ಆದಿ ಪರ್ವ: ಚೈತ್ರರಥ ಪರ್ವ
೧೫೮
ಗಂಧರ್ವ ಅಂಗಾರಪರ್ಣ
ಮಾರ್ಗದಲ್ಲಿ ಸಾಯಂಕಾಲದ ಸಮಯದಲ್ಲಿ ಗಂಗೆಯನ್ನು ದಾಟುತ್ತಿದ್ದಾಗ ಪಾಂಡವರನ್ನು ಗಂಧರ್ವ ಚಿತ್ರರಥನು ತಡೆದುದು (೧-೧೪). ಅರ್ಜುನನು ಪ್ರತಿಭಟಿಸಿ ಆಗ್ನೇಯಾಸ್ತ್ರದಿಂದ ಚಿತ್ರರಥನನ್ನು ದಗ್ಧ ರಥನನ್ನಾಗಿ ಮಾಡಿದುದು (೧೫-೩೦). ಗಂಧರ್ವ ಪತ್ನಿಯು ಶರಣು ಬರಲು ಯುಧಿಷ್ಠಿರನು ಜೀವದಾನಮಾಡಿದ್ದುದು (೩೦-೩೪). ಸಂತೋಷಗೊಂಡ ಚಿತ್ರರಥನು ಮೈತ್ರಿಯಿಂದ ಚಕ್ಷುಷೀ ವಿದ್ಯೆಯನ್ನು ಅರ್ಜುನನನಿಗೂ ಅಮೂಲ್ಯ ಕುದುರೆಗಳನ್ನು ಪಾಂಡವರಿಗೂ ನೀಡಿದ್ದುದು; ಬದಲಾಗಿ ಅರ್ಜುನನು ಚಿತ್ರರಥನಿಗೆ ಆಗ್ನೇಯನ್ನು ನೀಡಿದುದು (೩೫-೫೫).
01158001 ವೈಶಂಪಾಯನ ಉವಾಚ|
01158001a ತೇ ಪ್ರತಸ್ಥುಃ ಪುರಸ್ಕೃತ್ಯ ಮಾತರಂ ಪುರುಷರ್ಷಭಾಃ|
01158001c ಸಮೈರುದಙ್ಮುಖೈರ್ಮಾರ್ಗೈರ್ಯಥೋದ್ದಿಷ್ಟಂ ಪರಂತಪಾಃ||
ವೈಶಂಪಾಯನನು ಹೇಳಿದನು: “ತಾಯಿಯನ್ನು ಮುಂದಿರಿಸಿಕೊಂಡು ಆ ಪರಂತಪ ಪುರುಷರ್ಷಭರು ಸೂಚಿಸಿದ್ದ ಸಮತರ ಮಾರ್ಗದಲ್ಲಿ ಉತ್ತರಾಭಿಮುಖವಾಗಿ ಹೊರಟರು.
01158002a ತೇ ಗಚ್ಛಂತಸ್ತ್ವಹೋರಾತ್ರಂ ತೀರ್ಥಂ ಸೋಮಶ್ರವಾಯಣಂ|
01158002c ಆಸೇದುಃ ಪುರುಷವ್ಯಾಘ್ರಾ ಗಂಗಾಯಾಂ ಪಾಂಡುನಂದನಾಃ||
ಆ ಪುರುಷವ್ಯಾಘ್ರ ಪಾಂಡುನಂದನರು ಅಹೋರಾತ್ರಿ ನಡೆದು ಗಂಗಾ ತೀರದಲ್ಲಿರುವ ಸೋಮಶ್ರವಾಯಣ ತೀರ್ಥವನ್ನು ತಲುಪಿದರು.
01158003a ಉಲ್ಮುಕಂ ತು ಸಮುದ್ಯಮ್ಯ ತೇಷಾಮಗ್ರೇ ಧನಂಜಯಃ|
01158003c ಪ್ರಕಾಶಾರ್ಥಂ ಯಯೌ ತತ್ರ ರಕ್ಷಾರ್ಥಂ ಚ ಮಹಾಯಶಾಃ||
ಅವರೆಲ್ಲರ ಮುಂದೆ ದೀವಟಿಗೆಯೊಂದನ್ನು ಹಿಡಿದು ಮಹಾಯಶಸ್ವಿ ಧನಂಜಯನು ಬೆಳಕು-ರಕ್ಷಣೆಗಳನ್ನು ನೀಡುತ್ತಾ ನಡೆಯುತ್ತಿದ್ದನು.
01158004a ತತ್ರ ಗಂಗಾಜಲೇ ರಮ್ಯೇ ವಿವಿಕ್ತೇ ಕ್ರೀಡಯನ್ ಸ್ತ್ರಿಯಃ|
01158004c ಈರ್ಷ್ಯುರ್ಗಂಧರ್ವರಾಜಃ ಸ್ಮ ಜಲಕ್ರೀಡಾಮುಪಾಗತಃ||
ಏಕಾಂತ ಆ ರಮ್ಯ ಗಂಗಾಜಲದಲ್ಲಿ ಸ್ತ್ರೀಯರೊಡನೆ ಕ್ರೀಡೆಗೆಂದು ಬಂದ ಗಂಧರ್ವರಾಜನು ಜಲಕ್ರೀಡೆಯಾಡುತ್ತಿದ್ದನು.
01158005a ಶಬ್ಧಂ ತೇಷಾಂ ಸ ಶುಶ್ರಾವ ನದೀಂ ಸಮುಪಸರ್ಪತಾಂ|
01158005c ತೇನ ಶಬ್ಧೇನ ಚಾವಿಷ್ಟಶ್ಚುಕ್ರೋಧ ಬಲವದ್ಬಲೀ||
01158006a ಸ ದೃಷ್ಟ್ವಾ ಪಾಂಡವಾಂಸ್ತತ್ರ ಸಹ ಮಾತ್ರಾ ಪರಂತಪಾನ್|
01158006c ವಿಸ್ಫಾರಯನ್ಧನುರ್ಘೋರಮಿದಂ ವಚನಮಬ್ರವೀತ್||
ನದಿಯನ್ನು ಸಮೀಪಿಸುತ್ತಿರುವ ಅವರ ಶಬ್ಧವನ್ನು ಅವನು ಕೇಳಿದನು. ಬಲವಂತರಲ್ಲಿಯೇ ಬಲಶಾಲಿ ಅವನು ಆ ಶಬ್ಧದಿಂದ ಕ್ರೋಧಾವಿಷ್ಠನಾದನು. ತಾಯಿಯೊಂದಿಗಿದ್ದ ಆ ಪರಂತಪ ಪಾಂಡವರನ್ನು ನೋಡಿ ಧನುಸ್ಸನ್ನು ಠೇಂಕರಿಸಿ ಈ ಮಾತುಗಳನ್ನಾಡಿದನು:
01158007a ಸಂಧ್ಯಾ ಸಂರಜ್ಯತೇ ಘೋರಾ ಪೂರ್ವರಾತ್ರಾಗಮೇಷು ಯಾ|
01158007c ಅಶೀತಿಭಿಸ್ತ್ರುಟೈರ್ಹೀನಂ ತಂ ಮುಹೂರ್ತಂ ಪ್ರಚಕ್ಷತೇ||
01158008a ವಿಹಿತಂ ಕಾಮಚಾರಾಣಾಂ ಯಕ್ಷಗಂಧರ್ವರಕ್ಷಸಾಂ|
01158008c ಶೇಷಮನ್ಯನ್ಮನುಷ್ಯಾಣಾಂ ಕಾಮಚಾರಮಿಹ ಸ್ಮೃತಂ||
“ಕೆಂಪಾದ ಘೋರ ಸಂಧ್ಯೆಯು ಮೂಲಕ ರಾತ್ರಿ ಬೀಳುವ ಗಳಿಗೆಯನ್ನು, ಮೊದಲು ಎಂಟು ಮುಹೂರ್ತಗಳನ್ನು ಬಿಟ್ಟು, ಕಾಮಚಾರಿಗಳಾದ ಯಕ್ಷ, ಗಂಧರ್ವ ಮತ್ತು ರಾಕ್ಷಸರಿಗೆ ಮೀಸಲಾಗಿ ಇಡಲಾಗಿದೆ ಮತ್ತು ಉಳಿದ ಸಮಯದಲ್ಲಿ ಮನುಷ್ಯರು ಇಷ್ಟಬಂದಹಾಗೆ ವಿಹರಿಸಬಹುದು ಎಂದು ಕೇಳಿದ್ದೇವೆ.
01158009a ಲೋಭಾತ್ಪ್ರಚಾರಂ ಚರತಸ್ತಾಸು ವೇಲಾಸು ವೈ ನರಾನ್|
01158009c ಉಪಕ್ರಾಂತಾ ನಿಗೃಹ್ಣೀಮೋ ರಾಕ್ಷಸೈಃ ಸಹ ಬಾಲಿಶಾನ್||
ಈ ವೇಳೆಯಲ್ಲಿ ಲೋಭ ಮತ್ತು ದಡ್ಡತನದಿಂದ ಸಂಚರಿಸುತ್ತಿರುವ ನರರನ್ನು ನಾವು ಮತ್ತು ರಾಕ್ಷಸರು ಎದುರಿಸಿ ಶಿಕ್ಷಿಸುತ್ತೇವೆ.
01158010a ತತೋ ರಾತ್ರೌ ಪ್ರಾಪ್ನುವತೋ ಜಲಂ ಬ್ರಹ್ಮವಿದೋ ಜನಾಃ|
01158010c ಗರ್ಹಯಂತಿ ನರಾನ್ಸರ್ವಾನ್ಬಲಸ್ಥಾನ್ನೃಪತೀನಪಿ||
ರಾತ್ರಿವೇಳೆ ನೀರಿರುವಲ್ಲಿಗೆ ನರರು - ಬಲವಂತರಾದ ರಾಜರೂ ಕೂಡ - ಹೋಗುವುದು ತಪ್ಪೆಂದು ಬ್ರಹ್ಮವಿದ ಜನರು ಪರಿಗಣಿಸುತ್ತಾರೆ.
01158011a ಆರಾತ್ತಿಷ್ಠತ ಮಾ ಮಹ್ಯಂ ಸಮೀಪಮುಪಸರ್ಪತ|
01158011c ಕಸ್ಮಾನ್ಮಾಂ ನಾಭಿಜಾನೀತ ಪ್ರಾಪ್ತಂ ಭಾಗೀರಥೀಜಲಂ||
ನನ್ನ ಸಮೀಪ ಬರದೇ ಅಲ್ಲಿಯೇ ದೂರದಲ್ಲಿ ನಿಲ್ಲಿ! ಭಾಗೀರಥೀ ನೀರಿಗೆ ಬಂದಿರುವ ನನ್ನನ್ನು ನೀವು ಹೇಗೆತಾನೇ ಗುರುತಿಸಲಿಲ್ಲ!
01158012a ಅಂಗಾರಪರ್ಣಂ ಗಂಧರ್ವಂ ವಿತ್ತ ಮಾಂ ಸ್ವಬಲಾಶ್ರಯಂ|
01158012c ಅಹಂ ಹಿ ಮಾನೀ ಚೇರ್ಷ್ಯುಶ್ಚ ಕುಬೇರಸ್ಯ ಪ್ರಿಯಃ ಸಖಾ||
ನನ್ನನ್ನು ಸ್ವಬಲಾಶ್ರಯ ಗಂಧರ್ವ ಅಂಗಾರಪರ್ಣನೆಂದು ತಿಳಿಯಿರಿ. ನಾನು ಒಬ್ಬ ಗರ್ವಿ ಮತ್ತು ಈರ್ಷೆಯ ಸ್ವಭಾವದವನು. ನಾನು ಕುಬೇರನ ಪ್ರಿಯ ಸಖನೂ ಹೌದು.
01158013a ಅಂಗಾರಪರ್ಣಮಿತಿ ಚ ಖ್ಯತಂ ವನಮಿದಂ ಮಮ|
01158013c ಅನು ಗಂಗಾಂ ಚ ವಾಕಾಂ ಚ ಚಿತ್ರಂ ಯತ್ರ ವಸಾಮ್ಯಹಂ||
ಅಂಗಾರಪರ್ಣವೆಂದು ಖ್ಯಾತ ಗಂಗಾತೀರದಲ್ಲಿರುವ ಈ ಸುಂದರ ವನ ಮತ್ತು ನಾನು ವಾಸಿಸುತ್ತಿರುವ ಈ ಇಲಾಖೆಯು ನನ್ನದು.
01158014a ನ ಕುಣಪಾಃ ಶೃಂಗಿಣೋ ವಾ ನ ದೇವಾ ನ ಚ ಮಾನುಷಾಃ|
01158014c ಇದಂ ಸಮುಪಸರ್ಪಂತಿ ತತ್ಕಿಂ ಸಮುಪಸರ್ಪಥ||
ಶವಗಳಾಗಲೀ, ಕೊಂಬಿರುವ ಪ್ರಾಣಿಗಳಾಗಲೀ, ದೇವತೆಗಳಾಗಲೀ ಅಥವಾ ಮನುಷ್ಯರಾಗಲೀ ಇದರ ಸಮೀಪ ಬರುವುದಿಲ್ಲ. ನೀವು ಹೇಗೆ ಇಲ್ಲಿಗೆ ಬಂದಿರಿ?”
01158015 ಅರ್ಜುನ ಉವಾಚ|
01158015a ಸಮುದ್ರೇ ಹಿಮವತ್ಪಾರ್ಶ್ವೇ ನದ್ಯಾಮಸ್ಯಾಂ ಚ ದುರ್ಮತೇ|
01158015c ರಾತ್ರಾವಹನಿ ಸಂಧೌ ಚ ಕಸ್ಯ ಕ್ಲುಪ್ತಃ ಪರಿಗ್ರಹಃ||
ಅರ್ಜುನನು ಹೇಳಿದನು: “ದುರ್ಮತೇ! ಸಮುದ್ರ, ಹಿಮವತ್ಪರ್ವತ ಮತ್ತು ನದೀ ಮಾರ್ಗಗಳನ್ನು ರಾತ್ರಿಯಾಗಲೀ, ಹಗಲಾಗಲೀ ಅಥವಾ ಸಾಯಂಕಾಲವಾಗಲೀ ಯಾರು ತಾನೆ ತಡೆಹಿಡಿಯುತ್ತಾನೆ?
01158016a ವಯಂ ಚ ಶಕ್ತಿಸಂಪನ್ನಾ ಅಕಾಲೇ ತ್ವಾಮಧೃಷ್ಣುಮಃ|
01158016c ಅಶಕ್ತಾ ಹಿ ಕ್ಷಣೇ ಕ್ರೂರೇ ಯುಷ್ಮಾನರ್ಚಂತಿ ಮಾನವಾಃ||
ನಾವು ಶಕ್ತಿ ಸಂಪನ್ನರಾಗಿದ್ದೇವೆ ಮತ್ತು ಇದು ಅಕಾಲವಾದರೂ ನಾವು ನಿನ್ನನ್ನು ಎದುರಿಸುತ್ತೇವೆ. ಕೇವಲ ಅಶಕ್ತ ಮಾನವರು ನಿನ್ನ ಈ ಕ್ರೂರ ಕ್ಷಣದಲ್ಲಿ ನಿನ್ನನ್ನು ಪೂಜಿಸುತ್ತಾರೆ.
01158017a ಪುರಾ ಹಿಮವತಶ್ಚೈಷಾ ಹೇಮಶೃಂಗಾದ್ವಿನಿಃಸೃತಾ|
01158017c ಗಂಗಾ ಗತ್ವಾ ಸಮುದ್ರಾಂಭಃ ಸಪ್ತಧಾ ಪ್ರತಿಪದ್ಯತೇ||
ಹಿಂದೆ ಹಿಮವಂತದ ಹೇಮಶೃಂಗಗಳಿಂದ ಹೊರಬಂದ ಗಂಗೆಯು ಎಂಟು ಧಾರೆಗಳಾಗಿ ಸಮುದ್ರದ ನೀರನ್ನು ಸೇರುತ್ತಾಳೆ.
01158018a ಇಯಂ ಭೂತ್ವಾ ಚೈಕವಪ್ರಾ ಶುಚಿರಾಕಾಶಗಾ ಪುನಃ|
01158018c ದೇವೇಷು ಗಂಗಾ ಗಂಧರ್ವ ಪ್ರಾಪ್ನೋತ್ಯಲಕನಂದತಾಂ||
01158019a ತಥಾ ಪಿತೄನ್ವೈತರಣೀ ದುಸ್ತರಾ ಪಾಪಕರ್ಮಭಿಃ|
01158019c ಗಂಗಾ ಭವತಿ ಗಂಧರ್ವ ಯಥಾ ದ್ವೈಪಾಯನೋಽಬ್ರವೀತ್||
ಗಂಧರ್ವ! ದ್ವೈಪಾಯನನು ಹೇಳಿರುವಂತೆ ಈ ಶುಚಿಯು ಏಕವಪ್ರಳಾಗಿ ದೇವತೆಗಳ ಆಕಾಶದಲ್ಲಿ ಹರಿಯುತ್ತಾಳೆ ಮತ್ತು ಮುಂದೆ ಅವಳೇ ಅಲಕನಂದಾ ಎಂದಾಗಿ ಮುಂದೆ ಪಿತೃಗಳ ಮಧ್ಯದಲ್ಲಿ ವೈತರಣಿ ಎಂದು, ನಂತರ ಪಾಪಕರ್ಮಿಗಳಿಗೆ ದುಸ್ತರಳಾದ ಗಂಗಾ ಎಂದೂ ಕರೆಯಿಸಿಕೊಳ್ಳುತ್ತಾಳೆ.
01158020a ಅಸಂಬಾಧಾ ದೇವನದೀ ಸ್ವರ್ಗಸಂಪಾದನೀ ಶುಭಾ|
01158020c ಕಥಮಿಚ್ಛಸಿ ತಾಂ ರೋದ್ಧುಂ ನೈಷ ಧರ್ಮಃ ಸನಾತನಃ||
ಈ ಶುಭ ದೇವನದಿಯು ಸ್ವರ್ಗವನ್ನು ಸೇರುತ್ತದೆ. ಇಂಥಹುದನ್ನು ನೀನು ಬೇರೆಯವರಿಗೆ ದೊರೆಯದಂತೆ ಹೇಗೆತಾನೇ ತಡೆಹಿಡಿಯಬಲ್ಲೆ? ಅದು ಸನಾತನ ಧರ್ಮವಲ್ಲ.
01158021a ಅನಿವಾರ್ಯಮಸಂಬಾಧಂ ತವ ವಾಚಾ ಕಥಂ ವಯಂ|
01158021c ನ ಸ್ಪೃಶೇಮ ಯಥಾಕಾಮಂ ಪುಣ್ಯಂ ಭಾಗೀರಥೀಜಲಂ||
ಅನಿವಾರ್ಯವೂ ಅಸಂಬಾಧವೂ ಆದ ನಿನ್ನ ಈ ಮಾತಿನಂತೆ ನಾವು ಏಕೆ ನಮಗಿಷ್ಟ ಬಂದಂತೆ ಈ ಪುಣ್ಯ ಭಾಗೀರಥೀಜಲವನ್ನು ಮುಟ್ಟಬಾರದು?””
01158022 ವೈಶಂಪಾಯನ ಉವಾಚ|
01158022a ಅಂಗಾರಪರ್ಣಸ್ತಚ್ಛೃತ್ವಾ ಕ್ರುದ್ಧ ಆನಮ್ಯ ಕಾರ್ಮುಕಂ|
01158022c ಮುಮೋಚ ಸಾಯಕಾನ್ದೀಪ್ತಾನಹೀನಾಶೀವಿಷಾನಿವ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಅಂಗಾರಪರ್ಣನು ಕೃದ್ಧನಾಗಿ ತನ್ನ ಧನುಸ್ಸನ್ನು ಎಳೆದು ಬಲಶಾಲಿ ಸರ್ಪ ವಿಷದಂತೆ ಉರಿಯುತ್ತಿರುವ ಬಾಣಗಳನ್ನು ಬಿಟ್ಟನು.
01158023a ಉಲ್ಮುಕಂ ಭ್ರಾಮಯಂಸ್ತೂರ್ಣಂ ಪಾಂಡವಶ್ಚರ್ಮ ಚೋತ್ತಮಂ|
01158023c ವ್ಯಪೋವಾಹ ಶರಾಂಸ್ತಸ್ಯ ಸರ್ವಾನೇವ ಧನಂಜಯಃ||
ಆದರೆ ಪಾಂಡವ ಧನಂಜಯನು ತನ್ನ ಧನುಸ್ಸು ಮತ್ತು ಉತ್ತಮ ಕವಚಗಳಿಂದ ಆ ಎಲ್ಲ ಶರಗಳನ್ನೂ ತಡೆಹಿಡಿದನು.
01158024 ಅರ್ಜುನ ಉವಾಚ|
01158024a ಬಿಭೀಷಿಕೈಷಾ ಗಂಧರ್ವ ನಾಸ್ತ್ರಜ್ಞೇಷು ಪ್ರಯುಜ್ಯತೇ|
01158024c ಅಸ್ತ್ರಜ್ಞೇಷು ಪ್ರಯುಕ್ತೈಷಾ ಫೇನವತ್ಪ್ರವಿಲೀಯತೇ||
ಅರ್ಜುನನು ಹೇಳಿದನು: “ಗಂಧರ್ವ! ಈ ರೀತಿಯ ದಬ್ಬಾಳಿಕೆಯು ಅಸ್ತ್ರಗಳನ್ನು ತಿಳಿದವರಲ್ಲಿ ಪ್ರಯೋಜನಕ್ಕೆ ಬಾರದು. ಇದನ್ನು ಅಸ್ತ್ರಜ್ಞರಲ್ಲಿ ಬಳಸಿದರೆ ಅದು ಹಾಲಿನ ಕೆನೆಯಂತೆ ಮಾಯವಾಗುತ್ತದೆ.
01158025a ಮಾನುಷಾನತಿ ಗಂಧರ್ವಾನ್ಸರ್ವಾನ್ಗಂಧರ್ವ ಲಕ್ಷಯೇ|
01158025c ತಸ್ಮಾದಸ್ತ್ರೇಣ ದಿವ್ಯೇನ ಯೋತ್ಸ್ಯೇಽಹಂ ನ ತು ಮಾಯಯಾ||
ಗಂಧರ್ವ! ಸರ್ವ ಗಂಧರ್ವರೂ ಮನುಷ್ಯರನ್ನು ಮೀರಿಸುತ್ತಾರೆ ಎಂದು ತಿಳಿದಿದ್ದೇನೆ. ಆದುದರಿಂದ ನಾನು ನಿನ್ನಲ್ಲಿ ದಿವ್ಯಾಸ್ತ್ರಗಳಿಂದ ಹೋರಾಡುತ್ತೇನೆ. ಮಾಯೆಯಿಂದಲ್ಲ.
01158026a ಪುರಾಸ್ತ್ರಮಿದಮಾಗ್ನೇಯಂ ಪ್ರಾದಾತ್ಕಿಲ ಬೃಹಸ್ಪತಿಃ|
01158026c ಭರದ್ವಾಜಸ್ಯ ಗಂಧರ್ವ ಗುರುಪುತ್ರಃ ಶತಕ್ರತೋಃ||
ಗಂಧರ್ವ! ಇದು ಆಗ್ನೇಯಾಸ್ತ್ರ. ಹಿಂದೆ ಇದನ್ನು ಶತಕ್ರತುವಿನ ಗುರುಪುತ್ರ ಬೃಹಸ್ಪತಿಯು ಭರದ್ವಾಜನಿಗೆ ನೀಡಿದನು.
01158027a ಭರದ್ವಾಜಾದಗ್ನಿವೇಶ್ಯೋ ಅಗ್ನಿವೇಶ್ಯಾದ್ಗುರುರ್ಮಮ|
01158027c ಸ ತ್ವಿದಂ ಮಹ್ಯಮದದಾದ್ದ್ರೋಣೋ ಬ್ರಾಹ್ಮಣಸತ್ತಮಃ||
ಭರದ್ವಾಜನಿಂದ ಇದು ಅಗ್ನಿವೇಶನಿಗೆ ಮತ್ತು ನಂತರ ನನ್ನ ಗುರುವಿಗೆ ಬಂದಿತು. ನಂತರ ಇದನ್ನು ಬ್ರಾಹ್ಮಣಸತ್ತಮ ದ್ರೋಣನು ನನಗೆ ಕೊಟ್ಟನು.””
01158028 ವೈಶಂಪಾಯನ ಉವಾಚ|
01158028a ಇತ್ಯುಕ್ತ್ವಾ ಪಾಂಡವಃ ಕ್ರುದ್ಧೋ ಗಂಧರ್ವಾಯ ಮುಮೋಚ ಹ|
01158028c ಪ್ರದೀಪ್ತಮಸ್ತ್ರಮಾಗ್ನೇಯಂ ದದಾಹಾಸ್ಯ ರಥಂ ತು ತತ್||
ವೈಶಂಪಾಯನನು ಹೇಳಿದನು: “ಕೃದ್ಧ ಪಾಂಡವನು ಹೀಗೆ ಹೇಳಿ ಉರಿಯುತ್ತಿರುವ ಆಗ್ನೇಯಾಸ್ತ್ರವನ್ನು ಗಂಧರ್ವನ ಮೇಲೆ ಬಿಡಲಾಗಿ, ಅದು ಅವನ ರಥವನ್ನು ಸುಟ್ಟುಹಾಕಿತು.
01158029a ವಿರಥಂ ವಿಪ್ಲುತಂ ತಂ ತು ಸ ಗಂಧರ್ವಂ ಮಹಾಬಲಂ|
01158029c ಅಸ್ತ್ರತೇಜಃಪ್ರಮೂಢಂ ಚ ಪ್ರಪತಂತಮವಾಙ್ಮುಖಂ||
01158030a ಶಿರೋರುಹೇಷು ಜಗ್ರಾಹ ಮಾಲ್ಯವತ್ಸು ಧನಂಜಯಃ|
01158030c ಭ್ರಾತೄನ್ಪ್ರತಿ ಚಕರ್ಷಾಥ ಸೋಽಸ್ತ್ರಪಾತಾದಚೇತಸಂ||
ರಥವನ್ನು ಕಳೆದುಕೊಂಡ ಆ ಮಹಾಬಲಿ ಗಂಧರ್ವನು ಅಸ್ತ್ರ ತೇಜಸ್ಸಿನಿಂದ ಮೂರ್ಛೆಹೊಂದಿ ಕೆಳಮುಖನಾಗಿ ಬೂಮಿಯ ಮೇಲೆ ಬಿದ್ದನು. ಆಗ ಧನಂಜಯನು ಅಸ್ತ್ರದ ಹೊಡೆತದಿಂದ ಮೂರ್ಛಿತನಾಗಿದ್ದ ಅವನ ಕೂದಲ ಜಡೆಯನ್ನು ಹಿಡಿದು ತನ್ನ ಸಹೋದರರ ಬಳಿ ಎಳೆತಂದನು.
01158031a ಯುಧಿಷ್ಠಿರಂ ತಸ್ಯ ಭಾರ್ಯಾ ಪ್ರಪೇದೇ ಶರಣಾರ್ಥಿನೀ|
01158031c ನಾಮ್ನಾ ಕುಂಭೀನಸೀ ನಾಮ ಪತಿತ್ರಾಣಮಭೀಪ್ಸತೀ||
ಆಗ ಕುಂಭೀನಸಿ ಎಂಬ ಹೆಸರಿನ ಅವನ ಪತ್ನಿಯು ಪತಿಯ ಜೀವವನ್ನು ಉಳಿಸಬೇಕೆಂದು ಶರಣಾರ್ಥಿಯಾಗಿ ಯುಧಿಷ್ಠಿರನನ್ನು ಕೇಳಿಕೊಂಡಳು.
01158032 ಗಂಧರ್ವ್ಯುವಾಚ|
01158032a ತ್ರಾಹಿ ತ್ವಂ ಮಾಂ ಮಹಾರಾಜ ಪತಿಂ ಚೇಮಂ ವಿಮುಂಚ ಮೇ|
01158032c ಗಂಧರ್ವೀಂ ಶರಣಂ ಪ್ರಾಪ್ತಾಂ ನಾಮ್ನಾ ಕುಂಬೀನಸೀಂ ಪ್ರಭೋ||
ಗಂಧರ್ವಿಯು ಹೇಳಿದಳು: “ಮಹಾರಾಜ! ನನ್ನನ್ನು ಉಳಿಸು ಮತ್ತು ನನ್ನ ಪತಿಯನ್ನು ಬಿಡುಗಡೆಮಾಡು. ಪ್ರಭು! ಕುಂಭೀನಸಿ ಎಂಬ ಹೆಸರಿನ ಗಂಧರ್ವಿಯು ನಿನ್ನ ಶರಣು ಬಂದಿದ್ದಾಳೆ.”
01158033 ಯುಧಿಷ್ಠಿರ ಉವಾಚ|
01158033a ಯುದ್ಧೇ ಜಿತಂ ಯಶೋಹೀನಂ ಸ್ತ್ರೀನಾಥಮಪರಾಕ್ರಮಂ|
01158033c ಕೋ ನು ಹನ್ಯಾದ್ರಿಪುಂ ತ್ವಾದೃಮ್ಮುಂಚೇಮಂ ರಿಪುಸೂದನ||
ಯುಧಿಷ್ಠಿರನು ಹೇಳಿದನು: “ಯುದ್ಧದಲ್ಲಿ ಸೋತು ಯಶೋಹೀನನಾಗಿ ಸ್ತ್ರೀಯಿಂದ ರಕ್ಷಿಸಲ್ಪಟ್ಟ ಅಪರಾಕ್ರಮಿಯನ್ನು ನಿನ್ನಂಥಹ ವೀರನು ಕೊಲ್ಲಬಾರದು. ರಿಪುಸೂದನ! ಅವನನ್ನು ಬಿಟ್ಟುಬಿಡು!”
01158034 ಅರ್ಜುನ ಉವಾಚ|
01158034a ಅಂಗೇಮಂ ಪ್ರತಿಪದ್ಯಸ್ವ ಗಚ್ಛ ಗಂಧರ್ವ ಮಾ ಶುಚಃ|
01158034c ಪ್ರದಿಶತ್ಯಭಯಂ ತೇಽದ್ಯ ಕುರುರಾಜೋ ಯುಧಿಷ್ಠಿರಃ||
ಅರ್ಜುನನು ಹೇಳಿದನು: “ಹಾಗೆಯೇ ಆಗಲಿ. ಅವನಿಗೆ ಜೀವವನ್ನು ನೀಡೋಣ. ಹೋಗು ಗಂಧರ್ವ! ಇನ್ನು ಕಷ್ಟಕ್ಕೊಳಗಾಗಬೇಡ! ಕುರುರಾಜ ಯುಧಿಷ್ಠಿರನು ಇಂದು ನಿನಗೆ ಅಭಯವನ್ನು ನೀಡುತ್ತಿದ್ದಾನೆ.”
01158035 ಗಂಧರ್ವ ಉವಾಚ|
01158035a ಜಿತೋಽಹಂ ಪೂರ್ವಕಂ ನಾಮ ಮುಂಚಾಮ್ಯಂಗಾರಪರ್ಣತಾಂ|
01158035c ನ ಚ ಶ್ಲಾಘೇ ಬಲೇನಾದ್ಯ ನ ನಾಮ್ನಾ ಜನಸಂಸದಿ||
ಗಂಧರ್ವನು ಹೇಳಿದನು: “ಸೋತುಹೋದ ನಾನು ನನ್ನ ಹಿಂದಿನ ಅಂಗಾರಪರ್ಣ ಎನ್ನುವ ಹೆಸರನ್ನು ತೊರೆಯುತ್ತೇನೆ. ಇನ್ನು ಮುಂದೆ ಜನಸಂಸದಿಯಲ್ಲಿ ನನ್ನ ಹೆಸರು ಅಥವಾ ಬಲದಿಂದ ಜಂಬಕೊಚ್ಚಿಕೊಳ್ಳಲು ಸಾಧ್ಯವಿಲ್ಲ.
01158036a ಸಾಧ್ವಿಮಂ ಲಬ್ಧವಾಽಲ್ಲಾಭಂ ಯೋಽಹಂ ದಿವ್ಯಾಸ್ತ್ರಧಾರಿಣಂ|
01158036c ಗಾಂಧರ್ವ್ಯಾ ಮಾಯಯಾ ಯೋದ್ಧುಮಿಚ್ಛಾಮಿ ವಯಸಾ ವರಂ||
ಯುವಕನೊಂದಿಗೆ ನನ್ನ ಗಾಂಧರ್ವ ಮಾಯೆಯಿಂದ ಯುದ್ಧಮಾಡಲು ಬಯಸಿದ ನನಗೆ ದಿವ್ಯಾಸ್ತ್ರಧಾರಿಣಿಯು ದೊರಕಿದ್ದುದು ನನ್ನ ಅದೃಷ್ಟವೇ ಸರಿ.
01158037a ಅಸ್ತ್ರಾಗ್ನಿನಾ ವಿಚಿತ್ರೋಽಯಂ ದಗ್ಧೋ ಮೇ ರಥ ಉತ್ತಮಃ|
01158037c ಸೋಽಹಂ ಚಿತ್ರರಥೋ ಭೂತ್ವಾ ನಾಮ್ನಾ ದಗ್ಧರಥೋಽಭವಂ||
ನನ್ನ ವಿಚಿತ್ರ ಉತ್ತಮ ರಥವು ಅಸ್ತ್ರಾಗ್ನಿಯಿಂದ ಸುಟ್ಟುಹೋಯಿತು. ಚಿತ್ರರಥನೆಂಬ ಹೆಸರನ್ನು ಹೊಂದಿದ್ದ ನಾನು ದಗ್ಧರಥನಾದೆನು!
01158038a ಸಂಭೃತಾ ಚೈವ ವಿದ್ಯೇಯಂ ತಪಸೇಹ ಪುರಾ ಮಯಾ|
01158038c ನಿವೇದಯಿಷ್ಯೇ ತಾಮದ್ಯ ಪ್ರಾಣದಾಯಾ ಮಹಾತ್ಮನೇ||
ಹಿಂದೆ ತಪಸ್ಸಿನಿಂದ ಪಡೆದಿದ್ದ ಈ ಸಂಭೃತ ವಿದ್ಯೆಯನ್ನು ಇಂದು ನನ್ನ ಪ್ರಾಣವನ್ನು ನೀಡಿದ ಮಹಾತ್ಮನಿಗೆ ಕೊಡುತ್ತೇನೆ.
01158039a ಸಂಸ್ತಂಭಿತಂ ಹಿ ತರಸಾ ಜಿತಂ ಶರಣಮಾಗತಂ|
01158039c ಯೋಽರಿಂ ಸಂಯೋಜಯೇತ್ಪ್ರಾಣೈಃ ಕಲ್ಯಾಣಂ ಕಿಂ ನ ಸೋಽರ್ಹತಿ||
ಶತ್ರುವನ್ನು ತನ್ನ ಬಲದಿಂದ ಮೂರ್ಛೆಗೊಳಿಸಿ, ನಂತರ ಅವನು ಶರಣಾಗತನಾದಾಗ ಪ್ರಾಣವನ್ನಿತ್ತವನಿಗೆ ಇದಕ್ಕಿಂತಲೂ ಕಲ್ಯಾಣಕರ ಉಡುಗೊರೆಯು ಬೇರೆ ಏನಿದೆ?
01158040a ಚಕ್ಷುಷೀ ನಾಮ ವಿದ್ಯೇಯಂ ಯಾಂ ಸೋಮಾಯ ದದೌ ಮನುಃ|
01158040c ದದೌ ಸ ವಿಶ್ವಾವಸವೇ ಮಹ್ಯಂ ವಿಶ್ವಾವಸುರ್ದದೌ||
ಚಕ್ಷುಷೀ ಎಂಬ ಹೆಸರಿನ ಈ ವಿದ್ಯೆಯನ್ನು ಮನುವು ಸೋಮನಿಗೆ ಕೊಟ್ಟನು ಮತ್ತು ಅವನು ವಿಶ್ವಾವಸುವಿಗೆ ಕೊಟ್ಟನು. ವಿಶ್ವಾವಸುವು ನನಗೆ ಕೊಟ್ಟನು.
01158041a ಸೇಯಂ ಕಾಪುರುಷಂ ಪ್ರಾಪ್ತಾ ಗುರುದತ್ತಾ ಪ್ರಣಶ್ಯತಿ|
01158041c ಆಗಮೋಽಸ್ಯಾ ಮಯಾ ಪ್ರೋಕ್ತೋ ವೀರ್ಯಂ ಪ್ರತಿನಿಬೋಧ ಮೇ||
ಗುರುದತ್ತವಾದ ಇದನ್ನು ಕಾಪುರುಷನಿಗೆ ಕೊಟ್ಟರೆ ಅದು ನಾಶವಾಗುತ್ತದೆ. ಇದರ ಆಗಮವನ್ನು ನಾನು ಹೇಳಿದ್ದೇನೆ. ವೀರ! ಇದನ್ನು ನನ್ನಿಂದ ಪಡೆದುಕೋ.
01158042a ಯಚ್ಚಕ್ಷುಷಾ ದ್ರಷ್ಟುಮಿಚ್ಛೇತ್ತ್ರಿಷು ಲೋಕೇಷು ಕಿಂ ಚನ|
01158042c ತತ್ಪಶ್ಯೇದ್ಯಾದೃಶಂ ಚೇಚ್ಛೇತ್ತಾದೃಷಂ ದ್ರಷ್ಟುಮರ್ಹತಿ||
ಮೂರೂ ಲೋಕಗಳಲ್ಲಿ ಯಾವುದನ್ನು ನೋಡಲು ಬಯಸುತ್ತೇವೋ ಅದನ್ನು ಈ ಚಕ್ಷುಷಿಯಿಂದ ನೋಡಬಹುದು ಮತ್ತು ಅದನ್ನು ಯಾವರೀತಿಯಲ್ಲಿ ನೋಡಲು ಬಯಸುತ್ತೇವೋ ಆ ರೀತಿಯಲ್ಲಿ ನೋಡಬಹುದು.
01158043a ಸಮಾನಪದ್ಯೇ ಷಣ್ಮಾಸಾನ್ ಸ್ಥಿತೋ ವಿದ್ಯಾಂ ಲಭೇದಿಮಾಂ|
01158043c ಅನುನೇಷ್ಯಾಮ್ಯಹಂ ವಿದ್ಯಾಂ ಸ್ವಯಂ ತುಭ್ಯಂ ವ್ರತೇ ಕೃತೇ||
ಈ ವಿದ್ಯೆಯನ್ನು ಆರು ತಿಂಗಳುಗಳು ಒಂದೇ ಕಾಲಿನ ಮೇಲೆ ನಿಂತು ಪಡೆಯಬಹುದು. ಆದರೆ ಸ್ವಯಂ ನಾನು ಇದನ್ನು ಮಾತು ಕೊಟ್ಟಹಾಗೆ ನಿನಗೆ ನೀಡುತ್ತೇನೆ.
01158044a ವಿದ್ಯಯಾ ಹ್ಯನಯಾ ರಾಜನ್ವಯಂ ನೃಭ್ಯೋ ವಿಶೇಷಿತಾಃ|
01158044c ಅವಿಶಿಷ್ಟಾಶ್ಚ ದೇವಾನಾಮನುಭಾವಪ್ರವರ್ತಿತಾಃ||
ರಾಜನ್! ಈ ವಿದ್ಯೆಯಿಂದಲೇ ನಾವು ನರರಿಗಿಂಥ ಶ್ರೇಷ್ಠರಾಗಿದ್ದೇವೆ ಮತ್ತು ಇದರ ವಿಶೇಷತೆಯಿಂದಲೇ ನಾವು ದೇವತೆಗಳಿಗಿಂತ ಭಿನ್ನರಾಗಿಲ್ಲ.
01158045a ಗಂಧರ್ವಜಾನಾಮಶ್ವಾನಾಮಹಂ ಪುರುಷಸತ್ತಮ|
01158045c ಭ್ರಾತೃಭ್ಯಸ್ತವ ಪಂಚಭ್ಯಃ ಪೃಥಗ್ದಾತಾ ಶತಂ ಶತಂ||
ಪುರುಷಸತ್ತಮ! ನೀವು ಐವರು ಭ್ರಾತೃಗಳಿಗೂ ತಲಾ ನೂರು ನೂರು ಗಂಧರ್ವರಿಂದ ಬೆಳೆಸಿದ ಅಶ್ವಗಳನ್ನು ಕೊಡುತ್ತೇನೆ.
01158046a ದೇವಗಂಧರ್ವವಾಹಾಸ್ತೇ ದಿವ್ಯಗಂಧಾ ಮನೋಗಮಾಃ|
01158046c ಕ್ಷೀಣಾಃ ಕ್ಷೀಣಾ ಭವಂತ್ಯೇತೇ ನ ಹೀಯಂತೇ ಚ ರಂಹಸಃ||
ದಿವ್ಯಗಂಧವನ್ನು ಹೊಂದಿದ ಈ ಮನೋಗಾಮಿಗಳು ದೇವತೆಗಳು ಮತ್ತು ಗಂಧರ್ವರ ವಾಹನಗಳು. ಇವು ಎಷ್ಟೇ ಕ್ಷೀಣರಾದರೂ ಅವರ ವೇಗವು ಕಡಿಮೆಯಾಗುವುದಿಲ್ಲ.
01158047a ಪುರಾ ಕೃತಂ ಮಹೇಂದ್ರಸ್ಯ ವಜ್ರಂ ವೃತ್ರನಿಬರ್ಹಣೇ|
01158047c ದಶಧಾ ಶತಧಾ ಚೈವ ತಚ್ಚೀರ್ಣಂ ವೃತ್ರಮೂರ್ಧನಿ||
ಹಿಂದೆ ವೃತ್ರನನ್ನು ಕೊಲ್ಲಲು ಮಹೇಂದ್ರನ ವಜ್ರವನ್ನು ಮಾಡಲಾಗಿತ್ತು. ಆದರೆ ಅದು ವೃತ್ರನ ತಲೆಯ ಮೇಲೆ ಹೊಡೆದಾಗ ಹತ್ತು ಮತ್ತು ನೂರು ಚೂರುಗಳಾಗಿ ಒಡೆದವು.
01158048a ತತೋ ಭಾಗೀಕೃತೋ ದೇವೈರ್ವಜ್ರಭಾಗ ಉಪಾಸ್ಯತೇ|
01158048c ಲೋಕೇ ಯತ್ಸಾಧನಂ ಕಿಂ ಚಿತ್ಸಾ ವೈ ವಜ್ರತನುಃ ಸ್ಮೃತಾ||
ಅಂದಿನಿಂದ ದೇವತೆಗಳು ವಜ್ರಭಾಗಗಳನ್ನು ಹಂಚಿಕೊಂಡು ಅವುಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಲೋಕದಲ್ಲಿ ಯಶಸ್ವಿಯಾಗಿರುವುದೆಲ್ಲವೂ ವಜ್ರತನುವೆಂದು ಹೇಳುತ್ತಾರೆ.
01158049a ವಜ್ರಪಾಣಿರ್ಬ್ರಾಹ್ಮಣಃ ಸ್ಯಾತ್ ಕ್ಷತ್ರಂ ವಜ್ರರಥಂ ಸ್ಮೃತಂ|
01158049c ವೈಶ್ಯಾ ವೈ ದಾನವಜ್ರಾಶ್ಚ ಕರ್ಮವಜ್ರಾ ಯವೀಯಸಃ||
ಬ್ರಾಹ್ಮಣನು ವಜ್ರಪಾಣಿಯೆಂದೂ, ಕ್ಷತ್ರಿಯನು ವಜ್ರರಥಿಯೆಂದೂ ವೈಶ್ಯನು ವಜ್ರದಾನಿಯೆಂದೂ ಮತ್ತು ಇನ್ನೂ ಕೆಳಗಿನವರು ವಜ್ರಕರ್ಮಿಗಳೆಂದೂ ಕರೆಯಲ್ಪಟ್ಟಿದ್ದಾರೆ.
01158050a ವಜ್ರಂ ಕ್ಷತ್ರಸ್ಯ ವಾಜಿನೋ ಅವಧ್ಯಾ ವಾಜಿನಃ ಸ್ಮೃತಾಃ|
01158050c ರಥಾಂಗಂ ವಡವಾ ಸೂತೇ ಸೂತಾಶ್ಚಾಶ್ವೇಷು ಯೇ ಮತಾಃ||
ಕುದುರೆಗಳೇ ಕ್ಷತ್ರಿಯನ ವಜ್ರ ಮತ್ತು ಕುದುರೆಗಳು ಅವಧ್ಯ ಎಂದು ಹೇಳುತ್ತಾರೆ. ವಡವನು ರಥಾಂಗ ಕುದುರೆಗಳಿಗೆ ಜನ್ಮವಿತ್ತನು. ಆದುದರಿಂದ ಕುದುರೆಗಳನ್ನು ಓಡಿಸುವವರಿಗೆ ಸೂತ ಎನ್ನುವ ಹೆಸರು ಬಂದಿತು.
01158051a ಕಾಮವರ್ಣಾಃ ಕಾಮಜವಾಃ ಕಾಮತಃ ಸಮುಪಸ್ಥಿತಾಃ|
01158051c ಇಮೇ ಗಂಧರ್ವಜಾಃ ಕಾಮಂ ಪೂರಯಿಷ್ಯಂತಿ ತೇ ಹಯಾಃ||
ಗಂಧರ್ವರಲ್ಲಿ ಹುಟ್ಟಿ ಬೆಳೆದ ಈ ಕುದುರೆಗಳು ಬೇಕಾದ ಬಣ್ಣವನ್ನು ಪಡೆಯಬಹುದು, ಬೇಕಾದಷ್ಟು ವೇಗದಲ್ಲಿ ಹೋಗಬಹುದು, ಯಾವುದೇ ಆಸೆಗಳನ್ನಿಟ್ಟುಕೊಂಡೂ ಅವುಗಳ ಬಳಿ ಹೋಗಬಹುದು ಮತ್ತು ಯಾವುದೇ ಬಯಕೆಯಗಳನ್ನೂ ಪೂರೈಸಬಲ್ಲವು.”
01158052 ಅರ್ಜುನ ಉವಾಚ|
01158052a ಯದಿ ಪ್ರೀತೇನ ವಾ ದತ್ತಂ ಸಂಶಯೇ ಜೀವಿತಸ್ಯ ವಾ|
01158052c ವಿದ್ಯಾ ವಿತ್ತಂ ಶ್ರುತಂ ವಾಪಿ ನ ತದ್ಗಂಧರ್ವ ಕಾಮಯೇ||
ಅರ್ಜುನನು ಹೇಳಿದನು: “ಗಂಧರ್ವ! ನಿನ್ನ ಜೀವವನ್ನು ಪುನಃ ಪಡೆದೆಯೆನ್ನುವ ಪ್ರೀತಿಯಿಂದ ಅಥವಾ ಸಂಶಯದಿಂದ ನಿನ್ನ ಈ ವಿದ್ಯೆಯನ್ನು ಅಥವಾ ಸಂಪತ್ತನ್ನು ನಮಗೆ ಕೊಡುವುದಾದರೆ ಅವು ನಮಗೆ ಬೇಡ!”
01158053 ಗಂಧರ್ವ ಉವಾಚ|
01158053a ಸಂಯೋಗೋ ವೈ ಪ್ರೀತಿಕರಃ ಸಂಸತ್ಸು ಪ್ರತಿದೃಶ್ಯತೇ|
01158053c ಜೀವಿತಸ್ಯ ಪ್ರದಾನೇನ ಪ್ರೀತೋ ವಿದ್ಯಾಂ ದದಾಮಿ ತೇ||
ಗಂಧರ್ವನು ಹೇಳಿದನು: “ಹೋರಾಟದಲ್ಲಿ ಮಾಡಿದ ಸ್ನೇಹವು ಸಂತೋಷವನ್ನು ನೀಡುತ್ತದೆ. ನನ್ನ ಜೀವ ಪ್ರದಾನದಿಂದ ಸಂತುಷ್ಟನಾಗಿ ನಾನು ನಿನಗೆ ಈ ವಿದ್ಯೆಯನ್ನು ಕೊಡುತ್ತಿದ್ದೇನೆ.
01158054a ತ್ವತ್ತೋ ಹ್ಯಹಂ ಗ್ರಹೀಷ್ಯಾಮಿ ಅಸ್ತ್ರಮಾಗ್ನೇಯಮುತ್ತಮಂ|
01158054c ತಥೈವ ಸಖ್ಯಂ ಬೀಭತ್ಸೋ ಚಿರಾಯ ಭರತರ್ಷಭ||
ಬೀಭತ್ಸು! ಭರತರ್ಷಭ! ನಿನ್ನಿಂದ ನಾನು ಉತ್ತಮ ಆಗ್ನೇಯಾಸ್ತ್ರವನ್ನು ಸ್ವೀಕರಿಸುತ್ತೇನೆ. ಹೀಗೆ ನಮ್ಮ ಸಖ್ಯವು ಚಿರವಾಗಿರಲಿ.”
01158055 ಅರ್ಜುನ ಉವಾಚ|
01158055a ತ್ವತ್ತೋಽಸ್ತ್ರೇಣ ವೃಣೋಮ್ಯಶ್ವಾನ್ಸಂಯೋಗಃ ಶಾಶ್ವತೋಽಸ್ತು ನೌ|
01158055c ಸಖೇ ತದ್ಬ್ರೂಹಿ ಗಂಧರ್ವ ಯುಷ್ಮಭ್ಯೋ ಯದ್ಭಯಂ ತ್ಯಜೇತ್||
ಅರ್ಜುನನು ಹೇಳಿದನು: “ಅಸ್ತ್ರಕ್ಕೆ ಬದಲಾಗಿ ನಿನ್ನಿಂದ ಅಶ್ವಗಳನ್ನು ಸ್ವೀಕರಿಸುತ್ತೇನೆ ಮತ್ತು ನಮ್ಮ ಈ ಸಂಯೋಗವು ಶಾಶ್ವತವಾಗಿರಲಿ. ಸಖ! ಗಂಧರ್ವ! ನಿಮ್ಮಂಥವರ ಭಯವನ್ನು ಹೇಗೆ ಹೋಗಲಾಡಿಸಬಹುದು ಎನ್ನುವುದನ್ನು ಹೇಳು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಗಂಧರ್ವಪರಾಭವೇ ಅಷ್ಟಪಂಚಾಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಗಂಧರ್ವಪರಾಭವದಲ್ಲಿ ನೂರಾಐವತ್ತೆಂಟನೆಯ ಅಧ್ಯಾಯವು.