Adi Parva: Chapter 147

ಆದಿ ಪರ್ವ: ಬಕವಧ ಪರ್ವ

೧೪೭

ಬ್ರಾಹ್ಮಣನ ಮಗಳು ತಾನೇ ಸಾಯುವುದು ಲೇಸೆಂದು ಹೇಳುವುದು (೧-೨೩).

01147001 ವೈಶಂಪಾಯನ ಉವಾಚ|

01147001a ತಯೋರ್ದುಃಖಿತಯೋರ್ವಾಕ್ಯಮತಿಮಾತ್ರಂ ನಿಶಮ್ಯ ತತ್|

01147001c ಭೃಶಂ ದುಃಖಪರೀತಾಂಗೀ ಕನ್ಯಾ ತಾವಭ್ಯಭಾಷತ||

ವೈಶಂಪಾಯನನು ಹೇಳಿದನು: “ದುಃಖಿತರಾಗಿದ್ದ ಅವರ ಆ ಮಾತುಗಳನ್ನು ಕೇಳಿದ ಮಗಳು ದುಃಖಪರಿತಾಂಗಿಯಾಗಿ ಈ ಮಾತುಗಳನ್ನು ಹೇಳಿದಳು:

01147002a ಕಿಮಿದಂ ಭೃಶದುಃಖಾರ್ತೌ ರೋರವೀಥೋ ಅನಾಥವತ್|

01147002c ಮಮಾಪಿ ಶ್ರೂಯತಾಂ ಕಿಂ ಚಿಚ್ಛೃತ್ವಾ ಚ ಕ್ರಿಯತಾಂ ಕ್ಷಮಂ||

“ಅತ್ಯಂತ ದುಃಖಾರ್ತರಾಗಿ ಅನಾಥರಂತೆ ಈ ರೀತಿ ಏಕೆ ಅಳುತ್ತಿರುವಿರಿ? ನನ್ನ ಮಾತುಗಳನ್ನೂ ಸ್ವಲ್ಪ ಕೇಳಿ. ನಂತರ ಸರಿಯೆನಿಸಿದುದನ್ನು ಮಾಡುವಿರಂತೆ.

01147003a ಧರ್ಮತೋಽಹಂ ಪರಿತ್ಯಾಜ್ಯಾ ಯುವಯೋರ್ನಾತ್ರ ಸಂಶಯಃ|

01147003c ತ್ಯಕ್ತವ್ಯಾಂ ಮಾಂ ಪರಿತ್ಯಜ್ಯ ತ್ರಾತಂ ಸರ್ವಂ ಮಯೈಕಯಾ||

ಧರ್ಮದ ಪ್ರಕಾರ ಯೌವನಕ್ಕೆ ಬಂದನಂತರ ನನ್ನನ್ನು ನೀವು ಪರಿತ್ಯಜಿಸಲೇ ಬೇಕು. ಇದರಲ್ಲಿ ಸಂಶಯವಿಲ್ಲ. ಪರಿತ್ಯಜಿಸಲೇ ಬೇಕಾದ ನನ್ನನ್ನು ಈಗಲೇ ಪರಿತ್ಯಜಿಸಿ ನನ್ನೊಬ್ಬಳಿಂದ ನೀವು ಮೂವರೂ ಉಳಿದುಕೊಳ್ಳಿ.

01147004a ಇತ್ಯರ್ಥಮಿಷ್ಯತೇಽಪತ್ಯಂ ತಾರಯಿಷ್ಯತಿ ಮಾಮಿತಿ|

01147004c ತಸ್ಮಿನ್ನುಪಸ್ಥಿತೇ ಕಾಲೇ ತರತಂ ಪ್ಲವವನ್ಮಯಾ||

ಮಕ್ಕಳು ನಮ್ಮನ್ನು ಪಾರುಮಾಡುತ್ತಾರೆ ಎನ್ನುವ ಉದ್ದೇಶದಿಂದಲೇ ಮಕ್ಕಳನ್ನು ಬಯಸುತ್ತಾರೆ. ಅಂತಹ ಕಾಲವು ಬಂದಿರುವಾಗ ನನ್ನನ್ನು ದೋಣಿಯನ್ನಾಗಿಸಿ ಪಾರುಮಾಡಿ.

01147005a ಇಹ ವಾ ತಾರಯೇದ್ದುರ್ಗಾದುತ ವಾ ಪ್ರೇತ್ಯ ತಾರಯೇತ್|

01147005c ಸರ್ವಥಾ ತಾರಯೇತ್ಪುತ್ರಃ ಪುತ್ರ ಇತ್ಯುಚ್ಯತೇ ಬುಧೈಃ||

ಪುತ್ರನು ಎಲ್ಲ ರೀತಿಯಲ್ಲೂ ಪಾರುಮಾಡುತ್ತಾನೆ - ಇಲ್ಲಿ ಈ ಜೀವನದಲ್ಲಿ ಆಪತ್ತಿನಿಂದ ಪಾರು ಮಾಡುತ್ತಾನೆ ಅಥವಾ ಮರಣದ ನಂತರ ಆತ್ಮವನ್ನು ಪಾರುಮಾಡುತ್ತಾನೆ. ಆದುದರಿಂದಲೇ ತಿಳಿದವರು ಅವನಿಗೆ ಪುತ್ರ ಎಂದು ಕರೆಯುತ್ತಾರೆ.

01147006a ಆಕಾಂಕ್ಷಂತೇ ಚ ದೌಹಿತ್ರಾನಪಿ ನಿತ್ಯಂ ಪಿತಾಮಹಾಃ|

01147006c ತಾನ್ಸ್ವಯಂ ವೈ ಪರಿತ್ರಾಸ್ಯೇ ರಕ್ಷಂತೀ ಜೀವಿತಂ ಪಿತುಃ||

ಪಿತಾಮಹರು ನಿತ್ಯ ಮಗಳ ಮಕ್ಕಳನ್ನೂ ಸಹ ಬಯಸುತ್ತಾರೆ. ನನ್ನ ತಂದೆಯ ಜೀವವನ್ನು ಉಳಿಸಿ ನಾನು ಅವರನ್ನೂ ಸಹ ಪಾರುಮಾಡುತ್ತೇನೆ.

01147007a ಭ್ರಾತಾ ಚ ಮಮ ಬಾಲೋಽಯಂ ಗತೇ ಲೋಕಮಮುಂ ತ್ವಯಿ|

01147007c ಅಚಿರೇಣೈವ ಕಾಲೇನ ವಿನಶ್ಯೇತ ನ ಸಂಶಯಃ||

ನೀನು ಈ ಲೋಕದಿಂದ ಹೊರಟು ಹೋದರೆ ಈ ನನ್ನ ಬಾಲಕ ತಮ್ಮನು ಸ್ವಲ್ಪ ಸಮಯದಲ್ಲಿಯೇ ನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

01147008a ತಾತೇಽಪಿ ಹಿ ಗತೇ ಸ್ವರ್ಗಂ ವಿನಷ್ಟೇ ಚ ಮಮಾನುಜೇ|

01147008c ಪಿಂಡಃ ಪಿತೄಣಾಂ ವ್ಯುಚ್ಛಿದ್ಯೇತ್ತತ್ತೇಷಾಮಪ್ರಿಯಂ ಭವೇತ್||

ತಂದೆಯೂ ಸ್ವರ್ಗವಾಸಿಯಾಗಿ, ನನ್ನ ತಮ್ಮನೂ ನಾಶವಾಗಿ ಪಿತೃಗಳ ಪಿಂಡವು ನಿಂತುಹೋದರೆ ಅವರಿಗೆ ಒಳ್ಳೆಯದಾಗುವುದಿಲ್ಲ.

01147009a ಪಿತ್ರಾ ತ್ಯಕ್ತಾ ತಥಾ ಮಾತ್ರಾ ಭ್ರಾತ್ರಾ ಚಾಹಮಸಂಶಯಂ|

01147009c ದುಃಖಾದ್ದುಃಖತರಂ ಪ್ರಾಪ್ಯ ಮ್ರಿಯೇಯಮತಥೋಚಿತಾ||

ತಂದೆ, ತಾಯಿ, ಹಾಗೂ ತಮ್ಮನಿಂದ ತ್ಯಕ್ತಳಾದ ನಾನಾದರೂ ದುಃಖದಿಂದ ಅತಿದುಃಖವನ್ನು ಹೊಂದಿ ನಾಶವಾಗುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಹೀಗಾಗುವುದು ಸರಿಯೆಂದು ನನಗೆ ಕಾಣುವುದಿಲ್ಲ.

01147010a ತ್ವಯಿ ತ್ವರೋಗೇ ನಿರ್ಮುಕ್ತೇ ಮಾತಾ ಭ್ರಾತಾ ಚ ಮೇ ಶಿಶುಃ|

01147010c ಸಂತಾನಶ್ಚೈವ ಪಿಂಡಶ್ಚ ಪ್ರತಿಷ್ಠಾಸ್ಯತ್ಯಸಂಶಯಂ||

ನೀನೊಬ್ಬನು ಆರೋಗ್ಯದಿಂದ ಬಿಡುಗಡೆಯಾದೆಯೆಂದರೆ ನನ್ನ ತಾಯಿ, ಇನ್ನೂ ಬಾಲಕನಾಗಿರುವ ನನ್ನ ತಮ್ಮ, ವಂಶ, ಪಿಂಡ ಎಲ್ಲವೂ ನಿಸ್ಸಂಶಯವಾಗಿ ನೆಲೆಗೊಳ್ಳುವವು.

01147011a ಆತ್ಮಾ ಪುತ್ರಃ ಸಖಾ ಭಾರ್ಯಾ ಕೃಚ್ಛ್ರಂತು ದುಹಿತಾ ಕಿಲ|

01147011c ಸ ಕೃಚ್ಛ್ರಾನ್ಮೋಚಯಾತ್ಮಾನಂ ಮಾಂ ಚ ಧರ್ಮೇಣ ಯೋಜಯ||

ಪುತ್ರನು ಆತ್ಮ, ಭಾರ್ಯೆಯು ಸಖಿ ಮತ್ತು ಮಗಳು ಆಪತ್ತು ಎನ್ನುವುದಿಲ್ಲವೇ? ನಿನ್ನ ಈ ಆಪತ್ತಿನಿಂದ ಪಾರಾಗು ಮತ್ತು ನನ್ನನ್ನು ಧರ್ಮದೊಡನೆ ಜೋಡಿಸು.

01147012a ಅನಾಥಾ ಕೃಪಣಾ ಬಾಲಾ ಯತ್ರಕ್ವಚನಗಾಮಿನೀ|

01147012c ಭವಿಷ್ಯಾಮಿ ತ್ವಯಾ ತಾತ ವಿಹೀನಾ ಕೃಪಣಾ ಬತ||

ತಂದೇ! ಬಾಲೆಯಾದ ನಾನು ನೀನಿಲ್ಲದೇ ಅನಾಥಳೂ, ಕರುಣಾಸ್ಪದಳೂ ಆಗಿ ಎಲ್ಲೆಲ್ಲಿಯೋ ತಿರುಗಾಡಬೇಕಾಗಿ ದೀನಳಾಗುವೆ.

01147013a ಅಥವಾಹಂ ಕರಿಷ್ಯಾಮಿ ಕುಲಸ್ಯಾಸ್ಯ ವಿಮೋಕ್ಷಣಂ|

01147013c ಫಲಸಂಸ್ಥಾ ಭವಿಷ್ಯಾಮಿ ಕೃತ್ವಾ ಕರ್ಮ ಸುದುಷ್ಕರಂ||

01147014a ಅಥವಾ ಯಾಸ್ಯಸೇ ತತ್ರ ತ್ಯಕ್ತ್ವಾ ಮಾಂ ದ್ವಿಜಸತ್ತಮ|

01147014c ಪೀಡಿತಾಹಂ ಭವಿಷ್ಯಾಮಿ ತದವೇಕ್ಷಸ್ವ ಮಾಮಪಿ||

ನಾನು ಕುಲವನ್ನು ಈ ಕಷ್ಟದಿಂದ ಪಾರುಮಾಡಿ ಬಹಳ ದುಷ್ಕರ ಕಾರ್ಯವನ್ನು ಮಾಡಿದ ಫಲವನ್ನು ಅನುಭವಿಸುತ್ತೇನೆ. ಅಥವಾ ದ್ವಿಜಸತ್ತಮ! ನನ್ನನ್ನು ಬಿಟ್ಟು ನೀನು ಅವನಲ್ಲಿಗೆ ಹೋದರೆ ನಾನು ವಿಪತ್ತಿಗೊಳಗಾಗುವೆನು. ನನ್ನ ಕುರಿತೂ ಯೋಚಿಸು.

01147015a ತದಸ್ಮದರ್ಥಂ ಧರ್ಮಾರ್ಥಂ ಪ್ರಸವಾರ್ಥಂ ಚ ಸತ್ತಮ|

01147015c ಆತ್ಮಾನಂ ಪರಿರಕ್ಷಸ್ವ ತ್ಯಕ್ತವ್ಯಾಂ ಮಾಂ ಚ ಸಂತ್ಯಜ||

ಆದುದರಿಂದ ಸತ್ತಮ! ನಮಗಾಗಿ, ಧರ್ಮಕ್ಕಾಗಿ, ಮತ್ತು ಸಂತಾನಕ್ಕಾಗಿ ನಿನ್ನನ್ನು ನೀನು ಪರಿರಕ್ಷಿಸು. ತ್ಯಕ್ತವ್ಯಳಾದ ನನ್ನನ್ನು ಪರಿತ್ಯಜಿಸು.

01147016a ಅವಶ್ಯಕರಣೀಯೇಽರ್ಥೇ ಮಾ ತ್ವಾಂ ಕಾಲೋಽತ್ಯಗಾದಯಂ|

01147016c ತ್ವಯಾ ದತ್ತೇನ ತೋಯೇನ ಭವಿಷ್ಯತಿ ಹಿತಂ ಚ ಮೇ||

ಅವಶ್ಯಕ ಕಾರ್ಯವನ್ನು ಕೈಗೊಳ್ಳುವುದರಲ್ಲಿ ವಿಳಂಬ ಮಾಡಬೇಡ. ನೀನು ನನಗೆ ಕೊಡುವ ತರ್ಪಣವೇ ನನಗೆ ಹಿತವನ್ನು ತರುತ್ತದೆ.

01147017a ಕಿಂ ನ್ವತಃ ಪರಮಂ ದುಃಖಂ ಯದ್ವಯಂ ಸ್ವರ್ಗತೇ ತ್ವಯಿ|

01147017c ಯಾಚಮಾನಾಃ ಪರಾದನ್ನಂ ಪರಿಧಾವೇಮಹಿ ಶ್ವವತ್||

ನೀನು ಸ್ವರ್ಗಸ್ಥನಾಗಿ ನಾವು ಬೇರೆಯವರಿಂದ ಅನ್ನವನ್ನು ಬೇಡುತ್ತಾ ನಾಯಿಗಳಂತೆ ಅಲೆಯುವುದಕ್ಕಿಂತ ಹೆಚ್ಚಿನ ದುಃಖವಾದರೂ ಏನಿದೆ?

01147018a ತ್ವಯಿ ತ್ವರೋಗೇ ನಿರ್ಮುಕ್ತೇ ಕ್ಲೇಶಾದಸ್ಮಾತ್ಸಬಾಂಧವೇ|

01147018c ಅಮೃತೇ ವಸತೀ ಲೋಕೇ ಭವಿಷ್ಯಾಮಿ ಸುಖಾನ್ವಿತಾ||

ಈ ಕಷ್ಟದಿಂದ ಬಂಧುಗಳ ಸಮೇತ ನೀನು ಆರೋಗ್ಯವಾಗಿ ನಿರ್ಮುಕ್ತನಾದೆಯೆಂದರೆ ಅಮೃತಲೋಕದಲ್ಲಿ ವಾಸಿಸುವ ನಾನೂ ಸುಖದಿಂದಿರುವೆ.”

01147019a ಏವಂ ಬಹುವಿಧಂ ತಸ್ಯಾ ನಿಶಮ್ಯ ಪರಿದೇವಿತಂ|

01147019c ಪಿತಾ ಮಾತಾ ಚ ಸಾ ಚೈವ ಕನ್ಯಾ ಪ್ರರುರುದುಸ್ತ್ರಯಃ||

ಈ ರೀತಿಯ ಬಹುವಿಧ ಪರಿವೇದನೆಯನ್ನು ನೋಡಿದ ತಂದೆ, ತಾಯಿ ಮತ್ತು ಆ ಕನ್ಯೆ ಮೂವರೂ ಬಹಳ ರೋದಿಸಿದರು.

01147020a ತತಃ ಪ್ರರುದಿತಾನ್ಸರ್ವಾನ್ನಿಶಮ್ಯಾಥ ಸುತಸ್ತಯೋಃ|

01147020c ಉತ್ಫುಲ್ಲನಯನೋ ಬಾಲಃ ಕಲಮವ್ಯಕ್ತಮಬ್ರವೀತ್||

ಅವರೆಲ್ಲರೂ ರೋದಿಸುತ್ತಿರುವುದನ್ನು ನೋಡಿದ ಅವರ ಬಾಲಕ ಮಗನು ಕಣ್ಣುಗಳನ್ನು ಅಗಲವಾಗಿ ತೆರೆದು ತೊದಲು ನುಡಿಗಳಿಂದ ಈ ಮುದ್ದು ಮಾತುಗಳನ್ನಾಡಿದನು:

01147021a ಮಾ ರೋದೀಸ್ತಾತ ಮಾ ಮಾತರ್ಮಾ ಸ್ವಸಸ್ತ್ವಮಿತಿ ಬ್ರುವನ್|

01147021c ಪ್ರಹಸನ್ನಿವ ಸರ್ವಾಂಸ್ತಾನೇಕೈಕಂ ಸೋಽಪಸರ್ಪತಿ||

ಮುಗುಳ್ನಗೆಯಿಂದ “ಅಳಬೇಡ ಅಪ್ಪಾ! ಅಳಬೇಡ ಅಮ್ಮಾ! ಅಳಬೇಡ ಅಕ್ಕಾ!” ಎನ್ನುತ್ತಾ ಪ್ರತಿಯೊಬ್ಬರ ಬಳಿಯೂ ಅಂಬೆಗಾಲಿಡುತ್ತಾ ಹೋದನು.

01147022a ತತಃ ಸ ತೃಣಮಾದಾಯ ಪ್ರಹೃಷ್ಟಃ ಪುನರಬ್ರವೀತ್|

01147022c ಅನೇನ ತಂ ಹನಿಷ್ಯಾಮಿ ರಾಕ್ಷಸಂ ಪುರುಷಾದಕಂ||

ಆಗ ಅವನು ಒಂದು ಹುಲ್ಲುಕಡ್ಡಿಯನ್ನು ಹಿಡಿದು ಸಂತೋಷದಿಂದ ಹೇಳಿದನು: “ಇದರಿಂದ ಆ ನರಭಕ್ಷಕ ರಾಕ್ಷಸನನ್ನು ಸಂಹರಿಸುತ್ತೇನೆ!”

01147023a ತಥಾಪಿ ತೇಷಾಂ ದುಃಖೇನ ಪರೀತಾನಾಂ ನಿಶಮ್ಯ ತತ್|

01147023c ಬಾಲಸ್ಯ ವಾಕ್ಯಮವ್ಯಕ್ತಂ ಹರ್ಷಃ ಸಮಭವನ್ಮಹಾನ್||

ದುಃಖದಿಂದ ಆವೃತರಾಗಿದ್ದರೂ ಸಹ ಆ ಬಾಲಕನ ತೊದಲು ಮಾತುಗಳನ್ನು ಕೇಳಿದ ಅವರಿಗೆ ಮಹಾ ಹರ್ಷವಾಯಿತು.

01147024a ಅಯಂ ಕಾಲ ಇತಿ ಜ್ಞಾತ್ವಾ ಕುಂತೀ ಸಮುಪಸೃತ್ಯ ತಾನ್|

01147024c ಗತಾಸೂನಮೃತೇನೇವ ಜೀವಯಂತೀದಮಬ್ರವೀತ್||

ಇದೇ ಸರಿಯಾದ ಸಮಯವೆಂದು ತಿಳಿದು ಕುಂತಿಯು ಅವರನ್ನು ಸಮೀಪಿಸಿ ಸತ್ತವರನ್ನು ಬದುಕಿಸಬಲ್ಲ ಅಮೃತದಂತಿರುವ ಈ ಮಾತುಗಳನ್ನಾಡಿದಳು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುಃಸಪ್ತಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೇಳನೆಯ ಅಧ್ಯಾಯವು.

Related image

Comments are closed.