Adi Parva: Chapter 193

ಆದಿ ಪರ್ವ: ವಿದುರಾಗಮನ ಪರ್ವ

೧೯೩

ಅಭಿಪ್ರಾಯಗಳೇನೆಂದು ಧೃತರಾಷ್ಟ್ರನು ಕೇಳಲು ಪಾಂಡವರನ್ನು ನಾಶಪಡಿಸಲು ದುರ್ಯೋಧನನು ಹಲವಾರು ಉಪಾಯಗಳನ್ನು ಹಂಚಿಕೊಂಡಿದುದು (೧-೧೯).

01193001 ಧೃತರಾಷ್ಟ್ರ ಉವಾಚ|

01193001a ಅಹಮಪ್ಯೇವಮೇವೈತಚ್ಚಿಂತಯಾಮಿ ಯಥಾ ಯುವಾಂ|

01193001c ವಿವೇಕ್ತುಂ ನಾಹಮಿಚ್ಛಾಮಿ ತ್ವಾಕಾರಂ ವಿದುರಂ ಪ್ರತಿ||

ಧೃತರಾಷ್ಟ್ರನು ಹೇಳಿದನು: “ನಿಮ್ಮ ಹಾಗೆ ನಾನೂ ಕೂಡ ಅದರ ಕುರಿತೇ ಚಿಂತಿಸುತ್ತೇನೆ. ವಿದುರನ ಎದಿರು ನನಗನಿಸಿದ್ದುದನ್ನು ಹೇಳಲು ಇಷ್ಟಪಡಲಿಲ್ಲ.

01193002a ಅತಸ್ತೇಷಾಂ ಗುಣಾನೇವ ಕೀರ್ತಯಾಮಿ ವಿಶೇಷತಃ|

01193002c ನಾವಬುಧ್ಯೇತ ವಿದುರೋ ಮಮಾಭಿಪ್ರಾಯಮಿಂಗಿತೈಃ||

ವಿದುರನಿಗೆ ನನ್ನ ನಿಜವಾದ ಅಭಿಪ್ರಾಯ ಇಂಗಿತಗಳು ತಿಳಿಯಬಾರದೆಂದು ಅವನ ಎದಿರು ವಿಶೇಷವಾಗಿ ಅವರ ಗುಣಗಳನ್ನೇ ಹೊಗಳುತ್ತಿರುತ್ತೇನೆ.

01193003a ಯಚ್ಚ ತ್ವಂ ಮನ್ಯಸೇ ಪ್ರಾಪ್ತಂ ತದ್ಬ್ರೂಹಿ ತ್ವಂ ಸುಯೋಧನ|

01193003c ರಾಧೇಯ ಮನ್ಯಸೇ ತ್ವಂ ಚ ಯತ್ಪ್ರಾಪ್ತಂ ತದ್ಬ್ರವೀಹಿ ಮೇ||

ಸುಯೋಧನ! ಈ ವಿಷಯದಲ್ಲಿ ನಿನಗೇನನ್ನಿಸುತ್ತಿದೆ ಎನ್ನುವುದನ್ನು ಹೇಳು. ರಾಧೇಯ! ನೀನೂ ಕೂಡ ನಿನ್ನ ಅಭಿಪ್ರಾಯವನ್ನು ಹೇಳು.”

01193004 ದುರ್ಯೋಧನ ಉವಾಚ|

01193004a ಅದ್ಯ ತಾನ್ಕುಶಲೈರ್ವಿಪ್ರೈಃ ಸುಕೃತೈರಾಪ್ತಕಾರಿಭಿಃ|

01193004c ಕುಂತೀಪುತ್ರಾನ್ಭೇದಯಾಮೋ ಮಾದ್ರೀಪುತ್ರೌ ಚ ಪಾಂಡವೌ||

ದುರ್ಯೋಧನನು ಹೇಳಿದನು: “ಪಾಂಡವರಲ್ಲಿಯೇ ಕುಂತಿಪುತ್ರರು ಮತ್ತು ಮಾದ್ರಿಪುತ್ರರಲ್ಲಿ ಭೇದವನ್ನುಂಟು ಮಾಡಲು ಸಮರ್ಥ ಆಪ್ತ ಕುಶಲವಿಪ್ರರನ್ನು ಇಂದೇ ಕಳುಹಿಸೋಣ.

01193005a ಅಥ ವಾ ದ್ರುಪದೋ ರಾಜಾ ಮಹದ್ಭಿರ್ವಿತ್ತಸಂಚಯೈಃ|

01193005c ಪುತ್ರಾಶ್ಚಾಸ್ಯ ಪ್ರಲೋಭ್ಯಂತಾಮಮಾತ್ಯಾಶ್ಚೈವ ಸರ್ವಶಃ||

01193006a ಪರಿತ್ಯಜಧ್ವಂ ರಾಜಾನಂ ಕುಂತೀಪುತ್ರಂ ಯುಧಿಷ್ಠಿರಂ|

ಅಥವಾ ರಾಜ ದ್ರುಪದ, ಅವನ ಪುತ್ರರು ಮತ್ತು ಅಮಾತ್ಯರು ಎಲ್ಲರಿಗೂ ಮಹಾ ವಿತ್ತಸಂಚಯಗಳನ್ನಿತ್ತು ಕುಂತೀಪುತ್ರ ರಾಜ ಯುಧಿಷ್ಠಿರನನ್ನು ಪರಿತ್ಯಜಿಸುವಂತೆ ಮಾಡೋಣ.

01193006c ಅಥ ತತ್ರೈವ ವಾ ತೇಷಾಂ ನಿವಾಸಂ ರೋಚಯಂತು ತೇ||

01193007a ಇಹೈಷಾಂ ದೋಷವದ್ವಾಸಂ ವರ್ಣಯಂತು ಪೃಥಕ್ ಪೃಥಕ್|

01193007c ತೇ ಭಿದ್ಯಮಾನಾಸ್ತತ್ರೈವ ಮನಃ ಕುರ್ವಂತು ಪಾಂಡವಾಃ||

ಅಥವಾ ಅವರು ಅಲ್ಲಿಯೇ ವಾಸಿಸಲು ಬಯಸುವಂತೆ ಮಾಡೋಣ. ಅವರು ಇಲ್ಲಿ ಬಂದು ವಾಸಮಾಡುವುದರ ದುಷ್ಪರಿಣಾಮಗಳನ್ನು ಪುನಃ ಪುನಃ ಒತ್ತಿಹೇಳಿ ಪಾಂಡವರು ಅಲ್ಲಿಯೇ ವಾಸಿಸಲು ಮನಸ್ಸುಮಾಡುವ ಹಾಗೆ ಮಾಡೋಣ.

01193008a ಅಥವಾ ಕುಶಲಾಃ ಕೇ ಚಿದುಪಾಯನಿಪುಣಾ ನರಾಃ|

01193008c ಇತರೇತರತಃ ಪಾರ್ಥಾನ್ಭೇದಯಂತ್ವನುರಾಗತಃ||

ಅಥವಾ ಒಳ್ಳೆಯ ಕುಶಲ ಉಪಾಯನಿಪುಣ ಮನುಷ್ಯರ ಮೂಲಕ ಪಾರ್ಥ ಪರಸ್ಪರರಲ್ಲಿ ಭೇದವುಂಟಾಗುವಂತೆ ಮಾಡಬೇಕು.

01193009a ವ್ಯುತ್ಥಾಪಯಂತು ವಾ ಕೃಷ್ಣಾಂ ಬಹುತ್ವಾತ್ಸುಕರಂ ಹಿ ತತ್|

01193009c ಅಥವಾ ಪಾಂಡವಾಂಸ್ತಸ್ಯಾಂ ಭೇದಯಂತು ತತಶ್ಚ ತಾಂ||

ಅಥವಾ ಅವರು ಅಷ್ಟೊಂದು ಜನರಿದ್ದುದರಿಂದ ಸುಲಭವಾಗಿ ಕೃಷ್ಣೆಯೇ ಅವರ ವಿರುದ್ಧ ಹೋಗುವಹಾಗೆ ಮಾಡಬಹುದು.

01193010a ಭೀಮಸೇನಸ್ಯ ವಾ ರಾಜನ್ನುಪಾಯಕುಶಲೈರ್ನರೈಃ|

01193010c ಮೃತ್ಯುರ್ವಿಧೀಯತಾಂ ಚನ್ನೈಃ ಸ ಹಿ ತೇಷಾಂ ಬಲಾಧಿಕಃ||

01193011a ತಸ್ಮಿಂಸ್ತು ನಿಹತೇ ರಾಜನ್ ಹತೋತ್ಸಾಹಾ ಹತೌಜಸಃ|

01193011c ಯತಿಷ್ಯಂತೇ ನ ರಾಜ್ಯಾಯ ಸ ಹಿ ತೇಷಾಂ ವ್ಯಪಾಶ್ರಯಃ||

ಇಲ್ಲವಾದರೆ, ರಾಜನ್! ಉಪಾಯಕುಶಲರಿಂದ ಭೀಮಸೇನನ ಸಾವನ್ನು ಏರ್ಪಡಿಸೋಣ. ರಾಜನ್! ಅವರಲ್ಲಿ ಎಲ್ಲರಿಗಿಂತ ಹೆಚ್ಚು ಬಲಶಾಲಿಯಾದ ಅವನು ಇಲ್ಲವಾದ ನಂತರ ತಮ್ಮ ತೇಜಸ್ಸುಗಳನ್ನು ಕಳೆದುಕೊಂಡು ಅವರೆಲ್ಲರೂ ಉತ್ಸಾಹಹೀನರಾಗುತ್ತಾರೆ. ಅವರೆಲ್ಲರ ಆಶ್ರಯವು ಅವನೇ ಒಬ್ಬನಾಗಿದ್ದುದರಿಂದ, ಅವನಿಲ್ಲವಾದಾಗ ರಾಜ್ಯದ ಮೇಲಿನ ಅವರ ಪ್ರೀತಿ, ಪ್ರಯತ್ನ ಎರಡೂ ಕಡಿಮೆಯಾಗುತ್ತವೆ.

01193012a ಅಜೇಯೋ ಹ್ಯರ್ಜುನಃ ಸಂಖ್ಯೇ ಪೃಷ್ಠಗೋಪೇ ವೃಕೋದರೇ|

01193012c ತಮೃತೇ ಫಲ್ಗುನೋ ಯುದ್ಧೇ ರಾಧೇಯಸ್ಯ ನ ಪಾದಭಾಕ್||

ವೃಕೋದರನ ಬೆಂಬಲಮಾತ್ರದಿಂದ ಸಮರದಲ್ಲಿ ಅರ್ಜುನನು ಅಜೇಯನು. ಅವನಿಲ್ಲದಿದ್ದರೆ ಫಲ್ಗುಣನು ಯುದ್ಧದಲ್ಲಿ ರಾಧೇಯನ ಕಾಲುಭಾಗಕ್ಕೂ ಬರುವುದಿಲ್ಲ!

01193013a ತೇ ಜಾನಮಾನಾ ದೌರ್ಬಲ್ಯಂ ಭೀಮಸೇನಮೃತೇ ಮಹತ್|

01193013c ಅಸ್ಮಾನ್ಬಲವತೋ ಜ್ಞಾತ್ವಾ ನಶಿಷ್ಯಂತ್ಯಬಲೀಯಸಃ||

ಭೀಮಸೇನನಿಲ್ಲದೇ ತಮ್ಮ ಮಹಾ ದೌರ್ಬಲ್ಯವನ್ನು ಅರಿತು ಮತ್ತು ನಮ್ಮ ಬಲವನ್ನು ಅರ್ಥಮಾಡಿಕೊಂಡು ಅವರ ಬಲವು ಕ್ರಮೇಣ ನಶಿಸಿಹೋಗುತ್ತದೆ.

01193014a ಇಹಾಗತೇಷು ಪಾರ್ಥೇಷು ನಿದೇಶವಶವರ್ತಿಷು|

01193014c ಪ್ರವರ್ತಿಷ್ಯಾಮಹೇ ರಾಜನ್ಯಥಾಶ್ರದ್ಧಂ ನಿಬರ್ಹಣೇ||

ರಾಜನ್! ಪಾರ್ಥರು ಇಲ್ಲಿಗೆ ಬಂದು ನಮ್ಮ ಆಜ್ಞೆಗಳಿಗೆ ನಡೆದುಕೊಂಡರೆಂದರೆ ಅವರನ್ನು ಸುಲಭವಾಗಿ ನಿರ್ಮೂಲನ ಮಾಡಬಹುದು.

01193015a ಅಥವಾ ದರ್ಶನೀಯಾಭಿಃ ಪ್ರಮದಾಭಿರ್ವಿಲೋಭ್ಯತಾಂ|

01193015c ಏಕೈಕಸ್ತತ್ರ ಕೌಂತೇಯಸ್ತತಃ ಕೃಷ್ಣಾ ವಿರಜ್ಯತಾಂ||

ಅಥವಾ ಅವರಿಗೆ ಒಬ್ಬರಾದ ಮೇಲೆ ಇನ್ನೊಬ್ಬ ಸುಂದರ ತರುಣಿಯರನ್ನು ತೋರಿಸಿ ಆಸೆಪಡಿಸೋಣ. ಹೀಗೆ ಕೃಷ್ಣೆಯು ಕೌಂತೇಯರನ್ನು ತಿರಸ್ಕರಿಸುತ್ತಾಳೆ.

01193016a ಪ್ರೇಷ್ಯತಾಂ ವಾಪಿ ರಾಧೇಯಸ್ತೇಷಾಮಾಗಮನಾಯ ವೈ|

01193016c ತೇ ಲೋಪ್ತ್ರಹಾರೈಃ ಸಂಧಾಯ ವಧ್ಯಂತಾಮಾಪ್ತಕಾರಿಭಿಃ||

ಅಥವಾ ರಾಧೇಯನನ್ನು ಕಳುಹಿಸಿ ಅವರನ್ನು ಇಲ್ಲಿಗೆ ಕರೆತರಿಸೋಣ. ದಾರಿಯಲ್ಲಿ ಆಪ್ತ ಢಕಾಯಿತರು ಅವರ ಮೇಲೆ ಆಕ್ರಮಣ ಮಾಡಿ ಕೊಲ್ಲುವ ಹಾಗೆ ಮಾಡೋಣ. 

01193017a ಏತೇಷಾಮಭ್ಯುಪಾಯಾನಾಂ ಯಸ್ತೇ ನಿರ್ದೋಷವಾನ್ಮತಃ|

01193017c ತಸ್ಯ ಪ್ರಯೋಗಮಾತಿಷ್ಠ ಪುರಾ ಕಾಲೋಽತಿವರ್ತತೇ||

ಇವುಗಳಲ್ಲಿ ನಿನಗೆ ಯಾವುದು ನಿರ್ದೋಷವೆನಿಸುತ್ತದೆಯೋ ಅದನ್ನು ತಡವಾಗುವುದರೊಳಗೆ ಕಾರ್ಯಗತಗೊಳಿಸು.

01193018a ಯಾವಚ್ಚಾಕೃತವಿಶ್ವಾಸಾ ದ್ರುಪದೇ ಪಾರ್ಥಿವರ್ಷಭೇ|

01193018c ತಾವದೇವಾದ್ಯ ತೇ ಶಕ್ಯಾ ನ ಶಕ್ಯಾಸ್ತು ತತಃ ಪರಂ||

ಪಾರ್ಥಿವರ್ಷಭ ದ್ರುಪದನು ಸಂಪೂರ್ಣ ವಿಶ್ವಾಸವನ್ನು ಪಡೆಯುವುದರೊಳಗೆ ಅವರ ಕುರಿತು ಏನಾದರೂ ಮಾಡಲು ಸಾಧ್ಯ. ನಂತರ ಸಾಧ್ಯವಾಗುವುದಿಲ್ಲ.

01193019a ಏಷಾ ಮಮ ಮತಿಸ್ತಾತ ನಿಗ್ರಹಾಯ ಪ್ರವರ್ತತೇ|

01193019c ಸಾಧು ವಾ ಯದಿ ವಾಸಾಧು ಕಿಂ ವಾ ರಾಧೇಯ ಮನ್ಯಸೇ||

ತಾತ! ನನ್ನ ಪ್ರಕಾರ ಇವುಗಳ ಮೂಲಕ ಅವರನ್ನು ನಿಗ್ರಹಿಸಬಲ್ಲೆವು. ರಾಧೇಯ! ನಾನು ಸರಿಯೋ ಅಥವಾ ಅಲ್ಲವೋ? ನಿನಗೇನನ್ನಿಸುತ್ತದೆ?”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ದುರ್ಯೋಧನವಾಕ್ಯೇ ತ್ರಿನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾತೊಂಭತ್ತ್ಮೂರನೆಯ ಅಧ್ಯಾಯವು.

Image result for indian flowers drawing

Comments are closed.