ಆರಣ್ಯಕ ಪರ್ವ: ಕೈರಾತ ಪರ್ವ
೨೫
ಪಾಂಡವರು ದ್ವೈತವನವನ್ನು ಪ್ರವೇಶಿಸಿ ನೆಲೆಸಿದ್ದುದು (೧-೨೬).
03025001 ವೈಶಂಪಾಯನ ಉವಾಚ|
03025001a ತತಸ್ತೇಷು ಪ್ರಯಾತೇಷು ಕೌಂತೇಯಃ ಸತ್ಯಸಂಗರಃ|
03025001c ಅಭ್ಯಭಾಷತ ಧರ್ಮಾತ್ಮಾ ಭ್ರಾತೄನ್ಸರ್ವಾನ್ಯುಧಿಷ್ಠಿರಃ||
ವೈಶಂಪಾಯನನು ಹೇಳಿದನು: “ಅವರು ಹೊರಟುಹೋದ ನಂತರ ಸತ್ಯಸಂಗರ, ಧರ್ಮಾತ್ಮ, ಕೌಂತೇಯ ಯುಧಿಷ್ಠಿರನು ತನ್ನ ತಮ್ಮಂದಿರೆಲ್ಲರಿಗೆ ಹೇಳಿದನು:
03025002a ದ್ವಾದಶೇಮಾಃ ಸಮಾಸ್ಮಾಭಿರ್ವಸ್ತವ್ಯಂ ನಿರ್ಜನೇ ವನೇ|
03025002c ಸಮೀಕ್ಷಧ್ವಂ ಮಹಾರಣ್ಯೇ ದೇಶಂ ಬಹುಮೃಗದ್ವಿಜಂ||
03025003a ಬಹುಪುಷ್ಪಫಲಂ ರಮ್ಯಂ ಶಿವಂ ಪುಣ್ಯಜನೋಚಿತಂ|
03025003c ಯತ್ರೇಮಾಃ ಶರದಃ ಸರ್ವಾಃ ಸುಖಂ ಪ್ರತಿವಸೇಮಹಿ||
“ಈ ಹನ್ನೆರಡು ವರ್ಷಗಳು ನಾವು ನಿರ್ಜನ ವನದಲ್ಲಿ ವಾಸಿಸಬೇಕು. ಆದುದರಿಂದ ಮಹಾರಣ್ಯದಲ್ಲಿ ಬಹಳಷ್ಟು ಮೃಗಜಿಂಕೆಗಳಿರುವ, ಬಹಳ ಪುಷ್ಪಫಲಗಳಿಂದ ರಮ್ಯವಾಗಿರುವ, ಮಂಗಳಕರ, ಪುಣ್ಯಜನರು ಬರಲು ಉಚಿತವಾದ, ಆರೋಗ್ಯಕರ, ಈ ಎಲ್ಲ ವರ್ಷಗಳೂ ಸುಖಕರವಾಗಿ ವಾಸಮಾಡಬಲ್ಲ ಪ್ರದೇಶವನ್ನು ನೋಡೋಣ.”
03025004a ಏವಮುಕ್ತೇ ಪ್ರತ್ಯುವಾಚ ಧರ್ಮರಾಜಂ ಧನಂಜಯಃ|
03025004c ಗುರುವನ್ಮಾನವಗುರುಂ ಮಾನಯಿತ್ವಾ ಮನಸ್ವಿನಂ||
ಹೀಗೆ ಹೇಳಿದ ಧರ್ಮರಾಜನಿಗೆ ಧನಂಜಯನು, ಗುರುವಿಗೆ ಹೇಗೋ ಹಾಗೆ ಆ ಮನಸ್ವಿ, ಮಾನವಗುರುವನ್ನು ಗೌರವಿಸಿ ಉತ್ತರಿಸಿದನು.
03025005 ಅರ್ಜುನ ಉವಾಚ|
03025005a ಭವಾನೇವ ಮಹರ್ಷೀಣಾಂ ವೃದ್ಧಾನಾಂ ಪರ್ಯುಪಾಸಿತಾ|
03025005c ಅಜ್ಞಾತಂ ಮಾನುಷೇ ಲೋಕೇ ಭವತೋ ನಾಸ್ತಿ ಕಿಂ ಚನ||
ಅರ್ಜುನನು ಹೇಳಿದನು: “ನೀನಾದರೋ ಮಹರ್ಷಿಗಳ, ವೃದ್ಧರ ಪಾದಗಳನ್ನು ಪೂಜಿಸಿ ಕಾಲಕಳೆದವನು. ಮಾನುಷ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಏನೂ ಇಲ್ಲ.
03025006a ತ್ವಯಾ ಹ್ಯುಪಾಸಿತಾ ನಿತ್ಯಂ ಬ್ರಾಹ್ಮಣಾ ಭರತರ್ಷಭ|
03025006c ದ್ವೈಪಾಯನಪ್ರಭೃತಯೋ ನಾರದಶ್ಚ ಮಹಾತಪಾಃ||
03025007a ಯಃ ಸರ್ವಲೋಕದ್ವಾರಾಣಿ ನಿತ್ಯಂ ಸಂಚರತೇ ವಶೀ|
03025007c ದೇವಲೋಕಾದ್ಬ್ರಹ್ಮಲೋಕಂ ಗಂಧರ್ವಾಪ್ಸರಸಾಮಪಿ||
ಭರತರ್ಷಭ! ನೀನು ನಿತ್ಯವೂ ದ್ವೈಪಾಯನನೇ ಮೊದಲಾದ, ಸರ್ವಲೋಕದ್ವಾರಗಳಿಗೆ - ದೇವಲೋಕದಿಂದ ಬ್ರಹ್ಮಲೋಕ, ಮತ್ತು ಗಂಧರ್ವ-ಅಪ್ಸರ ಲೋಕಗಳಿಗೂ, ನಿತ್ಯವೂ ಸಂಚರಿಸುವ ನಾರದನನ್ನೂ ಸೇರಿ ಮಹಾತಪಸ್ವಿ ಬ್ರಾಹ್ಮಣರ ಉಪಾಸನೆಯನ್ನು ಮಾಡಿದ್ದೀಯೆ.
03025008a ಸರ್ವಾ ಗತೀರ್ವಿಜಾನಾಸಿ ಬ್ರಾಹ್ಮಣಾನಾಂ ನ ಸಂಶಯಃ|
03025008c ಪ್ರಭಾವಾಂಶ್ಚೈವ ವೇತ್ಥ ತ್ವಂ ಸರ್ವೇಷಾಮೇವ ಪಾರ್ಥಿವ||
ಬ್ರಾಹ್ಮಣರ ಸರ್ವ ಗತಿಯನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಾರ್ಥಿವ! ನೀನು ಅವರೆಲ್ಲರ ಪ್ರಭಾವಗಳನ್ನೂ ಕೂಡ ತಿಳಿದಿದ್ದೀಯೆ.
03025009a ತ್ವಮೇವ ರಾಜಂಜಾನಾಸಿ ಶ್ರೇಯಃಕಾರಣಮೇವ ಚ|
03025009c ಯತ್ರೇಚ್ಚಸಿ ಮಹಾರಾಜ ನಿವಾಸಂ ತತ್ರ ಕುರ್ಮಹೇ||
ರಾಜನ್! ಶ್ರೇಯಕಾರಣವನ್ನು ನೀನೇ ತಿಳಿದಿದ್ದೀಯೆ. ಆದುದರಿಂದ ಮಹಾರಾಜ! ನೀನು ಎಲ್ಲಿ ಬಯಸುತ್ತೀಯೋ ಅಲ್ಲಿಯೇ ನಿವಾಸವನ್ನು ಮಾಡೋಣ.
03025010a ಇದಂ ದ್ವೈತವನಂ ನಾಮ ಸರಃ ಪುಣ್ಯಜನೋಚಿತಂ|
03025010c ಬಹುಪುಷ್ಪಫಲಂ ರಮ್ಯಂ ನಾನಾದ್ವಿಜನಿಷೇವಿತಂ||
ಇದು ದ್ವೈತವನ ಎಂಬ ಹೆಸರಿನ ಪುಣ್ಯಜನರು ಬರುವ, ಬಹಳಷ್ಟು ಪುಷ್ಪಫಲಗಳಿಂದ ಕೂಡಿ ರಮ್ಯವಾದ, ನಾನಾ ಪಕ್ಷಿಗಣಗಳು ಬರುವ ಸರೋವರ.
03025011a ಅತ್ರೇಮಾ ದ್ವಾದಶ ಸಮಾ ವಿಹರೇಮೇತಿ ರೋಚಯೇ|
03025011c ಯದಿ ತೇಽನುಮತಂ ರಾಜನ್ಕಿಂ ವಾನ್ಯನ್ಮನ್ಯತೇ ಭವಾನ್||
ರಾಜನ್! ಒಂದುವೇಳೆ ನಿನಗೆ ಅನುಮತಿಯಿದ್ದರೆ ಇಲ್ಲಿಯೇ ಹನ್ನೆರಡು ವರ್ಷಗಳನ್ನು ಕಳೆಯೋಣ ಎಂದು ನನಗನ್ನಿಸುತ್ತದೆ. ಅಥವಾ ನೀನು ಬೇರೆ ಸ್ಥಳವನ್ನು ಯೋಚಿಸಿದ್ದೀಯಾ?”
03025012 ಯುಧಿಷ್ಠಿರ ಉವಾಚ|
03025012a ಮಮಾಪ್ಯೇತನ್ಮತಂ ಪಾರ್ಥ ತ್ವಯಾ ಯತ್ಸಮುದಾಹೃತಂ|
03025012c ಗಚ್ಚಾಮ ಪುಣ್ಯಂ ವಿಖ್ಯಾತಂ ಮಹದ್ದ್ವೈತವನಂ ಸರಃ||
ಯುಧಿಷ್ಠಿರನು ಹೇಳಿದನು: “ಪಾರ್ಥ! ನೀನು ಹೇಳಿದುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪುಣ್ಯವೂ ವಿಖ್ಯಾತವೂ ಆದ ಮಹಾ ದ್ವೈತವನ ಸರೋವರಕ್ಕೆ ಹೋಗೋಣ.””
03025013 ವೈಶಂಪಾಯನ ಉವಾಚ|
03025013a ತತಸ್ತೇ ಪ್ರಯಯುಃ ಸರ್ವೇ ಪಾಂಡವಾ ಧರ್ಮಚಾರಿಣಃ|
03025013c ಬ್ರಾಹ್ಮಣೈರ್ಬಹುಭಿಃ ಸಾರ್ಧಂ ಪುಣ್ಯಂ ದ್ವೈತವನಂ ಸರಃ||
ವೈಶಂಪಾಯನನು ಹೇಳಿದನು: “ಅನಂತರ ಧರ್ಮಚಾರಿ ಸರ್ವ ಪಾಂಡವರು ಬಹಳಷ್ಟು ಬ್ರಾಹ್ಮಣರೊಡನೆ ಪುಣ್ಯ ದ್ವೈತವನಕ್ಕೆ ಹೊರಟರು.
03025014a ಬ್ರಾಹ್ಮಣಾಃ ಸಾಗ್ನಿಹೋತ್ರಾಶ್ಚ ತಥೈವ ಚ ನಿರಗ್ನಯಃ|
03025014c ಸ್ವಾಧ್ಯಾಯಿನೋ ಭಿಕ್ಷವಶ್ಚ ಸಜಪಾ ವನವಾಸಿನಃ||
ಅಗ್ನಿಹೋತ್ರಗಳನ್ನು ಇಟ್ಟ ಬ್ರಾಹ್ಮಣರು, ಅಗ್ನಿಹೋತ್ರವಿಲ್ಲದವರು, ಸ್ವಾಧ್ಯಾಯಿಗಳು, ಭಿಕ್ಷುಗಳು, ಜಪಿಗಳು ಮತ್ತು ವನವಾಸಿಗಳು ಇದ್ದರು.
03025015a ಬಹವೋ ಬ್ರಾಹ್ಮಣಾಸ್ತತ್ರ ಪರಿವವ್ರುರ್ಯುಧಿಷ್ಠಿರಂ|
03025015c ತಪಸ್ವಿನಃ ಸತ್ಯಶೀಲಾಃ ಶತಶಃ ಸಂಶಿತವ್ರತಾಃ||
ಯುಧಿಷ್ಠಿರನ ಜೊತೆ ಹೋಗುತ್ತಿದ್ದವರಲ್ಲಿ ಬಹಳಷ್ಟು ನೂರು ಬ್ರಾಹ್ಮಣರು, ತಪಸ್ವಿಗಳು, ಸತ್ಯಶೀಲರು ಸಂಶಿತವ್ರತರು ಇದ್ದರು.
03025016a ತೇ ಯಾತ್ವಾ ಪಾಂಡವಾಸ್ತತ್ರ ಬಹುಭಿರ್ಬ್ರಾಹ್ಮಣೈಃ ಸಹ|
03025016c ಪುಣ್ಯಂ ದ್ವೈತವನಂ ರಮ್ಯಂ ವಿವಿಶುರ್ಭರತರ್ಷಭಾಃ||
ಹೀಗೆ ಬಹಳಷ್ಟು ಬ್ರಾಹ್ಮಣರೊಂದಿಗೆ ಪ್ರಯಾಣಮಾಡಿ ಭರತರ್ಷಭ ಪಾಂಡವರು ಪುಣ್ಯವೂ ರಮ್ಯವೂ ಆದ ದ್ವೈತವನವನ್ನು ಪ್ರವೇಶಿಸಿದರು.
03025017a ತಚ್ಶಾಲತಾಲಾಂರಮಧೂಕನೀಪ |
ಕದಂಬಸರ್ಜಾರ್ಜುನಕರ್ಣಿಕಾರೈಃ||
03025017c ತಪಾತ್ಯಯೇ ಪುಷ್ಪಧರೈರುಪೇತಂ |
ಮಹಾವನಂ ರಾಷ್ಟ್ರಪತಿರ್ದದರ್ಶ||
ಬೇಸಗೆಯ ಕೊನೆಯಾಗಿದ್ದುದರಿಂದ ರಾಷ್ಟ್ರಪತಿಯು ಆ ಮಹಾವನದಲ್ಲಿ ಹೂಗಳನ್ನು ಸುರಿಸುತ್ತಿದ್ದ ಶಾಲ, ಮಾವು, ತಾಳೆ, ಮಧೂಕ, ಕದಂಬ, ಸರ್ಜ, ಅರ್ಜುನ ಮತ್ತು ಮಲ್ಲಿಗೆಯ ಮರಗಳನ್ನು ನೋಡಿದನು.
03025018a ಮಹಾದ್ರುಮಾಣಾಂ ಶಿಖರೇಷು ತಸ್ಥುರ್ |
ಮನೋರಮಾಂ ವಾಚಮುದೀರಯಂತಃ||
03025018c ಮಯೂರದಾತ್ಯೂಹಚಕೋರಸಂಘಾಸ್ |
ತಸ್ಮಿನ್ವನೇ ಕಾನನಕೋಕಿಲಾಶ್ಚ||
ಆ ವನದ ಮಹಾದ್ರುಮಗಳ ತುದಿಯಲ್ಲಿ ಮನೋರಮ ಗಾಯನವನ್ನು ಹಾಡುತ್ತಿದ್ದ ನವಿಲುಗಳು, ಚಕೋರ ಗಣಗಳು, ಕಾನನಕೋಕಿಲಗಳು ಇದ್ದವು.
03025019a ಕರೇಣುಯೂಥೈಃ ಸಹ ಯೂಥಪಾನಾಂ |
ಮದೋತ್ಕಟಾನಾಮಚಲಪ್ರಭಾಣಾಂ||
03025019c ಮಹಾಂತಿ ಯೂಥಾನಿ ಮಹಾದ್ವಿಪಾನಾಂ |
ತಸ್ಮಿನ್ವನೇ ರಾಷ್ಟ್ರಪತಿರ್ದದರ್ಶ||
ಆ ವನದಲ್ಲಿ ರಾಷ್ಟ್ರಪತಿಯು, ಪರ್ವತಗಳಂತೆ ತೋರುತ್ತಿದ್ದ ಮದೋತ್ಕಟ ಸಲಗಗಳನ್ನೊಡಗೂಡಿದ ಅತಿ ದೊಡ್ಡ ಆನೆಯ ಹಿಂಡುಗಳನ್ನು ನೋಡಿದನು.
03025020a ಮನೋರಮಾಂ ಭೋಗವತೀಮುಪೇತ್ಯ |
ಧೃತಾತ್ಮನಾಂ ಚೀರಜಟಾಧರಾಣಾಂ||
03025020c ತಸ್ಮಿನ್ವನೇ ಧರ್ಮಭೃತಾಂ ನಿವಾಸೇ |
ದದರ್ಶ ಸಿದ್ಧರ್ಷಿಗಣಾನನೇಕಾನ್||
ಮನೋರಮೆ ಭೋಗವತಿಯನ್ನು ಸಮೀಪಿಸಿ ಆ ವನದಲ್ಲಿ ವಾಸಿಸುತ್ತಿದ್ದ ಧೃತಾತ್ಮರನ್ನೂ, ಚೀರಜಟಾಧಾರಣಿಗಳನ್ನೂ, ಅನೇಕ ಸಿದ್ಧರ್ಷಿಗಣಗಳನ್ನೂ ನೋಡಿದನು.
03025021a ತತಃ ಸ ಯಾನಾದವರುಹ್ಯ ರಾಜಾ |
ಸಭ್ರಾತೃಕಃ ಸಜನಃ ಕಾನನಂ ತತ್||
03025021c ವಿವೇಶ ಧರ್ಮಾತ್ಮವತಾಂ ವರಿಷ್ಠಸ್ |
ತ್ರಿವಿಷ್ಟಪಂ ಶಕ್ರ ಇವಾಮಿತೌಜಾಃ||
ಯಾನದಿಂದಿಳಿದು ಆ ಧರ್ಮಾತ್ಮವಂತರಲ್ಲಿಯೇ ಶ್ರೇಷ್ಠ ರಾಜನು, ಅಮಿತೌಜಸ ತ್ರಿವಿಷ್ಟಪರೊಂದಿಗೆ ಶಕ್ರನು ಹೇಗೋ ಹಾಗೆ ತಮ್ಮಂದಿರು ಮತ್ತು ತನ್ನ ಜನರ ಜೊತೆ ಆ ಕಾನನವನ್ನು ಪ್ರವೇಶಿಸಿದನು.
03025022a ತಂ ಸತ್ಯಸಂಧಂ ಸಹಿತಾಭಿಪೇತುರ್ |
ದಿದೃಕ್ಷವಶ್ಚಾರಣಸಿದ್ಧಸಂಘಾಃ||
03025022c ವನೌಕಸಶ್ಚಾಪಿ ನರೇಂದ್ರಸಿಂಹಂ |
ಮನಸ್ವಿನಂ ಸಂಪರಿವಾರ್ಯ ತಸ್ಥುಃ||
ಆ ಸತ್ಯಸಂಧ ನರೇಂದ್ರಸಿಂಹನನ್ನು ನೋಡಲು ಕುತೂಹಲದಿಂದ ಚಾರಣ ಸಿದ್ಧರ ಗಣಗಳೂ, ಇತರ ವನವಾಸಿಗಳೂ ಕೆಳಗಿಳಿದು ಆ ಮನಸ್ವಿನಿಯನ್ನು ಸುತ್ತುವರೆದು ನಿಂತರು.
03025023a ಸ ತತ್ರ ಸಿದ್ಧಾನಭಿವಾದ್ಯ ಸರ್ವಾನ್ |
ಪ್ರತ್ಯರ್ಚಿತೋ ರಾಜವದ್ದೇವವಚ್ಚ||
03025023c ವಿವೇಶ ಸರ್ವೈಃ ಸಹಿತೋ ದ್ವಿಜಾಗ್ರ್ಯೈಃ |
ಕೃತಾಂಜಲಿರ್ಧರ್ಮಭೃತಾಂ ವರಿಷ್ಠಃ||
ಅವನು ಅಲ್ಲಿ ಎಲ್ಲ ಸಿದ್ಧರಿಗೂ ಅಭಿವಂದಿಸಿದನು ಮತ್ತು ರಾಜ ಅಥವಾ ದೇವತೆಯಂತೆ ಅವರಿಂದ ಗೌರವಿಸಲ್ಪಟ್ಟನು. ಆ ಧರ್ಮಭೃತರಲ್ಲಿ ವರಿಷ್ಠನು ಸರ್ವ ದ್ವಿಜಾಗ್ರರೊಡನೆ ಅಂಜಲೀ ಬದ್ಧನಾಗಿ ಪ್ರವೇಶಿಸಿದನು.
03025024a ಸ ಪುಣ್ಯಶೀಲಃ ಪಿತೃವನ್ಮಹಾತ್ಮಾ |
ತಪಸ್ವಿಭಿರ್ಧರ್ಮಪರೈರುಪೇತ್ಯ||
03025024c ಪ್ರತ್ಯರ್ಚಿತಃ ಪುಷ್ಪಧರಸ್ಯ ಮೂಲೇ |
ಮಹಾದ್ರುಮಸ್ಯೋಪವಿವೇಶ ರಾಜಾ||
ಆ ಪುಣ್ಯಶೀಲ ಮಹಾತ್ಮನು ತಂದೆಯಂತೆ ಧರ್ಮಪರ ತಪಸ್ವಿಗಳಿಂದ ಸ್ವಾಗತಗೊಂಡನು. ನಂತರ ರಾಜನು ಹೂಗಳಿಂದ ತುಂಬಿದ್ದ ಒಂದು ಮಹಾವೃಕ್ಷದ ಬುಡದಲ್ಲಿ ಕುಳಿತುಕೊಂಡನು.
03025025a ಭೀಮಶ್ಚ ಕೃಷ್ಣಾ ಚ ಧನಂಜಯಶ್ಚ |
ಯಮೌ ಚ ತೇ ಚಾನುಚರಾ ನರೇಂದ್ರಂ||
03025025c ವಿಮುಚ್ಯ ವಾಹಾನವರುಹ್ಯ ಸರ್ವೇ |
ತತ್ರೋಪತಸ್ಥುರ್ಭರತಪ್ರಬರ್ಹಾಃ||
ಭರತಪ್ರಬರ್ಹರಾದ ಭೀಮ, ಕೃಷ್ಣಾ, ಧನಂಜಯ, ಯಮಳರು ಮತ್ತು ಆ ನರೇಂದ್ರನ ಅನುಚರರೆಲ್ಲರೂ ವಾಹನಗಳನ್ನು ಬಿಟ್ಟು ಕೆಳಗಿಳಿದು ಬಂದು ಅಲ್ಲಿ ಕುಳಿತುಕೊಂಡರು.
03025026a ಲತಾವತಾನಾವನತಃ ಸ ಪಾಂಡವೈರ್ |
ಮಹಾದ್ರುಮಃ ಪಂಚಭಿರುಗ್ರಧನ್ವಿಭಿಃ||
03025026c ಬಭೌ ನಿವಾಸೋಪಗತೈರ್ಮಹಾತ್ಮಭಿರ್ |
ಮಹಾಗಿರಿರ್ವಾರಣಯೂಥಪೈರಿವ||
ಕೆಳಗೆ ಇಳಿದಿದ್ದ ಬಳ್ಳಿಗಳನ್ನು ಹೊಂದಿದ್ದ ಆ ಮಹಾಮರವು ಅಲ್ಲಿಗೆ ವಾಸಿಸಲು ಬಂದಿರುವ ಆ ಐವರು ಮಹಾತ್ಮ ಪಾಂಡವ ಉಗ್ರಧನ್ವಿಗಳಿಂದ ಆನೆಗಳ ಹಿಂಡುಗಳನ್ನು ಹೊಂದಿದ್ದ ಮಹಾಗಿರಿಯಂತೆ ತೋರಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಪಂಚವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.