ಆರಣ್ಯಕ ಪರ್ವ: ಕೈರಾತ ಪರ್ವ
೧೯
ರಥದಲ್ಲಿ ಮೂರ್ಛೆಗೊಂಡ ಪ್ರದ್ಯುಮ್ನನು ಸಾರಥಿ ದಾರುಕನು ರಣದಿಂದ ಆಚೆ ಕರೆದುಕೊಂಡು ಹೋಗಲು, ಎಚ್ಚೆದ್ದ ಪ್ರದ್ಯುಮ್ನನು ಸಾರಥಿಯನ್ನು ನಿಂದಿಸುವುದು (೧-೬). ದಾರುಕ-ಪ್ರದ್ಯುಮ್ನರ ಸಂವಾದ (೭-೩೩).
03019001 ವಾಸುದೇವ ಉವಾಚ|
03019001a ಶಾಲ್ವಬಾಣಾರ್ದಿತೇ ತಸ್ಮಿನ್ಪ್ರದ್ಯುಮ್ನೇ ಬಲಿನಾಂ ವರೇ|
03019001c ವೃಷ್ಣಯೋ ಭಗ್ನಸಂಕಲ್ಪಾ ವಿವ್ಯಥುಃ ಪೃತನಾಗತಾಃ||
ವಾಸುದೇವನು ಹೇಳಿದನು: “ಬಲಿಶ್ರೇಷ್ಠ ಪ್ರದ್ಯುಮ್ನನನ್ನು ಶಾಲ್ವನ ಬಾಣಗಳು ಚುಚ್ಚಲು, ಹೋರಾಡಲು ಬಂದಿದ್ದ ವೃಷ್ಣಿಗಳು ಗುರಿತಪ್ಪಿ ಬುದ್ಧಿಯನ್ನು ಕಳೆದುಕೊಂಡರು.
03019002a ಹಾಹಾಕೃತಮಭೂತ್ಸಾರ್ವಂ ವೃಷ್ಣ್ಯಂಧಕಬಲಂ ತದಾ|
03019002c ಪ್ರದ್ಯುಮ್ನೇ ಪತಿತೇ ರಾಜನ್ಪರೇ ಚ ಮುದಿತಾಭವನ್||
ರಾಜನ್! ಪ್ರದ್ಯುಮ್ನನು ಕೆಳಗುರುಳಲು ವೃಷ್ಣಿ ಮತ್ತು ಅಂಧಕರ ಸೇನೆಯು ಹಾಹಾಕಾರವನ್ನುಂಟುಮಾಡಿತು ಮತ್ತು ಶತ್ರುಸೇನೆಯು ಸಂತಸಗೊಂಡಿತು.
03019003a ತಂ ತಥಾ ಮೋಹಿತಂ ದೃಷ್ಟ್ವಾ ಸಾರಥಿರ್ಜವನೈರ್ಹಯೈಃ|
03019003c ರಣಾದಪಾಹರತ್ತೂರ್ಣಂ ಶಿಕ್ಷಿತೋ ದಾರುಕಿಸ್ತತಃ||
ಅವನು ಮೂರ್ಛೆಗೊಂಡಿದುದನ್ನು ನೋಡಿ, ಅವನ ಕುಶಲ ಸಾರಥಿ ದಾರುಕನು ಅವನನ್ನು ತಕ್ಷಣವೇ ಅತಿವೇಗದ ಕುದುರೆಗಳೊಂದಿಗೆ ರಣರಂಗದಿಂದ ಆಚೆ ಕರೆದುಕೊಂಡು ಹೋದನು.
03019004a ನಾತಿದೂರಾಪಯಾತೇ ತು ರಥೇ ರಥವರಪ್ರಣುತ್|
03019004c ಧನುರ್ಗೃಹೀತ್ವಾ ಯಂತಾರಂ ಲಬ್ಧಸಂಜ್ಞೋಽಬ್ರವೀದಿದಂ||
ರಥವು ಹೋಗುತ್ತಿರಲು ಸ್ವಲ್ಪ ದೂರದಲ್ಲಿಯೇ ಶತ್ರುಗಳ ರಥಗಳನ್ನು ತಡೆಹಿಡಿಯುವುದರಲ್ಲಿ ಪ್ರವೀಣನು ಎಚ್ಚೆದ್ದು ಧನುಸ್ಸನ್ನು ಎತ್ತಿ ಹಿಡಿದು ಸಾರಥಿಗೆ ಹೇಳಿದನು:
03019005a ಸೌತೇ ಕಿಂ ತೇ ವ್ಯವಸಿತಂ ಕಸ್ಮಾದ್ಯಾಸಿ ಪರಾಙ್ಮುಖಃ|
03019005c ನೈಷ ವೃಷ್ಣಿಪ್ರವೀರಾಣಾಮಾಹವೇ ಧರ್ಮ ಉಚ್ಯತೇ||
“ಸೌತಿ! ಏನೆಂದು ಯೋಚಿಸಿ ಈ ರಥವನ್ನು ಹಿಂದೆ ತೆಗೆದುಕೊಂಡು ಹೋಗುತ್ತಿದ್ದೀಯೆ? ಇದು ವೃಷ್ಣಿಪ್ರವೀರರು ರಣರಂಗದಲ್ಲಿ ಅನುಸರಿಸುವ ಧರ್ಮ ಎಂದು ಹೇಳುವುದಿಲ್ಲವೇ?
03019006a ಕಚ್ಚಿತ್ಸೌತೇ ನ ತೇ ಮೋಹಃ ಶಾಲ್ವಂ ದೃಷ್ಟ್ವಾ ಮಹಾಹವೇ|
03019006c ವಿಷಾದೋ ವಾ ರಣಂ ದೃಷ್ಟ್ವಾ ಬ್ರೂಹಿ ಮೇ ತ್ವಂ ಯಥಾತಥಂ||
ಸೌತಿ! ಈ ಮಹಾಯುದ್ಧದಲ್ಲಿ ಶಾಲ್ವನನ್ನು ನೋಡಿ ನಿನ್ನ ಬುದ್ಧಿಯನ್ನು ಕಳೆದುಕೊಂಡಿಲ್ಲ ತಾನೇ? ಅಥವಾ ರಣವನ್ನು ನೋಡಿ ವಿಷಾದಗೊಂಡೆಯೇ? ಯಥಾವತ್ತಾಗಿ ನೀನು ನನಗೆ ಹೇಳು!”
03019007 ಸೂತ ಉವಾಚ|
03019007a ಜಾನಾರ್ದನೇ ನ ಮೇ ಮೋಹೋ ನಾಪಿ ಮೇ ಭಯಮಾವಿಶತ್|
03019007c ಅತಿಭಾರಂ ತು ತೇ ಮನ್ಯೇ ಶಾಲ್ವಂ ಕೇಶವನಂದನ||
ಸೂತನು ಹೇಳಿದನು: “ಜನಾರ್ದನ! ನನಗೆ ಬುದ್ಧಿನಾಶವೂ ಆಗಲಿಲ್ಲ ಅಥವಾ ಭಯವೂ ಆವರಿಸಲಿಲ್ಲ. ಕೇಶವನಂದನ! ಆದರೆ ಶಾಲ್ವನು ನಿನಗೆ ಅತಿ ಭಾರದವನು ಎಂದು ನನಗನ್ನಿಸುತ್ತದೆ.
03019008a ಸೋಽಪಯಾಮಿ ಶನೈರ್ವೀರ ಬಲವಾನೇಷ ಪಾಪಕೃತ್|
03019008c ಮೋಹಿತಶ್ಚ ರಣೇ ಶೂರೋ ರಕ್ಷ್ಯಃ ಸಾರಥಿನಾ ರಥೀ||
ವೀರ! ಆ ಪಾಪಿಯು ಹೆಚ್ಚು ಬಲಶಾಲಿಯಾದುದರಿಂದ ನಾನು ನಿಧಾನವಾಗಿ ಹಿಂದೆ ಸರಿದೆನು. ರಣರಂಗದಲ್ಲಿ ಮೂರ್ಛೆತಪ್ಪಿ ಬಿದ್ದ ಶೂರನನ್ನು ರಥದ ಸಾರಥಿಯು ರಕ್ಷಿಸಬೇಕು.
03019009a ಆಯುಷ್ಮಂಸ್ತ್ವಂ ಮಯಾ ನಿತ್ಯಂ ರಕ್ಷಿತವ್ಯಸ್ತ್ವಯಾಪ್ಯಹಂ|
03019009c ರಕ್ಷಿತವ್ಯೋ ರಥೀ ನಿತ್ಯಮಿತಿ ಕೃತ್ವಾಪಯಾಮ್ಯಹಂ||
ನೀನು ಹೇಗೆ ನನ್ನನ್ನು ರಕ್ಷಿಸುತ್ತೀಯೋ ಹಾಗೆ ನಾನೂ ಕೂಡ ಸದಾ ನಿನ್ನನ್ನು ರಕ್ಷಿಸಬೇಕು. ರಥಿಯನ್ನು ಯಾವಾಗಲೂ ರಕ್ಷಿಸಬೇಕು ಎಂದು ನಾನು ಹಿಂದೆ ಸರಿದೆನು.
03019010a ಏಕಶ್ಚಾಸಿ ಮಹಾಬಾಹೋ ಬಹವಶ್ಚಾಪಿ ದಾನವಾಃ|
03019010c ನಸಮಂ ರೌಕ್ಮಿಣೇಯಾಹಂ ರಣಂ ಮತ್ವಾಪಯಾಮ್ಯಹಂ||
ಮಹಾಬಾಹೋ! ನೀನಾದರೋ ಒಬ್ಬನೇ ಇದ್ದೀಯೆ. ದಾನವರು ಬಹುಸಂಖ್ಯೆಯಲ್ಲಿ ಇದ್ದಾರೆ. ರೌಕ್ಮಿಣೇಯ! ಯುದ್ಧವು ಅಸಮವಾಗಿದೆ ಎಂದು ತಿಳಿದು ನಾನು ಹಿಂದೆ ಸರಿದೆ.””
03019011 ವಾಸುದೇವ ಉವಾಚ|
03019011a ಏವಂ ಬ್ರುವತಿ ಸೂತೇ ತು ತದಾ ಮಕರಕೇತುಮಾನ್|
03019011c ಉವಾಚ ಸೂತಂ ಕೌರವ್ಯ ನಿವರ್ತಯ ರಥಂ ಪುನಃ||
ವಾಸುದೇವನು ಹೇಳಿದನು: “ಕೌರವ್ಯ! ಸೂತನು ಈ ರೀತಿ ಮಾತನಾಡುತ್ತಿರಲು ಆ ಮಕರಕೇತುವು ಸೂತನಿಗೆ “ರಥವನ್ನು ಪುನಃ ಹಿಂದೆ ತೆಗೆದುಕೊಂಡು ಹೋಗು!” ಎಂದು ಆಜ್ಞೆಯನ್ನಿತ್ತನು.
03019012a ದಾರುಕಾತ್ಮಜ ಮೈವಂ ತ್ವಂ ಪುನಃ ಕಾರ್ಷೀಃ ಕಥಂ ಚನ|
03019012c ವ್ಯಪಯಾನಂ ರಣಾತ್ಸೌತೇ ಜೀವತೋ ಮಮ ಕರ್ಹಿ ಚಿತ್||
“ದಾರುಕಾತ್ಮಜ! ಇನ್ನು ಮುಂದೆ ಎಂದೂ ಈ ರೀತಿ ನಾನು ಜೀವಂತವಿರುವಾಗಲೇ ರಣದಿಂದ ಹಿಂದೆಸರಿಯುವ ಕೆಲಸವನ್ನು ಪುನಃ ಮಾಡಬೇಡ!
03019013a ನ ಸ ವೃಷ್ಣಿಕುಲೇ ಜಾತೋ ಯೋ ವೈ ತ್ಯಜತಿ ಸಂಗರಂ|
03019013c ಯೋ ವಾ ನಿಪತಿತಂ ಹಂತಿ ತವಾಸ್ಮೀತಿ ಚ ವಾದಿನಂ||
ವೃಷ್ಣಿಕುಲದಲ್ಲಿ ಹುಟ್ಟಿದ ಯಾರೂ ಸಂಗರವನ್ನು ಬಿಟ್ಟುಬರುವುದಿಲ್ಲ ಅಥವಾ ಬಿದ್ದವನನ್ನು ಕೊಲ್ಲುವುದಿಲ್ಲ ಮತ್ತು ಶರಣು ಬಂದವನನ್ನು ಕೊಲ್ಲುವುದಿಲ್ಲ.
03019014a ತಥಾ ಸ್ತ್ರಿಯಂ ವೈ ಯೋ ಹಂತಿ ವೃದ್ಧಂ ಬಾಲಂ ತಥೈವ ಚ|
03019014c ವಿರಥಂ ವಿಪ್ರಕೀರ್ಣಂ ಚ ಭಗ್ನಶಸ್ತ್ರಾಯುಧಂ ತಥಾ||
ಹಾಗೆಯೇ ಯಾರೂ ಸ್ತ್ರೀ, ವೃದ್ಧ, ಅಥವಾ ಬಾಲಕನನ್ನು, ರಥದಿಂದ ಬಿದ್ದವನನ್ನು, ಗುಂಪಿನಿಂದ ಬೇರೆಯಾದವನನ್ನು, ಶಸ್ತ್ರ-ಆಯುಧಗಳು ತುಂಡಾಗಿರುವವನನ್ನು ಕೊಲ್ಲುವುದಿಲ್ಲ.
03019015a ತ್ವಂ ಚ ಸೂತಕುಲೇ ಜಾತೋ ವಿನೀತಃ ಸೂತಕರ್ಮಣಿ|
03019015c ಧರ್ಮಜ್ಞಶ್ಚಾಸಿ ವೃಷ್ಣೀನಾಮಾಹವೇಷ್ವಪಿ ದಾರುಕೇ||
ನೀನಾದರೋ ಸೂತಕರ್ಮದಲ್ಲಿ ಪಳಗಿದ ಸೂತಕುಲದಲ್ಲಿ ಜನಿಸಿದ್ದೀಯೆ ಮತ್ತು ದಾರುಕ! ನೀನು ಮಹೇಷ್ವಾಸ ವೃಷ್ಣಿಯರ ಧರ್ಮವನ್ನು ತಿಳಿದಿದ್ದೀಯೆ.
03019016a ಸ ಜಾನಂಶ್ಚರಿತಂ ಕೃತ್ಸ್ನಂ ವೃಷ್ಣೀನಾಂ ಪೃತನಾಮುಖೇ|
03019016c ಅಪಯಾನಂ ಪುನಃ ಸೌತೇ ಮೈವಂ ಕಾರ್ಷೀಃ ಕಥಂ ಚನ||
ಸೌತಿ! ಯುದ್ಧದ ಎದುರಿನಲ್ಲಿ ವೃಷ್ಣಿಗಳ ನಡತೆಯ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದ ನೀನು ಪುನಃ ಎಂದೂ ಯಾವುದೇ ಸಂದರ್ಭದಲ್ಲಿಯೂ ಈ ರೀತಿ ಹಿಂದೆ ಸರಿಯಕೂಡದು!
03019017a ಅಪಯಾತಂ ಹತಂ ಪೃಷ್ಠೇ ಭೀತಂ ರಣಪಲಾಯಿನಂ|
03019017c ಗದಾಗ್ರಜೋ ದುರಾಧರ್ಷಃ ಕಿಂ ಮಾಂ ವಕ್ಷ್ಯತಿ ಮಾಧವಃ||
ಹಿಂಜರಿದರೆ, ಹಿಂದಿನಿಂದ ಹೊಡೆದರೆ ಅಥವಾ ಭಯದಿಂದ ರಣಪಲಾಯನ ಮಾಡಿದರೆ ಗದಾಗ್ರಜ, ದುರಾಧರ್ಷ ಮಾಧವನು ನನ್ನ ಕುರಿತು ಏನೆಂದು ಯೋಚಿಸುವುದಿಲ್ಲ?
03019018a ಕೇಶವಸ್ಯಾಗ್ರಜೋ ವಾಪಿ ನೀಲವಾಸಾ ಮದೋತ್ಕಟಃ|
03019018c ಕಿಂ ವಕ್ಷ್ಯತಿ ಮಹಾಬಾಹುರ್ಬಲದೇವಃ ಸಮಾಗತಃ||
ಮತ್ತು ಕೇಶವನ ಅಣ್ಣ ಆ ನೀಲವಸ್ತ್ರಧಾರಿ, ಮದೋತ್ಕಟ, ಮಹಾಬಾಹು, ಬಲದೇವನು ಹಿಂದಿರುಗಿ ಬಂದು ಏನು ಹೇಳಿಯಾನು?
03019019a ಕಿಂ ವಕ್ಷ್ಯತಿ ಶಿನೇರ್ನಪ್ತಾ ನರಸಿಂಹೋ ಮಹಾಧನುಃ|
03019019c ಅಪಯಾತಂ ರಣಾತ್ಸೌತೇ ಸಾಂಬಶ್ಚ ಸಮಿತಿಂಜಯಃ||
03019020a ಚಾರುದೇಷ್ಣಶ್ಚ ದುರ್ಧರ್ಷಸ್ತಥೈವ ಗದಸಾರಣೌ|
03019020c ಅಕ್ರೂರಶ್ಚ ಮಹಾಬಾಹುಃ ಕಿಂ ಮಾಂ ವಕ್ಷ್ಯತಿ ಸಾರಥೇ||
03019021a ಶೂರಂ ಸಂಭಾವಿತಂ ಸಂತಂ ನಿತ್ಯಂ ಪುರುಷಮಾನಿನಂ|
03019021c ಸ್ತ್ರಿಯಶ್ಚ ವೃಷ್ಣೀವೀರಾಣಾಂ ಕಿಂ ಮಾಂ ವಕ್ಷ್ಯಂತಿ ಸಂಗತಾಃ||
ಸೌತಿ! ಸಾರಥಿ! ನಾನು ರಣದಿಂದ ಪಲಾಯನಮಾಡಿದೆನೆಂದರೆ ಶಿನಿಯ ಮೊಮ್ಮಗ, ನರಸಿಂಹ, ಮಹಾಧನು ಸಮಿತಿಂಜಯ, ಸಾಂಬ, ದುರ್ಧರ್ಷ ಚಾರುದೇಷ್ಣ, ಗದ ಮತ್ತು ಸಾರಣರು, ಮಹಾಬಾಹು ಅಕ್ರೂರನೂ ಏನು ಹೇಳಿಯಾರು? ವೃಷ್ಣಿವೀರರು ಶೂರರೂ ಸಂಭಾವಿತರೂ, ಸಂತರೂ ಮತ್ತು ನಿತ್ಯವೂ ಪುರುಷರೆಂದು ಅಭಿಪ್ರಾಯ ಪಟ್ಟಿರುವ ಸ್ತ್ರೀಯರು ಒಟ್ಟಿಗೇ ನನ್ನ ಕುರಿತು ಏನು ಮಾತನಾಡಿಕೊಂಡಾರು?
03019022a ಪ್ರದ್ಯುಮ್ನೋಽಯಮುಪಾಯಾತಿ ಭೀತಸ್ತ್ಯಕ್ತ್ವಾ ಮಹಾಹವಂ|
03019022c ಧಿಗೇನಮಿತಿ ವಕ್ಷ್ಯಂತಿ ನ ತು ವಕ್ಷ್ಯಂತಿ ಸಾಧ್ವಿತಿ||
ಪ್ರದ್ಯುಮ್ನನು ಭಯಪಟ್ಟುಕೊಂಡಿದ್ದಾನೆ! ಮಹಾಯುದ್ಧವನ್ನು ತ್ಯಜಿಸಿ ಓಡಿಹೋಗುತ್ತಾನೆ! ಅವನಿಗೆ ಧಿಕ್ಕಾರ! ಎಂದು ಹೇಳುತ್ತಾರೆ. ಅವನು ಸಾಧು ಎಂದು ಹೇಳುವುದಿಲ್ಲ!
03019023a ಧಿಗ್ವಾಚಾ ಪರಿಹಾಸೋಽಪಿ ಮಮ ವಾ ಮದ್ವಿಧಸ್ಯ ವಾ|
03019023c ಮೃತ್ಯುನಾಭ್ಯಧಿಕಃ ಸೌತೇ ಸ ತ್ವಂ ಮಾ ವ್ಯಪಯಾಃ ಪುನಃ||
ಸೌತಿ! ನನಗೆ ಧಿಕ್ಕಾರವನ್ನು ಹೇಳಿ ಪರಿಹಾಸಮಾಡುವುದಕ್ಕಿಂತ ನನ್ನ ಸಾವೇ ನನಗೆ ಒಳ್ಳೆಯದು. ನನ್ನನ್ನು ಪುನಃ ಹಿಂದೆ ಕರೆದುಕೊಂಡು ಬರಬೇಡ.
03019024a ಭಾರಂ ಹಿ ಮಯಿ ಸಂನ್ಯಸ್ಯ ಯಾತೋ ಮಧುನಿಹಾ ಹರಿಃ|
03019024c ಯಜ್ಞಂ ಭರತಸಿಂಹಸ್ಯ ಪಾರ್ಥಸ್ಯಾಮಿತತೇಜಸಃ||
03019025a ಕೃತವರ್ಮಾ ಮಯಾ ವೀರೋ ನಿರ್ಯಾಸ್ಯನ್ನೇವ ವಾರಿತಃ|
03019025c ಶಾಲ್ವಂ ನಿವಾರಯಿಷ್ಯೇಽಹಂ ತಿಷ್ಠ ತ್ವಮಿತಿ ಸೂತಜ||
03019026a ಸ ಚ ಸಂಭಾವಯನ್ಮಾಂ ವೈ ನಿವೃತ್ತೋ ಹೃದಿಕಾತ್ಮಜಃ|
03019026c ತಂ ಸಮೇತ್ಯ ರಣಂ ತ್ಯಕ್ತ್ವಾ ಕಿಂ ವಕ್ಷ್ಯಾಮಿ ಮಹಾರಥಂ||
ಮಧುಸಂಹಾರಕ ಹರಿಯು ನನ್ನ ಮೇಲೆ ಭಾರವನ್ನು ಒಪ್ಪಿಸಿ ಅಮಿತತೇಜಸ ಭರತಸಿಂಹ ಪಾರ್ಥನ ಯಜ್ಞಕ್ಕೆ ಹೋದನು. ಸೂತಜ! ವೀರ ಕೃತವರ್ಮನು ಶಾಲ್ವನನ್ನು ನಾನು ತಡೆಯುತ್ತೇನೆ, ನೀನು ನಿಲ್ಲು ಎಂದು ಹೇಳಿ ನನ್ನನ್ನು ತಡೆಗಟ್ಟಿದ್ದ. ಆ ಹೃದಿಕಾತ್ಮಜನಿಗೆ ಹಿಂದಿರುಗಿ ಬರಬೇಡ ಎಂದು ಹೇಳಿದ್ದ. ಈಗ ನಾನು ರಣವನ್ನು ತ್ಯಜಿಸಿ ಹಿಂದಿರುಗಿ ಬಂದು ಆ ಮಹಾರಥಿಗೆ ಏನು ಹೇಳಲಿ?
03019027a ಉಪಯಾತಂ ದುರಾಧರ್ಷಂ ಶಂಖಚಕ್ರಗದಾಧರಂ|
03019027c ಪುರುಷಂ ಪುಂಡರೀಕಾಕ್ಷಂ ಕಿಂ ವಕ್ಷ್ಯಾಮಿ ಮಹಾಭುಜಂ||
ದುರಾದರ್ಷ, ಶಂಖಚಕ್ರಗದಾಧರ, ಪುರುಷ, ಪುಂಡರೀಕಾಕ್ಷ, ಮಹಾಭುಜನು ಮರಳಿ ಬಂದಾಗ ಅವನಿಗೆ ನಾನು ಏನು ಹೇಳಲಿ?
03019028a ಸಾತ್ಯಕಿಂ ಬಲದೇವಂ ಚ ಯೇ ಚಾನ್ಯೇಽಂಧಕವೃಷ್ಣಯಃ|
03019028c ಮಯಾ ಸ್ಪರ್ಧಂತಿ ಸತತಂ ಕಿಂ ನು ವಕ್ಷ್ಯಾಮಿ ತಾನಹಂ||
ಸಾತ್ಯಕಿ, ಬಲದೇವ ಮತ್ತು ನನ್ನೊಂದಿಗೆ ಸತತವೂ ಸ್ಪರ್ಧಿಸುತ್ತಿರುವ ಇತರ ಅಂಧಕವೃಷ್ಣಿಗಳಿಗೆ ನಾನು ಏನು ಹೇಳಲಿ?
03019029a ತ್ಯಕ್ತ್ವಾ ರಣಮಿಮಂ ಸೌತೇ ಪೃಷ್ಠತೋಽಭ್ಯಾಹತಃ ಶರೈಃ|
03019029c ತ್ವಯಾಪನೀತೋ ವಿವಶೋ ನ ಜೀವೇಯಂ ಕಥಂ ಚನ||
ಸೌತಿ! ವಿವಶನಾಗಿರುವಾಗ ಈ ರಣವನ್ನು ತ್ಯಜಿಸಿ ನಿನ್ನಿಂದ ಹಿಂದೆ ಕರೆತರಲ್ಪಟ್ಟ ನನ್ನ ಹಿಂದಿನಿಂದ ಬಿದ್ದ ಬಾಣಗಳಿಂದ ನಾನು ಹೇಗೆ ತಾನೇ ಜೀವಿಸಲಿ?
03019030a ಸ ನಿವರ್ತ ರಥೇನಾಶು ಪುನರ್ದಾರುಕನಂದನ|
03019030c ನ ಚೈತದೇವಂ ಕರ್ತವ್ಯಮಥಾಪತ್ಸು ಕಥಂ ಚನ||
ದಾರುಕನಂದನ! ತಕ್ಷಣವೇ ಈ ರಥವನ್ನು ಹಿಂದಿರುಗಿಸು ಮತ್ತು ಇಂಥಹ ಕೆಲಸವನ್ನು ಎಂದೂ ಯಾವುದೇ ಸಂದರ್ಭದಲ್ಲಿಯೂ ಮಾಡಬೇಡ!
03019031a ನ ಜೀವಿತಮಹಂ ಸೌತೇ ಬಹು ಮನ್ಯೇ ಕದಾ ಚನ|
03019031c ಅಪಯಾತೋ ರಣಾದ್ಭೀತಃ ಪೃಷ್ಠತೋಽಭ್ಯಾಹತಃ ಶರೈಃ||
ಸೌತಿ! ಭೀತನಾಗಿ ರಣದಿಂದ ಓಡಿಹೋಗುತ್ತಿರುವಾಗ ಹಿಂದಿನಿಂದ ಶರಗಳ ಪೆಟ್ಟುತಿಂದ ನಾನು ನನ್ನ ಜೀವದ ಕುರಿತು ಎಂದೂ ಆಲೋಚಿಸುವುದಿಲ್ಲ!
03019032a ಕದಾ ವಾ ಸೂತಪುತ್ರ ತ್ವಂ ಜಾನೀಷೇ ಮಾಂ ಭಯಾರ್ದಿತಂ|
03019032c ಅಪಯಾತಂ ರಣಂ ಹಿತ್ವಾ ಯಥಾ ಕಾಪುರುಷಂ ತಥಾ||
ಸೂತಪುತ್ರ! ಕಾಪುರುಷನಂತೆ (ಹೇಡಿಯಂತೆ) ನಾನು ಭಯಾರ್ದಿತನಾಗಿ ರಣವನ್ನು ತೊರೆದು ಓಡಿಹೋಗಿದ್ದುದನ್ನು ನೀನು ಎಂದಾದರೂ ನೋಡಿದ್ದೀಯಾ?
03019033a ನ ಯುಕ್ತಂ ಭವತಾ ತ್ಯಕ್ತುಂ ಸಂಗ್ರಾಮಂ ದಾರುಕಾತ್ಮಜ|
03019033c ಮಯಿ ಯುದ್ಧಾರ್ಥಿನಿ ಭೃಶಂ ಸ ತ್ವಂ ಯಾಹಿ ಯತೋ ರಣಂ||
ದಾರುಕಾತ್ಮಜ! ಯುದ್ಧದಲ್ಲಿ ನನಗೆ ಇನ್ನೂ ಆಸೆಯಿರುವಾಗ ಸಂಗ್ರಾಮವನ್ನು ಬಿಟ್ಟು ಬಂದಿದ್ದುದು ನಿನಗೆ ಯುಕ್ತವಲ್ಲ. ರಣರಂಗಕ್ಕೆ ಹಿಂದಿರುಗು!””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಏಕೋನವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.