ಕರ್ಣ ಪರ್ವ
೪೮
ಕರ್ಣನು ಕುಶಲನಾಗಿರುವನೆಂದು ಕೇಳಿ ಕ್ರುದ್ಧನಾದ ಯುಧಿಷ್ಠಿರನು “ದ್ವೈತವನದಲ್ಲಿಯೇ ನೀನು ಕರ್ಣನೊಡನೆ ಯುದ್ಧಮಾಡಲು ಸಮರ್ಥನಿಲ್ಲ! ಎಂದು ಹೇಳಿದ್ದರೆ ಈ ಯುದ್ಧಕ್ಕೇ ನಾನು ನಿಶ್ಚಯಿಸುತ್ತಿರಲಿಲ್ಲ!” ಎಂದು ಮೊದಲಾಗಿ ಅರ್ಜುನನನ್ನು ನಿಂದಿಸಿ ಅವನ ಗಾಂಡೀವವನ್ನು ಅಪಮಾನಿಸಿದುದು (೧-೧೫).
08048001 ಸಂಜಯ ಉವಾಚ|
08048001a ಶ್ರುತ್ವಾ ಕರ್ಣಂ ಕಲ್ಯಮುದಾರವೀರ್ಯಂ
ಕ್ರುದ್ಧಃ ಪಾರ್ಥಃ ಫಲ್ಗುನಸ್ಯಾಮಿತೌಜಾಃ|
08048001c ಧನಂಜಯಂ ವಾಕ್ಯಮುವಾಚ ಚೇದಂ
ಯುಧಿಷ್ಠಿರಃ ಕರ್ಣಶರಾಭಿತಪ್ತಃ||
ಸಂಜಯನು ಹೇಳಿದನು: “ಉದಾರವೀರ್ಯ ಕರ್ಣನು ಕುಶಲನಾಗಿರುವನೆಂದು ಕೇಳಿ ಅಮಿತೌಜಸ ಪಾರ್ಥನು ಫಲ್ಗುನನ ಮೇಲೆ ಕ್ರುದ್ಧನಾದನು. ಕರ್ಣನ ಶರಗಳಿಂದ ಅಭಿತಪ್ತನಾಗಿದ್ದ ಯುಧಿಷ್ಠಿರನು ಧನಂಜಯನಿಗೆ ಈ ಮಾತುಗಳನ್ನಾಡಿದನು:
08048002a ಇದಂ ಯದಿ ದ್ವೈತವನೇ ಹ್ಯವಕ್ಷ್ಯಃ
ಕರ್ಣಂ ಯೋದ್ಧುಂ ನ ಪ್ರಸಹೇ ನೃಪೇತಿ|
08048002c ವಯಂ ತದಾ ಪ್ರಾಪ್ತಕಾಲಾನಿ ಸರ್ವೇ
ವೃತ್ತಾನ್ಯುಪೈಷ್ಯಾಮ ತದೈವ ಪಾರ್ಥ||
“ಪಾರ್ಥ! “ನೃಪನೇ! ಕರ್ಣನೊಡನೆ ಯುದ್ಧಮಾಡಲು ನಾನು ಸಮರ್ಥನಿಲ್ಲ!” ಎಂದು ನೀನು ದ್ವೈತವನದಲ್ಲಿಯೇ ಹೇಳಿದ್ದಿದ್ದರೆ ಆಗ ನಾವು ಸಮಯೋಚಿತವಾದುದೇನೆಂದು ನಿಶ್ಚಯಿಸಿ ಅದರಂತೆಯೇ ನಡೆದುಕೊಳ್ಳುತ್ತಿದ್ದೆವು!
08048003a ಮಯಿ ಪ್ರತಿಶ್ರುತ್ಯ ವಧಂ ಹಿ ತಸ್ಯ
ಬಲಸ್ಯ ಚಾಪ್ತಸ್ಯ ತಥೈವ ವೀರ|
08048003c ಆನೀಯ ನಃ ಶತ್ರುಮಧ್ಯಂ ಸ ಕಸ್ಮಾತ್
ಸಮುತ್ಕ್ಷಿಪ್ಯ ಸ್ಥಂಡಿಲೇ ಪ್ರತ್ಯಪಿಂಷ್ಠಾಃ||
ವೀರ! ಅವನ ಬಲವನ್ನೂ ಆಪ್ತರನ್ನೂ ವಧಿಸುತ್ತೇನೆಂದು ನನಗೆ ಹೇಳಿ ಈಗ ನಮ್ಮನ್ನು ಶತ್ರುಗಳ ಮಧ್ಯದಲ್ಲಿ ತಂದು ಕಠಿಣವಾದ ರಣಾಂಗಣದಲ್ಲಿ ಉರುಳಿಸಿ ಸಮ್ಮರ್ದಿತರಾಗುವಂತೆ ಏಕೆ ಮಾಡಿದೆ?
08048004a ಅನ್ವಾಶಿಷ್ಮ ವಯಮರ್ಜುನ ತ್ವಯಿ
ಯಿಯಾಸವೋ ಬಹು ಕಲ್ಯಾಣಮಿಷ್ಟಂ|
08048004c ತನ್ನಃ ಸರ್ವಂ ವಿಫಲಂ ರಾಜಪುತ್ರ
ಫಲಾರ್ಥಿನಾಂ ನಿಚುಲ ಇವಾತಿಪುಷ್ಪಃ||
ಅರ್ಜುನ! ಕಲ್ಯಾಣಕರ ಅನೇಕ ಇಷ್ಟಗಳನ್ನು ಪೂರೈಸುವೆಯೆಂದು ನಾವು ನಿನ್ನಮೇಲೆ ಬಹಳಷ್ಟು ಆಸೆಗಳನ್ನಿಟ್ಟುಕೊಂಡು ಬಂದಿದ್ದೆವು. ರಾಜಪುತ್ರ! ಆದರೆ ಫಲಾರ್ಥಿಗಳಿಗೆ ವೃಕ್ಷವು ಕೇವಲ ಪುಷ್ಪಗಳನ್ನಿತ್ತಂತೆ ಅವೆಲ್ಲವೂ ನಿಷ್ಫಲವಾಗಿಹೋಯಿತು!
08048005a ಪ್ರಚ್ಛಾದಿತಂ ಬಡಿಶಮಿವಾಮಿಷೇಣ
ಪ್ರಚ್ಛಾದಿತೋ ಗವಯ ಇವಾಪವಾಚಾ|
08048005c ಅನರ್ಥಕಂ ಮೇ ದರ್ಶಿತವಾನಸಿ ತ್ವಂ
ರಾಜ್ಯಾರ್ಥಿನೋ ರಾಜ್ಯರೂಪಂ ವಿನಾಶಂ||
ಮೀನನ್ನು ಹಿಡಿಯುವ ಗಾಳವು ಮಾಂಸದ ತುಂಡಿನಿಂದ ಆಚ್ಛಾದಿತವಾಗಿರುವಂತೆ, ಘೋರವಿಷವು ಅನ್ನದಿಂದ ಮುಚ್ಚಲ್ಪಟ್ಟಿರುವಂತೆ, ರಾಜ್ಯಾರ್ಥಿಯಾದ ನನಗೆ ರಾಜ್ಯರೂಪದ ಅನರ್ಥಕ ವಿನಾಶವನ್ನು ನೀನು ತೋರಿಸಿಕೊಟ್ಟಿರುವೆ!
08048006a ಯತ್ತತ್ಪೃಥಾಂ ವಾಗುವಾಚಾಂತರಿಕ್ಷೇ
ಸಪ್ತಾಹಜಾತೇ ತ್ವಯಿ ಮಂದಬುದ್ಧೌ|
08048006c ಜಾತಃ ಪುತ್ರೋ ವಾಸವವಿಕ್ರಮೋಽಯಂ
ಸರ್ವಾಂ ಶೂರಾಂ ಶಾತ್ರವಾಂ ಜೇಷ್ಯತೀತಿ||
ಮಂದಬುದ್ಧಿಯೇ! ನೀನು ಹುಟ್ಟಿದ ಏಳನೆಯ ದಿನದಂದು ಅಂತರಿಕ್ಷದ ವಾಣಿಯು ಪೃಥೆಗೆ ಇದನ್ನು ಹೇಳಿತ್ತಂತೆ: “ಹುಟ್ಟಿದ ಈ ಮಗನು ವಾಸವನಂತೆ ವಿಕ್ರಮಿಯಾಗುತ್ತಾನೆ. ಎಲ್ಲ ಶೂರರನ್ನೂ ಶತ್ರುಗಳನ್ನೂ ಜಯಿಸುತ್ತಾನೆ!
08048007a ಅಯಂ ಜೇತಾ ಖಾಂಡವೇ ದೇವಸಂಘಾನ್
ಸರ್ವಾಣಿ ಭೂತಾನ್ಯಪಿ ಚೋತ್ತಮೌಜಾಃ|
08048007c ಅಯಂ ಜೇತಾ ಮದ್ರಕಲಿಂಗಕೇಕಯಾನ್
ಅಯಂ ಕುರೂನ್ ಹಂತಿ ಚ ರಾಜಮಧ್ಯೇ||
ಇವನು ಖಾಂಡವದಲ್ಲಿ ದೇವಸಂಘಗಳನ್ನೂ ಉತ್ತಮೌಜಸ ಎಲ್ಲ ಭೂತಗಳನ್ನೂ ಜಯಿಸುತ್ತಾನೆ! ಇವನು ರಾಜಮಧ್ಯದಲ್ಲಿ ಮದ್ರ-ಕಲಿಂಗ-ಕೇಕಯರನ್ನೂ ಕುರುಗಳನ್ನೂ ಸಂಹರಿಸುತ್ತಾನೆ!
08048008a ಅಸ್ಮಾತ್ಪರೋ ನ ಭವಿತಾ ಧನುರ್ಧರೋ
ನ ವೈ ಭೂತಃ ಕಶ್ಚನ ಜಾತು ಜೇತಾ|
08048008c ಇಚ್ಚನ್ನಾರ್ಯಃ ಸರ್ವಭೂತಾನಿ ಕುರ್ಯಾದ್
ವಶೇ ವಶೀ ಸರ್ವಸಮಾಪ್ತವಿದ್ಯಃ||
ಇವನಿಗಿಂತ ಹೆಚ್ಚಿನ ಧನುರ್ಧರನು ಯಾರೂ ಮುಂದೆ ಇರುವುದಿಲ್ಲ! ಹಿಂದೆ ಇರಲಿಲ್ಲ! ಹುಟ್ಟಿದ ಯಾರೂ ಇವನನ್ನು ಜಯಿಸಲಾರರು! ಸರ್ವವಿದ್ಯೆಗಳನ್ನೂ ಸಮಾಪ್ತಿಗೊಳಿಸಿದ ಈ ಆರ್ಯನು ಬಯಸಿದರೆ ಸರ್ವಭೂತಗಳನ್ನೂ ತನ್ನ ವಶದಲ್ಲಿರಿಸಿಕೊಳ್ಳಬಹುದು!
08048009a ಕಾಂತ್ಯಾ ಶಶಾಂಕಸ್ಯ ಜವೇನ ವಾಯೋಃ
ಸ್ಥೈರ್ಯೇಣ ಮೇರೋಃ ಕ್ಷಮಯಾ ಪೃಥಿವ್ಯಾಃ|
08048009c ಸೂರ್ಯಸ್ಯ ಭಾಸಾ ಧನದಸ್ಯ ಲಕ್ಷ್ಮ್ಯಾ
ಶೌರ್ಯೇಣ ಶಕ್ರಸ್ಯ ಬಲೇನ ವಿಷ್ಣೋಃ||
ಇವನು ಕಾಂತಿಯಲ್ಲಿ ಶಶಾಂಕನಂತೆ, ವೇಗದಲ್ಲಿ ವಾಯುವಿನಂತೆ, ಸ್ಥೈರ್ಯದಲ್ಲಿ ಮೇರುವಿನಂತೆ, ಕ್ಷಮೆಯಲ್ಲಿ ಪೃಥ್ವಿಯಂತೆ, ಪ್ರಕಾಶದಲ್ಲಿ ಸೂರ್ಯನಂತೆ, ಸಂಪತ್ತಿನಲ್ಲಿ ಕುಬೇರನಂತೆ, ಶೌರ್ಯದಲ್ಲಿ ಶಕ್ರನಂತೆ ಮತ್ತು ಬಲದಲ್ಲಿ ವಿಷ್ಣುವಿನಂತೆ.
08048010a ತುಲ್ಯೋ ಮಹಾತ್ಮಾ ತವ ಕುಂತಿ ಪುತ್ರೋ
ಜಾತೋಽದಿತೇರ್ವಿಷ್ಣುರಿವಾರಿಹಂತಾ|
08048010c ಸ್ವೇಷಾಂ ಜಯಾಯ ದ್ವಿಷತಾಂ ವಧಾಯ
ಖ್ಯಾತೋಽಮಿತೌಜಾಃ ಕುಲತಂತುಕರ್ತಾ||
ಕುಂತೀ! ನಿನ್ನ ಈ ಮಹಾತ್ಮ ಮಗನು ಅದಿತಿಯಲ್ಲಿ ಹುಟ್ಟಿದ ಅರಿಹಂತ ವಿಷ್ಣುವಿನ ಸಮನಾಗಿದ್ದಾನೆ! ತನ್ನವರಿಗೆ ಜಯವನ್ನು ತರಲು ಮತ್ತು ಶತ್ರುಗಳನ್ನು ವಧಿಸಲು ಇವನು ಹುಟ್ಟಿದ್ದಾನೆ. ಅಮಿತೌಜಸನೆಂದು ವಿಖ್ಯಾತನಾಗುತ್ತಾನೆ. ಕುಲವನ್ನು ಉದ್ಧರಿಸುತ್ತಾನೆ!”
08048011a ಇತ್ಯಂತರಿಕ್ಷೇ ಶತಶೃಂಗಮೂರ್ಧ್ನಿ
ತಪಸ್ವಿನಾಂ ಶೃಣ್ವತಾಂ ವಾಗುವಾಚ|
08048011c ಏವಂವಿಧಂ ತ್ವಾಂ ತಚ್ಚ ನಾಭೂತ್ತವಾದ್ಯ
ದೇವಾ ಹಿ ನೂನಮನೃತಂ ವದಂತಿ||
ಹೀಗೆ ಶತಶೃಂಗದ ಶಿಖರದಲ್ಲಿರುವ ತಪಸ್ವಿಗಳಿಗೆ ಕೇಳುವಂತೆ ಅಂತರಿಕ್ಷದ ವಾಣಿಯು ಹೇಳಿತ್ತು. ಆದರೆ ಅದು ಹೇಳಿದಂತೆ ನೀನು ನಡೆಸಿಕೊಡಲಿಲ್ಲ! ದೇವತೆಗಳೂ ನಿಶ್ಚಿತವಾಗಿ ಸುಳ್ಳುಹೇಳಿರಬಹುದು!
08048012a ತಥಾಪರೇಷಾಂ ಋಷಿಸತ್ತಮಾನಾಂ
ಶ್ರುತ್ವಾ ಗಿರಂ ಪೂಜಯತಾಂ ಸದೈವ|
08048012c ನ ಸನ್ನತಿಂ ಪ್ರೈಮಿ ಸುಯೋಧನಸ್ಯ
ನ ತ್ವಾ ಜಾನಾಮ್ಯಾಧಿರಥೇರ್ಭಯಾರ್ತಂ||
ಈ ಮಾತುಗಳನ್ನು ಕೇಳಿ ಇತರ ಋಷಿಸತ್ತಮರೂ ಸದೈವ ನಿನ್ನನ್ನು ಗೌರವಿಸುತ್ತಿದ್ದರು. ಆದುದರಿಂದ ನಾನು ಸುಯೋಧನನೊಡನೆ ಪ್ರೇಮದಿಂದ ಸಂಧಿಮಾಡಿಕೊಳ್ಳಲಿಲ್ಲ! ನೀನು ಆಧಿರಥನಿಗೆ ಹೆದರುತ್ತೀಯೆಂದು ನನಗೆ ತಿಳಿದಿರಲಿಲ್ಲ!
08048013a ತ್ವಷ್ಟ್ರಾ ಕೃತಂ ವಾಹಮಕೂಜನಾಕ್ಷಂ
ಶುಭಂ ಸಮಾಸ್ಥಾಯ ಕಪಿಧ್ವಜಂ ತ್ವಂ|
08048013c ಖಡ್ಗಂ ಗೃಹೀತ್ವಾ ಹೇಮಚಿತ್ರಂ ಸಮಿದ್ಧಂ
ಧನುಶ್ಚೇದಂ ಗಾಂಡಿವಂ ತಾಲಮಾತ್ರಂ|
08048013e ಸ ಕೇಶವೇನೋಃಯಮಾನಃ ಕಥಂ ನು
ಕರ್ಣಾದ್ಭೀತೋ ವ್ಯಪಯಾತೋಽಸಿ ಪಾರ್ಥ||
ತ್ವಷ್ಟನಿಂದ ನಿನ್ನ ರಥವು ನಿರ್ಮಿಸಲ್ಪಟ್ಟಿದೆ ಮತ್ತು ಅದರ ಚಕ್ರಗಳು ಸ್ವಲ್ಪವೂ ಶಬ್ಧಮಾಡುವುದಿಲ್ಲ! ನಿನ್ನ ಧ್ವಜದಲ್ಲಿ ಶುಭ ಕಪಿಯು ನೆಲೆಸಿದ್ದಾನೆ! ಹೇಮಚಿತ್ರಗಳಿರುವ ಖಡ್ಗವನ್ನೂ ನಾಲ್ಕು ಮೊಳ ಉದ್ದದ ಗಾಂಡೀವಧನುಸ್ಸನ್ನೂ ನೀನು ಹಿಡಿದು ಸನ್ನದ್ಧನಾಗಿರುವೆ! ಈ ಕೇಶವನೇ ನಿನ್ನ ಸಾರಥಿಯಾಗಿರುವಾಗ ಪಾರ್ಥ! ನೀನೇಕೆ ಕರ್ಣನಿಗೆ ಹೆದರಿ ಹೊರಟು ಬಂದೆ?
08048014a ಧನುಶ್ಚೈತತ್ಕೇಶವಾಯ ಪ್ರದಾಯ
ಯಂತಾಭವಿಷ್ಯಸ್ತ್ವಂ ರಣೇ ಚೇದ್ದುರಾತ್ಮನ್|
08048014c ತತೋಽಹನಿಷ್ಯತ್ಕೇಶವಃ ಕರ್ಣಮುಗ್ರಂ
ಮರುತ್ಪತಿರ್ವೃತ್ರಮಿವಾತ್ತವಜ್ರಃ||
ದುರಾತ್ಮನ್! ಈ ಧನುಸ್ಸನ್ನು ಕೇಶವನಿಗೆ ಕೊಟ್ಟುಬಿಡು! ರಣದಲ್ಲಿ ನೀನು ಅವನ ಸಾರಥಿಯಾಗು! ಆಗ ಕೇಶವನು ಇಂದ್ರನು ವಜ್ರಾಯುಧವನ್ನು ಹಿಡಿದು ವೃತ್ರನನ್ನು ಸಂಹರಿಸಿದಂತೆ ಉಗ್ರನಾದ ಕರ್ಣನನ್ನು ಸಂಹರಿಸುತ್ತಾನೆ!
08048015a ಮಾಸೇಽಪತಿಷ್ಯಃ ಪಂಚಮೇ ತ್ವಂ ಪ್ರಕೃಚ್ಚ್ರೇ
ನ ವಾ ಗರ್ಭೋಽಪ್ಯಭವಿಷ್ಯಃ ಪೃಥಾಯಾಃ|
08048015c ತತ್ತೇ ಶ್ರಮೋ ರಾಜಪುತ್ರಾಭವಿಷ್ಯನ್
ನ ಸಂಗ್ರಾಮಾದಪಯಾತುಂ ದುರಾತ್ಮನ್||
ನೀನು ಗರ್ಭದ ಐದನೆಯ ತಿಂಗಳಿನಲ್ಲಿಯೇ ಗರ್ಭಪಾತವಾಗಿ ಹೋಗಬೇಕಾಗಿದ್ದಿತು! ಅಥವಾ ಪೃಥೆಯ ಗರ್ಭದಲ್ಲಿಯೇ ಇರಬಾರದಾಗಿತ್ತು! ದುರಾತ್ಮನ್! ರಾಜಪುತ್ರ! ಆಗ ನೀನು ಸಂಗ್ರಾಮದಿಂದ ಓಡಿಬರುವ ಶ್ರಮವನ್ನು ಪಡಬೇಕಾಗುತ್ತಿರಲಿಲ್ಲ!””
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಕ್ರೋಧವಾಕ್ಯೇ ಅಷ್ಠಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಕ್ರೋಧವಾಕ್ಯ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.