಿಸ್ |
ತಪಸ್ವಿಮಧ್ಯೇ ಸಹಿತಂ ಸುಹೃದ್ಭಿಃ||
03026018c ಆಮಂತ್ರ್ಯ ಧೌಮ್ಯಂ ಸಹಿತಾಂಶ್ಚ ಪಾರ್ಥಾಂಸ್ |
ತತಃ ಪ್ರತಸ್ಥೇ ದಿಶಮುತ್ತರಾಂ ಸಃ||
ವೈಶಂಪಾಯನನು ಹೇಳಿದನು: “ತಪಸ್ವಿಗಳ ಮಧ್ಯದಲ್ಲಿ ಸ್ನೇಹಿತರೊಂದಿಗಿದ್ದ ಅವನಿಗೆ ಈ ಮಾತುಗಳನ್ನು ಹೇಳಿದ ಮಹರ್ಷಿಯು ಧೌಮ್ಯ ಮತ್ತು ಪಾರ್ಥರನ್ನು ಬೀಳ್ಕೊಂಡು ಉತ್ತರ ದಿಕ್ಕಿನೆಡೆಗೆ ಹೊರಟುಹೋದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಷಡ್‌ವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತಾರನೆಯ ಅಧ್ಯಾಯವು.