ಆದಿ ಪರ್ವ: ಖಾಂಡವದಾಹ ಪರ್ವ
೨೧೫
ಇಂದ್ರನಿಂದ ಸದಾ ರಕ್ಷಿಸಲ್ಪಟ್ಟಿರುವ ಖಾಂಡವ ವನವನ್ನು ಸುಡಲು ತನಗೆ ಸಹಾಯಮಾಡಬೇಕೆಂದು ಅಗ್ನಿಯು ಕೃಷ್ಣಾರ್ಜುನರಲ್ಲಿ ಕೇಳಿಕೊಳ್ಳುವುದು (೧-೧೧). ತಮಗೆ ಸಮರ್ಥವಾದ ಆಯುಧ-ರಥಗಳು ಬೇಕು ಎಂದು ಅರ್ಜುನನು ಕೇಳಿಕೊಳ್ಳುವುದು (೧೨-೧೯).
01215001 ವೈಶಂಪಾಯನ ಉವಾಚ|
01215001a ಸೋಽಬ್ರವೀದರ್ಜುನಂ ಚೈವ ವಾಸುದೇವಂ ಚ ಸಾತ್ವತಂ|
01215001c ಲೋಕಪ್ರವೀರೌ ತಿಷ್ಠಂತೌ ಖಾಂಡವಸ್ಯ ಸಮೀಪತಃ||
ವೈಶಂಪಾಯನನು ಹೇಳಿದನು: “ಖಾಂಡವದ ಸಮೀಪದಲ್ಲಿಯೇ ನಿಂತಿದ್ದ ಲೋಕಪ್ರವೀರ ಅರ್ಜುನ ಮತ್ತು ಸಾತ್ವತ ವಾಸುದೇವ ಇಬ್ಬರನ್ನೂ ಉದ್ದೇಶಿಸಿ ಅವನು ಹೇಳಿದನು:
01215002a ಬ್ರಾಹ್ಮಣೋ ಬಹುಭೋಕ್ತಾಸ್ಮಿ ಭುಂಜೇಽಪರಿಮಿತಂ ಸದಾ|
01215002c ಭಿಕ್ಷೇ ವಾರ್ಷ್ಣೇಯಪಾರ್ಥೌ ವಾಮೇಕಾಂ ತೃಪ್ತಿಂ ಪ್ರಯಚ್ಛತಾಂ||
“ಸದಾ ಅತಿಯಾಗಿ ತಿನ್ನುವ ಬಹುಭೋಕ್ತ ಬ್ರಾಹ್ಮಣನು ನಾನು. ವಾರ್ಷ್ಣೇಯ! ಪಾರ್ಥ! ನಾನು ನಿಮ್ಮಲ್ಲಿ ಒಂದು ಭಿಕ್ಷೆಯನ್ನು ಕೇಳುತ್ತಿದ್ದೇನೆ. ನನ್ನನ್ನು ತೃಪ್ತಗೊಳಿಸಿ.”
01215003a ಏವಮುಕ್ತೌ ತಮಬ್ರೂತಾಂ ತತಸ್ತೌ ಕೃಷ್ಣಪಾಂಡವೌ|
01215003c ಕೇನಾನ್ನೇನ ಭವಾಂಸ್ತೃಪ್ಯೇತ್ತಸ್ಯಾನ್ನಸ್ಯ ಯತಾವಹೇ||
ಅವನು ಹೀಗೆ ಹೇಳಲು, ಕೃಷ್ಣ-ಪಾಂಡವರು ಕೇಳಿದರು: “ಯಾವುದರಿಂದ ನೀನು ತೃಪ್ತಿಗೊಳ್ಳುವೆ? ಅದನ್ನೇ ನಾವು ನಿನಗೆ ತೆಗೆದುಕೊಂಡು ಬರುತ್ತೇವೆ.”
01215004a ಏವಮುಕ್ತಃ ಸ ಭಗವಾನಬ್ರವೀತ್ತಾವುಭೌ ತತಃ|
01215004c ಭಾಷಮಾಣೌ ತದಾ ವೀರೌ ಕಿಮನ್ನಂ ಕ್ರಿಯತಾಮಿತಿ||
“ಏನು ಅನ್ನವನ್ನು ತಯಾರಿಸಬೇಕು?” ಎಂದು ಕೇಳುತ್ತಿದ್ದ ಆ ವೀರರಿಗೆ ಭಗವಾನನು ಹೇಳಿದನು:
01215005a ನಾಹಮನ್ನಂ ಬುಭುಕ್ಷೇ ವೈ ಪಾವಕಂ ಮಾಂ ನಿಬೋಧತಂ|
01215005c ಯದನ್ನಮನುರೂಪಂ ಮೇ ತದ್ಯುವಾಂ ಸಂಪ್ರಯಚ್ಛತಂ||
“ನಾನು ಅನ್ನವನ್ನು ತಿನ್ನುವುದಿಲ್ಲ! ನನ್ನನ್ನು ಪಾವಕನೆಂದು ತಿಳಿಯಿರಿ. ನನಗೆ ಅನುರೂಪವಾದ ಆಹಾರವನ್ನು ತೆಗೆದುಕೊಂಡು ಬನ್ನಿ!
01215006a ಇದಮಿಂದ್ರಃ ಸದಾ ದಾವಂ ಖಾಂಡವಂ ಪರಿರಕ್ಷತಿ|
01215006c ತಂ ನ ಶಕ್ನೋಮ್ಯಹಂ ದಗ್ಧುಂ ರಕ್ಷ್ಯಮಾಣಂ ಮಹಾತ್ಮನಾ||
ಇಂದ್ರನು ಸದಾ ಈ ಖಾಂಡವವನ್ನು ಸುಡುವುದರಿಂದ ರಕ್ಷಿಸಿಕೊಂಡು ಬಂದಿದ್ದಾನೆ. ಎಲ್ಲಿಯವರೆಗೆ ಆ ಮಹಾತ್ಮನು ಇದನ್ನು ರಕ್ಷಿಸುತ್ತಾನೋ ಅಲ್ಲಿಯವರೆಗೆ ಇದನ್ನು ಸುಡುವ ಶಕ್ತಿ ನನಗಿಲ್ಲ.
01215007a ವಸತ್ಯತ್ರ ಸಖಾ ತಸ್ಯ ತಕ್ಷಕಃ ಪನ್ನಗಃ ಸದಾ|
01215007c ಸಗಣಸ್ತತ್ಕೃತೇ ದಾವಂ ಪರಿರಕ್ಷತಿ ವಜ್ರಭೃತ್||
ಅವನ ಸಖ ಪನ್ನಗ ತಕ್ಷಕನು ತನ್ನ ಗಣಸಮೇತ ಸದಾ ಇಲ್ಲಿ ವಾಸಿಸುತ್ತಾನೆ. ಅವನಿಗೋಸ್ಕರ ವಜ್ರಭೃತನು ಇದನ್ನು ಸುಡುವುದರಿಂದ ರಕ್ಷಿಸುತ್ತಿದ್ದಾನೆ[1].
01215008a ತತ್ರ ಭೂತಾನ್ಯನೇಕಾನಿ ರಕ್ಷ್ಯಂತೇ ಸ್ಮ ಪ್ರಸಂಗತಃ|
01215008c ತಂ ದಿಧಕ್ಷುರ್ನ ಶಕ್ನೋಮಿ ದಗ್ಧುಂ ಶಕ್ರಸ್ಯ ತೇಜಸಾ||
ಪ್ರಸಂಗತಃ ಅಲ್ಲಿ ಇನ್ನೂ ಅನೇಕ ಜೀವಿಗಳು ರಕ್ಷಿಸಲ್ಪಟ್ಟಿವೆ. ಶಕ್ರನ ತೇಜಸ್ಸಿನಿಂದಾಗಿ ಅವರ್ಯಾರನ್ನೂ ಸುಡಲು ಶಕ್ತನಾಗಿಲ್ಲ.
01215009a ಸ ಮಾಂ ಪ್ರಜ್ವಲಿತಂ ದೃಷ್ಟ್ವಾ ಮೇಘಾಂಭೋಭಿಃ ಪ್ರವರ್ಷತಿ|
01215009c ತತೋ ದಗ್ಧುಂ ನ ಶಕ್ನೋಮಿ ದಿಧಕ್ಷುರ್ದಾವಮೀಪ್ಸಿತಂ||
ನಾನು ಅದನ್ನು ಸುಡುವುದನ್ನು ನೋಡಿದ ಕೂಡಲೇ ಅವನು ಮೋಡಗಳಿಂದ ಕೂಡಿದ ಧಾರಕಾರ ಮಳೆಯನ್ನು ಸುರಿಸುತ್ತಾನೆ. ಆಗ ನನಗೆ ಸುಡಬೇಕೆಂದು ಎಷ್ಟು ಆಸೆಯಿದ್ದರೂ ನಾನು ಅದನ್ನು ಸುಡಲು ಶಕ್ತನಾಗುವುದಿಲ್ಲ.
01215010a ಸ ಯುವಾಭ್ಯಾಂ ಸಹಾಯಾಭ್ಯಾಮಸ್ತ್ರವಿದ್ಭ್ಯಾಂ ಸಮಾಗತಃ|
01215010c ದಹೇಯಂ ಖಾಂಡವಂ ದಾವಮೇತದನ್ನಂ ವೃತಂ ಮಯಾ||
ಅಸ್ತ್ರವಿದ ನಿಮ್ಮಿಬ್ಬರನ್ನೂ ಭೆಟ್ಟಿಯಾಗಿ ಸಹಾಯವನ್ನು ಕೇಳಿದ್ದೇನಾದ್ದರಿಂದ ನಾನು ಈಗ ಖಾಂಡವವನ್ನು ಸುಡುತ್ತೇನೆ. ಇದೇ ನಾನು ಕೇಳಿಕೊಳ್ಳುವ ಆಹಾರ.
01215011a ಯುವಾಂ ಹ್ಯುದಕಧಾರಾಸ್ತಾ ಭೂತಾನಿ ಚ ಸಮಂತತಃ|
01215011c ಉತ್ತಮಾಸ್ತ್ರವಿದೋ ಸಮ್ಯಕ್ಸರ್ವತೋ ವಾರಯಿಷ್ಯಥಃ||
ಉತ್ತಮ ಅಸ್ತ್ರವಿದರಾದ ನೀವು ಎಲ್ಲ ಜೀವಿಗಳನ್ನೂ ಮೋಡಗಳನ್ನೂ ಎಲ್ಲ ಕಡೆಗಳಿಂದಲೂ ತಡೆಹಿಡಿಯಬಲ್ಲಿರಿ.”
[2]01215012a ಏವಮುಕ್ತೇ ಪ್ರತ್ಯುವಾಚ ಬೀಭತ್ಸುರ್ಜಾತವೇದಸಂ|
01215012c ದಿಧಕ್ಷುಂ ಖಾಂಡವಂ ದಾವಮಕಾಮಸ್ಯ ಶತಕ್ರತೋಃ||
ಇದನ್ನು ಕೇಳಿದ ಬೀಭತ್ಸುವು ಶತಕ್ರತುವನ್ನು ಮೀರಿಯೂ ಖಾಂಡವವನ್ನು ಸುಡಲು ಬಯಸುತ್ತಿದ್ದ ಜಾತವೇದಸನನ್ನುದ್ದೇಶಿಸಿ ಹೇಳಿದನು:
01215013a ಉತ್ತಮಾಸ್ತ್ರಾಣಿ ಮೇ ಸಂತಿ ದಿವ್ಯಾನಿ ಚ ಬಹೂನಿ ಚ|
01215013c ಯೈರಹಂ ಶಕ್ನುಯಾಂ ಯೋದ್ಧುಮಪಿ ವಜ್ರಧರಾನ್ಬಹೂನ್||
“ನನ್ನಲ್ಲಿ ಅನೇಕ ವಜ್ರಧರರೊಂದಿಗೆ ಯುದ್ಧಮಾಡಲು ಸಾಧ್ಯವಾಗುವ ಬಹಳಷ್ಟು ಉತ್ತಮ ದಿವ್ಯಾಸ್ತ್ರಗಳಿವೆ.
01215014a ಧನುರ್ಮೇ ನಾಸ್ತಿ ಭಗವನ್ಬಾಹುವೀರ್ಯೇಣ ಸಮ್ಮಿತಂ|
01215014c ಕುರ್ವತಃ ಸಮರೇ ಯತ್ನಂ ವೇಗಂ ಯದ್ವಿಷಹೇತ ಮೇ||
ಆದರೆ ಭಗವನ್! ನನ್ನ ಬಾಹುವೀರ್ಯಕ್ಕೆ ಸಮಾನವಾದ, ಮತ್ತು ಸಮರದಲ್ಲಿ ನನ್ನ ಯತ್ನ ಮತ್ತು ವೇಗಗಳನ್ನು ಸಹಿಸಬಲ್ಲಂಥ ಧನುಸ್ಸು ಇಲ್ಲವಾಗಿದೆ.
01215015a ಶರೈಶ್ಚ ಮೇಽರ್ಥೋ ಬಹುಭಿರಕ್ಷಯೈಃ ಕ್ಷಿಪ್ರಮಸ್ಯತಃ|
01215015c ನ ಹಿ ವೋಢುಂ ರಥಃ ಶಕ್ತಃ ಶರಾನ್ಮಮ ಯಥೇಪ್ಸಿತಾನ್||
ಮತ್ತು ನಾನು ವೇಗದಲ್ಲಿ ಬಾಣಗಳನ್ನು ಬಿಡುವಾಗ ನನಗೊಂದು ಅಕ್ಷಯ ಬತ್ತಳಿಕೆ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಶರಗಳನ್ನೂ ಈ ರಥವು ಹೊರಲು ಸಾಧ್ಯವಿಲ್ಲ.
01215016a ಅಶ್ವಾಂಶ್ಚ ದಿವ್ಯಾನಿಚ್ಛೇಯಂ ಪಾಂಡುರಾನ್ವಾತರಂಹಸಃ|
01215016c ರಥಂ ಚ ಮೇಘನಿರ್ಘೋಷಂ ಸೂರ್ಯಪ್ರತಿಮತೇಜಸಂ||
ವಾಯುವೇಗದ ಬಿಳಿ ದಿವ್ಯಾಶ್ವಗಳು ಬೇಕು. ಮೇಘನಿರ್ಘೋಷ ಮತ್ತು ತೇಜಸ್ಸಿನಲ್ಲಿ ಸೂರ್ಯಪ್ರತಿಮೆ ರಥವೂ ಬೇಕು.
01215017a ತಥಾ ಕೃಷ್ಣಸ್ಯ ವೀರ್ಯೇಣ ನಾಯುಧಂ ವಿದ್ಯತೇ ಸಮಂ|
01215017c ಯೇನ ನಾಗಾನ್ಪಿಶಾಚಾಂಶ್ಚ ನಿಹನ್ಯಾನ್ಮಾಧವೋ ರಣೇ||
ಅದೇ ರೀತಿ ಈ ನಾಗಗಳು ಮತ್ತು ಪಿಶಾಚಿಗಳನ್ನು ರಣದಲ್ಲಿ ಸಂಹರಿಸಲು ಕೃಷ್ಣ ಮಾಧವನಲ್ಲಿಯೂ ಕೂಡ ಅವನ ವೀರ್ಯಕ್ಕೆ ಸರಿಸಾಟಿ ಆಯುಧವಿಲ್ಲ.
01215018a ಉಪಾಯಂ ಕರ್ಮಣಃ ಸಿದ್ಧೌ ಭಗವನ್ವಕ್ತುಮರ್ಹಸಿ|
01215018c ನಿವಾರಯೇಯಂ ಯೇನೇಂದ್ರಂ ವರ್ಷಮಾಣಂ ಮಹಾವನೇ||
ಭಗವನ್! ಈ ಕೆಲಸದಲ್ಲಿ ಯಶಸ್ವಿಯಾಗುವ ಉಪಾಯವನ್ನು ಹೇಳಬೇಕು. ಇದರಿಂದ ಇಂದ್ರನು ಈ ಮಹಾವನದ ಮೇಲೆ ಮಳೆಯನ್ನು ಸುರಿಸದಂತೆ ತಡೆಗಟ್ಟಬಹುದು.
01215019a ಪೌರುಷೇಣ ತು ಯತ್ಕಾರ್ಯಂ ತತ್ಕರ್ತಾರೌ ಸ್ವ ಪಾವಕ|
01215019c ಕರಣಾನಿ ಸಮರ್ಥಾನಿ ಭಗವನ್ದಾತುಮರ್ಹಸಿ||
ಪಾವಕ! ಭಗವನ್! ಪೌರುಷದಿಂದ ಮಾಡಬೇಕಾದ ಕಾರ್ಯವೆಲ್ಲವನ್ನೂ ನಾವು ಮಾಡುತ್ತೇವೆ. ಅದಕ್ಕೆ ಸಮರ್ಥ ಕರಣಗಳನ್ನು ನೀಡಬೇಕು.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಖಾಂಡವದಾಹಪರ್ವಣಿ ಅರ್ಜುನಾಗ್ನಿಸಂವಾದೇ ಪಂಚದಶಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಖಾಂಡವದಾಹಪರ್ವದಲ್ಲಿ ಅರ್ಜುನಾಗ್ನಿಸಂವಾದವೆನ್ನುವ ಇನ್ನೂರಾ ಹದಿನೈದನೆಯ ಅಧ್ಯಾಯವು.
[1]ಇಂದ್ರ ಮತ್ತು ತಕ್ಷಕರ ನಡುವೆ ಇರುವ ಮಿತ್ರತ್ವವು ಏನು? ಜನಮೇಜಯನ ಸರ್ಪ ಯಜ್ಞದಲ್ಲಿ ಕೂಡ ಇಂದ್ರನು ತಕ್ಷಕನನ್ನು ರಕ್ಷಿಸಲು ಪ್ರಯತ್ನಪಟ್ಟನು.
[2]ಗೋರಖಪುರ ಸಂಪುಟದಲ್ಲಿ ಅಗ್ನಿ ದೇವನು ಖಾಂಡವವನ್ನು ದಹಿಸಲು ಬಯಸುವ ಕಾರಣವನ್ನು ಕೊಡಲಾಗಿದೆ.