ಆದಿ ಪರ್ವ: ಚೈತ್ರರಥ ಪರ್ವ
೧೭೩
ಕಲ್ಮಾಷಪಾದನು ವಸಿಷ್ಠನಿಂದ ಪುತ್ರನನ್ನು ಪಡೆದುದಕ್ಕೆ ಅರ್ಜುನನು ಕಾರಣವನ್ನು ಕೇಳಲು, ಚಿತ್ರರಥನು ಕಲ್ಮಾಷಪಾದನಿಗೆ ಬ್ರಾಹ್ಮಣ ಪತ್ನಿಯೋರ್ವಳಿಂದ ದೊರಕಿದ ಶಾಪದ ಕುರಿತು ಹೇಳಿದುದು (೧-೨೪).
01173001 ಅರ್ಜುನ ಉವಾಚ|
01173001a ರಾಜ್ಞಾ ಕಲ್ಮಾಷಪಾದೇನ ಗುರೌ ಬ್ರಹ್ಮವಿದಾಂ ವರೇ|
01173001c ಕಾರಣಂ ಕಿಂ ಪುರಸ್ಕೃತ್ಯ ಭಾರ್ಯಾ ವೈ ಸಂನಿಯೋಜಿತಾ||
01173002a ಜಾನತಾ ಚ ಪರಂ ಧರ್ಮಂ ಲೋಕ್ಯಂ ತೇನ ಮಹಾತ್ಮನಾ|
01173002c ಅಗಮ್ಯಾಗಮನಂ ಕಸ್ಮಾದ್ವಸಿಷ್ಠೇನ ಮಹಾತ್ಮನಾ|
01173002e ಕೃತಂ ತೇನ ಪುರಾ ಸರ್ವಂ ವಕ್ತುಮರ್ಹಸಿ ಪೃಚ್ಛತಃ||
ಅರ್ಜುನನು ಹೇಳಿದನು: “ಯಾವ ಕಾರಣಕ್ಕಾಗಿ ರಾಜ ಕಲ್ಮಾಷಪಾದನು ತನ್ನ ಭಾರ್ಯೆಯನ್ನು ಒಪ್ಪಿಸಿ ಬ್ರಹ್ಮವಿದರಲ್ಲಿಯೇ ಶ್ರೇಷ್ಠ ತನ್ನ ಗುರುವು ಕೂಡುವ ಹಾಗೆ ಮಾಡಿದನು? ಲೋಕದ ಪರಮ ಧರ್ಮವನ್ನು ಅರಿತಿದ್ದ ಮಹಾತ್ಮ ವಸಿಷ್ಠನು ಯಾವ ಕಾರಣಕ್ಕಾಗಿ ಅವಳನ್ನು ಸೇರಿದನು? ಹಿಂದೆ ನಡೆದ ಸರ್ವವನ್ನೂ ಹೇಳು.”
01173003 ಗಂಧರ್ವ ಉವಾಚ|
01173003a ಧನಂಜಯ ನಿಬೋಧೇದಂ ಯನ್ಮಾಂ ತ್ವಂ ಪರಿಪೃಚ್ಛಸಿ|
01173003c ವಸಿಷ್ಠಂ ಪ್ರತಿ ದುರ್ಧರ್ಷಂ ತಥಾಮಿತ್ರಸಹಂ ನೃಪಂ||
ಗಂಧರ್ವನು ಹೇಳಿದನು: “ಧನಂಜಯ! ದುರ್ಧರ್ಷ ವಸಿಷ್ಠ ಮತ್ತು ಅಮಿತ್ರಸಹ ನೃಪನ ಕುರಿತು ನೀನು ಕೇಳಿದುದನ್ನು ನನ್ನಿಂದ ತಿಳಿದುಕೋ.
01173004a ಕಥಿತಂ ತೇ ಮಯಾ ಪೂರ್ವಂ ಯಥಾ ಶಪ್ತಃ ಸ ಪಾರ್ಥಿವಃ|
01173004c ಶಕ್ತಿನಾ ಭರತಶ್ರೇಷ್ಠ ವಾಸಿಷ್ಠೇನ ಮಹಾತ್ಮನಾ||
ಭಾರತಶ್ರೇಷ್ಠ! ಮಹಾತ್ಮ ವಾಸಿಷ್ಠ ಶಕ್ತಿಯಿಂದ ಆ ಪಾರ್ಥಿವನು ಶಪಿತನಾದ ಕುರಿತು ನಾನು ನಿನಗೆ ಈಗಾಗಲೇ ಹೇಳಿದ್ದೇನೆ.
01173005a ಸ ತು ಶಾಪವಶಂ ಪ್ರಾಪ್ತಃ ಕ್ರೋಧಪರ್ಯಾಕುಲೇಕ್ಷಣಃ|
01173005c ನಿರ್ಜಗಾಮ ಪುರಾದ್ರಾಜಾ ಸಹದಾರಃ ಪರಂತಪಃ||
ಶಾಪವಶ ಆ ಪರಂತಪ ರಾಜನು ಕ್ರೋಧದಿಂದ ತನ್ನ ಕಣ್ಣುಗಳನ್ನು ತಿರುಗಿಸುತ್ತಾ ಪತ್ನಿಯೊಡಗೂಡಿ ಪುರವನ್ನು ತೊರೆದು ಹೊರಟನು.
01173006a ಅರಣ್ಯಂ ನಿರ್ಜನಂ ಗತ್ವಾ ಸದಾರಃ ಪರಿಚಕ್ರಮೇ|
01173006c ನಾನಾಮೃಗಗಣಾಕೀರ್ಣಂ ನಾನಾಸತ್ತ್ವಸಮಾಕುಲಂ||
ಅವಳೊಂದಿಗೆ ಅವನು ನಿರ್ಜನ ಅರಣ್ಯವನ್ನು ಸೇರಿ ನಾನಾಮೃಗಗಣ ಸಂಕೀರ್ಣಗಳನ್ನೂ ನಾನಾ ಸತ್ವಸಮಾಕುಲವನ್ನು ಅರಸುತ್ತಾ ತಿರುಗುತ್ತಿದ್ದನು.
01173007a ನಾನಾಗುಲ್ಮಲತಾಚ್ಛನ್ನಂ ನಾನಾದ್ರುಮಸಮಾವೃತಂ|
01173007c ಅರಣ್ಯಂ ಘೋರಸಂನಾದಂ ಶಾಪಗ್ರಸ್ತಃ ಪರಿಭ್ರಮನ್||
01173008a ಸ ಕದಾ ಚಿತ್ ಕ್ಷುಧಾವಿಷ್ಟೋ ಮೃಗಯನ್ಭಕ್ಷಮಾತ್ಮನಃ|
01173008c ದದರ್ಶ ಸುಪರಿಕ್ಲಿಷ್ಟಃ ಕಸ್ಮಿಂಶ್ಚಿದ್ವನನಿರ್ಝರೇ|
01173008e ಬ್ರಾಹ್ಮಣೀಂ ಬ್ರಾಹ್ಮಣಂ ಚೈವ ಮೈಥುನಾಯೋಪಸಂಗತೌ||
ನಾನಾ ತರಹದ ಹೂ ಬಳ್ಳಿಗಳಿಂದ ಮುಚ್ಚಲ್ಪಟ್ಟ, ನಾನಾ ತರಹದ ಮರಗಳಿಂದ ಕೂಡಿದ, ಘೋರ ಕೂಗುಗಳು ಕೇಳಿಬರುತ್ತಿರುವ ಅರಣ್ಯದಲ್ಲಿ ಶಾಪಗ್ರಸ್ತನು ಪರಿಭ್ರಮಿಸುತ್ತಿದ್ದನು. ಒಮ್ಮೆ ಹಸಿವೆಯಿಂದ ಬಳಲಿ ತನಗೆ ಆಹಾರಕ್ಕಾಗಿ ಬೇಟೆಯಾಡುತ್ತಿರುವಾಗ ಒಂದು ದಟ್ಟ ವನದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣಿಯರು ಸಂಭೋಗದಲ್ಲಿ ನಿರತರಾಗಿದ್ದುದನ್ನು ಕಂಡನು.
01173009a ತೌ ಸಮೀಕ್ಷ್ಯ ತು ವಿತ್ರಸ್ತಾವಕೃತಾರ್ಥೌ ಪ್ರಧಾವಿತೌ|
01173009c ತಯೋಶ್ಚ ದ್ರವತೋರ್ವಿಪ್ರಂ ಜಗೃಹೇ ನೃಪತಿರ್ಬಲಾತ್||
ಇನ್ನೂ ತೃಪ್ತಿಹೊಂದದೇ ಇದ್ದ ಅವರು ಅವನನ್ನು ನೋಡಿ ಭಯಭೀತರಾಗಿ ಓಡಲು ತೊಡಗಿದರು. ಆಗ ಆ ನೃಪತಿಯು ಬ್ರಾಹ್ಮಣನನ್ನು ಬಲವಂತವಾಗಿ ಹಿಡಿದನು.
01173010a ದೃಷ್ಟ್ವಾ ಗೃಹೀತಂ ಭರ್ತಾರಮಥ ಬ್ರಾಹ್ಮಣ್ಯಭಾಷತ|
01173010c ಶೃಣು ರಾಜನ್ವಚೋ ಮಹ್ಯಂ ಯತ್ತ್ವಾಂ ವಕ್ಷ್ಯಾಮಿ ಸುವ್ರತ||
ತನ್ನ ಪತಿಯು ಸಿಕ್ಕಿಕೊಂಡಿದ್ದನ್ನು ನೋಡಿದ ಬ್ರಾಹ್ಮಣಿಯು ಹೇಳಿದಳು: “ಸುವ್ರತ ರಾಜನ್! ನಾನು ಈಗ ಹೇಳುವ ಮಾತುಗಳನ್ನು ಕೇಳು.
01173011a ಆದಿತ್ಯವಂಶಪ್ರಭವಸ್ತ್ವಂ ಹಿ ಲೋಕಪರಿಶ್ರುತಃ|
01173011c ಅಪ್ರಮತ್ತಃ ಸ್ಥಿತೋ ಧರ್ಮೇ ಗುರುಶುಶ್ರೂಷಣೇ ರತಃ||
ಆದಿತ್ಯವಂಶಜನಾದ ನೀನು ಲೋಕಪರಿಶೃತನಾಗಿದ್ದೀಯೆ. ನೀನು ಅಪ್ರಮತ್ತನಾಗಿದ್ದು, ಧರ್ಮನಿರತನಾಗಿದ್ದು ಗುರುಶುಶ್ರೂಷಣೆಯಲ್ಲೇ ನಿರತನಾಗಿದ್ದೀ.
01173012a ಶಾಪಂ ಪ್ರಾಪ್ತೋಽಸಿ ದುರ್ಧರ್ಷ ನ ಪಾಪಂ ಕರ್ತುಮರ್ಹಸಿ|
01173012c ಋತುಕಾಲೇ ತು ಸಂಪ್ರಾಪ್ತೇ ಭರ್ತ್ರಾಸ್ಮ್ಯದ್ಯ ಸಮಾಗತಾ||
ದುರ್ಧರ್ಶ ಶಾಪವನ್ನು ಹೊಂದಿದ್ದೀಯೆ. ಪಾಪಕರ್ಮವನ್ನು ಮಾಡಬೇಡ. ನನ್ನ ಋತುಕಾಲವು ಬಂದೊದಗಿದ್ದುದರಿಂದ ಇಂದು ನನ್ನ ಪತಿಯನ್ನು ಸೇರುತ್ತಿದ್ದೆ.
01173013a ಅಕೃತಾರ್ಥಾ ಹ್ಯಹಂ ಭರ್ತ್ರಾ ಪ್ರಸವಾರ್ಥಶ್ಚ ಮೇ ಮಹಾನ್|
01173013c ಪ್ರಸೀದ ನೃಪತಿಶ್ರೇಷ್ಠ ಭರ್ತಾ ಮೇಽಯಂ ವಿಸೃಜ್ಯತಾಂ||
ನಾವು ಇನ್ನೂ ಅಕೃತಾರ್ಥರಾಗಿದ್ದೇವೆ. ನನಗೆ ಮಗುವಿನ ಮಹಾ ಅವಶ್ಯಕತೆಯಿದೆ. ನೃಪತಿಶ್ರೇಷ್ಠ! ಕರುಣೆತೋರು. ನನ್ನ ಪತಿಯನ್ನು ಬಿಟ್ಟುಬಿಡು.”
01173014a ಏವಂ ವಿಕ್ರೋಶಮಾನಾಯಾಸ್ತಸ್ಯಾಃ ಸ ಸುನೃಶಂಸಕೃತ್|
01173014c ಭರ್ತಾರಂ ಭಕ್ಷಯಾಮಾಸ ವ್ಯಾಘ್ರೋ ಮೃಗಮಿವೇಪ್ಸಿತಂ||
ಈ ರೀತಿ ಅವಳು ರೋದಿಸುತ್ತಿರಲು ಅವಳು ನೋಡುತ್ತಿದ್ದಂತೆಯೇ ರಾಜನು ವ್ಯಾಘ್ರವು ತನಗಿಷ್ಟ ಪ್ರಾಣಿಯನ್ನು ತಿನ್ನುವಂತೆ ಅವಳ ಗಂಡನನ್ನು ಭಕ್ಷಿಸಿದನು.
01173015a ತಸ್ಯಾಃ ಕ್ರೋಧಾಭಿಭೂತಾಯಾ ಯದಶ್ರು ನ್ಯಪತದ್ಭುವಿ|
01173015c ಸೋಽಗ್ನಿಃ ಸಮಭವದ್ದೀಪ್ತಸ್ತಂ ಚ ದೇಶಂ ವ್ಯದೀಪಯತ್||
ಕ್ರೋಧಾಭಿಭೂತಳಾದ ಅವಳಿಂದ ನೆಲದ ಮೇಲೆ ಬಿದ್ದ ಕಣ್ಣೀರು ಬೆಂಕಿಯಾಗಿ ಉರಿದು ಆ ಪ್ರದೇಶವನ್ನು ಸುಡತೊಡಗಿತು.
01173016a ತತಃ ಸಾ ಶೋಕಸಂತಪ್ತಾ ಭರ್ತೃವ್ಯಸನದುಃಖಿತಾ|
01173016c ಕಲ್ಮಾಷಪಾದಂ ರಾಜರ್ಷಿಮಶಪದ್ಬ್ರಾಹ್ಮಣೀ ರುಷಾ||
ತನ್ನ ಪತಿಯನ್ನು ಕಳೆದುಕೊಂಡು ದುಃಖಿತಳಾದ ಶೋಕಸಂತಪ್ತ ಬ್ರಾಹ್ಮಣಿಯು ರೋಷದಿಂದ ರಾಜರ್ಷಿ ಕಲ್ಮಾಷಪಾದನಿಗೆ ಶಾಪವನ್ನಿತ್ತಳು.
01173017a ಯಸ್ಮಾನ್ಮಮಾಕೃತಾರ್ಥಾಯಾಸ್ತ್ವಯಾ ಕ್ಷುದ್ರ ನೃಶಂಸವತ್|
01173017c ಪ್ರೇಕ್ಷಂತ್ಯಾ ಭಕ್ಷಿತೋ ಮೇಽದ್ಯ ಪ್ರಭುರ್ಭರ್ತಾ ಮಹಾಯಶಾಃ||
01173018a ತಸ್ಮಾತ್ತ್ವಮಪಿ ದುರ್ಬುದ್ಧೇ ಮಚ್ಛಾಪಪರಿವಿಕ್ಷತಃ|
01173018c ಪತ್ನೀಮೃತಾವನುಪ್ರಾಪ್ಯ ಸದ್ಯಸ್ತ್ಯಕ್ಷ್ಯಸಿ ಜೀವಿತಂ||
“ಇಂದು ಅಕೃತಾರ್ಥ ಮಹಾಯಶಸ್ವಿ ನನ್ನ ಪತಿ ಪ್ರಭುವನ್ನು ಕ್ಷುದ್ರನಾಗಿ ನನ್ನ ಮುಂದೆಯೇ ಭಕ್ಷಿಸಿದುದಕ್ಕಾಗಿ ದುರ್ಬುದ್ಧಿಯೇ! ನೀನೂ ಕೂಡ ನನ್ನ ಶಾಪದಿಂದಾಗಿ ನಿನ್ನ ಪತ್ನಿಯನ್ನು ಕೂಡಿದಾಗ ನಿನ್ನ ಜೀವವನ್ನು ತೊರೆಯುತ್ತೀಯೆ!
01173019a ಯಸ್ಯ ಚರ್ಷೇರ್ವಸಿಷ್ಠಸ್ಯ ತ್ವಯಾ ಪುತ್ರಾ ವಿನಾಶಿತಾಃ|
01173019c ತೇನ ಸಂಗಮ್ಯ ತೇ ಭಾರ್ಯಾ ತನಯಂ ಜನಯಿಷ್ಯತಿ|
01173019e ಸ ತೇ ವಂಶಕರಃ ಪುತ್ರೋ ಭವಿಷ್ಯತಿ ನೃಪಾಧಮ||
ಯಾರ ನೂರು ಪುತ್ರರನ್ನೂ ನೀನು ನಾಶಮಾಡಿದೆಯೋ ಆ ವಸಿಷ್ಠನು ನಿನ್ನ ಭಾರ್ಯೆಯನ್ನು ಸೇರಿ ತನಯನನ್ನು ಹುಟ್ಟಿಸುತ್ತಾನೆ. ನೃಪಾಧಮ! ಆ ಪುತ್ರನೇ ನಿನ್ನ ವಂಶಕರನಾಗುತ್ತಾನೆ.”
01173020a ಏವಂ ಶಪ್ತ್ವಾ ತು ರಾಜಾನಂ ಸಾ ತಮಾಂಗಿರಸೀ ಶುಭಾ|
01173020c ತಸ್ಯೈವ ಸಂನಿಧೌ ದೀಪ್ತಂ ಪ್ರವಿವೇಶ ಹುತಾಶನಂ||
ರಾಜನನ್ನು ಈ ರೀತಿ ಶಪಿಸಿ ಆ ಶುಭೆ ಆಂಗಿರಸಿಯು ಹತ್ತಿರದಲ್ಲಿಯೇ ಉರಿಯುತ್ತಿದ್ದ ಹುತಾಶನನನ್ನು ಪ್ರವೇಶಿಸಿದಳು.
01173021a ವಸಿಷ್ಠಶ್ಚ ಮಹಾಭಾಗಃ ಸರ್ವಮೇತದಪಶ್ಯತ|
01173021c ಜ್ಞಾನಯೋಗೇನ ಮಹತಾ ತಪಸಾ ಚ ಪರಂತಪ||
ಪರಂತಪ! ಇವೆಲ್ಲವನ್ನೂ ಮಹಾಭಾಗ ವಸಿಷ್ಠನು ತನ್ನ ಮಹಾ ತಪಸ್ಸಿನ ಜ್ಞಾನಯೋಗದಿಂದ ನೋಡಿದನು.
01173022a ಮುಕ್ತಶಾಪಶ್ಚ ರಾಜರ್ಷಿಃ ಕಾಲೇನ ಮಹತಾ ತತಃ|
01173022c ಋತುಕಾಲೇಽಭಿಪತಿತೋ ಮದಯಂತ್ಯಾ ನಿವಾರಿತಃ||
01173023a ನ ಹಿ ಸಸ್ಮಾರ ನೃಪತಿಸ್ತಂ ಶಾಪಂ ಶಾಪಮೋಹಿತಃ|
01173023c ದೇವ್ಯಾಃ ಸೋಽಥ ವಚಃ ಶ್ರುತ್ವಾ ಸ ತಸ್ಯಾ ನೃಪಸತ್ತಮಃ|
01173023e ತಂ ಚ ಶಾಪಮನುಸ್ಮೃತ್ಯ ಪರ್ಯತಪ್ಯದ್ಭೃಶಂ ತದಾ||
ಬಹಳ ಸಮಯದ ನಂತರ ಆ ರಾಜರ್ಷಿಯು ಶಾಪದಿಂದ ವಿಮುಕ್ತನಾದಾಗ ಋತುಕಾಲವನ್ನು ಪಡೆದ ಮದಯಂತಿಯ ಬಳಿ ಹೋದನು. ಶಾಪಮೋಹಿತನಾದ ನೃಪತಿಯು ತನಗಿದ್ದ ಶಾಪವನ್ನು ಮರೆತುಬಿಟ್ಟಿದ್ದನು. ಆಗ ದೇವಿಯ ವಚನಗಳನ್ನು ಕೇಳಿದ ಆ ನೃಪಸತ್ತಮನು ತನಗಿದ್ದ ಶಾಪವನ್ನು ನೆನಪಿಸಿಕೊಂಡು ತುಂಬಾ ದುಃಖಕ್ಕೊಳಗಾದನು.
01173024a ಏತಸ್ಮಾತ್ಕಾರಣಾದ್ರಾಜಾ ವಸಿಷ್ಠಂ ಸಂನ್ಯಯೋಜಯತ್|
01173024c ಸ್ವದಾರೇ ಭರತಶ್ರೇಷ್ಠ ಶಾಪದೋಷಸಮನ್ವಿತಃ||
ಭರತಶ್ರೇಷ್ಠ! ಈ ಕಾರಣದಿಂದಲೇ ಶಾಪದೋಷಸಮನ್ವಿತ ರಾಜನು ವಸಿಷ್ಠನು ತನ್ನ ಪತ್ನಿಯೊಡನೆ ಕೂಡುವಂತೆ ಸಂಯೋಜಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಸಿಷ್ಠೋಪಾಖ್ಯಾನೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ವಸಿಷ್ಠೋಪಾಖ್ಯಾನದಲ್ಲಿ ನೂರಾಎಪ್ಪತ್ತ್ಮೂರನೆಯ ಅಧ್ಯಾಯವು.