Adi Parva: Chapter 130

ಆದಿ ಪರ್ವ: ಜತುಗೃಹ ಪರ್ವ

೧೩೦

ಪಾಂಡುವು ತನ್ನ ಮೇಲೆ ತೋರಿಸಿದ್ದ ಪ್ರೀತಿಯನ್ನು ನೆನೆದುಕೊಂಡು ಧೃತರಾಷ್ಟ್ರನು ಯುಧಿಷ್ಠಿರನ ಸಲುವಾಗಿ ಪೌರರು ಸಬಾಂಧವರಾಗಿ ತಮ್ಮನ್ನು ಕೊಲ್ಲಬಹುದೆಂದು ಅಳುಕುವುದು (೧-೭). ಅದರ ಕುರಿತು ಯೋಜನೆಗಳನ್ನು ಈಗಾಗಲೇ ಮಾಡಿದ್ದಾಗಿಯೂ, ರಾಜನು ಹೇಗಾದರೂ ಮಾಡಿ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಬೇಕೆಂದೂ, ರಾಜ್ಯವು ತನ್ನಲ್ಲಿ ಪ್ರತಿಷ್ಠಿತವಾದಾಗ ಅವರು ಮರಳಿ ಬರಬಹುದೆಂದೂ ದುರ್ಯೋಧನನು ಹೇಳುವುದು (೮-೧೧). ಧೃತರಾಷ್ಟ್ರನು ಹಿಂಜರಿಯಲು ದುರ್ಯೋಧನನು ತನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಅತಿ ಘೋರ ಮುಳ್ಳನ್ನು ನಾಶಪಡಿಸಲು ಕೇಳಿಕೊಳ್ಳುವುದು (೧೨-೨೦).

01130001 ವೈಶಂಪಾಯನ ಉವಾಚ|

01130001a ಧೃತರಾಷ್ಟ್ರಸ್ತು ಪುತ್ರಸ್ಯ ಶ್ರುತ್ವಾ ವಚನಮೀದೃಶಂ|

01130001c ಮುಹೂರ್ತಮಿವ ಸಂಚಿಂತ್ಯ ದುರ್ಯೋಧನಮಥಾಬ್ರವೀತ್||

ವೈಶಂಪಾಯನನು ಹೇಳಿದನು: “ಪುತ್ರ ದುರ್ಯೋಧನನ ಈ ಮಾತುಗಳನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಹೇಳಿದನು:

01130002a ಧರ್ಮನಿತ್ಯಃ ಸದಾ ಪಾಂಡುರ್ಮಮಾಸೀತ್ಪ್ರಿಯಕೃದ್ಧಿತಃ|

01130002c ಸರ್ವೇಷು ಜ್ಞಾತಿಷು ತಥಾ ಮಯಿ ತ್ವಾಸೀದ್ವಿಶೇಷತಃ||

“ಧರ್ಮನಿತ್ಯ ಪಾಂಡುವು ಸದಾ ಎಲ್ಲ ಬಾಂಧವರಿಗೂ, ಅದರಲ್ಲೂ ವಿಶೇಷವಾಗಿ ನನಗೆ ಪ್ರಿಯವಾದುದನ್ನೇ ಮಾಡುತ್ತಿದ್ದನು.

01130003a ನಾಸ್ಯ ಕಿಂ ಚಿನ್ನ ಜಾನಾಮಿ ಭೋಜನಾದಿ ಚಿಕೀರ್ಷಿತಂ|

01130003c ನಿವೇದಯತಿ ನಿತ್ಯಂ ಹಿ ಮಮ ರಾಜ್ಯಂ ಧೃತವ್ರತಃ||

ಅವನು ತನಗಾಗಿ ಭೋಜನವೇ ಇತ್ಯಾದಿ ಏನನ್ನೂ ಬಯಸಿದ್ದುದನ್ನು ತಿಳಿದಿಲ್ಲ. ಆ ಧೃತವ್ರತನು ರಾಜ್ಯವನ್ನು ಹೇಗೋ ಹಾಗೆ ನನಗೆ ಎಲ್ಲವನ್ನೂ ಕೊಡುತ್ತಿದ್ದನು.

01130004a ತಸ್ಯ ಪುತ್ರೋ ಯಥಾ ಪಾಂಡುಸ್ತಥಾ ಧರ್ಮಪರಾಯಣಃ|

01130004c ಗುಣವಾಽಲ್ಲೋಕವಿಖ್ಯಾತಃ ಪೌರಾಣಾಂ ಚ ಸುಸಮ್ಮತಃ||

ಪಾಂಡುವಿನ ಹಾಗೆ ಅವನ ಪುತ್ರನೂ ಕೂಡ ಧರ್ಮಪರಾಯಣನಾಗಿದ್ದಾನೆ. ಗುಣದಲ್ಲಿ ಲೋಕವಿಖ್ಯಾತನಾಗಿದ್ದಾನೆ ಮತ್ತು ಪೌರರ ಸುಸಮ್ಮತನಾಗಿದ್ದಾನೆ.

01130005a ಸ ಕಥಂ ಶಕ್ಯಮಸ್ಮಾಭಿರಪಕ್ರಷ್ಟುಂ ಬಲಾದಿತಃ|

01130005c ಪಿತೃಪೈತಾಮಹಾದ್ರಾಜ್ಯಾತ್ ಸಸಹಾಯೋ ವಿಶೇಷತಃ||

ನಾವಾದರೂ ಹೇಗೆ, ವಿಶೇಷವಾಗಿ ಸಸಹಾಯನಾದ ಅವನನ್ನು  ಬಲವಂತವಾಗಿ ತನ್ನ ಪಿತೃ-ಪಿತಾಮಹರ ರಾಜ್ಯದಿಂದ ಹೊರಗಟ್ಟಲು ಸಾದ್ಯ?

01130006a ಭೃತಾ ಹಿ ಪಾಂಡುನಾಮಾತ್ಯಾ ಬಲಂ ಚ ಸತತಂ ಭೃತಂ|

01130006c ಭೃತಾಃ ಪುತ್ರಾಶ್ಚ ಪೌತ್ರಾಶ್ಚ ತೇಷಾಮಪಿ ವಿಶೇಷತಃ||

ಪಾಂಡುವು ಸತತವಾಗಿ ಅಮಾತ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು, ಸೇನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು ಮತ್ತು ವಿಶೇಷವಾಗಿ ತನ್ನ ಪುತ್ರ-ಪೌತ್ರರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.

01130007a ತೇ ಪುರಾ ಸತ್ಕೃತಾಸ್ತಾತ ಪಾಂಡುನಾ ಪೌರವಾ ಜನಾಃ|

01130007c ಕಥಂ ಯುಧಿಷ್ಠಿರಸ್ಯಾರ್ಥೇ ನ ನೋ ಹನ್ಯುಃ ಸಬಾಂಧವಾನ್||

ಹಿಂದೆ ಪಾಂಡುವು ಪೌರವ ಜನರೆಲ್ಲರನ್ನೂ ಸತ್ಕರಿಸುತ್ತಿದ್ದನು. ಮಗನೇ! ಯುಧಿಷ್ಠಿರನ ಸಲುವಾಗಿ ಸಬಾಂಧವರಾಗಿ ನಮ್ಮನ್ನೆಲ್ಲ ಅವರು ಕೊಲ್ಲುವುದಿಲ್ಲವೇ?”

01130008 ದುರ್ಯೋಧನ ಉವಾಚ|

01130008a ಏವಮೇತನ್ಮಯಾ ತಾತ ಭಾವಿತಂ ದೋಷಮಾತ್ಮನಿ|

01130008c ದೃಷ್ಟ್ವಾ ಪ್ರಕೃತಯಃ ಸರ್ವಾ ಅರ್ಥಮಾನೇನ ಯೋಜಿತಾಃ||

01130009a ಧ್ರುವಮಸ್ಮತ್ಸಹಾಯಾಸ್ತೇ ಭವಿಷ್ಯಂತಿ ಪ್ರಧಾನತಃ|

01130009c ಅರ್ಥವರ್ಗಃ ಸಹಾಮಾತ್ಯೋ ಮತ್ಸಂಸ್ಥೋಽದ್ಯ ಮಹೀಪತೇ||

ದುರ್ಯೋಧನನು ಹೇಳಿದನು: “ತಂದೇ! ಈ ದೋಷದ ಕುರಿತು ನಾನು ಇದಾಗಲೇ ಯೋಚಿಸಿದ್ದೇನೆ. ಪ್ರಕೃತಿಯಲ್ಲಿರುವ ಎಲ್ಲವನ್ನೂ ನೋಡಿದಾಗ ಹಣ ಮತ್ತು ಅನುಕೂಲಗಳನ್ನು ಪಡೆದಿರುವ ಪ್ರಜೆಗಳು ತಮ್ಮ ನಿಷ್ಠತೆಯನ್ನು ನಿಶ್ಚಯವಾಗಿಯೂ ನಮ್ಮ ಮೇಲೆ ಬದಲಾಯಿಸುತ್ತಾರೆ. ಮಹೀಪತೇ! ಅರ್ಥವರ್ಗ ಮತ್ತು ಅದಕ್ಕೆ ಸಂಬಂಧಿಸಿದ ಅಮಾತ್ಯರು ಈಗ ನನ್ನ ವಶದಲ್ಲಿದ್ದಾರೆ.

01130010a ಸ ಭವಾನ್ಪಾಂಡವಾನಾಶು ವಿವಾಸಯಿತುಮರ್ಹತಿ|

01130010c ಮೃದುನೈವಾಭ್ಯುಪಾಯೇನ ನಗರಂ ವಾರಣಾವತಂ||

ನೀನು ಪಾಂಡವರನ್ನು ಯಾವುದಾದರೂ ಮೃದು ಉಪಾಯದಿಂದ ವಾರಣಾವತ ನಗರದಲ್ಲಿರುವಂತೆ ಮಾಡಬೇಕು.

01130011a ಯದಾ ಪ್ರತಿಷ್ಠಿತಂ ರಾಜ್ಯಂ ಮಯಿ ರಾಜನ್ಭವಿಷ್ಯತಿ|

01130011c ತದಾ ಕುಂತೀ ಸಹಾಪತ್ಯಾ ಪುನರೇಷ್ಯತಿ ಭಾರತ||

ಭಾರತ ರಾಜನ್! ಯಾವಾಗ ಈ ರಾಜ್ಯವು ನನ್ನಲ್ಲಿ ಪ್ರತಿಷ್ಠಿತವಾಗುತ್ತದೆಯೋ ಆಗ ಕುಂತಿಯು ತನ್ನ ಮಕ್ಕಳಿಂದೊಡಗೂಡಿ ಪುನಃ ಇಲ್ಲಿಗೆ ಬರಬಹುದು.”

01130012 ಧೃತರಾಷ್ಟ್ರ ಉವಾಚ|

01130012a ದುರ್ಯೋಧನ ಮಮಾಪ್ಯೇತದ್ಧೃದಿ ಸಂಪರಿವರ್ತತೇ|

01130012c ಅಭಿಪ್ರಾಯಸ್ಯ ಪಾಪತ್ವಾನ್ನೈತತ್ತು ವಿವೃಣೋಮ್ಯಹಂ||

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ನಾನೂ ಕೂಡ ಅದೇ ಉಪಾಯವನ್ನು ಯೋಚಿಸಿದ್ದೆ. ಆದರೆ ಈ ಪಾಪಿ ಅಭಿಪ್ರಾಯವನ್ನು ಯಾರಿಗೂ ತಿಳಿಸಿರಲಿಲ್ಲ.

01130013a ನ ಚ ಭೀಷ್ಮೋ ನ ಚ ದ್ರೋಣೋ ನ ಕ್ಷತ್ತಾ ನ ಚ ಗೌತಮಃ|

01130013c ವಿವಾಸ್ಯಮಾನಾನ್ಕೌಂತೇಯಾನನುಮಂಸ್ಯಂತಿ ಕರ್ಹಿ ಚಿತ್||

ಭೀಷ್ಮನಾಗಲೀ ದ್ರೊಣನಾಗಲೀ ಕ್ಷತ್ತನಾಗಲೀ ಗೌತಮನಾಗಲೀ ಯಾರೂ ಸಹ ಕೌಂತೇಯರನ್ನು ಹೊರಗಟ್ಟುವುದನ್ನು ಎಂದೂ ಸಮ್ಮತಿಸುವುದಿಲ್ಲ.

01130014a ಸಮಾ ಹಿ ಕೌರವೇಯಾಣಾಂ ವಯಮೇತೇ ಚ ಪುತ್ರಕ|

01130014c ನೈತೇ ವಿಷಮಮಿಚ್ಛೇಯುರ್ಧರ್ಮಯುಕ್ತಾ ಮನಸ್ವಿನಃ||

ಪುತ್ರಕ! ಆ ಕೌರವರಿಗೆ ನಾವೂ ಮತ್ತು ಅವರೂ ಒಂದೇ. ಈ ಧರ್ಮಯುಕ್ತ ಮನಸ್ವಿಗಳು ಈ ರೀತಿಯ ವಿಷಮವನ್ನು ಎಂದೂ ಸಹಿಸುವುದಿಲ್ಲ.

01130015a ತೇ ವಯಂ ಕೌರವೇಯಾಣಾಮೇತೇಷಾಂ ಚ ಮಹಾತ್ಮನಾಂ|

01130015c ಕಥಂ ನ ವಧ್ಯತಾಂ ತಾತ ಗಚ್ಛೇಮ ಜಗತಸ್ತಥಾ||

ಮಗನೇ! ಈ ಮಹಾತ್ಮ ಕೌರವರನ್ನು ಕೊಂದು ನಾವು ಹೇಗೆ ತಾನೆ ಜಗತ್ತಿನಲ್ಲಿ ಇರಲು ಸಾಧ್ಯ?”

01130016 ದುರ್ಯೋಧನ ಉವಾಚ|

01130016a ಮಧ್ಯಸ್ಥಃ ಸತತಂ ಭೀಷ್ಮೋ ದ್ರೋಣಪುತ್ರೋ ಮಯಿ ಸ್ಥಿತಃ|

01130016c ಯತಃ ಪುತ್ರಸ್ತತೋ ದ್ರೋಣೋ ಭವಿತಾ ನಾತ್ರ ಸಾಂಶಯಃ||

ದುರ್ಯೋಧನನು ಹೇಳಿದನು: “ಭೀಷ್ಮನು ಯಾವಾಗಲೂ ಮಧ್ಯಸ್ಥನಾಗಿರುತ್ತಾನೆ. ದ್ರೋಣ ಪುತ್ರನು ನನ್ನ ಕಡೆ ಇದ್ದಾನೆ. ಮತ್ತು ತನ್ನ ಪುತ್ರನೆಲ್ಲಿರುತ್ತಾನೋ ಅಲ್ಲಿ ದ್ರೋಣನಿರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

01130017a ಕೃಪಃ ಶಾರದ್ವತಶ್ಚೈವ ಯತ ಏತೇ ತ್ರಯಸ್ತತಃ|

01130017c ದ್ರೋಣಂ ಚ ಭಾಗಿನೇಯಂ ಚ ನ ಸ ತ್ಯಕ್ಷ್ಯತಿ ಕರ್ಹಿ ಚಿತ್||

ಅವರು ಮೂವರೂ ಎಲ್ಲಿ ಇರಲಿಕ್ಕಾಗುತ್ತದೆಯೋ ಅಲ್ಲಿ ಕೃಪ ಶಾರದ್ವತನೂ ಸೇರುತ್ತಾನೆ. ಅವನು ಎಂದೂ ದ್ರೋಣ ಮತ್ತು ತನ್ನ ತಂಗಿಯ ಮಗನನ್ನು ಬಿಟ್ಟಿರುವುದಿಲ್ಲ.

01130018a ಕ್ಷತ್ತಾರ್ಥಬದ್ಧಸ್ತ್ವಸ್ಮಾಕಂ ಪ್ರಚ್ಛನ್ನಂ ತು ಯತಃ ಪರೇ|

01130018c ನ ಚೈಕಃ ಸ ಸಮರ್ಥೋಽಸ್ಮಾನ್ಪಾಂಡವಾರ್ಥೇ ಪ್ರಬಾಧಿತುಂ||

ಅವನು ಬೇರೆಯವರೊಂದಿಗೆ ಗೌಪ್ಯವಾಗಿ ಎಷ್ಟೇ ಸೇರಿದರೂ, ಕ್ಷತ್ತನ ಜೀವನವು ನಮ್ಮೊಂದಿಗೆ ಬಂಧಿಸಲ್ಪಟ್ಟಿದೆ. ಪಾಂಡವರ ಪರವಾಗಿ ಏಕೈಕನಾದ ಅವನು ನಮಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡಲಿಕ್ಕೂ ಸಮರ್ಥನಲ್ಲ.

01130019a ಸ ವಿಶ್ರಬ್ಧಃ ಪಾಂಡುಪುತ್ರಾನ್ಸಹ ಮಾತ್ರಾ ವಿವಾಸಯ|

01130019c ವಾರಣಾವತಮದ್ಯೈವ ನಾತ್ರ ದೋಷೋ ಭವಿಷ್ಯತಿ||

ನೀನು ಬೇಕಾದರೆ ಇಂದೇ ತಾಯಿಯೊಂದಿಗೆ ಪಾಂಡುಪುತ್ರರನ್ನು ನಿಸ್ಸಂಕೋಚವಾಗಿ ವಾರಣಾವತಕ್ಕೆ ಕಳುಹಿಸಬಹುದು. ಇದರಿಂದ ಯಾವ ದೋಷವೂ ಉಂಟಾಗುವುದಿಲ್ಲ.

01130020a ವಿನಿದ್ರಕರಣಂ ಘೋರಂ ಹೃದಿ ಶಲ್ಯಮಿವಾರ್ಪಿತಂ|

01130020c ಶೋಕಪಾವಕಮುದ್ಭೂತಂ ಕರ್ಮಣೈತೇನ ನಾಶಯ|

ಹೀಗೆ ಮಾಡಿ ನನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಒಂದು ಅತಿ ಘೋರ ಮುಳ್ಳನ್ನು ನಾಶಪಡಿಸು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ದುರ್ಯೋಧನಪರಾಮರ್ಷೇ ತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ದುರ್ಯೋಧಪರಾಮರ್ಷ ಎನ್ನುವ ನೂರಾಮೂವತ್ತನೆಯ ಅಧ್ಯಾಯವು.

Related image

Comments are closed.