Adi Parva: Chapter 135

ಆದಿ ಪರ್ವ: ಜತುಗೃಹ ಪರ್ವ

೧೩೫

ವಿದುರನ ಸ್ನೇಹಿತ ಖನಕನು ಬಂದು ಅರಗಿನ ಮನೆಯಿಂದ ಕಾಡಿಗೆ ತಪ್ಪಿಸಿಕೊಂಡು ಹೋಗಲು ಸುರಂಗವನ್ನು ತೋಡುವುದು (೧-೨೧).

01135001 ವೈಶಂಪಾಯನ ಉವಾಚ|

01135001a ವಿದುರಸ್ಯ ಸುಹೃತ್ಕಶ್ಚಿತ್ಖನಕಃ ಕುಶಲಃ ಕ್ವ ಚಿತ್|

01135001c ವಿವಿಕ್ತೇ ಪಾಂಡವಾನ್ರಾಜನ್ನಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ರಾಜನ್! ಒಮ್ಮೆ ವಿದುರನ ಓರ್ವ ಸ್ನೇಹಿತ ಖನಕನು ಪಾಂಡವರು ಒಬ್ಬರೇ ಇರುವಾಗ ಹೇಳಿದನು:

01135002a ಪ್ರಹಿತೋ ವಿದುರೇಣಾಸ್ಮಿ ಖನಕಃ ಕುಶಲೋ ಭೃಶಂ|

01135002c ಪಾಂಡವಾನಾಂ ಪ್ರಿಯಂ ಕಾರ್ಯಮಿತಿ ಕಿಂ ಕರವಾಣಿ ವಃ||

“ನಾನೊಬ್ಬ ಅಗೆಯುವುದರಲ್ಲಿ ಕುಶಲ ಖನಕ. ವಿದುರನು ಪಾಂಡವರಿಗೆ ಒಳ್ಳೆಯದನ್ನು ಮಾಡಲೋಸುಗ ನನ್ನನ್ನು ಕಳುಹಿಸಿದ್ದಾನೆ. ನಿಮಗೆ ನಾನು ಏನು ಮಾಡಲಿ?

01135003a ಪ್ರಚ್ಛನ್ನಂ ವಿದುರೇಣೋಕ್ತಃ ಶ್ರೇಯಸ್ತ್ವಮಿಹ ಪಾಂಡವಾನ್|

01135003c ಪ್ರತಿಪಾದಯ ವಿಶ್ವಾಸಾದಿತಿ ಕಿಂ ಕರವಾಣಿ ವಃ||

ಪಾಂಡವರಿಗೆ ಶ್ರೇಯಸ್ಸುಂಟಾಗುವಂತೆ ಮಾಡು, ಅವರಿಗೆ ವಿಶ್ವಾಸವನ್ನು ನೀಡು ಎಂದು ವಿದುರನು ನನಗೆ ಗುಟ್ಟಿನಲ್ಲಿ ಹೇಳಿದನು. ನಿಮಗೆ ನಾನು ಏನು ಮಾಡಲಿ?

01135004a ಕೃಷ್ಣಪಕ್ಷೇ ಚತುರ್ದಶ್ಯಾಂ ರಾತ್ರಾವಸ್ಯ ಪುರೋಚನಃ|

01135004c ಭವನಸ್ಯ ತವ ದ್ವಾರಿ ಪ್ರದಾಸ್ಯತಿ ಹುತಾಶನಂ||

ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿ ಪುರೋಚನನು ನಿಮ್ಮ ಈ ಭವನದ ದ್ವಾರದಲ್ಲಿ ಬೆಂಕಿಯನ್ನು ಹಚ್ಚುವವನಿದ್ದಾನೆ.

01135005a ಮಾತ್ರಾ ಸಹ ಪ್ರದಗ್ಧವ್ಯಾಃ ಪಾಂಡವಾಃ ಪುರುಷರ್ಷಭಾಃ|

01135005c ಇತಿ ವ್ಯವಸಿತಂ ಪಾರ್ಥ ಧಾರ್ತರಾಷ್ಟ್ರಸ್ಯ ಮೇ ಶ್ರುತಂ||

ಪಾರ್ಥ! ಧಾರ್ತರಾಷ್ಟ್ರನು ಪುರುಷರ್ಷಭ ಪಾಂಡವರನ್ನು ಅವರ ಮಾತೆಯ ಸಹಿತ ಸುಟ್ಟುಹಾಕಲು ನಿರ್ಧರಿಸಿದ್ದಾನೆ ಎಂದು ಕೇಳಿದ್ದೇನೆ.

01135006a ಕಿಂ ಚಿಚ್ಚ ವಿದುರೇಣೋಕ್ತೋ ಮ್ಲೇಚ್ಛವಾಚಾಸಿ ಪಾಂಡವ|

01135006c ತ್ವಯಾ ಚ ತತ್ತಥೇತ್ಯುಕ್ತಮೇತದ್ವಿಶ್ವಾಸಕಾರಣಂ||

ಪಾಂಡವ! ವಿದುರನು ನಿನ್ನಲ್ಲಿ ಮ್ಲೇಚ್ಛ ಭಾಷೆಯಲ್ಲಿ ಏನನ್ನೋ ಹೇಳಿದ್ದನು. ಮತ್ತು ನೀನು ಅದಕ್ಕೆ ಹಾಗೆಯೇ ಆಗಲಿ ಎಂದು ಹೇಳಿದ್ದೆ. ಈ ವಿಷಯವೇ ನಿನಗೆ ನನ್ನಲ್ಲಿ ವಿಶ್ವಾಸವನ್ನು ತರಬೇಕು.”

01135007a ಉವಾಚ ತಂ ಸತ್ಯಧೃತಿಃ ಕುಂತೀಪುತ್ರೋ ಯುಧಿಷ್ಠಿರಃ|

01135007c ಅಭಿಜಾನಾಮಿ ಸೌಮ್ಯ ತ್ವಾಂ ಸುಹೃದಂ ವಿದುರಸ್ಯ ವೈ||

01135008a ಶುಚಿಮಾಪ್ತಂ ಪ್ರಿಯಂ ಚೈವ ಸದಾ ಚ ದೃಢಭಕ್ತಿಕಂ|

01135008c ನ ವಿದ್ಯತೇ ಕವೇಃ ಕಿಂ ಚಿದಭಿಜ್ಞಾನಪ್ರಯೋಜನಂ||

ಆಗ ಅವನಿಗೆ ಸತ್ಯಧೃತಿ ಕುಂತಿಪುತ್ರ ಯುಧಿಷ್ಠಿರನು ಹೇಳಿದನು: “ಸೌಮ್ಯ! ನಿನ್ನನ್ನು ನಾನು ವಿದುರನ ಸುಹೃದನೆಂದೂ, ಶುಚಿಯಾದವನೆಂದೂ, ದೃಢಭಕ್ತಿಯುಳ್ಳವನೆಂದೂ, ಪ್ರಿಯಕರನೆಂದೂ ಗುರುತಿಸುತ್ತೇನೆ. ಕವಿಯಿಂದ ಯಾವುದೇ ರೀತಿಯ ಅಭಿಜ್ಞಾನವನ್ನು ಬಳಸುವ ಅವಶ್ಯಕತೆಯಿಲ್ಲ.

01135009a ಯಥಾ ನಃ ಸ ತಥಾ ನಸ್ತ್ವಂ ನಿರ್ವಿಶೇಷಾ ವಯಂ ತ್ವಯಿ|

01135009c ಭವತಃ ಸ್ಮ ಯಥಾ ತಸ್ಯ ಪಾಲಯಾಸ್ಮಾನ್ಯಥಾ ಕವಿಃ||

ಅವನು ಹೇಗೆ ನಮ್ಮವನೋ ನೀನೂ ಕೂಡ ನಮ್ಮವನೇ; ನಿನ್ನನ್ನು ನಮ್ಮಲ್ಲಿಯೇ ಒಬ್ಬನೆಂದು ಪರಿಗಣಿಸುತ್ತೇವೆ. ನಾವು ಹೇಗೆ ಅವನಿಗೆ ಸೇರಿದ್ದೇವೋ ಹಾಗೆ ನಿನಗೂ ಸೇರಿದ್ದೇವೆ. ಆ ಕವಿಯು ನಮ್ಮನ್ನು ಪಾಲಿಸುವಂತೆ ಪಾಲಿಸು.

01135010a ಇದಂ ಶರಣಮಾಗ್ನೇಯಂ ಮದರ್ಥಮಿತಿ ಮೇ ಮತಿಃ|

01135010c ಪುರೋಚನೇನ ವಿಹಿತಂ ಧಾರ್ತರಾಷ್ಟ್ರಸ್ಯ ಶಾಸನಾತ್||

ಧಾರ್ತರಾಷ್ಟ್ರನ ಶಾಸನದಂತೆ ಪುರೋಚನನು ನನಗಾಗಿ ಈ ಅಗ್ನಿಜಾಲದ ಮನೆಯನ್ನು ನಿರ್ಮಿಸಿದ್ದಾನೆ ಎನ್ನುವುದು ವಿಹಿತವಾಗಿದೆ.

01135011a ಸ ಪಾಪಃ ಕೋಶವಾಂಶ್ಚೈವ ಸಸಹಾಯಶ್ಚ ದುರ್ಮತಿಃ|

01135011c ಅಸ್ಮಾನಪಿ ಚ ದುಷ್ಟಾತ್ಮಾ ನಿತ್ಯಕಾಲಂ ಪ್ರಬಾಧತೇ||

ಆ ಪಾಪಿಯಲ್ಲಿ ಕೋಶವೂ ಇದೆ ಸಹಾಯಕರೂ ಇದ್ದಾರೆ. ಆ ದುರ್ಮತಿ ದುಷ್ಟಾತ್ಮನು ಯಾವಾಗಲೂ ನಮ್ಮನ್ನು ಬಾಧಿಸಲು ನಿರತನಾಗಿದ್ದಾನೆ.

01135012a ಸ ಭವಾನ್ಮೋಕ್ಷಯತ್ವಸ್ಮಾನ್ಯತ್ನೇನಾಸ್ಮಾದ್ಧುತಾಶನಾತ್|

01135012c ಅಸ್ಮಾಸ್ವಿಹ ಹಿ ದಗ್ಧೇಷು ಸಕಾಮಃ ಸ್ಯಾತ್ಸುಯೋಧನಃ||

ನಿನ್ನೆಲ್ಲ ಪ್ರಯತ್ನಗಳಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು. ನಾವು ಸುಟ್ಟುಹೋದರೆ ಸುಯೋಧನನು ಬಯಸಿದಂತೆಯೇ ಆಗುತ್ತದೆ.

01135013a ಸಮೃದ್ಧಮಾಯುಧಾಗಾರಮಿದಂ ತಸ್ಯ ದುರಾತ್ಮನಃ|

01135013c ವಪ್ರಾಂತೇ ನಿಷ್ಪ್ರತೀಕಾರಮಾಶ್ಲಿಷ್ಯೇದಂ ಕೃತಂ ಮಹತ್||

ಇದೋ ಅಲ್ಲಿರುವುದು ಆ ದುರಾತ್ಮನ ಸಮೃದ್ಧ ಆಯುಧಾಗಾರ. ಈ ವಿಶಾಲ ಅರಮನೆಯನ್ನು ಅದರ ಗೋಡೆಗೆ ಹೊಂದಿಕೊಂಡೇ ಕಟ್ಟಿಸಿದ್ದಾರೆ.

01135014a ಇದಂ ತದಶುಭಂ ನೂನಂ ತಸ್ಯ ಕರ್ಮ ಚಿಕೀರ್ಷಿತಂ|

01135014c ಪ್ರಾಗೇವ ವಿದುರೋ ವೇದ ತೇನಾಸ್ಮಾನನ್ವಬೋಧಯತ್||

ಈ ಅಶುಭ ಕರ್ಮದಕುರಿತು ವಿದುರನಿಗೆ ಮೊದಲೇ ತಿಳಿದಿತ್ತು. ಆದುದರಿಂದಲೇ ಅವನು ನಮಗೆ ಎಚ್ಚರಿಕೆಯನ್ನು ನೀಡಿದ್ದ.

01135015a ಸೇಯಮಾಪದನುಪ್ರಾಪ್ತಾ ಕ್ಷತ್ತಾ ಯಾಂ ದೃಷ್ಟವಾನ್ಪುರಾ|

01135015c ಪುರೋಚನಸ್ಯಾವಿದಿತಾನಸ್ಮಾಂಸ್ತ್ವಂ ವಿಪ್ರಮೋಚಯ||

ಮೊದಲೇ ಕ್ಷತ್ತನು ವೀಕ್ಷಿಸಿದ್ದ ಆಪತ್ತು ನಮಗೆ ಈಗ ಬಂದಾಗಿದೆ. ಪುರೋಚನನಿಗೆ ತಿಳಿಯದ ರೀತಿಯಲ್ಲಿ ನಾವು ಇದರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡು.”

01135016a ಸ ತಥೇತಿ ಪ್ರತಿಶ್ರುತ್ಯ ಖನಕೋ ಯತ್ನಮಾಸ್ಥಿತಃ|

01135016c ಪರಿಖಾಮುತ್ಕಿರನ್ನಾಮ ಚಕಾರ ಸುಮಹದ್ಬಿಲಂ||

ಹಾಗೆಯೇ ಆಗಲೆಂದು ಹೇಳಿ ಖನಕನು ತನ್ನ ಕೆಲಸದಲ್ಲಿ ನಿರತನಾದನು. ಅವನು ಒಂದು ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ವಿಶಾಲ ಬಿಲವನ್ನು ಅಗೆದನು.

01135017a ಚಕ್ರೇ ಚ ವೇಶ್ಮನಸ್ತಸ್ಯ ಮಧ್ಯೇ ನಾತಿಮಹನ್ಮುಖಂ|

01135017c ಕಪಾಟಯುಕ್ತಮಜ್ಞಾತಂ ಸಮಂ ಭೂಮ್ಯಾ ಚ ಭಾರತ||

ಭಾರತ! ಅವನು ಅದನ್ನು ಮನೆಯ ಮಧ್ಯದಲ್ಲಿ ಅತಿ ದೊಡ್ಡ ಬಾಯಿಯಿಲ್ಲದೇ ನಿರ್ಮಿಸಿದನು. ಅದರ ಬಾಯನ್ನು ಭೂಮಿಗೆ ಸಮಾನ ಹಲಗೆಗಳಿಂದ ಮುಚ್ಚಿದನು.

01135018a ಪುರೋಚನಭಯಾಚ್ಚೈವ ವ್ಯದಧಾತ್ಸಂವೃತಂ ಮುಖಂ|

01135018c ಸ ತತ್ರ ಚ ಗೃಹದ್ವಾರಿ ವಸತ್ಯಶುಭಧೀಃ ಸದಾ||

ಸದಾ ಅವರ ಗೃಹದ್ವಾರದಲ್ಲಿಯೇ ವಾಸಿಸುತ್ತಿದ್ದ ಅಶುಭ ಪುರೋಚನನ ಭಯದಿಂದ ಅವರು ಅದರ ಬಾಯನ್ನು ಚೆನ್ನಾಗಿ ಮುಚ್ಚಿದರು.

01135019a ತತ್ರ ತೇ ಸಾಯುಧಾಃ ಸರ್ವೇ ವಸಂತಿ ಸ್ಮ ಕ್ಷಪಾಂ ನೃಪ|

01135019c ದಿವಾ ಚರಂತಿ ಮೃಗಯಾಂ ಪಾಂಡವೇಯಾ ವನಾದ್ವನಂ||

ನೃಪ! ಪಾಂಡವೇಯರೆಲ್ಲರೂ ಆಯುಧಗಳ ಜೊತೆ ಆ ಬಿಲದಲ್ಲಿಯೇ ಮಲಗುತ್ತಿದ್ದರು. ಹಗಲಿನಲ್ಲಿ ಅವರು ಬೇಟೆಗೆಂದು ವನದಿಂದ ವನಕ್ಕೆ ಸಂಚರಿಸುತ್ತಿದ್ದರು.

01135020a ವಿಶ್ವಸ್ತವದವಿಶ್ವಸ್ತಾ ವಂಚಯಂತಃ ಪುರೋಚನಂ|

01135020c ಅತುಷ್ಟಾಸ್ತುಷ್ಟವದ್ರಾಜನ್ನೂಷುಃ ಪರಮದುಃಖಿತಾಃ||

ಅವರು ಅಲ್ಲಿ ವಿಶ್ವಾಸವಿಲ್ಲದವರಾದರೂ ವಿಶ್ವಾಸವಿದ್ದವರಂತೆ, ಅಸಂತುಷ್ಟರಾಗಿದ್ದರೂ ಸಂತುಷ್ಟರಾದವರಂತೆ ಪುರೋಚನನನ್ನು ವಂಚಿಸಿ ಪರಮದುಃಖಿತರಾಗಿ ವಾಸಿಸುತ್ತಿದ್ದರು.

01135021a ನ ಚೈನಾನನ್ವಬುಧ್ಯಂತ ನರಾ ನಗರವಾಸಿನಃ|

01135021c ಅನ್ಯತ್ರ ವಿದುರಾಮಾತ್ಯಾತ್ತಸ್ಮಾತ್ಖನಕಸತ್ತಮಾತ್||

ವಿದುರನ ಅಮಾತ್ಯ ಖನಕಸತ್ತಮನನ್ನು ಬಿಟ್ಟು ನಗರವಾಸಿಗಳಲ್ಲಿ ಬೇರೆ ಯಾರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಜತುಗೃಹವಾಸೇ ಪಂಚತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಜತುಗೃಹವಾಸ ಎನ್ನುವ ನೂರಾಮೂವತ್ತೈದನೆಯ ಅಧ್ಯಾಯವು.

Related image

Comments are closed.