Adi Parva: Chapter 139

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಹಿಡಿಂಬವಧ ಪರ್ವ

೧೩೯

ಪಾಂಡವರ ಸುಳಿವನ್ನು ತಿಳಿದ ರಾಕ್ಷಸ ಹಿಡಿಂಬನು ಆ ಮನುಷ್ಯರನ್ನು ಕೊಂದು ತರಲು ತಂಗಿ ಹಿಡಿಂಬೆಗೆ ಹೇಳುವುದು (೧-೧೧). ಅಲ್ಲಿ ಅವನನ್ನು ನೋಡಿ ಕಾಮವಶಳಾದ ಹಿಡಿಂಬೆಯು ತನ್ನ ಪತಿಯಾಗೆಂದು ಭೀಮಸೇನನಿಗೆ ಕೇಳುವುದು (೧೨-೨೬). ಭೀಮನು ನಿರಾಕರಿಸಲು, ಹಿಡಿಂಬೆಯು ತನ್ನ ಅಣ್ಣನು ಕುರಿತು ಹೇಳುವುದು (೨೭-೩೨).

Image result for hidimba vadha01139001 ವೈಶಂಪಾಯನ ಉವಾಚ|

01139001a ತತ್ರ ತೇಷು ಶಯಾನೇಷು ಹಿಡಿಂಬೋ ನಾಮ ರಾಕ್ಷಸಃ|

01139001c ಅವಿದೂರೇ ವನಾತ್ತಸ್ಮಾಚ್ಶಾಲವೃಕ್ಷಮುಪಾಶ್ರಿತಃ||

ವೈಶಂಪಾಯನನು ಹೇಳಿದನು: “ಅಲ್ಲಿ ಅವರು ಮಲಗಿರುವಾಗ, ಆ ವನದಿಂದ ಸ್ವಲ್ಪ ದೂರದಲ್ಲಿಯೇ ಒಂದು ಶಾಲವೃಕ್ಷದಲ್ಲಿ ಹಿಂಡಿಂಬ ಎಂಬ ಹೆಸರಿನ ರಾಕ್ಷಸನು ಮಲಗಿದ್ದನು.

01139002a ಕ್ರೂರೋ ಮಾನುಷಮಾಂಸಾದೋ ಮಹಾವೀರ್ಯೋ ಮಹಾಬಲಃ|

01139002c ವಿರೂಪರೂಪಃ ಪಿಂಗಾಕ್ಷಃ ಕರಾಲೋ ಘೋರದರ್ಶನಃ|

01139002e ಪಿಶಿತೇಪ್ಸುಃ ಕ್ಷುಧಾರ್ತಸ್ತಾನಪಶ್ಯತ ಯದೃಚ್ಛಯಾ||

ಮಹಾವೀರ, ಮಹಾಬಲಿ, ವಿರೂಪರೂಪಿ, ಪಿಂಗಾಕ್ಷ, ಕರಾಲ, ಘೋರದರ್ಶನ ಕ್ರೂರನು ಮನುಷ್ಯರ ಮಾಂಸವನ್ನು ಭಕ್ಷಿಸುವವನಾಗಿದ್ದನು. ಹಸಿದ ಅವನು ಮಾಂಸವನ್ನು ಬಯಸುತ್ತಿದ್ದಾಗ ಅಲ್ಲಿರುವ ಅವರನ್ನು ನೋಡಿದನು.

01139003a ಊರ್ಧ್ವಾಂಗುಲಿಃ ಸ ಕಂಡೂಯನ್ಧುನ್ವನ್ರೂಕ್ಷಾಂ ಶಿರೋರುಹಾನ್|

01139003c ಜೃಂಭಮಾಣೋ ಮಹಾವಕ್ತ್ರಃ ಪುನಃ ಪುನರವೇಕ್ಷ್ಯ ಚ||

ಪುನಃ ಪುನಃ ಅವನ ಕಣ್ಣುಗಳು ಅವರೆಡೆಗೇ ತಿರುಗುತ್ತಿರಲು ಅವನು ತನ್ನ ಬೆರಳುಗಳನ್ನು ಮೇಲಕ್ಕೆ ಮಾಡಿ ಹೊಲಸಾದ ತನ್ನ ಕೂದಲುಗಳನ್ನು ಕೆರೆದು ಕೆದರಿ ತನ್ನ ಅಗಲ ಬಾಯಿಯಿಂದ ಆಕಳಿಸಿದನು.

01139004a ದುಷ್ಟೋ ಮಾನುಷಮಾಂಸಾದೋ ಮಹಾಕಾಯೋ ಮಹಾಬಲಃ|

01139004c ಆಘ್ರಾಯ ಮಾನುಷಂ ಗಂಧಂ ಭಗಿನೀಮಿದಮಬ್ರವೀತ್||

ಆಗ ಆ ದುಷ್ಟ ಮಾನುಷಮಾಂಸ ಭಕ್ಷಕ, ಮಹಾಕಾಯ ಮಹಾಬಲಿಯು ಮನುಷ್ಯರ ವಾಸನೆಯನ್ನು ಆಘ್ರಾಣಿಸಿ ತನ್ನ ತಂಗಿಗೆ ಹೇಳಿದನು:

01139005a ಉಪಪನ್ನಶ್ಚಿರಸ್ಯಾದ್ಯ ಭಕ್ಷೋ ಮಮ ಮನಃಪ್ರಿಯಃ|

01139005c ಸ್ನೇಹಸ್ರವಾನ್ಪ್ರಸ್ರವತಿ ಜಿಹ್ವಾ ಪರ್ಯೇತಿ ಮೇ ಮುಖಂ||

“ದೀರ್ಘ ಕಾಲದ ನಂತರ ಇಂದು ನನ್ನ ಮನಃಪ್ರಿಯ ಭಕ್ಷವು ದೊರಕಿದೆ. ನನ್ನ ನಾಲಿಗೆಯು ಹಸಿವೆಯಿಂದ ಜೊಲ್ಲು ಸುರಿಸುತ್ತಿದೆ ಮತ್ತು ಬಾಯಿಯ ಸುತ್ತನ್ನೆಲ್ಲಾ ನೆಕ್ಕುತ್ತಿದೆ.

01139006a ಅಷ್ಟೌ ದಂಷ್ಟ್ರಾಃ ಸುತೀಕ್ಷ್ಣಾಗ್ರಾಶ್ಚಿರಸ್ಯಾಪಾತದುಃಸಹಾಃ|

01139006c ದೇಹೇಷು ಮಜ್ಜಯಿಷ್ಯಾಮಿ ಸ್ನಿಗ್ಧೇಷು ಪಿಶಿತೇಷು ಚ||

ಎಷ್ಟೋ ಸಮಯದಿಂದ ಏನನ್ನೂ ಕಚ್ಚಲು ದೊರೆಯದಿದ್ದ ನನ್ನ ಈ ಎಂಟು ತೀಕ್ಷ್ಣ ದಂಷ್ಟ್ರಗಳನ್ನು ಆ ದೇಹಗಳಲ್ಲಿರುವ ರುಚಿ ಮಾಂಸಗಳಲ್ಲಿ ಹುಗಿದುಕೊಳ್ಳಲು ಕಾತರಗೊಂಡಿವೆ.

01139007a ಆಕ್ರಮ್ಯ ಮಾನುಷಂ ಕಂಠಮಾಚ್ಛಿದ್ಯ ಧಮನೀಮಪಿ|

01139007c ಉಷ್ಣಂ ನವಂ ಪ್ರಪಾಸ್ಯಾಮಿ ಫೇನಿಲಂ ರುಧಿರಂ ಬಹು||

ಆ ಮನುಷ್ಯರನ್ನು ಆಕ್ರಮಿಸಿ ಅವರ ಕಂಠಗಳ ಧಮನಿಯಲ್ಲಿ ಹರಿಯುವ ನೊರೆಯುಕ್ತ ಬಿಸಿಬಿಸಿ ಹೊಸರಕ್ತವನ್ನು ಕುಡಿಯುತ್ತೇನೆ.

01139008a ಗಚ್ಛ ಜಾನೀಹಿ ಕೇ ತ್ವೇತೇ ಶೇರತೇ ವನಮಾಶ್ರಿತಾಃ|

01139008c ಮಾನುಷೋ ಬಲವಾನ್ಗಂಧೋ ಘ್ರಾಣಂ ತರ್ಪಯತೀವ ಮೇ||

ಹೋಗು! ಈ ವನದಲ್ಲಿ ಮಲಗಿರುವ ಅವರು ಯಾರು ಎಂದು ತಿಳಿದುಕೊಂಡು ಬಾ. ಆ ಮನುಷ್ಯರ ಗಾಢ ವಾಸನೆಯಿಂದಲೇ ನಾನು ತೃಪ್ತನಾಗುತ್ತಿದ್ದೇನೆಂದು ಅನ್ನಿಸುತ್ತದೆ.

01139009a ಹತ್ವೈತಾನ್ಮಾನುಷಾನ್ಸರ್ವಾನಾನಯಸ್ವ ಮಮಾಂತಿಕಂ|

01139009c ಅಸ್ಮದ್ವಿಷಯಸುಪ್ತೇಭ್ಯೋ ನೈತೇಭ್ಯೋ ಭಯಮಸ್ತಿ ತೇ||

ಆ ಮನುಷ್ಯರೆಲ್ಲರನ್ನೂ ಕೊಂದು ನನ್ನ ಹತ್ತಿರ ತೆಗೆದುಕೊಂಡು ಬಾ. ನಮ್ಮದಾದ ಈ ಪ್ರದೇಶದಲ್ಲಿ ಮಲಗಿರುವ ಅವರಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ.

01139010a ಏಷಾಂ ಮಾಂಸಾನಿ ಸಂಸ್ಕೃತ್ಯ ಮಾನುಷಾಣಾಂ ಯಥೇಷ್ಟತಃ|

01139010c ಭಕ್ಷಯಿಷ್ಯಾವ ಸಹಿತೌ ಕುರು ತೂರ್ಣಂ ವಚೋ ಮಮ||

ಮನುಷ್ಯರ ಈ ಮಾಂಸಗಳಿಂದ ನಮಗಿಷ್ಟವಾದ ಹಾಗೆ ಅಡುಗೆ ಮಾಡಿ ಭಕ್ಷಿಸೋಣ. ಬೇಗನೆ ಹೋಗು ಮತ್ತು ನಾನು ಹೇಳಿದ ಹಾಗೆಯೇ ಮಾಡು.”

01139011a ಭ್ರಾತುರ್ವಚನಮಾಜ್ಞಾಯ ತ್ವರಮಾಣೇವ ರಾಕ್ಷಸೀ|

01139011c ಜಗಾಮ ತತ್ರ ಯತ್ರ ಸ್ಮ ಪಾಂಡವಾ ಭರತರ್ಷಭ||

ಭರತರ್ಷಭ! ಅಣ್ಣನ ಈ ಆಜ್ಞೆಯನ್ನು ಕೇಳಿದ ರಾಕ್ಷಸಿಯು ತಕ್ಷಣವೇ ಪಾಂಡವರಿದ್ದಲ್ಲಿಗೆ ಹೋದಳು.

01139012a ದದರ್ಶ ತತ್ರ ಗತ್ವಾ ಸಾ ಪಾಂಡವಾನ್ಪೃಥಯಾ ಸಹ|

01139012c ಶಯಾನಾನ್ಭೀಮಸೇನಂ ಚ ಜಾಗ್ರತಂ ತ್ವಪರಾಜಿತಂ||

ಅಲ್ಲಿ ಬಂದ ಅವಳು ಪೃಥಳ ಜೊತೆ ಮಲಗಿದ್ದ ಪಾಂಡವರನ್ನು ಮತ್ತು ಎಚ್ಚೆತ್ತಿದ್ದ ಅಪರಾಜಿತ ಭೀಮಸೇನನನ್ನು ನೋಡಿದಳು.

01139013a ದೃಷ್ಟ್ವೈವ ಭೀಮಸೇನಂ ಸಾ ಶಾಲಸ್ಕಂಧಮಿವೋದ್ಗತಂ|

01139013c ರಾಕ್ಷಸೀ ಕಾಮಯಾಮಾಸ ರೂಪೇಣಾಪ್ರತಿಮಂ ಭುವಿ||

ಶಾಲ ವೃಕ್ಷದ ರೆಂಬೆಯಂತೆ ಎತ್ತರವಾಗಿದ್ದ ಆ ಭೀಮಸೇನನನ್ನು ನೋಡಿದಾಕ್ಷಣವೇ ಆ ರಾಕ್ಷಸಿಯು ಭೂವಿಯಲ್ಲಿಯೇ ಅಪ್ರತಿಮ ರೂಪವಂತನಾದ ಅವನನ್ನು ಬಯಸಿದಳು.

01139014a ಅಯಂ ಶ್ಯಾಮೋ ಮಹಾಬಾಹುಃ ಸಿಂಹಸ್ಕಂಧೋ ಮಹಾದ್ಯುತಿಃ|

01139014c ಕಂಬುಗ್ರೀವಃ ಪುಷ್ಕರಾಕ್ಷೋ ಭರ್ತಾ ಯುಕ್ತೋ ಭವೇನ್ಮಮ||

“ಈ ಶ್ಯಾಮವರ್ಣದ ಮಹಾಬಾಹು, ಸಿಂಹಸ್ಕಂಧ, ಮಾಹಾಕಾಂತಿಯುಕ್ತ, ಕಂಬುಗ್ರೀವ, ಪುಷ್ಕರಾಕ್ಷನು ನನಗೆ ಯೋಗ್ಯ ಗಂಡನಾಗುತ್ತಾನೆ.

01139015a ನಾಹಂ ಭ್ರಾತೃವಚೋ ಜಾತು ಕುರ್ಯಾಂ ಕ್ರೂರೋಪಸಂಹಿತಂ|

01139015c ಪತಿಸ್ನೇಹೋಽತಿಬಲವಾನ್ನ ತಥಾ ಭ್ರಾತೃಸೌಹೃದಂ||

ನಾನು ನನ್ನ ಅಣ್ಣನ ಆ ಕ್ರೂರ ಆಜ್ಞೆಯನ್ನು ನಡೆಸುವುದಿಲ್ಲ. ಪತಿಯ ಮೇಲಿನ ಪ್ರೀತಿಯು ಅಣ್ಣನ ಮೇಲಿನ ಪ್ರೀತಿಗಿಂತ ಹೆಚ್ಚೇ ಅಲ್ಲವೇ?

01139016a ಮುಹೂರ್ತಮಿವ ತೃಪ್ತಿಶ್ಚ ಭವೇದ್ಭ್ರಾತುರ್ಮಮೈವ ಚ|

01139016c ಹತೈರೇತೈರಹತ್ವಾ ತು ಮೋದಿಷ್ಯೇ ಶಾಶ್ವತಿಃ ಸಮಾಃ||

ಇವರನ್ನು ಕೊಂದರೆ ನನಗೆ ಮತ್ತು ಅಣ್ಣನಿಗೆ ಕ್ಷಣಮಾತ್ರದ ತೃಪ್ತಿ ದೊರೆಯಬಹುದು. ಆದರೆ ಇವರನ್ನು ಕೊಲ್ಲದಿದ್ದರೆ ವರ್ಷಾನುಗಟ್ಟಲೆ ನಾನು ತೃಪ್ತಿ ಹೊಂದಬಲ್ಲೆ.”

01139017a ಸಾ ಕಾಮರೂಪಿಣೀ ರೂಪಂ ಕೃತ್ವಾ ಮಾನುಷಮುತ್ತಮಂ|

01139017c ಉಪತಸ್ಥೇ ಮಹಾಬಾಹುಂ ಭೀಮಸೇನಂ ಶನೈಃ ಶನೈಃ||

01139018a ವಿಲಜ್ಜಮಾನೇವ ಲತಾ ದಿವ್ಯಾಭರಣಭೂಷಿತಾ|

01139018c ಸ್ಮಿತಪೂರ್ವಮಿದಂ ವಾಕ್ಯಂ ಭೀಮಸೇನಮಥಾಬ್ರವೀತ್||

ಆ ಕಾಮರೂಪಿಣಿಯು ಉತ್ತಮ ಮಾನುಷಿಯ ರೂಪವನ್ನು ಧರಿಸಿ ನಾಚಿಕೊಂಡ ಲತೆಯಂತೆ ಮಹಾಬಾಹು ಭೀಮಸೇನನ ಬಳಿ ಮೆಲ್ಲ ಮೆಲ್ಲಗೆ ಬಂದಳು. ಆ ದಿವ್ಯಾಭರಣಭೂಷಿತೆಯು ಮುಗುಳ್ನಗುತ್ತಾ ಭೀಮಸೇನನಿಗೆ ಹೇಳಿದಳು:

01139019a ಕುತಸ್ತ್ವಮಸಿ ಸಂಪ್ರಾಪ್ತಃ ಕಶ್ಚಾಸಿ ಪುರುಷರ್ಷಭ|

01139019c ಕ ಇಮೇ ಶೇರತೇ ಚೇಹ ಪುರುಷಾ ದೇವರೂಪಿಣಃ||

“ಪುರುಷರ್ಷಭ! ನೀನು ಎಲ್ಲಿಂದ ಬಂದಿದ್ದೀಯೆ ಮತ್ತು ನೀನು ಯಾರು? ಇಲ್ಲಿ ಮಲಗಿರುವ ದೇವರೂಪಿ ಈ ಪುರುಷರು ಯಾರು?

01139020a ಕೇಯಂ ಚ ಬೃಹತೀ ಶ್ಯಾಮಾ ಸುಕುಮಾರೀ ತವಾನಘ|

01139020c ಶೇತೇ ವನಮಿದಂ ಪ್ರಾಪ್ಯ ವಿಶ್ವಸ್ತಾ ಸ್ವಗೃಹೇ ಯಥಾ||

ಅನಘ! ಈ ಶ್ಯಾಮವರ್ಣಿ, ತನ್ನ ಮನೆಯಂತೆ ವಿಶ್ವಾಸದಿಂದ ಈ ವನದಲ್ಲಿ ಮಲಗಿರುವ ಈ ಹಿರಿಯ ಸುಕುಮಾರಿಯು ನಿನಗೆ ಏನಾಗಬೇಕು?

01139021a ನೇದಂ ಜಾನಾತಿ ಗಹನಂ ವನಂ ರಾಕ್ಷಸಸೇವಿತಂ|

01139021c ವಸತಿ ಹ್ಯತ್ರ ಪಾಪಾತ್ಮಾ ಹಿಡಿಂಬೋ ನಾಮ ರಾಕ್ಷಸಃ||

ಈ ಗಹನ ವನವು ರಾಕ್ಷಸರಿಂದ ಸೇರಿದೆ ಮತ್ತು ಇಲ್ಲಿಯೇ ಹತ್ತಿರದಲ್ಲಿ ಹಿಂಡಿಂಬ ಎಂಬ ಹೆಸರಿನ ಪಾಪಾತ್ಮ ರಾಕ್ಷಸನು ವಾಸಿಸುತ್ತಿದ್ದಾನೆ ಎನ್ನುವುದು ಅವಳಿಗೆ ತಿಳಿದಿಲ್ಲವೇ?

01139022a ತೇನಾಹಂ ಪ್ರೇಷಿತಾ ಭ್ರಾತ್ರಾ ದುಷ್ಟಭಾವೇನ ರಕ್ಷಸಾ|

01139022c ಬಿಭಕ್ಷಯಿಷತಾ ಮಾಂಸಂ ಯುಷ್ಮಾಕಮಮರೋಪಮ||

ನನ್ನ ಅಣ್ಣ ಆ ರಾಕ್ಷಸನು ದುಷ್ಟಭಾವದಿಂದ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನು ಅಮರೋಪಮ ನಿಮ್ಮ ಮಾಂಸವನ್ನು ಭಕ್ಷಿಸಲು ಬಯಸುತ್ತಾನೆ.

01139023a ಸಾಹಂ ತ್ವಾಮಭಿಸಂಪ್ರೇಕ್ಷ್ಯ ದೇವಗರ್ಭಸಮಪ್ರಭಂ|

01139023c ನಾನ್ಯಂ ಭರ್ತಾರಮಿಚ್ಛಾಮಿ ಸತ್ಯಮೇತದ್ಬ್ರವೀಮಿ ತೇ||

ದೇವಗರ್ಭಸಮಪ್ರಭನಾದ ನಿನ್ನನ್ನು ನೋಡಿದಾಕ್ಷಣವೇ ನನ್ನ ಓರ್ವನೇ ಪತಿಯನ್ನಾಗಿ ಹೊಂದಲು ಬಯಸುತ್ತೇನೆ. ನಿನಗೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

01139024a ಏತದ್ವಿಜ್ಞಾಯ ಧರ್ಮಜ್ಞ ಯುಕ್ತಂ ಮಯಿ ಸಮಾಚರ|

01139024c ಕಾಮೋಪಹತಚಿತ್ತಾಂಗೀಂ ಭಜಮಾನಾಂ ಭಜಸ್ವ ಮಾಂ||

ಧರ್ಮಜ್ಞ! ಇದನ್ನು ತಿಳಿದ ನೀನು ನನಗೆ ಯುಕ್ತವಾದಹಾಗೆ ನಡೆದುಕೋ. ನನ್ನ ಅಂಗಗಳು ಮತ್ತು ಮನಸ್ಸನ್ನು ಕಾಮವು ಆವರಿಸಿದೆ. ನಿನ್ನನ್ನು ಪ್ರೀತಿಸುತ್ತೇನೆ. ನನ್ನನ್ನು ಪ್ರೀತಿಸು.

01139025a ತ್ರಾಸ್ಯೇಽಹಂ ತ್ವಾಂ ಮಹಾಬಾಹೋ ರಾಕ್ಷಸಾತ್ಪುರುಷಾದಕಾತ್|

01139025c ವತ್ಸ್ಯಾವೋ ಗಿರಿದುರ್ಗೇಷು ಭರ್ತಾ ಭವ ಮಮಾನಘ||

ಮಹಾಬಾಹು! ನಿನ್ನನ್ನು ನಾನು ಆ ನರಭಕ್ಷಕ ರಾಕ್ಷಸನಿಂದ ಉಳಿಸಬಲ್ಲೆ. ನಾವಿಬ್ಬರೂ ಗಿರಿದುರ್ಗಗಳಲ್ಲಿ ವಾಸಿಸೋಣ. ಅನಘ! ನನ್ನ ಪತಿಯಾಗು.

01139026a ಅಂತರಿಕ್ಷಚರಾ ಹ್ಯಸ್ಮಿ ಕಾಮತೋ ವಿಚರಾಮಿ ಚ|

01139026c ಅತುಲಾಮಾಪ್ನುಹಿ ಪ್ರೀತಿಂ ತತ್ರ ತತ್ರ ಮಯಾ ಸಹ||

ಅಂತರಿಕ್ಷದಲ್ಲಿ ಸಂಚರಿಸಬಲ್ಲೆ, ಬೇಕಾದಲ್ಲಿ ಹೋಗಬಲ್ಲೆ. ಎಲ್ಲಿ ಬೇಕಾದರಲ್ಲಿ ನನ್ನೊಂದಿಗೆ ಅತುಲ ಪ್ರೀತಿಯನ್ನು ಹೊಂದು.”

01139027 ಭೀಮ ಉವಾಚ|

01139027a ಮಾತರಂ ಭ್ರಾತರಂ ಜ್ಯೇಷ್ಠಂ ಕನಿಷ್ಠಾನಪರಾನಿಮಾನ್|

01139027c ಪರಿತ್ಯಜೇತ ಕೋಽನ್ವದ್ಯ ಪ್ರಭವನ್ನಿವ ರಾಕ್ಷಸಿ||

ಭೀಮನು ಹೇಳಿದನು: “ರಾಕ್ಷಸಿ! ತಾಯಿಯನ್ನು, ಹಿರಿಯಣ್ಣನನ್ನು, ಮತ್ತು ಕಿರಿಯವರನ್ನು ಪರಿತ್ಯಜಿಸುವನು ಹೇಗೆ ತಾನೆ ಪ್ರಭು ಎನ್ನಿಸಿಕೊಳ್ಳುವನು?

01139028a ಕೋ ಹಿ ಸುಪ್ತಾನಿಮಾನ್ಭ್ರಾತೄನ್ದತ್ತ್ವಾ ರಾಕ್ಷಸಭೋಜನಂ|

01139028c ಮಾತರಂ ಚ ನರೋ ಗಚ್ಛೇತ್ಕಾಮಾರ್ತ ಇವ ಮದ್ವಿಧಃ||

ನನ್ನಂಥಹ ಯಾವ ಮನುಷ್ಯನು ಮಲಗಿರುವ ಈ ಭ್ರಾತೃಗಳನ್ನು ಮತ್ತು ತಾಯಿಯನ್ನು ರಾಕ್ಷಸಭೋಜನವನ್ನಾಗಿ ಕೊಟ್ಟು ಕಾಮಾರ್ತನಾಗಿ ಹೋಗುತ್ತಾನೆ?”

01139029 ರಾಕ್ಷಸ್ಯುವಾಚ|

01139029a ಯತ್ತೇ ಪ್ರಿಯಂ ತತ್ಕರಿಷ್ಯೇ ಸರ್ವಾನೇತಾನ್ಪ್ರಬೋಧಯ|

01139029c ಮೋಕ್ಷಯಿಷ್ಯಾಮಿ ವಃ ಕಾಮಂ ರಾಕ್ಷಸಾತ್ಪುರುಷಾದಕಾತ್||

ರಾಕ್ಷಸಿಯು ಹೇಳಿದಳು: “ನಿನಗೆ ಬೇಕಾದುದನ್ನು ನಾನು ಮಾಡುತ್ತೇನೆ. ಇವರೆಲ್ಲರನ್ನೂ ಎಬ್ಬಿಸು. ಆ ನರಭಕ್ಷಕ ರಾಕ್ಷಸನಿಂದ ನಿಮ್ಮನ್ನು ಉಳಿಸಲು ಬಯಸುತ್ತೇನೆ.”

01139030 ಭೀಮ ಉವಾಚ|

01139030a ಸುಖಸುಪ್ತಾನ್ವನೇ ಭ್ರಾತೄನ್ಮಾತರಂ ಚೈವ ರಾಕ್ಷಸಿ|

01139030c ನ ಭಯಾದ್ಬೋಧಯಿಷ್ಯಾಮಿ ಭ್ರಾತುಸ್ತವ ದುರಾತ್ಮನಃ||

ಭೀಮನು ಹೇಳಿದನು: “ರಾಕ್ಷಸಿ! ನನ್ನ ತಾಯಿ ಮತ್ತು ಸಹೋದರರು ವನದಲ್ಲಿ ಸುಖವಾಗಿ ನಿದ್ರಿಸುತ್ತಿದ್ದಾರೆ. ನಿನ್ನ ಆ ದುರಾತ್ಮ ಅಣ್ಣನ ಭಯದಿಂದ ನಾನು ಅವರನ್ನು ಎಬ್ಬಿಸಲಾರೆ.

01139031a ನ ಹಿ ಮೇ ರಾಕ್ಷಸಾ ಭೀರು ಸೋಢುಂ ಶಕ್ತಾಃ ಪರಾಕ್ರಮಂ|

01139031c ನ ಮನುಷ್ಯಾ ನ ಗಂಧರ್ವಾ ನ ಯಕ್ಷಾಶ್ಚಾರುಲೋಚನೇ||

ಭೀರು! ಚಾರುಲೋಚನೇ! ನನ್ನ ಪರಾಕ್ರಮವನ್ನು ಎದುರಿಸುವ ಯಾವ ರಾಕ್ಷಸನೂ ಇಲ್ಲ, ಮನುಷ್ಯನೂ ಇಲ್ಲ, ಗಂಧರ್ವನೂ ಇಲ್ಲ ಅಥವಾ ಯಕ್ಷನೂ ಇಲ್ಲ.

01139032a ಗಚ್ಛ ವಾ ತಿಷ್ಠ ವಾ ಭದ್ರೇ ಯದ್ವಾಪೀಚ್ಛಸಿ ತತ್ಕುರು|

01139032c ತಂ ವಾ ಪ್ರೇಷಯ ತನ್ವಂಗಿ ಭ್ರಾತರಂ ಪುರುಷಾದಕಂ||

ಭದ್ರೇ! ಇಲ್ಲಿಯೇ ನಿಲ್ಲು ಅಥವಾ ಹೊರಟು ಹೋಗು. ತನ್ವಾಂಗಿ! ನಿನಗಿಷ್ಟ ಬಂದ ಹಾಗೆ ಮಾಡು. ಅಥವಾ ನಿನ್ನ ಆ ನರಭಕ್ಷಕ ಅಣ್ಣನನ್ನು ಕಳುಹಿಸಿಕೊಡು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಭೀಮಹಿಡಿಂಬಸಂವಾದೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಭೀಮಹಿಡಿಂಬಸಂವಾದ ಎನ್ನುವ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.