Aranyaka Parva: Chapter 22

ಆರಣ್ಯಕ ಪರ್ವ: ಕೈರಾತ ಪರ್ವ

೨೨

ಕೃಷ್ಣ-ಶಾಲ್ವರ ಮಾಯಾ ಯುದ್ಧವು ಮುಂದುವರೆದುದು (೧-೩೦).

03022001 ವಾಸುದೇವ ಉವಾಚ|

03022001a ಏವಂ ಸ ಪುರುಷವ್ಯಾಘ್ರ ಶಾಲ್ವೋ ರಾಜ್ಞಾಂ ಮಹಾರಿಪುಃ|

03022001c ಯುಧ್ಯಮಾನೋ ಮಯಾ ಸಂಖ್ಯೇ ವಿಯದಭ್ಯಾಗಮತ್ಪುನಃ||

ವಾಸುದೇವನು ಹೇಳಿದನು: “ಪುರುಷವ್ಯಾಘ್ರ! ಹೀಗೆ ಆ ಮಹಾರಿಪು ಶಾಲ್ವರಾಜನು ನನ್ನೊಡನೆ ಯುದ್ಧಮಾಡುತ್ತಿರಲು ಅವನು ಪುನಃ ಆಕಾಶವನ್ನೇರಿದನು.

03022002a ತತಃ ಶತಘ್ನೀಶ್ಚ ಮಹಾಗದಾಶ್ಚ|

         ದೀಪ್ತಾಂಶ್ಚ ಶೂಲಾನ್ಮುಸಲಾನಸೀಂಶ್ಚ||

03022002c ಚಿಕ್ಷೇಪ ರೋಷಾನ್ಮಯಿ ಮಂದಬುದ್ಧಿಃ|

         ಶಾಲ್ವೋ ಮಹಾರಾಜ ಜಯಾಭಿಕಾಂಕ್ಷೀ||

ಮಹಾರಾಜ! ಆಗ ವಿಜಯವನ್ನು ಬಯಸುತ್ತಿದ್ದ ಆ ಮಂದಬುದ್ಧಿ ಶಾಲ್ವನು ರೋಷದಿಂದ ನನ್ನ ಮೇಲೆ ಕೊಲ್ಲುವ ನೂರು ಮಹಾ ಗದೆಗಳನ್ನೂ, ಉರಿಯುತ್ತಿರುವ ಶೂಲ-ಮುಸಲ-ಖಡ್ಗಗಳನ್ನು ಎಸೆದನು.

03022003a ತಾನಾಶುಗೈರಾಪತತೋಽಹಮಾಶು|

         ನಿವಾರ್ಯ ತೂರ್ಣಂ ಖಗಮಾನ್ಖ ಏವ||

03022003c ದ್ವಿಧಾ ತ್ರಿಧಾ ಚಾಚ್ಚಿನಮಾಶು ಮುಕ್ತೈಸ್|

         ತತೋಽಂತರಿಕ್ಷೇ ನಿನದೋ ಬಭೂವ||

ಆಕಾಶದಲ್ಲಿ ಮಿಂಚಿ ಹಾರಿ ನನ್ನ ಕಡೆ ಬಂದು ಬೀಳುತ್ತಿದ್ದ ಅವುಗಳನ್ನು ವೇಗವಾಗಿ ಹೋಗುತ್ತಿದ್ದ ಶರಗಳಿಂದ ತಡೆಹಿಡಿದು ಅಂತರಿಕ್ಷದಲ್ಲಿಯೇ ಎರಡು ಮೂರು ತುಂಡುಗಳನ್ನಾಗಿ ಕತ್ತರಿಸಿದಾಗ ಆಕಾಶದಲ್ಲಿ ದೊಡ್ಡ ತುಮುಲವುಂಟಾಯಿತು.

03022004a ತತಃ ಶತಸಹಸ್ರೇಣ ಶರಾಣಾಂ ನತಪರ್ವಣಾಂ|

03022004c ದಾರುಕಂ ವಾಜಿನಶ್ಚೈವ ರಥಂ ಚ ಸಮವಾಕಿರತ್||

ಅವನು ನನ್ನ ಮೇಲೆ, ದಾರುಕ-ಕುದುರೆ-ರಥಗಳ ಮೇಲೆ ನೂರಾರು ಸಹಸ್ರಾರು ನುಣುಪಾದ ಬಾಣಗಳನ್ನು ಸುರಿಸಿ ಮುಚ್ಚಿದನು.

03022005a ತತೋ ಮಾಮಬ್ರವೀದ್ವೀರ ದಾರುಕೋ ವಿಹ್ವಲನ್ನಿವ|

03022005c ಸ್ಥಾತವ್ಯಮಿತಿ ತಿಷ್ಠಾಮಿ ಶಾಲ್ವಬಾಣಪ್ರಪೀಡಿತಃ||

ವೀರ ದಾರುಕನು ವಿಹ್ವಲನಾಗಿ ನನಗೆ ಹೇಳಿದನು: “ಶಾಲ್ವಬಾಣಗಳಿಂದ ಪೀಡಿತನಾಗಿ ನನಗೆ ಸುಧಾರಿಸಿಕೊಳ್ಳಬೇಕಾಗಿದೆ. ಸುಧಾರಿಸಿಕೊಳ್ಳುತ್ತೇನೆ.”

03022006a ಇತಿ ತಸ್ಯ ನಿಶಮ್ಯಾಹಂ ಸಾರಥೇಃ ಕರುಣಂ ವಚಃ|

03022006c ಅವೇಕ್ಷಮಾಣೋ ಯಂತಾರಮಪಶ್ಯಂ ಶರಪೀಡಿತಂ||

03022007a ನ ತಸ್ಯೋರಸಿ ನೋ ಮೂರ್ಧ್ನಿ ನ ಕಾಯೇ ನ ಭುಜದ್ವಯೇ|

03022007c ಅಂತರಂ ಪಾಂಡವಶ್ರೇಷ್ಠ ಪಶ್ಯಾಮಿ ನಹತಂ ಶರೈಃ||

ಸಾರಥಿಯ ಈ ಕರುಣಾಜನಕ ಮಾತುಗಳನ್ನು ಕೇಳಿ ನಾನು ಅವನ ಕಡೆ ನೋಡಿದೆ. ಅವನು ಶರಗಳಿಂದ ಹೊಡೆತತಿಂದುದನ್ನು ನೋಡಿದೆ. ಭರತಶ್ರೇಷ್ಠ! ಅವನ ತಲೆಯ ಮೇಲೆ, ದೇಹದ ಮೇಲೆ, ಎರಡೂ ಭುಜಗಳ ಮೇಲೆ ಶರಗಳಿಂದ ಚುಚ್ಚಲ್ಪಡದ ಭಾಗವನ್ನೇ ನಾನು ನೋಡಲಿಲ್ಲ!

03022008a ಸ ತು ಬಾಣವರೋತ್ಪೀಡಾದ್ವಿಸ್ರವತ್ಯಸೃಗುಲ್ಬಣಂ|

03022008c ಅಭಿವೃಷ್ಟೋ ಯಥಾ ಮೇಘೈರ್ಗಿರಿರ್ಗೈರಿಕಧಾತುಮಾನ್||

ಆ ಬಾಣದ ಮಳೆಯ ಆಘಾತಕ್ಕೆ ಸಿಲುಕಿದ ಅವನ ರಕ್ತವು ಧಾರಾಕಾರವಾಗಿ ಸುರಿಯುತ್ತಿರಲು ಅವನು ಮಳೆಸುರಿಯುತ್ತಿದ್ದ ಕೆಂಪು ಧಾತುವಿನ ಗುಡ್ದದಂತೆ ತೋರಿದನು.

03022009a ಅಭೀಷುಹಸ್ತಂ ತಂ ದೃಷ್ಟ್ವಾ ಸೀದಂತಂ ಸಾರಥಿಂ ರಣೇ|

03022009c ಅಸ್ತಂಭಯಂ ಮಹಾಬಾಹೋ ಶಾಲ್ವಬಾಣಪ್ರಪೀಡಿತಂ||

ನನ್ನ ಸಾರಥಿಯು ರಥದ ಗಾಳಗಳನ್ನು ಹಿಡಿದುಕೊಂಡಿದ್ದರೂ, ಎಚ್ಚರತಪ್ಪಿ ಬೀಳುವುದರಲ್ಲಿದ್ದನು. ಮಹಾಬಾಹೋ! ಆಗ ನಾನು ಶಾಲ್ವನ ಬಾಣಗಳಿಂದ ಪೀಡಿತನಾದ ಅವನನ್ನು ಹಿಡಿದು ನಿಲ್ಲಲು ಸಹಾಯಮಾಡಿದೆನು.

03022010a ಅಥ ಮಾಂ ಪುರುಷಃ ಕಶ್ಚಿದ್ದ್ವಾರಕಾನಿಲಯೋಽಬ್ರವೀತ್|

03022010c ತ್ವರಿತೋ ರಥಮಭ್ಯೇತ್ಯ ಸೌಹೃದಾದಿವ ಭಾರತ||

03022011a ಆಹುಕಸ್ಯ ವಚೋ ವೀರ ತಸ್ಯೈವ ಪರಿಚಾರಕಃ|

03022011c ವಿಷಣ್ಣಃ ಸನ್ನಕಂಠೋ ವೈ ತನ್ನಿಬೋಧ ಯುಧಿಷ್ಠಿರ||

ಭಾರತ! ಆಗ ದ್ವಾರಕೆಯಿಂದ ಬಂದಿದ್ದ ಆಹುಕನ ಗೆಳೆಯನಾಗಿದ್ದ, ವಿಷಣ್ಣನೂ ಸಂಕಟದಲ್ಲಿದ್ದವನೂ ಆದ ಒಬ್ಬ ಪುರುಷನು ಅವಸರದಲ್ಲಿ ನನ್ನ ರಥದ ಬಳಿ ಬಂದು ನನಗೆ ಅವನ ಸಂದೇಶವನ್ನು ಹೇಳಿದನು. ಯುಧಿಷ್ಠಿರ! ಅವನು ನನಗೆ ಏನು ಹೇಳಿದನೆಂದು ಕೇಳು.

03022012a ದ್ವಾರಕಾಧಿಪತಿರ್ವೀರ ಆಹ ತ್ವಾಮಾಹುಕೋ ವಚಃ|

03022012c ಕೇಶವೇಹ ವಿಜಾನೀಷ್ವ ಯತ್ತ್ವಾಂ ಪಿತೃಸಖೋಽಬ್ರವೀತ್||

“ವೀರ! ಕೇಶವ! ನಾನು ದ್ವಾರಕಾಧಿಪತಿ ಆಹುಕ ನಿನಗೆ ಈ ಮಾತನ್ನು ಹೇಳುತ್ತಿದ್ದೇನೆ. ನಿನ್ನ ತಂದೆಯ ಸಖನೆಂದು ನನ್ನನ್ನು ತಿಳಿ.

03022013a ಉಪಯಾತ್ವಾದ್ಯ ಶಾಲ್ವೇನ ದ್ವಾರಕಾಂ ವೃಷ್ಣಿನಂದನ|

03022013c ವಿಷಕ್ತೇ ತ್ವಯಿ ದುರ್ಧರ್ಷ ಹತಃ ಶೂರಸುತೋ ಬಲಾತ್||

ವೃಷ್ಣಿನಂದನ! ಇಂದು ಶಾಲ್ವನು ದ್ವಾರಕೆಯನ್ನು ಮುತ್ತಿಗೆಹಾಕಿದ್ದಾನೆ ಮತ್ತು ನಿನ್ನನ್ನು ಎದುರಿಸಿ ತಡೆಯುತ್ತಿದ್ದಾನೆ. ಅವನು ಶೂರನ ಮಗನನ್ನು ಬಲದಿಂದ ಸಂಹರಿಸಿದ್ದಾನೆ.

03022014a ತದಲಂ ಸಾಧು ಯುದ್ಧೇನ ನಿವರ್ತಸ್ವ ಜನಾರ್ದನ|

03022014c ದ್ವಾರಕಾಮೇವ ರಕ್ಷಸ್ವ ಕಾರ್ಯಮೇತನ್ಮಹತ್ತವ||

ಜನಾರ್ದನ! ನಿನ್ನ ಯುದ್ಧವು ಸಾಕು. ಹಿಂದಿರುಗು. ದ್ವಾರಕೆಯನ್ನೇ ರಕ್ಷಿಸುವುದು ನಿನ್ನ ಮಹತ್ವದ ಕರ್ತವ್ಯವಾಗಿದೆ.”

03022015a ಇತ್ಯಹಂ ತಸ್ಯ ವಚನಂ ಶ್ರುತ್ವಾ ಪರಮದುರ್ಮನಾಃ|

03022015c ನಿಶ್ಚಯಂ ನಾಧಿಗಚ್ಚಾಮಿ ಕರ್ತವ್ಯಸ್ಯೇತರಸ್ಯ ವಾ||

ಈ ಸಂದೇಶವನ್ನು ಕೇಳಿ ನಾನು ಪರಮ ದುಃಖಿತನಾದೆನು. ನನ್ನ ಕರ್ತವ್ಯವು ಏನು ಎನ್ನುವುದನ್ನು ನಿಶ್ಚಯಿಸಲು ಅಸಮರ್ಥನಾದೆನು.

03022016a ಸಾತ್ಯಕಿಂ ಬಲದೇವಂ ಚ ಪ್ರದ್ಯುಮ್ನಂ ಚ ಮಹಾರಥಂ|

03022016c ಜಗರ್ಹೇ ಮನಸಾ ವೀರ ತಚ್ಶ್ರುತ್ವಾ ವಿಪ್ರಿಯಂ ವಚಃ||

03022017a ಅಹಂ ಹಿ ದ್ವಾರಕಾಯಾಶ್ಚ ಪಿತುಶ್ಚ ಕುರುನಂದನ|

03022017c ತೇಷು ರಕ್ಷಾಂ ಸಮಾಧಾಯ ಪ್ರಯಾತಃ ಸೌಭಪಾತನೇ||

ಆ ಅಪ್ರಿಯ ಮಾತನ್ನು ಕೇಳಿ ಮನದಲ್ಲಿಯೇ ಸಾತ್ಯಕಿ, ಬಲದೇವ, ಮಹಾರಥಿ ಪ್ರದ್ಯುಮ್ನರನ್ನು ದೂರಿದೆನು. ಯಾಕೆಂದರೆ ಕುರುನಂದನ! ಸೌಭನನ್ನು ಸೋಲಿಸಲು ಹೊರಡುವಾಗ ದ್ವಾರಕೆಯ ಮತ್ತು ತಂದೆಯ ರಕ್ಷಣೆಯನ್ನು ನಾನೇ ಅವರ ಮೇಲಿರಿಸಿದ್ದೆ.

03022018a ಬಲದೇವೋ ಮಹಾಬಾಹುಃ ಕಚ್ಚಿಜ್ಜೀವತಿ ಶತ್ರುಹಾ|

03022018c ಸಾತ್ಯಕೀ ರೌಕ್ಮಿಣೇಯಶ್ಚ ಚಾರುದೇಷ್ಣಶ್ಚ ವೀರ್ಯವಾನ್|

03022018e ಸಾಂಬಪ್ರಭೃತಯಶ್ಚೈವೇತ್ಯಹಮಾಸಂ ಸುದುರ್ಮನಾಃ||

ಮಹಾಬಾಹು ಬಲದೇವ, ಶತ್ರುಹ ಸಾತ್ಯಕಿ, ರೌಕ್ಮಿಣೇಯ ವೀರವಾನ್ ಚಾರುದೇಷ್ಣ ಮತ್ತು ಸಾಂಬನ ನಾಯಕತ್ವದಲ್ಲಿರುವ ಇತರರು ಜೀವದಿಂದಿರಬಹುದೇ ಎನ್ನುವ ಕೆಟ್ಟ ಯೋಚನೆಯು ನನ್ನ ಮನಸ್ಸನ್ನು ಕಾಡಿತು.

03022019a ಏತೇಷು ಹಿ ನರವ್ಯಾಘ್ರ ಜೀವತ್ಸು ನ ಕಥಂ ಚನ|

03022019c ಶಕ್ಯಃ ಶೂರಸುತೋ ಹಂತುಮಪಿ ವಜ್ರಭೃತಾ ಸ್ವಯಂ||

03022020a ಹತಃ ಶೂರಸುತೋ ವ್ಯಕ್ತಂ ವ್ಯಕ್ತಂ ತೇ ಚ ಪರಾಸವಃ|

03022020c ಬಲದೇವಮುಖಾಃ ಸರ್ವೇ ಇತಿ ಮೇ ನಿಶ್ಚಿತಾ ಮತಿಃ||

ಯಾಕೆಂದರೆ ಈ ನರವ್ಯಾಘ್ರರು ಜೀವಂತವಿರುವಾಗಲೇ ಎಂದೂ ಶೂರಸುತನನ್ನು ಸಂಹರಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಶೂರಸುತನು ಹತನಾದುದು ನಿಶ್ವಯವೆಂದರೆ ಬಲದೇವನ ನಾಯಕತ್ವದಲ್ಲಿದ್ದ ಅವರೂ ಕೂಡ ಪರಾಭವ ಹೊಂದಿದ್ದುದು ನಿಶ್ಚಯ ಎಂದು ನಾನು ನನ್ನ ಮನಸ್ಸಿನಲ್ಲಿಯೇ ನಿರ್ಧರಿಸಿದೆನು.

03022021a ಸೋಽಹಂ ಸರ್ವವಿನಾಶಂ ತಂ ಚಿಂತಯಾನೋ ಮುಹುರ್ಮುಹುಃ|

03022021c ಸುವಿಹ್ವಲೋ ಮಹಾರಾಜ ಪುನಃ ಶಾಲ್ವಮಯೋಧಯಂ||

ಮಹಾರಾಜ! ಪುನಃ ಪುನಃ ಅವರ ಸರ್ವವಿನಾಶವಾದುದರ ಕುರಿತು ಚಿಂತಿಸಿದೆನು. ಆಗ ತುಂಬಾ ವಿಹ್ವಲನಾಗಿ ಪುನಃ ಶಾಲ್ವನೊಂದಿಗೆ ಯುದ್ಧಮಾಡಿದೆನು.

03022022a ತತೋಽಪಶ್ಯಂ ಮಹಾರಾಜ ಪ್ರಪತಂತಮಹಂ ತದಾ|

03022022c ಸೌಭಾಚ್ಛೂರಸುತಂ ವೀರ ತತೋ ಮಾಂ ಮೋಹ ಆವಿಶತ್||

03022023a ತಸ್ಯ ರೂಪಂ ಪ್ರಪತತಃ ಪಿತುರ್ಮಮ ನರಾಧಿಪ|

03022023c ಯಯಾತೇಃ ಕ್ಷೀಣಪುಣ್ಯಸ್ಯ ಸ್ವರ್ಗಾದಿವ ಮಹೀತಲಂ||

ಮಹಾರಾಜ! ಆಗ ನಾನು ಸೌಭದಿಂದ ವೀರ ಶೂರಸುತನು (ವಸುದೇವನು) ಬೀಳುತ್ತಿರುವುದನ್ನು ನೋಡಿದೆನು. ನರಾಧಿಪ! ತನ್ನ ಪುಣ್ಯವನ್ನು ಕಳೆದುಕೊಂಡು ಸ್ವರ್ಗದಿಂದ ಭೂಮಿಯ ಕಡೆಗೆ ಬೀಳುತ್ತಿದ್ದ ಯಯಾತಿಯಂತೆ ನನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ನೋಡಿ ನನಗೆ ಮೂರ್ಛೆ ಆವರಿಸಿತು.

03022024a ವಿಶೀರ್ಣಗಲಿತೋಷ್ಣೀಷಃ ಪ್ರಕೀರ್ಣಾಂಬರಮೂರ್ಧಜಃ|

03022024c ಪ್ರಪತಂದೃಶ್ಯತೇ ಹ ಸ್ಮ ಕ್ಷೀಣಪುಣ್ಯ ಇವ ಗ್ರಹಃ||

ಅವನ ಮುಂಡಾಸು ಹೊರಬಿದ್ದಿತ್ತು, ಅವನ ವಸ್ತ್ರಗಳು ಚೆಲ್ಲಪಿಲ್ಲಿಯಾಗಿದ್ದವು, ಮತ್ತು ಅವನ ತಲೆಕೂದಲು ಕೆದರಿತ್ತು. ಪುಣ್ಯವನ್ನು ಕಳೆದುಕೊಂಡ ಗ್ರಹವು ಬೀಳುತ್ತಿರುವಂತೆ ಅವನು ಕಂಡನು.

03022025a ತತಃ ಶಾಙ್ರಂ ಧನುಃಶ್ರೇಷ್ಠಂ ಕರಾತ್ಪ್ರಪತಿತಂ ಮಮ|

03022025c ಮೋಹಾತ್ಸನ್ನಶ್ಚ ಕೌಂತೇಯ ರಥೋಪಸ್ಥ ಉಪಾವಿಶಂ||

ಕೌಂತೇಯ! ಆಗ ನನ್ನ ಶ್ರೇಷ್ಠ ಧನುಸ್ಸು ಶಾಙ್ರವು ಕೈಯಿಂದ ಬಿದ್ದಿತು ಮತ್ತು ದುಃಖ ಉಕ್ಕಿಬಂದು ನಾನು ರಥದಲ್ಲಿಯೇ ಕುಸಿದು ಬಿದ್ದೆನು.

03022026a ತತೋ ಹಾಹಾಕೃತಂ ಸರ್ವಂ ಸೈನ್ಯಂ ಮೇ ಗತಚೇತನಂ|

03022026c ಮಾಂ ದೃಷ್ಟ್ವಾ ರಥನೀಡಸ್ಥಂ ಗತಾಸುಮಿವ ಭಾರತ||

ಭಾರತ! ನಾನು ಎಚ್ಚರ ತಪ್ಪಿ ಜೀವಕಳೆದುಕೊಂಡವನಂತೆ ರಥದಲ್ಲಿ ಕುಸಿದುದನ್ನು ನೋಡಿ ನನ್ನ ಸರ್ವ ಸೈನ್ಯವೂ ಹಾಹಾಕಾರಮಾಡಿತು.

03022027a ಪ್ರಸಾರ್ಯ ಬಾಹೂ ಪತತಃ ಪ್ರಸಾರ್ಯ ಚರಣಾವಪಿ|

03022027c ರೂಪಂ ಪಿತುರಪಶ್ಯಂ ತಚ್ಛಕುನೇಃ ಪತತೋ ಯಥಾ||

03022028a ತಂ ಪತಂತಂ ಮಹಾಬಾಹೋ ಶೂಲಪಟ್ಟಿಶಪಾಣಯಃ|

03022028c ಅಭಿಘ್ನಂತೋ ಭೃಶಂ ವೀರಾ ಮಮ ಚೇತೋ ವ್ಯಕಂಪಯನ್||

ಪಕ್ಷಿಯು ಬೀಳುವಂತೆ ಕೈಕಾಲುಗಳನ್ನು ಬೀಸಿ ನನ್ನ ತಂದೆಯು ಬೀಳುತ್ತಿರುವ ದೃಶ್ಯವನ್ನು ನೋಡಿದೆ. ಮಹಾಬಾಹೋ! ವೀರ! ಅವನು ಬೀಳುತ್ತಿರುವಾಗ ಶೂಲ-ಪಟ್ಟಿಶಗಳನ್ನು ಹಿಡಿದು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ನನ್ನ ಚೇತನವು ಕಂಪಿಸಿತು.

03022029a ತತೋ ಮುಹೂರ್ತಾತ್ಪ್ರತಿಲಭ್ಯ ಸಂಜ್ಞಾಂ|

         ಅಹಂ ತದಾ ವೀರ ಮಹಾವಿಮರ್ದೇ||

03022029c ನ ತತ್ರ ಸೌಭಂ ನ ರಿಪುಂ ನ ಶಾಲ್ವಂ|

         ಪಶ್ಯಾಮಿ ವೃದ್ಧಂ ಪಿತರಂ ನ ಚಾಪಿ||

ಒಂದು ಕ್ಷಣ ನನ್ನ ಚೇತನವು ಗರಗರನೆ ತಿರುಗಿತು. ಆದರೆ ವೀರ! ಅದೇ ಕ್ಷಣದಲ್ಲಿ ನಾನು ಚೇತರಿಸಿಕೊಂಡೆನು. ಆಗ ನಾನು ಸೌಭವನ್ನೂ ನೋಡಲಿಲ್ಲ, ಶತ್ರುವನ್ನೂ ಕಾಣಲಿಲ್ಲ, ಶಾಲ್ವನನ್ನೂ ಕಾಣಲಿಲ್ಲ ಮತ್ತು ನನ್ನ ವೃದ್ಧ ತಂದೆಯನ್ನೂ ಕಾಣಲಿಲ್ಲ.

03022030a ತತೋ ಮಮಾಸೀನ್ಮನಸಿ ಮಾಯೇಯಮಿತಿ ನಿಶ್ಚಿತಂ|

03022030c ಪ್ರಬುದ್ಧೋಽಸ್ಮಿ ತತೋ ಭೂಯಃ ಶತಶೋ ವಿಕಿರಂ ಶರಾನ್||

ಆಗ ನನ್ನ ಮನಸ್ಸಿನಲ್ಲಿ ಇದು ಮಾಯೆ ಎಂದು ತಿಳಿದು ನಿಶ್ಚಯ ಮಾಡಿದೆನು. ಪುನಃ ಎಚ್ಚೆತ್ತು ನೂರಾರು ಶರಗಳನ್ನು ಹರಡಿಸಿದೆನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ದ್ವಾವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.

Related image

Comments are closed.