Adi Parva: Chapter 129

ಆದಿ ಪರ್ವ: ಜತುಗೃಹ ಪರ್ವ

೧೨೯

ಅರಗಿನ ಮನೆ

ಪಾಂಡವರನ್ನು ಕೊಲ್ಲಲು ಕೌರವರ ಹಲವು ಉಪಾಯಗಳು; ಪಾಂಡುಸುತರ ಜನಪ್ರಿಯತೆಯನ್ನು ನೋಡಿ ದುರ್ಯೋಧನನು ಪರಿತಪಿಸಿದುದು (೧-೧೦). ತಾವು ಪರಪಿಂಡದ ಜೀವನಕ್ಕೆ ಹೋಗುವ ಮುನ್ನ ಏನನ್ನಾದರೂ ಮಾಡಬೇಕೆಂದು ದುರ್ಯೋಧನನು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಹೇಳುವುದು (೧೧-೧೮).

01129001 ವೈಶಂಪಾಯನ ಉವಾಚ|

01129001a ಪ್ರಾಣಾಧಿಕಂ ಭೀಮಸೇನಂ ಕೃತವಿದ್ಯಂ ಧನಂಜಯಂ|

01129001c ದುರ್ಯೋಧನೋ ಲಕ್ಷಯಿತ್ವ ಪರ್ಯತಪ್ಯತ ದುರ್ಮತಿಃ||

ವೈಶಂಪಾಯನನು ಹೇಳಿದನು: “ಭೀಮಸೇನನ ಅಧಿಕ ಶಕ್ತಿಯನ್ನೂ ಧನಂಜಯನ ಕೃತವಿದ್ಯೆಯನ್ನೂ ನೋಡಿದ ದುರ್ಮತಿ ದುರ್ಯೋಧನನು ಪರಿತಪಿಸಿದನು.

01129002a ತತೋ ವೈಕರ್ತನಃ ಕರ್ಣಃ ಶಕುನಿಶ್ಚಾಪಿ ಸೌಬಲಃ|

01129002c ಅನೇಕೈರಭ್ಯುಪಾಯೈಸ್ತಾಂಜಿಘಾಂಸಂತಿ ಸ್ಮ ಪಾಂಡವಾನ್||

01129003a ಪಾಂಡವಾಶ್ಚಾಪಿ ತತ್ಸರ್ವಂ ಪ್ರತ್ಯಜಾನನ್ನರಿಂದಮಾಃ|

01129003c ಉದ್ಭಾವನಮಕುರ್ವಂತೋ ವಿದುರಸ್ಯ ಮತೇ ಸ್ಥಿತಾಃ||

ವೈಕರ್ತನ ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಉಪಾಯಗಳನ್ನು ಹೂಡಿದರು. ಆದರೆ ಆ ಅರಿಂದಮ ಪಾಂಡವರು ಅವೆಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದರೂ ವಿದುರನ ಸಲಹೆಯಂತೆ ಅವನ್ನು ಸಹಿಸಿಕೊಂಡು ಬಹಿರಂಗಗೊಳಿಸದೇ ಇದ್ದರು.

01129004a ಗುಣೈಃ ಸಮುದಿತಾನ್ದೃಷ್ಟ್ವಾ ಪೌರಾಃ ಪಾಂಡುಸುತಾಂಸ್ತದಾ|

01129004c ಕಥಯಂತಿ ಸ್ಮ ಸಂಭೂಯ ಚತ್ವರೇಷು ಸಭಾಸು ಚ||

ಪಾಂಡುಸುತರು ಸುಗುಣಗಳಿಂದ ಬೆಳೆಯುತ್ತಿರುವುದನ್ನು ನೋಡಿದ ಪೌರರು ಚೌಕಗಳಲ್ಲಿ ಸೇರಿದಾಗಲೆಲ್ಲೆಲ್ಲಾ ಅವರ ಕುರಿತೇ ಮಾತನಾಡುತ್ತಿದ್ದರು.

01129005a ಪ್ರಜ್ಞಾಚಕ್ಷುರಚಕ್ಷುಷ್ಟ್ವಾದ್ಧೃತರಾಷ್ಟ್ರೋ ಜನೇಶ್ವರಃ|

01129005c ರಾಜ್ಯಮಪ್ರಾಪ್ತವಾನ್ಪೂರ್ವಂ ಸ ಕಥಂ ನೃಪತಿರ್ಭವೇತ್||

“ಮೊದಲು ಪ್ರಜ್ಞಾಚಕ್ಷು ಜನೇಶ್ವರ ಧೃತರಾಷ್ಟ್ರನಿಗೆ ಕುರುಡನಾಗಿದ್ದಾನೆಂದು ರಾಜ್ಯವು ದೊರೆಯಲಿಲ್ಲ. ಈಗ ಹೇಗೆ ರಾಜನಾಗಿದ್ದಾನೆ

01129006a ತಥಾ ಭೀಷ್ಮಃ ಶಾಂತನವಃ ಸತ್ಯಸಂಧೋ ಮಹಾವ್ರತಃ|

01129006c ಪ್ರತ್ಯಾಖ್ಯಾಯ ಪುರಾ ರಾಜ್ಯಂ ನಾದ್ಯ ಜಾತು ಗ್ರಹೀಷ್ಯತಿ||

ಹಿಂದೆ ರಾಜ್ಯವನ್ನು ತಿರಸ್ಕರಿಸಿದ ಸತ್ಯಸಂಧ ಮಹಾವ್ರತ ಶಾಂತನವ ಭೀಷ್ಮನು ಮುಂದೆ ಎಂದೂ ಅದನ್ನು ಸ್ವೀಕರಿಸುವುದಿಲ್ಲ.

01129007a ತೇ ವಯಂ ಪಾಂಡವಂ ಜ್ಯೇಷ್ಠಂ ತರುಣಂ ವೃದ್ಧಶೀಲಿನಂ|

01129007c ಅಭಿಷಿಂಚಾಮ ಸಾಧ್ವದ್ಯ ಸತ್ಯಂ ಕರುಣವೇದಿನಂ||

ಹಾಗಿದ್ದಾಗ ಈಗ ನಾವು ತರುಣನಾಗಿದ್ದರೂ ವೃದ್ಧರಂತೆ ಶೀಲವಂತ, ಸತ್ಯನೂ ಕರುಣವೇದಿಯೂ ಆದ ಜ್ಯೇಷ್ಠ ಪಾಂಡವನನ್ನು ಅಭಿಷೇಕಿಸಬೇಕು.

01129008a ಸ ಹಿ ಭೀಷ್ಮಂ ಶಾಂತನವಂ ಧೃತರಾಷ್ಟ್ರಂ ಚ ಧರ್ಮವಿತ್|

01129008c ಸಪುತ್ರಂ ವಿವಿಧೈರ್ಭೋಗೈರ್ಯೋಜಯಿಷ್ಯತಿ ಪೂಜಯನ್||

ಆ ಧರ್ಮವಿದನೇ ಶಾಂತನವ ಭೀಷ್ಮ, ಪುತ್ರರಿಂದೊಡಗೂಡಿದ ಧೃತರಾಷ್ಟ್ರ ಇವರನ್ನು ಪೂಜಿಸಿ ವಿವಿಧ ಭೋಗಗಳಿಗೆ ಏರ್ಪಾಡುಮಾಡಿಕೊಡುತ್ತಾನೆ.”

01129009a ತೇಷಾಂ ದುರ್ಯೋಧನಃ ಶ್ರುತ್ವಾ ತಾನಿ ವಾಕ್ಯಾನಿ ಭಾಷತಾಂ|

01129009c ಯುಧಿಷ್ಠಿರಾನುರಕ್ತಾನಾಂ ಪರ್ಯತಪ್ಯತ ದುರ್ಮತಿಃ||

ದುರ್ಮತಿ ದುರ್ಯೋಧನನು ಯುಧಿಷ್ಠಿರನ ಅನುರಕ್ತರು ಮಾತನಾಡಿಕೊಳ್ಳುತ್ತಿದ್ದ ಈ ವಾಕ್ಯಗಳನ್ನು ಕೇಳಿ ಪರಿತಪಿಸಿದನು.

01129010a ಸ ತಪ್ಯಮಾನೋ ದುಷ್ಟಾತ್ಮಾ ತೇಷಾಂ ವಾಚೋ ನ ಚಕ್ಷಮೇ|

01129010c ಈರ್ಷ್ಯಯಾ ಚಾಭಿಸಂತಪ್ತೋ ಧೃತರಾಷ್ಟ್ರಮುಪಾಗಮತ್||

ಆ ದುಷ್ಟಾತ್ಮನು ಅವರ ಈ ಮಾತುಗಳಿಂದ ಬೆಂದು, ಅವನ್ನು ಕ್ಷಮಿಸಲಾಗದೇ, ಈರ್ಷೆಯಿಂದ ಸಂತಪ್ತನಾಗಿ ಧೃತರಾಷ್ಟ್ರನಲ್ಲಿಗೆ ಬಂದನು.

01129011a ತತೋ ವಿರಹಿತಂ ದೃಷ್ಟ್ವಾ ಪಿತರಂ ಪ್ರತಿಪೂಜ್ಯ ಸಃ|

01129011c ಪೌರಾನುರಾಗಸಂತಪ್ತಃ ಪಶ್ಚಾದಿದಮಭಾಷತ||

ಅವನು ಒಬ್ಬನೇ ಇದ್ದುದನ್ನು ನೋಡಿ ತನ್ನ ತಂದೆಗೆ ನಮಸ್ಕರಿಸಿ, ಪೌರರ ಬಯಕೆಗಳಿಂದ ಸಂತಪ್ತನಾಗಿ, ಈ ಮಾತುಗಳನ್ನಾಡಿದನು:

01129012a ಶ್ರುತಾ ಮೇ ಜಲ್ಪತಾಂ ತಾತ ಪೌರಾಣಾಮಶಿವಾ ಗಿರಃ|

01129012c ತ್ವಾಮನಾದೃತ್ಯ ಭೀಷ್ಮಂ ಚ ಪತಿಮಿಚ್ಛಂತಿ ಪಾಂಡವಂ||

“ತಂದೇ! ಪೌರರ ತೊದಲಿಕೆಯ ಅಶುಭ ಮಾತುಗಳನ್ನು ಕೇಳಿದ್ದೇನೆ. ನಿನ್ನನ್ನು ಮತ್ತು ಭೀಷ್ಮನನ್ನು ಅನಾದರಿಸಿ ಅವರು ಪಾಂಡವನನ್ನು ತಮ್ಮ ರಾಜನನ್ನಾಗಿ ಬಯಸುತ್ತಾರೆ.

01129013a ಮತಮೇತಚ್ಚ ಭೀಷ್ಮಸ್ಯ ನ ಸ ರಾಜ್ಯಂ ಬುಭೂಷತಿ|

01129013c ಅಸ್ಮಾಕಂ ತು ಪರಾಂ ಪೀಡಾಂ ಚಿಕೀರ್ಷಂತಿ ಪುರೇ ಜನಾಃ||

ರಾಜ್ಯವನ್ನು ಬಯಸದ ಭೀಷ್ಮನೇನೋ ಇದಕ್ಕೆ ಒಪ್ಪಿಕೊಳ್ಳಬಹುದು. ಆದರೆ ನಮ್ಮ ಮೇಲೆ ಪುರದ ಜನರು ಅತಿ ದೊಡ್ಡ ಪೀಡೆಯನ್ನು ತರಲು ಬಯಸುತ್ತಿದ್ದಾರೆ.

01129014a ಪಿತೃತಃ ಪ್ರಾಪ್ತವಾನ್ರಾಜ್ಯಂ ಪಾಂಡುರಾತ್ಮಗುಣೈಃ ಪುರಾ|

01129014c ತ್ವಮಪ್ಯಗುಣಸಮ್ಯೋಗಾತ್ಪ್ರಾಪ್ತಂ ರಾಜ್ಯಂ ನ ಲಬ್ಧವಾನ್||

ಹಿಂದೆ ಪಾಂಡುವು ತನ್ನ ಗುಣಗಳ ಕಾರಣಗಳಿಂದ ತನ್ನ ತಂದೆಯಿಂದ ರಾಜ್ಯವನ್ನು ಪಡೆದನು. ರಾಜ್ಯವು ನಿನಗೆ ಪ್ರಾಪ್ತಿಯಾಗುತ್ತಿದ್ದರೂ ನಿನ್ನ ಅವಗುಣದ ಕಾರಣದಿಂದ ಅದು ನಿನಗೆ ದೊರೆಯಲಿಲ್ಲ.

01129015a ಸ ಏಷ ಪಾಂಡೋರ್ದಾಯಾದ್ಯಂ ಯದಿ ಪ್ರಾಪ್ನೋತಿ ಪಾಂಡವಃ|

01129015c ತಸ್ಯ ಪುತ್ರೋ ಧ್ರುವಂ ಪ್ರಾಪ್ತಸ್ತಸ್ಯ ತಸ್ಯೇತಿ ಚಾಪರಃ||

ಈಗ ಪಾಂಡುವಿನ ದಾಯಾದ್ಯವು ಪಾಂಡವನಿಗೆ ದೊರೆತರೆ ಅದು ಮುಂದೆ ಅವನ ಮಗನಿಗೆ, ಮತ್ತೆ ಅವನ ಮಗನಿಗೆ ದೊರೆಯುವುದು ನಿರ್ದಿಷ್ಟ.

01129016a ತೇ ವಯಂ ರಾಜವಂಶೇನ ಹೀನಾಃ ಸಹ ಸುತೈರಪಿ|

01129016c ಅವಜ್ಞಾತಾ ಭವಿಷ್ಯಾಮೋ ಲೋಕಸ್ಯ ಜಗತೀಪತೇ||

ಜಗತೀಪತೇ! ನಾವಾದರೂ ನಮ್ಮ ಮಕ್ಕಳೊಂದಿಗೆ ರಾಜವಂಶವನ್ನು ಕಳೆದುಕೊಂಡು ಲೋಕದಲ್ಲಿ ಯಾರಿಗೂ ತಿಳಿಯದವರಂತೆ ಆಗಿಬಿಡುತ್ತೇವೆ.

01129017a ಸತತಂ ನಿರಯಂ ಪ್ರಾಪ್ತಾಃ ಪರಪಿಂಡೋಪಜೀವಿನಃ|

01129017c ನ ಭವೇಮ ಯಥಾ ರಾಜಂಸ್ತಥಾ ಶೀಘ್ರಂ ವಿಧೀಯತಾಂ||

ರಾಜನ್! ನಾವು ಈ ರೀತಿ ಪರ ಪಿಂಡದ ಉಪಜೀವನವೆಂಬ ಸತತ ನರಕಕ್ಕೆ ಹೋಗುವ ಮುನ್ನ ಇದಕ್ಕೆ ಏನನ್ನಾದರೂ ಶೀಘ್ರವಾಗಿ ಕ್ರಮತೆಗೆದುಕೋ.

01129018a ಅಭವಿಷ್ಯಃ ಸ್ಥಿರೋ ರಾಜ್ಯೇ ಯದಿ ಹಿ ತ್ವಂ ಪುರಾ ನೃಪ|

01129018c ಧ್ರುವಂ ಪ್ರಾಪ್ಸ್ಯಾಮ ಚ ವಯಂ ರಾಜ್ಯಮಪ್ಯವಶೇ ಜನೇ||

ನೃಪ! ಹಿಂದೆ ನೀನೇ ರಾಜ್ಯದಲ್ಲಿ ಸ್ಥಿರವಾಗಿ ಅಭಿಷಿಕ್ತನಾಗಿದ್ದರೆ, ಜನರಿಗೆ ಇಷ್ಟವಿಲ್ಲದಿದ್ದರೂ ನಿಶ್ಚಯವಾಗಿ ನಾವೇ ರಾಜ್ಯವನ್ನು ಪಡೆಯುತ್ತಿದ್ದೆವು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ದುರ್ಯೋಧನೇರ್ಷ್ಯಾಯಾಂ ಊನತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ದುರ್ಯೋಧನೇರ್ಷ್ಯಾಯಾಂ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.

Image result for indian motifs

Comments are closed.