Karna Parva: Chapter 58

ಕರ್ಣ ಪರ್ವ

೫೮

ಭೀಮಸೇನನಿಗೆ ಬೆಂಬಲಿಗನಾಗಿ ಬಂದ ಅರ್ಜುನನು ಕೌರವ ಸೇನೆಯನ್ನು ಧ್ವಂಸಗೊಳಿಸಿದುದು (೧-೨೦). ಭೀಮಸೇನನನ್ನು ಭೇಟಿಯಾಗಿ, ಅವನು ಕುಶಲನಾಗಿರುವುದನ್ನು ತಿಳಿದು, ಅರ್ಜುನನು ಕೌರವ ಸೇನೆಯನ್ನು ನುಗ್ಗಿ ಮುಂದೆ ಹೋದುದು (೨೧-೨೮).

8058001 ಸಂಜಯ ಉವಾಚ|

08058001a ರಾಜನ್ಕುರೂಣಾಂ ಪ್ರವರೈರ್ಬಲೈರ್ಭೀಮಮಭಿದ್ರುತಂ|

08058001c ಮಜ್ಜಂತಮಿವ ಕೌಂತೇಯಮುಜ್ಜಿಹೀರ್ಷುರ್ಧನಂಜಯಃ||

08058002a ವಿಮೃದ್ಯ ಸೂತಪುತ್ರಸ್ಯ ಸೇನಾಂ ಭಾರತ ಸಾಯಕೈಃ|

08058002c ಪ್ರಾಹಿಣೋನ್ಮೃತ್ಯುಲೋಕಾಯ ಪರವೀರಾನ್ಧನಂಜಯಃ||

ಸಂಜಯನು ಹೇಳಿದನು: “ರಾಜನ್! ಭಾರತ! ಕುರುಗಳ ಬಲಿಷ್ಠ ಸೇನೆಯ ಆಕ್ರಮಣಕ್ಕೊಳಗಾಗಿ ಮುಳುಗಿಹೋಗುತ್ತಿರುವಂತಿದ್ದ ಭೀಮ ಕೌಂತೇಯನನ್ನು ಮೇಲೆತ್ತಲು ಬಯಸಿದ ಧನಂಜಯನು ಸೂತಪುತ್ರನ ಸೇನೆಯನ್ನು ಸಾಯಕಗಳಿಂದ ಸದೆಬಡಿದು ಪರವೀರರನ್ನು ಮೃತ್ಯುಲೋಕಗಳಿಗೆ ಕಳುಹಿಸಿದನು.

08058003a ತತೋಽಸ್ಯಾಂಬರಮಾವೃತ್ಯ ಶರಜಾಲಾನಿ ಭಾಗಶಃ|

08058003c ಅದೃಶ್ಯಂತ ತಥಾನ್ಯೇ ಚ ನಿಘ್ನಂತಸ್ತವ ವಾಹಿನೀಂ||

ಆ ಶರಜಾಲಗಳು ಭಾಗಶಃ ಆಕಾಶವನ್ನು ಮುಸುಕಿ ಅದೃಶ್ಯವಾಗಿ ಅನ್ಯ ಭಾಗವು ನಿನ್ನ ಸೇನೆಯನ್ನು ಸಂಹರಿಸುತ್ತಿದ್ದವು.

08058004a ಸ ಪಕ್ಷಿಸಂಘಾಚರಿತಮಾಕಾಶಂ ಪೂರಯಂ ಶರೈಃ|

08058004c ಧನಂಜಯೋ ಮಹಾರಾಜ ಕುರೂಣಾಮಂತಕೋಽಭವತ್||

ಮಹಾರಾಜ! ಸಾಲುಸಾಲಾಗಿ ಹೋಗುತ್ತಿರುವ ಪಕ್ಷಿಸಮೂಹಗಳಂತಿದ್ದ ಶರಗಳಿಂದ ಆಕಾಶವನ್ನು ಮುಚ್ಚಿ ಧನಂಜಯನು ಕುರುಗಳಿಗೆ ಯಮಪ್ರಾಯನಾದನು.

08058005a ತತೋ ಭಲ್ಲೈಃ ಕ್ಷುರಪ್ರೈಶ್ಚ ನಾರಾಚೈರ್ನಿರ್ಮಲೈರಪಿ|

08058005c ಗಾತ್ರಾಣಿ ಪ್ರಾಕ್ಷಿಣೋತ್ಪಾರ್ಥಃ ಶಿರಾಂಸಿ ಚ ಚಕರ್ತ ಹ||

ಪಾರ್ಥನು ಆಗ ಭಲ್ಲ-ಕ್ಷುರಪ್ರ-ನಿರ್ಮಲ ನಾರಾಚಗಳಿಂದ ಅವರ ಶರೀರಗಳನ್ನು ಗಾಯಗೊಳಿಸಿ ಶಿರಗಳನ್ನು ಕತ್ತರಿಸುತ್ತಿದ್ದನು.

08058006a ಚಿನ್ನಗಾತ್ರೈರ್ವಿಕವಚೈರ್ವಿಶಿರಸ್ಕೈಃ ಸಮಂತತಃ|

08058006c ಪತಿತೈಶ್ಚ ಪತದ್ಭಿಶ್ಚ ಯೋಧೈರಾಸೀತ್ ್ಸಮಾವೃತಂ||

ತುಂಡಾದ ಕವಚ-ಶಿರಗಳಿಲ್ಲದ ಶರೀರಗಳಿಂದ, ಬೀಳುತ್ತಿರುವ ಮತ್ತು ಬಿದ್ದಿರುವ ಯೋಧರಿಂದ ರಣಭೂಮಿಯು ತುಂಬಿಹೋಯಿತು.

08058007a ಧನಂಜಯಶರಾಭ್ಯಸ್ತೈಃ ಸ್ಯಂದನಾಶ್ವನರದ್ವಿಪೈಃ|

08058007c ರಣಭೂಮಿರಭೂದ್ರಾಜನ್ಮಹಾವೈತರಣೀ ಯಥಾ||

ರಾಜನ್! ಧನಂಜಯನ ಶರಗಳಿಂದ ಬಿದ್ದ ರಥ-ಅಶ್ವ-ಪದಾತಿ-ಆನೆಗಳಿಂದ ರಣಭೂಮಿಯು ಮಹಾ ವೈತರಣೀ ನದಿಯಂತೆ ದಾಟಲಸಾಧ್ಯವಾಗಿತ್ತು.

08058008a ಈಷಾಚಕ್ರಾಕ್ಷಭಂಗೈಶ್ಚ ವ್ಯಶ್ವೈಃ ಸಾಶ್ವೈಶ್ಚ ಯುಧ್ಯತಾಂ|

08058008c ಸಸೂತೈರ್ಹತಸೂತೈಶ್ಚ ರಥೈಃ ಸ್ತೀರ್ಣಾಭವನ್ಮಹೀ||

ಈಷಾದಂಡ-ಚಕ್ರ-ಅಚ್ಚುಮರಗಳು ಮುರಿದುಹೋಗಿದ್ದ, ಕುದುರೆಗಳಿದ್ದ, ಕುದುರೆಗಳಿಲ್ಲದ, ಸೂತರಿದ್ದ, ಸೂತರಿಲ್ಲದ, ರಥಗಳಿಂದ ರಣಭೂಮಿಯು ತುಂಬಿಹೋಯಿತು.

08058009a ಸುವರ್ಣವರ್ಮಸಂನಾಹೈರ್ಯೋಧೈಃ ಕನಕಭೂಷಣೈಃ|

08058009c ಆಸ್ಥಿತಾಃ ಕೃತವರ್ಮಾಣೋ ಭದ್ರಾ ನಿತ್ಯಮದಾ ದ್ವಿಪಾಃ|

08058009e ಕ್ರುದ್ಧಾಃ ಕ್ರುದ್ಧೈರ್ಮಹಾಮಾತ್ರೈಃ ಪ್ರೇಷಿತಾರ್ಜುನಮಭ್ಯಯುಃ||

ಮಹಾಗಾತ್ರದ ನಿತ್ಯವೂ ಮದಿಸಿದ್ದ ಕ್ರುದ್ಧ ಆನೆಗಳು ಸುವರ್ಣಮಯ ಕವಚಗಳನ್ನು ಧರಿಸಿ ಕನಕಭೂಷಣಗಳಿಂದ ಅಲಂಕೃತ ಮಾವಟಿಗ ಯೋಧರ ರಕ್ಷಣೆಗೊಳಗಾಗಿ ಕ್ರೋಧದಿಂದ ಅರ್ಜುನನ ಮೇಲೆ ಬೀಳುತ್ತಿದ್ದವು.

08058010a ಚತುಃಶತಾಃ ಶರವರ್ಷೈರ್ಹತಾಃ ಪೇತುಃ ಕಿರೀಟಿನಾ|

08058010c ಪರ್ಯಸ್ತಾನೀವ ಶೃಂಗಾಣಿ ಸಸತ್ತ್ವಾನಿ ಮಹಾಗಿರೇಃ||

ಅಂತಹ ನಾಲ್ಕು ನೂರು ಆನೆಗಳನ್ನು ಕಿರೀಟಿಯು ಶರವರ್ಷಗಳಿಂದ ಕೆಳಗುರುಳಿಸಿದನು. ಅವುಗಳು ಜೀವಜಂತುಗಳೊಡನೆ ಕೆಳಗುರುಳಿದ ಮಹಾಗಿರಿ ಶೃಂಗಗಳಂತೆ ತೋರುತ್ತಿದ್ದವು.

08058011a ಧನಂಜಯಶರಾಭ್ಯಸ್ತೈಃ ಸ್ತೀರ್ಣಾ ಭೂರ್ವರವಾರಣೈಃ|

08058011c ಅಭಿಪೇದೇಽರ್ಜುನರಥೋ ಘನಾನ್ಭಿಂದನ್ನಿವಾಂಶುಮಾನ್||

ಕವಿದ ಮೋಡಗಳನ್ನು ಸೀಳಿ ಹೊರಬರುವ ಅಂಶುಮಾನ್ ಸೂರ್ಯನಂತೆ ಧನಂಜಯನು ಶರಗಳಿಂದ ಶ್ರೇಷ್ಠ ಆನೆಗಳ ಆ ಸೇನೆಯನ್ನು ಭೇದಿಸಿ ರಥದಲ್ಲಿ ಮುಂದುವರೆದನು.

08058012a ಹತೈರ್ಗಜಮನುಷ್ಯಾಶ್ವೈರ್ಭಗ್ನೈಶ್ಚ ಬಹುಧಾ ರಥೈಃ|

08058012c ವಿಶಸ್ತ್ರಪತ್ರಕವಚೈರ್ಯುದ್ಧಶೌಂಡೈರ್ಗತಾಸುಭಿಃ|

08058012e ಅಪವಿದ್ಧಾಯುಧೈರ್ಮಾರ್ಗಃ ಸ್ತೀರ್ಣೋಽಭೂತ್ಫಲ್ಗುನೇನ ವೈ||

ಹತರಾದ ಅನೇಕ ಆನೆ-ಮನುಷ್ಯ-ಅಶ್ವಗಳಿಂದ ಮತ್ತು ಭಗ್ನವಾದ ರಥಗಳಿಂದ, ಶಸ್ತ್ರ-ಕವಚ-ಯಂತ್ರಗಳಿಂದ ವಿಹೀನರಾಗಿ ಅಸುನೀಗಿದ್ದ ಯುದ್ಧಶೌಂಡರಿಂದಲೂ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಯುಧಗಳಿಂದಲೂ ಫಲ್ಗುನನ ಆ ಮಾರ್ಗವು ಮುಚ್ಚಿಹೋಗಿತ್ತು.

08058013a ವ್ಯಸ್ಫೂರ್ಜಯಚ್ಚ ಗಾಂಡೀವಂ ಸುಮಹದ್ಭೈರವಸ್ವನಂ|

08058013c ಘೋರೋ ವಜ್ರವಿನಿಷ್ಪೇಷಃ ಸ್ತನಯಿತ್ನೋರಿವಾಂಬರೇ||

ಮೋಡಗಳು ಆಕಾಶದಲ್ಲಿ ಸಿಡಿಲಿನ ಶಬ್ಧವುಂಟುಮಾಡುವಂತೆ ಅರ್ಜುನನು ತನ್ನ ಗಾಂಡೀವವನ್ನು ಟೇಂಕರಿಸಿ ಮಹಾ ಭೈರವ ಘೋರ ನಿನಾದವನ್ನುಂಟುಮಾಡಿದನು.

08058014a ತತಃ ಪ್ರಾದೀರ್ಯತ ಚಮೂರ್ಧನಂಜಯಶರಾಹತಾ|

08058014c ಮಹಾವಾತಸಮಾವಿದ್ಧಾ ಮಹಾನೌರಿವ ಸಾಗರೇ||

ಆಗ ಧನಂಜಯನ ಶರಗಳಿಂದ ಹತಗೊಂಡ ಸೇನೆಯು ಮಹಾ ಚಂಡಮಾರುತಕ್ಕೆ ಸಿಲುಕಿದ ಸಾಗರದಲ್ಲಿದ್ದ ಮಹಾನೌಕೆಯಂತೆ ಒಡೆದು ಹೋಯಿತು.

08058015a ನಾನಾರೂಪಾಃ ಪ್ರಹರಣಾಃ ಶರಾ ಗಾಂಡೀವಚೋದಿತಾಃ|

08058015c ಅಲಾತೋಲ್ಕಾಶನಿಪ್ರಖ್ಯಾಸ್ತವ ಸೈನ್ಯಂ ವಿನಿರ್ದಹನ್||

ಗಾಂಡೀವದಿಂದ ಹೊರಟ ಕೊಳ್ಳಿ, ಧೂಮಕೇತು ಮತ್ತು ಮಿಂಚುಗಳಿಗೆ ಸಮಾನ ಶರಗಳ ಪ್ರಹಾರಗಳಿಂದ ನಿನ್ನ ಸೇನೆಯು ಸುಟ್ಟುಹೋಯಿತು.

08058016a ಮಹಾಗಿರೌ ವೇಣುವನಂ ನಿಶಿ ಪ್ರಜ್ವಲಿತಂ ಯಥಾ|

08058016c ತಥಾ ತವ ಮಹತ್ಸೈನ್ಯಂ ಪ್ರಾಸ್ಫುರಚ್ಚರಪೀಡಿತಂ||

ರಾತ್ರಿಯ ಹೊತ್ತಿನಲ್ಲಿ ಮಹಾಗಿರಿಯಲ್ಲಿರುವ ಬಿದಿರಿನ ವನವು ಹತ್ತಿಕೊಂಡು ಉರಿಯುವಂತೆ ನಿನ್ನ ಮಹಾಸೇನೆಯು ಅರ್ಜುನನ ಶರಗಳಿಂದ ಪೀಡಿತವಾಗಿ ಉರಿದುಹೋಗುತ್ತಿತ್ತು.

08058017a ಸಂಪಿಷ್ಟದಗ್ಧವಿಧ್ವಸ್ತಂ ತವ ಸೈನ್ಯಂ ಕಿರೀಟಿನಾ|

08058017c ಹತಂ ಪ್ರವಿಹತಂ ಬಾಣೈಃ ಸರ್ವತಃ ಪ್ರದ್ರುತಂ ದಿಶಃ||

ಕಿರೀಟಿಯಿಂದ ನಿನ್ನ ಸೇನೆಯು ಮುದ್ದೆಮುದ್ದೆಯಾಯಿತು, ಸುಟ್ಟುಹೋಯಿತು ಮತ್ತು ಧ್ವಂಸಗೊಂಡಿತು. ಬಾಣಗಳ ಪ್ರಹಾರದಿಂದ ಅಳಿದುಳಿದ ನಿನ್ನ ಸೇನೆಯು ದಿಕ್ಕಾಪಾಲಾಗಿ ಓಡತೊಡಗಿತು.

08058018a ಮಹಾವನೇ ಮೃಗಗಣಾ ದಾವಾಗ್ನಿಗ್ರಸಿತಾ ಯಥಾ|

08058018c ಕುರವಃ ಪರ್ಯವರ್ತಂತ ನಿರ್ದಗ್ಧಾಃ ಸವ್ಯಸಾಚಿನಾ||

ಮಹಾವನದಲ್ಲಿ ಕಾಡ್ಗಿಚ್ಚಿಗೆ ಸಿಲುಕಿದ ಮೃಗಗಣಗಳಂತೆ ಸವ್ಯಸಾಚಿಯಿಂದ ಸುಡದೇ ಇದ್ದ ಕುರುಗಳು ದಿಕ್ಕುಕಾಣದೇ ಓಡುತ್ತಿದ್ದರು.

08058019a ಉತ್ಸೃಜ್ಯ ಹಿ ಮಹಾಬಾಹುಂ ಭೀಮಸೇನಂ ತದಾ ರಣೇ|

08058019c ಬಲಂ ಕುರೂಣಾಮುದ್ವಿಗ್ನಂ ಸರ್ವಮಾಸೀತ್ಪರಾಙ್ಮುಖಂ||

ಮಹಾಬಾಹು ಭೀಮಸೇನನನ್ನು ರಣದಲ್ಲಿಯೇ ಬಿಟ್ಟು ಕುರುಗಳ ಸೇನೆಯೆಲ್ಲವೂ ಉದ್ವಿಗ್ನಗೊಂಡು ಪರಾಙ್ಮುಖವಾಯಿತು.

08058020a ತತಃ ಕುರುಷು ಭಗ್ನೇಷು ಬೀಭತ್ಸುರಪರಾಜಿತಃ|

08058020c ಭೀಮಸೇನಂ ಸಮಾಸಾದ್ಯ ಮುಹೂರ್ತಂ ಸೋಽಭ್ಯವರ್ತತ||

ಕುರುಗಳು ಭಗ್ನರಾಗಿಹೋಗಲು ಅಪರಾಜಿತ ಬೀಭತ್ಸುವು ಭೀಮಸೇನನ ಬಳಿಸಾರಿ ಸ್ವಲ್ಪಹೊತ್ತು ಅಲ್ಲಿಯೇ ಇದ್ದನು.

08058021a ಸಮಾಗಮ್ಯ ಸ ಭೀಮೇನ ಮಂತ್ರಯಿತ್ವಾ ಚ ಫಲ್ಗುನಃ|

08058021c ವಿಶಲ್ಯಮರುಜಂ ಚಾಸ್ಮೈ ಕಥಯಿತ್ವಾ ಯುಧಿಷ್ಠಿರಂ||

ಫಲ್ಗುನನು ಭೀಮನನ್ನು ಸಂಧಿಸಿ ಸಮಾಲೋಚನೆಗೈದು ಯುಧಿಷ್ಠಿರನ ಶರೀರದಿಂದ ಬಾಣಗಳನ್ನು ತೆಗೆದುದರ ಮತ್ತು ಅವನು ಕುಶಲನಾಗಿರುವುದರ ಕುರಿತು ಹೇಳಿದನು.

08058022a ಭೀಮಸೇನಾಭ್ಯನುಜ್ಞಾತಸ್ತತಃ ಪ್ರಾಯಾದ್ಧನಂಜಯಃ|

08058022c ನಾದಯನ್ರಥಘೋಷೇಣ ಪೃಥಿವೀಂ ದ್ಯಾಂ ಚ ಭಾರತ||

ಭಾರತ! ಅನಂತರ ಭೀಮಸೇನನ ಅನುಜ್ಞೆಯನ್ನು ಪಡೆದು ಧನಂಜಯನು ರಥಘೋಷದಿಂದ ಪೃಥ್ವಿ-ಆಕಾಶಗಳನ್ನು ಮೊಳಗಿಸುತ್ತಾ ಮುಂದೆ ನಡೆದನು.

08058023a ತತಃ ಪರಿವೃತೋ ಭೀಮೈರ್ದಶಭಿಃ ಶತ್ರುಪುಂಗವೈಃ|

08058023c ದುಃಶಾಸನಾದವರಜೈಸ್ತವ ಪುತ್ರೈರ್ಧನಂಜಯಃ||

ಆಗ ಧನಂಜಯನು ಭಯಂಕರವಾಗಿದ್ದ ಶತ್ರುಪುಂಗವರಿಂದ - ನಿನ್ನ ಹತ್ತು ಮಕ್ಕಳು - ದುಃಶಾಸನನ ಅನುಜರಿಂದ- ಸುತ್ತುವರೆಯಲ್ಪಟ್ಟನು.

08058024a ತೇ ತಮಭ್ಯರ್ದಯನ್ಬಾಣೈರುಲ್ಕಾಭಿರಿವ ಕುಂಜರಂ|

08058024c ಆತತೇಷ್ವಸನಾಃ ಕ್ರೂರಾ ನೃತ್ಯಂತ ಇವ ಭಾರತ||

ಭಾರತ! ಕ್ರೂರವಾಗಿ ನರ್ತಿಸುತ್ತಾ ಪಂಜುಗಳಿಂದ ಆನೆಯನ್ನು ಪೀಡಿಸುವಂತೆ ಅವರು ಸೆಳೆದ ಧನುಸ್ಸುಗಳಿಂದ ಹೊರಟ ಶರಗಳಿಂದ ಅವನನ್ನು ಪೀಡಿಸಿದರು.

08058025a ಅಪಸವ್ಯಾಂಸ್ತು ತಾಂಶ್ಚಕ್ರೇ ರಥೇನ ಮಧುಸೂದನಃ|

08058025c ತತಸ್ತೇ ಪ್ರಾದ್ರವಂ ಶೂರಾಃ ಪರಾಙ್ಮುಖರಥೇಽರ್ಜುನೇ||

ಮಧುಸೂದನನು ರಥವನ್ನು ಅವರ ಎಡಭಾಗದಿಂದ ಮುಂದೆ ಕೊಂಡೊಯ್ಯಲು ಆ ಶೂರರು[1] ಪರಾಙ್ಮುಖನಾಗುತ್ತಿದ್ದ ಅರ್ಜುನನನ್ನು ಆಕ್ರಮಣಿಸಿದರು.

08058026a ತೇಷಾಮಾಪತತಾಂ ಕೇತೂನ್ರಥಾಂಶ್ಚಾಪಾನಿ ಸಾಯಕಾನ್|

08058026c ನಾರಾಚೈರರ್ಧಚಂದ್ರೈಶ್ಚ ಕ್ಷಿಪ್ರಂ ಪಾರ್ಥೋ ನ್ಯಪಾತಯತ್||

ಮೇಲೆ ಬೀಳುತ್ತಿದ್ದ ಅವರ ಧ್ವಜಗಳನ್ನೂ, ರಥಗಳನ್ನೂ, ಧನುಸ್ಸು-ಸಾಯಕಗಳನ್ನೂ ಪಾರ್ಥನು ಕ್ಷಿಪ್ರವಾಗಿ ಅರ್ಧಚಂದ್ರ ನಾರಾಚಗಳಿಂದ ಕೆಳಗುರುಳಿಸಿದನು.

08058027a ಅಥಾನ್ಯೈರ್ದಶಭಿರ್ಭಲ್ಲೈಃ ಶಿರಾಂಸ್ಯೇಷಾಂ ನ್ಯಪಾತಯತ್|

08058027c ರೋಷಸಂರಕ್ತನೇತ್ರಾಣಿ ಸಂದಷ್ಟೌಷ್ಠಾನಿ ಭೂತಲೇ|

08058027e ತಾನಿ ವಕ್ತ್ರಾಣಿ ವಿಬಭುರ್ವ್ಯೋಮ್ನಿ ತಾರಾಗಣಾ ಇವ||

ಕೂಡಲೇ ಅನ್ಯ ಹತ್ತು ಭಲ್ಲಗಳಿಂದ ಅವರ ಶಿರಗಳನ್ನು ಕೆಳಗುರುಳಿಸಿದನು. ಕ್ರೋಧದಿಂದ ಕೆಂಪಾಗಿದ್ದ ಕಣ್ಣುಗಳಿದ್ದ, ಅವುಡುಗಚ್ಚಿದ ತುಟಿಗಳಿದ್ದ ಅವರ ಮುಖಗಳು ಭೂಮಿಯ ಮೇಲೆ ಬಿದ್ದು ಆಕಾಶದಲ್ಲಿರುವ ತಾರಾಗಣಗಳಂತೆ ಪ್ರಕಾಶಿಸುತ್ತಿದ್ದವು.

08058028a ತಾಂಸ್ತು ಭಲ್ಲೈರ್ಮಹಾವೇಗೈರ್ದಶಭಿರ್ದಶ ಕೌರವಾನ್|

08058028c ರುಕ್ಮಾಂಗದಾನ್ರುಕ್ಮಪುಂಖೈರ್ವಿದ್ಧ್ವಾ ಪ್ರಾಯಾದಮಿತ್ರಹಾ||

ಹೀಗೆ ಶತ್ರುಹಂತಕ ಅರ್ಜುನನು ಸುವರ್ಣಮಯ ಸುವರ್ಣಪುಂಖಗಳಿದ್ದ ಮಹಾವೇಗದ ಹತ್ತು ಭಲ್ಲಗಳಿಂದ ಆ ಕೌರವರನ್ನು ಗಾಯಗೊಳಿಸಿ ಮುನ್ನಡೆದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತೆಂಟನೇ ಅಧ್ಯಾಯವು.

Related image

[1]ಇವರು ದುಃಶಾಸನನ ಅನುಜರಿರಲಿಕ್ಕಿಲ್ಲ; ಇತರ ಕೌರವ ಯೋಧರಿರಬಹುದು. ಏಕೆಂದರೆ ಅರ್ಜುನನು ಧೃತರಾಷ್ಟ್ರನ ಯಾವ ಮಕ್ಕಳನ್ನೂ ಸಂಹರಿಸಲಿಲ್ಲ. ಅವರೆಲ್ಲರನ್ನೂ ಭೀಮನೊಬ್ಬನೇ ಸಂಹರಿಸಿದ್ದನು.

Comments are closed.