Sabha Parva: Chapter 20

ಸಭಾ ಪರ್ವ: ಜರಾಸಂಧವಧ ಪರ್ವ

೨೦

ಏನೂ ತಪ್ಪು ಮಾಡಿರದ ತಾನು ಅವರಿಗೆ ಹೇಗೆ ಶತ್ರುವಾಗುತ್ತಾನೆ ಎಂದು ಜರಾಸಂಧನು ಕೇಳುವುದು (೧-೫). ರಾಜರನ್ನು ಬಂಧಿಸಿರುವುದೇ ಅಪರಾಧವೆಂದು ಹೇಳಿ ಕೃಷ್ಣನು ತಮ್ಮ ನಿಜಪರಿಚಯವನ್ನು ಹೇಳಿಕೊಂಡು ಜರಾಸಂಧನನ್ನು ಯುದ್ಧಕ್ಕೆ ಆಹ್ವಾನಿಸಿದುದು (೬-೨೪). ಜರಾಸಂಧನು ಯುದ್ಧಕ್ಕೆ ಸಿದ್ಧನಾದುದು (೨೫-೩೪).

02020001 ಜರಾಸಂಧ ಉವಾಚ|

02020001a ನ ಸ್ಮರೇಯಂ ಕದಾ ವೈರಂ ಕೃತಂ ಯುಷ್ಮಾಭಿರಿತ್ಯುತ|

02020001c ಚಿಂತಯಂಶ್ಚ ನ ಪಶ್ಯಾಮಿ ಭವತಾಂ ಪ್ರತಿ ವೈಕೃತಂ||

ಜರಾಸಂಧನು ಹೇಳಿದನು: “ನಿಮಗೆ ನಾನು ಎಂದೂ ವೈರತ್ವದಿಂದ ಏನನ್ನೂ ಮಾಡಿದ ನೆನಪಿಲ್ಲ. ನಿಮ್ಮ ಕುರಿತು ಕೆಟ್ಟದ್ದಾಗಿ ಯೋಚಿಸಿದ್ದೂ ನನ್ನ ಗಮನಕ್ಕಿಲ್ಲ.

02020002a ವೈಕೃತೇ ಚಾಸತಿ ಕಥಂ ಮನ್ಯಧ್ವಂ ಮಾಮನಾಗಸಂ|

02020002c ಅರಿಂ ವಿಬ್ರೂತ ತದ್ವಿಪ್ರಾಃ ಸತಾಂ ಸಮಯ ಏಷ ಹಿ||

ವೈರತ್ವವನ್ನೇ ತೋರಿಸದಿದ್ದ ಅನಾಗಸ ನನ್ನನ್ನು ನೀವು ಹೇಗೆ ಶತ್ರುವೆಂದು ತಿಳಿಯುತ್ತೀರಿ. ಹೇಳಿ ವಿಪ್ರರೇ! ಇದು ಸಾತ್ವಿಕರ ನಿಯಮವೇ?

02020003a ಅಥ ಧರ್ಮೋಪಘಾತಾದ್ಧಿ ಮನಃ ಸಮುಪತಪ್ಯತೇ|

02020003c ಯೋಽನಾಗಸಿ ಪ್ರಸೃಜತಿ ಕ್ಷತ್ರಿಯೋಽಪಿ ನ ಸಂಶಯಃ||

ಅನಾಗಸನ ವಿರುದ್ಧವಾದರೆ ಕ್ಷತ್ರಿಯನಾಗಿದ್ದರೂ ಅವನು ಧರ್ಮಲೋಪಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ[1].

02020004a ಅತೋಽನ್ಯಥಾಚರಽಲ್ಲೋಕೇ ಧರ್ಮಜ್ಞಃ ಸನ್ಮಹಾವ್ರತಃ|

02020004c ವೃಜಿನಾಂ ಗತಿಮಾಪ್ನೋತಿ ಶ್ರೇಯಸೋಽಪ್ಯುಪಹಂತಿ ಚ||

ಅವನು ಎಷ್ಟೇ ಧರ್ಮಜ್ಞನಾಗಿರಲಿ ಅಥವಾ ಮಹಾತ್ಮನಾಗಿರಲಿ, ಇದಕ್ಕೆ ವಿರುದ್ಧವಾಗಿ ಲೋಕದಲ್ಲಿ ನಡೆದುಕೊಂಡರೆ ವೃಜಿಗಳ ಗತಿಯನ್ನು ಹೊಂದುತ್ತಾನೆ ಮತ್ತು ತನ್ನ ಶ್ರೇಯಸ್ಸನ್ನು ಕಳೆದುಕೊಳ್ಳುತ್ತಾನೆ.

02020005a ತ್ರೈಲೋಕ್ಯೇ ಕ್ಷತ್ರಧರ್ಮಾದ್ಧಿ ಶ್ರೇಯಾಂಸಂ ಸಾಧುಚಾರಿಣಾಂ|

02020005c ಅನಾಗಸಂ ಪ್ರಜಾನಾನಾಃ ಪ್ರಮಾದಾದಿವ ಜಲ್ಪಥ||

ತ್ರೈಲೋಕ್ಯದಲ್ಲಿಯೇ ಕ್ಷತ್ರಧರ್ಮವನ್ನು ಪಾಲಿಸಿಕೊಂಡು ಸಾಧುಚಾರಿಗಳಲ್ಲಿ ಶ್ರೇಷ್ಠನಾದ, ಅನಾಗಸನಾದ, ಪ್ರಜಾಪಾಲಕನಾದ, ನನ್ನನ್ನು ನೀವು ಪ್ರಮಾದದಿಂದ ಶತ್ರುವೆಂದು ತಿಳಿದಿರುವಿರಿ[2].”

02020006 ವಾಸುದೇವ ಉವಾಚ|

02020006a ಕುಲಕಾರ್ಯಂ ಮಹಾರಾಜ ಕಶ್ಚಿದೇಕಃ ಕುಲೋದ್ವಹಃ|

02020006c ವಹತೇ ತನ್ನಿಯೋಗಾದ್ವೈ ವಯಮಭ್ಯುತ್ಥಿತಾಸ್ತ್ರಯಃ||

ವಾಸುದೇವನು ಹೇಳಿದನು: “ಮಹಾಬಾಹೋ! ಕುಲಕಾರ್ಯನಾದ ಕುಲೋದ್ಧಹನಾದ ಓರ್ವ ಮಹಾರಾಜನಿದ್ದಾನೆ. ಅವನ ನಿಯೋಗದಿಂದಲೇ ನಾವು ಮೂವರು ಇಲ್ಲಿ ಉಪಸ್ಥಿತರಿದ್ದೇವೆ.

02020007a ತ್ವಯಾ ಚೋಪಹೃತಾ ರಾಜನ್ ಕ್ಷತ್ರಿಯಾ ಲೋಕವಾಸಿನಃ|

02020007c ತದಾಗಃ ಕ್ರೂರಮುತ್ಪಾದ್ಯ ಮನ್ಯಸೇ ಕಿಂ ತ್ವನಾಗಸಂ||

ರಾಜನ್! ಲೋಕವಾಸಿಗಳಾದ ಕ್ಷತ್ರಿಯರನ್ನು ನೀನು ಅಪಹರಿಸಿದ ಅತಿ ದೊಡ್ಡ ಕ್ರೂರಕಾರ್ಯವನ್ನು ಮಾಡಿದ್ದರೂ ನೀನು ನಿನ್ನನ್ನು ಅನಾಗಸನೆಂದು ಹೇಗೆ ಕಲ್ಪಿಸಿಕೊಂಡಿದ್ದೀಯೆ?

02020008a ರಾಜಾ ರಾಜ್ಞಃ ಕಥಂ ಸಾಧೂನ್ ಹಿಂಸ್ಯಾನ್ನೃಪತಿಸತ್ತಮ|

02020008c ತದ್ರಾಜ್ಞಃ ಸನ್ನಿಗೃಹ್ಯ ತ್ವಂ ರುದ್ರಾಯೋಪಜಿಹೀರ್ಷಸಿ||

ನೃಪತಿಸತ್ತಮ! ಒಬ್ಬ ರಾಜನು ಇತರ ಸಾಧು ರಾಜರುಗಳನ್ನು ಹೇಗೆ ತಾನೆ ಹಿಂಸಿಸಬಹುದು? ಸೆರೆಹಿಡಿದ ರಾಜರುಗಳನ್ನು ನೀನು ರುದ್ರನಿಗೆ ಬಲಿಯಾಗಿ ನೀಡಲು ಬಯಸುತ್ತಿರುವೆ!

02020009a ಅಸ್ಮಾಂಸ್ತದೇನೋ ಗಚ್ಛೇತ ತ್ವಯಾ ಬಾರ್ಹದ್ರಥೇ ಕೃತಂ|

02020009c ವಯಂ ಹಿ ಶಕ್ತಾ ಧರ್ಮಸ್ಯ ರಕ್ಷಣೇ ಧರ್ಮಚಾರಿಣಃ||

ಬಾರ್ಹದ್ರಥ! ನೀನು ಮಾಡಿದ ಈ ಪಾಪಕೃತ್ಯವು ನಮ್ಮ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕೆಂದರೆ, ಧರ್ಮಚಾರಿಣರಾದ ನಾವು ಧರ್ಮದ ರಕ್ಷಣೆಗೆ ಶಕ್ತರಾಗಿದ್ದೇವೆ. 

02020010a ಮನುಷ್ಯಾಣಾಂ ಸಮಾಲಂಭೋ ನ ಚ ದೃಷ್ಟಃ ಕದಾ ಚನ|

02020010c ಸ ಕಥಂ ಮಾನುಷೈರ್ದೇವಂ ಯಷ್ಟುಮಿಚ್ಛಸಿ ಶಂಕರಂ||

ಮನುಷ್ಯರನ್ನು ಬಲಿಕೊಡುವುದನ್ನು ಎಂದೂ ನೋಡಿದ್ದಿಲ್ಲ. ನೀನು ಹೇಗೆ ದೇವ ಶಂಕರನಿಗೆ ಮನುಷ್ಯರನ್ನು ಬಲಿಕೊಡಲು ಯೋಚಿಸುತ್ತಿರುವೆ?

02020011a ಸವರ್ಣೋ ಹಿ ಸವರ್ಣಾನಾಂ ಪಶುಸಂಜ್ಞಾಂ ಕರಿಷ್ಯತಿ|

02020011c ಕೋಽನ್ಯ ಏವಂ ಯಥಾ ಹಿ ತ್ವಂ ಜರಾಸಂಧ ವೃಥಾಮತಿಃ||

ಸವರ್ಣಿಯಾದ ನೀನು ಸವರ್ಣದವರನ್ನೇ ಪಶುಗಳಂತೆ ಬಲಿಕೊಡಲು ಬಯಸುತ್ತಿದ್ದೀಯೆ[3]. ಜರಾಸಂಧ! ನಿನಗಿಂತಲೂ ವೃಥಾಮತಿ[4]ಯಾದ ಇನ್ನೊಬ್ಬನು ಯಾರಿದ್ದಾನೆ?

02020012a ತೇ ತ್ವಾಂ ಜ್ಞಾತಿಕ್ಷಯಕರಂ ವಯಮಾರ್ತಾನುಸಾರಿಣಃ|

02020012c ಜ್ಞಾತಿವೃದ್ಧಿನಿಮಿತ್ತಾರ್ಥಂ ವಿನಿಯಂತುಮಿಹಾಗತಾಃ||

ಆರ್ತಾನುಸಾರಿಗಳಾದ ನಾವು ಜ್ಞತಿಕ್ಷಯಕಾರಕ ನಿನ್ನನ್ನು ವಿನೀತನನ್ನಾಗಿಸಿ ಜ್ಞಾತಿಜರ ವೃದ್ಧಿಗೋಸ್ಕರವಾಗಿ ಇಲ್ಲಿಗೆ ಬಂದಿದ್ದೇವೆ.

02020013a ನಾಸ್ತಿ ಲೋಕೇ ಪುಮಾನನ್ಯಃ ಕ್ಷತ್ರಿಯೇಷ್ವಿತಿ ಚೈವ ಯತ್|

02020013c ಮನ್ಯಸೇ ಸ ಚ ತೇ ರಾಜನ್ಸುಮಹಾನ್ಬುದ್ಧಿವಿಪ್ಲವಃ||

ರಾಜನ್! ಲೋಕದ ಕ್ಷತ್ರಿಯರಲ್ಲಿ ಅನ್ಯ ಪುರುಷರು ಯಾರೂ ಇಲ್ಲವೆಂದು ನೀನು ತಿಳಿದಿದ್ದರೆ ಅದೊಂದು ದೊಡ್ಡ ಬುದ್ಧಿವಿಪ್ಲವತೆ[5] ಎಂದು ತಿಳಿ.

02020014a ಕೋ ಹಿ ಜಾನನ್ನಭಿಜನಮಾತ್ಮನಃ ಕ್ಷತ್ರಿಯೋ ನೃಪ|

02020014c ನಾವಿಶೇತ್ಸ್ವರ್ಗಮತುಲಂ ರಣಾನಂತರಮವ್ಯಯಂ||

ನೃಪ! ತನ್ನ ಉತ್ತಮ ಜನ್ಮವನ್ನು ತಿಳಿದ ಯಾವ ಕ್ಷತ್ರಿಯನು ತಾನೆ ರಣದಲ್ಲಿ ತೀರಿಕೊಂಡ ನಂತರ ಅವ್ಯಯವೂ ಅತುಲವೂ ಆದ ಸ್ವರ್ಗವನ್ನು ಹೊಂದುವುದಿಲ್ಲ[6]?

02020015a ಸ್ವರ್ಗಂ ಹ್ಯೇವ ಸಮಾಸ್ಥಾಯ ರಣಯಜ್ಞೇಷು ದೀಕ್ಷಿತಾಃ|

02020015c ಯಜಂತೇ ಕ್ಷತ್ರಿಯಾ ಲೋಕಾಂಸ್ತದ್ವಿದ್ಧಿ ಮಗಧಾಧಿಪ||

ಮಗಧಾಧಿಪ! ಸ್ವರ್ಗವನ್ನೇ ಗುರಿಯನಾಗಿಟ್ಟುಕೊಂಡು ರಣಯಜ್ಞದಲ್ಲಿ ದೀಕ್ಷಿತರಾದವರನ್ನು ಲೋಕದ ಕ್ಷತ್ರಿಯರು ಪೂಜಿಸುತ್ತಾರೆ[7] ಎನ್ನುವುದನ್ನು ತಿಳಿ.

02020016a ಸ್ವರ್ಗಯೋನಿರ್ಜಯೋ ರಾಜನ್ಸ್ವರ್ಗಯೋನಿರ್ಮಹದ್ಯಶಃ|

02020016c ಸ್ವರ್ಗಯೋನಿಸ್ತಪೋ ಯುದ್ಧೇ ಮಾರ್ಗಃ ಸೋಽವ್ಯಭಿಚಾರವಾನ್||

ರಾಜನ್! ಜಯವು ಸ್ವರ್ಗಯೋನಿ, ಯಶಸ್ಸೂ ಸ್ವರ್ಗಯೋನಿ, ತಪಸ್ಸೂ ಸ್ವರ್ಗಯೋನಿ. ಹಾಗೆಯೇ ಯುದ್ಧವೂ ನೇರವಾದ ಮಾರ್ಗವು[8].

02020017a ಏಷ ಹ್ಯೈಂದ್ರೋ ವೈಜಯಂತೋ ಗುಣೋ ನಿತ್ಯಂ ಸಮಾಹಿತಃ|

02020017c ಯೇನಾಸುರಾನ್ಪರಾಜಿತ್ಯ ಜಗತ್ಪಾತಿ ಶತಕ್ರತುಃ||

ಯಾಕೆಂದರೆ ಇದೇ ಗುಣದಿಂದಲೇ ನಿತ್ಯ ಸಮಾಹಿತ ವೈಜಯಂತ ಜಗತ್ಪತಿ ಶತಕ್ರತು ಇಂದ್ರನು ಅಸುರರನ್ನು ಪರಾಜಿತಗೊಳಿಸಿದನು.

02020018a ಸ್ವರ್ಗಮಾಸ್ಥಾಯ ಕಸ್ಯ ಸ್ಯಾದ್ವಿಗ್ರಹಿತ್ವಂ ಯಥಾ ತವ|

02020018c ಮಾಗಧೈರ್ವಿಪುಲೈಃ ಸೈನ್ಯೈರ್ಬಾಹುಲ್ಯಬಲದರ್ಪಿತೈಃ||

ವಿಪುಲ ಮಾಗಧ ಸೈನ್ಯವನ್ನು ಹೊಂದಿ ಬಾಹುಬಲದರ್ಪಿತನಾದ ನಿನ್ನನ್ನು ಸೋಲಿಸದೇ ಬೇರೆ ಹೇಗೆ ತಾನೆ ಸ್ವರ್ಗವನ್ನು ಪಡೆಯಬಹುದು?

02020019a ಮಾವಮಂಸ್ಥಾಃ ಪರಾನ್ರಾಜನ್ನಾಸ್ತಿ ವೀರ್ಯಂ ನರೇ ನರೇ|

02020019c ಸಮಂ ತೇಜಸ್ತ್ವಯಾ ಚೈವ ಕೇವಲಂ ಮನುಜೇಶ್ವರ||

ರಾಜನ್! ಇತರರನ್ನು ಕಡೆಗಣಿಸಬೇಡ! ಯಾವ ನರನಲ್ಲಿಯೂ ವೀರ್ಯವಿಲ್ಲವೇ? ಮನುಜೇಶ್ವರ! ನಿನ್ನ ತೇಜಸ್ಸಿಗೆ ಸಮನಾದವನು ಯಾರೂ ಇಲ್ಲವೇ?

02020020a ಯಾವದೇವ ನ ಸಂಬುದ್ಧಂ ತಾವದೇವ ಭವೇತ್ತವ|

02020020c ವಿಷಹ್ಯಮೇತದಸ್ಮಾಕಮತೋ ರಾಜನ್ಬ್ರವೀಮಿ ತೇ||

02020021a ಜಹಿ ತ್ವಂ ಸದೃಶೇಷ್ವೇವ ಮಾನಂ ದರ್ಪಂ ಚ ಮಾಗಧ|

02020021c ಮಾ ಗಮಃ ಸಸುತಾಮಾತ್ಯಃ ಸಬಲಶ್ಚ ಯಮಕ್ಷಯಂ||

ರಾಜನ್! ನಾನು ನಿನಗೆ ಹೇಳುತ್ತೇನೆ. ನಾವು ನಿನ್ನ ಸರಿಸಾಟಿಗಳಾಗಿದ್ದೇವೆ. ಮಾಗಧ! ನಿನ್ನ ದರ್ಪವನ್ನು ತೊರೆ. ಮಕ್ಕಳು, ಅಮಾತ್ಯರು ಮತ್ತು ಸೇನೆಯೊಂದಿಗೆ ಯಮಕ್ಷಯಕ್ಕೆ ಹೋಗಬೇಡ.

02020022a ದಂಭೋದ್ಭವಃ ಕಾರ್ತವೀರ್ಯ ಉತ್ತರಶ್ಚ ಬೃಹದ್ರಥಃ|

02020022c ಶ್ರೇಯಸೋ ಹ್ಯವಮನ್ಯೇಹ ವಿನೇಶುಃ ಸಬಲಾ ನೃಪಾಃ||

ಅವರಿಗಿಂಥ ಉತ್ತಮರನ್ನು ಕಡೆಗಣಿಸಿದುದರಿಂದಲೇ ಇಲ್ಲಿ ದಂಭೋದ್ಭವ[9], ಕಾರ್ತವೀರ್ಯ, ಉತ್ತರ ಮತ್ತು ಬೃಹದ್ರಥ ಮೊದಲಾದ ನೃಪರು ಸೇನೆಗಳೊಂದಿಗೆ ವಿನಾಶಹೊಂದಿದರು.

02020023a ಮುಮುಕ್ಷಮಾಣಾಸ್ತ್ವತ್ತಶ್ಚ ನ ವಯಂ ಬ್ರಾಹ್ಮಣಬ್ರುವಾಃ|

02020023c ಶೌರಿರಸ್ಮಿ ಹೃಷೀಕೇಶೋ ನೃವೀರೌ ಪಾಂಡವಾವಿಮೌ||

ನಿನ್ನಿಂದ ರಾಜರುಗಳನ್ನು ಬಿಡುಗಡೆಮಾಡಲು ಬಯಸುವ ನಾವು ಬ್ರಾಹ್ಮಣರಲ್ಲ. ನಾನು ಶೌರಿ ಹೃಷೀಕೇಶ ಮತ್ತು ಈ ಈರ್ವರು ವೀರರು ಪಾಂಡವರು.

02020024a ತ್ವಾಮಾಹ್ವಯಾಮಹೇ ರಾಜನ್ ಸ್ಥಿರೋ ಯುಧ್ಯಸ್ವ ಮಾಗಧ|

02020024c ಮುಂಚ ವಾ ನೃಪತೀನ್ಸರ್ವಾನ್ಮಾ ಗಮಸ್ತ್ವಂ ಯಮಕ್ಷಯಂ||

ರಾಜನ್! ಮಾಗಧ! ನಾವು ನಿನ್ನನ್ನು ಆಹ್ವಾನಿಸುತ್ತಿದ್ದೇವೆ. ಸ್ಥಿರನಾಗಿ ಯುದ್ಧ ಮಾಡು. ಸರ್ವ ನೃಪತಿಗಳನ್ನೂ ಬಿಡುಗಡೆಮಾಡು ಅಥವಾ ಯಮಕ್ಷಯಕ್ಕೆ ಹೋಗು.”

02020025 ಜರಾಸಂಧ ಉವಾಚ|

02020025a ನಾಜಿತಾನ್ವೈ ನರಪತೀನಹಮಾದದ್ಮಿ ಕಾಂಶ್ಚನ|

02020025c ಜಿತಃ ಕಃ ಪರ್ಯವಸ್ಥಾತಾ ಕೋಽತ್ರ ಯೋ ನ ಮಯಾ ಜಿತಃ||

ಜರಾಸಂಧನು ಹೇಳಿದನು: “ನಾನು ಎಂದೂ ಸೋಲಿಸದೇ ಯಾವ ರಾಜನನ್ನೂ ಹಿಡಿದಿಲ್ಲ. ಸೋತವರು ಯಾರುತಾನೆ ನನ್ನನ್ನು ಎದುರಿಸಿದ್ದಾರೆ? ಮತ್ತು ನಾನು ಯಾರನ್ನು ತಾನೇ ಸೋಲಿಸಲಿಲ್ಲ?

02020026a ಕ್ಷತ್ರಿಯಸ್ಯೈತದೇವಾಹುರ್ಧರ್ಮ್ಯಂ ಕೃಷ್ಣೋಪಜೀವನಂ|

02020026c ವಿಕ್ರಮ್ಯ ವಶಮಾನೀಯ ಕಾಮತೋ ಯತ್ಸಮಾಚರೇತ್||

ಕೃಷ್ಣ! ವಿಕ್ರಮದಿಂದ ವಶಮಾಡಿಕೊಳ್ಳುವುದು ಮತ್ತು ತನಗಿಷ್ಟಬಂದಂತೆ ನಡೆದುಕೊಳ್ಳುವುದೇ ಕ್ಷತ್ರಿಯನ ಧರ್ಮವೆಂದು ಹೇಳಿದ್ದಾರೆ.

02020027a ದೇವತಾರ್ಥಮುಪಾಕೃತ್ಯ ರಾಜ್ಞಃ ಕೃಷ್ಣ ಕಥಂ ಭಯಾತ್|

02020027c ಅಹಮದ್ಯ ವಿಮುಂಚೇಯಂ ಕ್ಷಾತ್ರಂ ವ್ರತಮನುಸ್ಮರನ್||

ಕೃಷ್ಣ! ಕ್ಷತ್ರಿಯಧರ್ಮವನ್ನು ತಿಳಿದಿರುವ ನಾನು ದೇವನಿಗೆಂದು ಹಿಡಿದಿಟ್ಟಿರುವ ಈ ರಾಜರುಗಳನ್ನು ಇಂದು ಭಯದಿಂದ ಹೇಗೆ ಬಿಡುಗಡೆಮಾಡಬಲ್ಲೆ?

02020028a ಸೈನ್ಯಂ ಸೈನ್ಯೇನ ವ್ಯೂಢೇನ ಏಕ ಏಕೇನ ವಾ ಪುನಃ|

02020028c ದ್ವಾಭ್ಯಾಂ ತ್ರಿಭಿರ್ವಾ ಯೋತ್ಸ್ಯೇಽಹಂ ಯುಗಪತ್ಪೃಥಗೇವ ವಾ||

ಸೈನ್ಯದೊಂದಿಗೆ ಸೇರಿರುವ ಸೈನ್ಯವನ್ನು ಅಥವಾ ಒಬ್ಬನೇ ಒಬ್ಬನೊಂದಿಗೆ, ಅಥವಾ ಇಬ್ಬರೊಂದಿಗೆ ಅಥವಾ ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ಮೂವರೊಂದಿಗೆ ಯುದ್ಧಮಾಡಬಲ್ಲೆ.””

02020029 ವೈಶಂಪಾಯನ ಉವಾಚ|

02020029a ಏವಮುಕ್ತ್ವಾ ಜರಾಸಂಧಃ ಸಹದೇವಾಭಿಷೇಚನಂ|

02020029c ಆಜ್ಞಾಪಯತ್ತದಾ ರಾಜಾ ಯುಯುತ್ಸುರ್ಭೀಮಕರ್ಮಭಿಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಜರಾಸಂಧನು ಸಹದೇವನ ಅಭಿಷೇಕವನ್ನು ಆಜ್ಞಾಪಿಸಿ ಭಯಂಕರ ಯುದ್ಧಮಾಡಲು ಸಿದ್ಧನಾಗಿ ನಿಂತನು.

02020030a ಸ ತು ಸೇನಾಪತೀ ರಾಜಾ ಸಸ್ಮಾರ ಭರತರ್ಷಭ|

02020030c ಕೌಶಿಕಂ ಚಿತ್ರಸೇನಂ ಚ ತಸ್ಮಿನ್ಯುದ್ಧ ಉಪಸ್ಥಿತೇ||

02020031a ಯಯೋಸ್ತೇ ನಾಮನೀ ಲೋಕೇ ಹಂಸೇತಿ ಡಿಭಕೇತಿ ಚ|

02020031c ಪೂರ್ವಂ ಸಂಕಥಿತೇ ಪುಂಭಿರ್ನೃಲೋಕೇ ಲೋಕಸತ್ಕೃತೇ||

ಭರತರ್ಷಭ! ಆ ಯುದ್ಧವು ಪ್ರಾರಂಭವಾಗುವಾಗ ರಾಜನು ತನ್ನ ಸೇನಾಪತಿಗಳಾದ, ಲೋಕದಲ್ಲಿ ಹಂಸ-ಡಿಭಕರೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ, ಮನುಷ್ಯಲೋಕದಲ್ಲಿ ಹಿಂದೆ ಶ್ರೇಷ್ಠರೆಂದು ಕರೆಯಲ್ಪಟ್ಟು ಲೋಕಸತ್ಕೃತರಾಗಿದ್ದ, ಕೌಶಿಕ-ಚಿತ್ರಸೇನರನ್ನು ನೆನೆದನು.

02020032a ತಂ ತು ರಾಜನ್ವಿಭುಃ ಶೌರೀ ರಾಜಾನಂ ಬಲಿನಾಂ ವರಂ|

02020032c ಸ್ಮೃತ್ವಾ ಪುರುಷಶಾರ್ದೂಲ ಶಾರ್ದೂಲಸಮವಿಕ್ರಮಂ||

02020033a ಸತ್ಯಸಂಧೋ ಜರಾಸಂಧಂ ಭುವಿ ಭೀಮಪರಾಕ್ರಮಂ|

02020033c ಭಾಗಮನ್ಯಸ್ಯ ನಿರ್ದಿಷ್ಟಂ ವಧ್ಯಂ ಭೂಮಿಭೃದಚ್ಯುತಃ||

ರಾಜನ್! ಪುರುಷಶಾರ್ದೂಲ! ಅಚ್ಯುತ ಶೌರಿಯೂ ಕೂಡ ಆ ರಾಜನು ಬಲಶಾಲಿಗಳಲ್ಲಿ ಶ್ರೇಷ್ಠ, ವಿಕ್ರಮದಲ್ಲಿ ಶಾರ್ದೂಲ ಸಮನಾಗಿದ್ದಾನೆ, ಸತ್ಯಸಂಧ ಜರಾಸಂಧನು ಭುವಿಯಲ್ಲಿ ಭೀಮಪರಾಕ್ರಮಿಯಾಗಿದ್ದಾನೆ ಮತ್ತು ಅವನ ವಧೆಯು ಬೇರೆಯವನ ಪಾಲೆಂದು ನಿರ್ದಿಷ್ಟವಾಗಿದೆ ಎನ್ನುವುದನ್ನು ನೆನಪಿಸಿಕೊಂಡನು.

02020034a ನಾತ್ಮನಾತ್ಮವತಾಂ ಮುಖ್ಯ ಇಯೇಷ ಮಧುಸೂದನಃ|

02020034c ಬ್ರಹ್ಮಣೋಽಜ್ಞಾಂ ಪುರಸ್ಕೃತ್ಯ ಹಂತುಂ ಹಲಧರಾನುಜಃ||

ಹೀಗೆ ಹಲಧರನ ಅನುಜ ಮಧುಸೂದನನು ತನ್ನನ್ನು ತಾನೇ ಮುಖ್ಯನೆಂದು ಪರಿಗಣಿಸದೇ ಬ್ರಹ್ಮನ ಯೋಚನೆಯನ್ನು ಪುರಸ್ಕರಿಸಿ[10] ಅವನನ್ನು ಕೊಲ್ಲಲು ಮುಂದಾದನು[11].”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧಯುದ್ಧೋದ್ಯೋಗೇ ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧಯುದ್ಧೋದ್ಯೂಗ ಎನ್ನುವ ಇಪ್ಪತ್ತನೆಯ ಅಧ್ಯಾಯವು.

Image result for indian flowers

[1]ಕ್ಷತ್ರಿಯನಿಗೆ ದಂಡಿಸುವುದು ಧರ್ಮವಾಗಿದ್ದರೂ ಕೂಡ ಓರ್ವ ಮುಗ್ಧನನ್ನು ದಂಡಿಸುವುದರಿಂದ ಅವನು ಧರ್ಮಘಾತಿಯಾಗುತ್ತಾನೆ. ಕ್ಷತ್ರಿಯನಾದ ಮಾತ್ರಕ್ಕೆ ಅವನಿಗೆ ಮುಗ್ಧನನ್ನು (ಅಂದರೆ ತನ್ನ ತಪ್ಪು ಏನೆಂದು ತಿಳಿಯದಿದ್ದವನನ್ನು) ದಂಡಿಸುವುದು ಸರಿಯಲ್ಲ.

[2]ಗೋರಖಪುರ ಸಂಪುಟದಲ್ಲಿ ಈ ಶ್ಲೋಕಗಳಿಗೆ ಇನ್ನೆರಡು ಶ್ಲೋಕಗಳನ್ನು ಸೇರಿಸಿ ಈ ರೀತಿ ನೀಡಲಾಗಿದೆ: ತ್ರೈಲೋಕ್ಯೇಕ್ಷತ್ರಧರ್ಮೋಹಿ ಶ್ರೇಯಾನ್ ವೈ ಸಾಧುಚಾರಿಣಾಂ| ನಾನ್ಯಂ ಧರ್ಮಂ ಪ್ರಶಂಸಂತಿ ಯೇ ಚ ಧರ್ಮವಿದೋ ಜನಾಃ|| ತಸ್ಯ ಮೇಽದ್ಯ ಸ್ಥಿತಸ್ಯೇಹ ಸ್ವಧರ್ಮೇ ನಿಯತಾತ್ಮನಃ| ಅನಾಗಸಂ ಪ್ರಜಾನಾಂ ಚ ಪ್ರಮಾದಾದಿವ ಜಲ್ಪಥ|| ಅರ್ಥಾತ್ ಸಾಧುಚಾರಿಣರಿಗೆ ಮೂರೂ ಲೋಕದಲ್ಲಿ ಕ್ಷತ್ರಿಯಧರ್ಮವೇ ಅತಿ ಶ್ರೇಷ್ಠವಾದುದು. ಧರ್ಮವಿದ ಜನರು ಬೇರೆ ಯಾವ ಧರ್ಮವನ್ನೂ ಪ್ರಶಂಸಿಸುವುದಿಲ್ಲ. ನಿಯತಾತ್ಮನಾದ ನಾನು ಸ್ವಧರ್ಮದಲ್ಲಿಯೇ ನಿರತನಾಗಿದ್ದೇನೆ. ಅನಾಗಸನೂ ಪ್ರಜಾಪಾಲಕನೂ ಆದ ನನ್ನನ್ನು ಪ್ರಮಾದದಿಂದ ನೀವು ಶತ್ರುವೆಂದು ತಿಳಿದಿರಬಹುದು.

[3]ಕ್ಷತ್ರಿಯನಾದ ನೀನು ಇತರ ಕ್ಷತ್ರಿಯರನ್ನು ಪಶುಗಳೋಪಾದಿಯಲ್ಲಿ ಕೊಡುತ್ತಿದ್ದೀಯೆ ಎಂದರ್ಥ.

[4]ಮತಿಗೆಟ್ಟ

[5]ಬುದ್ಧಿಯು ಸರಿಯಾಗಿ ಕೆಲಸಮಾಡುತ್ತಿಲ್ಲ

[6]ಈ ಶ್ಲೋಕದ ಇನ್ನೊಂದು ಅರ್ಥ ಹೀಗಿರಬಹುದು: ತನ್ನವರ ಶ್ರೇಯಸ್ಸಿಗಾಗಿ ರಣದಲ್ಲಿ ಮರಣಹೊಂದಿದ ಯಾವ ಕ್ಷತ್ರಿಯನು ಅವ್ಯಯವೂ ಅತುಲವೂ ಆದ ಸ್ವರ್ಗವನ್ನು ಹೊಂದುವುದಿಲ್ಲ?

[7]ಗೋರಖಪುರದ ಸಂಪುಟದಲ್ಲಿ “ಯಜಂತೇ” ಎಂಬ ಶಬ್ಧದ ಬದಲಾಗಿ “ಜಯಂತಿ” ಎಂಬ ಪದವಿದೆ. ಈ ಪದದಿಂದ ಇಡೀ ಶ್ಲೋಕದ ಅರ್ಥ ಬದಲಾಗುತ್ತದೆ. ಸ್ವರ್ಗವನ್ನೇ ಗುರಿಯನ್ನಾಗಿಟ್ಟುಕೊಂಡು ರಣಯಜ್ಞದ ದೀಕ್ಷೆಯನ್ನು ಪಡೆದ ಕ್ಷತ್ರಿಯರು ಲೋಕದಲಿ ವಿಜಯವನ್ನುಹೊಂದುತ್ತಾರೆ.

[8]ಗೋರಖಪುರದ ಸಂಪುಟದಲ್ಲಿ ಸ್ವರ್ಗಯೋನಿರ್ಜಯೋ ಎನ್ನುವುದರ ಬದಲಾಗಿ ಸ್ವರ್ಗಯೋನಿರ್ಮಹದ್ ಬ್ರಹ್ಮ ಎಂದಿದೆ. ಇದಕ್ಕೆ ಈ ಕೆಳಗಿನ ಅರ್ಥವನ್ನೂ ಕೊಡಲಾಗಿದೆ: ವೇದಾಧ್ಯಯನ, ಯಶಸ್ಸು ಮತ್ತು ತಪಸ್ಸು ಈ ಮೂರೂ ಸ್ವರ್ಗಪ್ರಾಪ್ತಿಗೆ ಕಾರಣಗಳೆಂದಾದರೆ ಕ್ಷತ್ರಿಯರಿಗೆ ಯುದ್ಧದಲ್ಲಿ ಮೃತ್ಯುವು ಸ್ವರ್ಗಪ್ರಾಪ್ತಿಗೆ ಕಾರಣ.

[9]ದಂಬೋದ್ಭವನ ಚರಿತ್ರೆಯನ್ನು ಭೀಷ್ಮನು ಮುಂದೆ ಉದ್ಯೋಗಪರ್ವದಲ್ಲಿ ದುರ್ಯೋಧನನಿಗೆ ಹೇಳುವುದಿದೆ.

[10] ದೈವವೇ ಜರಾಸಂಧನ ಸಂಹಾರಕನನ್ನು ಆರಿಸಿಕೊಳ್ಳಲಿ ಎಂದು ಕೃಷ್ಣನು ಜರಾಸಂಧನಿಗೆ “ನಾವು ಮೂವರಲ್ಲಿ ಯಾರೊಡನೆ ಯುದ್ಧಮಾಡಲು ಬಯಸುತ್ತೀಯೆ?” ಎಂದು ಕೇಳಿದ್ದುದು.

[11]ಜರಾಸಂಧ ಮತ್ತು ಕೃಷ್ಣರ ನಡುವೆ ಇರುವ ವೈರತ್ವದ ಕುರಿತಾದ ವಿವರಣೆಯು ಕುಂಭಕೋಣ ಸಂಪುಟದಲ್ಲಿದೆ.

Comments are closed.