ಸಭಾಪರ್ವ: ಸಭಾಕ್ರಿಯಾ ಪರ್ವ
೩
ಮಯಸಭೆಯ ನಿರ್ಮಾಣ (೧-೩೪).
02003001 ವೈಶಂಪಾಯನ ಉವಾಚ|
02003001a ಅಥಾಬ್ರವೀನ್ಮಯಃ ಪಾರ್ಥಮರ್ಜುನಂ ಜಯತಾಂ ವರಂ|
02003001c ಆಪೃಚ್ಛೇ ತ್ವಾಂ ಗಮಿಷ್ಯಾಮಿ ಕ್ಷಿಪ್ರಮೇಷ್ಯಾಮಿ ಚಾಪ್ಯಹಂ[1]||
ವೈಶಂಪಾಯನನು ಹೇಳಿದನು: “ವಿಜಯಿಗಳಲ್ಲಿ ಶ್ರೇಷ್ಠ ಪಾರ್ಥ ಅರ್ಜುನನಿಗೆ ಮಯನು ಹೇಳಿದನು: “ನಾನು ಈಗ ಹೊರಡುತ್ತಿದ್ದೇನೆ. ಬೇಗನೆ ಹಿಂದಿರುಗಿಬಿಡುತ್ತೇನೆ. ನನ್ನನ್ನು ಕೇಳು.
02003002a ಉತ್ತರೇಣ ತು ಕೈಲಾಸಂ ಮೈನಾಕಂ ಪರ್ವತಂ ಪ್ರತಿ|
02003002c ಯಕ್ಷ್ಯಮಾಣೇಷು ಸರ್ವೇಷು ದಾನವೇಷು ತದಾ ಮಯಾ|
02003002e ಕೃತಂ ಮಣಿಮಯಂ ಭಾಂಡಂ ರಮ್ಯಂ ಬಿಂದುಸರಃ ಪ್ರತಿ||
02003003a ಸಭಾಯಾಂ ಸತ್ಯಸಂಧಸ್ಯ ಯದಾಸೀದ್ವೃಷಪರ್ವಣಃ|
02003003c ಆಗಮಿಷ್ಯಾಮಿ ತದ್ಗೃಹ್ಯ ಯದಿ ತಿಷ್ಠತಿ ಭಾರತ||
ಕೈಲಾಸದ ಉತ್ತರದ ಮೇರುಪರ್ವತದಲ್ಲಿ ಎಲ್ಲ ದಾನವರೂ ಯಾಗಮಾಡಬೇಕೆಂದಿದ್ದಾಗ ನಾನು ರಮ್ಯ ಬಿಂದು ಸರೋವರದ ಬಳಿ ಒಂದು ಮಣಿಮಯ ಭಂಡಾರವನ್ನು ರಚಿಸಿದ್ದೆ. ಅದನ್ನು ಸತ್ಯಸಂಧ ವೃಷಪರ್ವನ ಸಭೆಯಲ್ಲಿ ಇಟ್ಟಿದ್ದೆ. ಭಾರತ! ಅದು ಇನ್ನೂ ಅಲ್ಲಿ ಇದ್ದರೆ ನಾನು ಹೋಗಿ ತೆಗೆದುಕೊಂಡು ಬರುತ್ತೇನೆ.
02003004a ತತಃ ಸಭಾಂ ಕರಿಷ್ಯಾಮಿ ಪಾಂಡವಾಯ ಯಶಸ್ವಿನೇ|
02003004c ಮನಃಪ್ರಹ್ಲಾದಿನೀಂ ಚಿತ್ರಾಂ ಸರ್ವರತ್ನವಿಭೂಷಿತಾಂ||
ಅದರಿಂದ ಯಶಸ್ವಿನಿ ಪಾಂಡವನಿಗಾಗಿ ಎಲ್ಲರ ಮನಸ್ಸನ್ನೂ ಅಹ್ಲಾದಿಸುವ ಸರ್ವರತ್ನಭೂಷಿತ ಸುಂದರ ಸಭೆಯನ್ನು ನಿರ್ಮಿಸುತ್ತೇನೆ
02003005a ಅಸ್ತಿ ಬಿಂದುಸರಸ್ಯೇವ ಗದಾ ಶ್ರೇಷ್ಠಾ ಕುರೂದ್ವಹ|
02003005c ನಿಹಿತಾ ಯೌವನಾಶ್ವೇನ ರಾಜ್ಞಾ ಹತ್ವಾ ರಣೇ ರಿಪೂನ್|
02003005e ಸುವರ್ಣಬಿಂದುಭಿಶ್ಚಿತ್ರಾ ಗುರ್ವೀ ಭಾರಸಹಾ ದೃಢಾ||
02003006a ಸಾ ವೈ ಶತಸಹಸ್ರಸ್ಯ ಸಮ್ಮಿತಾ ಸರ್ವಘಾತಿನೀ|
02003006c ಅನುರೂಪಾ ಚ ಭೀಮಸ್ಯ ಗಾಂಡೀವಂ ಭವತೋ ಯಥಾ||
ಕುರುದ್ದಹ! ಬಿಂದುಸರೋವರದಲ್ಲಿ ರಾಜ ಯೌವನಾಶ್ವನು ರಣದಲ್ಲಿ ರಿಪುಗಳನ್ನು ಸಂಹರಿಸಿ ಇಟ್ಟ ಶ್ರೇಷ್ಠ ಗದೆಯೊಂದಿದೆ. ಅದು ಭಾರವಾಗಿದೆ, ದೊಡ್ಡದಾಗಿದೆ. ಸುಂದರ, ಸುವರ್ಣಬಿಂದುಗಳಿಂದ ಅಲಂಕೃತಗೊಂಡು ಸುಂದರವಾಗಿದೆ. ಧೃಡವಾಗಿದ್ದು ಶತಸಹಸ್ರ ಸೇನೆಯಲ್ಲಿ ಎಲ್ಲರನ್ನೂ ಸಂಹರಿಸಬಲ್ಲದ್ದು. ನಿನಗೆ ಗಾಂಡೀವವು ಹೇಗೋ ಹಾಗೆ ಭೀಮನಿಗೆ ಅದು ಅನುರೂಪವಾದದ್ದು[1][ಅದರ ಹೆಸರೇನಿತ್ತು?].
02003007a ವಾರುಣಶ್ಚ ಮಹಾಶಂಖೋ ದೇವದತ್ತಃ ಸುಘೋಷವಾನ್|
02003007c ಸರ್ವಮೇತತ್ಪ್ರದಾಸ್ಯಾಮಿ ಭವತೇ ನಾತ್ರ ಸಂಶಯಃ|
02003007e ಇತ್ಯುಕ್ತ್ವಾ ಸೋಽಸುರಃ ಪಾರ್ಥಂ ಪ್ರಾಗುದೀಚೀಮಗಾದ್ದಿಶಂ||
ಮತ್ತು ವರುಣನ ಸುಘೋಷದಿಂದೊಡಗೂಡಿದ ದೇವದತ್ತ ಮಹಾಶಂಖವೂ ಇದೆ. ಇವೆಲ್ಲವನ್ನು ನಿನಗೆ ತಂದು ಕೊಡುತ್ತೇನೆ. ಅದರಲ್ಲಿ ಸಂಶಯವೇ ಇಲ್ಲ!” ಪಾರ್ಥನಲ್ಲಿ ಈ ರೀತಿ ಮಾತನಾಡಿ ಆ ಅಸುರನು ಆಗ್ನೇಯ ದಿಕ್ಕಿನಲ್ಲಿ ಹೋದನು.
02003008a ಉತ್ತರೇಣ ತು ಕೈಲಾಸಂ ಮೈನಾಕಂ ಪರ್ವತಂ ಪ್ರತಿ|
02003008c ಹಿರಣ್ಯಶೃಂಗೋ ಭಗವಾನ್ಮಹಾಮಣಿಮಯೋ ಗಿರಿಃ||
02003009a ರಮ್ಯಂ ಬಿಂದುಸರೋ ನಾಮ ಯತ್ರ ರಾಜಾ ಭಗೀರಥಃ|
02003009c ದೃಷ್ಟ್ವಾ ಭಾಗೀರಥೀಂ ಗಂಗಾಮುವಾಸ ಬಹುಲಾಃ ಸಮಾಃ||
ಕೈಲಾಸದ ಉತ್ತರದಲ್ಲಿ ಮೈನಾಕ ಪರ್ವತದ ಕಡೆ ಹಿರಣ್ಮಯ ಶಿಖರವನ್ನು ಹೊಂದಿದ ಒಂದು ಪೂಜನೀಯ ಮಣಿಮಯ ಮಹಾಗಿರಿಯಿದೆ. ಅಲ್ಲಿಯೇ ರಾಜ ಭಗೀರಥನು ಬಹಳ ವರ್ಷಗಳು ಭಾಗೀರಥಿ ಗಂಗೆಯನ್ನು ನೋಡುತ್ತಾ ವಾಸಿಸುತ್ತಿದ್ದ ಬಿಂದು ಎಂಬ ಹೆಸರಿನ ರಮ್ಯ ಸರೋವರವಿದೆ.
02003010a ಯತ್ರೇಷ್ಟ್ವಾ ಸರ್ವಭೂತಾನಾಮೀಶ್ವರೇಣ ಮಹಾತ್ಮನಾ|
02003010c ಆಹೃತಾಃ ಕ್ರತವೋ ಮುಖ್ಯಾಃ ಶತಂ ಭರತಸತ್ತಮ||
02003011a ಯತ್ರ ಯೂಪಾ ಮಣಿಮಯಾಶ್ಚಿತ್ಯಾಶ್ಚಾಪಿ ಹಿರಣ್ಮಯಾಃ|
02003011c ಶೋಭಾರ್ಥಂ ವಿಹಿತಾಸ್ತತ್ರ ನ ತು ದೃಷ್ಟಾಂತತಃ ಕೃತಾಃ||
ಭರತಸತ್ತಮ! ಅಲ್ಲಿಯೇ ಮಹಾತ್ಮ ಸರ್ವಭೂತೇಶ್ವರನು ಯಾಗ ಮಂಟಪದ ಮಣಿಮಯ ಸ್ಥಂಭಗಳನ್ನು ಮತ್ತು ಹಿರಣ್ಮಯ ಯಾಗ ಕುಂಡವನ್ನು, ಸುಂದರವಾಗಿ ಕಾಣಲಿಕ್ಕೆಂದೇ ಹೊರತು ದೃಷ್ಟಾಂತವನ್ನು ನೀಡಲಿಕ್ಕಲ್ಲ, ರಚಿಸಿ ಒಂದು ನೂರು ಮುಖ್ಯ ಯಾಗಗಳನ್ನು ಮಾಡಿದ್ದನು.
02003012a ಯತ್ರೇಷ್ಟ್ವಾ ಸ ಗತಃ ಸಿದ್ಧಿಂ ಸಹಸ್ರಾಕ್ಷಃ ಶಚೀಪತಿಃ|
02003012c ಯತ್ರ ಭೂತಪತಿಃ ಸೃಷ್ಟ್ವಾ ಸರ್ವಲೋಕಾನ್ಸನಾತನಃ|
02003012e ಉಪಾಸ್ಯತೇ ತಿಗ್ಮತೇಜಾ ವೃತೋ ಭೂತೈಃ ಸಹಸ್ರಶಃ||
ಇದೇ ಸ್ಥಳದಲ್ಲಿ ಶಚೀಪತಿ ಸಹಸ್ರಾಕ್ಷನು ಸಿದ್ಧಿಯನ್ನು ಪಡೆದನು. ಅಲ್ಲಿಯೇ ತಿಗ್ಮತೇಜಸ್ವಿ ಭೂತಪತಿಯು ಸನಾತನ ಸರ್ವಲೋಕಗಳನ್ನೂ ಸೃಷ್ಟಿಸಿ ಸಹಸ್ರಾರು ಭೂತಗಳಿಂದ ಸುತ್ತುವರೆದು ಉಪಾಸಿತನಾಗಿದ್ದನು.
02003013a ನರನಾರಾಯಣೌ ಬ್ರಹ್ಮಾ ಯಮಃ ಸ್ಥಾಣುಶ್ಚ ಪಂಚಮಃ|
02003013c ಉಪಾಸತೇ ಯತ್ರ ಸತ್ರಂ ಸಹಸ್ರಯುಗಪರ್ಯಯೇ||
ಅಲ್ಲಿಯೇ ನರ ನಾರಾಯಣರು, ಬ್ರಹ್ಮ, ಯಮ, ಮತ್ತು ಐದನೆಯದಾಗಿ ಸ್ಥಾಣುವು ಸಹಸ್ರಯುಗಗಳಿಗೊಮ್ಮೆ ಸತ್ರವನ್ನು ನಡೆಸುತ್ತಾರೆ.
02003014a ಯತ್ರೇಷ್ಟಂ ವಾಸುದೇವೇನ ಸತ್ರೈರ್ವರ್ಷಸಹಸ್ರಕೈಃ|
02003014c ಶ್ರದ್ಧಧಾನೇನ ಸತತಂ ಶಿಷ್ಟಸಂಪ್ರತಿಪತ್ತಯೇ||
ಅದೇ ಸ್ಥಳದಲ್ಲಿ ವಾಸುದೇವನು ಸಹಸ್ರವರ್ಷಗಳ ಸತ್ರವನ್ನು ಶ್ರದ್ಧೆಯಿಂದ ಸತತವಾಗಿ ಶಿಷ್ಟರಿಗೆ ಕಲಿಸಲೋಸುಗ ಆಯೋಜಿಸುತ್ತಾನೆ.
02003015a ಸುವರ್ಣಮಾಲಿನೋ ಯೂಪಾಶ್ಚಿತ್ಯಾಶ್ಚಾಪ್ಯತಿಭಾಸ್ವರಾಃ|
02003015c ದದೌ ಯತ್ರ ಸಹಸ್ರಾಣಿ ಪ್ರಯುತಾನಿ ಚ ಕೇಶವಃ||
ಅಲ್ಲಿ ಕೇಶವನು ಸಹಸ್ರಾರು ಸಂಖ್ಯೆಗಳಲ್ಲಿ ಸುವರ್ಣಮಾಲೆಗಳಿಂದಲಂಕೃತ ಕಂಬಗಳನ್ನೂ ಮತ್ತು ಹೊಳೆಯುತ್ತಿರುವ ಯಜ್ಞವೇದಿಕೆಗಳನ್ನೂ ಕೊಟ್ಟಿದ್ದನು.
02003016a ತತ್ರ ಗತ್ವಾ ಸ ಜಗ್ರಾಹ ಗದಾಂ ಶಂಖಂ ಚ ಭಾರತ|
02003016c ಸ್ಫಾಟಿಕಂ ಚ ಸಭಾದ್ರವ್ಯಂ ಯದಾಸೀದ್ವೃಷಪರ್ವಣಃ|
02003016e ಕಿಂಕರೈಃ ಸಹ ರಕ್ಷೋಭಿರಗೃಹ್ಣಾತ್ಸರ್ವಮೇವ ತತ್||
ಭಾರತ! ಅಲ್ಲಿಗೆ ಹೋಗಿ ಆ ರಾಕ್ಷಸನು ಗದೆ, ಶಂಖ, ಮತ್ತು ವೃಷಪರ್ವನಲ್ಲಿದ್ದ ಸ್ಫಟಿಕ ಸಭಾದ್ರವ್ಯಗಳೆಲ್ಲವನ್ನೂ ಕಿಂಕರರ ಸಹಾಯದಿಂದ ಎತ್ತಿಕೊಂಡನು.
02003017a ತದಾಹೃತ್ಯ ತು ತಾಂ ಚಕ್ರೇ ಸೋಽಸುರೋಽಪ್ರತಿಮಾಂ ಸಭಾಂ|
02003017c ವಿಶ್ರುತಾಂ ತ್ರಿಷು ಲೋಕೇಷು ದಿವ್ಯಾಂ ಮಣಿಮಯೀಂ ಶುಭಾಂ||
ಅವೆಲ್ಲವನ್ನೂ ತೆಗೆದುಕೊಂಡು ಬಂದು ಅವನು ಸುರರದ್ದೋ ಎಂದು ತೋರುವ, ಅಪ್ರತಿಮ, ದಿವ್ಯ, ಮಣಿಮಯ, ಮೂರೂ ಲೋಕಗಳಲ್ಲಿಯೂ ವಿಶ್ರುತ ಶುಭ ಸಭೆಯ ನಿರ್ಮಾಣದಲ್ಲಿ ತೊಡಗಿದನು.
02003018a ಗದಾಂ ಚ ಭೀಮಸೇನಾಯ ಪ್ರವರಾಂ ಪ್ರದದೌ ತದಾ|
02003018c ದೇವದತ್ತಂ ಚ ಪಾರ್ಥಾಯ ದದೌ ಶಂಖಮನುತ್ತಮಂ[2]||
ಅವನು ಅಪ್ರತಿಮ ಗದೆಯನ್ನು ಭೀಮಸೇನನಿಗೆ ಕೊಟ್ಟನು ಮತ್ತು ಅನುತ್ತಮ ದೇವದತ್ತ ಶಂಖವನ್ನು ಪಾರ್ಥನಿಗಿತ್ತನು.
02003019a ಸಭಾ ತು ಸಾ ಮಹಾರಾಜ ಶಾತಕುಂಭಮಯದ್ರುಮಾ|
02003019c ದಶ ಕಿಷ್ಕುಸಹಸ್ರಾಣಿ ಸಮಂತಾದಾಯತಾಭವತ್||
ಮಹಾರಾಜ! ನೂರು ಗಟ್ಟಿ ಸ್ತಂಭಗಳಿಂದ ಕೂಡಿದ ಆ ಸಭೆಯು ಪರಿಧಿಯಲ್ಲಿ ಹತ್ತು ಸಾವಿರ ಕಿಷ್ಕುಗಳದ್ದಾಗಿತ್ತು.
02003020a ಯಥಾ ವಹ್ನೇರ್ಯಥಾರ್ಕಸ್ಯ ಸೋಮಸ್ಯ ಚ ಯಥೈವ ಸಾ|
02003020c ಭ್ರಾಜಮಾನಾ ತಥಾ ದಿವ್ಯಾ ಬಭಾರ ಪರಮಂ ವಪುಃ||
ಆ ಅತಿ ದಿವ್ಯ ಸುಂದರ ಸಭೆಯು ಅಗ್ನಿ, ಸೂರ್ಯ ಅಥವಾ ಚಂದ್ರನಂತೆ ಹೊಳೆಯುತ್ತಿತ್ತು.
02003021a ಪ್ರತಿಘ್ನತೀವ ಪ್ರಭಯಾ ಪ್ರಭಾಮರ್ಕಸ್ಯ ಭಾಸ್ವರಾಂ|
02003021c ಪ್ರಬಭೌ ಜ್ವಲಮಾನೇವ ದಿವ್ಯಾ ದಿವ್ಯೇನ ವರ್ಚಸಾ||
ಕಾಂತಿಯಲ್ಲಿ ಸೂರ್ಯನ ಕಾಂತಿಯನ್ನೂ ಮೀರುತ್ತಿದೆಯೋ ಎಂಬಂತಿದ್ದ ಅದು ದೇವತೆಗಳ ವರ್ಚಸ್ಸಿನಿಂದ ಉರಿಯುತ್ತಿದೆಯೋ ಎಂಬಂತೆ ಹೊಳೆಯುತ್ತಿತ್ತು.
02003022a ನಗಮೇಘಪ್ರತೀಕಾಶಾ ದಿವಮಾವೃತ್ಯ ವಿಷ್ಠಿತಾ|
02003022c ಆಯತಾ ವಿಪುಲಾ ಶ್ಲಕ್ಷ್ಣಾ ವಿಪಾಪ್ಮಾ ವಿಗತಕ್ಲಮಾ||
ಅತಿ ಎತ್ತರದ ಆ ವಿಸ್ತಾರ ಸುಂದರ ಸಭೆಯು ಪರ್ವತ ಅಥವಾ ಮೋಡಗಳಂತೆ ಆಕಾಶವನ್ನು ಮುಟ್ಟಿ ನಿಂತಿತ್ತು ಮತ್ತು ನೋಡಿದವರ ಆಯಾಸವನ್ನೆಲ್ಲ ನೀಗಿಸುತ್ತಿತ್ತು.
02003023a ಉತ್ತಮದ್ರವ್ಯಸಂಪನ್ನಾ ಮಣಿಪ್ರಾಕಾರಮಾಲಿನೀ|
02003023c ಬಹುರತ್ನಾ ಬಹುಧನಾ ಸುಕೃತಾ ವಿಶ್ವಕರ್ಮಣಾ||
ಉತ್ತಮ ದ್ರವ್ಯಗಳಿಂದ ನಿರ್ಮಿತವಾಗಿ ಮಣಿಯುಕ್ತ ಗೋಡೆಗಳಿಂದ ಸುತ್ತುವರೆಯಲ್ಪಟ್ಟ ಅದು ವಿಶ್ವಕರ್ಮನ ಸುಕೃತದಿಂದ ಬಹು ರತ್ನ ಮತ್ತು ಬಹು ಧನಗಳಿಂದ ಭರಿತವಾಗಿತ್ತು.
02003024a ನ ದಾಶಾರ್ಹೀ ಸುಧರ್ಮಾ ವಾ ಬ್ರಹ್ಮಣೋ ವಾಪಿ ತಾದೃಶೀ|
02003024c ಆಸೀದ್ರೂಪೇಣ ಸಂಪನ್ನಾ ಯಾಂ ಚಕ್ರೇಽಪ್ರತಿಮಾಂ ಮಯಃ||
ಮಯನು ಇದಕ್ಕೆ ನೀಡಿದ್ದ ರೂಪ ಸಂಪನ್ನತೆಗೆ ದಾಶಾರ್ಹನ ಸುಧರ್ಮವಾಗಲೀ ಬ್ರಹ್ಮನ ಸಭೆಯಾಗಲೀ ಸರಿಸಾಟಿಯಾಗುವಂತಿರಲಿಲ್ಲ.
02003025a ತಾಂ ಸ್ಮ ತತ್ರ ಮಯೇನೋಕ್ತಾ ರಕ್ಷಂತಿ ಚ ವಹಂತಿ ಚ|
02003025c ಸಭಾಮಷ್ಟೌ ಸಹಸ್ರಾಣಿ ಕಿಂಕರಾ ನಾಮ ರಾಕ್ಷಸಾಃ||
02003026a ಅಂತರಿಕ್ಷಚರಾ ಘೋರಾ ಮಹಾಕಾಯಾ ಮಹಾಬಲಾಃ|
02003026c ರಕ್ತಾಕ್ಷಾಃ ಪಿಂಗಲಾಕ್ಷಾಶ್ಚ ಶುಕ್ತಿಕರ್ಣಾಃ ಪ್ರಹಾರಿಣಃ||
ಮಯನ ಆಜ್ಞೆಯಂತೆ ಕಿಂಕರರೆಂಬ ಹೆಸರಿನ ಎಂಟು ಸಹಸ್ರ ರಾಕ್ಷಸರು ಆ ಸಭೆಯನ್ನು ಕಾಯುತ್ತಿದ್ದರು. ಅಂತರಿಕ್ಷಚರಿ ಘೋರ, ಮಹಾಕಾಯ, ಮಹಾಬಲಿಗಳೂ ಆಗಿದ್ದ ಅವರು ರಕ್ತಾಕ್ಷರೂ, ಪಿಂಗಳಾಕ್ಷರೂ, ಶುಕ್ತಿಕರ್ಣರೂ, ಮತ್ತು ಪ್ರಹಾರಿಗಳೂ ಆಗಿದ್ದರು.
02003027a ತಸ್ಯಾಂ ಸಭಾಯಾಂ ನಲಿನೀಂ ಚಕಾರಾಪ್ರತಿಮಾಂ ಮಯಃ|
02003027c ವೈಡೂರ್ಯಪತ್ರವಿತತಾಂ ಮಣಿನಾಲಮಯಾಂಬುಜಾಂ||
02003028a ಪದ್ಮಸೌಗಂಧಿಕವತೀಂ ನಾನಾದ್ವಿಜಗಣಾಯುತಾಂ|
02003028c ಪುಷ್ಪಿತೈಃ ಪಮ್ಕಜೈಶ್ಚಿತ್ರಾಂ ಕೂರ್ಮಮತ್ಸ್ಯೈಶ್ಚ ಶೋಭಿತಾಂ||
ಆ ಸಭೆಯಲ್ಲಿ ಮಯನು ಅಪ್ರತಿಮ ವೈಡೂರ್ಯದ ಎಲೆಗಳು ಮತ್ತು ಮಣಿಯುಕ್ತ ದಂಟುಗಳನ್ನುಳ್ಳ ಕಮಲ, ಪದ್ಮ, ಸೌಗಂಧಿಕಾ ಪುಷ್ಪಗಳಿಂದ, ಪುಷ್ಪಿತ ನಾನಾವಿಧದ ನೀರು ಸಸ್ಯಗಳಿಂದ, ಪಂಕಜಗಳು, ಕೂರ್ಮ ಮತ್ಸ್ಯಗಳಿಂದ ತುಂಬಿ ಶೋಭನೀಯವಾದ ಒಂದು ಸರೋವರವನ್ನು ನಿರ್ಮಿಸಿದನು.
02003029a ಸೂಪತೀರ್ಥಾಮಕಲುಷಾಂ ಸರ್ವರ್ತುಸಲಿಲಾಂ ಶುಭಾಂ|
02003029c ಮಾರುತೇನೈವ ಚೋದ್ಧೂತೈರ್ಮುಕ್ತಾಬಿಂದುಭಿರಾಚಿತಾಂ||
ಅದರೊಳಗೆ ನಿಧಾನವಾಗಿ ಮೆಟ್ಟಿಲುಗಳು ಜಾರಿದ್ದವು, ನೀರು ಕೆಸರಿಲ್ಲದೆ ಶುಭ್ರವಾಗಿತ್ತು. ಎಲ್ಲ ಋತುಗಳಲ್ಲಿಯೂ ತುಂಬಿರುತ್ತಿತ್ತು ಮತ್ತು ಅದರಲ್ಲಿರುವ ಮುಕ್ತಬಿಂದುಗಳಂತಿರುವ ಪುಷ್ಪಗಳು ಮಂದ ಮಾರುತವು ಬೀಸಲು ತೇಲಾಡುತ್ತಿದ್ದವು.
02003030a ಮಣಿರತ್ನಚಿತಾಂ ತಾಂ ತು ಕೇ ಚಿದಭ್ಯೇತ್ಯ ಪಾರ್ಥಿವಾಃ|
02003030c ದೃಷ್ಟ್ವಾಪಿ ನಾಭ್ಯಜಾನಂತ ತೇಽಜ್ಞಾನಾತ್ಪ್ರಪತಂತ್ಯುತ||
ಮಣಿರತ್ನಗಳಿಂದ ರಚಿತಗೊಂಡ ಅದನ್ನು ನೋಡಿದ ಕೆಲವು ಪಾರ್ಥಿವರು ಸರೋವರವೆಂದು ಕಂಡರೂ ಗುರುತಿಸಲಾಗದೆ ಅಜ್ಞಾನದಿಂದ ಅದರೊಳಗೆ ಬಿದ್ದರು.
02003031a ತಾಂ ಸಭಾಮಭಿತೋ ನಿತ್ಯಂ ಪುಷ್ಪವಂತೋ ಮಹಾದ್ರುಮಾಃ|
02003031c ಆಸನ್ನಾನಾವಿಧಾ ನೀಲಾಃ ಶೀತಚ್ಛಾಯಾ ಮನೋರಮಾಃ||
ಆ ಸಭೆಯ ಸುತ್ತಲೂ ನಿತ್ಯವೂ ಪುಷ್ಪವಂತ, ನಾನಾವಿಧದ ನೀಲ ಶೀತ ನೆರಳನ್ನು ನೀಡುವ ಮನೋರಮ ಮಹಾದ್ರುಮಗಳು ನಿಂತಿದ್ದವು.
02003032a ಕಾನನಾನಿ ಸುಗಂಧೀನಿ ಪುಷ್ಕರಿಣ್ಯಶ್ಚ ಸರ್ವಶಃ|
02003032c ಹಂಸಕಾರಂಡವಯುತಾಶ್ಚಕ್ರವಾಕೋಪಶೋಭಿತಾಃ||
ಎಲ್ಲೆಡೆಯಲ್ಲಿಯೂ ಸುಂಗಂಧ ಕಾನನಗಳು, ಹಂಸ, ಬಾತುಕೋಳಿ ಮತ್ತು ಚಕ್ರವಾಕ ಶೋಭಿತಗೊಂಡ ಪುಷ್ಕರಣಿಗಳು ಇದ್ದವು.
02003033a ಜಲಜಾನಾಂ ಚ ಮಾಲ್ಯಾನಾಂ ಸ್ಥಲಜಾನಾಂ ಚ ಸರ್ವಶಃ|
02003033c ಮಾರುತೋ ಗಂಧಮಾದಾಯ ಪಾಂಡವಾನ್ಸ್ಮ ನಿಷೇವತೇ||
ಮಾರುತ ಗಾಳಿಯು ನೀರು ಮತ್ತು ನೆಲಗಳಲ್ಲಿ ಬೆಳೆದ ಪುಷ್ಪಗಳೆಲ್ಲವುಗಳ ಸುವಾಸನೆಯನ್ನು ಹೊತ್ತು ಪಾಂಡವರ ಬಳಿ ಬೀಸುತ್ತಿತ್ತು.
02003034a ಈದೃಶೀಂ ತಾಂ ಸಭಾಂ ಕೃತ್ವಾ ಮಾಸೈಃ ಪರಿಚತುರ್ದಶೈಃ|
02003034c ನಿಷ್ಠಿತಾಂ ಧರ್ಮರಾಜಾಯ ಮಯೋ ರಾಜ್ಞೇ ನ್ಯವೇದಯತ್||
ಈ ರೀತಿಯಾಗಿತ್ತು ಆ ಮಯನಿಂದ ಹದಿನಾಲ್ಕು ತಿಂಗಳುಗಳಲ್ಲಿ ನಿರ್ಮಿತ ಸಭೆ! ಸಂಪೂರ್ಣವಾದ ನಂತರ ಮಯನು ರಾಜ ಧರ್ಮರಾಜನಿಗೆ ತಿಳಿಸಿದನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಸಭಾನಿರ್ಮಾಣೇ ತೃತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದ ಸಭಾಪರ್ವದಲ್ಲಿ ಸಭಾಕ್ರಿಯಾಪರ್ವದಲ್ಲಿ ಸಭಾನಿರ್ಮಾಣವೆನ್ನುವ ಮೂರನೆಯ ಅಧ್ಯಾಯವು.
[1]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ನಂತರ ಈ ಎರಡು ಶ್ಲೋಕಗಳಿವೆ: ವಿಶ್ರುತಾಂ ತ್ರಿಷು ಲೋಕೇಷು ಪಾರ್ಥಂ ದಿವ್ಯಾಂ ಸಭಾಂ ತವ| ಪ್ರಾಣಿನಾಂ ವಿಸ್ಮಯಕರೋ ತವ ಪ್ರೀತಿವಿವರ್ಧಿನೀಂ| ಪಾಂಡವಾನಾಂ ಚ ಸರ್ವೇಷಾಂ ಕರಿಶ್ಯಾಮಿ ಧನಂಜಯ||
[2]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ನಂತರ ಈ ಶ್ಲೋಕಾರ್ಧವಿದೆ: ಯಸ್ಯ ಶಂಖಸ್ಯ ನಾದೇನ ಭೂತಾನಿ ಪ್ರಚಕಂಪಿರೇ|