|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ಅನುದ್ಯೂತ ಪರ್ವ
೬೬
ಯುಧಿಷ್ಠಿರನನ್ನು ಪುನಃ ದ್ಯೂತಕ್ಕೆ ಕರೆದುದು
ಧೃತರಾಷ್ಟ್ರನು ಪಾಂಡವರಿಗೆ ಗೆದ್ದ ರಾಜ್ಯವನ್ನು ಹಿಂದಿರುಗಿಸಿದುದನ್ನು ದುಃಶಾಸನನು ಅಣ್ಣನಿಗೆ ಹೇಳುವುದು (೧-೪). ದುರ್ಯೋಧನನು ಮಿತ್ರರೊಂದಿಗೆ ಸಮಾಲೋಚಿಸಿ, ಧೃತರಾಷ್ಟ್ರನಿಗೆ ಪಾಂಡವರನ್ನು ಪುನಃ ದ್ಯೂತಕ್ಕೆ ಕರೆಯಿಸಲು ಹೇಳುವುದು (೫-೨೩). ಧೃತರಾಷ್ಟ್ರನು ಮರುದ್ಯೂತಕ್ಕೆ ಅಪ್ಪಣೆಯನ್ನು ನೀಡುವುದು (೨೪). ಸಭಾಸದರು ಮರುದ್ಯೂತವು ಬೇಡವೆನ್ನುವುದು (೨೫-೨೭). ಗಾಂಧಾರಿಯು ಧೃತರಾಷ್ಟ್ರನಿಗೆ ಮರುದ್ಯೂತದ ವಿರುದ್ಧ ಸಲಹೆ ನೀಡುವುದು (೨೮-೩೫). ಎಲ್ಲರ ಸಲಹೆಗಳನ್ನೂ ತಿರಸ್ಕರಿಸಿ ರಾಜನು ಮರುದ್ಯೂತಕ್ಕೆ ಆಜ್ಞೆಯನ್ನು ಮಾಡುವುದು (೩೬-೩೭).
02066001 ಜನಮೇಜಯ ಉವಾಚ|
02066001a ಅನುಜ್ಞಾತಾಂಸ್ತಾನ್ವಿದಿತ್ವಾ ಸರತ್ನಧನಸಂಚಯಾನ್|
02066001c ಪಾಂಡವಾನ್ಧಾರ್ತರಾಷ್ಟ್ರಾಣಾಂ ಕಥಮಾಸೀನ್ಮನಸ್ತದಾ||
ಜನಮೇಜಯನು ಹೇಳಿದನು: “ಪಾಂಡವರಿಗೆ ರತ್ನಧನಸಂಚಯದ ಜೊತೆಗೆ ಹೋಗಲು ಅಪ್ಪಣೆ ಸಿಕ್ಕಿತು ಎಂದು ತಿಳಿದ ನಂತರ ಧಾರ್ತರಾಷ್ಟ್ರರಿಗೆ ಹೇಗನ್ನಿಸಿತು?”
02066002 ವೈಶಂಪಾಯನ ಉವಾಚ|
02066002a ಅನುಜ್ಞಾತಾಂಸ್ತಾನ್ವಿದಿತ್ವಾ ಧೃತರಾಷ್ಟ್ರೇಣ ಧೀಮತಾ|
02066002c ರಾಜನ್ದುಃಶಾಸನಃ ಕ್ಷಿಪ್ರಂ ಜಗಾಮ ಭ್ರಾತರಂ ಪ್ರತಿ||
ವೈಶಂಪಾಯನನು ಹೇಳಿದನು: “ರಾಜನ್! ಧೀಮತ ಧೃತರಾಷ್ಟ್ರನು ಅವರಿಗೆ ಹೋಗಲು ಅನುಮತಿಯನ್ನು ಕೊಟ್ಟ ಎಂದು ತಿಳಿದಾಕ್ಷಣವೇ ದುಃಶಾಸನನು ಅಣ್ಣನ ಬಳಿ ಹೋದನು.
02066003a ದುರ್ಯೋಧನಂ ಸಮಾಸಾದ್ಯ ಸಾಮಾತ್ಯಂ ಭರತರ್ಷಭ|
02066003c ದುಃಖಾರ್ತೋ ಭರತಶ್ರೇಷ್ಠ ಇದಂ ವಚನಮಬ್ರವೀತ್||
ಭರತರ್ಷಭ! ಭರತಶ್ರೇಷ್ಠ! ಅಲ್ಲಿ ಅಮಾತ್ಯರ ಜೊತೆಗಿದ್ದ ದುರ್ಯೋಧನನ್ನು ಭೆಟ್ಟಿಯಾಗಿ ದುಃಖಾರ್ತನಾಗಿ ಹೇಳಿದನು:
02066004a ದುಃಖೇನೈತತ್ಸಮಾನೀತಂ ಸ್ಥವಿರೋ ನಾಶಯತ್ಯಸೌ|
02066004c ಶತ್ರುಸಾದ್ಗಮಯದ್ದ್ರವ್ಯಂ ತದ್ಬುಧ್ಯಧ್ವಂ ಮಹಾರಥಾಃ||
“ಕಷ್ಟಪಟ್ಟು ಗಳಿಸಿದ ಎಲ್ಲವನ್ನೂ ಆ ಮುದುಕನು ನಾಶಮಾಡಿಬಿಟ್ಟನಲ್ಲ! ಎಲ್ಲ ಸಂಪತ್ತನ್ನೂ ಶತ್ರುಗಳಿಗೆ ಹೋಗುವ ಹಾಗೆ ಮಾಡಿದ್ದಾನೆ. ಮಹಾರಥಿಗಳೇ! ಇದನ್ನು ಯೋಚಿಸಿ.”
02066005a ಅಥ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ|
02066005c ಮಿಥಃ ಸಂಗಮ್ಯ ಸಹಿತಾಃ ಪಾಂಡವಾನ್ಪ್ರತಿ ಮಾನಿನಃ||
02066006a ವೈಚಿತ್ರವೀರ್ಯಂ ರಾಜಾನಂ ಧೃತರಾಷ್ಟ್ರಂ ಮನೀಷಿಣಂ|
02066006c ಅಭಿಗಮ್ಯ ತ್ವರಾಯುಕ್ತಾಃ ಶ್ಲಕ್ಷ್ಣಂ ವಚನಮಬ್ರುವನ್||
ಆಗ ಮಾನಿನ ದುರ್ಯೋಧನನು ಕರ್ಣ ಮತ್ತು ಸೌಬಲ ಶಕುನಿಯರೊಡಗೂಡಿ ಒಟ್ಟಿಗೇ ಪಾಂಡವರ ಪ್ರತಿ ಸಂಚು ಹೂಡಿದನು. ಅವರು ಅವಸರ ಮಾಡಿ ವೈಚಿತ್ರವೀರ್ಯ ಮನೀಷಿಣಿ ರಾಜ ಧೃತರಾಷ್ಟ್ರನಲ್ಲಿಗೆ ಹೋಗಿ ಮೃದು ಮಾತುಗಳಿಂದ ಹೇಳಿದರು:
02066007 ದುರ್ಯೋಧನ ಉವಾಚ|
02066007a ನ ತ್ವಯೇದಂ ಶ್ರುತಂ ರಾಜನ್ಯಜ್ಜಗಾದ ಬೃಹಸ್ಪತಿಃ|
02066007c ಶಕ್ರಸ್ಯ ನೀತಿಂ ಪ್ರವದನ್ವಿದ್ವಾನ್ದೇವಪುರೋಹಿತಃ||
ದುರ್ಯೋಧನನು ಹೇಳಿದನು: “ರಾಜನ್! ದೇವಪುರೋಹಿತ ವಿದ್ವಾನ್ ಬೃಹಸ್ಪತಿಯು ಶಕ್ರ ನೀತಿಯನ್ನು ಪ್ರತಿಪಾದಿಸುತ್ತಾ ಏನು ಹೇಳಿದನೆಂದು ನೀನು ಕೇಳಿಲ್ಲವೇ?
02066008a ಸರ್ವೋಪಾಯೈರ್ನಿಹಂತವ್ಯಾಃ ಶತ್ರವಃ ಶತ್ರುಕರ್ಷಣ|
02066008c ಪುರಾ ಯುದ್ಧಾದ್ಬಲಾದ್ವಾಪಿ ಪ್ರಕುರ್ವಂತಿ ತವಾಹಿತಂ||
ಶತ್ರುಕರ್ಷಣ! ಶತ್ರುಗಳು ಯುದ್ಧ ಅಥವಾ ಬಲವನ್ನುಪಯೋಗಿಸಿ ನಿನಗೆ ಹಾನಿಯನ್ನುಂಟುಮಾಡುವ ಮೊದಲೇ ಎಲ್ಲ ಉಪಾಯಗಳನ್ನೂ ಬಳಸಿ ಅವರನ್ನು ಬಗ್ಗಿಸಬೇಕು.
02066009a ತೇ ವಯಂ ಪಾಂಡವಧನೈಃ ಸರ್ವಾನ್ಸಂಪೂಜ್ಯ ಪಾರ್ಥಿವಾನ್|
02066009c ಯದಿ ತಾನ್ಯೋಧಯಿಷ್ಯಾಮಃ ಕಿಂ ವಾ ನಃ ಪರಿಹಾಸ್ಯತಿ||
ಪಾಂಡವರ ಧನದಿಂದ ನಾವು ಸರ್ವ ಪಾರ್ಥಿವರನ್ನೂ ಮೆಚ್ಚಿಸಿ ನಂತರ ನಾವು ಅವರ ಮೇಲೆ ಆಕ್ರಮಣ ಮಾಡಿದರೆ ನಾವು ಸೋಲುವುದೇ ಇಲ್ಲ.
02066010a ಅಹೀನಾಶೀವಿಷಾನ್ಕ್ರುದ್ಧಾನ್ದಂಶಾಯ ಸಮುಪಸ್ಥಿತಾನ್|
02066010c ಕೃತ್ವಾ ಕಂಠೇ ಚ ಪೃಷ್ಠೇ ಚ ಕಃ ಸಮುತ್ಸ್ರಷ್ಟುಮರ್ಹತಿ||
ಆದರೆ ಸಿಟ್ಟಿಗೆದ್ದು ಕಚ್ಚಲು ಸಿದ್ಧವಾದ ವಿಷಭರಿತ ಸರ್ಪವನ್ನು ತನ್ನ ಬೆನ್ನಮೇಲೆ ಹಾಕಿಕೊಂಡು ಕುತ್ತಿಗೆಗೆ ಸುತ್ತಿಕೊಂಡರೆ ಅದರಿಂದ ಬಿಡುಗಡೆ ಹೊಂದುವುದಾದರೂ ಹೇಗೆ?
02066011a ಆತ್ತಶಸ್ತ್ರಾ ರಥಗತಾಃ ಕುಪಿತಾಸ್ತಾತ ಪಾಂಡವಾಃ|
02066011c ನಿಃಶೇಷಂ ನಃ ಕರಿಷ್ಯಂತಿ ಕ್ರುದ್ಧಾ ಹ್ಯಾಶೀವಿಷಾ ಯಥಾ||
ತಾತ! ಕುಪಿತ ಪಾಂಡವರು ಶಸ್ತ್ರಗಳನ್ನು ಪಡೆದು ರಥವನ್ನೇರಿದ್ದಾರೆ. ಕೃದ್ಧ ವಿಷಸರ್ಪದಂತೆ ಅವರು ನಮ್ಮನ್ನು ನಿಶ್ಯೇಷ ನಾಶಪಡಿಸುತ್ತಾರೆ.
02066012a ಸನ್ನದ್ಧೋ ಹ್ಯರ್ಜುನೋ ಯಾತಿ ವಿವೃತ್ಯ ಪರಮೇಷುಧೀ|
02066012c ಗಾಂಡೀವಂ ಮುಹುರಾದತ್ತೇ ನಿಃಯ್ವಸಂಶ್ಚ ನಿರೀಕ್ಷತೇ||
ಅರ್ಜುನನು ತನ್ನ ಎರಡು ಬತ್ತಳಿಕೆಗಳನ್ನು ತೆರೆದು ಮತ್ತೆ ಮತ್ತೆ ಗಾಂಡೀವವನ್ನೆತ್ತಿಕೊಂಡು ನಿಟ್ಟಿಸುರು ಬಿಡುತ್ತಾ ಸುತ್ತಲೂ ನೋಡುತ್ತಿದ್ದಾನೆ.
02066013a ಗದಾಂ ಗುರ್ವೀಂ ಸಮುದ್ಯಮ್ಯ ತ್ವರಿತಶ್ಚ ವೃಕೋದರಃ|
02066013c ಸ್ವರಥಂ ಯೋಜಯಿತ್ವಾಶು ನಿರ್ಯಾತ ಇತಿ ನಃ ಶ್ರುತಂ||
ವೃಕೋದರನು ಭಾರೀ ಗದೆಯನ್ನು ವೇಗವಾಗಿ ಮೇಲೆತ್ತಿ ಕಟ್ಟಿದ ಸ್ವರಥದಲ್ಲಿ ಹೊರಡುತ್ತಿದ್ದಾನೆ ಎಂದು ಕೇಳಿದೆವು.
02066014a ನಕುಲಃ ಖಡ್ಗಮಾದಾಯ ಚರ್ಮ ಚಾಪ್ಯಷ್ಟಚಂದ್ರಕಂ|
02066014c ಸಹದೇವಶ್ಚ ರಾಜಾ ಚ ಚಕ್ರುರಾಕಾರಮಿಂಗಿತೈಃ||
ನಕುಲನು ಅಷ್ಟಚಂದ್ರಕ ಗುರಾಣಿ ಮತ್ತು ಖಡ್ಗವನ್ನು ಹಿಡಿದಿದ್ದಾನೆ. ರಾಜ ಮತ್ತು ಸಹದೇವರು ತಮ್ಮ ಇಂಗಿತಗಳನ್ನು ಬಹಿರಂಗಪಡಿಸುತ್ತಿದ್ದಾರೆ.
02066015a ತೇ ತ್ವಾಸ್ಥಾಯ ರಥಾನ್ಸರ್ವೇ ಬಹುಶಸ್ತ್ರಪರಿಚ್ಛದಾನ್|
02066015c ಅಭಿಘ್ನಂತೋ ರಥವ್ರಾತಾನ್ಸೇನಾಯೋಗಾಯ ನಿರ್ಯಯುಃ||
ಬಹಳಷ್ಟು ಶಸ್ತ್ರಸಮೇತರಾಗಿ ಅವರೆಲ್ಲರೂ ರಥಗಳನ್ನೇರಿ ರಥಗಳಿಗೆ ಕಟ್ಟಿದ ಕುದುರೆಗಳನ್ನು ಹೊಡೆಯುತ್ತಾ ಸೇನೆಗಳನ್ನು ಒಟ್ಟುಗೂಡಿಸಲು ಹೊರಟಿದ್ದಾರೆ.
02066016a ನ ಕ್ಷಂಸ್ಯಂತೇ ತಥಾಸ್ಮಾಭಿರ್ಜಾತು ವಿಪ್ರಕೃತಾ ಹಿ ತೇ|
02066016c ದ್ರೌಪದ್ಯಾಶ್ಚ ಪರಿಕ್ಲೇಶಂ ಕಸ್ತೇಷಾಂ ಕ್ಷಂತುಮರ್ಹತಿ||
ನಾವು ಅವರನ್ನು ಅವಮಾನಿಸಿದ್ದೇವೆ. ಅವರು ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ. ಅವರಲ್ಲಿ ಯಾರುತಾನೆ ದ್ರೌಪದಿಯ ಅಪಮಾನವನ್ನು ಕ್ಷಮಿಸಿಯಾರು?
02066017a ಪುನರ್ದೀವ್ಯಾಮ ಭದ್ರಂ ತೇ ವನವಾಸಾಯ ಪಾಂಡವೈಃ|
02066017c ಏವಮೇತಾನ್ವಶೇ ಕರ್ತುಂ ಶಕ್ಷ್ಯಾಮೋ ಭರತರ್ಷಭ||
ಭರತರ್ಷಭ! ನಿನಗೆ ಮಂಗಳವಾಗಲಿ! ಪಾಂಡವರ ವನವಾಸಕ್ಕಾಗಿ ಇನ್ನೊಮ್ಮೆ ಜೂಜಾಡಬೇಕು. ಹೀಗೆ ಮಾತ್ರ ನಾವು ಅವರನ್ನು ವಶಪಡಿಸಿಕೊಳ್ಳಲು ಸಾಧ್ಯ.
02066018a ತೇ ವಾ ದ್ವಾದಶ ವರ್ಷಾಣಿ ವಯಂ ವಾ ದ್ಯೂತನಿರ್ಜಿತಾಃ|
02066018c ಪ್ರವಿಶೇಮ ಮಹಾರಣ್ಯಮಜಿನೈಃ ಪ್ರತಿವಾಸಿತಾಃ||
ಅವರಾಗಲೀ ನಾವಾಗಲೀ ಯಾರು ದ್ಯೂತದಲ್ಲಿ ಸೋಲುತ್ತಾರೋ ಅವರು ಹನ್ನೆರಡು ವರ್ಷಗಳು ಮಹಾರಣ್ಯವನ್ನು ಪ್ರವೇಶಿಸಿ ಜಿನಧಾರಿಗಳಾಗಿ ವಾಸಿಸಬೇಕು.
02066019a ತ್ರಯೋದಶಂ ಚ ಸಜನೇ ಅಜ್ಞಾತಾಃ ಪರಿವತ್ಸರಂ|
02066019c ಜ್ಞಾತಾಶ್ಚ ಪುನರನ್ಯಾನಿ ವನೇ ವರ್ಷಾಣಿ ದ್ವಾದಶ||
ಹದಿಮೂರನೆಯ ವರ್ಷ ಜನಮದ್ಯದಲ್ಲಿ ಅಜ್ಞಾತರಾಗಿ ಇರಬೇಕು. ಒಂದುವೇಳೆ ಕಂಡುಹಿಡಿಯಲ್ಪಟ್ಟರೆ, ವನದಲ್ಲಿ ಪುನಃ ಹನ್ನೆರಡು ವರ್ಷಗಳನ್ನು ಕಳೆಯಬೇಕು.
02066020a ನಿವಸೇಮ ವಯಂ ತೇ ವಾ ತಥಾ ದ್ಯೂತಂ ಪ್ರವರ್ತತಾಂ|
02066020c ಅಕ್ಷಾನುಪ್ತ್ವಾ ಪುನರ್ದ್ಯೂತಮಿದಂ ದೀವ್ಯಂತು ಪಾಂಡವಾಃ||
ನಾವು ಅಥವಾ ಅವರು ಉಳಿದುಕೊಳ್ಳಬೇಕು. ಹಾಗೆ ದ್ಯೂತವು ನಡೆಯಲಿ. ಇದನ್ನು ಪಣವಾಗಿಟ್ಟು ಪಾಂಡವರು ದಾಳಗಳನ್ನು ಎಸೆದು ಜೂಜಾಡಲಿ.
02066021a ಏತತ್ಕೃತ್ಯತಮಂ ರಾಜನ್ನಸ್ಮಾಕಂ ಭರತರ್ಷಭ|
02066021c ಅಯಂ ಹಿ ಶಕುನಿರ್ವೇದ ಸವಿದ್ಯಾಮಕ್ಷಸಂಪದಂ||
ಭರತರ್ಷಭ! ರಾಜನ್! ಇದು ನಾವು ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ. ಅಕ್ಷವಿದ್ಯೆಯನ್ನು ತಿಳಿದಿರುವ ಈ ಶಕುನಿಯು ನಮ್ಮ ಸಂಪನ್ಮೂಲ ವ್ಯಕ್ತಿ.
02066022a ದೃಢಮೂಲಾ ವಯಂ ರಾಜ್ಯೇ ಮಿತ್ರಾಣಿ ಪರಿಗೃಹ್ಯ ಚ|
02066022c ಸಾರವದ್ವಿಪುಲಂ ಸೈನ್ಯಂ ಸತ್ಕೃತ್ಯ ಚ ದುರಾಸದಂ||
ಮಿತ್ರರನ್ನು ಸಂಪಾದಿಸಿ, ದುರಾಸದ, ಶಕ್ತಿಯುತ ಸೈನ್ಯವನ್ನು ಬೆಳೆಸಿ ನಾವು ನಮ್ಮ ರಾಜ್ಯದಲ್ಲಿ ದೃಢ ನೆಲೆಯನ್ನು ಸಾಧಿಸಬಲ್ಲೆವು.
02066023a ತೇ ಚ ತ್ರಯೋದಶೇ ವರ್ಷೇ ಪಾರಯಿಷ್ಯಂತಿ ಚೇದ್ವ್ರತಂ|
02066023c ಜೇಷ್ಯಾಮಸ್ತಾನ್ವಯಂ ರಾಜನ್ರೋಚತಾಂ ತೇ ಪರಂತಪ||
ರಾಜನ್! ಪರಂತಪ! ಒಂದುವೇಳೆ ಅವರು ಈ ಹದಿಮೂರು ವರ್ಷಗಳ ವ್ರತವನ್ನು ಮಾಡಿ ಜೀವಂತ ಉಳಿದರೆ ಅವರನ್ನು ನಾವು ಜಯಿಸಬಹುದು. ಇದಕ್ಕೆ ಅನುಮತಿಯನ್ನು ನೀಡು.”
02066024 ಧೃತರಾಷ್ಟ್ರ ಉವಾಚ|
02066024a ತೂರ್ಣಂ ಪ್ರತ್ಯಾನಯಸ್ವೈತಾನ್ಕಾಮಂ ವ್ಯಧ್ವಗತಾನಪಿ|
02066024c ಆಗಚ್ಛಂತು ಪುನರ್ದ್ಯೂತಮಿದಂ ಕುರ್ವಂತು ಪಾಂಡವಾಃ||
ಧೃತರಾಷ್ಟ್ರನು ಹೇಳಿದನು: “ಅವರು ತಮ್ಮ ದಾರಿಯಲ್ಲಿ ದೂರ ಹೋಗಿದ್ದರೂ ಕೂಡ ಅವರನ್ನು ಕೂಡಲೆ ಹಿಂದಕ್ಕೆ ಕರೆಯಿರಿ. ಪಾಂಡವರು ಹಿಂದುರಿಗಿ ಬಂದು ಇನ್ನೊಮ್ಮೆ ದ್ಯೂತವನ್ನು ಆಡಬೇಕು!””
02066025 ವೈಶಂಪಾಯನ ಉವಾಚ|
02066025a ತತೋ ದ್ರೋಣಃ ಸೋಮದತ್ತೋ ಬಾಹ್ಲೀಕಶ್ಚ ಮಹಾರಥಃ|
02066025c ವಿದುರೋ ದ್ರೋಣಪುತ್ರಶ್ಚ ವೈಶ್ಯಾಪುತ್ರಶ್ಚ ವೀರ್ಯವಾನ್||
02066026a ಭೂರಿಶ್ರವಾಃ ಶಾಂತನವೋ ವಿಕರ್ಣಶ್ಚ ಮಹಾರಥಃ|
02066026c ಮಾ ದ್ಯೂತಮಿತ್ಯಭಾಷಂತ ಶಮೋಽಸ್ತ್ವಿತಿ ಚ ಸರ್ವಶಃ||
ವೈಶಂಪಾಯನನು ಹೇಳಿದನು: “ಆಗ ದ್ರೋಣ, ಸೋಮದತ್ತ, ಮಹಾರಥಿ ಬಾಹ್ಲೀಕ, ವಿದುರ, ದ್ರೋಣಪುತ್ರ, ವೈಶ್ಯಾಪುತ್ರ, ವೀರ್ಯವಾನ್ ಭೂರಿಶ್ರವ, ಶಾಂತನವ, ಮಹಾರಥಿ ವಿಕರ್ಣ ಎಲ್ಲರೂ “ದ್ಯೂತವು ಬೇಡ! ಶಾಂತತೆಯನ್ನು ಕಾಪಾಡಿರಿ!” ಎಂದು ಹೇಳಿದರು.
02066027a ಅಕಾಮಾನಾಂ ಚ ಸರ್ವೇಷಾಂ ಸುಹೃದಾಮರ್ಥದರ್ಶಿನಾಂ|
02066027c ಅಕರೋತ್ಪಾಂಡವಾಹ್ವಾನಂ ಧೃತರಾಷ್ಟ್ರಃ ಸುತಪ್ರಿಯಃ||
ಅದರ ಪರಿಣಾಮಗಳನ್ನು ಕಂಡ ಸರ್ವ ಸುಹೃದಯರೂ ಇಷ್ಟಪಡದೇ ಇದ್ದರೂ ಸುತಪ್ರಿಯ ಧೃತರಾಷ್ಟ್ರನು ಪಾಂಡವರಿಗೆ ಆಹ್ವಾನವನ್ನು ಕಳುಹಿಸಿದನು.
02066028a ಅಥಾಬ್ರವೀನ್ಮಹಾರಾಜ ಧೃತರಾಷ್ಟ್ರಂ ಜನೇಶ್ವರಂ|
02066028c ಪುತ್ರಹಾರ್ದಾದ್ಧರ್ಮಯುಕ್ತಂ ಗಾಂಧಾರೀ ಶೋಕಕರ್ಶಿತಾ||
ಆಗ ಪುತ್ರನ ಮೇಲೆ ಪ್ರೀತಿಯಿದ್ದರೂ ಧರ್ಮನಿರತೆ ಗಾಂಧಾರಿಯು ಶೋಕಾರ್ತಳಾಗಿ ಜನೇಶ್ವರ ಮಹಾರಾಜ ಧೃತರಾಷ್ಟ್ರನಿಗೆ ಹೇಳಿದಳು:
02066029a ಜಾತೇ ದುರ್ಯೋಧನೇ ಕ್ಷತ್ತಾ ಮಹಾಮತಿರಭಾಷತ|
02066029c ನೀಯತಾಂ ಪರಲೋಕಾಯ ಸಾಧ್ವಯಂ ಕುಲಪಾಂಸನಃ||
“ದುರ್ಯೋಧನನು ಹುಟ್ಟಿದಾಗ ಮಹಾಮತಿ ಕ್ಷತ್ತನು ಈ ಕುಲಪಾಂಸನನನ್ನು ಪರಲೋಕಕ್ಕೆ ಕಳುಹಿಸುವುದೇ ಲೇಸು ಎಂದು ಹೇಳಿದ್ದನು.
02066030a ವ್ಯನದಜ್ಜಾತಮಾತ್ರೋ ಹಿ ಗೋಮಾಯುರಿವ ಭಾರತ|
02066030c ಅಂತೋ ನೂನಂ ಕುಲಸ್ಯಾಸ್ಯ ಕುರವಸ್ತನ್ನಿಬೋಧತ||
ಭಾರತ! ಹುಟ್ಟುತ್ತಿರುವಾಗಲೇ ಇವನು ನರಿಯಂತೆ ಕೂಗಿದನು. ಕುರುಗಳೇ! ನೋಡುತ್ತಿರಿ! ಇವನು ಈ ಕುಲದ ಅಂತ್ಯಕ್ಕೆ ಕಾರಣನಾಗುತ್ತಾನೆ.
02066031a ಮಾ ಬಾಲಾನಾಮಶಿಷ್ಟಾನಾಮಭಿಮಂಸ್ಥಾ ಮತಿಂ ಪ್ರಭೋ|
02066031c ಮಾ ಕುಲಸ್ಯ ಕ್ಷಯೇ ಘೋರೇ ಕಾರಣಂ ತ್ವಂ ಭವಿಷ್ಯಸಿ||
ಪ್ರಭೋ! ಶಿಷ್ಟರಲ್ಲದ ಬಾಲಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಡ. ಕುಲದ ಘೋರ ಕ್ಷಯಕ್ಕೆ ನೀನು ಕಾರಣನಾಗಬೇಡ.
02066032a ಬದ್ಧಂ ಸೇತುಂ ಕೋ ನು ಭಿಂದ್ಯಾದ್ಧಮೇಚ್ಚಾಂತಂ ಚ ಪಾವಕಂ|
02066032c ಶಮೇ ಧೃತಾನ್ಪುನಃ ಪಾರ್ಥಾನ್ಕೋಪಯೇತ್ಕೋ ನು ಭಾರತ||
ಕಟ್ಟಿದ ಸೇತುವೆಯನ್ನು ಯಾರು ಒಡೆಯುತ್ತಾರೆ? ಆರಿಹೋಗುತ್ತಿರುವ ಬೆಂಕಿಯನ್ನು ಯಾರು ಗಾಳಿ ಹಾಕಿ ಉರಿಸುತ್ತಾರೆ? ಭಾರತ! ಶಾಂತರಾಗಿರುವ ಪಾರ್ಥರನ್ನು ಪುನಃ ಯಾರುತಾನೆ ಸಿಟ್ಟಿಗೇಳಿಸುತ್ತಾರೆ?
02066033a ಸ್ಮರಂತಂ ತ್ವಾಮಾಜಮೀಢ ಸ್ಮಾರಯಿಷ್ಯಾಮ್ಯಹಂ ಪುನಃ|
02066033c ಶಾಸ್ತ್ರಂ ನ ಶಾಸ್ತಿ ದುರ್ಬುದ್ಧಿಂ ಶ್ರೇಯಸೇ ವೇತರಾಯ ವಾ||
ಆಜಮೀಡ! ನಿನಗೆ ನೆನಪಿರಬಹುದು. ಆದರೂ ನಿನಗೆ ಪುನಃ ನೆನಪಿಸಿಕೊಡುತ್ತೇನೆ. ಶಾಸ್ತ್ರವು ದುರ್ಬುದ್ಧಿಗೆ ಒಳ್ಳೆಯದನ್ನಲ್ಲದೇ ಬೇರೆಯದನ್ನು ಕಲಿಸಲಾರದು.
02066034a ನ ವೈ ವೃದ್ಧೋ ಬಾಲಮತಿರ್ಭವೇದ್ರಾಜನ್ಕಥಂ ಚನ|
02066034c ತ್ವನ್ನೇತ್ರಾಃ ಸಂತು ತೇ ಪುತ್ರಾ ಮಾ ತ್ವಾಂ ದೀರ್ಣಾಃ ಪ್ರಹಾಸಿಷುಃ||
ರಾಜನ್! ಹಾಗೆಯೇ ಬಾಲಮತಿಯು ಎಂದೂ ವೃದ್ಧನೆನಿಸಲಾರ. ನೀನೇ ನಿನ್ನ ಪುತ್ರರಿಗೆ ದಾರಿತೋರಿಸಬೇಕು. ಇಲ್ಲವಾದರೆ ಸೋತ ಅವರು ನಿನ್ನನ್ನು ದೂರಮಾಡುತ್ತಾರೆ.
02066035a ಶಮೇನ ಧರ್ಮೇಣ ಪರಸ್ಯ ಬುದ್ಧ್ಯಾ
ಜಾತಾ ಬುದ್ಧಿಃ ಸಾಸ್ತು ತೇ ಮಾ ಪ್ರತೀಪಾ|
02066035c ಪ್ರಧ್ವಂಸಿನೀ ಕ್ರೂರಸಮಾಹಿತಾ ಶ್ರೀಃ
ಮೃದುಪ್ರೌಢಾ ಗಚ್ಛತಿ ಪುತ್ರಪೌತ್ರಾನ್||
ಇತರರ ಬುದ್ಧಿಯಿಂದ ಹುಟ್ಟಿದ ನಿನ್ನ ಬುದ್ಧಿಯು ಶಮ-ಧರ್ಮಗಳಿಗೆ ಹೊರತಾಗದಿರಲಿ. ಕ್ರೂರಕರ್ಮಗಳಿಂದ ಸಂಪಾದಿಸಿದ ಐಶ್ವರ್ಯವು ನಾಶವಾಗಿ ಹೋಗುತ್ತದೆ. ಆದರೆ ಸೌಮ್ಯಕರ್ಮಗಳಿಂದ ಹೆಚ್ಚಿಸಿದ ಧನವು ಪುತ್ರಪೌತ್ರರಿಗೂ ಸಂದುತ್ತದೆ.”
02066036a ಅಥಾಬ್ರವೀನ್ಮಹಾರಾಜೋ ಗಾಂಧಾರೀಂ ಧರ್ಮದರ್ಶಿನೀಂ|
02066036c ಅಂತಃ ಕಾಮಂ ಕುಲಸ್ಯಾಸ್ತು ನ ಶಕ್ಷ್ಯಾಮಿ ನಿವಾರಿತುಂ||
ಆಗ ಮಹಾರಾಜನು ಧರ್ಮದರ್ಶಿನೀ ಗಾಂಧಾರಿಗೆ ಹೇಳಿದನು: “ನಮ್ಮ ಕುಲವು ಅಂತ್ಯಗೊಳ್ಳುವುದೇ ಆದರೆ ಅದನ್ನು ತಡೆಯಲು ನಾನು ಶಕ್ಯನಿಲ್ಲ.
02066037a ಯಥೇಚ್ಛಂತಿ ತಥೈವಾಸ್ತು ಪ್ರತ್ಯಾಗಚ್ಛಂತು ಪಾಂಡವಾಃ|
02066037c ಪುನರ್ದ್ಯೂತಂ ಪ್ರಕುರ್ವಂತು ಮಾಮಕಾಃ ಪಾಂಡವೈಃ ಸಹ||
ಅವರು ಏನನ್ನು ಬಯಸುತ್ತಾರೋ ಹಾಗೆಯೇ ಆಗಲಿ. ಪಾಂಡವರು ಹಿಂದಿರುಗಬೇಕು. ನನ್ನವರು ಪಾಂಡವರೊಂದಿಗೆ ಪುನಃ ದ್ಯೂತವನ್ನು ನಡೆಸಲಿ!””
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಯುಧಿಷ್ಠಿರಪ್ರತ್ಯಾನಯನೇ ಷಟ್‌ಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಯುಧಿಷ್ಠಿರನನ್ನು ಪುನಃ ಕರೆಯಿಸಿದ್ದುದು ಎನ್ನುವ ಅರವತ್ತಾರನೆಯ ಅಧ್ಯಾಯವು.