Karna Parva: Chapter 47

ಕರ್ಣ ಪರ್ವ

೪೭

ಅರ್ಜುನನು ಯುಧಿಷ್ಠಿರನಿಗೆ ಉತ್ತರಿಸುತ್ತಾ ಅಶ್ವತ್ಥಾಮನೊಡನೆ ಯುದ್ಧಮಾಡುತ್ತಿದ್ದ ಕಾರಣ ಅವನಿಗೆ ಕರ್ಣನೊಡನೆ ಯುದ್ಧಮಾಡುವ ಅವಕಾಶ ದೊರೆಯಲಿಲ್ಲವೆಂದೂ, ಯುಧಿಷ್ಠಿರನನ್ನು ನೋಡುವ ಆಸೆಯಿಂದ ತ್ವರೆಮಾಡಿ ಶಿಬಿರಕ್ಕೆ ಬಂದನೆಂದೂ, ಇಂದು ಅವನು ಕರ್ಣನನ್ನು ವಧಿಸುತ್ತಾನೆಂದೂ ಹೇಳಿದುದು (೧-೧೪).

08047001 ಸಂಜಯ ಉವಾಚ|

08047001a ತದ್ಧರ್ಮಶೀಲಸ್ಯ ವಚೋ ನಿಶಮ್ಯ

         ರಾಜ್ಞಃ ಕ್ರುದ್ಧಸ್ಯಾಧಿರಥೌ ಮಹಾತ್ಮಾ|

08047001c ಉವಾಚ ದುರ್ಧರ್ಷಮದೀನಸತ್ತ್ವಂ

         ಯುಧಿಷ್ಠಿರಂ ಜಿಷ್ಣುರನಂತವೀರ್ಯಃ||

ಸಂಜಯನು ಹೇಳಿದನು: “ಆಧಿರಥಿಯಮೇಲಿನ ಕೋಪದಿಂದ ರಾಜಾ ಮಹಾತ್ಮ ಧರ್ಮಶೀಲನ ಆ ಮಾತನ್ನು ಕೇಳಿದ ಅನಂತವೀರ್ಯ ಜಿಷ್ಣುವು ಅದೀನಸತ್ತ್ವನಾದ ಯುಧಿಷ್ಠಿರನಿಗೆ ಹೇಳಿದನು:

08047002a ಸಂಶಪ್ತಕೈರ್ಯುಧ್ಯಮಾನಸ್ಯ ಮೇಽದ್ಯ

         ಸೇನಾಗ್ರಯಾಯೀ ಕುರುಸೈನ್ಯಸ್ಯ ರಾಜನ್|

08047002c ಆಶೀವಿಷಾಭಾನ್ಖಗಮಾನ್ಪ್ರಮುಂಚನ್

         ದ್ರೌಣಿಃ ಪುರಸ್ತಾತ್ಸಹಸಾ ವ್ಯತಿಷ್ಠತ್||

“ರಾಜನ್! ಇಂದು ನಾನು ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿರಲು ಕುರುಸೇನೆಯ ಸೇನಾಗ್ರಯಾಯೀ ದ್ರೌಣಿಯು ಒಮ್ಮೆಲೇ ಹಾವಿನ ವಿಷಗಳಂತೆ ಹಾರಾಡುತ್ತಿದ್ದ ಬಾಣಗಳನ್ನು ಪ್ರಯೋಗಿಸುತ್ತಾ ನನ್ನ ಎದಿರು ಬಂದನು.

08047003a ದೃಷ್ಟ್ವಾ ರಥಂ ಮೇಘನಿಭಂ ಮಮೇಮಂ

         ಅಂಬಷ್ಠಸೇನಾ ಮರಣೇ ವ್ಯತಿಷ್ಠತ್|

08047003c ತೇಷಾಮಹಂ ಪಂಚ ಶತಾನಿ ಹತ್ವಾ

         ತತೋ ದ್ರೌಣಿಮಗಮಂ ಪಾರ್ಥಿವಾಗ್ರ್ಯ||

ಪಾರ್ಥಿವಾಗ್ರ್ಯ! ನನ್ನ ಮೇಘಸನ್ನಿಭ ರಥವನ್ನು ನೋಡಿ ಮರಣವನ್ನೇ ಕಾಯುತ್ತಿದ್ದ ಅಂಬಷ್ಠಸೇನೆಯು ನನ್ನನ್ನು ಆಕ್ರಮಣಿಸಲು ನಾನು ಆ ಐನೂರು ಯೋಧರನ್ನು ಸಂಹರಿಸಿ ದ್ರೌಣಿಯೊಡನೆ ಯುದ್ಧಮಾಡಲು ಹೋದೆನು.

08047004a ತತೋಽಪರಾನ್ಬಾಣಸಂಘಾನನೇಕಾನ್

         ಆಕರ್ಣಪೂರ್ಣಾಯತವಿಪ್ರಮುಕ್ತಾನ್|

08047004c ಸಸರ್ಜ ಶಿಕ್ಷಾಸ್ತ್ರಬಲಪ್ರಯತ್ನೈಸ್

         ತಥಾ ಯಥಾ ಪ್ರಾವೃಷಿ ಕಾಲಮೇಘಃ||

ಕಾಲಮೇಘವು ಮಳೆಸುರಿಸುವಂತೆ ಅವನು ಶಿಕ್ಷೆ-ಬಲ-ಪ್ರಯತ್ನಗಳಿಂದ ಆಕರ್ಣಪರ್ಯಂತವಾಗಿ ಧನುಸ್ಸನ್ನು ಸೆಳೆದು ಅನೇಕ ಬಾಣಸಂಘಗಳನ್ನು ಸೃಷ್ಟಿಸಿ ನನ್ನ ಮೇಲೆ ಪ್ರಯೋಗಿಸಿದನು.

08047005a ನೈವಾದಧಾನಂ ನ ಚ ಸಂಧಧಾನಂ

         ಜಾನೀಮಹೇ ಕತರೇಣಾಸ್ಯತೀತಿ|

08047005c ವಾಮೇನ ವಾ ಯದಿ ವಾ ದಕ್ಷಿಣೇನ

         ಸ ದ್ರೋಣಪುತ್ರಃ ಸಮರೇ ಪರ್ಯವರ್ತತ್||

ಅವನು ಯಾವಾಗ ಬತ್ತಳಿಕೆಯಿಂದ ಬಾಣಗಳನ್ನು ತೆಗೆದುಕೊಳ್ಳುತ್ತಿದ್ದಾನೆ, ಯಾವಾಗ ಅವುಗಳನ್ನು ಹೂಡುತ್ತಿದ್ದಾನೆ ಎನ್ನುವುದು ನಮಗೆ ತಿಳಿಯುತ್ತಲೇ ಇರಲಿಲ್ಲ. ಮತ್ತು ಅವನು ಎಡಗೈಯಿಂದ ಅಥವಾ ಬಲಗೈಯಿಂದ ಬಾಣಪ್ರಯೋಗ ಮಾಡುತ್ತಿದ್ದಾನೆಯೋ ಎನ್ನುವುದೂ ತಿಳಿಯದಂತೆ ಸಮರದಲ್ಲಿ ಆ ದ್ರೋಣಪುತ್ರನು ವರ್ತಿಸುತ್ತಿದ್ದನು.

08047006a ಅವಿಧ್ಯನ್ಮಾಂ ಪಂಚಭಿರ್ದ್ರೋಣಪುತ್ರಃ

         ಶಿತೈಃ ಶರೈಃ ಪಂಚಭಿರ್ವಾಸುದೇವಂ|

08047006c ಅಹಂ ತು ತಂ ತ್ರಿಂಶತಾ ವಜ್ರಕಲ್ಪೈಃ

         ಸಮಾರ್ದಯಂ ನಿಮಿಷಸ್ಯಾಂತರೇಣ||

ಐದರಿಂದ ನನ್ನನ್ನು ಹೊಡೆದು ದ್ರೋಣಪುತ್ರನು ಐದು ನಿಶಿತ ಶರಗಳಿಂದ ವಾಸುದೇವನನ್ನೂ ಹೊಡೆದನು. ನಾನಾದರೋ ನಿಮಿಷಮಾತ್ರದಲ್ಲಿ ಅವನನ್ನು ಮೂವತ್ತು ವಜ್ರಸದೃಶ ಬಾಣಗಳಿಂದ ಮರ್ದಿಸಿದೆನು.

08047007a ಸ ವಿಕ್ಷರನ್ರುಧಿರಂ ಸರ್ವಗಾತ್ರೈ

         ರಥಾನೀಕಂ ಸೂತಸೂನೋರ್ವಿವೇಶ|

08047007c ಮಯಾಭಿಭೂತಃ ಸೈನಿಕಾನಾಂ ಪ್ರಬರ್ಹಾನ್

         ಅಸಾವಪಶ್ಯನ್ರುಧಿರೇಣ ಪ್ರದಿಗ್ಧಾನ್||

ದೇಹದಲ್ಲೆಲ್ಲಾ ಗಾಯಗೊಂಡು ರಕ್ತವನ್ನು ಸುರಿಸುತ್ತಾ ಅವನು, ನನ್ನಿಂದ ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವ ಸೈನಿಕರನ್ನು ನೋಡುತ್ತಾ, ಸೂತಪುತ್ರ ಕರ್ಣನ ರಥಸೇನೆಯನ್ನು ಸೇರಿಕೊಂಡನು.

08047008a ತತೋಽಭಿಭೂತಂ ಯುಧಿ ವೀಕ್ಷ್ಯ ಸೈನ್ಯಂ

         ವಿಧ್ವಸ್ತಯೋಧಂ ದ್ರುತವಾಜಿನಾಗಂ|

08047008c ಪಂಚಾಶತಾ ರಥಮುಖ್ಯೈಃ ಸಮೇತಃ

         ಕರ್ಣಸ್ತ್ವರನ್ಮಾಮುಪಾಯಾತ್ಪ್ರಮಾಥೀ||

ಯುದ್ಧದಲ್ಲಿ ಸೈನ್ಯವು ಭಯಗೊಂಡು ವಿಧ್ವಸ್ತವಾಗಿ ಯೋಧರು, ಆನೆ-ಕುದುರೆಗಳು ಪಲಾಯನಮಾಡುತ್ತಿರುವುದನ್ನು ನೋಡಿ ಪ್ರಮಾಥೀ ಕರ್ಣನು ತ್ವರೆಮಾಡಿ ಐದುನೂರು ರಥಪ್ರಮುಖರನ್ನೊಡಗೂಡಿಕೊಂಡು ನನ್ನನ್ನು ಆಕ್ರಮಣಿಸಿದನು.

08047009a ತಾನ್ಸೂದಯಿತ್ವಾಹಮಪಾಸ್ಯ ಕರ್ಣಂ

         ದ್ರಷ್ಟುಂ ಭವಂತಂ ತ್ವರಯಾಭಿಯಾತಃ|

08047009c ಸರ್ವೇ ಪಾಂಚಾಲಾ ಹ್ಯುದ್ವಿಜಂತೇ ಸ್ಮ ಕರ್ಣಾದ್

         ಗಂಧಾದ್ಗಾವಃ ಕೇಸರಿಣೋ ಯಥೈವ||

ಕರ್ಣನ ಆ ಸೇನೆಯನ್ನು ನಾಶಗೊಳಿಸಿ ನಾನು ನಿನ್ನನ್ನು ನೋಡುವ ಸಲುವಾಗಿ ಅವಸರದಿಂದ ಇಲ್ಲಿಗೆ ಬಂದೆನು. ಸಿಂಹದ ವಾಸನೆಯನ್ನು ಮೂಸಿ ಹಸುಗಳು ಭಯಪಡುವಂತೆ ಕರ್ಣನಿಂದ ಪಾಂಚಾಲರೆಲ್ಲರೂ ಉದ್ವಿಗ್ನರಾಗಿದ್ದರು.

08047010a ಮಹಾಝಷಸ್ಯೇವ ಮುಖಂ ಪ್ರಪನ್ನಾಃ

         ಪ್ರಭದ್ರಕಾಃ ಕರ್ಣಮಭಿ ದ್ರವಂತಿ|

08047010c ಮೃತ್ಯೋರಾಸ್ಯಂ ವ್ಯಾತ್ತಮಿವಾನ್ವಪದ್ಯನ್

         ಪ್ರಭದ್ರಕಾಃ ಕರ್ಣಮಾಸಾದ್ಯ ರಾಜನ್||

ಮಹಾರೋಷದಿಂದ ಪ್ರಭದ್ರಕರು ಕರ್ಣನನ್ನು ಎದುರಿಸಿ ಯುದ್ಧಮಾಡುತ್ತಿದ್ದಾರೆ. ರಾಜನ್! ಮೃತ್ಯುವಿನ ತೆರೆದ ಬಾಯಿಯೊಳಗೆ ಪ್ರವೇಶಿಸುವಂತೆ ಪ್ರಭದ್ರಕರು ಕರ್ಣನನ್ನು ಎದುರಿಸಿ ಸಂಕಟಕ್ಕೊಳಗಾಗಿದ್ದಾರೆ.

08047011a ಆಯಾಹಿ ಪಶ್ಯಾದ್ಯ ಯುಯುತ್ಸಮಾನಂ

         ಮಾಂ ಸೂತಪುತ್ರಂ ಚ ವೃತೌ ಜಯಾಯ|

08047011c ಷಟ್ಸಾಹಸ್ರಾ ಭಾರತ ರಾಜಪುತ್ರಾಃ

         ಸ್ವರ್ಗಾಯ ಲೋಕಾಯ ರಥಾ ನಿಮಗ್ನಾಃ||

ಭಾರತ! ರಣಾಂಗಣಕ್ಕೆ ಆಗಮಿಸು! ಇಂದು ನಾನು ಸೂತಪುತ್ರನೊಡನೆ ವಿಜಯಿಯಾಗುವಂತೆ ಯುದ್ಧಮಾಡುವುದನ್ನು ನೋಡು! ಆರುಸಾವಿರ ಮಹಾರಥ ರಾಜಪುತ್ರರು ಸ್ವರ್ಗಲೋಕದ ಸಲುವಾಗಿ ರಣದಲ್ಲಿ ಮುಳುಗಿದ್ದಾರೆ!

08047012a ಸಮೇತ್ಯಾಹಂ ಸೂತಪುತ್ರೇಣ ಸಂಖ್ಯೇ

         ವೃತ್ರೇಣ ವಜ್ರೀವ ನರೇಂದ್ರಮುಖ್ಯ|

08047012c ಯೋತ್ಸ್ಯೇ ಭೃಶಂ ಭಾರತ ಸೂತಪುತ್ರಂ

         ಅಸ್ಮಿನ್ಸಂಗ್ರಾಮೇ ಯದಿ ವೈ ದೃಶ್ಯತೇಽದ್ಯ||

ನರೇಂದ್ರಮುಖ್ಯ! ರಣದಲ್ಲಿ ಸೂತಪುತ್ರನನ್ನು, ವಜ್ರಿಯು ವೃತ್ರನನ್ನು ಹೇಗೋ ಹಾಗೆ, ನಾನು ಎದುರಿಸುತ್ತೇನೆ. ಭಾರತ! ಇಂದು ನೀನು ನೋಡಿದರೆ ನಾನು ಈ ಸಂಗ್ರಾಮದಲ್ಲಿ ಸೂತಪುತ್ರನೊಡನೆ ಚೆನ್ನಾಗಿ ಹೋರಾಡುತ್ತೇನೆ.

08047013a ಕರ್ಣಂ ನ ಚೇದದ್ಯ ನಿಹನ್ಮಿ ರಾಜನ್

         ಸಬಾಂದವಂ ಯುಧ್ಯಮಾನಂ ಪ್ರಸಹ್ಯ|

08047013c ಪ್ರತಿಶ್ರುತ್ಯಾಕುರ್ವತಾಂ ವೈ ಗತಿರ್ಯಾ

         ಕಷ್ಟಾಂ ಗಚ್ಚೇಯಂ ತಾಮಹಂ ರಾಜಸಿಂಹ||

ರಾಜನ್! ರಾಜಸಿಂಹ! ಪ್ರತಿಜ್ಞೆಯಂತೆ ಇಂದು ನಾನು ಯುದ್ಧಮಾಡುತ್ತಿರುವ ಕರ್ಣನನ್ನು ಅವನ ಬಾಂಧವರೊಡನ್ ಸಂಹರಿಸದೇ ಇದ್ದರೆ, ಪ್ರತಿಜ್ಞೆಮಾಡಿದಂತೆ ಮಾಡದೇ ಇರುವವನಿಗೆ ದೊರೆಯುವ ಕಷ್ಟಗಳು ನನಗೆ ದೊರೆಯಲಿ!

08047014a ಆಮಂತ್ರಯೇ ತ್ವಾಂ ಬ್ರೂಹಿ ಜಯಂ ರಣೇ ಮೇ

         ಪುರಾ ಭೀಮಂ ಧಾರ್ತರಾಷ್ಟ್ರಾ ಗ್ರಸಂತೇ|

08047014c ಸೌತಿಂ ಹನಿಷ್ಯಾಮಿ ನರೇಂದ್ರಸಿಂಹ

         ಸೈನ್ಯಂ ತಥಾ ಶತ್ರುಗಣಾಂಶ್ಚ ಸರ್ವಾನ್||

ನರೇಂದ್ರಸಿಂಹ! ಧಾರ್ತರಾಷ್ಟ್ರರು ಭೀಮನನ್ನು ನುಂಗಿಹಾಕುವ ಮೊದಲು ರಣದಲ್ಲಿ ನನಗೆ ಜಯವಾಗಲೆಂದು ಆಶೀರ್ವದಿಸು. ಸೌತಿಯನ್ನು ಮತ್ತು ಹಾಗೆಯೇ ಎಲ್ಲ ಶತ್ರುಗಣಗಳನ್ನೂ ಸಂಹರಿಸುತ್ತೇನೆ!””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅರ್ಜುನವಾಕ್ಯೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ನಲ್ವತ್ತೇಳನೇ ಅಧ್ಯಾಯವು.

Image result for indian motifs

Comments are closed.