|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ವೈವಾಹಿಕ ಪರ್ವ
೧೮೫
ದೃಷ್ಟದ್ಯುಮ್ನನು ತನ್ನ ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಿದುದು (೧-೧೩). ಪ್ರಹೃಷ್ಟ ದ್ರುಪದನಿಂದ ಕಳುಹಿಸಲ್ಪಟ್ಟ ಪುರೋಹಿತನು ಪಾಂಡವರಲ್ಲಿಗೆ ಬಂದು ಸಂದೇಶವನ್ನು ನೀಡಿದುದು (೧೪-೨೮).
01185001 ವೈಶಂಪಾಯನ ಉವಾಚ|
01185001a ತತಸ್ತಥೋಕ್ತಃ ಪರಿಹೃಷ್ಟರೂಪಃ|
ಪಿತ್ರೇ ಶಶಂಸಾಥ ಸ ರಾಜಪುತ್ರಃ|
01185001c ಧೃಷ್ಟದ್ಯುಮ್ನಃ ಸೋಮಕಾನಾಂ ಪ್ರಬರ್ಹೋ|
ವೃತ್ತಂ ಯಥಾ ಯೇನ ಹೃತಾ ಚ ಕೃಷ್ಣಾ||
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿ ಸಂತೋಷಗೊಂಡ ಸೋಮಕರ ಪ್ರಭೆ ರಾಜಪುತ್ರ ಧೃಷ್ಟದ್ಯುಮ್ನನು ತನ್ನ ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಿದನು.
01185002a ಯೋಽಸೌ ಯುವಾ ಸ್ವಾಯತಲೋಹಿತಾಕ್ಷಃ|
ಕೃಷ್ಣಾಜಿನೀ ದೇವಸಮಾನರೂಪಃ|
01185002c ಯಃ ಕಾರ್ಮುಕಾಗ್ರ್ಯಂ ಕೃತವಾನಧಿಜ್ಯಂ|
ಲಕ್ಷ್ಯಂ ಚ ತತ್ಪಾತಿತವಾನ್ಪೃಥಿವ್ಯಾಂ||
01185003a ಅಸಜ್ಜಮಾನಶ್ಚ ಗತಸ್ತರಸ್ವೀ|
ವೃತೋ ದ್ವಿಜಾಗ್ರ್ಯೈರಭಿಪೂಜ್ಯಮಾನಃ|
01185003c ಚಕ್ರಾಮ ವಜ್ರೀವ ದಿತೇಃ ಸುತೇಷು|
ಸರ್ವೈಶ್ಚ ದೇವೈರೃಷಿಭಿಶ್ಚ ಜುಷ್ಟಃ||
“ಕೆಂಪು ಮತ್ತು ಅಗಲ ಸುಂದರ ಕಣ್ಣುಗಳ, ಕೃಷ್ಣಾಜಿನದಲ್ಲಿದ್ದೂ ದೇವಸಮಾನರೂಪಿ, ಅಗ್ರ ಧನುಸ್ಸಿಗೆ ದಾರವನ್ನು ಕಟ್ಟಿ ಗುರಿಯನ್ನು ಕೆಳಕ್ಕುರುಳಿಸಿದ ಆ ಯುವಕನು ವಜ್ರಿಯು ಸರ್ವ ದೇವರ್ಷಿ ಋಷಿಗಳಿಂದ ಸುತ್ತುವರೆಯಲ್ಪಟ್ಟು ದಿತಿಯ ಮಕ್ಕಳನ್ನು ಗಮನಿಸದೇ ಹೇಗೆ ಹೋಗುತ್ತಾನೋ ಹಾಗೆ ಅಲ್ಲಿ ನೆರದಿದ್ದ ಯಾರನ್ನೂ ಗಮನಿಸದೇ ಬ್ರಾಹ್ಮಣ ಹಿರಿಯರಿಂದ ಸುತ್ತುವರೆಯಲ್ಪಟ್ಟು ಪ್ರಶಂಸನೆಗೊಳ್ಳುತ್ತಾ ಅವಸರದಲ್ಲಿ ಅಲ್ಲಿಂದ ಹೊರಟುಹೋದನು.
01185004a ಕೃಷ್ಣಾ ಚ ಗೃಹ್ಯಾಜಿನಮನ್ವಯಾತ್ತಂ|
ನಾಗಂ ಯಥಾ ನಾಗವಧೂಃ ಪ್ರಹೃಷ್ಟಾ|
01185004c ಅಮೃಷ್ಯಮಾಣೇಷು ನರಾಧಿಪೇಷು|
ಕ್ರುದ್ಧೇಷು ತಂ ತತ್ರ ಸಮಾಪತತ್ಸು||
ಅದನ್ನು ಸಹಿಸಲಾಗದ ನರಾಧಿಪರು ಕ್ರುದ್ಧರಾಗಿ ಅವನ ಮೇಲೆ ಬೀಳುತ್ತಿರಲು ಕೃಷ್ಣೆಯು ಕೆಳಗಿಳಿದಿದ್ದ ಅವನ ಜಿನದ ತುದಿಯನ್ನು ಹಿಡಿದು ನಾಗವಧುವು ನಾಗವನ್ನು ಹೇಗೋ ಹಾಗೆ ಸಂತೋಷದಿಂದ ಹಿಂಬಾಲಿಸಿದಳು.
01185005a ತತೋಽಪರಃ ಪಾರ್ಥಿವರಾಜಮಧ್ಯೇ|
ಪ್ರವೃದ್ಧಮಾರುಜ್ಯ ಮಹೀಪ್ರರೋಹಂ|
01185005c ಪ್ರಕಾಲಯನ್ನೇವ ಸ ಪಾರ್ಥಿವೌಘಾನ್|
ಕ್ರುದ್ಧೋಽಮ್ತಕಃ ಪ್ರಾಣಭೃತೋ ಯಥೈವ||
ಆಗ ಪಾರ್ಥಿವರಾಜಮಧ್ಯದಲ್ಲಿದ್ದ ಓರ್ವನು ದೊಡ್ಡದಾಗಿ ಬೆಳೆದಿದ್ದ ವೃಕ್ಷವೊಂದನ್ನು ಭೂಮಿಯಿಂದ ಕಿತ್ತು ಕೃದ್ಧ ಅಂತಕನು ಪ್ರಾಣಭೃತರ ಮೇಲೆ ಹೇಗೋ ಹಾಗೆ ಆ ಪಾರ್ಥಿವಗಣದ ಮೇಲೆ ಎರಗಿ ಪಲಾಯನಹೋಗುವಂತೆ ಮಾಡಿದನು.
01185006a ತೌ ಪಾರ್ಥಿವಾನಾಂ ಮಿಷತಾಂ ನರೇಂದ್ರ|
ಕೃಷ್ಣಾಮುಪಾದಾಯ ಗತೌ ನರಾಗ್ರ್ಯೌ|
01185006c ವಿಭ್ರಾಜಮಾನಾವಿವ ಚಂದ್ರಸೂರ್ಯೌ|
ಬಾಹ್ಯಾಂ ಪುರಾದ್ಭಾರ್ಗವಕರ್ಮಶಾಲಾಂ||
ನರೇಂದ್ರ! ಪಾರ್ಥಿವರು ನೋಡುತ್ತಿದ್ದಂತೆಯೇ ಚಂದ್ರಸೂರ್ಯರಂತೆ ಹೊಳೆಯುತ್ತಿದ್ದ ಆ ಇಬ್ಬರು ನರವ್ಯಾಘ್ರರು ಕೃಷ್ಣೆಯನ್ನು ಕರೆದುಕೊಂಡು ಪುರದ ಹೊರಗಿರುವ ಭಾರ್ಗವಕರ್ಮಶಾಲೆಗೆ ಹೊರಟುಹೋದರು.
01185007a ತತ್ರೋಪವಿಷ್ಟಾರ್ಚಿರಿವಾನಲಸ್ಯ|
ತೇಷಾಂ ಜನಿತ್ರೀತಿ ಮಮ ಪ್ರತರ್ಕಃ|
01185007c ತಥಾವಿಧೈರೇವ ನರಪ್ರವೀರೈರ್-
ಉಪೋಪವಿಷ್ಟೈಸ್ತ್ರಿಭಿರಗ್ನಿಕಲ್ಪೈಃ||
ಅಲ್ಲಿ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿದ್ದ, ನನ್ನ ಮತದಂತೆ ಅವರ ತಾಯಿಯು, ಕುಳಿತುಕೊಂಡಿದ್ದಳು. ಅವಳ ಸುತ್ತಲೂ ಕುಳಿತುಕೊಂಡ ಅಗ್ನಿಸಮಾನ ಮೂವರು ನರಪ್ರವೀರರು ಅಗ್ನಿಗಳಂತೆ ತೋರುತ್ತಿದ್ದರು.
01185008a ತಸ್ಯಾಸ್ತತಸ್ತಾವಭಿವಾದ್ಯ ಪಾದಾವ್-
ಉಕ್ತ್ವಾ ಚ ಕೃಷ್ಣಾಮಭಿವಾದಯೇತಿ|
01185008c ಸ್ಥಿತೌ ಚ ತತ್ರೈವ ನಿವೇದ್ಯ ಕೃಷ್ಣಾಂ|
ಭೈಕ್ಷಪ್ರಚಾರಾಯ ಗತಾ ನರಾಗ್ರ್ಯಾಃ||
ಅವರಿಬ್ಬರೂ ಅವಳ ಪಾದಕ್ಕೆ ಅಭಿವಂದಿಸಿದರು ಮತ್ತು ಅವಳನ್ನು ಅಭಿವಂದಿಸಲು ಕೃಷ್ಣೆಗೂ ಹೇಳಿದರು. ಅಲ್ಲಿಯೇ ನಿಂತು ಕೃಷ್ಣೆಯನ್ನು ಒಪ್ಪಿಸಿ ಆ ನರವ್ಯಾಘ್ರರು ಭಿಕ್ಷೆಗೆಂದು ಹೊರಟುಹೋದರು.
01185009a ತೇಷಾಂ ತು ಭೈಕ್ಷಂ ಪ್ರತಿಗೃಹ್ಯ ಕೃಷ್ಣಾ|
ಕೃತ್ವಾ ಬಲಿಂ ಬ್ರಾಹ್ಮಣಸಾಚ್ಚ ಕೃತ್ವಾ|
01185009c ತಾಂ ಚೈವ ವೃದ್ಧಾಂ ಪರಿವಿಷ್ಯ ತಾಂಶ್ಚ|
ನರಪ್ರವೀರಾನ್ಸ್ವಯಮಪ್ಯಭುಂಕ್ತ||
ಕೃಷ್ಣೆಯು ಅವರಿಂದ ಭಿಕ್ಷವನ್ನು ತೆಗೆದುಕೊಂಡು ಬಲಿಯನ್ನು ಮಾಡಿ ಬ್ರಾಹ್ಮಣರಿಗೆ ನೀಡಿದಳು. ನಂತರ ಅದನ್ನು ಆ ವೃದ್ಧೆಗೆ ಮತ್ತು ನರಪ್ರವೀರರಿಗೆ ನೀಡಿ, ತಾನೂ ಊಟಮಾಡಿದಳು.
01185010a ಸುಪ್ತಾಸ್ತು ತೇ ಪಾರ್ಥಿವ ಸರ್ವ ಏವ|
ಕೃಷ್ಣಾ ತು ತೇಷಾಂ ಚರಣೋಪಧಾನಂ|
01185010c ಆಸೀತ್ಪೃಥಿವ್ಯಾಂ ಶಯನಂ ಚ ತೇಷಾಂ|
ದರ್ಭಾಜಿನಾಗ್ರ್ಯಾಸ್ತರಣೋಪಪನ್ನಂ||
ಪಾರ್ಥಿವ! ಅವರೆಲ್ಲರೂ ಅವರ ದರ್ಭೆ ಮತ್ತು ಜಿನಗಳನ್ನು ನೆಲದ ಮೇಲೆ ಹಾಸಿ ಅಲ್ಲಿಯೇ ಮಲಗಿಕೊಂಡರು. ಕೃಷ್ಣೆಯು ಅವರ ಚರಣಗಳ ಕಡೆಯಲ್ಲಿ ಕಾಲುದಿಂಬಾಗಿ ಮಲಗಿಕೊಂಡಳು.
01185011a ತೇ ನರ್ದಮಾನಾ ಇವ ಕಾಲಮೇಘಾಃ|
ಕಥಾ ವಿಚಿತ್ರಾಃ ಕಥಯಾಂ ಬಭೂವುಃ|
01185011c ನ ವೈಶ್ಯಶೂದ್ರೌಪಯಿಕೀಃ ಕಥಾಸ್ತಾ|
ನ ಚ ದ್ವಿಜಾತೇಃ ಕಥಯಂತಿ ವೀರಾಃ||
ನಂತರ ಅವರು ಕಾಲಮೇಘವು ಗರ್ಜಿಸುವಂತೆ ವಿಚಿತ್ರ ಮಾತುಕಥೆಗಳನ್ನಾಡಿದರು. ಆ ಮಾತುಗಳು ವೈಶ್ಯರು ಆಡುವ ಮಾತುಗಳಂತಿರಲಿಲ್ಲ. ಆ ವೀರರು ಬ್ರಾಹ್ಮಣರಂತೆಯೂ ಮಾತನಾಡಿಕೊಳ್ಳುತ್ತಿರಲಿಲ್ಲ.
01185012a ನಿಃಸಂಶಯಂ ಕ್ಷತ್ರಿಯಪುಂಗವಾಸ್ತೇ|
ಯಥಾ ಹಿ ಯುದ್ಧಂ ಕಥಯಂತಿ ರಾಜನ್|
01185012c ಆಶಾ ಹಿ ನೋ ವ್ಯಕ್ತಮಿಯಂ ಸಮೃದ್ಧಾ|
ಮುಕ್ತಾನ್ ಹಿ ಪಾರ್ಥಾಂಶೃಣುಮೋಽಗ್ನಿದಾಹಾತ್||
ಅವರು ನಿಸ್ಸಂಶಯವಾಗಿಯೂ ಕ್ಷತ್ರಿಯ ಪುಂಗವರೇ. ಯಾಕೆಂದರೆ ರಾಜನ್! ಅವರು ಯುದ್ಧದ ಕುರಿತು ಮಾತನಾಡುತ್ತಿದ್ದರು. ನಮ್ಮ ಆಸೆಯು ನಿಶ್ಚಯವಾಗಿಯೂ ಪೂರೈಸಿದೆ ಎನ್ನುವುದು ವ್ಯಕ್ತವಾಗಿದೆ. ಪಾರ್ಥರು ಆ ಬೆಂಕಿಯಿಂದ ತಪ್ಪಿಸಿಕೊಂಡಿದ್ದರೆಂದು ಕೇಳುತ್ತೇವೆ.
01185013a ಯಥಾ ಹಿ ಲಕ್ಷ್ಯಂ ನಿಹತಂ ಧನುಶ್ಚ|
ಸಜ್ಯಂ ಕೃತಂ ತೇನ ತಥಾ ಪ್ರಸಹ್ಯ|
01185013c ಯಥಾ ಚ ಭಾಷಂತಿ ಪರಸ್ಪರಂ ತೇ|
ಚನ್ನಾ ಧ್ರುವಂ ತೇ ಪ್ರಚರಂತಿ ಪಾರ್ಥಾಃ||
ಧನುಸ್ಸನ್ನು ಬಿಗಿದು ಹೇಗೆ ಲಕ್ಷ್ಯವನ್ನು ಹೊಡೆಯಲಾಯಿತೋ, ಯೋದ್ಧನ ಶಕ್ತಿಯಿಂದ ಹೇಗೆ ಆ ಯಂತ್ರವನ್ನು ಕೆಳಗುರಿಳಿಸಲಾಯಿತೋ, ಮತ್ತು ಪರಸ್ಪರರಲ್ಲಿ ಅವರು ಹೇಗೆ ಮಾತನಾಡಿಕೊಳ್ಳುತ್ತಿದ್ದರೋ ಇವೆಲ್ಲವುಗಳೂ ಅವರು ನಿಜವಾಗಿಯೂ ಅಡಗಿರುವ ಪಾರ್ಥರೆಂದು ಸೂಚಿಸುತ್ತವೆ.”
01185014a ತತಃ ಸ ರಾಜಾ ದ್ರುಪದಃ ಪ್ರಹೃಷ್ಟಃ|
ಪುರೋಹಿತಂ ಪ್ರೇಷಯಾಂ ತತ್ರ ಚಕ್ರೇ|
01185014c ವಿದ್ಯಾಮ ಯುಷ್ಮಾನಿತಿ ಭಾಷಮಾಣೋ|
ಮಹಾತ್ಮನಃ ಪಾಂಡುಸುತಾಃ ಸ್ಥ ಕಚ್ಚಿತ್||
ಆಗ ರಾಜ ದ್ರುಪದನು ಪ್ರಹೃಷ್ಟನಾಗಿ ತಕ್ಷಣವೇ ತನ್ನ ಪುರೋಹಿತನನ್ನು ಅಲ್ಲಿಗೆ ಕಳುಹಿಸಿದನು: “ನೀವು ಯಾರೆಂದು ನಾವು ತಿಳಿದಿದ್ದೇವೆ. ಎಲ್ಲಿಯಾದರೂ ನೀವು ಮಹಾತ್ಮ ಪಾಂಡುವಿನ ಮಕ್ಕಳಿರಬಹುದೇ? ಎಂದು ಹೋಗಿ ಕೇಳು.”
01185015a ಗೃಹೀತವಾಕ್ಯೋ ನೃಪತೇಃ ಪುರೋಧಾ|
ಗತ್ವಾ ಪ್ರಶಂಸಾಮಭಿಧಾಯ ತೇಷಾಂ|
01185015c ವಾಕ್ಯಂ ಯಥಾವನ್ನೃಪತೇಃ ಸಮಗ್ರಂ|
ಉವಾಚ ತಾನ್ಸ ಕ್ರಮವಿತ್ಕ್ರಮೇಣ||
ಪುರೋಹಿತನು ನೃಪತಿಯ ವಾಕ್ಯಗಳನ್ನು ತೆಗೆದುಕೊಂಡು ಹೋಗಿ ಅವರನ್ನು ಪ್ರಶಂಸಿಸಿದನು. ನೃಪತಿಯು ಹೇಗೆ ಹೇಳಿ ಕಳುಹಿಸಿದ್ದನೋ ಸಮಗ್ರ ಎಲ್ಲವನ್ನೂ ಕ್ರಮವತ್ತಾಗಿ ಹೇಳಿದನು.
01185016a ವಿಜ್ಞಾತುಮಿಚ್ಛತ್ಯವನೀಶ್ವರೋ ವಃ|
ಪಾಂಚಾಲರಾಜೋ ದ್ರುಪದೋ ವರಾರ್ಹಾಃ|
01185016c ಲಕ್ಷ್ಯಸ್ಯ ವೇದ್ಧಾರಮಿಮಂ ಹಿ ದೃಷ್ಟ್ವಾ|
ಹರ್ಷಸ್ಯ ನಾಂತಂ ಪರಿಪಶ್ಯತೇ ಸಃ||
“ಅವನೀಶ್ವರ ಪಾಂಚಾಲರಾಜ ದ್ರುಪದನು ವರಾರ್ಹ ನಿಮ್ಮನ್ನು ತಿಳಿಯಲು ಬಯಸುತ್ತಾನೆ. ಲಕ್ಷ್ಯವನ್ನು ಹೊಡೆದು ಕೆಳಗುರಿಳಿಸಿದವನನ್ನು ನೋಡಿದ ಅವನ ಹರ್ಷಕ್ಕೆ ಅಂತ್ಯವೇ ಕಾಣುತ್ತಿಲ್ಲ.
01185017a ತದಾಚಡ್ಢ್ವಂ ಜ್ಞಾತಿಕುಲಾನುಪೂರ್ವೀಂ|
ಪದಂ ಶಿರಃಸು ದ್ವಿಷತಾಂ ಕುರುಧ್ವಂ|
01185017c ಪ್ರಹ್ಲಾದಯಧ್ವಂ ಹೃದಯಂ ಮಮೇದಂ|
ಪಾಂಚಾಲರಾಜಸ್ಯ ಸಹಾನುಗಸ್ಯ||
ನಿಮ್ಮ ಹಿನ್ನೆಲೆ ಜ್ಞಾತಿಕುಲವನ್ನು ಹೇಳಿಕೊಂಡು ನಿಮ್ಮ ದ್ವೇಷಿಗಳ ತಲೆಯಮೇಲೆ ಕಾಲನ್ನಿಡಿ ಮತ್ತು ಸಹಾನುಗ ಪಾಂಚಾಲರಾಜನ ಈ ಹೃದಯವನ್ನು ಸಂತೋಷದಿಂದ ತುಂಬಿಸಿರಿ.
01185018a ಪಾಂಡುರ್ಹಿ ರಾಜಾ ದ್ರುಪದಸ್ಯ ರಾಜ್ಞಃ|
ಪ್ರಿಯಃ ಸಖಾ ಚಾತ್ಮಸಮೋ ಬಭೂವ|
01185018c ತಸ್ಯೈಷ ಕಾಮೋ ದುಹಿತಾ ಮಮೇಯಂ|
ಸ್ನುಷಾ ಯದಿ ಸ್ಯಾದಿತಿ ಕೌರವಸ್ಯ||
ರಾಜ ಪಾಂಡುವು ರಾಜ ದ್ರುಪದನಿಗೆ ಪ್ರಿಯಸಖನಾಗಿದ್ದು ಅತ್ಮಸಮನಾಗಿದ್ದನು. “ನನ್ನ ಈ ಮಗಳು ಆ ಕೌರವನ ಸೊಸೆಯಾಗಬೇಕೆಂಬುದೇ ನನ್ನ ಆಸೆಯಾಗಿತ್ತು.
01185019a ಅಯಂ ಚ ಕಾಮೋ ದ್ರುಪದಸ್ಯ ರಾಜ್ಞೋ|
ಹೃದಿ ಸ್ಥಿತೋ ನಿತ್ಯಮನಿಂದಿತಾಂಗಾಃ|
01185019c ಯದರ್ಜುನೋ ವೈ ಪೃಥುದೀರ್ಘಬಾಹುರ್-
ಧರ್ಮೇಣ ವಿಂದೇತ ಸುತಾಂ ಮಮೇತಿ||
ಅನಿಂದಿತಾಂಗರೇ! ಪೃಥುದೀರ್ಘಬಾಹು ಅರ್ಜುನನೇ ನನ್ನ ಸುತೆಯನ್ನು ಧರ್ಮಪೂರ್ವಕ ವಿವಾಹವಾಗಲಿ” ಎಂಬ ಈ ಆಸೆಯು ರಾಜ ದ್ರುಪದನ ಹೃದಯದಲ್ಲಿ ಯಾವಾಗಲೂ ನೆಲೆಸಿತ್ತು.”
01185020a ತಥೋಕ್ತವಾಕ್ಯಂ ತು ಪುರೋಹಿತಂ ತಂ|
ಸ್ಥಿತಂ ವಿನೀತಂ ಸಮುದೀಕ್ಷ್ಯ ರಾಜಾ|
01185020c ಸಮೀಪಸ್ಥಂ ಭೀಮಮಿದಂ ಶಶಾಸ|
ಪ್ರದೀಯತಾಂ ಪಾದ್ಯಮರ್ಘ್ಯಂ ತಥಾಸ್ಮೈ||
ಈ ರೀತಿ ತನ್ನ ಮಾತುಗಳನ್ನು ಹೇಳಿ ವಿನೀತನಾಗಿ ನಿಂತಿದ್ದ ಪುರೋಹಿತನನ್ನು ನೋಡಿದ ರಾಜನು “ಇವನಿಗೆ ಪಾದ್ಯ ಮತ್ತು ಅರ್ಘ್ಯಗಳನ್ನು ನೀಡು!” ಎಂದು ಹತ್ತಿರದಲ್ಲಿದ್ದ ಭೀಮನಿಗೆ ಆಜ್ಞೆಯನ್ನಿತ್ತನು.
01185021a ಮಾನ್ಯಃ ಪುರೋಧಾ ದ್ರುಪದಸ್ಯ ರಾಜ್ಞಸ್-
ತಸ್ಮೈ ಪ್ರಯೋಜ್ಯಾಭ್ಯಧಿಕೈವ ಪೂಜಾ|
01185021c ಭೀಮಸ್ತಥಾ ತತ್ಕೃತವಾನ್ನರೇಂದ್ರ|
ತಾಂ ಚೈವ ಪೂಜಾಂ ಪ್ರತಿಸಂಗೃಹೀತ್ವಾ||
“ರಾಜ ದ್ರುಪದನ ಪುರೋಹಿತನು ಮಾನ್ಯನು. ಅವನಿಗೆ ಅಧಿಕ ಪೂಜೆಯನ್ನೇ ನೀಡೋಣ!” ನರೇಂದ್ರ! ಭೀಮನು ಹಾಗೆಯೇ ಮಾಡಲು ಅವನೂ ಕೂಡ ಆ ಪೂಜೆಯನ್ನು ಪ್ರತಿಸಂಗ್ರಹಿಸಿದನು.
01185022a ಸುಖೋಪವಿಷ್ಟಂ ತು ಪುರೋಹಿತಂ ತಂ|
ಯುಧಿಷ್ಠಿರೋ ಬ್ರಾಹ್ಮಣಮಿತ್ಯುವಾಚ|
01185022c ಪಾಂಚಾಲರಾಜೇನ ಸುತಾ ನಿಸೃಷ್ಟಾ|
ಸ್ವಧರ್ಮದೃಷ್ಟೇನ ಯಥಾನುಕಾಮಂ||
ಪುರೋಹಿತನು ಸುಖೋಪವಿಷ್ಟನಾಗಲು, ಯುಧಿಷ್ಠಿರನು ಬ್ರಾಹ್ಮಣನಿಗೆ ಹೇಳಿದನು: “ಪಾಂಚಾಲರಾಜನು ತನ್ನ ಮಗಳನ್ನು ತನ್ನ ಧರ್ಮದಂತೆ, ಇಷ್ಟವಿದ್ದು ಸಂತೋಷದಿಂದ ಕೊಟ್ಟಿದ್ದಾನೆ.
01185023a ಪ್ರದಿಷ್ಟಶುಲ್ಕಾ ದ್ರುಪದೇನ ರಾಜ್ಞಾ|
ಸಾನೇನ ವೀರೇಣ ತಥಾನುವೃತ್ತಾ|
01185023c ನ ತತ್ರ ವರ್ಣೇಷು ಕೃತಾ ವಿವಕ್ಷಾ|
ನ ಜೀವಶಿಲ್ಪೇ ನ ಕುಲೇ ನ ಗೋತ್ರೇ||
ರಾಜ ದ್ರುಪದನು ಅವಳಿಗೆ ಒಂದು ಶುಲ್ಕವನ್ನು ಇಟ್ಟಿದ್ದನು ಮತ್ತು ಅದರ ಪ್ರಕಾರವೇ ಈ ವೀರನು ಅವಳನ್ನು ಗೆದ್ದಿದ್ದಾನೆ. ಅವನ ಜಾತಿ, ಜೀವನಶಿಲ್ಪ, ಕುಲ ಅಥವಾ ಗೋತ್ರದ ಕುರಿತು ಯಾವುದೇ ರೀತಿಯ ಮನಸ್ಥಾಪವೂ ಉಂಟಾಗಬಾರದು.
01185024a ಕೃತೇನ ಸಜ್ಯೇನ ಹಿ ಕಾರ್ಮುಕೇಣ|
ವಿದ್ಧೇನ ಲಕ್ಷ್ಯೇಣ ಚ ಸನ್ನಿಸೃಷ್ಟಾ|
01185024c ಸೇಯಂ ತಥಾನೇನ ಮಹಾತ್ಮನೇಹ|
ಕೃಷ್ಣಾ ಜಿತಾ ಪಾರ್ಥಿವಸಂಘಮಧ್ಯೇ||
ಕಾರ್ಮುಕವನ್ನು ಬಿಗಿದು ಲಕ್ಷ್ಯವನ್ನು ಗುರಿಯಿಟ್ಟು ಹೊಡೆದು ಈ ಮಹಾತ್ಮನು ಪಾರ್ಥಿವಸಂಘಮಧ್ಯದಲ್ಲಿ ಕೃಷ್ಣೆಯನ್ನು ಗೆದ್ದಿದ್ದಾನೆ.
01185025a ನೈವಂಗತೇ ಸೌಮಕಿರದ್ಯ ರಾಜಾ|
ಸಂತಾಪಮರ್ಹತ್ಯಸುಖಾಯ ಕರ್ತುಂ|
01185025c ಕಾಮಶ್ಚ ಯೋಽಸೌ ದ್ರುಪದಸ್ಯ ರಾಜ್ಞಃ|
ಸ ಚಾಪಿ ಸಂಪತ್ಸ್ಯತಿ ಪಾರ್ಥಿವಸ್ಯ||
ಹೀಗಿರುವಾಗ ರಾಜ ಸೋಮಕನು ಇಂದು ಸಂತಾಪವನ್ನೂ ಅಥವಾ ಅಸುಖವನ್ನೂ ಪಡೆಯುವುದು ಸರಿಯಲ್ಲ. ಆದರೂ ರಾಜ ದ್ರುಪದನ ಬಯಕೆಯು ಪಾರ್ಥಿವನಿಗೆ ನಿಜವಾಗಿದೆ.
01185026a ಅಪ್ರಾಪ್ಯರೂಪಾಂ ಹಿ ನರೇಂದ್ರಕನ್ಯಾಂ|
ಇಮಾಮಹಂ ಬ್ರಾಹ್ಮಣ ಸಾಧು ಮನ್ಯೇ|
01185026c ನ ತದ್ಧನುರ್ಮಂದಬಲೇನ ಶಕ್ಯಂ|
ಮೌರ್ವ್ಯಾ ಸಮಾಯೋಜಯಿತುಂ ತಥಾ ಹಿ|
01185026e ನ ಚಾಕೃತಾಸ್ತ್ರೇಣ ನ ಹೀನಜೇನ|
ಲಕ್ಷ್ಯಂ ತಥಾ ಪಾತಯಿತುಂ ಹಿ ಶಕ್ಯಂ||
ಬ್ರಾಹ್ಮಣ! ನನ್ನ ಅಭಿಪ್ರಾಯದಂತೆ ರೂಪವತಿ ಈ ನರೇಂದ್ರಕನ್ಯೆಯು ಅಪ್ರಾಪ್ಯಳು. ಯಾಕೆಂದರೆ ಯಾವ ಮಂದಬಲಶಾಲಿಯೂ ಆ ಧನುವನ್ನು ಆ ರೀತಿಯಲ್ಲಿ ಬಿಗಿದು ಕಟ್ಟಲು ಶಕ್ಯವಿರಲಿಲ್ಲ. ಅಥವಾ ಅಸ್ತ್ರಗಳನ್ನು ಅರಿಯದೇ ಇದ್ದವನಿಂದ ಅಥವಾ ಹೀನಜನಿಂದ ಆ ರೀತಿ ಲಕ್ಷ್ಯವನ್ನು ಬೀಳಿಸುವುದು ಶಕ್ಯವಿರಲಿಲ್ಲ.
01185027a ತಸ್ಮಾನ್ನ ತಾಪಂ ದುಹಿತುರ್ನಿಮಿತ್ತಂ|
ಪಾಂಚಾಲರಾಜೋಽರ್ಹತಿ ಕರ್ತುಮದ್ಯ|
01185027c ನ ಚಾಪಿ ತತ್ಪಾತನಮನ್ಯಥೇಹ|
ಕರ್ತುಂ ವಿಷಹ್ಯಂ ಭುವಿ ಮಾನವೇನ||
ಆದುದರಿಂದ ಇಂದು ಪಾಂಚಾಲರಾಜನಿಗೆ ತನ್ನ ಮಗಳ ಕಾರಣದಿಂದ ಯಾವುದೇ ರೀತಿಯ ದುಃಖವೂ ಆಗಬಾರದು. ಮತ್ತು ಇವನು ಆ ಚಿಹ್ನೆಯನ್ನು ಹೊಡೆದು ಕೆಳಗುರುಳಿಸಿದ ಎನ್ನುವುದನ್ನು ಭುವಿಯಲ್ಲಿರುವ ಯಾವ ಮಾನವನೂ ಬದಲಾಯಿಸಲಾರ.”
01185028a ಏವಂ ಬ್ರುವತ್ಯೇವ ಯುಧಿಷ್ಠಿರೇ ತು|
ಪಾಂಚಾಲರಾಜಸ್ಯ ಸಮೀಪತೋಽನ್ಯಃ|
01185028c ತತ್ರಾಜಗಾಮಾಶು ನರೋ ದ್ವಿತೀಯೋ|
ನಿವೇದಯಿಷ್ಯನ್ನಿಹ ಸಿದ್ಧಮನ್ನಂ||
ಯುಧಿಷ್ಠಿರನು ಹೀಗೆ ಹೇಳಲು ಪಾಂಚಾಲರಾಜನ ಕಡೆಯಿಂದ ಎರಡನೆಯ ಇನ್ನೊಬ್ಬನು ಆತುರದಿಂದ ಬಂದು “ಭೋಜನವು ಸಿದ್ಧವಾಗಿದೆ!” ಎಂದು ನಿವೇದಿಸಿದನು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಪುರೋಹಿತಯುಧಿಷ್ಠಿರಸಂವಾದೇ ಪಂಚಶೀತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಪುರೋಹಿತಯುಧಿಷ್ಠಿರಸಂವಾದದಲ್ಲಿ ನೂರಾಎಂಭತ್ತೈದನೆಯ ಅಧ್ಯಾಯವು.