Adi Parva: Chapter 128

ಆದಿ ಪರ್ವ: ಜತುಗೃಹ ಪರ್ವ

೧೨೮

ಗುರುದಕ್ಷಿಣೆ

ಪಾಂಚಾಲ ರಾಜ ದ್ರುಪದನನ್ನು ಹಿಡಿದು ತರವುದೇ ಗುರುದಕ್ಷಿಣೆಯೆಂದು ದ್ರೋಣನು ಹೇಳಲು, ಪಾಂಚಲನಗರಿಯನ್ನು ಆಕ್ರಮಣಿಸಿ ರಾಜನನ್ನು ಸೆರೆಹಿಡಿದು ಗುರುವಿಗೆ ಒಪ್ಪಿಸಿದುದು (೧-೬). ದ್ರೋಣನು ದ್ರುಪದನಿಗೆ ಚುಚ್ಚು ಮಾತುಗಳನ್ನಾಗಿ, ಅವನ ಅರ್ಧರಾಜ್ಯವನ್ನಿಟ್ಟುಕೊಂಡು ಉಳಿದ ಅರ್ಧವನ್ನು ಹಿಂದಿರುಗಿಸಿದುದು (೭-೧೮).

01128001 ವೈಶಂಪಾಯನ ಉವಾಚ|

01128001a ತತಃ ಶಿಷ್ಯಾನ್ಸಮಾನೀಯ ಆಚಾರ್ಯಾರ್ಥಮಚೋದಯತ್|

01128001c ದ್ರೋಣಃ ಸರ್ವಾನಶೇಷೇಣ ದಕ್ಷಿಣಾರ್ಥಂ ಮಹೀಪತೇ||

ವೈಶಂಪಾಯನನು ಹೇಳಿದನು: “ಮಹೀಪತೇ! ಆಚಾರ್ಯ ದ್ರೋಣನು ಶಿಷ್ಯರೆಲ್ಲರನ್ನೂ ಸೇರಿಸಿ ಯಾರನ್ನೂ ಬಿಡದೇ ಎಲ್ಲರಲ್ಲಿಯೂ ಗುರುದಕ್ಷಿಣೆಗಾಗಿ ಪ್ರಚೋದಿಸಿದನು.

01128002a ಪಾಂಚಾಲರಾಜಂ ದ್ರುಪದಂ ಗೃಹೀತ್ವಾ ರಣಮೂರ್ಧನಿ|

01128002c ಪರ್ಯಾನಯತ ಭದ್ರಂ ವಃ ಸಾ ಸ್ಯಾತ್ಪರಮದಕ್ಷಿಣಾ||

“ಪಾಂಚಾಲರಾಜ ದ್ರುಪದದನ್ನು ರಣಭೂಮಿಯಿಂದ ಹಿಡಿದು ತನ್ನಿ. ಅದೇ ಪರಮ ದಕ್ಷಿಣೆ. ನಿಮಗೆ ಮಂಗಳವಾಗಲಿ.”

01128003a ತಥೇತ್ಯುಕ್ತ್ವಾ ತು ತೇ ಸರ್ವೇ ರಥೈಸ್ತೂರ್ಣಂ ಪ್ರಹಾರಿಣಃ|

01128003c ಆಚಾರ್ಯಧನದಾನಾರ್ಥಂ ದ್ರೋಣೇನ ಸಹಿತಾ ಯಯುಃ||

“ಹಾಗೆಯೇ ಆಗಲಿ” ಎಂದು ಅವರೆಲ್ಲರೂ ಆಯುಧಗಳನ್ನು ಹಿಡಿದು ರಥಗಳನ್ನೇರಿ ಗುರುದಕ್ಷಿಣೆಯನ್ನು ತರಲು ದ್ರೋಣನನ್ನೊಡಗೂಡಿ ಹೊರಟರು.

01128004a ತತೋಽಭಿಜಗ್ಮುಃ ಪಾಂಚಾಲಾನ್ನಿಘ್ನಂತಸ್ತೇ ನರರ್ಷಭಾಃ|

01128004c ಮಮೃದುಸ್ತಸ್ಯ ನಗರಂ ದ್ರುಪದಸ್ಯ ಮಹೌಜಸಃ||

ಆ ನರರ್ಷಭರು ಪಾಂಚಾಲರ ಮೇಲೆ ಧಾಳಿಯಿಕ್ಕಿ, ಅವರನ್ನು ಸದೆಬಡಿದು, ಮಹೌಜಸ ದ್ರುಪದನ ನಗರವನ್ನು ಪುಡಿಮಾಡಿದರು.

01128005a ತೇ ಯಜ್ಞಸೇನಂ ದ್ರುಪದಂ ಗೃಹೀತ್ವಾ ರಣಮೂರ್ಧನಿ|

01128005c ಉಪಾಜಹ್ರುಃ ಸಹಾಮಾತ್ಯಂ ದ್ರೋಣಾಯ ಭರತರ್ಷಭಾಃ||

ಆ ಭರತರ್ಷಭರು ರಣಭೂಮಿಯಲ್ಲಿ ಯಜ್ಞಸೇನ ದ್ರುಪದನನ್ನು ಅವನ ಅಮಾತ್ಯರೊಂದಿಗೆ ಸೆರೆಹಿಡಿದು ದ್ರೋಣನ ಬಳಿ ಕರೆತಂದರು.

01128006a ಭಗ್ನದರ್ಪಂ ಹೃತಧನಂ ತಥಾ ಚ ವಶಮಾಗತಂ|

01128006c ಸ ವೈರಂ ಮನಸಾ ಧ್ಯಾತ್ವಾ ದ್ರೋಣೋ ದ್ರುಪದಮಬ್ರವೀತ್||

ವೈರವನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಂಡು ದ್ರೋಣನು ಸೆರೆಹಿಡಿಯಲ್ಪಟ್ಟ ಭಗ್ನದರ್ಪ ಹೃತಧನ ದ್ರುಪದನಿಗೆ ಇಂತೆಂದನು:

01128007a ಪ್ರಮೃದ್ಯ ತರಸಾ ರಾಷ್ಟ್ರಂ ಪುರಂ ತೇ ಮೃದಿತಂ ಮಯಾ|

01128007c ಪ್ರಾಪ್ಯ ಜೀವನ್ರಿಪುವಶಂ ಸಖಿಪೂರ್ವಂ ಕಿಮಿಷ್ಯತೇ||

“ಸೇಡಿನಿಂದ ನಿನ್ನ ರಾಷ್ಟ್ರ ಮತ್ತು ಪುರವನ್ನು ನಾನು ಗಳಿಸಿದ್ದೇನೆ. ಜೀವಂತವಿದ್ದರೂ ರಿಪುವಶದಲ್ಲಿರುವ ಹಳೆಯ ಸ್ನೇಹಿತನು ಯಾರಿಗೆ ಬೇಕು?”

01128008a ಏವಮುಕ್ತ್ವಾ ಪ್ರಹಸ್ಯೈನಂ ನಿಶ್ಚಿತ್ಯ ಪುನರಬ್ರವೀತ್|

01128008c ಮಾ ಭೈಃ ಪ್ರಾಣಭಯಾದ್ರಾಜನ್ಕ್ಷಮಿಣೋ ಬ್ರಾಹ್ಮಣಾ ವಯಂ||

ಹೀಗೆ ಹೇಳಿ ಜೋರಾಗಿ ನಕ್ಕ ಅವನು ಒಂದು ನಿಶ್ಚಯಕ್ಕೆ ಬಂದು ಪುನಃ ಹೇಳಿದನು: “ರಾಜನ್! ನನ್ನಲ್ಲಿ ನಿನ್ನ ಪ್ರಾಣಕ್ಕೆ ಭಯಪಡಬೇಡ. ನಾವು ಬ್ರಾಹ್ಮಣರು ಕ್ಷಮಾವಂತರು.

01128009a ಆಶ್ರಮೇ ಕ್ರೀಡಿತಂ ಯತ್ತು ತ್ವಯಾ ಬಾಲ್ಯೇ ಮಯಾ ಸಹ|

01128009c ತೇನ ಸಂವರ್ಧಿತಃ ಸ್ನೇಹಸ್ತ್ವಯಾ ಮೇ ಕ್ಷತ್ರಿಯರ್ಷಭ||

ಕ್ಷತ್ರಿಯರ್ಷಭ! ಬಾಲ್ಯದಲ್ಲಿ ಆಶ್ರಮದಲ್ಲಿ ನನ್ನೊಡನೆ ಆಡುತ್ತಿದ್ದಾಗ ನನಗೆ ನಿನ್ನಲ್ಲಿ ಸ್ನೇಹವು ಬೆಳೆಯಿತು.

01128010a ಪ್ರಾರ್ಥಯೇಯಂ ತ್ವಯಾ ಸಖ್ಯಂ ಪುನರೇವ ನರರ್ಷಭ|

01128010c ವರಂ ದದಾಮಿ ತೇ ರಾಜನ್ರಾಜ್ಯಸ್ಯಾರ್ಧಮವಾಪ್ನುಹಿ||

ನರರ್ಷಭ! ಪುನಃ ಇನ್ನೊಮ್ಮೆ ನಿನ್ನ ಸಖ್ಯವನ್ನು ಪ್ರಾರ್ಥಿಸುತ್ತಿದ್ದೇನೆ. ರಾಜನ್! ನಿನಗೆ ಅರ್ಧರಾಜ್ಯದ ವರವನ್ನು ನೀಡುತ್ತಿದ್ದೇನೆ. ತೆಗೆದುಕೋ.

01128011a ಅರಾಜಾ ಕಿಲ ನೋ ರಾಜ್ಞಾಂ ಸಖಾ ಭವಿತುಮರ್ಹತಿ|

01128011c ಅತಃ ಪ್ರಯತಿತಂ ರಾಜ್ಯೇ ಯಜ್ಞಸೇನ ಮಯಾ ತವ||

ರಾಜ್ಯವಿದ್ದವನು ರಾಜ್ಯವಿಲ್ಲದವನ ಸಖನಾದರೂ ಹೇಗೆ ಆಗಬಲ್ಲನು? ಆದುದರಿಂದ ಯಜ್ಞಸೇನ! ನಿನ್ನ ರಾಜ್ಯವನ್ನು ನಾನು ಗಳಿಸಿದ್ದೇನೆ.

01128012a ರಾಜಾಸಿ ದಕ್ಷಿಣೇ ಕೂಲೇ ಭಾಗೀರಥ್ಯಾಹಮುತ್ತರೇ|

01128012c ಸಖಾಯಂ ಮಾಂ ವಿಜಾನೀಹಿ ಪಾಂಚಾಲ ಯದಿ ಮನ್ಯಸೇ||

ಭಾಗೀರಥಿಯ ದಕ್ಷಿಣಕ್ಕೆ ನೀನು ಮತ್ತು ಅದರ ಉತ್ತರಕ್ಕೆ ನಾನು ರಾಜರಾಗೋಣ. ಪಾಂಚಾಲ! ನಿನಗೆ ಒಪ್ಪಿಗೆಯಾದರೆ ನಾನು ನಿನ್ನನ್ನು ಸಖನೆಂದು ಪರಿಗಣಿಸುತ್ತೇನೆ.”

01128013 ದ್ರುಪದ ಉವಾಚ|

01128013a ಅನಾಶ್ಚರ್ಯಮಿದಂ ಬ್ರಹ್ಮನ್ವಿಕ್ರಾಂತೇಷು ಮಹಾತ್ಮಸು|

01128013c ಪ್ರೀಯೇ ತ್ವಯಾಹಂ ತ್ವತ್ತಶ್ಚ ಪ್ರೀತಿಮಿಚ್ಛಾಮಿ ಶಾಶ್ವತೀಂ||

ದ್ರುಪದನು ಹೇಳಿದನು: “ಬ್ರಹ್ಮನ್! ಈ ಮಹಾತ್ಮ ವಿಕ್ರಾಂತರಿಂದಾದ ಇದು ಆಶ್ಚರ್ಯಕರವಾದುದೇನೂ ಅಲ್ಲ. ನಾನು ನಿನ್ನ ಮಿತ್ರನಾಗುತ್ತೇನೆ. ನಾನು ನಿನ್ನಿಂದ ಶಾಶ್ವತ ಪ್ರೀತಿಯನ್ನು ಬಯಸುತ್ತೇನೆ.””

01128014 ವೈಶಂಪಾಯನ ಉವಾಚ|

01128014a ಏವಮುಕ್ತಸ್ತು ತಂ ದ್ರೋಣೋ ಮೋಕ್ಷಯಾಮಾಸ ಭಾರತ|

01128014c ಸತ್ಕೃತ್ಯ ಚೈನಂ ಪ್ರೀತಾತ್ಮಾ ರಾಜ್ಯಾರ್ಧಂ ಪ್ರತ್ಯಪಾದಯತ್||

ವೈಶಂಪಾಯನನು ಹೇಳಿದನು: “ಭಾರತ! ಇದನ್ನು ಕೇಳಿದ ದ್ರೋಣನು ಅವನನ್ನು ಸತ್ಕರಿಸಿ ಸಂತೋಷದಿಂದ ಅರ್ಧ ರಾಜ್ಯವನ್ನು ನೀಡಿ ಬಿಡುಗಡೆ ಮಾಡಿದನು.

01128015a ಮಾಕಂದೀಮಥ ಗಂಗಾಯಾಸ್ತೀರೇ ಜನಪದಾಯುತಾಂ|

01128015c ಸೋಽಧ್ಯಾವಸದ್ದೀನಮನಾಃ ಕಾಂಪಿಲ್ಯಂ ಚ ಪುರೋತ್ತಮಂ|

01128015e ದಕ್ಷಿಣಾಂಶ್ಚೈವ ಪಾಂಚಾಲಾನ್ಯಾವಚ್ಚರ್ಮಣ್ವತೀ ನದೀ||

ದೀನಮನಸ್ಕನಾದ ದ್ರುಪದನು ಗಂಗಾತೀರದಲ್ಲಿರುವ ಮಾಕಂದಿಯ ಜನಪದ ಕಾಂಪಿಲ್ಯವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ದಕ್ಷಿಣ ಪಾಂಚಾಲವನ್ನು ಚರ್ಮಣ್ವತೀ ನದಿಯವರೆಗೂ ಆಳತೊಡಗಿದನು.

01128016a ದ್ರೋಣೇನ ವೈರಂ ದ್ರುಪದಃ ಸಂಸ್ಮರನ್ನ ಶಶಾಮ ಹ|

01128016c ಕ್ಷಾತ್ರೇಣ ಚ ಬಲೇನಾಸ್ಯ ನಾಪಶ್ಯತ್ಸ ಪರಾಜಯಂ||

01128017a ಹೀನಂ ವಿದಿತ್ವಾ ಚಾತ್ಮಾನಂ ಬ್ರಾಹ್ಮಣೇನ ಬಲೇನ ಚ|

01128017c ಪುತ್ರಜನ್ಮ ಪರೀಪ್ಸನ್ವೈ ಸ ರಾಜಾ ತದಧಾರಯತ್|

ದ್ರೋಣನೊಂದಿಗಿದ್ದ ವೈರತ್ವವನ್ನು ನೆನಪಿಸಿಕೊಳ್ಳುತ್ತಿದ್ದ ದ್ರುಪದನಿಗೆ ಶಾಂತಿಯೇ ದೊರೆಯಲಿಲ್ಲ. ತನ್ನ ಕ್ಷತ್ರಿಯ ಬಲದಿಂದ ಅವನನ್ನು ಪರಾಜಯಗೊಳಿಸುವ ದಾರಿಯನ್ನೇ ಕಾಣಲಿಲ್ಲ. ಬ್ರಾಹ್ಮಣನ ಬಲಕ್ಕಿಂತ ತನ್ನ ಬಲವು ಹೀನವಾದದ್ದು ಎಂದು ತಿಳಿದನು. ಅದನ್ನು ಸಹಿಸಿಕೊಂಡ ರಾಜನು ಪುತ್ರನ ಜನ್ಮಕ್ಕಾಗಿ ಕಾಯುತ್ತಿದ್ದನು.

01128017e ಅಹಿಚ್ಛತ್ರಂ ಚ ವಿಷಯಂ ದ್ರೋಣಃ ಸಮಭಿಪದ್ಯತ||

01128018a ಏವಂ ರಾಜನ್ನಹಿಚ್ಛತ್ರಾ ಪುರೀ ಜನಪದಾಯುತಾ|

01128018c ಯುಧಿ ನಿರ್ಜಿತ್ಯ ಪಾರ್ಥೇನ ದ್ರೋಣಾಯ ಪ್ರತಿಪಾದಿತಾ||

ಅಹಿಚ್ಛತ್ರದಲ್ಲಿ ದ್ರೋಣನು ನೆಲೆಸಿದನು. ರಾಜನ್! ಈ ರೀತಿ ಪಾರ್ಥನು ಜನಪದಗಳಿಂದ ಆವೃತ ಅಹಿಚ್ಛತ್ರ ಪುರಿಯನ್ನು ಯುದ್ಧದಲ್ಲಿ ಗೆದ್ದು ದ್ರೋಣನಿಗೆ ದಕ್ಷಿಣೆಯನ್ನಾಗಿತ್ತನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ದ್ರುಪದಶಾಸನೇ ಅಷ್ಟವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ದ್ರುಪದ ಶಾಸನ ಎನ್ನುವ ನೂರಾಇಪ್ಪತ್ತೆಂಟನೆಯ ಅಧ್ಯಾಯವು.

Related image

Kannada Yakshagana Talamaddale - Drupada Garvabhanga:

Comments are closed.