Sabha Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ: ಸಭಾಕ್ರಿಯಾ ಪರ್ವ

 

ಸಭಾಭವನ ನಿರ್ಮಾಣ

ಜೀವವುಳಿಸಿದ್ದಕ್ಕೆ ಏನುಮಾಡಬೇಕೆಂದು ಮಯನು ಕೇಳಲು, ಕೃಷ್ಣನು ಪಾಂಡವರಿಗೆ ಒಂದು ಅದ್ಭುತ ಸಭೆಯನ್ನು ನಿರ್ಮಿಸಲು ಹೇಳುವುದು (೧-೧೨). ಸಭೆಗೆ ಭೂಮಿಯನ್ನು ಅಳತೆಮಾಡಿದುದು (೧೩-೧೯).

Image result for maya in mahabharata02001001 ವೈಶಂಪಾಯನ ಉವಾಚ|

02001001a ತತೋಽಬ್ರವೀನ್ಮಯಃ ಪಾರ್ಥಂ ವಾಸುದೇವಸ್ಯ ಸನ್ನಿಧೌ|

02001001c ಪ್ರಾಂಜಲಿಃ ಶ್ಲಕ್ಷ್ಣಯಾ ವಾಚಾ ಪೂಜಯಿತ್ವಾ ಪುನಃ ಪುನಃ||

ವೈಶಂಪಾಯನನು ಹೇಳಿದನು: “ನಂತರ ಮಯ[1]ನು ಅಂಜಲಿಬದ್ಧನಾಗಿ ಶ್ಲಾಘನೀಯ ಮಾತುಗಳಿಂದ ಪುನಃ ಪುನಃ ಪೂಜಿಸುತ್ತಾ ವಾಸುದೇವನ ಸನ್ನಿಧಿಯಲ್ಲಿ ಪಾರ್ಥನನ್ನು ಉದ್ದೇಶಿಸಿ ಹೇಳಿದನು:

02001002a ಅಸ್ಮಾಚ್ಚ ಕೃಷ್ಣಾತ್ಸಂಕ್ರುದ್ಧಾತ್ಪಾವಕಾಶ್ಚ ದಿಧಕ್ಷತಃ|

02001002c ತ್ವಯಾ ತ್ರಾತೋಽಸ್ಮಿ ಕೌಂತೇಯ ಬ್ರೂಹಿ ಕಿಂ ಕರವಾಣಿ ತೇ||

“ಕುಂತಿಪುತ್ರ! ಸಂಕೃದ್ಧ ಕೃಷ್ಣ ಮತ್ತು ಧಗಿಸಲು ಸಿದ್ಧ ಪಾವಕನಿಂದ ನನ್ನನ್ನು ರಕ್ಷಿಸಿದ್ದೀಯೆ. ನಿನಗಾಗಿ ನಾನು ಏನು ಮಾಡಲಿ? ಹೇಳು.”

02001003 ಅರ್ಜುನ ಉವಾಚ|

02001003a ಕೃತಮೇವ ತ್ವಯಾ ಸರ್ವಂ ಸ್ವಸ್ತಿ ಗಚ್ಛ ಮಹಾಸುರ|

02001003c ಪ್ರೀತಿಮಾನ್ಭವ ಮೇ ನಿತ್ಯಂ ಪ್ರೀತಿಮಂತೋ ವಯಂ ಚ ತೇ||

ಅರ್ಜುನನು ಹೇಳಿದನು: “ನೀನು ಸರ್ವವನ್ನೂ ಮಾಡಿದ್ದೀಯೆ[2]! ಮಂಗಳವಾಗಲಿ! ಇನ್ನು ನೀನು ಹೋಗಬಹುದು. ನಮ್ಮ ಮೇಲೆ ನಿನ್ನ ಪ್ರೀತಿ ಯಾವಾಗಲೂ ಇರಲಿ. ನಿನ್ನ ಮೇಲೆಯೂ ನಮ್ಮ ಪ್ರೀತಿ ಸದಾ ಇರುತ್ತದೆ.”

02001004 ಮಯ ಉವಾಚ|

02001004a ಯುಕ್ತಮೇತತ್ತ್ವಯಿ ವಿಭೋ ಯಥಾತ್ಥ ಪುರುಷರ್ಷಭ|

02001004c ಪ್ರೀತಿಪೂರ್ವಮಹಂ ಕಿಂ ಚಿತ್ಕರ್ತುಮಿಚ್ಛಾಮಿ ಭಾರತ||

ಮಯನು ಹೇಳಿದನು: “ಸ್ವಾಮೀ! ಭಾರತ! ಪುರುಷರ್ಷಭನಂತೆ ಮಾತನಾಡಿದ್ದೀಯೆ. ಆದರೂ, ಪ್ರೀತಿಪೂರ್ವಕವಾಗಿ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ.

02001005a ಅಹಂ ಹಿ ವಿಶ್ವಕರ್ಮಾ ವೈ ದಾನವಾನಾಂ ಮಹಾಕವಿಃ|

02001005c ಸೋಽಹಂ ವೈ ತ್ವತ್ಕೃತೇ ಕಿಂ ಚಿತ್ಕರ್ತುಮಿಚ್ಛಾಮಿ ಪಾಂಡವ||

ಪಾಂಡವ! ನಾನೊಬ್ಬ ಮಹಾಕವಿ. ದಾನವರ ವಿಶ್ವಕರ್ಮನಿದ್ದಂತೆ[3]. ಆದ್ದರಿಂದ ನಿನಗೋಸ್ಕರ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ.”

02001006 ಅರ್ಜುನ ಉವಾಚ|

02001006a ಪ್ರಾಣಕೃಚ್ಛ್ರಾದ್ವಿಮುಕ್ತಂ ತ್ವಮಾತ್ಮಾನಂ ಮನ್ಯಸೇ ಮಯಾ|

02001006c ಏವಂ ಗತೇ ನ ಶಕ್ಷ್ಯಾಮಿ ಕಿಂ ಚಿತ್ಕಾರಯಿತುಂ ತ್ವಯಾ||

ಅರ್ಜುನನು ಹೇಳಿದನು: “ನಾನು ನಿನ್ನನ್ನು ಪ್ರಾಣಸಂಕಟದಿಂದ ವಿಮುಕ್ತಗೊಳಿಸಿದೆ ಎಂದು ತಿಳಿದಿರುವೆ. ಹಾಗಿದ್ದರೂ ನಾನು ನಿನ್ನಿಂದ ಏನನ್ನೂ ಮಾಡಿಸಿಕೊಳ್ಳಲು ಶಕ್ಯನಿಲ್ಲ.

02001007a ನ ಚಾಪಿ ತವ ಸಂಕಲ್ಪಂ ಮೋಘಮಿಚ್ಛಾಮಿ ದಾನವ|

02001007c ಕೃಷ್ಣಸ್ಯ ಕ್ರಿಯತಾಂ ಕಿಂ ಚಿತ್ತಥಾ ಪ್ರತಿಕೃತಂ ಮಯಿ||

ದಾನವ! ಹಾಗೆಂದು ನಿನ್ನ ಇಚ್ಛೆಯನ್ನು ಭಂಗಗೊಳಿಸಲೂ ನನಗೆ ಇಷ್ಟವಿಲ್ಲ. ಕೃಷ್ಣನಿಗೋಸ್ಕರ ಏನನ್ನಾದರೂ ಮಾಡು. ಅದೇ ನನಗೆ ಪ್ರತೀಕಾರ ಮಾಡಿದಂತಾಗುತ್ತದೆ.””

02001008 ವೈಶಂಪಾಯನ ಉವಾಚ|

02001008a ಚೋದಿತೋ ವಾಸುದೇವಸ್ತು ಮಯೇನ ಭರತರ್ಷಭ|

02001008c ಮುಹೂರ್ತಮಿವ ಸಂದಧ್ಯೌ ಕಿಮಯಂ ಚೋದ್ಯತಾಮಿತಿ||

ವೈಶಂಪಾಯನನು ಹೇಳಿದನು: “ಭರತರ್ಷಭ!  ಮಯನು ವಾಸುದೇವನನ್ನು ಒತ್ತಾಯಿಸಲು ಅವನು ಏನನ್ನು ಕೇಳಬೇಕೆಂದು ಮುಹೂರ್ತಕಾಲ ಯೋಚಿಸಿದನು.

02001009a ಚೋದಯಾಮಾಸ ತಂ ಕೃಷ್ಣಃ ಸಭಾ ವೈ ಕ್ರಿಯತಾಮಿತಿ|

02001009c ಧರ್ಮರಾಜಸ್ಯ ದೈತೇಯ ಯಾದೃಶೀಮಿಹ ಮನ್ಯಸೇ||

ನಂತರ ಕೃಷ್ಣನು ಅವನಿಗೆ ಪ್ರಚೋದಿಸಿದನು: “ದೈತ್ಯ! ಧರ್ಮರಾಜನಿಗೆ ತಕ್ಕದು ಎಂದು ನಿನಗನ್ನಿಸುವ ಒಂದು ಸಭಾಭವನವನ್ನು ನಿರ್ಮಿಸು!

02001010a ಯಾಂ ಕೃತಾಂ ನಾನುಕುರ್ಯುಸ್ತೇ ಮಾನವಾಃ ಪ್ರೇಕ್ಷ್ಯ ವಿಸ್ಮಿತಾಃ|

02001010c ಮನುಷ್ಯಲೋಕೇ ಕೃತ್ಸ್ನೇಽಸ್ಮಿಂಸ್ತಾದೃಶೀಂ ಕುರು ವೈ ಸಭಾಂ||

ನೋಡಿ ವಿಸ್ಮಿತರಾದ ಈ ಮನುಷ್ಯಲೋಕದ ಯಾವ ಮಾನವರಿಂದಲೂ ಅದರಂಥಹುದನ್ನು ಕಟ್ಟಿಸಲು ಅಸಾಧ್ಯವಾಗುವ ಅದ್ಭುತ ಸಭಾಭವನವನ್ನು ನಿರ್ಮಿಸು.

02001011a ಯತ್ರ ದಿವ್ಯಾನಭಿಪ್ರಾಯಾನ್ಪಶ್ಯೇಮ ವಿಹಿತಾಂಸ್ತ್ವಯಾ|

02001011c ಆಸುರಾನ್ಮಾನುಷಾಂಶ್ಚೈವ ತಾಂ ಸಭಾಂ ಕುರು ವೈ ಮಯ||

ಮಯ! ದೇವತೆಗಳ, ಅಸುರರ ಮತ್ತು ಮನುಷ್ಯರ ವಿನ್ಯಾಸಗಳು ಕಂಡುಬರುವಂತಹ ಒಂದು ಸಭಾಭವನನ್ನು[4] ನಿರ್ಮಾಣಮಾಡು!”

02001012a ಪ್ರತಿಗೃಹ್ಯ ತು ತದ್ವಾಕ್ಯಂ ಸಂಪ್ರಹೃಷ್ಟೋ ಮಯಸ್ತದಾ|

02001012c ವಿಮಾನಪ್ರತಿಮಾಂ ಚಕ್ರೇ ಪಾಂಡವಸ್ಯ ಸಭಾಂ ಮುದಾ||

ಈ ಮಾತನ್ನು ಕೇಳಿದ ಮಯನು ಸಂತುಷ್ಟನಾಗಿ, ದೇವತೆಗಳ ವಿಮಾನದಂತಿರುವ ಸಭಾಭವನವನ್ನು ಪಾಂಡವರಿಗಾಗಿ ನಿರ್ಮಿಸಲು ಸಂತೋಷದಿಂದ ಒಪ್ಪಿಕೊಂಡನು.

02001013a ತತಃ ಕೃಷ್ಣಶ್ಚ ಪಾರ್ಥಶ್ಚ ಧರ್ಮರಾಜೇ ಯುಧಿಷ್ಠಿರೇ|

02001013c ಸರ್ವಮೇತದ್ಯಥಾವೇದ್ಯ ದರ್ಶಯಾಮಾಸತುರ್ಮಯಂ||

ಅನಂತರ, ಕೃಷ್ಣ ಮತ್ತು ಪಾರ್ಥರು ನಡೆದುದೆಲ್ಲವನ್ನೂ ಯಥಾವತ್ತಾಗಿ ಧರ್ಮರಾಜ ಯುಧಿಷ್ಠಿರನಿಗೆ ವರದಿ ಮಾಡಿದರು ಮತ್ತು ಮಯನಿಗೆ ಭೆಟ್ಟಿ ಮಾಡಿಸಿದರು.

02001014a ತಸ್ಮೈ ಯುಧಿಷ್ಠಿರಃ ಪೂಜಾಂ ಯಥಾರ್ಹಮಕರೋತ್ತದಾ|

02001014c ಸ ತು ತಾಂ ಪ್ರತಿಜಗ್ರಾಹ ಮಯಃ ಸತ್ಕೃತ್ಯ ಸತ್ಕೃತಃ||

ಯುಧಿಷ್ಠಿರನು ಅವನಿಗೆ ಯಥಾರ್ಹ ಪೂಜಿಸಿದನು ಮತ್ತು ಮಯನೂ ಎಲ್ಲ ಸತ್ಕಾರಗಳನ್ನೂ ಸತ್ಕೃತನಾಗಿ ಸ್ವೀಕರಿಸಿದನು.

02001015a ಸ ಪೂರ್ವದೇವಚರಿತಂ ತತ್ರ ತತ್ರ ವಿಶಾಂ ಪತೇ|

02001015c ಕಥಯಾಮಾಸ ದೈತೇಯಃ ಪಾಂಡುಪುತ್ರೇಷು ಭಾರತ||

ಭಾರತ! ವಿಶಾಂಪತೇ! ನಂತರ ಆ ದೈತ್ಯನು ಪಾಂಡುಪುತ್ರರಿಗೆ ಪೂರ್ವಕಾಲದಲ್ಲಿ ಅಲ್ಲಲ್ಲಿ ನಡೆದ ದೇವಚರಿತ್ರೆಯನ್ನು ತಿಳಿಸಿದನು.

02001016a ಕಾಲಂ ಕಂ ಚಿದಾಶ್ವಸ್ಯ ವಿಶ್ವಕರ್ಮಾ ಪ್ರಚಿಂತ್ಯ ಚ|

02001016c ಸಭಾಂ ಪ್ರಚಕ್ರಮೇ ಕರ್ತುಂ ಪಾಂಡವಾನಾಂ ಮಹಾತ್ಮನಾಂ||

ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಆ ವಿಶ್ವಕರ್ಮನು ಮಹಾತ್ಮ ಪಾಂಡವರಿಗೋಸ್ಕರ ಸಭಾಭವನದ ಯೋಜನೆಯನ್ನು ತಯಾರಿಸಿ ಕಟ್ಟಲು ಪ್ರಾರಂಭಿಸಿದನು.

02001017a ಅಭಿಪ್ರಾಯೇಣ ಪಾರ್ಥಾನಾಂ ಕೃಷ್ಣಸ್ಯ ಚ ಮಹಾತ್ಮನಃ|

02001017c ಪುಣ್ಯೇಽಹನಿ ಮಹಾತೇಜಾಃ ಕೃತಕೌತುಕಮಂಗಲಃ||

02001018a ತರ್ಪಯಿತ್ವಾ ದ್ವಿಜಶ್ರೇಷ್ಠಾನ್ಪಾಯಸೇನ ಸಹಸ್ರಶಃ|

02001018c ಧನಂ ಬಹುವಿಧಂ ದತ್ತ್ವಾ ತೇಭ್ಯ ಏವ ಚ ವೀರ್ಯವಾನ್||

02001019a ಸರ್ವ‌ಋತುಗುಣಸಂಪನ್ನಾಂ ದಿವ್ಯರೂಪಾಂ ಮನೋರಮಾಂ|

02001019c ದಶಕಿಷ್ಕುಸಹಸ್ರಾಂ ತಾಂ ಮಾಪಯಾಮಾಸ ಸರ್ವತಃ||

ಪಾರ್ಥರ ಮತ್ತು ಮಹಾತ್ಮ ಕೃಷ್ಣನ ಅಭಿಪ್ರಾಯದಂತೆ ಆ ಮಹಾತೇಜಸ್ವಿ, ಕೃತಕೌತಕಿ, ಮಂಗಲಕರ, ವೀರ್ಯವಂತ ಅಸುರನು ಪುಣ್ಯಕಾಲದಲ್ಲಿ ಸಾವಿರಾರು ದ್ವಿಜಶ್ರೇಷ್ಠರಿಗೆ ಪಾಯಸ ಮತ್ತು ಬಹುವಿಧ ಧನವನ್ನಿತ್ತು ತೃಪ್ತಿಪಡಿಸಿ ಸರ್ವ‌ಋತುಗುಣಸಂಪನ್ನ, ದಿವ್ಯರೂಪಿ ಹತ್ತು ಸಾವಿರ ಕಿಷ್ಕು ಮನೋಹರ ಭೂಮಿಯನ್ನು ಅಳತೆಮಾಡಿದನು[5].”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಸಭಾಸ್ಥಾನನಿರ್ಣಯೇ ಪಥಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ಸಭಾಪರ್ವದಲ್ಲಿ ಸಭಾಕ್ರಿಯಾಪರ್ವದಲ್ಲಿ ಸಭಾಸ್ಥಾನನಿರ್ಣಯವೆನ್ನುವ ಮೊದಲನೆಯ ಅಧ್ಯಾಯವು.

Image result for indian motifs drawings

[1]ಮಯನು ಈಗಿನ ಇರಾನ್ ಅಥವಾ ಮಧ್ಯಪೂರ್ವ ಏಷಿಯಾ ಪ್ರದೇಶದ ಶಿಲ್ಪಿಯೆಂದು ವಾನ್ ಬ್ಯೂಟಿನೆನ್ ನ ವಿಚಾರ.

[2]ಅರ್ಜುನನಿಗಾಗಿ ಮಯನು ಮಾಡಿದ್ದುದರ ಕುರಿತು ಇದೂವರೆಗೆ ಉಲ್ಲೇಖವಾಗಿಲ್ಲ.

[3]ವಿಶ್ವಕರ್ಮನು ದೇವತೆಗಳ ಶಿಲ್ಪಿ. ಹಾಗೆ ಮಯನು ದಾನವರ ಶಿಲ್ಪಿ ಎಂದರ್ಥ. ದಕ್ಷಿಣಾತ್ಯ ಸಂಪುಟದಲ್ಲಿ ಮಯನ ಮಾತಿನಲ್ಲಿಯೇ ಅವನು ಅವನು ದಾನವರಿಗಾಗಿ ಮಾಡಿಕೊಟ್ಟ ಕೆಲಸಗಳ ವರ್ಣನೆಯು ಈ ನಾಲ್ಕು ಶ್ಲೋಕಗಳಲ್ಲಿವೆ: ದಾನವಾನಾಂ ಪುರಾ ಪಾರ್ಥ ಪ್ರಾಸಾದಾ ಹಿ ಮಯಾ ಕೃತಾಃ| ರಮ್ಯಾಣಿ ಸುಖಗರ್ಭಾಣಿ ಭೋಗಾಢ್ಯಾನಿ ಸಹಸ್ರಶಃ|| ಉದ್ಯಾನಾನಿ ಚ ರಮ್ಯಾಣಿ ರಸಾಂಸಿ ವಿವಿಧಾನಿ ಚ| ವಿಚಿತ್ರಾಣಿ ಚ ಶಸ್ತ್ರಾಣಿ ರಥಾಃ ಕಾಮಗಮಾಸ್ತಥಾ|| ನಗರಾಣಿ ವಿಶಾಲಾನಿ ಸಾಟ್ಟಪ್ರಾಕಾರತೋರಣೈಃ| ವಾಹನಾನಿ ಚ ಮುಖ್ಯಾನಿ ವಿಚಿತ್ರಾಣಿ ಸಹಸ್ರಶಃ|| ಬಿಲಾನಿ ರಮಣೀಯಾನಿ ಸುಖಯುಕ್ತಾನಿ ವೈ ಭೃಷಂ| ಏತತ್ ಕೃತಂ ಮಂii ಸರ್ವಂ ತಸ್ಮಾದಿಚ್ಛಾಮಿ ಫಾಲ್ಗುನ||

[4]ಶ್ರೀಕೃಷ್ಣನು ಯೋಚಿಸಿ ಸೂಚಿಸಿದ ಈ ಸಭಾಭವನವೇ ಮುಂದೆ ದುರ್ಯೋಧನನಿಗಾದ ಅಪಮಾನ-ಅಸೂಯೆಗಳು, ಪಾಂಡವ-ಕೌರವರೊಡನೆ ದ್ಯೂತ, ಮತ್ತು ಮಹಾಭಾರತ ಯುದ್ಧದಲ್ಲಾದ ಸರ್ವ ಕ್ಷತ್ರಿಯರ ನಾಶ ಇವೆಲ್ಲವಕ್ಕೆ ಕಾರಣವಾಯಿತು.

[5]ಭೂಮಿಯ ಅಳತೆಯ ಪ್ರಮಾಣ? ಒಂದು ಸಾವಿರ ಮೊಳ ಉದ್ದ ಮತ್ತು ಒಂದು ಸಾವಿರ ಮೊಳ ಅಗಲ?

Comments are closed.