Sabha Parva: Chapter 24

ಸಭಾ ಪರ್ವ: ದಿಗ್ವಿಜಯ ಪರ್ವ

೨೪

ಅರ್ಜುನನು ಉತ್ತರದಲ್ಲಿದ್ದ ಇತರ ರಾಜರನ್ನು ಸೋಲಿಸಿದ್ದು (೧-೨೭).

02024001 ವೈಶಂಪಾಯನ ಉವಾಚ|

02024001a ತಂ ವಿಜಿತ್ಯ ಮಹಾಬಾಹುಃ ಕುಂತೀಪುತ್ರೋ ಧನಂಜಯಃ|

02024001c ಪ್ರಯಯಾವುತ್ತರಾಂ ತಸ್ಮಾದ್ದಿಶಂ ಧನದಪಾಲಿತಾಂ ||

ವೈಶಂಪಾಯನನು ಹೇಳಿದನು: “ಅವನನ್ನು ಜಯಿಸಿದ ಮಹಾಬಾಹು ಕುಂತೀಪುತ್ರ ಧನಂಜಯನು ಧನದನು ಪಾಲಿಸುವ ಉತ್ತರ ದಿಶೆಯಲ್ಲಿ ಹೊರಟನು.

02024002a ಅಂತರ್ಗಿರಿಂ ಚ ಕೌಂತೇಯಸ್ತಥೈವ ಚ ಬಹಿರ್ಗಿರಿಂ|

02024002c ತಥೋಪರಿಗಿರಿಂ ಚೈವ ವಿಜಿಗ್ಯೇ ಪುರುಷರ್ಷಭಃ||

02024003a ವಿಜಿತ್ಯ ಪರ್ವತಾನ್ಸರ್ವಾನ್ಯೇ ಚ ತತ್ರ ನರಾಧಿಪಾಃ|

02024003c ತಾನ್ವಶೇ ಸ್ಥಾಪಯಿತ್ವಾ ಸ ರತ್ನಾನ್ಯಾದಾಯ ಸರ್ವಶಃ||

ಪುರುಷರ್ಷಭ ಕೌಂತೇಯನು ಒಳಗಿನ ಪರ್ವತಗಳನ್ನು, ಹೊರಗಿನ ಪರ್ವತಪ್ರದೇಶಗಳನ್ನು ಮತ್ತು ಮೇಲಿನ ಪರ್ವತಗಳನ್ನು ಜಯಿಸಿದನು. ಆ ಎಲ್ಲ ಪರ್ವತಗಳನ್ನೂ ಗೆದ್ದು ಅಲ್ಲಿಯ ನರಾಧಿಪರೆಲ್ಲರನ್ನೂ ತನ್ನ ವಶದಲ್ಲಿ ಪಡೆದುಕೊಂಡು ಅವರ ಸಂಪತ್ತುಗಳನ್ನೆಲ್ಲವನ್ನೂ ತನ್ನದಾಗಿಸಿಕೊಂಡನು.

02024004a ತೈರೇವ ಸಹಿತಃ ಸರ್ವೈರನುರಜ್ಯ ಚ ತಾನ್ನೃಪಾನ್|

02024004c ಕುಲೂತವಾಸಿನಂ ರಾಜನ್ಬೃಹಂತಮುಪಜಗ್ಮಿವಾನ್||

02024005a ಮೃದಂಗವರನಾದೇನ ರಥನೇಮಿಸ್ವನೇನ ಚ|

02024005c ಹಸ್ತಿನಾಂ ಚ ನಿನಾದೇನ ಕಂಪಯನ್ವಸುಧಾಮಿಮಾಂ||

ಆ ಎಲ್ಲ ನೃಪರನ್ನೊಡಗೂಡಿ ಕುಲೂತವಾಸಿ ರಾಜ ಬೃಹಂತನ ಮೇಲೆ ಭೂಮಿಯನ್ನು ನಡುಗಿಸುವ ಮೃದಂಗ ವಾದ್ಯಗಳಿಂದ, ರಥಗಳ ಧ್ವನಿಯಿಂದ, ಅನೆಗಳ ನಿನಾದದಿಂದ ಕೂಡಿ ಆಕ್ರಮಣ ಮಾಡಿದನು.

02024006a ತತೋ ಬೃಹಂತಸ್ತರುಣೋ ಬಲೇನ ಚತುರಂಗಿಣಾ|

02024006c ನಿಷ್ಕ್ರಮ್ಯ ನಗರಾತ್ತಸ್ಮಾದ್ಯೋಧಯಾಮಾಸ ಪಾಂಡವಂ||

ಆಗ ತರುಣ ಬೃಹಂತನು ಚತುರಂಗ ಬಲದೊಂದಿಗೆ ನಗರದ ಹೊರಬಂದು ಪಾಂಡವನೊಂದಿಗೆ ಯುದ್ಧ ಮಾಡಿದನು.

02024007a ಸುಮಹಾನ್ಸನ್ನಿಪಾತೋಽಭೂದ್ಧನಂಜಯಬೃಹಂತಯೋಃ|

02024007c ನ ಶಶಾಕ ಬೃಹಂತಸ್ತು ಸೋಢುಂ ಪಾಂಡವವಿಕ್ರಮಂ||

ಧನಂಜಯ ಬೃಹಂತರ ಮಧ್ಯೆ ಮಹಾ ಕಾಳಗವೇ ನಡೆಯಿತು. ಆದರೆ ಬೃಹಂತನು ಪಾಂಡವನ ವಿಕ್ರಮವನ್ನು ಎದುರಿಸಲು ಅಶಕ್ತನಾದನು.

02024008a ಸೋಽವಿಷಃಯತಮಂ ಜ್ಞಾತ್ವಾ ಕೌಂತೇಯಂ ಪರ್ವತೇಶ್ವರಃ|

02024008c ಉಪಾವರ್ತತ ದುರ್ಮೇಧಾ ರತ್ನಾನ್ಯಾದಾಯ ಸರ್ವಶಃ||

ಕೌಂತೇಯನನ್ನು ಸೋಲಿಸಲಿಕ್ಕಾಗುವುದಿಲ್ಲ ಎಂದು ತಿಳಿದ ಆ ಪರ್ವತೇಶ್ವರನು ತನ್ನ ಸರ್ವ ಸಂಪತ್ತನ್ನೂ ತಂದೊಪ್ಪಿಸಿದನು.

02024009a ಸ ತದ್ರಾಜ್ಯಮವಸ್ಥಾಪ್ಯ ಕುಲೂತಸಹಿತೋ ಯಯೌ|

02024009c ಸೇನಾಬಿಂದುಮಥೋ ರಾಜನ್ರಾಜ್ಯಾದಾಶು ಸಮಾಕ್ಷಿಪತ್||

ರಾಜನ್! ಆ ರಾಜ್ಯವನ್ನು ಪಡೆದು ಕುಲೂತನೊಂದಿಗೆ ಹೊರಟು, ಸೇನಾಬಿಂದುವನ್ನು ಅವನ ರಾಜ್ಯಭ್ರಷ್ಟನನ್ನಾಗಿ ಮಾಡಿದನು.

02024010a ಮೋದಾಪುರಂ ವಾಮದೇವಂ ಸುದಾಮಾನಂ ಸುಸಂಕುಲಂ|

02024010c ಕುಲೂತಾನುತ್ತರಾಂಶ್ಚೈವ ತಾಂಶ್ಚ ರಾಜ್ಞಃ ಸಮಾನಯತ್||

ಅವನು ಮೋದಾಪುರ, ವಾಮದೇವ, ಸುದಾಮರೊಡನೆ ಉತ್ತರ ಕುಲೂತದ ಸರ್ವ ರಾಜಕುಲಗಳನ್ನು ತನ್ನದಾಗಿಸಿಕೊಂಡನು.

02024011a ತತ್ರಸ್ಥಃ ಪುರುಷೈರೇವ ಧರ್ಮರಾಜಸ್ಯ ಶಾಸನಾತ್|

02024011c ವ್ಯಜಯದ್ಧನಂಜಯೋ ರಾಜನ್ದೇಶಾನ್ಪಂಚ ಪ್ರಮಾಣತಃ||

ರಾಜನ್! ಧರ್ಮರಾಜನ ಶಾಸನದಂತೆ ಅಲ್ಲಿಯೇ ತಂಗಿ ಧನಂಜಯನು ತನ್ನ ಸೇನೆಯಿಂದ ಐದು ದೇಶಗಳನ್ನು ಗೆದ್ದನು.

02024012a ಸ ದಿವಃಪ್ರಸ್ಥಮಾಸಾದ್ಯ ಸೇನಾಬಿಂದೋಃ ಪುರಂ ಮಹತ್|

02024012c ಬಲೇನ ಚತುರಂಗೇಣ ನಿವೇಶಮಕರೋತ್ಪ್ರಭುಃ||

ಸೇನಬಿಂದುವಿನ ಮಹಾ ಪುರ ದಿವಃಪ್ರಸ್ಥವನ್ನು ತಲುಪಿ ಆ ಪ್ರಭುವು ಅದನ್ನೇ ತನ್ನ ಚತುರಂಗಬಲದ ತಂಗುದಾಣವನ್ನಾಗಿ ಮಾಡಿದನು.

02024013a ಸ ತೈಃ ಪರಿವೃತಃ ಸರ್ವೈರ್ವಿಷ್ವಗಶ್ವಂ ನರಾಧಿಪಂ|

02024013c ಅಭ್ಯಗಚ್ಛನ್ಮಹಾತೇಜಾಃ ಪೌರವಂ ಪುರುಷರ್ಷಭಃ||

02024014a ವಿಜಿತ್ಯ ಚಾಹವೇ ಶೂರಾನ್ಪಾರ್ವತೀಯಾನ್ಮಹಾರಥಾನ್|

02024014c ಧ್ವಜಿನ್ಯಾ ವ್ಯಜಯದ್ರಾಜನ್ಪುರಂ ಪೌರವರಕ್ಷಿತಂ||

ರಾಜನ್! ಅವರೆಲ್ಲರಿಂದ ಪರಿವೃತನಾಗಿ  ಆ ಮಹಾತೇಜಸ್ವಿ ಪುರುಷರ್ಷಭನು ನರಾಧಿಪ ಪೌರವ ವಿಶ್ವಗಶ್ವನಲ್ಲಿಗೆ ಹೋಗಿ ಶೂರ ಮಹಾರಥಿ ಪರ್ವತ ಜನರನ್ನು ತನ್ನ ಧ್ವಜಯುಕ್ತ ಸೇನೆಯಿಂದ ಗೆದ್ದು ಪೌರವರಕ್ಷಿತ ಪುರವನ್ನು ಗೆದ್ದನು.

02024015a ಪೌರವಂ ತು ವಿನಿರ್ಜಿತ್ಯ ದಸ್ಯೂನ್ಪರ್ವತವಾಸಿನಃ|

02024015c ಗಣಾನುತ್ಸವಸಂಕೇತಾನಜಯತ್ಸಪ್ತ ಪಾಂಡವಃ||

ಪೌರವನನ್ನು ಸೋಲಿಸಿದ ನಂತರ ಪಾಂಡವನು ಪರ್ವತವಾಸಿ ಏಳು ದಸ್ಯುಗಣ ಉತ್ಸವಸಂಕೇತಕರನ್ನು ಗೆದ್ದನು.

02024016a ತತಃ ಕಾಶ್ಮೀರಕಾನ್ವೀರಾನ್ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ|

02024016c ವ್ಯಜಯಲ್ಲೋಹಿತಂ ಚೈವ ಮಂಡಲೈರ್ದಶಭಿಃ ಸಹ||

02024017a ತತಸ್ತ್ರಿಗರ್ತಾನ್ಕೌಂತೇಯೋ ದಾರ್ವಾನ್ಕೋಕನದಾಶ್ಚ ಯೇ|

02024017c ಕ್ಷತ್ರಿಯಾ ಬಹವೋ ರಾಜನ್ನುಪಾವರ್ತಂತ ಸರ್ವಶಃ||

ಅನಂತರ ಕ್ಷತ್ರಿಯರ್ಷಭನು ಅವರ ಹತ್ತು ಮಂಡಲಗಳೊಂದಿಗೆ ವೀರ ಕಾಶ್ಮೀರಕ ಮತ್ತು ಲೋಹಿತ ಕ್ಷತ್ರಿಯರನ್ನು ಜಯಿಸಿದನು. ರಾಜನ್! ಹಾಗೆಯೇ ತ್ರಿಗರ್ತರನ್ನು, ದಾರ್ವರನ್ನು, ಕೋಕನದರನ್ನು ಮತ್ತು ಇನ್ನೂ ಅವನೊಂದಿಗೆ ಹೋರಾಡಿದ ಬಹಳ ಕ್ಷತ್ರಿಯರೆಲ್ಲರನ್ನೂ ಕೌಂತೇಯನು ಗೆದ್ದನು.

02024018a ಅಭಿಸಾರೀಂ ತತೋ ರಮ್ಯಾಂ ವಿಜಿಗ್ಯೇ ಕುರುನಂದನಃ|

02024018c ಉರಶಾವಾಸಿನಂ ಚೈವ ರೋಚಮಾನಂ ರಣೇಽಜಯತ್||

ಕುರುನಂದನನು ರಮ್ಯ ನಗರಿ ಅಭಿಸಾರಿಯನ್ನು ಮುತ್ತಿ, ಉರಶವಾಸಿ ರೋಚಮಾನನನ್ನು ರಣದಲ್ಲಿ ಗೆದ್ದನು.

02024019a ತತಃ ಸಿಂಹಪುರಂ ರಮ್ಯಂ ಚಿತ್ರಾಯುಧಸುರಕ್ಷಿತಂ|

02024019c ಪ್ರಾಮಥದ್ಬಲಮಾಸ್ಥಾಯ ಪಾಕಶಾಸನಿರಾಹವೇ||

02024020a ತತಃ ಸುಹ್ಮಾಂಶ್ಚ ಚೋಲಾಂಶ್ಚ ಕಿರೀಟೀ ಪಾಂಡವರ್ಷಭಃ|

02024020c ಸಹಿತಃ ಸರ್ವಸೈನ್ಯೇನ ಪ್ರಾಮಥತ್ಕುರುನಂದನಃ||

ಅನಂತರ ಪಾಕಶಾಸನಿಯು ಚಿತ್ರಾಯುಧನಿಂದ ಸುರಕ್ಷಿತ ರಮ್ಯ ಸಿಂಹಪುರವನ್ನು ತನ್ನ ಅತಿ ದೊಡ್ಡ ಬಲದಿಂದ ಗೆದ್ದನು. ನಂತರ ಕಿರೀಟೀ ಪಾಂಡವರ್ಷಭ ಕುರುನಂದನನು ತನ್ನ ಸರ್ವ ಸೈನ್ಯದಿಂದ ಸುಹ್ಮರು ಮತ್ತು ಚೋಲರನ್ನು ಗೆದ್ದನು.

02024021a ತತಃ ಪರಮವಿಕ್ರಾಂತೋ ಬಾಹ್ಲೀಕಾನ್ಕುರುನಂದನಃ|

02024021c ಮಹತಾ ಪರಿಮರ್ದೇನ ವಶೇ ಚಕ್ರೇ ದುರಾಸದಾನ್||

ಅನಂತರ ಪರಮವಿಕ್ರಾಂತ ಕುರುನಂದನನು ದುರಾಸದ ಬಾಹ್ಲೀಕರನ್ನು ತನ್ನ ಮಹಾ ಶಕ್ತಿಯೊಂದಿಗೆ ವಶಮಾಡಿಕೊಂಡನು.

02024022a ಗೃಹೀತ್ವಾ ತು ಬಲಂ ಸಾರಂ ಫಲ್ಗು ಚೋತ್ಸೃಜ್ಯ ಪಾಂಡವಃ|

02024022c ದರದಾನ್ಸಹ ಕಾಂಬೋಜೈರಜಯತ್ಪಾಕಶಾಸನಿಃ||

ಪಾಕಶಾಸನಿ ಪಾಂಡವನು ಅವರ ಬಲವನ್ನು ಕಿತ್ತುಕೊಂಡು ಕಡಿಮೆಯಿದ್ದಿದ್ದ ಸಂಪನ್ಮೂಲಗಳನ್ನು ಅಲ್ಲಿಯೇ ಬಿಟ್ಟು ದರದರೊಂದಿಗೆ ಕಾಂಬೋಜರನ್ನು ಜಯಿಸಿದನು.

02024023a ಪ್ರಾಗುತ್ತರಾಂ ದಿಶಂ ಯೇ ಚ ವಸಂತ್ಯಾಶ್ರಿತ್ಯ ದಸ್ಯವಃ|

02024023c ನಿವಸಂತಿ ವನೇ ಯೇ ಚ ತಾನ್ಸರ್ವಾನಜಯತ್ಪ್ರಭುಃ||

ಇಂದ್ರನ ಮಗ ಪ್ರಭುವು ಪೂರ್ವೋತ್ತರ ದಿಕ್ಕಿನಲ್ಲಿ ವಾಸಿಸುವ ದಸ್ಯುಗಳನ್ನು ಮತ್ತು ವನಗಳಲ್ಲಿ ವಾಸಿಸುತ್ತಿರುವವರನ್ನು ಸೋಲಿಸಿದನು.

02024024a ಲೋಹಾನ್ಪರಮಕಾಂಬೋಜಾನೃಷಿಕಾನುತ್ತರಾನಪಿ|

02024024c ಸಹಿತಾಂಸ್ತಾನ್ಮಹಾರಾಜ ವ್ಯಜಯತ್ಪಾಕಶಾಸನಿಃ||

ಮಹಾರಾಜ! ಅನಂತರ ಪಾಕಶಾಸನಿಯು ಲೋಹರನ್ನು, ಮೇಲಿನ ಕಾಂಬೋಜರನ್ನು, ಮತ್ತು ಉತ್ತರದ ಋಷಿಕರನ್ನು ಒಟ್ಟಿಗೇ ಗೆದ್ದನು.

02024025a ಋಷಿಕೇಷು ತು ಸಂಗ್ರಾಮೋ ಬಭೂವಾತಿಭಯಂಕರಃ|

02024025c ತಾರಕಾಮಯಸಂಕಾಶಃ ಪರಮರ್ಷಿಕಪಾರ್ಥಯೋಃ||

ಋಷಿಕದಲ್ಲಿ ಮೇಲಿನ ಋಷಿಕರು ಮತ್ತು ಪಾರ್ಥನ ನಡುವೆ ನಡೆದ ಯುದ್ಧವು ತಾರಕನೊಂದಿಗೆ ನಡೆದ ಯುದ್ಧದಂತೆ ಅತಿ ಭಯಂಕರವಾಗಿತ್ತು.

02024026a ಸ ವಿಜಿತ್ಯ ತತೋ ರಾಜನ್ನೃಷಿಕಾನ್ರಣಮೂರ್ಧನಿ|

02024026c ಶುಕೋದರಸಮಪ್ರಖ್ಯಾನ್ ಹಯಾನಷ್ಟೌ ಸಮಾನಯತ್||

02024026e ಮಯೂರಸದೃಶಾನನ್ಯಾನುಭಯಾನೇವ ಚಾಪರಾನ್||

ರಾಜನ್! ರಣದಲ್ಲಿ ಋಷಿಕರನ್ನು ಜಯಿಸಿದ ನಂತರ ಅವನು ಗಿಳಿಯ ಹೊಟ್ಟೆಯ ಬಣ್ಣದ ಎಂಟು ಮತ್ತು ನವಿಲಿನ ಬಣ್ಣದ ಇನ್ನೂ ಇತರ ಕುದುರೆಗಳನ್ನು ವಶಪಡಿಸಿಕೊಂಡನು.

02024027a ಸ ವಿನಿರ್ಜಿತ್ಯ ಸಂಗ್ರಾಮೇ ಹಿಮವಂತಂ ಸನಿಷ್ಕುಟಂ|

02024027c ಶ್ವೇತಪರ್ವತಮಾಸಾದ್ಯ ನ್ಯವಸತ್ ಪುರುಷರ್ಷಭಃ||

ನಿಷ್ಕುಟದೊಂದಿಗೆ ಹಿಮವತ್ಪರ್ವತವನ್ನು ಸಂಗ್ರಾಮದಲ್ಲಿ ಗೆದ್ದು ಪುರುಷರ್ಷಭನು ಶ್ವೇತಪರ್ವವನ್ನು ಸೇರಿ ಅಲ್ಲಿ ಬೀಡು ಬಿಟ್ಟನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನದಿಗ್ವಿಜಯೇ ನಾನಾದೇಶಜಯೇ ಚತುರ್ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನದಿಗ್ವಿಜಯದಲ್ಲಿ ನಾನಾದೇಶಜಯ ಎನ್ನುವ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.

Related image

Comments are closed.