ಆದಿ ಪರ್ವ: ಜತುಗೃಹ ಪರ್ವ
೧೩೪
ವಾರಣಾವತದಲ್ಲಿ ಪಾಂಡವರ ಸ್ವಾಗತ, ಸತ್ಕಾರ; ಪುರೋಚನನಿಂದ ಉಡುಗೊರೆಯಾಗಿ ಪಡೆದ ಅರಗಿನ ಮನೆಯ ಪ್ರವೇಶ (೧-೧೨). ಸಂಶಯಪಟ್ಟ ಯುಧಿಷ್ಠಿರ-ಭೀಮರ ಸಂವಾದ (೧೩-೨೮).
01134001 ವೈಶಂಪಾಯನ ಉವಾಚ|
01134001a ತತಃ ಸರ್ವಾಃ ಪ್ರಕೃತಯೋ ನಗರಾದ್ವಾರಣಾವತಾತ್|
01134001c ಸರ್ವಮಂಗಲಸಂಯುಕ್ತಾ ಯಥಾಶಾಸ್ತ್ರಮತಂದ್ರಿತಾಃ||
01134002a ಶ್ರುತ್ವಾಗತಾನ್ಪಾಂಡುಪುತ್ರಾನ್ನಾನಾಯಾನೈಃ ಸಹಸ್ರಶಃ|
01134002c ಅಭಿಜಗ್ಮುರ್ನರಶ್ರೇಷ್ಠಾಂ ಶ್ರುತ್ವೈವ ಪರಯಾ ಮುದಾ||
ವೈಶಂಪಾಯನನು ಹೇಳಿದನು: “ವಾರಣಾವತದ ಸರ್ವ ಪೌರಜನರೂ ನರಶ್ರೇಷ್ಠ ಪಾಂಡುಪುತ್ರರು ಬಂದಿದ್ದಾರೆಂದು ಕೇಳಿದೊಡನೆ ಅತಿ ಸಂತೋಷದಿಂದ ನಾನಾ ವಾಹನಗಳಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಶಾಸ್ತ್ರಗಳಲ್ಲಿ ಹೇಳಿದ ಎಲ್ಲ ಮಂಗಲ ವಸ್ತುಗಳನ್ನು ತೆಗೆದುಕೊಂಡು ನಗರದಿಂದ ಹೊರಬಂದರು.
01134003a ತೇ ಸಮಾಸಾದ್ಯ ಕೌಂತೇಯಾನ್ವಾರಣಾವತಕಾ ಜನಾಃ|
01134003c ಕೃತ್ವಾ ಜಯಾಶಿಷಃ ಸರ್ವೇ ಪರಿವಾರ್ಯೋಪತಸ್ಥಿರೇ||
ವಾರಣಾವತಕ ಜನರು ಕೌಂತೇಯರನ್ನು ತಲುಪಿ ಸರ್ವರೂ ಅವರನ್ನು ಗೌರವದಿಂದ ಸುತ್ತುವರೆದು ಜಯಘೋಷಗೈದರು.
01134004a ತೈರ್ವೃತಃ ಪುರುಷವ್ಯಾಘ್ರೋ ಧರ್ಮರಾಜೋ ಯುಧಿಷ್ಠಿರಃ|
01134004c ವಿಬಭೌ ದೇವಸಂಕಾಶೋ ವಜ್ರಪಾಣಿರಿವಾಮರೈಃ||
ಅವರಿಂದ ಆವೃತ ಪುರುಷವ್ಯಾಘ್ರ ಧರ್ಮರಾಜ ಯುಧಿಷ್ಠಿರನು ಅಮರರ ಮಧ್ಯೆ ದೇವಸಂಕಾಶ ವಜ್ರಪಾಣಿಯಂತೆ ಕಂಗೊಳಿಸಿದನು.
01134005a ಸತ್ಕೃತಾಸ್ತೇ ತು ಪೌರೈಶ್ಚ ಪೌರಾನ್ಸತ್ಕೃತ್ಯ ಚಾನಘಾಃ|
01134005c ಅಲಂಕೃತಂ ಜನಾಕೀರ್ಣಂ ವಿವಿಶುರ್ವಾರಣಾವತಂ||
ಪೌರರಿಂದ ಸತ್ಕೃತರಾದ ಮತ್ತು ಪೌರರನ್ನು ಸತ್ಕರಿಸಿದ ಆ ಅನಘರು ಅಲಂಕೃತ ಜನಸಂಕೀರ್ಣ ವಾರಣಾವತವನ್ನು ಪ್ರವೇಶಿಸಿದರು.
01134006a ತೇ ಪ್ರವಿಶ್ಯ ಪುರಂ ವೀರಾಸ್ತೂರ್ಣಂ ಜಗ್ಮುರಥೋ ಗೃಹಾನ್|
01134006c ಬ್ರಾಹ್ಮಣಾನಾಂ ಮಹೀಪಾಲ ರತಾನಾಂ ಸ್ವೇಷು ಕರ್ಮಸು||
01134007a ನಗರಾಧಿಕೃತಾನಾಂ ಚ ಗೃಹಾಣಿ ರಥಿನಾಂ ತಥಾ|
01134007c ಉಪತಸ್ಥುರ್ನರಶ್ರೇಷ್ಠಾ ವೈಶ್ಯಶೂದ್ರಗೃಹಾನಪಿ||
ಮಹೀಪಾಲ! ಪುರವನ್ನು ಪ್ರವೇಶಿಸಿದ ಕೂಡಲೇ ಆ ವೀರರು ತಮ್ಮ ಕರ್ಮಗಳಲ್ಲಿ ನಿರತ ಬ್ರಾಹ್ಮಣರ ಮನೆಗಳಿಗೆ ಭೆಟ್ಟಿಯಿಟ್ಟರು. ಹಾಗೆಯೇ ನಗರದ ಅಧಿಕಾರಿಗಳ ಮತ್ತು ರಥಿಗಳ ಮನೆಗಳಿಗೆ ಹೋದರು. ಈ ನರಶ್ರೇಷ್ಠರು ವೈಶ್ಯ ಮತ್ತು ಶೂದ್ರರ ಮನೆಗಳಿಗೂ ಭೆಟ್ಟಿಯನ್ನಿತ್ತರು.
01134008a ಅರ್ಚಿತಾಶ್ಚ ನರೈಃ ಪೌರೈಃ ಪಾಂಡವಾ ಭರತರ್ಷಭಾಃ|
01134008c ಜಗ್ಮುರಾವಸಥಂ ಪಶ್ಚಾತ್ಪುರೋಚನಪುರಸ್ಕೃತಾಃ||
ಪೌರಜನರಿಂದ ಪೂಜಿಸಿಲ್ಪಟ್ಟ ನಂತರ ಭರತರ್ಷಭ ಪಾಂಡವರು ತಮ್ಮ ವಸತಿಗೃಹಕ್ಕೆ ತೆರಳಿ ಅಲ್ಲಿ ಪುರೋಚನನಿಂದ ಸ್ವಾಗತಿಸಲ್ಪಟ್ಟರು.
01134009a ತೇಭ್ಯೋ ಭಕ್ಷ್ಯಾನ್ನಪಾನಾನಿ ಶಯನಾನಿ ಶುಭಾನಿ ಚ|
01134009c ಆಸನಾನಿ ಚ ಮುಖ್ಯಾನಿ ಪ್ರದದೌ ಸ ಪುರೋಚನಃ||
ಪುರೋಚನನು ಅವರಿಗೆ ಭಕ್ಷ್ಯಾನ್ನಗಳನ್ನೂ, ಪಾನೀಯಗಳನ್ನೂ, ಸುಂದರ ಹಾಸಿಗೆಗಳನ್ನೂ ಮತ್ತು ಮುಖ್ಯ ಆಸನಗಳನ್ನೂ ಇತ್ತನು.
01134010a ತತ್ರ ತೇ ಸತ್ಕೃತಾಸ್ತೇನ ಸುಮಹಾರ್ಹಪರಿಚ್ಛದಾಃ|
01134010c ಉಪಾಸ್ಯಮಾನಾಃ ಪುರುಷೈರೂಷುಃ ಪುರನಿವಾಸಿಭಿಃ||
ಅಲ್ಲಿ ಅವರು ತಮ್ಮ ರಾಜಪರಿಚಾರಕರೊಂದಿಗೆ ಅವನಿಂದ ಸತ್ಕೃತರಾಗಿ ಪುರನಿವಾಸಿಗಳ ಸೇವೆಗಳೊಂದಿಗೆ ವಾಸಿಸಿದರು.
01134011a ದಶರಾತ್ರೋಷಿತಾನಾಂ ತು ತತ್ರ ತೇಷಾಂ ಪುರೋಚನಃ|
01134011c ನಿವೇದಯಾಮಾಸ ಗೃಹಂ ಶಿವಾಖ್ಯಮಶಿವಂ ತದಾ||
ಅಲ್ಲಿ ಅವರು ಹತ್ತು ದಿನಗಳು ಇರಲಾಗಿ ಪುರೋಚನನು ಅಶುಭವಾದರೂ ಶಿವ ಎಂದು ಕರೆಯಲ್ಪಟ್ಟ ಗೃಹವನ್ನು ಉಡುಗೊರೆಯಾಗಿತ್ತನು.
01134012a ತತ್ರ ತೇ ಪುರುಷವ್ಯಾಘ್ರಾ ವಿವಿಶುಃ ಸಪರಿಚ್ಛದಾಃ|
01134012c ಪುರೋಚನಸ್ಯ ವಚನಾತ್ಕೈಲಾಸಮಿವ ಗುಹ್ಯಕಾಃ||
ಪುರೋಚನನ ವಚನದಂತೆ ಆ ಪುರುಷವ್ಯಾಘ್ರರು ತಮ್ಮ ಪರಿಚಾರಕರೊಂದಿಗೆ ಗುಹ್ಯಕರು ಕೈಲಾಸವನ್ನು ಪ್ರವೇಶಿಸುವಂತೆ ಆ ಮನೆಯನ್ನು ಪ್ರವೇಶಿಸಿದರು.
01134013a ತತ್ತ್ವಗಾರಮಭಿಪ್ರೇಕ್ಷ್ಯ ಸರ್ವಧರ್ಮವಿಶಾರದಃ|
01134013c ಉವಾಚಾಗ್ನೇಯಮಿತ್ಯೇವಂ ಭೀಮಸೇನಂ ಯುಧಿಷ್ಠಿರಃ|
01134013e ಜಿಘ್ರನ್ಸೋಮ್ಯ ವಸಾಗಂಧಂ ಸರ್ಪಿರ್ಜತುವಿಮಿಶ್ರಿತಂ||
ಆದರೆ ಸರ್ವಧರ್ಮವಿಶಾರದ ಯುಧಿಷ್ಠಿರನು ಆ ಮನೆಯನ್ನು ಪರೀಕ್ಷಿಸಿ ಭೀಮಸೇನನಿಗೆ “ಬೆಣ್ಣೆ ಮತ್ತು ಲಾಕ್ಷಗಳಿಂದ ಮಿಶ್ರಿತ ಕೊಬ್ಬಿನ ವಾಸನೆ ಬರುತ್ತಿರುವ ಇದು ಒಂದು ಅಗ್ನಿಜಾಲ!” ಎಂದು ಹೇಳಿದನು.
01134014a ಕೃತಂ ಹಿ ವ್ಯಕ್ತಮಾಗ್ನೇಯಮಿದಂ ವೇಶ್ಮ ಪರಂತಪ|
01134014c ಶಣಸರ್ಜರಸಂ ವ್ಯಕ್ತಮಾನೀತಂ ಗೃಹಕರ್ಮಣಿ|
01134014e ಮುಂಜಬಲ್ವಜವಂಶಾದಿ ದ್ರವ್ಯಂ ಸರ್ವಂ ಘೃತೋಕ್ಷಿತಂ||
“ಪರಂತಪ! ಬೆಂಕಿಯಲ್ಲಿ ಸುಟ್ಟು ಭಸ್ಮಮಾಡುವುದಕ್ಕಾಗಿಯೇ ಈ ಮನೆಯನ್ನು ನಿರ್ಮಿಸಿದ್ದಾರೆ ಎನ್ನುವುದು ವ್ಯಕ್ತವಾಗುತ್ತದೆ. ಮನೆಯನ್ನು ಕಟ್ಟುವುದಕ್ಕೆ ಬಳಸಿದ ಶಣ, ಸರ್ಜ, ಗನ್ನೆ, ಹುಲ್ಲು, ತೊಗಟೆ ಮತ್ತು ಬಿದಿರು ಎಲ್ಲವನ್ನೂ ತುಪ್ಪದಲ್ಲಿ ತೋಯಿಸಿದ್ದಾರೆ ಎನ್ನುವುದೂ ವ್ಯಕ್ತವಾಗುತ್ತದೆ.
01134015a ಶಿಲ್ಪಿಭಿಃ ಸುಕೃತಂ ಹ್ಯಾಪ್ತೈರ್ವಿನೀತೈರ್ವೇಶ್ಮಕರ್ಮಣಿ|
01134015c ವಿಶ್ವಸ್ತಂ ಮಾಮಯಂ ಪಾಪೋ ದಗ್ಧುಕಾಮಃ ಪುರೋಚನಃ||
ಅವರ ವೃತ್ತಿಯನ್ನು ಚೆನ್ನಾಗಿ ತಿಳಿದಿರುವ ಶಿಲ್ಪಿಗಳೇ ಇದನ್ನು ನಿರ್ಮಿಸಿದ್ದಾರೆ ಎನ್ನುವುದು ಸತ್ಯ. ನಾನು ನಿಶ್ಚಿಂತೆಯಿಂದಿರುವಾಗ ಪಾಪಿ ಪುರೋಚನನು ನನ್ನನ್ನು ಸುಟ್ಟುಹಾಕಲು ಬಯಸಿದ್ದಾನೆ.
01134016a ಇಮಾಂ ತು ತಾಂ ಮಹಾಬುದ್ಧಿರ್ವಿದುರೋ ದೃಷ್ಟವಾಂಸ್ತದಾ|
01134016c ಆಪದಂ ತೇನ ಮಾಂ ಪಾರ್ಥ ಸ ಸಂಬೋಧಿತವಾನ್ಪುರಾ||
ಪಾರ್ಥ! ಇದನ್ನೇ ಆ ಮಹಾಬುದ್ಧಿ ವಿದುರನು ಮೊದಲೇ ವೀಕ್ಷಿಸಿ ಇದರ ಕುರಿತು ಎಚ್ಚರಿಕೆಯ ಮಾತುಗಳನ್ನಾಡಿದ್ದ.
01134017a ತೇ ವಯಂ ಬೋಧಿತಾಸ್ತೇನ ಬುದ್ಧವಂತೋಽಶಿವಂ ಗೃಹಂ|
01134017c ಆಚಾರ್ಯೈಃ ಸುಕೃತಂ ಗೂಢೈರ್ದುರ್ಯೋಧನವಶಾನುಗೈಃ||
ಅವನು ಮೊದಲೇ ನಮಗೆ ಎಚ್ಚರಿಕೆ ನೀಡಿದ್ದುದರಿಂದ ಈಗ ನಮಗೆ ಈ ಮನೆಯು ಅಶುಭವಾದದ್ದು ಮತ್ತು ದುರ್ಯೋಧನನ ವಶದಲ್ಲಿದ್ದು ಅವನಿಗೆ ವಿಧೇಯರಾಗಿರುವ ಗೂಢ ಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ ಎನ್ನುವುದು ತಿಳಿದಿದೆ.”
01134018 ಭೀಮ ಉವಾಚ|
01134018a ಯದಿದಂ ಗೃಹಮಾಗ್ನೇಯಂ ವಿಹಿತಂ ಮನ್ಯತೇ ಭವಾನ್|
01134018c ತತ್ರೈವ ಸಾಧು ಗಚ್ಛಾಮೋ ಯತ್ರ ಪೂರ್ವೋಷಿತಾ ವಯಂ||
ಭೀಮನು ಹೇಳಿದನು: “ಈ ಮನೆಯು ಅಗ್ನಿಜಾಲವಾಗಿ ನಿರ್ಮಿತವಾಗಿದೆ ಎಂದು ನಿನ್ನ ಅಭಿಪ್ರಾಯವಾದರೆ ನಾವು ಮೊದಲೇ ವಾಸಿಸುತ್ತಿದ್ದ ಮನೆಗೆ ಹೋಗುವುದು ಒಳ್ಳೆಯದು.”
01134019 ಯುಧಿಷ್ಠಿರ ಉವಾಚ|
01134019a ಇಹ ಯತ್ತೈರ್ನಿರಾಕಾರೈರ್ವಸ್ತವ್ಯಮಿತಿ ರೋಚಯೇ|
01134019c ನಷ್ಟೈರಿವ ವಿಚಿನ್ವದ್ಭಿರ್ಗತಿಮಿಷ್ಟಾಂ ಧ್ರುವಾಮಿತಃ||
ಯುಧಿಷ್ಠಿರನು ಹೇಳಿದನು: “ಇಲ್ಲ. ನಾವು ಏನೂ ತಿಳಿಯದವರಂತೆ ಉತ್ಸಾಹದಿಂದ, ನಾಶವಾಗುತ್ತೇವೋ ಎನ್ನುವ ಹಾಗೆ ಇಲ್ಲಿಯೇ ಇದ್ದುಕೊಂಡು ಇಲ್ಲಿಂದ ತಪ್ಪಿಸಿಕೊಳ್ಳುವ ನಿರ್ದಿಷ್ಠ ಮಾರ್ಗವನ್ನು ಹುಡುಕಬೇಕು ಎಂದು ನನಗನ್ನಿಸುತ್ತದೆ.
01134020a ಯದಿ ವಿಂದೇತ ಚಾಕಾರಮಸ್ಮಾಕಂ ಹಿ ಪುರೋಚನಃ|
01134020c ಶೀಘ್ರಕಾರೀ ತತೋ ಭೂತ್ವಾ ಪ್ರಸಹ್ಯಾಪಿ ದಹೇತ ನಃ||
ಏಕೆಂದರೆ ಪುರೋಚನನು ನಮಗೆ ಇದೆಲ್ಲ ತಿಳಿದಿದೆ ಎಂದು ಯೋಚಿಸಿದರೆ ಶೀಘ್ರದಲ್ಲಿಯೇ ಕಾರ್ಯವೆಸಗಿ ನಮ್ಮನ್ನು ಸುಟ್ಟು ಸಾಯಿಸುತ್ತಾನೆ.
01134021a ನಾಯಂ ಬಿಭೇತ್ಯುಪಕ್ರೋಶಾದಧರ್ಮಾದ್ವಾ ಪುರೋಚನಃ|
01134021c ತಥಾ ಹಿ ವರ್ತತೇ ಮಂದಃ ಸುಯೋಧನಮತೇ ಸ್ಥಿತಃ||
ಸುಯೋಧನನ ಅನುಮತಿಯಂತೆ ನಡೆಯುತ್ತಿರುವ ಮೂಢ ಪುರೋಚನನು ಯಾವುದೇ ರೀತಿಯ ಅಧರ್ಮ ಮತ್ತು ಉಪಕ್ರೋಶದಿಂದ ಹಿಂಜರಿಯುವುದಿಲ್ಲ.
01134022a ಅಪಿ ಚೇಹ ಪ್ರದಗ್ಧೇಷು ಭೀಷ್ಮೋಽಸ್ಮಾಸು ಪಿತಾಮಹಃ|
01134022c ಕೋಪಂ ಕುರ್ಯಾತ್ಕಿಮರ್ಥಂವಾ ಕೌರವಾನ್ಕೋಪಯೇತ ಸಃ|
01134022e ಧರ್ಮ ಇತ್ಯೇವ ಕುಪ್ಯೇತ ತಥಾನ್ಯೇ ಕುರುಪುಂಗವಾಃ||
ನಾವು ಸುಟ್ಟು ಭಸ್ಮವಾದಾಗ ಪಿತಾಮಹ ಭೀಷ್ಮ ಅಥವಾ ಇತರ ಕೌರವರು ಕುಪಿತರಾಗುತ್ತಾರೋ ಇಲ್ಲವೋ ಎನ್ನುವುದು ಪ್ರಶ್ನೆ. ಧರ್ಮಪೂರಕವಾಗಿ ಅವನು ಮತ್ತು ಅನ್ಯ ಕುರುಪುಂಗವರು ಸಿಟ್ಟಿಗೇಳಲೂ ಬಹುದು.
01134023a ವಯಂ ತು ಯದಿ ದಾಹಸ್ಯ ಬಿಭ್ಯತಃ ಪ್ರದ್ರವೇಮ ಹಿ|
01134023c ಸ್ಪಶೈರ್ನೋ ಘಾತಯೇತ್ಸಾರ್ವಾನ್ರಾಜ್ಯಲುಬ್ಧಃ ಸುಯೋಧನಃ||
ಆದರೆ ಬೆಂಕಿಯ ಭಯದಿಂದ ನಾವು ಪಲಾಯನ ಮಾಡಿದರೆ ರಾಜ್ಯಲುಬ್ಧ ಸುಯೋಧನನು ನಮ್ಮೆಲ್ಲರನ್ನೂ ತನ್ನ ಗೂಢಾಚಾರಿಗಳ ಮೂಲಕ ಸಾಯಿಸುತ್ತಾನೆ.
01134024a ಅಪದಸ್ಥಾನ್ಪದೇ ತಿಷ್ಠನ್ನಪಕ್ಷಾನ್ಪಕ್ಷಸಂಸ್ಥಿತಃ|
01134024c ಹೀನಕೋಶಾನ್ಮಹಾಕೋಶಃ ಪ್ರಯೋಗೈರ್ಘಾತಯೇದ್ಧ್ರುವಂ||
ಅವನಿಗೆ ಸ್ಥಾನಮಾನಗಳಿವೆ, ನಮಗೆ ಸ್ಥಾನಮಾನಗಳಿಲ್ಲ. ಅವನಿಗೆ ತನ್ನ ಪಕ್ಷದವರು ಎನ್ನುವುವರಿದ್ದಾರೆ, ನಮಗೆ ನಮ್ಮವರು ಯಾರೂ ಇಲ್ಲ. ಅವನಿಗೆ ಮಹಾಕೋಶವೇ ಇದೆ. ನಮಗೆ ಕೋಶವೇ ಇಲ್ಲ. ನಿರ್ದಿಷ್ಠವಾಗಿಯೂ ಅವನು ನಮ್ಮನ್ನು ಸಂಹರಿಸಬಲ್ಲ.
01134025a ತದಸ್ಮಾಭಿರಿಮಂ ಪಾಪಂ ತಂ ಚ ಪಾಪಂ ಸುಯೋಧನಂ|
01134025c ವಂಚಯದ್ಭಿರ್ನಿವಸ್ತವ್ಯಂ ಚನ್ನವಾಸಂ ಕ್ವ ಚಿತ್ಕ್ವ ಚಿತ್||
ಆದುದರಿಂದ ಈ ಪಾಪಿಯನ್ನೂ ಮತ್ತು ಪಾಪಿ ಸುಯೋಧನನ್ನೂ ವಂಚಿಸಿ ನಾವು ಎಲ್ಲಿಯೇ ವಾಸಿಸುತ್ತಿರಲಿ ಗೂಢವಾಗಿ ವಾಸಿಸಬೇಕು.
01134026a ತೇ ವಯಂ ಮೃಗಯಾಶೀಲಾಶ್ಚರಾಮ ವಸುಧಾಮಿಮಾಂ|
01134026c ತಥಾ ನೋ ವಿದಿತಾ ಮಾರ್ಗಾ ಭವಿಷ್ಯಂತಿ ಪಲಾಯತಾಂ||
ನಾವು ಬೇಟೆಗಾರರಂತೆ ಭೂಮಿಯನ್ನೆಲ್ಲಾ ಸುತ್ತೋಣ. ಇದರಿಂದ ಭವಿಷ್ಯದಲ್ಲಿ ಪಲಾಯನಗೈಯಲು ಎಲ್ಲ ಮಾರ್ಗಗಳೂ ನಮಗೆ ತಿಳಿಯುತ್ತವೆ.
01134027a ಭೌಮಂ ಚ ಬಿಲಮದ್ಯೈವ ಕರವಾಮ ಸುಸಂವೃತಂ|
01134027c ಗೂಢೋಚ್ಛ್ವಸಾನ್ನ ನಸ್ತತ್ರ ಹುತಾಶಃ ಸಂಪ್ರಧಕ್ಷ್ಯತಿ||
ಚೆನ್ನಾಗಿ ಮುಚ್ಚಲ್ಪಟ್ಟ ಒಂದು ಬಿಲವನ್ನು ಭೂಮಿಯಲ್ಲಿ ಅಗೆಯಬೇಕು; ಅಲ್ಲಿ ಅಡಗಿ ಕೊಂಡರೆ ಬೆಂಕಿಯು ನಮ್ಮನ್ನು ಸುಡುವುದಿಲ್ಲ.
01134028a ವಸತೋಽತ್ರ ಯಥಾ ಚಾಸ್ಮಾನ್ನ ಬುಧ್ಯೇತ ಪುರೋಚನಃ|
01134028c ಪೌರೋ ವಾಪಿ ಜನಃ ಕಶ್ಚಿತ್ತಥಾ ಕಾರ್ಯಮತಂದ್ರಿತೈಃ||
ನಾವು ಇಲ್ಲಿ ವಾಸಿಸುತ್ತಿರುವಾಗ ಪುರೋಚನನಿಗಾಗಲೀ ಅಥವಾ ಇತರ ಪೌರ ಜನರಿಗಾಗಲೀ ತಿಳಿಯದಂತೆ ಎಲ್ಲ ಜಾಗರೂಕತೆಯನ್ನೂ ವಹಿಸೋಣ.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಭೀಮಸೇನಯುಧಿಷ್ಠಿರ ಸಂವಾದೇ ಚತುಸ್ತ್ರಿಂಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಭೀಮಸೇನ ಯುಧಿಷ್ಠಿರ ಸಂವಾದ ಎನ್ನುವ ನೂರಾಮೂವತ್ತ್ನಾಲ್ಕನೆಯ ಅಧ್ಯಾಯವು.