Adi Parva: Chapter 166

ಆದಿ ಪರ್ವ: ಚೈತ್ರರಥ ಪರ್ವ

೧೬೬

ಇಕ್ಷ್ವಾಕು ವಂಶಜ ಕಲ್ಮಾಷಪಾದನು ಬೇಟೆಯಾಡಲು ಹೋದಾಗ ದಾರಿಯಲ್ಲಿ ವಸಿಷ್ಠನ ಮಗ ಶಕ್ತಿಯನ್ನು ಎದುರಾದುದು (೧-೪). ಮೊದಲು ಯಾರು ದಾರಿ ಬಿಡಬೇಕೆಂದು ವಾದಿಸಿ, ದಾರಿಬಿಡದಿದ್ದ ಶಕ್ತಿಗೆ ಸಿಟ್ಟಿನಿಂದ ಬಾರಿಕೋಲಿನಿಂದ ಹೊಡೆಯಲು ನರಭಕ್ಷಕನಾಗೆಂದು ಶಕ್ತಿಯು ರಾಜನಿಗೆ ಶಪಿಸಿದುದು (೫-೧೦). ವಿಶ್ವಾಮಿತ್ರನ ಆದೇಶದಿಂದ ರಾಕ್ಷಸನೋರ್ವನು ಕಲ್ಮಾಷಪಾದನನ್ನು ಆವೇಶಗೊಂಡಿದುದು; ಬ್ರಾಹ್ಮಣನಿಗೆ ನರಮಾಂಸವನ್ನು ನೀಡಿ ಅವನಿಂದಲೂ ರಾಜನು ನರಭಕ್ಷಕನಾಗುವಂತೆ ಶಾಪವನ್ನು ಪಡೆಯುವುದು (೧೧-೩೩). ಕಲ್ಮಾಷಪಾದನು ಶಕ್ತಿಯನ್ನು, ವಸಿಷ್ಠನ ಇತರ ನೂರು ಮಕ್ಕಳನ್ನೂ ವಿಶ್ವಾಮಿತ್ರನ ಆದೇಶದಂತೆ ಭಕ್ಷಿಸಿದುದು (೩೪-೩೮). ಪುತ್ರಶೋಕದಿಂದ ಕ್ಷಮಾವಂತ ವಸಿಷ್ಠನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ ಅಸಫಲನಾಗುವುದು (೩೯-೪೫).

01166001 ಗಂಧರ್ವ ಉವಾಚ|

01166001a ಕಲ್ಮಾಷಪಾದೈತ್ಯಸ್ಮಿಽಲ್ಲೋಕೇ ರಾಜಾ ಬಭೂವ ಹ|

01166001c ಇಕ್ಷ್ವಾಕುವಂಶಜಃ ಪಾರ್ಥ ತೇಜಸಾಸದೃಶೋ ಭುವಿ||

ಗಂಧರ್ವನು ಹೇಳಿದನು: “ಪಾರ್ಥ! ಈ ಲೋಕದಲ್ಲಿ ಕಲ್ಮಾಷಪಾದನೆಂಬ ರಾಜನಿದ್ದನು. ಇಕ್ಷ್ವಾಕು ವಂಶಜನಾದ ಅವನ ತೇಜಸ್ಸಿಗೆ ಸದೃಶರಾದವರು ಭುವಿಯಲ್ಲಿಯೇ ಯಾರೂ ಇರಲಿಲ್ಲ.

01166002a ಸ ಕದಾ ಚಿದ್ವನಂ ರಾಜಾ ಮೃಗಯಾಂ ನಿರ್ಯಯೌ ಪುರಾತ್|

01166002c ಮೃಗಾನ್ವಿಧ್ಯನ್ವರಾಹಾಂಶ್ಚ ಚಚಾರ ರಿಪುಮರ್ದನಃ||

ಒಮ್ಮೆ ಆ ರಾಜನು ಬೇಟೆಯಾಡಲು ಪುರದಿಂದ ಹೊರಗೆ ಹೋಗಿದ್ದನು. ಆ ರಿಪುಮರ್ದನನು ಜಿಂಕೆ ಮತ್ತು ಹಂದಿಗಳನ್ನು ಹೊಡೆಯುತ್ತಾ ತಿರುಗುತ್ತಿದ್ದನು.

01166003a ಸ ತು ರಾಜಾ ಮಹಾತ್ಮಾನಂ ವಾಸಿಷ್ಠಮೃಷಿಸತ್ತಮಂ|

01166003c ತೃಷಾರ್ತಶ್ಚ ಕ್ಷುಧಾರ್ತಶ್ಚ ಏಕಾಯನಗತಃ ಪಥಿ||

ತೃಷಾರ್ತನೂ ಕ್ಷುಧಾರ್ತನೂ ಆದ ಆ ರಾಜನು ಒಂದು ಚಿಕ್ಕ ದಾರಿಯಲ್ಲಿ ಮಹಾತ್ಮ ಮುನಿಸತ್ತಮ ವಾಸಿಷ್ಠನನ್ನು ಎದುರಾದನು.

01166004a ಅಪಶ್ಯದಜಿತಃ ಸಂಖ್ಯೇ ಮುನಿಂ ಪ್ರತಿಮುಖಾಗತಂ|

01166004c ಶಕ್ತಿಂ ನಾಮ ಮಹಾಭಾಗಂ ವಸಿಷ್ಠಕುಲನಂದನಂ|

01166004e ಜ್ಯೇಷ್ಠಂ ಪುತ್ರಶತಾತ್ಪುತ್ರಂ ವಸಿಷ್ಠಸ್ಯ ಮಹಾತ್ಮನಃ||

ಆ ಮಹಾಭಾಗ, ವಸಿಷ್ಠಕುಲನಂದನನ ಹೆಸರು ಶಕ್ತಿ ಎಂದಿತ್ತು. ಅವನು ಮಹಾತ್ಮ ವಸಿಷ್ಠನ ನೂರು ಪುತ್ರರಲ್ಲಿ ಜ್ಯೇಷ್ಠ ಪುತ್ರನಾಗಿದ್ದನು.

01166005a ಅಪಗಚ್ಛ ಪಥೋಽಸ್ಮಾಕಮಿತ್ಯೇವಂ ಪಾರ್ಥಿವೋಽಬ್ರವೀತ್|

01166005c ತಥಾ ಋಷಿರುವಾಚೈನಂ ಸಾಂತ್ವಯಂಶ್ಲಕ್ಷ್ಣಯಾ ಗಿರಾ||

01166006a ಋಷಿಸ್ತು ನಾಪಚಕ್ರಾಮ ತಸ್ಮಿನ್ಧರ್ಮಪಥೇ ಸ್ಥಿತಃ|

01166006c ನಾಪಿ ರಾಜಾ ಮುನೇರ್ಮಾನಾತ್ಕ್ರೋಧಾಚ್ಚಾಪಿ ಜಗಾಮ ಹ||

01166007a ಅಮುಂಚಂತಂ ತು ಪಂಥಾನಂ ತಮೃಷಿಂ ನೃಪಸತ್ತಮಃ|

01166007c ಜಘಾನ ಕಶಯಾ ಮೋಹಾತ್ತದಾ ರಾಕ್ಷಸವನ್ಮುನಿಂ||

“ಇದು ನಮ್ಮ ದಾರಿ. ಇದನ್ನು ಬಿಟ್ಟು ಹೋಗು!” ಎಂದು ಪಾರ್ಥಿವನು ಹೇಳಿದನು. ಆಗ ಋಷಿಯು ಶ್ಲಾಘನೀಯ ಸಾಂತ್ವನದ ಮಾತುಗಳನ್ನಾಡಿದನು. ತನ್ನ ಧರ್ಮಪಥದಲ್ಲಿ ನಿಂತಿದ್ದ ಋಷಿಯು ದಾರಿಯನ್ನು ಬಿಡಲಿಲ್ಲ. ಮುನಿಯ ಮೇಲಿನ ಕೋಪದಿಂದ ಮತ್ತು ತನ್ನ ಮಾನದಿಂದ ರಾಜನೂ ಕೂಡ ದಾರಿಯನ್ನು ಬಿಡಲಿಲ್ಲ. ದಾರಿಯನ್ನು ಕೊಡದೇ ಇದ್ದ ಆ ಋಷಿಗೆ ನೃಪಸತ್ತಮನು ತನ್ನ ಬಾರಿಕೋಲಿನಿಂದ ಮೋಹಿತ ರಾಕ್ಷಸನಂತೆ ಆ ಮುನಿಗೆ ಹೊಡೆದನು.

01166008a ಕಶಾಪ್ರಹಾರಾಭಿಹತಸ್ತತಃ ಸ ಮುನಿಸತ್ತಮಃ|

01166008c ತಂ ಶಶಾಪ ನೃಪಶ್ರೇಷ್ಠಂ ವಾಸಿಷ್ಠಃ ಕ್ರೋಧಮೂರ್ಚ್ಛಿತಃ||

ಬಾರಿಕೋಲಿನ ಹೊಡೆತತಿಂದ ಮುನಿಸತ್ತಮ ವಾಸಿಷ್ಠನು ಕ್ರೋಧ ಮೂರ್ಛಿತನಾಗಿ ಆ ನೃಪಸತ್ತಮನಿಗೆ ಶಪಿಸಿದನು.

01166009a ಹಂಸಿ ರಾಕ್ಷಸವದ್ಯಸ್ಮಾದ್ರಾಜಾಪಸದ ತಾಪಸಂ|

01166009c ತಸ್ಮಾತ್ತ್ವಮದ್ಯ ಪ್ರಭೃತಿ ಪುರುಷಾದೋ ಭವಿಷ್ಯಸಿ||

“ತಾಪಸಿಯನ್ನು ಓರ್ವ ರಾಕ್ಷಸನಂತೆ ಹೊಡೆಯುತ್ತಿರುವ ರಾಜನೇ! ಇಂದಿನಿಂದ ನೀನು ನರಭಕ್ಷಕನಾಗುವೆ.

01166010a ಮನುಷ್ಯಪಿಶಿತೇ ಸಕ್ತಶ್ಚರಿಷ್ಯಸಿ ಮಹೀಮಿಮಾಂ|

01166010c ಗಚ್ಛ ರಾಜಾಧಮೇತ್ಯುಕ್ತಃ ಶಕ್ತಿನಾ ವೀರ್ಯಶಕ್ತಿನಾ||

ಮನುಷ್ಯರ ಮಾಂಸವನ್ನು ತಿನ್ನುತ್ತಾ ನೀನು ಈ ಭೂಮಿಯನ್ನೆಲ್ಲಾ ತಿರುಗಾಡುವೆ. ರಾಜಾಧಮ! ಹೋಗು!” ಎಂದು ವೀರ್ಯಶಕ್ತಿವಂತ ಶಕ್ತಿಯು ನುಡಿದನು.

01166011a ತತೋ ಯಾಜ್ಯನಿಮಿತ್ತಂ ತು ವಿಶ್ವಾಮಿತ್ರವಸಿಷ್ಠಯೋಃ|

01166011c ವೈರಮಾಸೀತ್ತದಾ ತಂ ತು ವಿಶ್ವಾಮಿತ್ರೋಽನ್ವಪದ್ಯತ||

ಯಾವುದೋ ಯಜ್ಞದ ನಿಮಿತ್ತವಾಗಿ ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವೆ ವೈರತ್ವವಿದ್ದಿತ್ತು[1]. ಅದರ ಕಾರಣದಿಂದ ವಿಶ್ವಾಮಿತ್ರನು ರಾಜನನ್ನು ಹಿಂಬಾಲಿಸಿ ಬರುತ್ತಿದ್ದನು.

01166012a ತಯೋರ್ವಿವದತೋರೇವಂ ಸಮೀಪಮುಪಚಕ್ರಮೇ|

01166012c ಋಷಿರುಗ್ರತಪಾಃ ಪಾರ್ಥ ವಿಶ್ವಾಮಿತ್ರಃ ಪ್ರತಾಪವಾನ್||

ಪಾರ್ಥ! ಅವರೀರ್ವರೂ ವಿವಾದದಲ್ಲಿರುವಾಗ ಉಗ್ರತಪಸ್ವಿ ಪ್ರತಾಪಿ ಋಷಿ ವಿಶ್ವಾಮಿತ್ರನು ಸಮೀಪ ಬಂದನು.

01166013a ತತಃ ಸ ಬುಬುಧೇ ಪಶ್ಚಾತ್ತಮೃಷಿಂ ನೃಪಸತ್ತಮಃ|

01166013c ಋಷೇಃ ಪುತ್ರಂ ವಸಿಷ್ಠಸ್ಯ ವಸಿಷ್ಠಮಿವ ತೇಜಸಾ||

ಹಿಂದಿನಿಂದಲೇ ನೃಪಸತ್ತಮ ಆ ಋಷಿಯು ವಸಿಷ್ಠನ ತೇಜಸ್ಸನ್ನೇ ಹೊಂದಿದ್ದ ಋಷಿ ವಸಿಷ್ಠನ ಪುತ್ರನನ್ನು ಗುರುತಿಸಿದನು.

01166014a ಅಂತರ್ಧಾಯ ತದಾತ್ಮಾನಂ ವಿಶ್ವಾಮಿತ್ರೋಽಪಿ ಭಾರತ|

01166014c ತಾವುಭಾವುಪಚಕ್ರಾಮ ಚಿಕೀರ್ಷನ್ನಾತ್ಮನಃ ಪ್ರಿಯಂ||

ಭಾರತ! ವಿಶ್ವಾಮಿತ್ರನು ತನ್ನನ್ನು ಅಡಗಿಸಿಕೊಂಡು ತನಗೆ ಒಳ್ಳೆಯದಾಗುವ ಕಾರ್ಯವನ್ನೆಸಗಲು ಯೋಚಿಸಿದನು.

01166015a ಸ ತು ಶಪ್ತಸ್ತದಾ ತೇನ ಶಕ್ತಿನಾ ವೈ ನೃಪೋತ್ತಮಃ|

01166015c ಜಗಾಮ ಶರಣಂ ಶಕ್ತಿಂ ಪ್ರಸಾದಯಿತುಮರ್ಹಯನ್||

ಶಕ್ತಿಯಿಂದ ಶಪಿತ ಆ ನೃಪೋತ್ತಮನು ಶಕ್ತಿಯ ಶರಣುಹೋಗಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದನು.

01166016a ತಸ್ಯ ಭಾವಂ ವಿದಿತ್ವಾ ಸ ನೃಪತೇಃ ಕುರುನಂದನ|

01166016c ವಿಶ್ವಾಮಿತ್ರಸ್ತತೋ ರಕ್ಷ ಆದಿದೇಶ ನೃಪಂ ಪ್ರತಿ||

ಕುರುನಂದನ! ಆ ನೃಪತಿಯ ಉದ್ದೇಶವನ್ನು ತಿಳಿದ ವಿಶ್ವಾಮಿತ್ರನು ರಾಕ್ಷಸನೋರ್ವನಿಗೆ ರಾಜನನ್ನು ಪ್ರವೇಶಿಸಲು ಆಜ್ಞೆಯಿತ್ತನು.

01166017a ಸ ಶಾಪಾತ್ತಸ್ಯ ವಿಪ್ರರ್ಷೇರ್ವಿಶ್ವಾಮಿತ್ರಸ್ಯ ಚಾಜ್ಞಯಾ|

01166017c ರಾಕ್ಷಸಃ ಕಿಂಕರೋ ನಾಮ ವಿವೇಶ ನೃಪತಿಂ ತದಾ||

ವಿಪ್ರರ್ಷಿಯ ಶಾಪದಿಂದಾಗಿ ಮತ್ತು ವಿಶ್ವಾಮಿತ್ರನ ಆಜ್ಞೆಯಿಂದ ಕಿಂಕರ ಎಂಬ ಹೆಸರಿನ ಆ ರಾಕ್ಷಸನು ನೃಪತಿಯನ್ನು ಪ್ರವೇಶಿಸಿದನು.

01166018a ರಕ್ಷಸಾ ತು ಗೃಹೀತಂ ತಂ ವಿದಿತ್ವಾ ಸ ಮುನಿಸ್ತದಾ|

01166018c ವಿಶ್ವಾಮಿತ್ರೋಽಪ್ಯಪಕ್ರಾಮತ್ತಸ್ಮಾದ್ದೇಶಾದರಿಂದಮ||

ಅರಿಂದಮ! ರಾಕ್ಷಸನು ಅವನನ್ನು ಹಿಡಿದ ಎಂದು ತಿಳಿದ ಮುನಿ ವಿಶ್ವಾಮಿತ್ರನು ಅಲ್ಲಿಂದ ಹೊರಟುಹೋದನು.

01166019a ತತಃ ಸ ನೃಪತಿರ್ವಿದ್ವಾನ್ರಕ್ಷನ್ನಾತ್ಮಾನಮಾತ್ಮನಾ|

01166019c ಬಲವತ್ಪೀಡ್ಯಮಾನೋಽಪಿ ರಕ್ಷಸಾಂತರ್ಗತೇನ ಹ||

ಆಗ ಆ ವಿದ್ವಾನ್ ನೃಪತಿಯು ತನ್ನೊಳಗಿರುವ ರಾಕ್ಷಸನು ಬಹಳಷ್ಟು ಪೀಡಿಸುತ್ತಿದ್ದರೂ ತನ್ನನ್ನು ತಾನು ರಕ್ಷಿಸಿಕೊಂಡನು.

01166020a ದದರ್ಶ ತಂ ದ್ವಿಜಃ ಕಶ್ಚಿದ್ರಾಜಾನಂ ಪ್ರಸ್ಥಿತಂ ಪುನಃ|

01166020c ಯಯಾಚೇ ಕ್ಷುಧಿತಶ್ಚೈನಂ ಸಮಾಂಸಂ ಭೋಜನಂ ತದಾ||

ಹಿಂದಿರುಗಿದ ರಾಜನನ್ನು ಯಾರೋ ಒಬ್ಬ ಹಸಿವೆಯಿಂದಿದ್ದ ದ್ವಿಜನು ನೋಡಿ ಅವನಲ್ಲಿ ಮಾಂಸದ ಭೋಜನವನ್ನು ಯಾಚಿಸಿದನು.

01166021a ತಮುವಾಚಾಥ ರಾಜರ್ಷಿರ್ದ್ವಿಜಂ ಮಿತ್ರಸಹಸ್ತದಾ|

01166021c ಆಸ್ಸ್ವ ಬ್ರಹ್ಮಂಸ್ತ್ವಮತ್ರೈವ ಮುಹೂರ್ತಮಿತಿ ಸಾಂತ್ವಯನ್||

ಆಗ ರಾಜರ್ಷಿ ಮಿತ್ರಸಹನು ಅವನನ್ನು ಸಂತವಿಸುತ್ತಾ “ಬ್ರಾಹ್ಮಣ! ಒಂದು ಕ್ಷಣ ಇಲ್ಲಿಯೇ ಕಾಯುತ್ತಿರು!” ಎಂದು ಹೇಳಿದನು.

01166022a ನಿವೃತ್ತಃ ಪ್ರತಿದಾಸ್ಯಾಮಿ ಭೋಜನಂ ತೇ ಯಥೇಪ್ಸಿತಂ|

01166022c ಇತ್ಯುಕ್ತ್ವಾ ಪ್ರಯಯೌ ರಾಜಾ ತಸ್ಥೌ ಚ ದ್ವಿಜಸತ್ತಮಃ||

“ನಾನು ಮನೆಗೆ ಮರಳಿದನಂತರ ನಿನಗಿಷ್ಟವಾದ ಭೋಜನವನ್ನು ಕಳುಹಿಸುತ್ತೇನೆ!” ಎಂದು ಹೇಳಿದ ರಾಜನು ಆ ದ್ವಿಜಸತ್ತಮನನ್ನು ಅಲ್ಲಿಯೇ ನಿಲ್ಲಿಸಿ ಹಿಂದಿರುಗಿದನು.

01166023a ಅಂತರ್ಗತಂ ತು ತದ್ರಾಜ್ಞಸ್ತದಾ ಬ್ರಾಹ್ಮಣಭಾಷಿತಂ|

01166023c ಸೋಽಂತಃಪುರಂ ಪ್ರವಿಶ್ಯಾಥ ಸಂವಿವೇಶ ನರಾಧಿಪಃ||

ಆದರೆ ರಾಜನು ಬ್ರಾಹ್ಮಣನ ಮಾತುಗಳನ್ನು ಮರೆತುಬಿಟ್ಟನು ಮತ್ತು ಆ ನರಾಧಿಪನು ಅಂತಃಪುರವನ್ನು ಪ್ರವೇಶಿಸಿ ನಿದ್ರಿಸಿದನು.

01166024a ತತೋಽರ್ಧರಾತ್ರ ಉತ್ಥಾಯ ಸೂದಮಾನಾಯ್ಯ ಸತ್ವರಂ|

01166024c ಉವಾಚ ರಾಜಾ ಸಂಸ್ಮೃತ್ಯ ಬ್ರಾಹ್ಮಣಸ್ಯ ಪ್ರತಿಶ್ರುತಂ||

ಅರ್ಧರಾತ್ರಿಯಲ್ಲಿ ಎಚ್ಚೆತ್ತ ರಾಜನು ಬ್ರಾಹ್ಮಣನಿಗೆ ಇತ್ತಿದ್ದ ಮಾತನ್ನು ನೆನಪಿಸಿಕೊಂಡು ತ್ವರೆಮಾಡಿ ಅಡುಗೆಯವನನ್ನು ಕರೆಯಿಸಿ ಹೇಳಿದನು:

01166025a ಗಚ್ಛಾಮುಷ್ಮಿನ್ನಸೌ ದೇಶೇ ಬ್ರಾಹ್ಮಣೋ ಮಾಂ ಪ್ರತೀಕ್ಷತೇ|

01166025c ಅನ್ನಾರ್ಥೀ ತ್ವಂ ತಮನ್ನೇನ ಸಮಾಂಸೇನೋಪಪಾದಯ||

“ಬೇಗನೆ ಹೋಗು! ಇಂಥಹ ಪ್ರದೇಶದಲ್ಲಿ ಅನ್ನಾರ್ಥಿಯಾದ ಬ್ರಾಹ್ಮಣನೋರ್ವನು ನನ್ನ ದಾರಿಕಾಯುತ್ತಿದ್ದಾನೆ. ಅವನಿಗೆ ಮಾಂಸದ ಊಟವನ್ನು ತೆಗೆದುಕೊಂಡು ಹೋಗಿ ಕೊಡು.”

01166026a ಏವಮುಕ್ತಸ್ತದಾ ಸೂದಃ ಸೋಽನಾಸಾದ್ಯಾಮಿಷಂ ಕ್ವ ಚಿತ್|

01166026c ನಿವೇದಯಾಮಾಸ ತದಾ ತಸ್ಮೈ ರಾಜ್ಞೇ ವ್ಯಥಾನ್ವಿತಃ||

ಆ ಅಡುಗೆಯವನು ಎಲ್ಲಿಯೂ ಮಾಂಸವು ದೊರೆಯದಿರಲು ವಿಷಯವನ್ನು ರಾಜನಲ್ಲಿಗೆ ವ್ಯಥಾನ್ವಿತನಾಗಿ ವರದಿಮಾಡಿದನು.

01166027a ರಾಜಾ ತು ರಕ್ಷಸಾವಿಷ್ಟಃ ಸೂದಮಾಹ ಗತವ್ಯಥಃ|

01166027c ಅಪ್ಯೇನಂ ನರಮಾಂಸೇನ ಭೋಜಯೇತಿ ಪುನಃ ಪುನಃ||

ಆದರೆ ರಾಕ್ಷಸನಿಂದ ಆವಿಷ್ಟನಾಗಿದ್ದ ರಾಜನು ಹೆಚ್ಚು ಚಿಂತೆಮಾಡದೇ “ಹಾಗಾದರೆ ಅವನಿಗೆ ನರಮಾಂಸವನ್ನು ತಿನ್ನಿಸು!” ಎಂದು ಪುನಃ ಪುನಃ ಹೇಳಿದನು.

01166028a ತಥೇತ್ಯುಕ್ತ್ವಾ ತತಃ ಸೂದಃ ಸಂಸ್ಥಾನಂ ವಧ್ಯಘಾತಿನಾಂ|

01166028c ಗತ್ವಾ ಜಹಾರ ತ್ವರಿತೋ ನರಮಾಂಸಮಪೇತಭೀಃ||

“ಹಾಗೆಯೇ ಆಗಲಿ!” ಎಂದು ಹೇಳಿ ಅಡುಗೆಯವನು ವದ್ಯಘಾತಿಗಳಿದ್ದ ಸ್ಥಳಕ್ಕೆ ಹೋಗಿ ಅಲ್ಲಿಂದ ನರಮಾಂಸವನ್ನು ಸ್ವಲ್ಪವೂ ಭಯವಿಲ್ಲದೇ ತೆಗೆದುಕೊಂಡು ಬಂದನು.

01166029a ಸ ತತ್ಸಂಸ್ಕೃತ್ಯ ವಿಧಿವದನ್ನೋಪಹಿತಮಾಶು ವೈ|

01166029c ತಸ್ಮೈ ಪ್ರಾದಾದ್ಬ್ರಾಹ್ಮಣಾಯ ಕ್ಷುಧಿತಾಯ ತಪಸ್ವಿನೇ||

ಅದಕ್ಕೆ ಅನ್ನವನ್ನು ಸೇರಿಸಿ ವಿಧಿವತ್ತಾಗಿ ಬೇಯಿಸಿ ಹಸಿದಿದ್ದ ತಾಪಸಿ ಬ್ರಾಹ್ಮಣನಿಗೆ ಕೊಟ್ಟನು.

01166030a ಸ ಸಿದ್ಧಚಕ್ಷುಷಾ ದೃಷ್ಟ್ವಾ ತದನ್ನಂ ದ್ವಿಜಸತ್ತಮಃ|

01166030c ಅಭೋಜ್ಯಮಿದಮಿತ್ಯಾಹ ಕ್ರೋಧಪರ್ಯಾಕುಲೇಕ್ಷಣಃ||

ತನ್ನ ಸಿದ್ಧ ಚಕ್ಷುಷುಗಳಿಂದ ಆ ಅನ್ನವನ್ನು ನೋಡಿದ ದ್ವಿಜಸತ್ತಮನು “ಇದು ಅಭೋಜ್ಯವಾದದ್ದು!” ಎಂದು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ಹೇಳಿದನು.

01166031a ಯಸ್ಮಾದಭೋಜ್ಯಮನ್ನಂ ಮೇ ದದಾತಿ ಸ ನರಾಧಿಪಃ|

01166031c ತಸ್ಮಾತ್ತಸ್ಯೈವ ಮೂಢಸ್ಯ ಭವಿಷ್ಯತ್ಯತ್ರ ಲೋಲುಪಾ||

“ನನಗೆ ಯಾವ ಅನ್ನವನ್ನು ಭೋಜನಕ್ಕೆಂದು ನೀಡಿದ್ದಾನೋ ಆ ಮೂಢ ನರಾಧಿಪನು ಇನ್ನುಮುಂದೆ ಅಂಥಹದೇ ಅನ್ನದ ಲೋಲುಪನಾಗುತ್ತಾನೆ.

01166032a ಸಕ್ತೋ ಮಾನುಷಮಾಂಸೇಷು ಯಥೋಕ್ತಃ ಶಕ್ತಿನಾ ಪುರಾ|

01166032c ಉದ್ವೇಜನೀಯೋ ಭೂತಾನಾಂ ಚರಿಷ್ಯತಿ ಮಹೀಮಿಮಾಂ||

ಹಿಂದೆ ಶಕ್ತಿಯು ಹೇಳಿದ ಹಾಗೆಯೇ ಮನುಷ್ಯ ಮಾಂಸದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಈ ಭೂಮಿಯನ್ನು ತಿರುಗುತ್ತಿರುತ್ತಾನೆ.”

01166033a ದ್ವಿರನುವ್ಯಾಹೃತೇ ರಾಜ್ಞಃ ಸ ಶಾಪೋ ಬಲವಾನಭೂತ್|

01166033c ರಕ್ಷೋಬಲಸಮಾವಿಷ್ಟೋ ವಿಸಂಜ್ಞಶ್ಚಾಭವತ್ತದಾ||

ಎರಡು ಬಾರಿ ಹೇಳಲ್ಪಟ್ಟ ರಾಜನ ಆ ಶಾಪವು ಹೆಚ್ಚು ಪರಿಣಾಮಕಾರಿಯಾಗಲು ಅವನನ್ನು ಆವಿಷ್ಕರಿಸಿದ ರಾಕ್ಷಸನು ಹೆಚ್ಚಿನ ಶಕ್ತಿಯನ್ನು ಪಡೆದು ತನ್ನ ಬುದ್ಧಿಯನ್ನೇ ಕಳೆದುಕೊಂಡನು.

01166034a ತತಃ ಸ ನೃಪತಿಶ್ರೇಷ್ಠೋ ರಾಕ್ಷಸೋಪಹತೇಂದ್ರಿಯಃ|

01166034c ಉವಾಚ ಶಕ್ತಿಂ ತಂ ದೃಷ್ಟ್ವಾ ನಚಿರಾದಿವ ಭಾರತ||

ಭಾರತ! ತಕ್ಷಣವೇ ರಾಕ್ಷಸನಿಂದ ತನ್ನ ಇಂದ್ರಿಯಗಳನ್ನೆಲ್ಲ ಕಳೆದುಕೊಂಡ ಆ ನೃಪತಿಶ್ರೇಷ್ಠನು ಶಕ್ತಿಯನ್ನು ಕಂಡು ಹೇಳಿದನು:

01166035a ಯಸ್ಮಾದಸದೃಶಃ ಶಾಪಃ ಪ್ರಯುಕ್ತೋಽಯಂ ತ್ವಯಾ ಮಯಿ|

01166035c ತಸ್ಮಾತ್ತ್ವತ್ತಃ ಪ್ರವರ್ತಿಷ್ಯೇ ಖಾದಿತುಂ ಮಾನುಷಾನಹಂ||

“ನೀನು ನನಗೆ ಇಂಥಹ ಅಸದೃಶ ಶಾಪವನ್ನು ಕೊಟ್ಟಿದ್ದುದರಿಂದ ನರಮಾಂಸವನ್ನು ತಿನ್ನುವ ಈ ಪ್ರವೃತ್ತಿಯನ್ನು ನಿನ್ನಿಂದ ಪ್ರಾರಂಭಿಸುತ್ತೇನೆ.”

01166036a ಏವಮುಕ್ತ್ವಾ ತತಃ ಸದ್ಯಸ್ತಂ ಪ್ರಾಣೈರ್ವಿಪ್ರಯುಜ್ಯ ಸಃ|

01166036c ಶಕ್ತಿನಂ ಭಕ್ಷಯಾಮಾಸ ವ್ಯಾಘ್ರಃ ಪಶುಮಿವೇಪ್ಸಿತಂ||

ಹೀಗೆ ಹೇಳಿ ತಕ್ಷಣವೇ ಶಕ್ತಿಯ ಪ್ರಾಣವನ್ನು ತೆಗೆದು ವ್ಯಾಘ್ರವು ಪಶುವನ್ನು ಹೇಗೋ ಹಾಗೆ ತಿಂದುಬಿಟ್ಟನು.

01166037a ಶಕ್ತಿನಂ ತು ಹತಂ ದೃಷ್ಟ್ವಾ ವಿಶ್ವಾಮಿತ್ರಸ್ತತಃ ಪುನಃ|

01166037c ವಸಿಷ್ಠಸ್ಯೈವ ಪುತ್ರೇಷು ತದ್ರಕ್ಷಃ ಸಂದಿದೇಶ ಹ||

ಶಕ್ತಿಯು ಹತನಾದುದನ್ನು ನೋಡಿದ ವಿಶ್ವಾಮಿತ್ರನು ಪುನಃ ಆ ರಾಕ್ಷಸನನ್ನು ವಸಿಷ್ಠನ ಇತರ ಪುತ್ರರೆಡೆಗೆ ಕಳುಹಿಸಿದನು.

01166038a ಸ ತಾಂಶತಾವರಾನ್ಪುತ್ರಾನ್ವಸಿಷ್ಠಸ್ಯ ಮಹಾತ್ಮನಃ|

01166038c ಭಕ್ಷಯಾಮಾಸ ಸಂಕ್ರುದ್ಧಃ ಸಿಂಹಃ ಕ್ಷುದ್ರಮೃಗಾನಿವ||

ಸಂಕೃದ್ಧ ಸಿಂಹವು ಕ್ಷುದ್ರ ಮೃಗಗಳನ್ನು ಹೇಗೋ ಹಾಗೆ ಅವನು ಮಹಾತ್ಮ ವಸಿಷ್ಠನ ಇತರ ಮಕ್ಕಳನ್ನೂ ಭಕ್ಷಿಸಿದನು.

01166039a ವಸಿಷ್ಠೋ ಘಾತಿತಾಂಶ್ರುತ್ವಾ ವಿಶ್ವಾಮಿತ್ರೇಣ ತಾನ್ಸುತಾನ್|

01166039c ಧಾರಯಾಮಾಸ ತಂ ಶೋಕಂ ಮಹಾದ್ರಿರಿವ ಮೇದಿನೀಂ||

ತನ್ನ ಮಕ್ಕಳ ಸಾವನ್ನು ವಿಶ್ವಾಮಿತ್ರನೇ ಆಯೋಜಿಸಿದ್ದ ಎಂದು ಕೇಳಿದ ವಸಿಷ್ಠನು ತನ್ನ ಆ ಶೋಕವನ್ನು ಮಹಾದ್ರಿಯು ಮೇದಿನಿಯನ್ನು ಹೇಗೋ ಹಾಗೆ ಹಿಡಿದಿಟ್ಟುಕೊಂಡನು.

01166040a ಚಕ್ರೇ ಚಾತ್ಮವಿನಾಶಾಯ ಬುದ್ಧಿಂ ಸ ಮುನಿಸತ್ತಮಃ|

01166040c ನ ತ್ವೇವ ಕುಶಿಕೋಚ್ಛೇದಂ ಮೇನೇ ಮತಿಮತಾಂ ವರಃ||

ಮತಿವಂತರಲ್ಲೇ ಶ್ರೇಷ್ಠ ಆ ಮುನಿಸತ್ತಮನು ಕೌಶಿಕರ ಕುಲವನ್ನೇ ನಾಶಮಾಡುವುದರ ಹೊರತಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನಿಶ್ಚಯಿಸಿದನು.

01166041a ಸ ಮೇರುಕೂಟಾದಾತ್ಮಾನಂ ಮುಮೋಚ ಭಗವಾನೃಷಿಃ|

01166041c ಶಿರಸ್ತಸ್ಯ ಶಿಲಾಯಾಂ ಚ ತೂಲರಾಶಾವಿವಾಪತತ್||

ಆ ಭಗವಾನ್ ಋಷಿಯು ಮೇರು ಪರ್ವತದ ಶಿಖರದಿಂದ ಹಾರಿದನು. ಆದರೆ ಅವನ ಶಿರವು ಶಿಲದ ಮೇಲೆ ಬಿದ್ದಾಗ ಶಿಲೆಯು ಹತ್ತಿಯ ರಾಶಿಯಾಗಿತ್ತು.

01166042a ನ ಮಮಾರ ಚ ಪಾತೇನ ಸ ಯದಾ ತೇನ ಪಾಂಡವ|

01166042c ತದಾಗ್ನಿಮಿದ್ಧ್ವಾ ಭಗವಾನ್ಸಂವಿವೇಶ ಮಹಾವನೇ||

ಪಾಂಡವ! ಬೀಳುವುದರಿಂದ ತಾನು ಸಾಯದೇ ಇದ್ದಾಗ ಆ ಭಗವಾನನು ಮಹಾವನದಲ್ಲಿ ಒಂದು ಅಗ್ನಿಯನ್ನು ನಿರ್ಮಿಸಿ ಅದರಲ್ಲಿ ಪ್ರವೇಶಿಸಿದನು.

01166043a ತಂ ತದಾ ಸುಸಮಿದ್ಧೋಽಪಿ ನ ದದಾಹ ಹುತಾಶನಃ|

01166043c ದೀಪ್ಯಮಾನೋಽಪ್ಯಮಿತ್ರಘ್ನ ಶೀತೋಽಗ್ನಿರಭವತ್ತತಃ||

ಬಹಳ ಎತ್ತರದ ವರೆಗೆ ಉರಿಯುತ್ತಿದ್ದರೂ ಹುತಾಶನನು ಅವನನ್ನು ಸುಡಲಿಲ್ಲ. ಅಮಿತ್ರಘ್ನ! ಉರಿಯುತ್ತಿರುವ ಜ್ವಾಲೆಗಳು ಶೀತಾಗ್ನಿಗಳಾದವು.

01166044a ಸ ಸಮುದ್ರಮಭಿಪ್ರೇತ್ಯ ಶೋಕಾವಿಷ್ಟೋ ಮಹಾಮುನಿಃ|

01166044c ಬದ್ಧ್ವಾ ಕಂಠೇ ಶಿಲಾಂ ಗುರ್ವೀಂ ನಿಪಪಾತ ತದಂಭಸಿ||

ಶೋಕಾವಿಷ್ಟ ಮಹಾಮುನಿಯು ಸಮುದ್ರವನ್ನು ಸೇರಿ, ಕಂಠಕ್ಕೆ ಒಂದು ಭಾರ ಶಿಲೆಯನ್ನು ಕಟ್ಟಿ, ಅದರ ನೀರಿನಲ್ಲಿ ಬಿದ್ದನು.

01166045a ಸ ಸಮುದ್ರೋರ್ಮಿವೇಗೇನ ಸ್ಥಲೇ ನ್ಯಸ್ತೋ ಮಹಾಮುನಿಃ|

01166045c ಜಗಾಮ ಸ ತತಃ ಖಿನ್ನಃ ಪುನರೇವಾಶ್ರಮಂ ಪ್ರತಿ||

ಸಮುದ್ರದ ಅಲೆಗಳು ಆ ಮಹಾಮುನಿಯನ್ನು ತೀರಕ್ಕೆ ತಂದು ಬಿಟ್ಟವು. ಖಿನ್ನನಾದ ಅವನು ಪುನಃ ಅಶ್ರಮಕ್ಕೆ ತೆರಳಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಸಿಷ್ಠಶೋಕೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ವಸಿಷ್ಠಶೋಕದಲ್ಲಿ ನೂರಾಅರವತ್ತಾರನೆಯ ಅಧ್ಯಾಯವು.

Image result for indian flowers

[1] ಇದು ಯಾವ ಯಜ್ಞ? ಹರಿಶ್ಚಂದ್ರನ ರಾಜಸೂಯ ಯಾಗವೇ?

Comments are closed.