ಆರಣ್ಯಕ ಪರ್ವ: ಕೈರಾತ ಪರ್ವ
೧೭
ಸಾಂಬನು ಶಾಲ್ವಸೇನೆಯ ವೇಗವತನೊಡನೆ ಹೋರಾಡಿದ್ದುದು (೧-೨೧). ಚಾರುದೇಷ್ಣ ಮತ್ತು ಅಸುರ ವಿವಿಂಧ್ಯರ ಯುದ್ಧ (೨೨-೨೬). ಶಾಲ್ವನೊಂದಿಗೆ ಪ್ರದ್ಯುಮ್ನನ ಯುದ್ಧಾರಂಭ (೨೭-೩೩).
03017001 ವಾಸುದೇವ ಉವಾಚ|
03017001a ತಾಂ ತೂಪಯಾತ್ವಾ ರಾಜೇಂದ್ರ ಶಾಲ್ವಃ ಸೌಭಪತಿಸ್ತದಾ|
03017001c ಪ್ರಭೂತನರನಾಗೇನ ಬಲೇನೋಪವಿವೇಶ ಹ||
ವಾಸುದೇವನು ಹೇಳಿದನು: “ರಾಜೇಂದ್ರ! ಆದರೆ ಸೌಭಪತಿ ಶಾಲ್ವನು ಸೈನಿಕರು ಮತ್ತು ಆನೆಗಳಿಂದ ತುಂಬಿದ ಸೇನೆಯೊಂದಿಗೆ ನಗರವನ್ನು ಆಕ್ರಮಣಿಸಿದನು.
03017002a ಸಮೇ ನಿವಿಷ್ಟಾ ಸಾ ಸೇನಾ ಪ್ರಭೂತಸಲಿಲಾಶಯೇ|
03017002c ಚತುರಂಗಬಲೋಪೇತಾ ಶಾಲ್ವರಾಜಾಭಿಪಾಲಿತಾ||
ಶಾಲ್ವರಾಜನಿಂದ ಪಾಲಿತ ಆ ಚತುರಂಗಬಲವು ನೀರಿನ ಸೌಲಭ್ಯವು ಚೆನ್ನಾಗಿರುವ ಸಮಪ್ರದೇಶದಲ್ಲಿ ತಂಗಿತು.
03017003a ವರ್ಜಯಿತ್ವಾ ಶ್ಮಶಾನಾನಿ ದೇವತಾಯತನಾನಿ ಚ|
03017003c ವಲ್ಮೀಕಾಂಶ್ಚೈವ ಚೈತ್ಯಾಂಶ್ಚ ತನ್ನಿವಿಷ್ಟಮಭೂದ್ಬಲಂ||
ಶ್ಮಶಾನಗಳನ್ನೂ, ದೇವಾಲಯಗಳನ್ನೂ ಹುತ್ತಗಳನ್ನೂ ಬಿಟ್ಟು ಉಳಿದ ಎಲ್ಲ ಕಡೆ ಅವನ ಸೇನೆಯು ಬೀಳುಬಿಟ್ಟಿತ್ತು.
03017004a ಅನೀಕಾನಾಂ ವಿಭಾಗೇನ ಪಂಥಾನಃ ಷಟ್ಕೃತಾಭವನ್|
03017004c ಪ್ರವಣಾ ನವ ಚೈವಾಸಂ ಶಾಲ್ವಸ್ಯ ಶಿಬಿರೇ ನೃಪ||
ನೃಪ! ಶಾಲ್ವನ ಸೇನಾಶಿಬಿರಗಳು ಅನೇಕ ಭಾಗಗಳಾಗಿ ವಿಭಜನೆಗೊಂಡು ಆರು ಮಾರ್ಗಗಳಲ್ಲಿಯೂ, ಒಂಭತ್ತು ಇಳಿಜಾರುಗಳಲ್ಲಿಯೂ ಹರಡಿಕೊಂಡಿತ್ತು.
03017005a ಸರ್ವಾಯುಧಸಮೋಪೇತಂ ಸರ್ವಶಸ್ತ್ರವಿಶಾರದಂ|
03017005c ರಥನಾಗಾಶ್ವಕಲಿಲಂ ಪದಾತಿಧ್ವಜಸಂಕುಲಂ||
03017006a ತುಷ್ಟಪುಷ್ಟಜನೋಪೇತಂ ವೀರಲಕ್ಷಣಲಕ್ಷಿತಂ|
03017006c ವಿಚಿತ್ರಧ್ವಜಸನ್ನಾಹಂ ವಿಚಿತ್ರರಥಕಾರ್ಮುಕಂ||
03017007a ಸನ್ನಿವೇಶ್ಯ ಚ ಕೌರವ್ಯ ದ್ವಾರಕಾಯಾಂ ನರರ್ಷಭ|
03017007c ಅಭಿಸಾರಯಾಮಾಸ ತದಾ ವೇಗೇನ ಪತಗೇಂದ್ರವತ್||
ಕೌರವ್ಯ! ನರರ್ಷಭ! ಸರ್ವಾಯುಧಗಳಿಂದ ಕೂಡಿದ, ಸರ್ವಶಸ್ತ್ರವಿಶಾರದರನ್ನೂ, ರಥ, ಆನೆ, ಕುದುರೆಗಳಿಂದ ಕೂಡಿದ, ಪದಾತಿ-ಧ್ವಜಸಂಕುಲಗಳನ್ನು, ವೀರಲಕ್ಷಣಗಳಿಂದ ಲಕ್ಷಿತ ತುಷ್ಟಪುಷ್ಟ ಜನರನ್ನೂ, ವಿಚಿತ್ರಧ್ವಜಸನ್ನಾಹಗಳನ್ನೂ, ವಿಚಿತ್ರವಾಗಿ ರಚಿತಗೊಂಡ ರಥಗಳನ್ನೂ, ದ್ವಾರಗಳಲ್ಲಿ ನಿಲ್ಲಿಸಿ, ಪತಗೇಂದ್ರನಂತೆ ವೇಗದಿಂದ ಮುತ್ತಿಗೆಹಾಕಿದನು.
03017008a ತದಾಪತಂತಂ ಸಂದೃಶ್ಯ ಬಲಂ ಶಾಲ್ವಪತೇಸ್ತದಾ|
03017008c ನಿರ್ಯಾಯ ಯೋಧಯಾಮಾಸುಃ ಕುಮಾರಾ ವೃಷ್ಣಿನಂದನಾಃ||
03017009a ಅಸಹಂತೋಽಭಿಯಾನಂ ತಚ್ಶಾಲ್ವರಾಜಸ್ಯ ಕೌರವ|
03017009c ಚಾರುದೇಷ್ಣಶ್ಚ ಸಾಂಬಶ್ಚ ಪ್ರದ್ಯುಮ್ನಶ್ಚ ಮಹಾರಥಃ||
ಶಾಲ್ವಪತಿಯ ಸೇನೆಯ ಆಕ್ರಮಣವನ್ನು ನೋಡಿದ ವೃಷ್ಣಿನಂದನ ಕುಮಾರರು ಯುದ್ಧಕ್ಕೆ ಸಜ್ಜರಾಗಿ ಹೊರಟರು. ಕೌರವ! ಶಾಲ್ವರಾಜನನ್ನು ಎದುರಿಸಿ ಹೋರಾಡಲು ಚಾರುದೇಷ್ಣ, ಸಾಂಬ, ಮತ್ತು ಮಹಾರಥಿ ಪ್ರದ್ಯುಮ್ನರು ಹೊರಟರು.
03017010a ತೇ ರಥೈರ್ದಂಶಿತಾಃ ಸರ್ವೇ ವಿಚಿತ್ರಾಭರಣಧ್ವಜಾಃ|
03017010c ಸಂಸಕ್ತಾಃ ಶಾಲ್ವರಾಜಸ್ಯ ಬಹುಭಿರ್ಯೋಧಪುಂಗವೈಃ||
ಅವರ ವಿಚಿತ್ರ ಆಭರಣ-ಧ್ವಜಗಳಿಂದ ಅಲಂಕೃತ ರಥಗಳಲ್ಲಿ ಸರ್ವರೂ ಶಾಲ್ವರಾಜನ ಬಹುಸಂಖ್ಯೆಯಲ್ಲಿದ್ದ ಯೋಧಪುಂಗವರೊಂದಿಗೆ ಯುದ್ಧ ನಿರತರಾದರು.
03017011a ಗೃಹೀತ್ವಾ ತು ಧನುಃ ಸಾಂಬಃ ಶಾಲ್ವಸ್ಯ ಸಚಿವಂ ರಣೇ|
03017011c ಯೋಧಯಾಮಾಸ ಸಂಹೃಷ್ಟಃ ಕ್ಷೇಮವೃದ್ಧಿಂ ಚಮೂಪತಿಂ||
ಧನುಸ್ಸನ್ನು ಹಿಡಿದು ಸಂತೋಷದಿಂದ ಸಾಂಬನು ಶಾಲ್ವನ ಸಚಿವ, ಚಮೂಪತಿ, ಕ್ಷೇಮವೃದ್ಧಿಯೊಂದಿಗೆ ರಣದಲ್ಲಿ ಹೋರಾಡಿದನು.
03017012a ತಸ್ಯ ಬಾಣಮಯಂ ವರ್ಷಂ ಜಾಂಬವತ್ಯಾಃ ಸುತೋ ಮಹತ್|
03017012c ಮುಮೋಚ ಭರತಶ್ರೇಷ್ಠ ಯಥಾ ವರ್ಷಂ ಸಹಸ್ರದೃಕ್||
ಭರತಶ್ರೇಷ್ಠ! ಜಾಂಬವತಿಯ ಮಗನು ಸಹಸ್ರಾಕ್ಷನು ಮಳೆಯನ್ನು ಸುರಿಸುವಂತೆ ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು.
03017013a ತದ್ಬಾಣವರ್ಷಂ ತುಮುಲಂ ವಿಷೇಹೇ ಸ ಚಮೂಪತಿಃ|
03017013c ಕ್ಷೇಮವೃದ್ಧಿರ್ಮಹಾರಾಜ ಹಿಮವಾನಿವ ನಿಶ್ಚಲಃ||
ಮಹಾರಾಜ! ಆ ಚಮೂಪತಿ ಕ್ಷೇಮವೃದ್ಧಿಯಾದರೂ ಅವನ ಬಾಣಗಳ ಮಳೆಯ ತುಮುಲವನ್ನು ಸಹಿಸಿಕೊಂಡು ಹಿಮವತ್ಪರ್ವತದಂತೆ ನಿಶ್ಚಲವಾಗಿ ನಿಂತನು.
03017014a ತತಃ ಸಾಂಬಾಯ ರಾಜೇಂದ್ರ ಕ್ಷೇಮವೃದ್ಧಿರಪಿ ಸ್ಮ ಹ|
03017014c ಮುಮೋಚ ಮಾಯಾವಿಹಿತಂ ಶರಜಾಲಂ ಮಹತ್ತರಂ||
03017015a ತತೋ ಮಾಯಾಮಯಂ ಜಾಲಂ ಮಾಯಯೈವ ವಿದಾರ್ಯ ಸಃ|
03017015c ಸಾಂಬಃ ಶರಸಹಸ್ರೇಣ ರಥಮಸ್ಯಾಭ್ಯವರ್ಷತ||
ರಾಜೇಂದ್ರ! ಆಗ ಕ್ಷೇಮವೃದ್ಧಿಯೂ ಸಹ ಸಾಂಬನ ಮೇಲೆ ಮಯಾವಿಹಿತ ಮಹತ್ತರ ಶರಜಾಲವನ್ನು ಬಿಟ್ಟನು. ನಂತರ ಆ ಮಾಯಾಜಾಲವನ್ನು ತನ್ನದೇ ಮಾಯೆಯಿಂದ ತುಂಡುಮಾಡಿ, ಸಾಂಬನು ಅವನ ರಥದ ಮೇಲೆ ಸಹಸ್ರ ಶರಗಳ ಮಳೆಯನ್ನೇ ಸುರಿಸಿದನು.
03017016a ತತಃ ಸ ವಿದ್ಧಃ ಸಾಂಬೇನ ಕ್ಷೇಮವೃದ್ಧಿಶ್ಚಮೂಪತಿಃ|
03017016c ಅಪಾಯಾಜ್ಜವನೈರಶ್ವೈಃ ಸಾಂಬಬಾಣಪ್ರಪೀಡಿತಃ||
ಸಾಂಬನಿಂದ ಹೊಡೆತತಿಂದ ಆ ಚಮೂಪತಿ ಕ್ಷೇಮವೃದ್ಧಿಯು ಸಾಂಬನ ಬಾಣಗಳಿಂದ ಪೀಡಿತನಾಗಿ ವೇಗವಾಗಿ ಅಶ್ವಗಳನ್ನು ಹಿಂದೆ ಸರಿಸಿದನು.
03017017a ತಸ್ಮಿನ್ವಿಪ್ರದ್ರುತೇ ಕ್ರೂರೇ ಶಾಲ್ವಸ್ಯಾಥ ಚಮೂಪತೌ|
03017017c ವೇಗವಾನ್ನಾಮ ದೈತೇಯಃ ಸುತಂ ಮೇಽಭ್ಯದ್ರವದ್ಬಲೀ||
ಶಾಲ್ವನ ಆ ಕ್ರೂರ ಚಮೂಪತಿಯು ಪಲಾಯನ ಮಾಡಲು ವೇಗವಾನ್ ಎಂಬ ಹೆಸರಿನ ಬಲಶಾಲಿ ದೈತ್ಯನು ನನ್ನ ಮಗನ ಮೇಲೆ ಆಕ್ರಮಣ ಮಾಡಿದನು.
03017018a ಅಭಿಪನ್ನಸ್ತು ರಾಜೇಂದ್ರ ಸಾಂಬೋ ವೃಷ್ಣಿಕುಲೋದ್ವಹಃ|
03017018c ವೇಗಂ ವೇಗವತೋ ರಾಜಂಸ್ತಸ್ಥೌ ವೀರೋ ವಿಧಾರಯನ್||
ರಾಜನ್! ರಾಜೇಂದ್ರ! ಆಕ್ರಮಣಕ್ಕೊಳಗಾದ ವೃಷ್ಣಿಕುಲೋದ್ದಹ ವೀರ ಸಾಂಬನು ವೇಗದಿಂದ ಬರುತ್ತಿದ್ದ ವೇಗವತನನ್ನು ಎದುರಿಸಿ ನಿಂತನು.
03017019a ಸ ವೇಗವತಿ ಕೌಂತೇಯ ಸಾಂಬೋ ವೇಗವತೀಂ ಗದಾಂ|
03017019c ಚಿಕ್ಷೇಪ ತರಸಾ ವೀರೋ ವ್ಯಾವಿಧ್ಯ ಸತ್ಯವಿಕ್ರಮಃ||
ಕೌಂತೇಯ! ವೀರ ಸತ್ಯವಿಕ್ರಮ ಸಾಂಬನು ವೇಗವತನ ಮೇಲೆ ವೇಗದಿಂದ ತನ್ನ ಗದೆಯನ್ನು ಬೀಸಿ ಎಸೆದು ತಕ್ಷಣವೇ ಅವನನ್ನು ಘಾತಿಗೊಳಿಸಿದನು.
03017020a ತಯಾ ತ್ವಭಿಹತೋ ರಾಜನ್ವೇಗವಾನಪತದ್ಭುವಿ|
03017020c ವಾತರುಗ್ಣ ಇವ ಕ್ಷುಣ್ಣೋ ಜೀರ್ಣಮೂಲೋ ವನಸ್ಪತಿಃ||
ರಾಜನ್! ಅವನಿಂದ ಹೊಡೆತತಿಂದ ವೇಗವಾನನು, ಬೇರುಗಳು ಜೀರ್ಣವಾಗಿದ್ದ ವನಸ್ಪತಿಯು ಭಿರುಗಾಳಿಗೆ ಸಿಲುಕಿ ಬೀಳುವಂತೆ ನೆಲದ ಮೇಲೆ ವೇಗದಿಂದ ಉರುಳಿದನು.
03017021a ತಸ್ಮಿನ್ನಿಪತಿತೇ ವೀರೇ ಗದಾನುನ್ನೇ ಮಹಾಸುರೇ|
03017021c ಪ್ರವಿಶ್ಯ ಮಹತೀಂ ಸೇನಾಂ ಯೋಧಯಾಮಾಸ ಮೇ ಸುತಃ||
ಗದಾಪ್ರಹಾರಕ್ಕೆ ಸಿಲುಕಿದ ಆ ವೀರ ಮಹಾ ಅಸುರನು ಕೆಳಗೆ ಬೀಳಲು ನನ್ನ ಮಗನು ಮಹಾ ಸೇನೆಯೊಂದಿಗೆ ಯುದ್ಧಕ್ಕೆ ಪ್ರವೇಶಮಾಡಿದನು.
03017022a ಚಾರುದೇಷ್ಣೇನ ಸಂಸಕ್ತೋ ವಿವಿಂಧ್ಯೋ ನಾಮ ದಾನವಃ|
03017022c ಮಹಾರಥಃ ಸಮಾಜ್ಞಾತೋ ಮಹಾರಾಜ ಮಹಾಧನುಃ||
03017023a ತತಃ ಸುತುಮುಲಂ ಯುದ್ಧಂ ಚಾರುದೇಷ್ಣವಿವಿಂಧ್ಯಯೋಃ|
03017023c ವೃತ್ರವಾಸವಯೋ ರಾಜನ್ಯಥಾ ಪೂರ್ವಂ ತಥಾಭವತ್||
ಮಹಾರಾಜ! ಮಹಾರಥಿ ಮತ್ತು ಮಹಾಧನ್ವಿಯೆಂದು ತಿಳಿಯಲ್ಪಟ್ಟ ವಿವಿಂಧ್ಯ ಎನ್ನುವ ಹೆಸರಿನ ದಾನವನು ಚಾರುದೇಷ್ಣನೊಂದಿಗೆ ಯುದ್ಧದಲ್ಲಿ ತೊಡಗಿದನು. ರಾಜನ್! ಆಗ ಹಿಂದೆ ವೃತ್ರ ಮತ್ತು ವಾಸವರ ಮಧ್ಯೆ ಹೇಗೆ ನಡೆಯಿತೋ ಹಾಗೆ ಚಾರುದೇಷ್ಣ ಮತ್ತು ವಿವಿಂಧ್ಯರ ನಡುವೆ ತುಮುಲ ಯುದ್ಧವು ನಡೆಯಿತು.
03017024a ಅನ್ಯೋನ್ಯಸ್ಯಾಭಿಸಂಕ್ರುದ್ಧಾವನ್ಯೋನ್ಯಂ ಜಘ್ನತುಃ ಶರೈಃ|
03017024c ವಿನದಂತೌ ಮಹಾರಾಜ ಸಿಂಹಾವಿವ ಮಹಾಬಲೌ||
ಅವರು ಅನ್ಯೋನ್ಯರಲ್ಲಿ ಕೋಪಗೊಂಡು ಅನ್ಯೋನ್ಯರನ್ನು ಶರಗಳಿಂದ ಗಾಯಗೊಳಿಸಿದರು ಮತ್ತು ಮಹಾರಾಜ! ಅವರೀರ್ವರು ಮಹಾಬಲರೂ ಸಿಂಹಗಳಂತೆ ಘರ್ಜಿಸಿದರು.
03017025a ರೌಕ್ಮಿಣೇಯಸ್ತತೋ ಬಾಣಮಗ್ನ್ಯರ್ಕೋಪಮವರ್ಚಸಂ|
03017025c ಅಭಿಮಂತ್ರ್ಯ ಮಹಾಸ್ತ್ರೇಣ ಸಂದಧೇ ಶತ್ರುನಾಶನಂ||
ರುಕ್ಮಿಣಿಯ ಮಗನು ಅಗ್ನಿ ಮತ್ತು ಅರ್ಕನ ವರ್ಚಸ್ಸಿಗೆ ಸಮನಾದ ಬಾಣವನ್ನು ಅಭಿಮಂತ್ರಿಸಿ, ಶತ್ರುಗಳನ್ನು ನಾಶಪಡಿಸಬಲ್ಲ ಮಹಾಸ್ತ್ರವನ್ನು ಧನುಸ್ಸಿಗೆ ಸಂಧಿಸಿದನು.
03017026a ಸ ವಿವಿಂಧ್ಯಾಯ ಸಕ್ರೋಧಃ ಸಮಾಹೂಯ ಮಹಾರಥಃ|
03017026c ಚಿಕ್ಷೇಪ ಮೇ ಸುತೋ ರಾಜನ್ಸ ಗತಾಸುರಥಾಪತತ್||
ರಾಜನ್! ವಿವಿಂಧ್ಯನ ಮೇಲೆ ಸಂಕೃದ್ಧನಾದ ನನ್ನ ಮಗ ಮಹಾರಥಿಯು ಅದನ್ನು ಅ ಅಸುರನ ಮೇಲೆ ಎಸೆಯಲು ಅವನು ಅಸುನೀಗಿ ಬಿದ್ದನು.
03017027a ವಿವಿಂಧ್ಯಂ ನಿಹತಂ ದೃಷ್ಟ್ವಾ ತಾಂ ಚ ವಿಕ್ಷೋಭಿತಾಂ ಚಮೂಂ|
03017027c ಕಾಮಗೇನ ಸ ಸೌಭೇನ ಶಾಲ್ವಃ ಪುನರುಪಾಗಮತ್||
ವಿವಿಂಧ್ಯನು ಮರಣಹೊಂದಿದನ್ನು ಮತ್ತು ಸೈನ್ಯವು ಚದುರಿ ಹೋಗುತ್ತಿರುವುದನ್ನು ನೋಡಿದ ಶಾಲ್ವನು ಬೇಕಾದಲ್ಲಿ ಹೋಗಬಲ್ಲ ಸೌಭವನ್ನು ಏರಿ ಹಿಂದಿರುಗಿದನು.
03017028a ತತೋ ವ್ಯಾಕುಲಿತಂ ಸರ್ವಂ ದ್ವಾರಕಾವಾಸಿ ತದ್ಬಲಂ|
03017028c ದೃಷ್ಟ್ವಾ ಶಾಲ್ವಂ ಮಹಾಬಾಹೋ ಸೌಭಸ್ಥಂ ಪೃಥಿವೀಗತಂ||
ದ್ವಾರಕಾವಾಸಿ ಆ ಸೇನೆಯಲ್ಲಿ ಎಲ್ಲರೂ ಸೌಭವನ್ನೇರಿ ಭೂಮಿಯ ಕಡೆ ಬರುತ್ತಿದ್ದ ಮಹಾಬಾಹು ಶಾಲ್ವನನ್ನು ನೋಡಿ ವ್ಯಾಕುಲಗೊಂಡರು.
03017029a ತತೋ ನಿರ್ಯಾಯ ಕೌಂತೇಯ ವ್ಯವಸ್ಥಾಪ್ಯ ಚ ತದ್ಬಲಂ|
03017029c ಆನರ್ತಾನಾಂ ಮಹಾರಾಜ ಪ್ರದ್ಯುಮ್ನೋ ವಾಕ್ಯಮಬ್ರವೀತ್||
ಕೌಂತೇಯ! ಮಹಾರಾಜ! ಆಗ ಆನರ್ತರ ಆ ಬಲವನ್ನು ವ್ಯವಸ್ಥೆಯಲ್ಲಿ ತರಲು ಹೊರಟ ಪ್ರದ್ಯುಮ್ನನು ಹೇಳಿದನು:
03017030a ಸರ್ವೇ ಭವಂತಸ್ತಿಷ್ಠಂತು ಸರ್ವೇ ಪಶ್ಯಂತು ಮಾಂ ಯುಧಿ|
03017030c ನಿವಾರಯಂತಂ ಸಂಗ್ರಾಮೇ ಬಲಾತ್ಸೌಭಂ ಸರಾಜಕಂ||
“ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ನಿಂತು ನಾನು ಸಂಗ್ರಾಮದಲ್ಲಿ ಬಲದಿಂದ ಯುದ್ಧಮಾಡಿ ರಾಜನೊಂದಿಗೆ ಸೌಭವನ್ನು ತಡೆಹಿಡಿಯುವುದನ್ನು ನೋಡಿ!
03017031a ಅಹಂ ಸೌಭಪತೇಃ ಸೇನಾಮಾಯಸೈರ್ಭುಜಗೈರಿವ|
03017031c ಧನುರ್ಭುಜವಿನಿರ್ಮುಕ್ತೈರ್ನಾಶಯಾಮ್ಯದ್ಯ ಯಾದವಾಃ||
ಯಾದವರೇ! ಇಂದು ನಾನು ಸೌಭಪತಿಯ ಈ ಸೇನೆಯನ್ನು ನನ್ನ ಧನುಸ್ಸಿನ ಭುಜದಿಂದ ಬಿಡಲ್ಪಟ್ಟ ಸರ್ಪಗಳಂತಿರುವ ಕಬ್ಬಿಣದ ಬಾಣಗಳಿಂದ ನಾಶಪಡಿಸುತ್ತೇನೆ!
03017032a ಆಶ್ವಸಧ್ವಂ ನ ಭೀಃ ಕಾರ್ಯಾ ಸೌಭರಾಡದ್ಯ ನಶ್ಯತಿ|
03017032c ಮಯಾಭಿಪನ್ನೋ ದುಷ್ಟಾತ್ಮಾ ಸಸೌಭೋ ವಿನಶಿಷ್ಯತಿ||
ಉಸಿರಾಡಿ! ಭಯಪಡಬೇಡಿ! ಇಂದು ಸೌಭರಾಜನು ನಾಶಹೊಂದುತ್ತಾನೆ. ನನ್ನಿಂದ ಹೊಡೆತತಿಂದು ಆ ದುಷ್ಟಾತ್ಮನು ಸೌಭದೊಂದಿಗೆ ವಿನಾಶಹೊಂದುತ್ತಾನೆ.”
03017033a ಏವಂ ಬ್ರುವತಿ ಸಂಹೃಷ್ಟೇ ಪ್ರದ್ಯುಮ್ನೇ ಪಾಂಡುನಂದನ|
03017033c ವಿಷ್ಠಿತಂ ತದ್ಬಲಂ ವೀರ ಯುಯುಧೇ ಚ ಯಥಾಸುಖಂ||
ವೀರ! ಪಾಂಡುನಂದನ! ಹೀಗೆ ಸಂಹೃಷ್ಟನಾಗಿ ಪ್ರದ್ಯುಮ್ನನು ಕೂಗಿ ಹೇಳಲು ಅವನ ಸೇನೆಯು ತನ್ನ ಸ್ಥಾನದಲ್ಲಿಯೇ ನಿಂತು ಉತ್ತಮ ಹೋರಾಟವನ್ನು ನೀಡಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಸಪ್ತದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನೇಳನೆಯ ಅಧ್ಯಾಯವು.