Adi Parva: Chapter 207

ಆದಿ ಪರ್ವ: ಅರ್ಜುನವನವಾಸ ಪರ್ವ

೨೦೭

ಚಿತ್ರಾಂಗದಾ

ಮಣಲೂರಿನಲ್ಲಿ ಚಿತ್ರಾಂಗದೆಯನ್ನು ಕಂಡು ಅರ್ಜುನನು ಕಾಮಮೋಹಿತನಾದುದು (೧-೧೬). ಅವಳಲ್ಲಿ ಹುಟ್ಟಿದವನು ಕುಲದ ವಾರಸನಾಗಬೇಕೆಂಬ ಮಣಲೂರೇಶ್ವರನ ನಿಬಂಧನೆಗೆ ಒಪ್ಪಿ ಅರ್ಜುನನು ಚಿತ್ರಾಂಗದೆಯೊಂದಿಗೆ ಮೂರು ವರ್ಷ ಇದ್ದುದು (೧೭-೨೩).

Image result for chitrangada wife of arjuna01207001 ವೈಶಂಪಾಯನ ಉವಾಚ|

01207001a ಕಥಯಿತ್ವಾ ತು ತತ್ಸರ್ವಂ ಬ್ರಾಹ್ಮಣೇಭ್ಯಃ ಸ ಭಾರತ|

01207001c ಪ್ರಯಯೌ ಹಿಮವತ್ಪಾರ್ಶ್ವಂ ತತೋ ವಜ್ರಧರಾತ್ಮಜಃ||

ವೈಶಂಪಾಯನನು ಹೇಳಿದನು: “ಭಾರತ! ವಜ್ರಧರಾತ್ಮಜನು ಅವೆಲ್ಲವನ್ನೂ ಬ್ರಾಹ್ಮಣರಿಗೆ ವರದಿಮಾಡಿ, ಹಿಮವತ್ಪರ್ವತದ ಪಕ್ಕದಿಂದ ನಡೆದನು.

01207002a ಅಗಸ್ತ್ಯವಟಮಾಸಾದ್ಯ ವಸಿಷ್ಠಸ್ಯ ಚ ಪರ್ವತಂ|

01207002c ಭೃಗುತುಂಗೇ ಚ ಕೌಂತೇಯಃ ಕೃತವಾಂಶೌಚಮಾತ್ಮನಃ||

ಕೌಂತೇಯನು ಅಗಸ್ತ್ಯವಟ, ವಸಿಷ್ಠ ಪರ್ವತ ಮತ್ತು ಭೃಗುತುಂಗಗಳಿಗೆ ಹೋಗಿ ಅಲ್ಲಿ ತನ್ನನ್ನು ಪರಿಶುದ್ಧಿಮಾಡಿಕೊಂಡನು.

01207003a ಪ್ರದದೌ ಗೋಸಹಸ್ರಾಣಿ ತೀರ್ಥೇಷ್ವಾಯತನೇಷು ಚ|

01207003c ನಿವೇಶಾಂಶ್ಚ ದ್ವಿಜಾತಿಭ್ಯಃ ಸೋಽದದತ್ಕುರುಸತ್ತಮಃ||

ಕುರುಸತ್ತಮನು ತೀರ್ಥಸ್ಥಳಗಳಲ್ಲಿ ದ್ವಿಜರಿಗೆ ಸಹಸ್ರಾರು ಗೋವು-ನಿವೇಶನಗಳ ದಾನವಿತ್ತನು.

01207004a ಹಿರಣ್ಯಬಿಂದೋಸ್ತೀರ್ಥೇ ಚ ಸ್ನಾತ್ವಾ ಪುರುಷಸತ್ತಮಃ|

01207004c ದೃಷ್ಟವಾನ್ಪರ್ವತಶ್ರೇಷ್ಠಂ ಪುಣ್ಯಾನ್ಯಾಯತನಾನಿ ಚ||

ಪುರುಷಸತ್ತಮನು ಹಿರಣ್ಯಬಿಂದು ತೀರ್ಥದಲ್ಲಿ ಸ್ನಾನಮಾಡಿ ಪರ್ವತಶ್ರೇಷ್ಠನನ್ನು ಮತ್ತು ಪುಣ್ಯ ಪ್ರದೇಶಗಳನ್ನು ನೋಡಿದನು.

01207005a ಅವತೀರ್ಯ ನರಶ್ರೇಷ್ಠೋ ಬ್ರಾಹ್ಮಣೈಃ ಸಹ ಭಾರತ|

01207005c ಪ್ರಾಚೀಂ ದಿಶಮಭಿಪ್ರೇಪ್ಸುರ್ಜಗಾಮ ಭರತರ್ಷಭಃ||

ಭಾರತ! ಪೂರ್ವದಿಶೆಯಲ್ಲಿ ಹೋಗಲಿಚ್ಛಿಸಿದ ಆ ಭರತರ್ಷಭ ನರಶ್ರೇಷ್ಠನು ಬ್ರಾಹ್ಮಣರೊಡನೆ ಅಲ್ಲಿಂದ ಕೆಳಗಿಳಿದನು.

01207006a ಆನುಪೂರ್ವ್ಯೇಣ ತೀರ್ಥಾನಿ ದೃಷ್ಟವಾನ್ಕುರುಸತ್ತಮಃ|

01207006c ನದೀಂ ಚೋತ್ಪಲಿನೀಂ ರಮ್ಯಾಮರಣ್ಯಂ ನೈಮಿಷಂ ಪ್ರತಿ||

01207007a ನಂದಾಮಪರನಂದಾಂ ಚ ಕೌಶಿಕೀಂ ಚ ಯಶಸ್ವಿನೀಂ|

01207007c ಮಹಾನದೀಂ ಗಯಾಂ ಚೈವ ಗಂಗಾಮಪಿ ಚ ಭಾರತ||

ಭಾರತ! ಒಂದೊಂದಾಗಿ ಆ ಕುರುಸತ್ತಮನು ರಮ್ಯ ನೈಮಿಷಾರಣ್ಯದ ಬಳಿಯಲ್ಲಿದ್ದ ನದಿ ಉತ್ಪಲಿನೀ, ನಂದಾ, ಅಪರನಂದಾ, ಯಶಸ್ವಿನೀ ಕೌಶಿಕೀ, ಮಹಾನದೀ, ಗಯಾ ಮತ್ತು ಗಂಗಾ ಮೊದಲಾದ ತೀರ್ಥಗಳನ್ನು ಕಂಡನು.

01207008a ಏವಂ ಸರ್ವಾಣಿ ತೀರ್ಥಾನಿ ಪಶ್ಯಮಾನಸ್ತಥಾಶ್ರಮಾನ್|

01207008c ಆತ್ಮನಃ ಪಾವನಂ ಕುರ್ವನ್ಬ್ರಾಹ್ಮಣೇಭ್ಯೋ ದದೌ ವಸು||

ಈ ರೀತಿ ಸರ್ವ ತೀರ್ಥಗಳನ್ನು ಮತ್ತು ಆಶ್ರಮಗಳನ್ನು ನೋಡಿ, ಬ್ರಾಹ್ಮಣರಿಗೆ ಸಂಪತ್ತುಗಳನ್ನಿತ್ತು ತನ್ನನ್ನು ಪಾವನಗೊಳಿಸಿಕೊಂಡನು.

01207009a ಅಂಗವಂಗಕಲಿಂಗೇಷು ಯಾನಿ ಪುಣ್ಯಾನಿ ಕಾನಿ ಚಿತ್|

01207009c ಜಗಾಮ ತಾನಿ ಸರ್ವಾಣಿ ತೀರ್ಥಾನ್ಯಾಯತನಾನಿ ಚ|

01207009e ದೃಷ್ಟ್ವಾ ಚ ವಿಧಿವತ್ತಾನಿ ಧನಂ ಚಾಪಿ ದದೌ ತತಃ||

ಅಂಗ, ವಂಗ[1], ಕಳಿಂಗ[2]ಗಳಲ್ಲಿ ಯಾವ ಯಾವ ಪುಣ್ಯ ತೀರ್ಥಸ್ಥಳಗಳಿವೆಯೂ ಅವೆಲ್ಲವುಗಳಿಗೂ ಹೋದನು. ಅವುಗಳನ್ನು ನೋಡಿ ಅಲ್ಲಿ ವಿಧಿವತ್ತಾಗಿ ಧನವನ್ನೂ ದಾನ ಮಾಡಿದನು.

01207010a ಕಲಿಂಗರಾಷ್ಟ್ರದ್ವಾರೇಷು ಬ್ರಾಹ್ಮಣಾಃ ಪಾಂಡವಾನುಗಾಃ|

01207010c ಅಭ್ಯನುಜ್ಞಾಯ ಕೌಂತೇಯಮುಪಾವರ್ತಂತ ಭಾರತ||

ಭಾರತ! ಕಲಿಂಗರಾಷ್ಟ್ರ ದ್ವಾರದಲ್ಲಿ ಪಾಂಡವನನ್ನು ಅನುಸರಿಸಿ ಬಂದಿದ್ದ ಬ್ರಾಹ್ಮಣರು ಕೌಂತೇಯನ ಅನುಜ್ಞೆಯಂತೆ ಹಿಂದಿರುಗಿದರು.

01207011a ಸ ತು ತೈರಭ್ಯನುಜ್ಞಾತಃ ಕುಂತೀಪುತ್ರೋ ಧನಂಜಯಃ|

01207011c ಸಹಾಯೈರಲ್ಪಕೈಃ ಶೂರಃ ಪ್ರಯಯೌ ಯೇನ ಸಾಗರಂ||

ಶೂರ ಕುಂತೀಪುತ್ರ ಧನಂಜಯನು ಅವರ ಅನುಜ್ಞೆಯನ್ನು ಪಡೆದು ಕೆಲವೇ ಸಹಾಯಕರೊಂದಿಗೆ ಸಾಗರದವರೆಗೂ ಪ್ರಯಾಣಿಸಿದನು.

01207012a ಸ ಕಲಿಂಗಾನತಿಕ್ರಮ್ಯ ದೇಶಾನಾಯತನಾನಿ ಚ|

01207012c ಧರ್ಮ್ಯಾಣಿ ರಮಣೀಯಾನಿ ಪ್ರೇಕ್ಷಮಾಣೋ ಯಯೌ ಪ್ರಭುಃ||

01207013a ಮಹೇಂದ್ರಪರ್ವತಂ ದೃಷ್ಟ್ವಾ ತಾಪಸೈರುಪಶೋಭಿತಂ|

01207013c ಸಮುದ್ರತೀರೇಣ ಶನೈರ್ಮಣಲೂರಂ ಜಗಾಮ ಹ||

ಕಲಿಂಗವನ್ನೂ ಅಲ್ಲಿಯ ಧರ್ಮ, ರಮಣೀಯ, ಪ್ರೇಕ್ಷಣೀಯ ದೇಶ ಪ್ರದೇಶಗಳನ್ನೂ ದಾಟಿ ಪ್ರಭುವು ತಾಪಸರಿಂದ ಉಪಶೋಭಿತ ಮಹೇಂದ್ರಪರ್ವತವನ್ನು ನೋಡಿ, ನಿಧಾನವಾಗಿ ಸಮುದ್ರತೀರದಲ್ಲಿದ್ದ ಮಣಲೂರಿಗೆ ಬಂದನು.

01207014a ತತ್ರ ಸರ್ವಾಣಿ ತೀರ್ಥಾನಿ ಪುಣ್ಯಾನ್ಯಾಯತನಾನಿ ಚ|

01207014c ಅಭಿಗಮ್ಯ ಮಹಾಬಾಹುರಭ್ಯಗಚ್ಛನ್ಮಹೀಪತಿಂ|

01207014e ಮಣಲೂರೇಶ್ವರಂ ರಾಜನ್ಧರ್ಮಜ್ಞಂ ಚಿತ್ರವಾಹನಂ||

ಅಲ್ಲಿ ಸರ್ವ ಪುಣ್ಯ ತೀರ್ಥಕ್ಷೇತ್ರಗಳಿಗೂ ಭೇಟಿನೀಡಿ ಆ ಮಹಾಬಾಹುವು ಮಣಲೂರೇಶ್ವರ[3] ಧರ್ಮಜ್ಞ ಮಹೀಪತಿ ಚಿತ್ರವಾಹನನಲ್ಲಿಗೆ ಹೋದನು.

01207015a ತಸ್ಯ ಚಿತ್ರಾಂಗದಾ ನಾಮ ದುಹಿತಾ ಚಾರುದರ್ಶನಾ|

01207015c ತಾಂ ದದರ್ಶ ಪುರೇ ತಸ್ಮಿನ್ವಿಚರಂತೀಂ ಯದೃಚ್ಛಯಾ||

ಆ ಪುರದಲ್ಲಿ ವಿಹರಿಸುತ್ತಿದ್ದ ಅವನ ಮಗಳು ಚಾರುದರ್ಶನೆ ಚಿತ್ರಾಂಗದ ಎನ್ನುವ ಹೆಸರುಳ್ಳವಳನ್ನು ಕಂಡನು.

01207016a ದೃಷ್ಟ್ವಾ ಚ ತಾಂ ವರಾರೋಹಾಂ ಚಕಮೇ ಚೈತ್ರವಾಹಿನೀಂ|

01207016c ಅಭಿಗಮ್ಯ ಚ ರಾಜಾನಂ ಜ್ಞಾಪಯತ್ಸ್ವಂ ಪ್ರಯೋಜನಂ|

01207016e ತಮುವಾಚಾಥ ರಾಜಾ ಸ ಸಾಂತ್ವಪೂರ್ವಮಿದಂ ವಚಃ||

ಅ ವರಾರೋಹೆ ಚೈತ್ರವಾಹಿನಿಯನ್ನು ನೋಡಿದ ಕೂಡಲೇ ಅವನು ಕಾಮಮೋಹಿತನಾದನು ಮತ್ತು ರಾಜನಲ್ಲಿಗೆ ಹೋಗಿ ತನ್ನ ಉದ್ದೇಶವನ್ನು ತಿಳಿಸಿದನು. ಆಗ ರಾಜನು ಅವನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು.

01207017a ರಾಜಾ ಪ್ರಭಂಕರೋ ನಾಮ ಕುಲೇ ಅಸ್ಮಿನ್ಬಭೂವ ಹ|

01207017c ಅಪುತ್ರಃ ಪ್ರಸವೇನಾರ್ಥೀ ತಪಸ್ತೇಪೇ ಸ ಉತ್ತಮಂ||

“ಈ ಕುಲದಲ್ಲಿ ಪ್ರಭಂಕರ[4] ಎಂಬ ಹೆಸರಿನ ರಾಜನಿದ್ದನು. ಅಪುತ್ರನಾದ ಅವನು ಸಂತಾನಕ್ಕಾಗಿ ಉತ್ತಮ ತಪವನ್ನಾಚರಿಸಿದನು.

01207018a ಉಗ್ರೇಣ ತಪಸಾ ತೇನ ಪ್ರಣಿಪಾತೇನ ಶಂಕರಃ|

01207018c ಈಶ್ವರಸ್ತೋಷಿತಸ್ತೇನ ಮಹಾದೇವ ಉಮಾಪತಿಃ||

ಅವನ ಉಗ್ರ ತಪಸ್ಸಿನಿಂದ ಮತ್ತು ಪ್ರಣಿಪಾತ[5]ದಿಂದ ಶಂಕರ ಈಶ್ವರ ಮಹಾದೇವ ಉಮಾಪತಿಯು ಸಂತುಷ್ಟನಾದನು.

01207019a ಸ ತಸ್ಮೈ ಭಗವಾನ್ಪ್ರಾದಾದೇಕೈಕಂ ಪ್ರಸವಂ ಕುಲೇ|

01207019c ಏಕೈಕಃ ಪ್ರಸವಸ್ತಸ್ಮಾದ್ಭವತ್ಯಸ್ಮಿನ್ಕುಲೇ ಸದಾ||

ಭಗವಾನನು ಅವನಿಗೆ ಕುಲದ ಒಂದೊಂದು ಪೀಳಿಗೆಯಲ್ಲಿ ಒಂದೊಂದೇ ಸಂತಾನವಾಗುತ್ತದೆ ಎಂದು ವರವನ್ನಿತ್ತನು. ಅಂದಿನಿಂದ ಈ ಕುಲದಲ್ಲಿ ಒಂದೇ ಸಂತಾನವು ಆಗುತ್ತಾ ಬಂದಿದೆ.

01207020a ತೇಷಾಂ ಕುಮಾರಾಃ ಸರ್ವೇಷಾಂ ಪೂರ್ವೇಷಾಂ ಮಮ ಜಜ್ಞಿರೇ|

01207020c ಕನ್ಯಾ ತು ಮಮ ಜಾತೇಯಂ ಕುಲಸ್ಯೋತ್ಪಾದನೀ ಧ್ರುವಂ||

ನನ್ನ ಪೂರ್ವಜರೆಲ್ಲರಿಗೂ ಪುತ್ರರು ಹುಟ್ಟಿದ್ದರು. ಆದರೆ ನನ್ನ ಕುಲದಲ್ಲಿ ಕನ್ಯೆಯು ಹುಟ್ಟಿದ್ದಾಳೆ. ಅವಳೇ ಈ ಕುಲವನ್ನು ಮುಂದುವರಿಸಿಕೊಂಡು ಹೋಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ.

01207021a ಪುತ್ರೋ ಮಮೇಯಮಿತಿ ಮೇ ಭಾವನಾ ಪುರುಷೋತ್ತಮ|

01207021c ಪುತ್ರಿಕಾ ಹೇತುವಿಧಿನಾ ಸಂಜ್ಞಿತಾ ಭರತರ್ಷಭ||

ಭರತರ್ಷಭ! ಪುರುಷೋತ್ತಮ! ಅವಳು ನನ್ನ ಪುತ್ರನೆಂದೇ ಭಾವಿಸುತ್ತಿದ್ದೇನೆ. ವಿಧಿವತ್ತಾಗಿ ಅವಳು ಪುತ್ರಿಕೆಯಂತಿದ್ದಾಳೆ.

01207022a ಏತಚ್ಛುಲ್ಕಂ ಭವತ್ವಸ್ಯಾಃ ಕುಲಕೃಜ್ಜಾಯತಾಮಿಹ|

01207022c ಏತೇನ ಸಮಯೇನೇಮಾಂ ಪ್ರತಿಗೃಹ್ಣೀಷ್ವ ಪಾಂಡವ||

ಪಾಂಡವ! ನಿನ್ನಿಂದ ಅವಳಲ್ಲಿ ಹುಟ್ಟುವವನು ಈ ಕುಲದ ವಾರಸನಾಗಲಿ. ಇದು ನನ್ನ ಶುಲ್ಕ. ಇದಕ್ಕೆ ಒಪ್ಪಿಗೆಯಿದ್ದರೆ ಅವಳನ್ನು ಸ್ವೀಕರಿಸು.”

01207023a ಸ ತಥೇತಿ ಪ್ರತಿಜ್ಞಾಯ ಕನ್ಯಾಂ ತಾಂ ಪ್ರತಿಗೃಹ್ಯ ಚ|

01207023c ಉವಾಸ ನಗರೇ ತಸ್ಮಿನ್ಕೌಂತೇಯಸ್ತ್ರಿಹಿಮಾಃ ಸಮಾಃ||

ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವನು ಆ ಕನ್ಯೆಯನ್ನು ಸ್ವೀಕರಿಸಿದನು. ಕೌಂತೇಯನು ಆ ನಗರದಲ್ಲಿ ಮೂರು ವರ್ಷಗಳ ಪರ್ಯಂತ ವಾಸಿಸಿದನು[6].”

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಚಿತ್ರಾಂಗದಸಂಗಮೇ ಸಪ್ತಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಚಿತ್ರಾಂಗದಸಂಗಮ ಎನ್ನುವ ಇನ್ನೂರಾಏಳನೆಯ ಅಧ್ಯಾಯವು.

Related image

[1]ಈಗಿನ ಬಂಗಾಳ

[2] ಈಗಿನ ಒದಿಶಾ

[3]ಕನ್ನಡ ಭಾರತ ದರ್ಶನ ಸಂಪುಟದಲ್ಲಿ ಆ ನಗರದ ಹೆಸರು “ಮಣೀಪೂರ” ಎಂದಿದೆ.

[4]ಕನ್ನಡ ಭಾರತದರ್ಶನದಲ್ಲಿ ಈ ರಾಜನ ಹೆಸರು “ಪ್ರಭಂಜನ” ಎಂದಿದೆ.

[5]‘ಪ್ರಣಿಪಾತ’ ಎಂದರೇನು?

[6]ಕನ್ನಡ ಭಾರತ ದರ್ಶನ ಸಂಪುಟದಲ್ಲಿ ಚಿತ್ರಾಂಗದೆಯು ಧನಂಜಯನಿಂದ ಅವನಿಗೆ ಅನುರೂಪ ಮಗನನ್ನು ಪಡೆದು ಚಿತ್ರವಾಹನನಿಗೆ ಅತೀವ ಸಂತೋಷವನ್ನು ತಂದಳು; ಮತ್ತು ಧನಂಜಯನು ಮಗನ ಶಿರಸ್ಸನ್ನು ಆಘ್ರಾಣಿಸಿ, ಚಿತ್ರವಾಹನನ ಅನುಮತಿಯನ್ನು ಪಡೆದು ಮುಂದೆ ಪ್ರಯಾಣ ಮಾಡಿದನು ಎಂದಿದೆ.

Comments are closed.