Adi Parva: Chapter 203

ಆದಿ ಪರ್ವ: ಅರ್ಜುನವನವಾಸ ಪರ್ವ

೨೦೩

ದೇವ-ಋಷಿಗಣಗಳೆಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟಿದುದು (೧-೮). ಪಿತಾಮಹನ ಆದೇಶದಂತೆ ವಿಶ್ವಕರ್ಮನು ತಿಲೋತ್ತಮೆಯನ್ನು ಸೃಷ್ಟಿಸಿದುದು (೯-೧೭). ತಿಲೋತ್ತಮೆಯ ಸೌಂದರ್ಯವನ್ನು ನೋಡಲು ಶಿವನು ಚತುರ್ಮುಖನಾದುದು, ಇಂದ್ರನು ಸಹಸ್ರಾಕ್ಷನಾದುದು (೧೮-೩೦).

Image result for tilottama01203001 ನಾರದ ಉವಾಚ|

01203001a ತತೋ ದೇವರ್ಷಯಃ ಸರ್ವೇ ಸಿದ್ಧಾಶ್ಚ ಪರಮರ್ಷಯಃ|

01203001c ಜಗ್ಮುಸ್ತದಾ ಪರಾಮಾರ್ತಿಂ ದೃಷ್ಟ್ವಾ ತತ್ಕದನಂ ಮಹತ್||

ನಾರದನು ಹೇಳಿದನು: “ಆಗ ದೇವರ್ಷಿಗಳು, ಸರ್ವ ಸಿದ್ಧರೂ, ಮತ್ತು ಪರಮರ್ಷಿಗಳೆಲ್ಲರೂ ಆ ಮಹಾ ಕದನವನ್ನು ನೋಡಿ ಬಹುದುಃಖಿತರಾದರು.

01203002a ತೇಽಭಿಜಗ್ಮುರ್ಜಿತಕ್ರೋಧಾ ಜಿತಾತ್ಮಾನೋ ಜಿತೇಂದ್ರಿಯಾಃ|

01203002c ಪಿತಾಮಹಸ್ಯ ಭವನಂ ಜಗತಃ ಕೃಪಯಾ ತದಾ||

ಆ ಜಿತಕ್ರೋಧ, ಜಿತಾತ್ಮ, ಜಿತೇಂದ್ರಿಯರು ಜಗತ್ತಿನ ಮೇಲಿನ ಕೃಪೆಯಿಂದ ಭವನದ ಪಿತಾಮಹನಲ್ಲಿಗೆ ಹೋದರು.

01203003a ತತೋ ದದೃಶುರಾಸೀನಂ ಸಹ ದೇವೈಃ ಪಿತಾಮಹಂ|

01203003c ಸಿದ್ಧೈರ್ಬ್ರಹ್ಮರ್ಷಿಭಿಶ್ಚೈವ ಸಮಂತಾತ್ಪರಿವಾರಿತಂ||

ಸಿದ್ಧ-ಬ್ರಹ್ಮರ್ಷಿಗಳಿಂದ ಪರಿವೃತರಾಗಿ ಅವರು ದೇವತೆಗಳೊಡನೆ ಕುಳಿತಿದ್ದ ಪಿತಾಮಹನನ್ನು ಕಂಡರು.

01203004a ತತ್ರ ದೇವೋ ಮಹಾದೇವಸ್ತತ್ರಾಗ್ನಿರ್ವಾಯುನಾ ಸಹ|

01203004c ಚಂದ್ರಾದಿತ್ಯೌ ಚ ಧರ್ಮಶ್ಚ ಪರಮೇಷ್ಠೀ ತಥಾ ಬುಧಃ||

01203005a ವೈಖಾನಸಾ ವಾಲಖಿಲ್ಯಾ ವಾನಪ್ರಸ್ಥಾ ಮರೀಚಿಪಾಃ|

01203005c ಅಜಾಶ್ಚೈವಾವಿಮೂಢಾಶ್ಚ ತೇಜೋಗರ್ಭಾಸ್ತಪಸ್ವಿನಃ|

01203005e ಋಷಯಃ ಸರ್ವ ಏವೈತೇ ಪಿತಾಮಹಮುಪಾಸತೇ||

ಅಲ್ಲಿ ದೇವ ಮಹಾದೇವ, ಅಗ್ನಿ-ವಾಯುಗಳ ಸಹಿತ ಚಂದ್ರಾದಿತ್ಯರು, ಧರ್ಮ, ಪರಮೇಷ್ಠಿ, ಬುಧ, ವೈಖಾನಸರು, ವಾಲಖಿಲ್ಯರು, ವಾನಪ್ರಸ್ಥರು, ಮರೀಚಿಗಳು, ಅಜರು, ಅವಿಮೂಢರು, ತೇಜೋಗರ್ಭ ತಪಸ್ವಿಗಳೂ, ಸರ್ವ ಋಷಿಗಳೂ ಪಿತಾಮಹನನ್ನು ಉಪಾಸಿಸುತ್ತಿದ್ದರು.

01203006a ತತೋಽಭಿಗಮ್ಯ ಸಹಿತಾಃ ಸರ್ವ ಏವ ಮಹರ್ಷಯಃ|

01203006c ಸುಂದೋಪಸುಂದಯೋಃ ಕರ್ಮ ಸರ್ವಮೇವ ಶಶಂಸಿರೇ||

ಆಗ ಸರ್ವ ಮಹರ್ಷಿಗಳೂ ಒಟ್ಟಾಗಿ ಹೋಗಿ ಸುಂದೋಪಸುಂದರ ಸರ್ವ ಕರ್ಮಗಳನ್ನೂ ವರದಿಮಾಡಿದರು.

01203007a ಯಥಾಕೃತಂ ಯಥಾ ಚೈವ ಕೃತಂ ಯೇನ ಕ್ರಮೇಣ ಚ|

01203007c ನ್ಯವೇದಯಂಸ್ತತಃ ಸರ್ವಮಖಿಲೇನ ಪಿತಾಮಹೇ||

ಯಾವ ಕ್ರಮದಲ್ಲಿ ಏನೆಲ್ಲ ಮಾಡಿದರೆನ್ನುವುದನ್ನು ಎಲ್ಲವನ್ನೂ ಪಿತಾಮಹನಿಗೆ ನಿವೇದಿಸಿದರು.

01203008a ತತೋ ದೇವಗಣಾಃ ಸರ್ವೇ ತೇ ಚೈವ ಪರಮರ್ಷಯಃ|

01203008c ತಮೇವಾರ್ಥಂ ಪುರಸ್ಕೃತ್ಯ ಪಿತಾಮಹಮಚೋದಯನ್||

ಆಗ ದೇವಗಣ-ಪರಮ ಋಷಿ ಸರ್ವರೂ ಆ ವಿಷಯವನ್ನೇ ಮುಂದಿಟ್ಟುಕೊಂಡು ಪಿತಾಮಹನನ್ನು ಪ್ರೇರಿಸಿದರು.

01203009a ತತಃ ಪಿತಾಮಹಃ ಶ್ರುತ್ವಾ ಸರ್ವೇಷಾಂ ತದ್ವಚಸ್ತದಾ|

01203009c ಮುಹೂರ್ತಮಿವ ಸಂಚಿಂತ್ಯ ಕರ್ತವ್ಯಸ್ಯ ವಿನಿಶ್ಚಯಂ||

ಅವರೆಲ್ಲರ ಆ ಮಾತುಗಳನ್ನು ಕೇಳಿದ ಪಿತಾಮಹನು ಒಂದು ಮುಹೂರ್ತ ಯೋಚಿಸಿ ಮುಂದಿನ ಕರ್ತವ್ಯದ ಕುರಿತು ನಿಶ್ಚಯಿಸಿದನು.

01203010a ತಯೋರ್ವಧಂ ಸಮುದ್ದಿಶ್ಯ ವಿಶ್ವಕರ್ಮಾಣಮಾಹ್ವಯತ್|

01203010c ದೃಷ್ಟ್ವಾ ಚ ವಿಶ್ವಕರ್ಮಾಣಂ ವ್ಯಾದಿದೇಶ ಪಿತಾಮಹಃ|

01203010e ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪಾಃ||

ಅವರಿಬ್ಬರ ವಧೆಯನ್ನು ಕಲ್ಪಿಸಿ, ವಿಶ್ವಕರ್ಮನನ್ನು ಕರೆಯಿಸಿದನು. ವಿಶ್ವಕರ್ಮನನ್ನು ಕಂಡ ಪಿತಾಮಹನು: “ಮಹಾತಪಸ್ವಿಗಳೂ ಬೇಡುವಂಥಹ ಸುಂದರಿಯನ್ನು ಸೃಷ್ಟಿಸು!” ಎಂದು ಆದೇಶವನ್ನಿತ್ತನು.

01203011a ಪಿತಾಮಹಂ ನಮಸ್ಕೃತ್ಯ ತದ್ವಾಕ್ಯಮಭಿನಂದ್ಯ ಚ|

01203011c ನಿರ್ಮಮೇ ಯೋಷಿತಂ ದಿವ್ಯಾಂ ಚಿಂತಯಿತ್ವಾ ಪ್ರಯತ್ನತಃ||

ಪಿತಾಮಹನನ್ನು ನಮಸ್ಕರಿಸಿ, ಅವನ ವಾಖ್ಯವನ್ನು ಅಭಿನಂದಿಸಿ ವಿಶ್ವಕರ್ಮನು ಪ್ರಯತ್ನಿಸಿ ಯೋಚಿಸಿ ಓರ್ವ ದಿವ್ಯ ಸ್ತ್ರೀಯನ್ನು ಸೃಷ್ಟಿಸಿದನು.

01203012a ತ್ರಿಷು ಲೋಕೇಷು ಯತ್ಕಿಂಚಿದ್ಭೂತಂ ಸ್ಥಾವರಜಂಗಮಂ|

01203012c ಸಮಾನಯದ್ದರ್ಶನೀಯಂ ತತ್ತದ್ಯತ್ನಾತ್ತತಸ್ತತಃ||

ಮೂರು ಲೋಕಗಳಲ್ಲಿನ ಸ್ಥಾವರಜಂಗಮಗಳಲ್ಲಿ ಯಾವುದೇ ಸೌಂದರ್ಯವಿದ್ದರೂ ಅದನ್ನು ಅಲ್ಲಲ್ಲಿಂದ ತೆಗೆದುಕೊಂಡು ಒಟ್ಟುಗೂಡಿಸಿದನು[1].

01203013a ಕೋಟಿಶಶ್ಚಾಪಿ ರತ್ನಾನಿ ತಸ್ಯಾ ಗಾತ್ರೇ ನ್ಯವೇಶಯತ್|

01203013c ತಾಂ ರತ್ನಸಂಘಾತಮಯೀಮಸೃಜದ್ದೇವರೂಪಿಣೀಂ||

ಕೋಟಿಗಟ್ಟಲೆ ರತ್ನಗಳನ್ನು ಅವಳ ದೇಹದಲ್ಲಿ ಅಳವಡಿಸಿದನು. ಹೀಗೆ ಆ ರತ್ನಸಂಘಾತಮಯಿ ದೇವರೂಪಿಣಿಯನ್ನು ಸೃಷ್ಟಿಸಿದನು.

01203014a ಸಾ ಪ್ರಯತ್ನೇನ ಮಹತಾ ನಿರ್ಮಿತಾ ವಿಶ್ವಕರ್ಮಣಾ|

01203014c ತ್ರಿಷು ಲೋಕೇಷು ನಾರೀಣಾಂ ರೂಪೇಣಾಪ್ರತಿಮಾಭವತ್||

ವಿಶ್ವಕರ್ಮನ ಮಹಾ ಪ್ರಯತ್ನದಿಂದ ನಿರ್ಮಿತಳಾದ ಅವಳು ರೂಪದಲ್ಲಿ ಮೂರು ಲೋಕದ ನಾರಿಯರನ್ನು ಮೀರಿಸಿದ್ದಳು.

01203015a ನ ತಸ್ಯಾಃ ಸೂಕ್ಷ್ಮಮಪ್ಯಸ್ತಿ ಯದ್ಗಾತ್ರೇ ರೂಪಸಂಪದಾ|

01203015c ನ ಯುಕ್ತಂ ಯತ್ರ ವಾ ದೃಷ್ಟಿರ್ನ ಸಜ್ಜತಿ ನಿರೀಕ್ಷತಾಂ||

ಅವಳ ದೇಹದಲ್ಲಿ ರೂಪಸಂಪದವಾಗಿರದಿದ್ದ ಅಥವಾ ನೋಡುವವರ ದೃಷ್ಟಿಯು ಅಲ್ಲಿಯೇ ನಿಲ್ಲುವಂತೆ ಮಾಡದಿರುವ ಯಾವುದೊಂದು ಸೂಕ್ಷ್ಮಭಾಗವೂ ಇರಲಿಲ್ಲ.

01203016a ಸಾ ವಿಗ್ರಹವತೀವ ಶ್ರೀಃ ಕಾಂತರೂಪಾ ವಪುಷ್ಮತೀ|

01203016c ಜಹಾರ ಸರ್ವಭೂತಾನಾಂ ಚಕ್ಷೂಂಷಿ ಚ ಮನಾಂಸಿ ಚ||

ವಿಗ್ರಹದಂದಿರುವ ಆ ಕಾಂತರೂಪಿಣಿ, ಮಪುಷ್ಮತೀ ಶ್ರೀಯು ಸರ್ವಭೂತಗಳ ಕಣ್ಮನಗಳನ್ನು ಸೆಳೆಯುತ್ತಿದ್ದಳು.

01203017a ತಿಲಂ ತಿಲಂ ಸಮಾನೀಯ ರತ್ನಾನಾಂ ಯದ್ವಿನಿರ್ಮಿತಾ|

01203017c ತಿಲೋತ್ತಮೇತ್ಯತಸ್ತಸ್ಯಾ ನಾಮ ಚಕ್ರೇ ಪಿತಾಮಹಃ[2]||

ಸಣ್ಣ ಸಣ್ಣ ರತ್ನಗಳನ್ನು ಒಟ್ಟುಗೂಡಿಸಿ ರತ್ನಗಳಿಂದಲೇ ನಿರ್ಮಿತ ಅವಳಿಗೆ ಪಿತಾಮಹನು ತಿಲೋತ್ತಮೆಯೆಂಬ ಹೆಸರನ್ನಿಟ್ಟನು.

01203018 ಪಿತಾಮಹ ಉವಾಚ|

01203018a ಗಚ್ಛ ಸುಂದೋಪಸುಂದಾಭ್ಯಾಮಸುರಾಭ್ಯಾಂ ತಿಲೋತ್ತಮೇ|

01203018c ಪ್ರಾರ್ಥನೀಯೇನ ರೂಪೇಣ ಕುರು ಭದ್ರೇ ಪ್ರಲೋಭನಂ||

ಪಿತಾಮಹನು ಹೇಳಿದನು: “ತಿಲೋತ್ತಮೇ! ಅಸುರ ಸುಂದೋಪಸುಂದರ ಬಳಿ ಹೋಗು. ಭದ್ರೇ! ನಿನ್ನ ಈ ಪ್ರಾರ್ಥನೀಯ ರೂಪದಿಂದ ಅವರನ್ನು ಪ್ರಲೋಭಿಸು.

01203019a ತ್ವತ್ಕೃತೇ ದರ್ಶನಾದೇವ ರೂಪಸಂಪತ್ಕೃತೇನ ವೈ|

01203019c ವಿರೋಧಃ ಸ್ಯಾದ್ಯಥಾ ತಾಭ್ಯಾಮನ್ಯೋನ್ಯೇನ ತಥಾ ಕುರು||

ರೂಪಸಂಪತ್ತಿನ ನಿನ್ನನ್ನು ನೋಡಿದ ಕೂಡಲೇ ಅವರಲ್ಲಿ ಅನ್ಯೋನ್ಯ ವಿರೋಧವುಂಟಾಗುವಂತೆ ಮಾಡು.””

01203020 ನಾರದ ಉವಾಚ|

01203020a ಸಾ ತಥೇತಿ ಪ್ರತಿಜ್ಞಾಯ ನಮಸ್ಕೃತ್ಯ ಪಿತಾಮಹಂ|

01203020c ಚಕಾರ ಮಂಡಲಂ ತತ್ರ ವಿಬುಧಾನಾಂ ಪ್ರದಕ್ಷಿಣಂ||

ನಾರದನು ಹೇಳಿದನು: “ಹಾಗೆಯೇ ಆಗಲೆಂದು ಪ್ರತಿಜ್ಞಾಪಿಸಿ ಅವಳು ಪಿತಾಮಹನನ್ನು ಸಮಸ್ಕರಿಸಿ ಅಲ್ಲಿದ್ದ ವಿಭುಧ ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು.

01203021a ಪ್ರಾಙ್ಮುಖೋ ಭಗವಾನಾಸ್ತೇ ದಕ್ಷಿಣೇನ ಮಹೇಶ್ವರಃ|

01203021c ದೇವಾಶ್ಚೈವೋತ್ತರೇಣಾಸನ್ಸರ್ವತಸ್ತ್ವೃಷಯೋಽಭವನ್||

ಭಗವಾನನು ಪೂರ್ವಾಭಿಮುಖನಾಗಿ ಕುಳಿತಿದ್ದನು. ದಕ್ಷಿಣದಲ್ಲಿ ಮಹೇಶ್ವರನಿದ್ದನು, ಉತ್ತರದಲ್ಲಿ ದೇವತೆಗಳು ಕುಳಿತಿದ್ದರು ಮತ್ತು ಋಷಿಗಳು ಸರ್ವತೋಮುಖ ಕುಳಿತಿದ್ದರು.

01203022a ಕುರ್ವಂತ್ಯಾ ತು ತಯಾ ತತ್ರ ಮಂಡಲಂ ತತ್ಪ್ರದಕ್ಷಿಣಂ|

01203022c ಇಂದ್ರಃ ಸ್ಥಾಣುಶ್ಚ ಭಗವಾನ್ಧೈರ್ಯೇಣ ಪ್ರತ್ಯವಸ್ಥಿತೌ||

ಅವಳು ಆ ಮಂಡಲವನ್ನು ಪ್ರದಕ್ಷಿಣೆ ಮಾಡುತ್ತಿರಲು ಇಂದ್ರ ಮತ್ತು ಭಗವಾನ್ ಸ್ಥಾಣುವು ಅಲುಗಾಡದೆ ಸ್ಥಿರವಾಗಿ ಕುಳಿತಿದ್ದರು.

01203023a ದ್ರಷ್ಟುಕಾಮಸ್ಯ ಚಾತ್ಯರ್ಥಂ ಗತಾಯಾಃ ಪಾರ್ಶ್ವತಸ್ತದಾ|

01203023c ಅನ್ಯದಂಚಿತಪಕ್ಷ್ಮಾಂತಂ ದಕ್ಷಿಣಂ ನಿಃಸೃತಂ ಮುಖಂ||

ಪಕ್ಕದಲ್ಲಿಯೇ ಹೋಗುತ್ತಿರುವ ಅವಳನ್ನು ನೋಡುವ ಆಸೆಯಿಂದ ಅವನ ದಕ್ಷಿಣಭಾಗದಲ್ಲಿ ಇನ್ನೊಂದು ಮುಖವು ಮೂಡಿತು.

01203024a ಪೃಷ್ಠತಃ ಪರಿವರ್ತಂತ್ಯಾಃ ಪಶ್ಚಿಮಂ ನಿಃಸೃತಂ ಮುಖಂ|

01203024c ಗತಾಯಾಶ್ಚೋತ್ತರಂ ಪಾರ್ಶ್ವಮುತ್ತರಂ ನಿಃಸೃತಂ ಮುಖಂ||

ಅವಳು ಹಿಂದೆ ಹಾಯುವಾಗ ಅವನ ಪಶ್ಚಿಮ ಭಾಗದಲ್ಲಿ ಇನ್ನೊಂದು ಮುಖವು ಹೊರಮೂಡಿತು. ಅವಳು ಉತ್ತರದ ಕಡೆ ಬರಲು ಅಲ್ಲಿಯೂ ಒಂದು ಮುಖವು ಮೂಡಿತು[3].

01203025a ಮಹೇಂದ್ರಸ್ಯಾಪಿ ನೇತ್ರಾಣಾಂ ಪಾರ್ಶ್ವತಃ ಪೃಷ್ಠತೋಽಗ್ರತಃ|

01203025c ರಕ್ತಾಂತಾನಾಂ ವಿಶಾಲಾನಾಂ ಸಹಸ್ರಂ ಸರ್ವತೋಽಭವತ್||

ಮಹೇಂದ್ರನಿಗೆ ಕೂಡ ಪಕ್ಕದಲ್ಲಿ, ಹಿಂದೆ, ಮತ್ತು ಮುಂದೆ ಎಲ್ಲ ಕಡೆಯಲ್ಲಿ ಸಹಸ್ರಾರು ರಕ್ತಾಂತ ವಿಶಾಲ ಕಣ್ಣುಗಳು ಉದ್ಭವಿಸಿದವು.

01203026a ಏವಂ ಚತುರ್ಮುಖಃ ಸ್ಥಾಣುರ್ಮಹಾದೇವೋಽಭವತ್ಪುರಾ|

01203026c ತಥಾ ಸಹಸ್ರನೇತ್ರಶ್ಚ ಬಭೂವ ಬಲಸೂದನಃ||

ಹೀಗೆ ಹಿಂದೆ ಮಹಾದೇವ ಸ್ಥಾಣುವು ಚತುರ್ಮುಖನಾದನು. ಹಾಗೆಯೇ ಬಲಸೂದನನು ಸಹಸ್ರನೇತ್ರನಾದನು[4].

01203027a ತಥಾ ದೇವನಿಕಾಯಾನಾಮೃಷೀಣಾಂ ಚೈವ ಸರ್ವಶಃ|

01203027c ಮುಖಾನ್ಯಭಿಪ್ರವರ್ತಂತೇ ಯೇನ ಯಾತಿ ತಿಲೋತ್ತಮಾ||

ಹಾಗೆ ತಿಲೋತ್ತಮೆಯು ಹೋದಕಡೆಗೆಲ್ಲಾ ದೇವ-ಋಷಿಗಳ ಮುಖಗಳು ತಿರುಗುತ್ತಿದ್ದವು.

01203028a ತಸ್ಯಾ ಗಾತ್ರೇ ನಿಪತಿತಾ ತೇಷಾಂ ದೃಷ್ಟಿರ್ಮಹಾತ್ಮನಾಂ|

01203028c ಸರ್ವೇಷಾಮೇವ ಭೂಯಿಷ್ಠಮೃತೇ ದೇವಂ ಪಿತಾಮಹಂ||

ಅವಳ ದೇಹದ ಮೇಲೆ ಬಿದ್ದಿದ್ದ - ದೇವ ಪಿತಾಮಹನನ್ನು ಬಿಟ್ಟು - ಉಳಿದ ಎಲ್ಲ ಮಹಾತ್ಮರ ದೃಷ್ಟಿಗಳು ಅಲ್ಲಿಯೇ ನೆಟ್ಟುಹೋದವು.

01203029a ಗಚ್ಛಂತ್ಯಾಸ್ತು ತದಾ ದೇವಾಃ ಸರ್ವೇ ಚ ಪರಮರ್ಷಯಃ|

01203029c ಕೃತಮಿತ್ಯೇವ ತತ್ಕಾರ್ಯಂ ಮೇನಿರೇ ರೂಪಸಂಪದಾ||

ಅವಳು ಹೋಗುತ್ತಿರುವಾಗ ಅಲ್ಲಿರುವ ಸರ್ವ ದೇವತೆಗಳೂ ಪರಮ ಋಷಿಗಳೂ “ಅವಳ ರೂಪಸಂಪತ್ತಿನಿಂದ ನಡೆಯ ಬೇಕಾದ ಕಾರ್ಯವು ಆಗಿಯೇ ಆಗುತ್ತದೆ!” ಎಂದು ಭಾವಿಸಿದರು.

01203030a ತಿಲೋತ್ತಮಾಯಾಂ ತು ತದಾ ಗತಾಯಾಂ ಲೋಕಭಾವನಃ|

01203030c ಸರ್ವಾನ್ವಿಸರ್ಜಯಾಮಾಸ ದೇವಾನೃಷಿಗಣಾಂಶ್ಚ ತಾನ್||

ತಿಲೋತ್ತಮೆಯು ಹೊರಟು ಹೋದ ನಂತರ ಲೋಕ ಭಾವನನು ಸರ್ವ ದೇವ ಋಷಿಗಣಗಳನ್ನು ವಿಸರ್ಜಿಸಿದನು.”

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ತ್ರ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ಮೂರನೆಯ ಅಧ್ಯಾಯವು.

Related image

[1]ಸ್ತ್ರೀಯ ವರ್ಣನೆಯನ್ನು ಮಾಡುವಾಗ ಕವಿಗಳು ಚರಾಚರವಸ್ತುಗಳಲ್ಲಿರುವ ಒಂದೊಂದು ಸುಂದರ ಭಾಗಕ್ಕೂ ತುಲನೆ ಮಾಡುತ್ತಾರೆ. ಉದಾಹರಣೆಗೆ: ಸಿಂಹಕಟಿ, ಚಂದ್ರವದನೆ, ಕಮಲದಳಾಯತಾಕ್ಷೀ, ಕಮಲದ ಮೊಗ್ಗಿನಂಥ ಮೊಲೆಯುಳ್ಳವಳು, ಹರಿಣಾಕ್ಷೀ, ಸಂಪಿಗೆ ಹೂವಿನಂಥ ಮೂಗುಳ್ಳವಳು, ತೊಂಡೆ ಹಣ್ಣಿನಂತೆ ಕೆಂಪಾದ ತುಟಿಯುಳ್ಳವಳು, ಹಾವಿನಂಥ ನೀಳ ಜಡೆಯುಳ್ಳವಳು, ಬಾಳೆಯ ದಿಂಡಿನಂಥ ತೊಡೆಯುಳ್ಳವಳು - ಇತ್ಯಾದಿ.

[2]ಬ್ರಹ್ಮಾಣಂ ಸಾ ನಮಸ್ಕೃತ್ಯ ಪ್ರಾಂಜಲಿರ್ವಾಕ್ಯಮಬ್ರವೀತ್| ಕಿಂ ಕಾರ್ಯಂ ಮಯಿ ಭೂತೇಶ ಯೇನಾಸ್ಮ್ಯದ್ಯೇಹ ನಿರ್ಮಿತಾ||

[3]ಶಿವನು ಚತುರ್ಮುಖನಾಗುವ ಇನ್ನೊಂದು ಕಥೆ ಇದೆ.

[4]ಇಂದ್ರನು ಸಹಸ್ರಾಕ್ಷನಾಗಲು ಬೇರೊಂದು ಕಥೆಯಿದೆಯಲ್ಲವೇ?

Comments are closed.