Aranyaka Parva: Chapter 20

ಆರಣ್ಯಕ ಪರ್ವ: ಕೈರಾತ ಪರ್ವ

೨೦

ಪ್ರದ್ಯುಮ್ನನು ಪುನಃ ಶತ್ರುಸೇನೆಯನ್ನು ನುಗ್ಗಿದುದು (೧-೬). ಪ್ರದ್ಯುಮ್ನ-ಶಾಲ್ವರ ನಡುವಿನ ಘೋರ ಯುದ್ಧ, ಶಾಲ್ವನನ್ನು ಮೂರ್ಛೆಗೊಳಿಸಿದುದು (೭-೧೮). ಅಶರೀರವಾಣಿ, ಶಾಲ್ವನು ಹಿಂದೆಸರಿದುದು (೧೯-೨೭).

03020001 ವಾಸುದೇವ ಉವಾಚ|

03020001a ಏವಮುಕ್ತಸ್ತು ಕೌಂತೇಯ ಸೂತಪುತ್ರಸ್ತದಾ ಮೃಧೇ|

03020001c ಪ್ರದ್ಯುಮ್ನಮಬ್ರವೀಚ್ ಶ್ಲಕ್ಷ್ಣಂ ಮಧುರಂ ವಾಕ್ಯಮಂಜಸಾ||

ವಾಸುದೇವನು ಹೇಳಿದನು: “ಕೌಂತೇಯ! ಈ ಮಾತುಗಳಿಗೆ ಸೂತಪುತ್ರನು ರಣರಂಗದಲ್ಲಿಯೇ ಪ್ರದ್ಯುಮ್ನನಿಗೆ ಶ್ಲಾಘನೀಯ ಮಧುರ ಮಾತುಗಳಿಂದ ಉತ್ತರಿಸಿದನು:

03020002a ನ ಮೇ ಭಯಂ ರೌಕ್ಮಿಣೇಯ ಸಂಗ್ರಾಮೇ ಯಚ್ಚತೋ ಹಯಾನ್|

03020002c ಯುದ್ಧಜ್ಞಶ್ಚಾಸ್ಮಿ ವೃಷ್ಣೀನಾಂ ನಾತ್ರ ಕಿಂ ಚಿದತೋಽನ್ಯಥಾ||

“ರೌಕ್ಮಿಣೇಯ! ಕುದುರೆಗಳನ್ನು ಓಡಿಸುವ ನನಗೆ ಸಂಗ್ರಾಮದಲ್ಲಿ ಯಾವುದೇ ರೀತಿಯ ಭಯವಿಲ್ಲ. ವೃಷ್ಣಿಗಳು ಹೇಗೆ ಯುದ್ಧಮಾಡುತ್ತಾರೆಂದು ನನಗೆ ತಿಳಿದಿದೆ. ಈ ವಿಷಯದಲ್ಲಿ ನೀನು ಹೇಳಿದುದಕಿಂತ ಹೊರತಾಗಿ ಏನೂ ಇಲ್ಲ.

03020003a ಆಯುಷ್ಮನ್ನುಪದೇಶಸ್ತು ಸಾರಥ್ಯೇ ವರ್ತತಾಂ ಸ್ಮೃತಃ|

03020003c ಸರ್ವಾರ್ಥೇಷು ರಥೀ ರಕ್ಷ್ಯಸ್ತ್ವಂ ಚಾಪಿ ಭೃಶಪೀಡಿತಃ||

ಆದರೆ ಸಾರಥ್ಯದಲ್ಲಿ ತೊಡಗಿರುವ ನಮಗೆ ಒಂದು ಉಪದೇಶವಿದೆ: ಎಲ್ಲ ಸಂದರ್ಭಗಳಲ್ಲಿಯೂ ಕಷ್ಟದಲ್ಲಿರುವ ರಥಿಯನ್ನು ರಕ್ಷಿಸಬೇಕು.

03020004a ತ್ವಂ ಹಿ ಶಾಲ್ವಪ್ರಯುಕ್ತೇನ ಪತ್ರಿಣಾಭಿಹತೋ ಭೃಶಂ|

03020004c ಕಶ್ಮಲಾಭಿಹತೋ ವೀರ ತತೋಽಹಮಪಯಾತವಾನ್||

ನೀನಾದರೋ ಶಾಲ್ವನು ಪ್ರಯೋಗಿಸಿದ ಬಾಣಗಳಿಂದ ಚೆನ್ನಾಗಿ ಹೊಡೆತ ತಿಂದು ಮೂರ್ಛಿತನಾಗಿದ್ದೆ. ವೀರ! ಆದುದರಿಂದಲೇ ನಾನು ಹಿಂದೆ ಸರಿದೆ.

03020005a ಸ ತ್ವಂ ಸಾತ್ವತಮುಖ್ಯಾದ್ಯ ಲಬ್ಧಸಂಜ್ಞೋ ಯದೃಚ್ಚಯಾ|

03020005c ಪಶ್ಯ ಮೇ ಹಯಸಂಯಾನೇ ಶಿಕ್ಷಾಂ ಕೇಶವನಂದನ||

ಕೇಶವನಂದನ! ಸಾತ್ವತಮುಖ್ಯ! ಈಗ ನೀನು ನಿನ್ನ ಎಚ್ಚರವನ್ನು ಪುನಃ ಪಡೆದುಕೊಂಡಿರುವೆಯಾದುದರಿಂದ ಕುದುರೆಗಳನ್ನು ಓಡಿಸುವುದರಲ್ಲಿ ನನ್ನಲ್ಲಿದ್ದ ಕುಶಲತೆಯನ್ನು ನೋಡು!

03020006a ದಾರುಕೇಣಾಹಮುತ್ಪನ್ನೋ ಯಥಾವಚ್ಚೈವ ಶಿಕ್ಷಿತಃ|

03020006c ವೀತಭೀಃ ಪ್ರವಿಶಾಮ್ಯೇತಾಂ ಶಾಲ್ವಸ್ಯ ಮಹತೀಂ ಚಮೂಂ||

ದಾರುಕನಿಂದ ಉತ್ಪನ್ನನಾದ ನಾನು ಅವನಿಂದ ಯಥಾವತ್ತಾಗಿ ತರಬೇತಿಯನ್ನು ಪಡೆದಿದ್ದೇನೆ. ಏನೂ ಭಯವಿಲ್ಲದೇ ಶಾಲ್ವನ ಮಹಾಸೇನೆಯನ್ನು ಪ್ರವೇಶಿಸುತ್ತೇನೆ.”

03020007a ಏವಮುಕ್ತ್ವಾ ತತೋ ವೀರ ಹಯಾನ್ಸಂಚೋದ್ಯ ಸಂಗರೇ|

03020007c ರಶ್ಮಿಭಿಶ್ಚ ಸಮುದ್ಯಮ್ಯ ಜವೇನಾಭ್ಯಪತತ್ತದಾ||

ವೀರ! ಹೀಗೆ ಹೇಳಿ ಅವನು ಕುದುರೆಗಳನ್ನು ರಣರಂಗದಲ್ಲಿ ಮುಂದೆಹೋಗುವಂತೆ ಗಾಳದಿಂದ ಚೋದಿಸಿ, ವೇಗವಾಗಿ ಮುನ್ನುಗ್ಗಿದನು.

03020008a ಮಂಡಲಾನಿ ವಿಚಿತ್ರಾಣಿ ಯಮಕಾನೀತರಾಣಿ ಚ|

03020008c ಸವ್ಯಾನಿ ಚ ವಿಚಿತ್ರಾಣಿ ದಕ್ಷಿಣಾನಿ ಚ ಸರ್ವಶಃ||

03020009a ಪ್ರತೋದೇನಾಹತಾ ರಾಜನ್ರಶ್ಮಿಭಿಶ್ಚ ಸಮುದ್ಯತಾಃ|

03020009c ಉತ್ಪತಂತ ಇವಾಕಾಶಂ ವಿಬಭುಸ್ತೇ ಹಯೋತ್ತಮಾಃ||

ರಾಜನ್! ಆಗ ಬಾರಿಕೋಲಿನಿಂದ ಪ್ರಚೋದಿಸಲ್ಪಟ್ಟ, ಗಾಳಗಳಿಂದ ನಿಯಂತ್ರಿಸಲ್ಪಟ್ಟ ಆ ಉತ್ತಮ ಕುದುರೆಗಳು ವಿಚಿತ್ರ ವೃತ್ತಾಕಾರದಲ್ಲಿ, ಬಲ ಮತ್ತು ಎಡದಿಕ್ಕುಗಳಲ್ಲಿ ಎಲ್ಲೆಲ್ಲೂ ವಿಚಿತ್ರವಾಗಿ ಓಡುತ್ತಾ  ಅವು ಆಕಾಶದಲ್ಲಿ ಹಾರುತ್ತಿವೆಯೋ ಎಂಬಂತೆ ತೋರಿದವು.

03020010a ತೇ ಹಸ್ತಲಾಘವೋಪೇತಂ ವಿಜ್ಞಾಯ ನೃಪ ದಾರುಕಿಂ|

03020010c ದಹ್ಯಮಾನಾ ಇವ ತದಾ ಪಸ್ಪೃಶುಶ್ಚರಣೈರ್ಮಹೀಂ||

ನೃಪ! ದಾರುಕನ ಹಸ್ತಕೌಶಲವನ್ನು ತಿಳಿದ ಆ ಕುದುರೆಗಳ ಹೆಜ್ಜೆಗಳು ಭೂಮಿಯನ್ನು ಮುಟ್ಟುತ್ತಿರುವಾಗಲೆಲ್ಲ ಬೆಂಕಿಯ ಕಿಡಿಗಳನ್ನು ಹಾರಿಸುತ್ತಾ ಓಡಿದವು.

03020011a ಸೋಽಪಸವ್ಯಾಂ ಚಮೂಂ ತಸ್ಯ ಶಾಲ್ವಸ್ಯ ಭರತರ್ಷಭ|

03020011c ಚಕಾರ ನಾತಿಯತ್ನೇನ ತದದ್ಭುತಮಿವಾಭವತ್||

ಭರತರ್ಷಭ! ಏನೂ ಕಷ್ಟವಿಲ್ಲದೇ ಅವನು ಶಾಲ್ವನ ಸೇನೆಯನ್ನು ಎಡಬದಿಯಿಂದ ಬಂದು ಸುತ್ತುಹಾಕಿದನು. ಇದೊಂದು ಅದ್ಭುತವೇ ಆಗಿತ್ತು!

03020012a ಅಮೃಷ್ಯಮಾಣೋಽಪಸವ್ಯಂ ಪ್ರದ್ಯುಮ್ನೇನ ಸ ಸೌಭರಾಟ್|

03020012c ಯಂತಾರಮಸ್ಯ ಸಹಸಾ ತ್ರಿಭಿರ್ಬಾಣೈಃ ಸಮರ್ಪಯತ್||

03020013a ದಾರುಕಸ್ಯ ಸುತಸ್ತಂ ತು ಬಾಣವೇಗಮಚಿಂತಯನ್|

03020013c ಭೂಯ ಏವ ಮಹಾಬಾಹೋ ಪ್ರಯಯೌ ಹಯಸಮ್ಮತಃ||

ಮಹಾಬಾಹೋ! ಪ್ರದ್ಯುಮ್ನನ ಕಿರುಕುಳಕ್ಕೊಳಗಾದ ಆ ಸೌಭರಾಜನು ತಕ್ಷಣವೇ ತನ್ನ ಬಲಗಡೆಯಲ್ಲಿದ್ದ ಸಾರಥಿಯ ಮೇಲೆ ಮೂರು ತೀಕ್ಷ್ಣ ಬಾಣಗಳನ್ನು ಪ್ರಯೋಗಿಸಿದನು. ಆದರೆ ದಾರಕನ ಮಗನು ಆ ಬಾಣಗಳಿಗೆ ಲಕ್ಷ್ಯಕೊಡದೇ ತನ್ನ ಮಾತನ್ನು ಕೇಳುತ್ತಿದ್ದ ಕುದುರೆಗಳನ್ನು ಇನ್ನೂ ಮುಂದುವರೆಸಿದನು.

03020014a ತತೋ ಬಾಣಾನ್ಬಹುವಿಧಾನ್ಪುನರೇವ ಸ ಸೌಭರಾಟ್|

03020014c ಮುಮೋಚ ತನಯೇ ವೀರೇ ಮಮ ರುಕ್ಮಿಣಿನಂದನೇ||

ಆಗ ಪುನಃ ಸೌಭರಾಜನು ಬಹುವಿಧದ ಬಾಣಗಳನ್ನು ನನ್ನ ಮಗ ವೀರ ರುಕ್ಮಿಣೀನಂದನನ ಮೇಲೆ ಪ್ರಯೋಗಿಸಿದನು.

03020015a ತಾನಪ್ರಾಪ್ತಾಂ ಶಿತೈರ್ಬಾಣೈಶ್ಚಿಚ್ಚೇದ ಪರವೀರಹಾ|

03020015c ರೌಕ್ಮಿಣೇಯಃ ಸ್ಮಿತಂ ಕೃತ್ವಾ ದರ್ಶಯನ್ ಹಸ್ತಲಾಘವಂ||

ಅವು ತಲುಪುವುದರೊಳಗೇ ಆ ಪರವೀರಹನು ತನ್ನ ತೀಕ್ಷ್ಣ ಬಾಣಗಳಿಂದ ಅವುಗಳನ್ನು ತುಂಡರಿಸಿದನು ಮತ್ತು ತನ್ನ ಹಸ್ತಲಾಘವವನ್ನು ತೋರಿಸಿ ರೌಕ್ಮಿಣೇಯನು ಮುಗುಳ್ನಕ್ಕನು.

03020016a ಚಿನ್ನಾಂದೃಷ್ಟ್ವಾ ತು ತಾನ್ಬಾಣಾನ್ಪ್ರದ್ಯುಮ್ನೇನ ಸ ಸೌಭರಾಟ್|

03020016c ಆಸುರೀಂ ದಾರುಣೀಂ ಮಾಯಾಮಾಸ್ಥಾಯ ವ್ಯಸೃಜಚ್ಶರಾನ್||

03020017a ಪ್ರಯುಜ್ಯಮಾನಮಾಜ್ಞಾಯ ದೈತೇಯಾಸ್ತ್ರಂ ಮಹಾಬಲಃ|

03020017c ಬ್ರಹ್ಮಾಸ್ತ್ರೇಣಾಂತರಾ ಚಿತ್ತ್ವಾ ಮುಮೋಚಾನ್ಯಾನ್ಪತತ್ರಿಣಃ||

ಅವನ ಬಾಣಗಳನ್ನು ಪ್ರದ್ಯುಮ್ನನು ತುಂಡರಿಸಿದುದನ್ನು ನೋಡಿದ ಸೌಭರಾಜನು ದಾರುಣ ಅಸುರೀ ಮಾಯೆಯನ್ನುಪಯೋಗಿಸಿ ಬಾಣಗಳನ್ನು ಬಿಟ್ಟನು. ಆದರೆ ದೈತೇಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾನೆ ಎಂದು ತಿಳಿದ ಮಹಾಬಲನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವುಗಳನ್ನು ಮಧ್ಯದಲ್ಲಿಯೇ ತುಂಡರಿಸಿದನು.

03020018a ತೇ ತದಸ್ತ್ರಂ ವಿಧೂಯಾಶು ವಿವ್ಯಧೂ ರುಧಿರಾಶನಾಃ|

03020018c ಶಿರಸ್ಯುರಸಿ ವಕ್ತ್ರೇ ಚ ಸ ಮುಮೋಹ ಪಪಾತ ಚ||

ರಕ್ತವನ್ನು ಕುಡಿಯುವ ಆ ಅಸ್ತ್ರವು ಅವನ ಬಾಣಗಳನ್ನು ದಾಟಿ ಮುಂದೆ ಹೋಗಿ ಅವನ ತಲೆ, ಎದೆ ಮತ್ತು ಮುಖಗಳನ್ನು ಹೊಡೆಯಲು ಅವನು ಮೂರ್ಛಿತನಾಗಿ ಕೆಳಗೆ ಬಿದ್ದನು.

03020019a ತಸ್ಮಿನ್ನಿಪತಿತೇ ಕ್ಷುದ್ರೇ ಶಾಲ್ವೇ ಬಾಣಪ್ರಪೀಡಿತೇ|

03020019c ರೌಕ್ಮಿಣೇಯೋಽಪರಂ ಬಾಣಂ ಸಂದಧೇ ಶತ್ರುನಾಶನಂ||

ಬಾಣದ ಹೊಡೆತದಿಂದ ಪೀಡಿತನಾದ ಆ ಕ್ಷುದ್ರ ಶಾಲ್ವನು ಕೆಳಗುರುಳಲು ರೌಕ್ಮಿಣೇಯನು ಇನ್ನೊಂದು ಶತ್ರುನಾಶಕ ಬಾಣವನ್ನು ಹೂಡಿದನು.

03020020a ತಮರ್ಚಿತಂ ಸರ್ವದಾಶಾರ್ಹಪೂಗೈರ್|

         ಆಶೀರ್ಭಿರರ್ಕಜ್ವಲನಪ್ರಕಾಶಂ||

03020020c ದೃಷ್ಟ್ವಾ ಶರಂ ಜ್ಯಾಮಭಿನೀಯಮಾನಂ|

         ಬಭೂವ ಹಾಹಾಕೃತಮಂತರಿಕ್ಷಂ||

ಬಿಲ್ಲಿನ ಹೆದೆಗೇರಿಸಿದ ಸರ್ವ ದಾಶಾರ್ಹರೂ ಪೂಜಿಸುವ, ಸೂರ್ಯನ ತಾಪದಂತೆ ಬೆಳಗುತ್ತಿದ್ದ ಆ ಶರವನ್ನು ನೋಡಿ ಅಂತರಿಕ್ಷದಲ್ಲಿ ಹಾಹಾಕಾರವುಂಟಾಯಿತು.

03020021a ತತೋ ದೇವಗಣಾಃ ಸರ್ವೇ ಸೇಂದ್ರಾಃ ಸಹ ಧನೇಶ್ವರಾಃ|

03020021c ನಾರದಂ ಪ್ರೇಷಯಾಮಾಸುಃ ಶ್ವಸನಂ ಚ ಮಹಾಬಲಂ||

03020022a ತೌ ರೌಕ್ಮಿಣೇಯಮಾಗಮ್ಯ ವಚೋಽಬ್ರೂತಾಂ ದಿವೌಕಸಾಂ|

03020022c ನೈಷ ವಧ್ಯಸ್ತ್ವಯಾ ವೀರ ಶಾಲ್ವರಾಜಃ ಕಥಂ ಚನ||

ಆಗ ಇಂದ್ರ ಮತ್ತು ಧನೇಶ್ವರನೂ ಸೇರಿ ಎಲ್ಲ ದೇವಗಣಗಳೂ ನಾರದ ಮತ್ತು ಮಹಾಬಲ ವಾಯುವನ್ನು ಕಳುಹಿಸಿದರು. ಅವರಿಬ್ಬರೂ ರೌಕ್ಮಿಣೇಯನಲ್ಲಿಗೆ ಬಂದು ದಿವೌಕಸರ ಸಂದೇಶವನ್ನು ಕೊಟ್ಟರು: “ವೀರ! ಶಾಲ್ವರಾಜನು ಎಂದೂ ನಿನ್ನಿಂದ ವಧೆಗೊಳ್ಳಲು ಸಾಧ್ಯವಿಲ್ಲ!

03020023a ಸಂಹರಸ್ವ ಪುನರ್ಬಾಣಮವಧ್ಯೋಽಯಂ ತ್ವಯಾ ರಣೇ|

03020023c ಏತಸ್ಯ ಹಿ ಶರಸ್ಯಾಜೌ ನಾವಧ್ಯೋಽಸ್ತಿ ಪುಮಾನ್ಕ್ವ ಚಿತ್||

03020024a ಮೃತ್ಯುರಸ್ಯ ಮಹಾಬಾಹೋ ರಣೇ ದೇವಕಿನಂದನಃ|

03020024c ಕೃಷ್ಣಃ ಸಂಕಲ್ಪಿತೋ ಧಾತ್ರಾ ತನ್ನ ಮಿಥ್ಯಾ ಭವೇದಿತಿ||

ಎಷ್ಟೇ ಬಾರಿ ಬಾಣಗಳನ್ನು ಪ್ರಯೋಗಿಸಿದರೂ ರಣದಲ್ಲಿ ಇವನು ನಿನ್ನಿಂದ ಮರಣಹೊಂದುವುದಿಲ್ಲ. ನೀನು ಬಿಲ್ಲಿಗೇರಿಸಿದ ಈ ಶ್ರೇಷ್ಠ ಬಾಣವು ಎಂದೂ ಇವನನ್ನು ಕೊಲ್ಲುವುದಿಲ್ಲ. ರಣದಲ್ಲಿ ಇವನ ಮೃತ್ಯುವು ದೇವಕಿನಂದನ ಕೃಷ್ಣನಿಂದ ಎಂದು ಧಾತ್ರನ ಸಂಕಲ್ಪವಾಗಿದೆ. ಅದು ಸುಳ್ಳಾಗುವುದಿಲ್ಲ!”

03020025a ತತಃ ಪರಮಸಂಹೃಷ್ಟಃ ಪ್ರದ್ಯುಮ್ನಃ ಶರಮುತ್ತಮಂ|

03020025c ಸಂಜಹಾರ ಧನುಃಶ್ರೇಷ್ಠಾತ್ತೂಣೇ ಚೈವ ನ್ಯವೇಶಯತ್||

ಆಗ ಪರಮಸಂಹೃಷ್ಟ ಪ್ರದ್ಯುಮ್ನನು ಆ ಉತ್ತಮ ಶರವನ್ನು ತನ್ನ ಆ ಶ್ರೇಷ್ಠ ಧನುಸ್ಸಿನಿಂದ ಹಿಂದೆ ತೆಗೆದುಕೊಂಡು ಭತ್ತಳಿಕೆಯಲ್ಲಿ ಇರಿಸಿದನು.

03020026a ತತ ಉತ್ಥಾಯ ರಾಜೇಂದ್ರ ಶಾಲ್ವಃ ಪರಮದುರ್ಮನಾಃ|

03020026c ವ್ಯಪಾಯಾತ್ಸಬಲಸ್ತೂರ್ಣಂ ಪ್ರದ್ಯುಮ್ನಶರಪೀಡಿತಃ||

ರಾಜೇಂದ್ರ! ಆಗ ಶಾಲ್ವನು ಪರಮ ದುರ್ಬಲನಾಗಿ ಮೇಲೆದ್ದು, ಪ್ರದ್ಯುಮ್ನನ ಶರಗಳಿಂದ ಪೀಡಿತನಾಗಿ ತನ್ನ ಸೇನೆಯೊಂದಿಗೆ ಹಿಂದೆ ಸರಿದನು.

03020027a ಸ ದ್ವಾರಕಾಂ ಪರಿತ್ಯಜ್ಯ ಕ್ರೂರೋ ವೃಷ್ಣಿಭಿರರ್ದಿತಃ|

03020027c ಸೌಭಮಾಸ್ಥಾಯ ರಾಜೇಂದ್ರ ದಿವಮಾಚಕ್ರಮೇ ತದಾ||

ರಾಜೇಂದ್ರ! ವೃಷ್ಣಿಗಳಿಂದ ಪೆಟ್ಟುತಿಂದ ಆ ಕ್ರೂರನು ದ್ವಾರಕೆಯನ್ನು ಬಿಟ್ಟು ಸೌಭವನ್ನೇರಿ ಆಕಾಶದ ಕಡೆ ಪ್ರಯಾಣಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಇಪ್ಪತ್ತನೆಯ ಅಧ್ಯಾಯವು.

Related image

Comments are closed.