Aranyaka Parva: Chapter 21

ಆರಣ್ಯಕ ಪರ್ವ: ಕೈರಾತ ಪರ್ವ

೨೧

ಹಸ್ತಿನಾಪುರದಿಂದ ಮರಳಿದ ಕೃಷ್ಣನು ಶಾಲ್ವನನ್ನು ವಧಿಸಲು ಹೊರಟಿದುದು (೧-೧೩). ಕೃಷ್ಣ-ಶಾಲ್ವರ ಮಾಯಾ ಯುದ್ಧ (೧೪-೩೮).

03021001 ವಾಸುದೇವ ಉವಾಚ|

03021001a ಆನರ್ತನಗರಂ ಮುಕ್ತಂ ತತೋಽಹಮಗಮಂ ತದಾ|

03021001c ಮಹಾಕ್ರತೌ ರಾಜಸೂಯೇ ನಿವೃತ್ತೇ ನೃಪತೇ ತವ||

03021002a ಅಪಶ್ಯಂ ದ್ವಾರಕಾಂ ಚಾಹಂ ಮಹಾರಾಜ ಹತತ್ವಿಷಂ|

03021002c ನಿಃಸ್ವಾಧ್ಯಾಯವಷಟ್ಕಾರಾಂ ನಿರ್ಭೂಷಣವರಸ್ತ್ರಿಯಂ||

ವಾಸುದೇವನು ಹೇಳಿದನು: “ನೃಪತೇ! ಅನಾರ್ತನಗರವು ಮುಕ್ತವಾದ ನಂತರ, ನಿನ್ನ ಮಹಾಕ್ರತು ರಾಜಸೂಯದಿಂದ ನಾನು ಅಲ್ಲಿಗೆ ಹಿಂದಿರುಗಿ ಬಂದೆ. ಮಹಾರಾಜ! ಆಗ ನಾನು ಸತ್ವವನ್ನು ಕಳೆದುಕೊಂಡಿದ್ದ ದ್ವಾರಕೆಯನ್ನು, ಅದರ ಸ್ವಾಧ್ಯಾಯ ವಷಟ್ಕಾರಗಳು ನಿಂತಿರುವುದನ್ನೂ, ಆಭರಣಗಳನ್ನು ಧರಿಸದೇ ಇದ್ದ ವರಸ್ತ್ರೀಯರನ್ನೂ ನೋಡಿದೆ.

03021003a ಅನಭಿಜ್ಞೇಯರೂಪಾಣಿ ದ್ವಾರಕೋಪವನಾನಿ ಚ|

03021003c ದೃಷ್ಟ್ವಾ ಶಂಕೋಪಪನ್ನೋಽಹಮಪೃಚ್ಚಂ ಹೃದಿಕಾತ್ಮಜಂ||

ದ್ವಾರಕೆಯ ಉಪವನಗಳು ಗುರುತಿಸಲಾಗದಂತಿರುವುದನ್ನು ನೋಡಿ ಶಂಕೆಗೊಳಗಾಗಿ ನಾನು ಹೃದಿಕಾತ್ಮಜನನ್ನು (ಕೃತವರ್ಮನನ್ನು) ಕೇಳಿದೆನು:

03021004a ಅಸ್ವಸ್ಥನರನಾರೀಕಮಿದಂ ವೃಷ್ಣಿಪುರಂ ಭೃಷಂ|

03021004c ಕಿಮಿದಂ ನರಶಾರ್ದೂಲ ಶ್ರೋತುಮಿಚ್ಚಾಮಹೇ ವಯಂ||

“ವೃಷ್ಣಿಪುರದ ನರನಾರಿಯರು ತುಂಬಾ ಅಸ್ವಸ್ಥರಾಗಿರುವರಂತೆ ತೋರುತ್ತಿದ್ದಾರೆ! ನರಶಾರ್ದೂಲ! ಇದು ಏಕೆ ಎಂದು ಕೇಳಲು ಬಯಸುತ್ತೇನೆ.”

03021005a ಏವಮುಕ್ತಸ್ತು ಸ ಮಯಾ ವಿಸ್ತರೇಣೇದಮಬ್ರವೀತ್|

03021005c ರೋಧಂ ಮೋಕ್ಷಂ ಚ ಶಾಲ್ವೇನ ಹಾರ್ದಿಕ್ಯೋ ರಾಜಸತ್ತಮ||

ರಾಜಸತ್ತಮ! ನಾನು ಹೀಗೆ ಕೇಳಲು ಆ ಹಾರ್ದಿಕ್ಯನು ಶಾಲ್ವನು ಪುರವನ್ನು ಮುತ್ತಿಗೆ ಹಾಕಿದುದರ ಮತ್ತು ಅವನಿಂದ ಬಿಡುಗಡೆಹೊಂದಿದುದರ ಕುರಿತು ವಿಸ್ತಾರವಾಗಿ ಹೇಳಿದನು.

03021006a ತತೋಽಹಂ ಕೌರವಶ್ರೇಷ್ಠ ಶ್ರುತ್ವಾ ಸರ್ವಮಶೇಷತಃ|

03021006c ವಿನಾಶೇ ಶಾಲ್ವರಾಜಸ್ಯ ತದೈವಾಕರವಂ ಮತಿಂ||

ಕೌರವಶ್ರೇಷ್ಠ! ಅದೆಲ್ಲವನ್ನೂ ನಾನು ಸಂಪೂರ್ಣವಾಗಿ ಕೇಳಿ, ಶಾಲ್ವರಾಜನ ವಿನಾಶದ ಕುರಿತು ಮನಸ್ಸು ಮಾಡಿದೆನು.

03021007a ತತೋಽಹಂ ಭರತಶ್ರೇಷ್ಠ ಸಮಾಶ್ವಾಸ್ಯ ಪುರೇ ಜನಂ|

03021007c ರಾಜಾನಮಾಹುಕಂ ಚೈವ ತಥೈವಾನಕದುಂದುಭಿಂ||

03021007e ಸರ್ವವೃಷ್ಣಿಪ್ರವೀರಾಂಶ್ಚ ಹರ್ಷಯನ್ನಬ್ರುವಂ ತದಾ|

ಭರತಶ್ರೇಷ್ಠ! ಅನಂತರ ನಾನು ಪುರಜನರನ್ನು ಮತ್ತು ರಾಜ ಆಹುಕನನ್ನು, ಹಾಗೆಯೇ ಅನಕದುಂದುಭಿಯನ್ನು, ಸರ್ವ ವೃಷ್ಣಿಪ್ರವೀರರನ್ನು ಸಮಾಧಾನಪಡಿಸಿ ಸಂತೋಷದಿಂದ ಹೇಳಿದೆನು:

03021008a ಅಪ್ರಮಾದಃ ಸದಾ ಕಾರ್ಯೋ ನಗರೇ ಯಾದವರ್ಷಭಾಃ||

03021008c ಶಾಲ್ವರಾಜವಿನಾಶಾಯ ಪ್ರಯಾತಂ ಮಾಂ ನಿಬೋಧತ|

03021009a ನಾಹತ್ವಾ ತಂ ನಿವರ್ತಿಷ್ಯೇ ಪುರೀಂ ದ್ವಾರವತೀಂ ಪ್ರತಿ||

“ಯಾದವರ್ಷಭರೇ! ಸದಾ ನಗರದ ರಕ್ಷಣೆಯಲ್ಲಿಯೇ ನಿರತರಾಗಿರಿ. ಶಾಲ್ವರಾಜನ ವಿನಾಶಕ್ಕಾಗಿ ನಾನು ಹೊರಡುತ್ತಿದ್ದೇನೆ. ಅವನನ್ನು ಕೊಲ್ಲದೆಯೇ ನಾನು ದ್ವಾರವತೀ ನಗರಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿಯಿರಿ.

03021009c ಸಶಾಲ್ವಂ ಸೌಭನಗರಂ ಹತ್ವಾ ದ್ರಷ್ಟಾಸ್ಮಿ ವಃ ಪುನಃ|

03021009e ತ್ರಿಸಾಮಾ ಹನ್ಯತಾಮೇಷಾ ದುಂದುಭಿಃ ಶತ್ರುಭೀಷಣೀ||

ಶಾಲ್ವನೊಂದಿಗೆ ಸೌಭನಗರವನ್ನೂ ನಾಶಪಡಿಸಿಯೇ ನಾನು ನಿಮ್ಮನ್ನು ಪುನಃ ನೋಡುತ್ತೇನೆ. ಮೂರೂ ಸಾಮಗಳಲ್ಲಿ ಶತ್ರುಭೀಷಣ ದುಂದುಭಿಯನ್ನು ಮೊಳಗಿಸಿ.”

03021010a ತೇ ಮಯಾಶ್ವಾಸಿತಾ ವೀರಾ ಯಥಾವದ್ಭರತರ್ಷಭ|

03021010c ಸರ್ವೇ ಮಾಮಬ್ರುವನ್ ಹೃಷ್ಟಾಃ ಪ್ರಯಾಹಿ ಜಹಿ ಶಾತ್ರವಾನ್||

ಭರತರ್ಷಭ! ನನ್ನಿಂದ ಯಥಾವತ್ತಾಗಿ ಆಶ್ವಾಸಿತರಾದ ಆ ವೀರರು ಎಲ್ಲರೂ ಸಂತೋಷದಿಂದ “ಹೊರಡು! ಶತ್ರುವನ್ನು ಕತ್ತರಿಸಿಹಾಕು!” ಎಂದು ನನಗೆ ಕೂಗಿ ಹೇಳಿದರು.

03021011a ತೈಃ ಪ್ರಹೃಷ್ಟಾತ್ಮಭಿರ್ವೀರೈರಾಶೀರ್ಭಿರಭಿನಂದಿತಃ|

03021011c ವಾಚಯಿತ್ವಾ ದ್ವಿಜಶ್ರೇಷ್ಠಾನ್ಪ್ರಣಮ್ಯ ಶಿರಸಾಹುಕಂ||

03021012a ಸೈನ್ಯಸುಗ್ರೀವಯುಕ್ತೇನ ರಥೇನಾನಾದಯನ್ದಿಶಃ|

03021012c ಪ್ರಧ್ಮಾಪ್ಯ ಶಂಖಪ್ರವರಂ ಪಾಂಚಜನ್ಯಮಹಂ ನೃಪ||

03021013a ಪ್ರಯಾತೋಽಸ್ಮಿ ನರವ್ಯಾಘ್ರ ಬಲೇನ ಮಹತಾ ವೃತಃ|

03021013c ಕ್ಲೈತ್ವೇನ ಚತುರಂಗೇಣ ಬಲೇನ ಜಿತಕಾಶಿನಾ||

ನೃಪ! ನರವ್ಯಾಘ್ರ! ಆ ಪ್ರಹೃಷ್ಟ ವೀರರಿಂದ ಆಶೀರ್ವಾದ ಅಭಿನಂದನೆಗಳನ್ನು ಪಡೆದು, ದ್ವಿಜಶ್ರೇಷ್ಠರು ವಾಚನಮಾಡಿದ ನಂತರ, ಆಹುಕನಿಗೆ ಶಿರಸಾ ಪ್ರಣಮಿಸಿ, ಸೈನ್ಯ-ಸುಗ್ರೀವರಿಂದ ಕೂಡಿದ ರಥವನ್ನೇರಿ, ಅದರ ಶಬ್ಧವು ದಿಕ್ಕುಗಳಲ್ಲಿ ಮೊಳಗುತ್ತಿರಲು ನನ್ನ ಶ್ರೇಷ್ಠ ಶಂಖ ಪಾಂಚಜನ್ಯವನ್ನು ಮೊಳಗಿಸುತ್ತಾ, ವಿಜಯವನ್ನೇ ಗುರಿಯನ್ನಾಗಿಟ್ಟುಕೊಂಡ, ಚತುರಂಗ ಬಲದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಹೊರಟೆನು.

03021014a ಸಮತೀತ್ಯ ಬಹೂನ್ದೇಶಾನ್ಗಿರೀಂಶ್ಚ ಬಹುಪಾದಪಾನ್|

03021014c ಸರಾಂಸಿ ಸರಿತಶ್ಚೈವ ಮಾರ್ತ್ತಿಕಾವತಮಾಸದಂ||

ಬಹಳಷ್ಟು ದೇಶಗಳನ್ನೂ, ಗಿರಿಗಳನ್ನೂ, ವನಗಳನ್ನೂ, ಸರೋವರಗಳನ್ನೂ, ಝರಿಗಳನ್ನೂ ದಾಟಿ ಮಾರ್ತ್ತಿಕಾವತವನ್ನು ತಲುಪಿದೆನು.

03021015a ತತ್ರಾಶ್ರೌಷಂ ನರವ್ಯಾಘ್ರ ಶಾಲ್ವಂ ನಗರಮಂತಿಕಾತ್|

03021015c ಪ್ರಯಾತಂ ಸೌಭಮಾಸ್ಥಾಯ ತಮಹಂ ಪೃಷ್ಠತೋಽನ್ವಯಾಂ||

ನರವ್ಯಾಘ್ರ! ಅಲ್ಲಿ ನನಗೆ ಶಾಲ್ವನು ನಗರವನ್ನು ಬಿಟ್ಟು, ಸೌಭವನ್ನೇರಿ ಹತ್ತಿರದಲ್ಲಿಯೇ ಹೋಗಿದ್ದಾನೆ ಎಂದು ತಿಳಿಯಿತು ಮತ್ತು ನಾನು ಅವನನ್ನು ಹುಡುಕಿಕೊಂಡು ಹಿಂಬಾಲಿಸಿದೆ.

03021016a ತತಃ ಸಾಗರಮಾಸಾದ್ಯ ಕುಕ್ಷೌ ತಸ್ಯ ಮಹೋರ್ಮಿಣಃ|

03021016c ಸಮುದ್ರನಾಭ್ಯಾಂ ಶಾಲ್ವೋಽಭೂತ್ಸೌಭಮಾಸ್ಥಾಯ ಶತ್ರುಹನ್||

ಶತ್ರುಹನ್! ಸಾಗರತೀರವನ್ನು ಸೇರಿ, ಸಮುದ್ರದ ಮಧ್ಯದಲ್ಲಿ ಮಹಾ ಅಲೆಗಳಿಂದ ಆವೃತ ದ್ವೀಪದಲ್ಲಿ ಸೌಭವನ್ನೇರಿ ಶಾಲ್ವನು ಇದ್ದಾನೆ ಎಂದು ತಿಳಿಯಿತು.

03021017a ಸ ಸಮಾಲೋಕ್ಯ ದೂರಾನ್ಮಾಂ ಸ್ಮಯನ್ನಿವ ಯುಧಿಷ್ಠಿರ|

03021017c ಆಹ್ವಯಾಮಾಸ ದುಷ್ಟಾತ್ಮಾ ಯುದ್ಧಾಯೈವ ಮುಹುರ್ಮುಹುಃ||

ಯುಧಿಷ್ಠಿರ! ನಾನು ಬರುತ್ತಿರುವುದನ್ನು ದೂರದಿಂದಲೇ ನೋಡಿದ ಆ ದುಷ್ಟನು ಮುಗುಳ್ನಗುತ್ತಾ ಮತ್ತೆ ಮತ್ತೆ ಯುದ್ಧಕ್ಕೆ ಆಹ್ವಾನಿಸಿದನು.

03021018a ತಸ್ಯ ಶಾಙ್ರವಿನಿರ್ಮುಕ್ತೈರ್ಬಹುಭಿರ್ಮರ್ಮಭೇದಿಭಿಃ|

03021018c ಪುರಂ ನಾಸಾದ್ಯತ ಶರೈಸ್ತತೋ ಮಾಂ ರೋಷ ಆವಿಶತ್||

ನನ್ನ ಶಾಂಙ್ರಧನುಸ್ಸಿನಿಂದ ಪ್ರಯೋಗಿಸಿದ ಬಾಣಗಳು ಅವನ ಪುರವನ್ನು ತಲುಪುವುದರೊಳಗೇ ಕತ್ತರಿಸಿ ಬೀಳಲು ನನಗೆ ಅತ್ಯಂತ ರೋಷವುಂಟಾಯಿತು.

03021019a ಸ ಚಾಪಿ ಪಾಪಪ್ರಕೃತಿರ್ದೈತೇಯಾಪಸದೋ ನೃಪ|

03021019c ಮಯ್ಯವರ್ಷತ ದುರ್ಧರ್ಷಃ ಶರಧಾರಾಃ ಸಹಸ್ರಶಃ||

03021020a ಸೈನಿಕಾನ್ಮಮ ಸೂತಂ ಚ ಹಯಾಂಶ್ಚ ಸಮವಾಕಿರತ್|

03021020c ಅಚಿಂತಯಂತಸ್ತು ಶರಾನ್ವಯಂ ಯುಧ್ಯಾಮ ಭಾರತ||

ಭಾರತ! ನೃಪ! ಆ ಪಾಪಪ್ರಕೃತಿಯ ದೈತ್ಯನು ಒಂದೇ ಸಮನೆ ನನ್ನ ಮೇಲೆ, ನನ್ನ ಸೈನಿಕರ ಮೇಲೆ, ಸೂತ ಮತ್ತು ಕುದುರೆಗಳ ಮೇಲೆ ಸಹಸ್ರಾರು ದುರ್ಧರ್ಷ ಶರಗಳ ಮಳೆಯನ್ನೇ ಸುರಿಸಿದನು. ಆ ಶರಗಳ ಕುರಿತು ಯೋಚನೆ ಮಾಡದೇ ನಾನು ಯುದ್ಧದಲ್ಲಿ ಮುಂದುವರಿದೆನು.

03021021a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ|

03021021c ಚಿಕ್ಷಿಪುಃ ಸಮರೇ ವೀರಾ ಮಯಿ ಶಾಲ್ವಪದಾನುಗಾಃ||

03021022a ತೇ ಹಯಾನ್ಮೇ ರಥಂ ಚೈವ ತದಾ ದಾರುಕಮೇವ ಚ|

03021022c ಚಾದಯಾಮಾಸುರಸುರಾ ಬಾಣೈರ್ಮರ್ಮವಿಭೇದಿಭಿಃ||

03021023a ನ ಹಯಾ ನ ರಥೋ ವೀರ ನ ಯಂತಾ ಮಮ ದಾರುಕಃ|

03021023c ಅದೃಶ್ಯಂತ ಶರೈಶ್ಚನ್ನಾಸ್ತಥಾಹಂ ಸೈನಿಕಾಶ್ಚ ಮೇ||

03021024a ತತೋಽಹಮಪಿ ಕೌರವ್ಯ ಶರಾಣಾಮಯುತಾನ್ಬಹೂನ್|

03021024c ಅಭಿಮಂತ್ರಿತಾನಾಂ ಧನುಷಾ ದಿವ್ಯೇನ ವಿಧಿನಾಕ್ಷಿಪಂ||

ಶಾಲ್ವನನ್ನು ಅನುಸರಿಸಿ ಹೋರಾಡುತ್ತಿದ್ದ ವೀರ ಅಸುರರು ನೂರಾರು ಸಾವಿರಾರು ನುಣುಪಾದ, ಮರ್ಮಭೇದಿ ಬಾಣಗಳನ್ನು ನನ್ನ ಮೇಲೆ, ನನ್ನ ಕುದುರೆಗಳ ಮೇಲೆ, ರಥದ ಮೇಲೆ ಮತ್ತು ದಾರುಕನ ಮೇಲೆ ಪ್ರಯೋಗಿಸಿದರು. ವೀರ! ನನ್ನ ಕುದುರೆಗಳಾಗಲೀ, ರಥವಾಗಲೀ, ದಾರುಕನಾಗಲೀ ಅಥವಾ ಸೈನಿಕರಾಗಲೀ ಆ ಶರಗಳ ದಟ್ಟ ಮುಸುಕಿನಲ್ಲಿ ನನಗೆ ಕಾಣುತ್ತಿರಲಿಲ್ಲ. ಕೌರವ್ಯ! ನಾನೂ ಕೂಡ ನನ್ನ ದಿವ್ಯ ಧನುಸ್ಸಿನಿಂದ ಬಹಳಷ್ಟು ರೀತಿಯ ಬಾಣಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿದೆನು.

03021025a ನ ತತ್ರ ವಿಷಯಸ್ತ್ವಾಸೀನ್ಮಮ ಸೈನ್ಯಸ್ಯ ಭಾರತ|

03021025c ಖೇ ವಿಷಕ್ತಂ ಹಿ ತತ್ಸೌಭಂ ಕ್ರೋಶಮಾತ್ರ ಇವಾಭವತ್||

ಭಾರತ! ಆದರೆ ನನಗಾಗಲೀ ನನ್ನ ಸೈನ್ಯಕ್ಕಾಗಲೀ ಗುರಿಯೇ ಇರಲಿಲ್ಲ. ಯಾಕೆಂದರೆ ಅವನು ಕ್ರೋಶಮಾತ್ರದಲ್ಲಿ ಸೌಭದಲ್ಲಿ ಆಕಾಶದಲ್ಲಿ ತಿರುಗಾಡುತ್ತಿದ್ದನು.

03021026a ತತಸ್ತೇ ಪ್ರೇಕ್ಷಕಾಃ ಸರ್ವೇ ರಂಗವಾಟ ಇವ ಸ್ಥಿತಾಃ|

03021026c ಹರ್ಷಯಾಮಾಸುರುಚ್ಚೈರ್ಮಾಂ ಸಿಂಹನಾದತಲಸ್ವನೈಃ||

ಆಗ ಅಲ್ಲಿ ಸುತ್ತುವರೆದು ನಿಂತಿದ್ದ ಪ್ರೇಕ್ಷಕರೆಲ್ಲರೂ ಹರ್ಷಿತರಾಗಿ ಸಿಂಹನಾದ ಮತ್ತು ಚಪ್ಪಾಳೆಗಳಿಂದ ನನ್ನನ್ನು ಹುರಿದುಂಬಿಸಿದರು.

03021027a ಮತ್ಕಾರ್ಮುಕವಿನಿರ್ಮುಕ್ತಾ ದಾನವಾನಾಂ ಮಹಾರಣೇ|

03021027c ಅಂಗೇಷು ರುಧಿರಾಕ್ತಾಸ್ತೇ ವಿವಿಶುಃ ಶಲಭಾ ಇವ||

ಆ ಮಹಾರಣದಲ್ಲಿ ನನ್ನ ಧನುಸ್ಸಿನಿಂದ ಹೊರಟ ಬಾಣಗಳು ರಕ್ತದಾಹಿಗಳಾದ ಕೀಟಗಳಂತೆ ಹಾರಿ ದಾನವರ ಅಂಗಗಳನ್ನು ಚುಚ್ಚಿದವು.

03021028a ತತೋ ಹಲಹಲಾಶಬ್ದಃ ಸೌಭಮಧ್ಯೇ ವ್ಯವರ್ಧತ|

03021028c ವಧ್ಯತಾಂ ವಿಶಿಖೈಸ್ತೀಕ್ಷ್ಣೈಃ ಪತತಾಂ ಚ ಮಹಾರ್ಣವೇ||

ಸೌಭದ ಮಧ್ಯದಲ್ಲಿ ಹಾಹಾಕಾರ ಶಬ್ಧವು ಹೆಚ್ಚಾಯಿತು ಮತ್ತು ತೀಕ್ಷ್ಣ ಬಾಣಗಳಿಂದ ಸತ್ತವರು ಮಹಾಸಾಗರದಲ್ಲಿ ಬಿದ್ದರು.

03021029a ತೇ ನಿಕೃತ್ತಭುಜಸ್ಕಂಧಾಃ ಕಬಂಧಾಕೃತಿದರ್ಶನಾಃ|

03021029c ನದಂತೋ ಭೈರವಾನ್ನಾದನ್ನಿಪತಂತಿ ಸ್ಮ ದಾನವಾಃ||

ಭುಜಗಳಿಂದ ಕತ್ತರಿಸಲ್ಪಟ್ಟ ಬಾಹುಗಳ ಕದಂಬಾಕೃತಿಯಲ್ಲಿ ಕಾಣುತ್ತಿದ್ದ ದಾನವರು ಭೈರವ ಕೂಗನ್ನು ಕೂಗುತ್ತಾ ಒಂದೇ ಸಮನೆ ಬೀಳುತ್ತಿದ್ದರು.

03021030a ತತೋ ಗೋಕ್ಷೀರಕುಂದೇಂದುಮೃಣಾಲರಜತಪ್ರಭಂ|

03021030c ಜಲಜಂ ಪಾಂಚಜನ್ಯಂ ವೈ ಪ್ರಾಣೇನಾಹಮಪೂರಯಂ||

ಆಗ ಗೋವಿನ ಹಾಲಿನ, ಮಲ್ಲಿಗೆಯ, ಚಂದ್ರನ, ತಾವರೆಯ ಮತ್ತು ಬೆಳ್ಳಿಯ ಪ್ರಭೆಯುಳ್ಳ ಜಲಜ ಪಾಂಚಜನ್ಯಕ್ಕೆ ನನ್ನ ಉಸಿರನ್ನು ತುಂಬಿಸಿ ಮೊಳಗಿಸಿದೆನು.

03021031a ತಾನ್ದೃಷ್ಟ್ವಾ ಪತಿತಾಂಸ್ತತ್ರ ಶಾಲ್ವಃ ಸೌಭಪತಿಸ್ತದಾ|

03021031c ಮಾಯಾಯುದ್ಧೇನ ಮಹತಾ ಯೋಧಯಾಮಾಸ ಮಾಂ ಯುಧಿ||

ರಣರಂಗದಲ್ಲಿ ಅವರು ಬೀಳುತ್ತಿರುವುದನ್ನು ನೋಡಿದ ಸೌಭಪತಿ ಶಾಲ್ವನು ನನ್ನೊಂದಿಗೆ ಮಹಾ ಮಾಯಾಯುದ್ಧವನ್ನು ಪ್ರಾರಂಭಿಸಿದನು.

03021032a ತತೋ ಹುಡಹುಡಾಃ ಪ್ರಾಸಾಃ ಶಕ್ತಿಶೂಲಪರಶ್ವಧಾಃ|

03021032c ಪಟ್ಟಿಶಾಶ್ಚ ಭುಶುಂಡ್ಯಶ್ಚ ಪ್ರಾಪತನ್ನನಿಶಂ ಮಯಿ||

ಅವನು ಒಂದೇ ಸಮನೆ ನನ್ನ ಮೇಲೆ ಹುಡಹುಡಾ, ಪ್ರಾಸ, ಶಕ್ತಿ, ಶೂಲ, ಪರಶು, ಪಟ್ಟಿಷ, ಮತ್ತು ಭುಶುಂಡಗಳನ್ನು ಎಸೆಯತೊಡಗಿದನು.

03021033a ತಾನಹಂ ಮಾಯಯೈವಾಶು ಪ್ರತಿಗೃಹ್ಯ ವ್ಯನಾಶಯಂ|

03021033c ತಸ್ಯಾಂ ಹತಾಯಾಂ ಮಾಯಾಯಾಂ ಗಿರಿಶೃಂಗೈರಯೋಧಯತ್||

ಅವುಗಳನ್ನು ನಾನು ನನ್ನದೇ ಮಾಯೆಯಿಂದ ಹಿಡಿದು ನಾಶಪಡಿಸಿದೆನು. ಅವನ ಮಾಯೆಯನ್ನು ನಾಶಪಡಿಸಿದ ನಂತರ ಅವನು ನನ್ನೊಡನೆ ಗಿರಿಶೃಂಗಗಳಿಂದ ಯುದ್ಧ ಮಾಡತೊಡಗಿದನು.

03021034a ತತೋಽಭವತ್ತಮ ಇವ ಪ್ರಭಾತಮಿವ ಚಾಭವತ್|

03021034c ದುರ್ದಿನಂ ಸುದಿನಂ ಚೈವ ಶೀತಮುಷ್ಣಂ ಚ ಭಾರತ||

ಭಾರತ! ಒಂದು ಕ್ಷಣದಲ್ಲಿ ರಾತ್ರಿಯಾಗುತ್ತಿತ್ತು, ಇನ್ನೊಂದು ಕ್ಷಣದಲ್ಲಿ ಬೆಳಗಾಗುತ್ತಿತ್ತು. ದುರ್ದಿನವಾಗುತ್ತಿತ್ತು, ಸುದಿನವೆನಿಸುತ್ತಿತ್ತು, ಛಳಿಯಾಗುತ್ತಿತ್ತು, ಮತ್ತು ಸೆಖೆಯಾಗುತ್ತಿತ್ತು.

03021035a ಏವಂ ಮಾಯಾಂ ವಿಕುರ್ವಾಣೋ ಯೋಧಯಾಮಾಸ ಮಾಂ ರಿಪುಃ|

03021035c ವಿಜ್ಞಾಯ ತದಹಂ ಸರ್ವಂ ಮಾಯಯೈವ ವ್ಯನಾಶಯಂ||

03021035e ಯಥಾಕಾಲಂ ತು ಯುದ್ಧೇನ ವ್ಯಧಮಂ ಸರ್ವತಃ ಶರೈಃ|

ಈ ರೀತಿ ಆ ಶತ್ರುವು ನನ್ನೊಡನೆ ಮಾಯೆಯಿಂದ ಮೋಸಗೊಳಿಸಿ ಯುದ್ಧಮಾಡಿದನು. ಅದನ್ನು ತಿಳಿದ ನಾನು ಸ್ವಲ್ಪ ಸಮಯದಲ್ಲಿಯೇ ಮಾಯಾಯುದ್ಧದ ಬಾಣಗಳಿಂದ ಎಲ್ಲವನ್ನೂ ಎಲ್ಲಕಡೆಯೂ ನಾಶಪಡಿಸಿದೆನು.

03021036a ತತೋ ವ್ಯೋಮ ಮಹಾರಾಜ ಶತಸೂರ್ಯಮಿವಾಭವತ್||

03021036c ಶತಚಂದ್ರಂ ಚ ಕೌಂತೇಯ ಸಹಸ್ರಾಯುತತಾರಕಂ|

ಮಹಾರಾಜ! ಕೌಂತೇಯ! ಆಕಾಶದಲ್ಲಿ ಶತಸೂರ್ಯಗಳಿರುವಂತೆ, ಶತಚಂದ್ರಗಳಿರುವಂತೆ ಮತ್ತು ಸಹಸ್ರ ನಕ್ಷತ್ರಗಳಿರುವಂತೆ ತೋರಿತು.

03021037a ತತೋ ನಾಜ್ಞಾಯತ ತದಾ ದಿವಾರಾತ್ರಂ ತಥಾ ದಿಶಃ||

03021037c ತತೋಽಹಂ ಮೋಹಮಾಪನ್ನಃ ಪ್ರಜ್ಞಾಸ್ತ್ರಂ ಸಮಯೋಜಯಂ|

03021037e ತತಸ್ತದಸ್ತ್ರಮಸ್ತ್ರೇಣ ವಿಧೂತಂ ಶರತೂಲವತ್||

ಆಗ ಹಗಲಾಗಲೀ, ರಾತ್ರಿಯಾಗಲೀ, ದಿಕ್ಕುಗಳಾಗಲೀ ಗೊತ್ತಾಗುತ್ತಿರಲಿಲ್ಲ. ಮೋಹವಾಚ್ಛಾದಿಸಿದ ನಾನು ಆಗ ಪ್ರಜ್ಞಾಸ್ತ್ರವನ್ನು ಹೂಡಿದೆನು ಮತ್ತು ಅದು ಅವನ ಅಸ್ತ್ರಗಳನ್ನು ಹತ್ತಿಯ ಎಸಳುಗಳಂತೆ ಹಾರಿಸಿತು.

03021038a ತಥಾ ತದಭವದ್ಯುದ್ಧಂ ತುಮುಲಂ ಲೋಮಹರ್ಷಣ|

03021038c ಲಬ್ಧಾಲೋಕಶ್ಚ ರಾಜೇಂದ್ರ ಪುನಃ ಶತ್ರುಮಯೋಧಯಂ||

ರಾಜೇಂದ್ರ! ಶತ್ರುವನ್ನೂ ಮತ್ತು ಇತರ ದೃಶ್ಯಗಳನ್ನೂ ಕಾಣಲು ಶಕ್ತನಾದ ನಂತರ ಪುನಃ ಮೈನವಿರೇಳಿಸುವ ತುಮುಲ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಏಕವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.