Adi Parva: Chapter 144

ಆದಿ ಪರ್ವ: ಹಿಡಿಂಬವಧ ಪರ್ವ

೧೪೪

ಪಾಂಡವರು ತಾಪಸಿ ವೇಷಗಳನ್ನು ಧರಿಸಿ ಅಲೆದಾಡುತ್ತಿರುವಾಗ ವ್ಯಾಸನನ್ನು ಭೇಟಿಯಾದುದು (೧-೬). ಅವರನ್ನು ಏಕಚಕ್ರನಗರದಲ್ಲಿ ಬ್ರಾಹ್ಮಣನೋರ್ವನ ಮನೆಯಲ್ಲಿರಿಸಿ ವ್ಯಾಸನು ಮರಳಿದುದು (೭-೨೦).

01144001 ವೈಶಂಪಾಯನ ಉವಾಚ|

01144001a ತೇ ವನೇನ ವನಂ ವೀರಾ ಘ್ನಂತೋ ಮೃಗಗಣಾನ್ಬಹೂನ್|

01144001c ಅಪಕ್ರಮ್ಯ ಯಯೂ ರಾಜಂಸ್ತ್ವರಮಾಣಾ ಮಹಾರಥಾಃ||

ವೈಶಂಪಾಯನನು ಹೇಳಿದನು: “ರಾಜನ್! ಆ ಮಹಾರಥಿ ವೀರರು ಬಹಳಷ್ಟು ಮೃಗಗಣಗಳನ್ನು ಸಂಹರಿಸುತ್ತಾ ವನದಿಂದ ವನಕ್ಕೆ ಅತಿವೇಗದಲ್ಲಿ ಪ್ರಯಾಣ ಮಾಡಿದರು.

01144002a ಮತ್ಸ್ಯಾಂಸ್ತ್ರಿಗರ್ತಾನ್ಪಾಂಚಾಲಾನ್ಕೀಚಕಾನಂತರೇಣ ಚ|

01144002c ರಮಣೀಯಾನ್ವನೋದ್ದೇಶಾನ್ಪ್ರೇಕ್ಷಮಾಣಾಃ ಸರಾಂಸಿ ಚ||

ಅವರು ಮತ್ಸ್ಯ, ತ್ರಿಗರ್ತ, ಪಾಂಚಾಲ, ಕೀಚಕ ದೇಶಗಳನ್ನು ಅತಿಕ್ರಮಿಸಿ ರಮಣೀಯ ಸರೋವರಗಳನ್ನೂ ಮನೋದ್ದೇಶಗಳನ್ನೂ ನೋಡಿದರು.

01144003a ಜಟಾಃ ಕೃತ್ವಾತ್ಮನಃ ಸರ್ವೇ ವಲ್ಕಲಾಜಿನವಾಸಸಃ|

01144003c ಸಹ ಕುಂತ್ಯಾ ಮಹಾತ್ಮಾನೋ ಬಿಭ್ರತಸ್ತಾಪಸಂ ವಪುಃ||

ಕುಂತಿಯೂ ಸೇರಿ ಆ ಮಹಾತ್ಮರೆಲ್ಲರೂ ಜಟೆಯನ್ನು ಧರಿಸಿ ವಲ್ಕಲ ಜಿನ ವಸ್ತ್ರಗಳನ್ನು ಧರಿಸಿ, ತಾಪಸಿಗಳ ವೇಷವನ್ನು ತಾಳಿದರು.

01144004a ಕ್ವ ಚಿದ್ವಹಂತೋ ಜನನೀಂ ತ್ವರಮಾಣಾ ಮಹಾರಥಾಃ|

01144004c ಕ್ವ ಚಿಚ್ಚಂದೇನ ಗಚ್ಛಂತಸ್ತೇ ಜಗ್ಮುಃ ಪ್ರಸಭಂ ಪುನಃ||

ಕೆಲವೊಮ್ಮೆ ಆ ಮಹಾರಥಿಗಳು ತಾಯಿಯನ್ನು ಎತ್ತಿಕೊಂಡು ಓಡುತ್ತಿದ್ದರು. ಕೆಲವೊಮ್ಮೆ ಅವಸರ ಮಾಡದೇ ಬಹಿರಂಗವಾಗಿ ಹೋಗುತ್ತಿದ್ದರು.

01144005a ಬ್ರಾಹ್ಮಂ ವೇದಮಧೀಯಾನಾ ವೇದಾಂಗಾನಿ ಚ ಸರ್ವಶಃ|

01144005c ನೀತಿಶಾಸ್ತ್ರಂ ಚ ಧರ್ಮಜ್ಞಾ ದದೃಶುಸ್ತೇ ಪಿತಾಮಹಂ||

ಅವರು ಬ್ರಾಹ್ಮಣರ ಎಲ್ಲ ವೇದಗಳನ್ನೂ ವೇದಾಂಗಗಳನ್ನೂ, ನೀತಿ ಶಾಸ್ತ್ರವನ್ನೂ ಕಲಿತುಕೊಂಡಿದ್ದ ಆ ಧರ್ಮಜ್ಞರು ಅವರ ಪಿತಾಮಹನನ್ನು ಕಂಡರು.

01144006a ತೇಽಭಿವಾದ್ಯ ಮಹಾತ್ಮಾನಂ ಕೃಷ್ಣದ್ವೈಪಾಯನಂ ತದಾ|

01144006c ತಸ್ಥುಃ ಪ್ರಾಂಜಲಯಃ ಸರ್ವೇ ಸಹ ಮಾತ್ರಾ ಪರಂತಪಾಃ||

ಆಗ ಆ ಪರಂತಪರು ತಮ್ಮ ತಾಯಿಯ ಸಹಿತ ಮಹಾತ್ಮ ಕೃಷ್ಣದ್ವೈಪಾಯನನನ್ನು ಅಭಿವಂದಿಸಿ, ಅಂಜಲೀ ಬದ್ಧರಾಗಿ ನಿಂತುಕೊಂಡರು.

01144007 ವ್ಯಾಸ ಉವಾಚ|

01144007a ಮಯೇದಂ ಮನಸಾ ಪೂರ್ವಂ ವಿದಿತಂ ಭರತರ್ಷಭಾಃ|

01144007c ಯಥಾ ಸ್ಥಿತೈರಧರ್ಮೇಣ ಧಾರ್ತರಾಷ್ಟ್ರೈರ್ವಿವಾಸಿತಾಃ||

ವ್ಯಾಸನು ಹೇಳಿದನು: “ಭರತರ್ಷಭರೇ! ಅಧರ್ಮ ನಿರತ ಧಾರ್ತರಾಷ್ಟ್ರರಿಂದ ನೀವು ವಿವಾಸಿತರಾಗುತ್ತೀರಿ ಎನ್ನುವುದನ್ನು ಪೂರ್ವದಲ್ಲಿಯೇ ನಾನು ನನ್ನ ಮನಸ್ಸಿನಲ್ಲಿ ತಿಳಿದುಕೊಂಡಿದ್ದೆ.

01144008a ತದ್ವಿದಿತ್ವಾಸ್ಮಿ ಸಂಪ್ರಾಪ್ತಶ್ಚಿಕೀರ್ಷುಃ ಪರಮಂ ಹಿತಂ|

01144008c ನ ವಿಷಾದೋಽತ್ರ ಕರ್ತವ್ಯಃ ಸರ್ವಮೇತತ್ಸುಖಾಯ ವಃ||

ಅದನ್ನು ತಿಳಿದ ನಾನು ನಿಮಗೆ ಪರಮ ಹಿತವನ್ನು ಮಾಡುವ ಬಯಕೆಯಿಂದ ನಿಮ್ಮಲ್ಲಿಗೆ ಬಂದಿದ್ದೇನೆ. ಇದರ ಕುರಿತು ವಿಷಾದಿಸಬೇಡಿ. ಸರ್ವವೂ ಸುಖವನ್ನೇ ತರುತ್ತದೆ.

01144009a ಸಮಾಸ್ತೇ ಚೈವ ಮೇ ಸರ್ವೇ ಯೂಯಂ ಚೈವ ನ ಸಂಶಯಃ|

01144009c ದೀನತೋ ಬಾಲತಶ್ಚೈವ ಸ್ನೇಹಂ ಕುರ್ವಂತಿ ಬಾಂಧವಾಃ||

ನೀವು ಮತ್ತು ಅವರು ಎಲ್ಲರೂ ನನಗೆ ಸಮಾನರೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಬಾಂಧವರು ದೀನ ಮತ್ತು ಬಾಲಿಶರಲ್ಲಿ ಸ್ನೇಹವನ್ನು ಮಾಡುತ್ತಾರೆ.

01144010a ತಸ್ಮಾದಭ್ಯಧಿಕಃ ಸ್ನೇಹೋ ಯುಷ್ಮಾಸು ಮಮ ಸಾಂಪ್ರತಂ|

01144010c ಸ್ನೇಹಪೂರ್ವಂ ಚಿಕೀರ್ಷಾಮಿ ಹಿತಂ ವಸ್ತನ್ನಿಬೋಧತ||

ಆದುದರಿಂದ ನನಗೆ ನಿಮ್ಮಮೇಲೆ ಹೆಚ್ಚಿನ ಸ್ನೇಹವಿದೆ. ಸ್ನೇಹಪೂರ್ವಕವಾಗಿ ನಿಮಗೆ ಸಹಾಯವನ್ನು ನೀಡಲು ಬಯಸುತ್ತೇನೆ.

01144011a ಇದಂ ನಗರಮಭ್ಯಾಶೇ ರಮಣೀಯಂ ನಿರಾಮಯಂ|

01144011c ವಸತೇಹ ಪ್ರತಿಚ್ಛನ್ನಾ ಮಮಾಗಮನಕಾಂಕ್ಷಿಣಃ||

ಇಲ್ಲಿಯೇ ಹತ್ತಿರದಲ್ಲಿ ರಮಣೀಯವೂ ನಿರಾಮಯವೂ ಆದ ನಗರವೊಂದಿದೆ. ವೇಷಮರೆಸಿಕೊಂಡು ಅಲ್ಲಿಯೇ ವಾಸಿಸಿರಿ ಮತ್ತು ನಾನು ಮರಳಿ ಬರುವುದನ್ನು ಪ್ರತೀಕ್ಷಿಸುತ್ತಿರಿ.””

01144012 ವೈಶಂಪಾಯನ ಉವಾಚ|

01144012a ಏವಂ ಸ ತಾನ್ಸಮಾಶ್ವಾಸ್ಯ ವ್ಯಾಸಃ ಪಾರ್ಥಾನರಿಂದಮಾನ್|

01144012c ಏಕಚಕ್ರಾಮಭಿಗತಃ ಕುಂತೀಮಾಶ್ವಾಸಯತ್ಪ್ರಭುಃ||

ವೈಶಂಪಾಯನನು ಹೇಳಿದನು: “ಅರಿಂದಮ ಪಾರ್ಥರಿಗೆ ಈ ರೀತಿ ಸಮಾಶ್ವಾಸನೆಯನ್ನು ನೀಡಿದ ಪ್ರಭು ವ್ಯಾಸನು ಅವರೊಂದಿಗೆ ಏಕಚಕ್ರ ನಗರಕ್ಕೆ ಬಂದು ಕುಂತಿಗೆ ಆಶ್ವಾಸನೆಯನ್ನಿತ್ತನು:

01144013a ಜೀವಪುತ್ರಿ ಸುತಸ್ತೇಽಯಂ ಧರ್ಮಪುತ್ರೋ ಯುಧಿಷ್ಠಿರಃ|

01144013c ಪೃಥಿವ್ಯಾಂ ಪಾರ್ಥಿವಾನ್ಸರ್ವಾನ್ಪ್ರಶಾಸಿಷ್ಯತಿ ಧರ್ಮರಾಟ್||

“ಪುತ್ರಿ! ಜೀವಿಸು. ನಿನ್ನ ಈ ಮಗ ಧರ್ಮಪುತ್ರ ಯುಧಿಷ್ಠಿರನು ಧರ್ಮರಾಜನಾಗಿ ಪೃಥ್ವಿಯ ಸರ್ವ ಪಾರ್ಥಿವರನ್ನೂ ಆಳುತ್ತಾನೆ.

01144014a ಧರ್ಮೇಣ ಜಿತ್ವಾ ಪೃಥಿವೀಮಖಿಲಾಂ ಧರ್ಮವಿದ್ವಶೀ|

01144014c ಭೀಮಸೇನಾರ್ಜುನಬಲಾದ್ಭೋಕ್ಷ್ಯತ್ಯಯಮಸಂಶಯಃ||

ಈ ಧರ್ಮವಿದನು ಅಖಿಲ ಪೃಥ್ವಿಯನ್ನೂ ಭೀಮಸೇನ-ಅರ್ಜುನರ ಬಲದಿಂದ ಧರ್ಮಪೂರ್ವಕವಾಗಿ ಗೆದ್ದು ಭೋಗಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

01144015a ಪುತ್ರಾಸ್ತವ ಚ ಮಾದ್ರ್ಯಾಶ್ಚ ಸರ್ವ ಏವ ಮಹಾರಥಾಃ|

01144015c ಸ್ವರಾಷ್ಟ್ರೇ ವಿಹರಿಷ್ಯಂತಿ ಸುಖಂ ಸುಮನಸಸ್ತದಾ||

ನಿನ್ನ ಮತ್ತು ಮಾದ್ರಿಯ ಈ ಮಕ್ಕಳು ಎಲ್ಲರೂ ಮಹಾರಥಿಗಳು ಮತ್ತು ಅವರು ಸ್ವರಾಷ್ಟ್ರದಲ್ಲಿ ಸುಖವಾಗಿ ಸುಮನಸ್ಕರಾಗಿ ವಿಹರಿಸುತ್ತಾರೆ.

01144016a ಯಕ್ಷ್ಯಂತಿ ಚ ನರವ್ಯಾಘ್ರಾ ವಿಜಿತ್ಯ ಪೃಥಿವೀಮಿಮಾಂ|

01144016c ರಾಜಸೂಯಾಶ್ವಮೇಧಾದ್ಯೈಃ ಕ್ರತುಭಿರ್ಭೂರಿದಕ್ಷಿಣೈಃ||

ಈ ಪೃಥ್ವಿಯನ್ನು ಜಯಿಸಿ ನರವ್ಯಾಘ್ರರು ಅಧಿಕ ಭೂರಿದಕ್ಷಿಣೆಗಳನ್ನೊಡಗೂಡಿದ ರಾಜಸೂಯ, ಅಶ್ವಮೇಧ ಮೊದಲಾದ ಕ್ರತುಗಳನ್ನು ಯಾಜಿಸಿತ್ತಾರೆ.

01144017a ಅನುಗೃಹ್ಯ ಸುಹೃದ್ವರ್ಗಂ ಧನೇನ ಚ ಸುಖೇನ ಚ|

01144017c ಪಿತೃಪೈತಾಮಹಂ ರಾಜ್ಯಮಿಹ ಭೋಕ್ಷ್ಯಂತಿ ತೇ ಸುತಾಃ||

ನಿನ್ನ ಮಕ್ಕಳು ಧನ ಮತ್ತು ಸುಖದಿಂದ ತಮ್ಮ ಸುಹೃದಯರನ್ನು ಅನುಗ್ರಹಿಸುತ್ತಾ ಪಿತೃಪಿತಾಮಹರ ಈ ರಾಜ್ಯವನ್ನು ಭೋಗಿಸುತ್ತಾರೆ.”

01144018a ಏವಮುಕ್ತ್ವಾ ನಿವೇಶ್ಯೈನಾನ್ಬ್ರಾಹ್ಮಣಸ್ಯ ನಿವೇಶನೇ|

01144018c ಅಬ್ರವೀತ್ಪಾರ್ಥಿವಶ್ರೇಷ್ಠಂ ಋಷಿರ್ದ್ವೈಪಾಯನಸ್ತದಾ||

ಹೀಗೆ ಹೇಳಿ ಋಷಿ ದ್ವೈಪಾಯನನು ಅವರನ್ನು ಬ್ರಾಹ್ಮಣನೋರ್ವನ ಮನೆಗೆ ಕರೆದು ತಂದು ಪಾರ್ಥಿವಶ್ರೇಷ್ಠನಿಗೆ ಹೇಳಿದನು:

01144019a ಇಹ ಮಾಂ ಸಂಪ್ರತೀಕ್ಷಧ್ವಮಾಗಮಿಷ್ಯಾಮ್ಯಹಂ ಪುನಃ|

01144019c ದೇಶಕಾಲೌ ವಿದಿತ್ವೈವ ವೇತ್ಸ್ಯಧ್ವಂ ಪರಮಾಂ ಮುದಂ||

“ಪುನಃ ನಾನು ಬರುವುದನ್ನು ಪ್ರತೀಕ್ಷಿಸು. ದೇಶಕಾಲಗಳ ಕುರಿತು ತಿಳಿದನಂತರ ನೀವು ಪರಮ ಸಂತೋಷವನ್ನು ಹೊಂದುತ್ತೀರಿ.”

01144020a ಸ ತೈಃ ಪ್ರಾಂಜಲಿಭಿಃ ಸರ್ವೈಸ್ತಥೇತ್ಯುಕ್ತೋ ನರಾಧಿಪ|

01144020c ಜಗಾಮ ಭಗವಾನ್ವ್ಯಾಸೋ ಯಥಾಕಾಮಮೃಷಿಃ ಪ್ರಭುಃ||

ನರಾಧಿಪ! ಹಾಗೆಯೇ ಆಗಲೆಂದು ಪ್ರಾಂಜಲೀಬದ್ಧರಾಗಿ ಅವರು ವಚನವನ್ನಿತ್ತ ನಂತರ ಋಷಿ ಭಗವಾನ್ ವ್ಯಾಸಪ್ರಭುವು ತನಗಿಷ್ಟವಾದಲ್ಲಿಗೆ ಹೋದನು.”

 

 ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಏಕಚಕ್ರಪ್ರವೇಶೇ ವ್ಯಾಸದರ್ಶನೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಏಕಚಕ್ರಪ್ರವೇಶದಲ್ಲಿ ವ್ಯಾಸದರ್ಶನ ಎನ್ನುವ ನೂರಾನಲ್ವತ್ತ್ನಾಲ್ಕನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦, ಉಪಪರ್ವಗಳು-೯, ಅಧ್ಯಾಯಗಳು-೧೪೪/೧೯೯೫, ಶ್ಲೋಕಗಳು-೫೦೧೬/೭೩೭೮೪

Related image

Comments are closed.