ಕರ್ಣ ಪರ್ವ
೪೧
ಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ಯುದ್ಧಮಾಡುತ್ತಿರುವವರನ್ನು ತೋರಿಸಿದುದು (೧-೭).
08041001 ಸಂಜಯ ಉವಾಚ|
08041001a ತ್ವರಮಾಣಃ ಪುನಃ ಕೃಷ್ಣಃ ಪಾರ್ಥಮಭ್ಯವದಚ್ಚನೈಃ|
08041001c ಪಶ್ಯ ಕೌರವ್ಯ ರಾಜಾನಮಪಯಾತಾಂಶ್ಚ ಪಾಂಡವಾನ್||
ಸಂಜಯನು ಹೇಳಿದನು: “ತ್ವರೆಮಾಡಿ ಹೋಗುತ್ತಿದ್ದ ಕೃಷ್ಣನು ಪುನಃ ಅರ್ಜುನನಿಗೆ ಮೆಲ್ಲನೆ ಹೇಳಿದನು: “ಕೌರವ್ಯ! ಪಲಾಯನ ಮಾಡುತ್ತಿರುವ ಪಾಂಡವ ರಾಜರನ್ನು ನೋಡು!
08041002a ಕರ್ಣಂ ಪಶ್ಯ ಮಹಾರಂಗೇ ಜ್ವಲಂತಮಿವ ಪಾವಕಂ|
08041002c ಅಸೌ ಭೀಮೋ ಮಹೇಷ್ವಾಸಃ ಸಂನಿವೃತ್ತೋ ರಣಂ ಪ್ರತಿ||
ಮಹಾರಂಗದಲ್ಲಿ ಜ್ವಲಿಸುತ್ತಿರುವ ಪಾವಕನಂತಿರುವ ಕರ್ಣನನ್ನು ನೋಡು! ಇಗೋ ಮಹೇಷ್ವಾಸ ಭೀಮನು ರಣರಂಗಕ್ಕೆ ಹಿಂದಿರುಗಿ ಬರುತ್ತಿದ್ದಾನೆ.
08041003a ತಮೇತೇಽನು ನಿವರ್ತಂತೇ ಧೃಷ್ಟದ್ಯುಮ್ನಪುರೋಗಮಾಃ|
08041003c ಪಾಂಚಾಲಾನಾಂ ಸೃಂಜಯಾನಾಂ ಪಾಂಡವಾನಾಂ ಚ ಯನ್ಮುಖಂ|
08041003e ನಿವೃತ್ತೈಶ್ಚ ತಥಾ ಪಾರ್ಥೈರ್ಭಗ್ನಂ ಶತ್ರುಬಲಂ ಮಹತ್||
ಅವನನ್ನೇ ಅನುಸರಿಸಿ ಧೃಷ್ಟದ್ಯುಮ್ನಪುರೋಗಮರಾದ ಪಾಂಚಾಲರು, ಸೃಂಜಯರು ಮತ್ತು ಪಾಂಡವರು ಹಿಂದಿರುಗುತ್ತಿದ್ದಾರೆ. ಹಾಗೆ ಹಿಂದಿರುಗುವಾಗಲೇ ಪಾರ್ಥ ಭೀಮನು ಶತ್ರುಬಲವನ್ನು ಮಹಾಸಂಖ್ಯೆಗಳಲ್ಲಿ ಧ್ವಂಸಗೊಳಿಸುತ್ತಿದ್ದಾನೆ.
08041004a ಕೌರವಾನ್ದ್ರವತೋ ಹ್ಯೇಷ ಕರ್ಣೋ ಧಾರಯತೇಽರ್ಜುನ|
08041004c ಅಂತಕಪ್ರತಿಮೋ ವೇಗೇ ಶಕ್ರತುಲ್ಯಪರಾಕ್ರಮಃ||
ಅರ್ಜುನ! ಓಡಿಹೋಗುತ್ತಿರುವ ಕೌರವರನ್ನು ಶಕ್ರತುಲ್ಯಪರಾಕ್ರಮಿ ಅಂತಕಪ್ರತಿಮ ಕರ್ಣನು ಇಲ್ಲಿ ತಡೆಯುತ್ತಿದ್ದಾನೆ!
08041005a ಅಸೌ ಗಚ್ಚತಿ ಕೌರವ್ಯ ದ್ರೌಣಿರಸ್ತ್ರಭೃತಾಂ ವರಃ|
08041005c ತಮೇಷ ಪ್ರದ್ರುತಃ ಸಂಖ್ಯೇ ಧೃಷ್ಟದ್ಯುಮ್ನೋ ಮಹಾರಥಃ||
ಕೌರವ್ಯ! ಇಗೋ ಇಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯು ಹೋಗುತ್ತಿದ್ದಾನೆ ಮತ್ತು ರಣದಲ್ಲಿ ಅವನನ್ನೇ ಅನುಸರಿಸಿ ಮಹಾರಥ ಧೃಷ್ಟದ್ಯುಮ್ನನು ಹೋಗುತ್ತಿದ್ದಾನೆ!”
08041006a ಸರ್ವಂ ವ್ಯಾಚಷ್ಟ ದುರ್ಧರ್ಷೋ ವಾಸುದೇವಃ ಕಿರೀಟಿನೇ|
08041006c ತತೋ ರಾಜನ್ಪ್ರಾದುರಾಸೀನ್ಮಹಾಘೋರೋ ಮಹಾರಣಃ||
ಹೀಗೆ ದುರ್ಧರ್ಷ ವಾಸುದೇವನು ಕಿರೀಟಿಗೆ ಎಲ್ಲವನ್ನು ತೋರಿಸಿ ಹೇಳಿದನು. ರಾಜನ್! ಆಗ ಮಹಾಘೋರ ಮಹಾರಣವು ನಡೆಯಿತು.
08041007a ಸಿಂಹನಾದರವಾಶ್ಚಾತ್ರ ಪ್ರಾದುರಾಸನ್ಸಮಾಗಮೇ|
08041007c ಉಭಯೋಃ ಸೇನಯೋ ರಾಜನ್ಮೃತ್ಯುಂ ಕೃತ್ವಾ ನಿವರ್ತನಂ||
ರಾಜನ್! ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿರಿಸಿಕೊಂಡಿದ್ದ ಎರಡೂ ಸೇನೆಗಳು ಯುದ್ಧದಲ್ಲಿ ತೊಡಗಲು ಅಲ್ಲಿ ಸಿಂಹನಾದಗಳಾದವು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಏಕಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ತೊಂದನೇ ಅಧ್ಯಾಯವು.