ಮಹಾಪ್ರಸ್ಥಾನಿಕ ಪರ್ವ
೩
ಇಂದ್ರ-ಯುಧಿಷ್ಠಿರ ಸಂವಾದ
ಯುಧಿಷ್ಠಿರನನ್ನು ಸಶರೀರವಾಗಿಯೇ ಸ್ವರ್ಗಕ್ಕೆ ಕೊಂಡೊಯ್ಯಲು ಸಾಕ್ಷಾತ್ ಇಂದ್ರನೇ ಬಂದುದು; ನಾಯಿಯ ರೂಪದಲ್ಲಿದ್ದ ಧರ್ಮನಿಂದ ಯುಧಿಷ್ಠಿರನ ಪರೀಕ್ಷೆ (೧-೨೨). ಇಂದ್ರ-ಯುಧಿಷ್ಠಿರರ ಸಂವಾದ (೨೩-೩೬).
17003001 ವೈಶಂಪಾಯನ ಉವಾಚ|
17003001a ತತಃ ಸಂನಾದಯನ್ ಶಕ್ರೋ ದಿವಂ ಭೂಮಿಂ ಚ ಸರ್ವಶಃ|
17003001c ರಥೇನೋಪಯಯೌ ಪಾರ್ಥಮಾರೋಹೇತ್ಯಬ್ರವೀಚ್ಚ ತಮ್||
ವೈಶಂಪಾಯನನು ಹೇಳಿದನು: “ಆಗ ತನ್ನ ರಥದಿಂದ ಭೂಮಿ-ಆಕಾಶ ಎಲ್ಲವನ್ನೂ ಮೊಳಗಿಸುತ್ತ ಶಕ್ರನು ಆಗಮಿಸಿ ಪಾರ್ಥನಿಗೆ “ಮೇಲೇರು!” ಎಂದನು.
17003002a ಸ ಭ್ರಾತೄನ್ಪತಿತಾನ್ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ|
17003002c ಅಬ್ರವೀಚ್ಛೋಕಸಂತಪ್ತಃ ಸಹಸ್ರಾಕ್ಷಮಿದಂ ವಚಃ||
ಸಹೋದರರು ಬಿದ್ದುದನ್ನು ನೋಡಿ ಧರ್ಮರಾಜ ಯುಧಿಷ್ಠಿರನು ಶೋಕಸಂತಪ್ತನಾಗಿ ಸಹಸ್ರಾಕ್ಷನಿಗೆ ಈ ಮಾತನ್ನಾಡಿದನು:
17003003a ಭ್ರಾತರಃ ಪತಿತಾ ಮೇಽತ್ರ ಆಗಚ್ಚೇಯುರ್ಮಯಾ ಸಹ|
17003003c ನ ವಿನಾ ಭ್ರಾತೃಭಿಃ ಸ್ವರ್ಗಮಿಚ್ಚೇ ಗಂತುಂ ಸುರೇಶ್ವರ||
“ನನ್ನ ಸಹೋದರರು ಅಲ್ಲಿ ಬಿದ್ದಿದ್ದಾರೆ. ಅವರೂ ಕೂಡ ನನ್ನೊಡನೆ ಬರಲಿ. ಸುರೇಶ್ವರ! ಭ್ರಾತೃಗಳನ್ನು ಬಿಟ್ಟು ಸ್ವರ್ಗಕ್ಕೆ ಬರಲು ನಾನು ಬಯಸುವುದಿಲ್ಲ!
17003004a ಸುಕುಮಾರೀ ಸುಖಾರ್ಹಾ ಚ ರಾಜಪುತ್ರೀ ಪುರಂದರ|
17003004c ಸಾಸ್ಮಾಭಿಃ ಸಹ ಗಚ್ಚೇತ ತದ್ಭವಾನನುಮನ್ಯತಾಮ್||
ಪುರಂದರ! ಸುಕುಮಾರೀ, ಸುಖಕ್ಕೆ ಅರ್ಹಳಾದ ರಾಜಪುತ್ರಿಯೂ ಕೂಡ ನಮ್ಮೊಡನೆ ಬರುವಂತಾಗಲೆಂದು ನೀನು ಅನುಮತಿಯನ್ನು ನೀಡಬೇಕು!”
17003005 ಇಂದ್ರ ಉವಾಚ|
17003005a ಭ್ರಾತೄನ್ದ್ರಕ್ಷ್ಯಸಿ ಪುತ್ರಾಂಸ್ತ್ವಮಗ್ರತಸ್ತ್ರಿದಿವಂ ಗತಾನ್|
17003005c ಕೃಷ್ಣಯಾ ಸಹಿತಾನ್ಸರ್ವಾನ್ಮಾ ಶುಚೋ ಭರತರ್ಷಭ||
ಇಂದ್ರನು ಹೇಳಿದನು: “ಮಗನೇ! ಮೊದಲೇ ಸ್ವರ್ಗಕ್ಕೆ ಹೋಗಿರುವ ಕೃಷ್ಣೆಯ ಸಹಿತ ಭ್ರಾತೃಗಳೆಲ್ಲರನ್ನೂ ನೀನು ನೋಡುವೆ. ಭರತರ್ಷಭ! ದುಃಖಿಸಬೇಡ!
17003006a ನಿಕ್ಷಿಪ್ಯ ಮಾನುಷಂ ದೇಹಂ ಗತಾಸ್ತೇ ಭರತರ್ಷಭ|
17003006c ಅನೇನ ತ್ವಂ ಶರೀರೇಣ ಸ್ವರ್ಗಂ ಗಂತಾ ನ ಸಂಶಯಃ||
ಭರತರ್ಷಭ! ಅವರು ಮನುಷ್ಯದೇಹವನ್ನು ಇಲ್ಲಿಯೇ ಇಟ್ಟು ಹೋಗಿದ್ದಾರೆ. ನೀನು ನಿನ್ನ ಈ ಶರೀರದಿಂದಲೇ ಸ್ವರ್ಗಕ್ಕೆ ಹೋಗುತ್ತೀಯೆ. ಅದರಲ್ಲಿ ಸಂಶಯವಿಲ್ಲ!”
17003007 ಯುಧಿಷ್ಠಿರ ಉವಾಚ|
17003007a ಅಯಂ ಶ್ವಾ ಭೂತಭವ್ಯೇಶ ಭಕ್ತೋ ಮಾಂ ನಿತ್ಯಮೇವ ಹ|
17003007c ಸ ಗಚ್ಚೇತ ಮಯಾ ಸಾರ್ಧಮಾನೃಶಂಸ್ಯಾ ಹಿ ಮೇ ಮತಿಃ||
ಯುಧಿಷ್ಠಿರನು ಹೇಳಿದನು: “ಭೂತಭವ್ಯೇಶ! ಈ ನಾಯಿಯು ನಿತ್ಯವೂ ನನ್ನ ಭಕ್ತನಾಗಿದ್ದಿತು. ಅದೂ ಕೂಡ ನನ್ನೊಡನೆ ಬರಲಿ. ಅದರ ಮೇಲೆ ನನಗೆ ದಯಾಭಾವವುಂಟಾಗಿದೆ!”
17003008 ಇಂದ್ರ ಉವಾಚ|
17003008a ಅಮರ್ತ್ಯತ್ವಂ ಮತ್ಸಮತ್ವಂ ಚ ರಾಜನ್
ಶ್ರಿಯಂ ಕೃತ್ಸ್ನಾಂ ಮಹತೀಂ ಚೈವ ಕೀರ್ತಿಮ್|
17003008c ಸಂಪ್ರಾಪ್ತೋಽದ್ಯ ಸ್ವರ್ಗಸುಖಾನಿ ಚ ತ್ವಂ
ತ್ಯಜ ಶ್ವಾನಂ ನಾತ್ರ ನೃಶಂಸಮಸ್ತಿ||
ಇಂದ್ರನು ಹೇಳಿದನು: “ರಾಜನ್! ಇಂದು ನೀನು ನನ್ನ ಸಮನಾಗಿ ಅಮರತ್ವವನ್ನೂ, ಶ್ರೀಯನ್ನೂ, ವಿಶಾಲ ಬೃಹತ್ಕೀರ್ತಿಯನ್ನೂ ಸ್ವರ್ಗಸುಖಗಳನ್ನೂ ಪಡೆದಿದ್ದೀಯೆ. ಈ ನಾಯಿಯನ್ನು ತೊರೆ. ಇದರಲ್ಲಿ ಅಹಿಂಸೆಯೇನೂ ಇಲ್ಲ!”
17003009 ಯುಧಿಷ್ಠಿರ ಉವಾಚ|
17003009a ಅನಾರ್ಯಮಾರ್ಯೇಣ ಸಹಸ್ರನೇತ್ರ
ಶಕ್ಯಂ ಕರ್ತುಂ ದುಷ್ಕರಮೇತದಾರ್ಯ|
17003009c ಮಾ ಮೇ ಶ್ರಿಯಾ ಸಂಗಮನಂ ತಯಾಸ್ತು
ಯಸ್ಯಾಃ ಕೃತೇ ಭಕ್ತಜನಂ ತ್ಯಜೇಯಮ್||
ಯುಧಷ್ಠಿರನು ಹೇಳಿದನು: “ಸಹಸ್ರನೇತ್ರ! ಆರ್ಯ! ಆರ್ಯನಾದವನಿಗೆ ಅನಾರ್ಯ ಕೃತ್ಯವನ್ನು ಮಾಡುವುದು ದುಷ್ಕರವಾದುದು, ಅಶಕ್ಯವಾದುದು. ಭಕ್ತಜನರನ್ನು ತೊರೆದು ನಾನು ಶ್ರೀಯನ್ನು ಸಂಪಾದಿಸುವಂತಾಗದಿರಲಿ!”
17003010 ಇಂದ್ರ ಉವಾಚ|
17003010a ಸ್ವರ್ಗೇ ಲೋಕೇ ಶ್ವವತಾಂ ನಾಸ್ತಿ ಧಿಷ್ಣ್ಯಮ್
ಇಷ್ಟಾಪೂರ್ತಂ ಕ್ರೋಧವಶಾ ಹರಂತಿ|
17003010c ತತೋ ವಿಚಾರ್ಯ ಕ್ರಿಯತಾಂ ಧರ್ಮರಾಜ
ತ್ಯಜ ಶ್ವಾನಂ ನಾತ್ರ ನೃಶಂಸಮಸ್ತಿ||
ಇಂದ್ರನು ಹೇಳಿದನು: “ಧರ್ಮರಾಜ! ನಾಯಿಯ ಒಡೆಯರಿಗೆ ಸ್ವರ್ಗಲೋಕದಲ್ಲಿ ಸ್ಥಾನವಿಲ್ಲ. ಅವರ ಇಷ್ಟಿ-ಯಾಗಗಳ ಪುಣ್ಯಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ವಿಚಾರಿಸಿ ಕಾರ್ಯಮಾಡು. ನಾಯಿಯನ್ನು ಇಲ್ಲಿಯೇ ಬಿಟ್ಟುಬಿಡು. ಅದರಲ್ಲಿ ಅಹಿಂಸೆಯೇನೂ ಇಲ್ಲ.”
17003011 ಯುಧಿಷ್ಠಿರ ಉವಾಚ|
17003011a ಭಕ್ತತ್ಯಾಗಂ ಪ್ರಾಹುರತ್ಯಂತಪಾಪಂ
ತುಲ್ಯಂ ಲೋಕೇ ಬ್ರಹ್ಮವಧ್ಯಾಕೃತೇನ|
17003011c ತಸ್ಮಾನ್ನಾಹಂ ಜಾತು ಕಥಂ ಚನಾದ್ಯ
ತ್ಯಕ್ಷ್ಯಾಮ್ಯೇನಂ ಸ್ವಸುಖಾರ್ಥೀ ಮಹೇಂದ್ರ||
ಯುಧಿಷ್ಠಿರನು ಹೇಳಿದನು: “ಭಕ್ತರನ್ನು ತ್ಯಜಿಸುವುದು ಅತ್ಯಂತ ಪಾಪವೆಂದು ಹೇಳುತ್ತಾರೆ. ಲೋಕದಲ್ಲಿ ಆ ಪಾಪವು ಬ್ರಹ್ಮವಧೆಯನ್ನು ಮಾಡಿದುದಕ್ಕೆ ಸಮಾನ. ಮಹೇಂದ್ರ! ಆದುದರಿಂದ ನನ್ನ ಸುಖಕ್ಕಾಗಿ ಇಂದು ಇದನ್ನು ನಾನು ತ್ಯಜಿಸುವುದಿಲ್ಲ!”
17003012 ಇಂದ್ರ ಉವಾಚ|
17003012a ಶುನಾ ದೃಷ್ಟಂ ಕ್ರೋಧವಶಾ ಹರಂತಿ
ಯದ್ದತ್ತಮಿಷ್ಟಂ ವಿವೃತಮಥೋ ಹುತಂ ಚ|
17003012c ತಸ್ಮಾಚ್ಛುನಸ್ತ್ಯಾಗಮಿಮಂ ಕುರುಷ್ವ
ಶುನಸ್ತ್ಯಾಗಾತ್ಪ್ರಾಪ್ಸ್ಯಸೇ ದೇವಲೋಕಮ್||
ಇಂದ್ರನು ಹೇಳಿದನು: “ನಾಯಿಯು ನೋಡಿದ ದಾನ, ಯಜ್ಞ ಮತ್ತು ಆಹುತಿಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ಈ ನಾಯಿಯನ್ನು ತ್ಯಜಿಸು. ನಾಯಿಯನ್ನು ತ್ಯಜಿಸಿದರೆ ನಿನಗೆ ದೇವಲೋಕವು ದೊರೆಯುತ್ತದೆ.
17003013a ತ್ಯಕ್ತ್ವಾ ಭ್ರಾತೄನ್ದಯಿತಾಂ ಚಾಪಿ ಕೃಷ್ಣಾಂ
ಪ್ರಾಪ್ತೋ ಲೋಕಃ ಕರ್ಮಣಾ ಸ್ವೇನ ವೀರ|
17003013c ಶ್ವಾನಂ ಚೈನಂ ನ ತ್ಯಜಸೇ ಕಥಂ ನು
ತ್ಯಾಗಂ ಕೃತ್ಸ್ನಂ ಚಾಸ್ಥಿತೋ ಮುಹ್ಯಸೇಽದ್ಯ||
ವೀರ! ಸಹೋದರರನ್ನೂ ಪತ್ನಿ ಕೃಷ್ಣೆಯನ್ನೂ ಇಲ್ಲಿ ಬಿಟ್ಟು ನಿನ್ನದೇ ಕರ್ಮಗಳಿಂದ ಲೋಕಗಳನ್ನು ಪಡೆದಿದ್ದೀಯೆ. ಈ ನಾಯಿಯನ್ನೇಕೆ ನೀನು ತ್ಯಜಿಸುತ್ತಿಲ್ಲ? ಸರ್ವವನ್ನೂ ತ್ಯಾಗಮಾಡಿರುವ ನೀನು ಈ ವಿಷಯದಲ್ಲಿ ಏಕೆ ಮೋಹಗೊಳ್ಳುತ್ತಿದ್ದೀಯೆ?”
17003014 ಯುಧಿಷ್ಠಿರ ಉವಾಚ|
17003014a ನ ವಿದ್ಯತೇ ಸಂಧಿರಥಾಪಿ ವಿಗ್ರಹೋ
ಮೃತೈರ್ಮರ್ತ್ಯೈರಿತಿ ಲೋಕೇಷು ನಿಷ್ಠಾ|
17003014c ನ ತೇ ಮಯಾ ಜೀವಯಿತುಂ ಹಿ ಶಕ್ಯಾ
ತಸ್ಮಾತ್ತ್ಯಾಗಸ್ತೇಷು ಕೃತೋ ನ ಜೀವತಾಮ್||
ಯುಧಿಷ್ಠಿರನು ಹೇಳಿದನು: “ಮೃತರಾದ ಮನುಷ್ಯರೊಡನೆ ಸ್ನೇಹವಾಗಲೀ ದ್ವೇಶವಾಗಲೀ ಇರಲಾರದು ಎನ್ನುವುದು ಲೋಕಗಳ ನಿಷ್ಠೆ. ಅವರನ್ನು ಜೀವಗೊಳಿಸಲೂ ನಾನು ಶಕ್ಯನಾಗಿರಲಿಲ್ಲ. ಆದುದರಿಂದ ನಾನು ಅವರನ್ನು ತೊರೆದೆ. ಅವರು ಜೀವಿತವಿರುವಾಗ ಎಂದೂ ನಾನು ಅವರನ್ನು ತೊರೆದಿರಲಿಲ್ಲ!
17003015a ಪ್ರತಿಪ್ರದಾನಂ ಶರಣಾಗತಸ್ಯ
ಸ್ತ್ರಿಯಾ ವಧೋ ಬ್ರಾಹ್ಮಣಸ್ವಾಪಹಾರಃ|
17003015c ಮಿತ್ರದ್ರೋಹಸ್ತಾನಿ ಚತ್ವಾರಿ ಶಕ್ರ
ಭಕ್ತತ್ಯಾಗಶ್ಚೈವ ಸಮೋ ಮತೋ ಮೇ||
ಶಕ್ರ! ಶರಣಾಗತನಾದವನನ್ನು ಅವನ ಶತ್ರುವಿಗೆ ಒಪ್ಪಿಸುವುದು, ಸ್ತ್ರೀಯನ್ನು ವಧಿಸುವುದು, ಬ್ರಾಹ್ಮಣನದ್ದನ್ನು ಅಪಹರಿಸುವುದು, ಮತ್ತು ಮಿತ್ರದ್ರೋಹ ಈ ನಾಲ್ಕೂ ಭಕ್ತತ್ಯಾಗಕ್ಕೆ ಸಮವೆಂದು ನನ್ನ ಅಭಿಪ್ರಾಯ!””
17003016 ವೈಶಂಪಾಯನ ಉವಾಚ|
17003016a ತದ್ಧರ್ಮರಾಜಸ್ಯ ವಚೋ ನಿಶಮ್ಯ
ಧರ್ಮಸ್ವರೂಪೀ ಭಗವಾನುವಾಚ|
17003016c ಯುಧಿಷ್ಠಿರಂ ಪ್ರೀತಿಯುಕ್ತೋ ನರೇಂದ್ರಂ
ಶ್ಲಕ್ಷ್ಣೈರ್ವಾಕ್ಯೈಃ ಸಂಸ್ತವಸಂಪ್ರಯುಕ್ತೈಃ||
ವೈಶಂಪಾಯನನು ಹೇಳಿದನು: “ಧರ್ಮರಾಜನ ಆ ಮಾತನ್ನು ಕೇಳಿ ನಾಯಿಯ ರೂಪದಲ್ಲಿದ್ದ ಧರ್ಮ ಭಗವಾನನು ಪ್ರೀತಿಯುಕ್ತನಾಗಿ ಮಧುರವಾಕ್ಯಗಳಿಂದ ಅವನನ್ನು ಪ್ರಶಂಸಿಸುತ್ತಾ ಹೇಳಿದನು:
17003017a ಅಭಿಜಾತೋಽಸಿ ರಾಜೇಂದ್ರ ಪಿತುರ್ವೃತ್ತೇನ ಮೇಧಯಾ|
17003017c ಅನುಕ್ರೋಶೇನ ಚಾನೇನ ಸರ್ವಭೂತೇಷು ಭಾರತ||
“ರಾಜೇಂದ್ರ! ಭಾರತ! ತಂದೆಯಂತೆ ಉತ್ತಮ ನಡತೆ, ಬುದ್ಧಿ ಮತ್ತು ಸರ್ವಭೂತಗಳ ಮೇಲೆ ಅನುಕ್ರೋಶದಿಂದ ಕೂಡಿರುವ ನಿನ್ನ ಜನ್ಮವು ಉತ್ತಮವಾದುದು!
17003018a ಪುರಾ ದ್ವೈತವನೇ ಚಾಸಿ ಮಯಾ ಪುತ್ರ ಪರೀಕ್ಷಿತಃ|
17003018c ಪಾನೀಯಾರ್ಥೇ ಪರಾಕ್ರಾಂತಾ ಯತ್ರ ತೇ ಭ್ರಾತರೋ ಹತಾಃ||
ಪುತ್ರ! ಹಿಂದೆ ದ್ವೈತವನದಲ್ಲಿ ನೀರಿಗಾಗಿ ನಿನ್ನ ಪರಾಕ್ರಾಂತ ಸಹೋದರರು ಹತರಾದಾಗ ನಾನು ನಿನ್ನನ್ನು ಪರೀಕ್ಷಿಸಿದ್ದೆ.
17003019a ಭೀಮಾರ್ಜುನೌ ಪರಿತ್ಯಜ್ಯ ಯತ್ರ ತ್ವಂ ಭ್ರಾತರಾವುಭೌ|
17003019c ಮಾತ್ರೋಃ ಸಾಮ್ಯಮಭೀಪ್ಸನ್ವೈ ನಕುಲಂ ಜೀವಮಿಚ್ಚಸಿ||
ಮಾತೆಯರಲ್ಲಿ ಸಾಮ್ಯತೆಯನ್ನು ಬಯಸಿದ ನೀನು ನಿನ್ನ ಇಬ್ಬರು ಸಹೋದರರು ಭೀಮಾರ್ಜುನರನ್ನು ಬಿಟ್ಟು ನಕುಲನು ಜೀವಿತನಾಗಲಿ ಎಂದು ಬಯಸಿದೆ.
17003020a ಅಯಂ ಶ್ವಾ ಭಕ್ತ ಇತ್ಯೇವ ತ್ಯಕ್ತೋ ದೇವರಥಸ್ತ್ವಯಾ|
17003020c ತಸ್ಮಾತ್ಸ್ವರ್ಗೇ ನ ತೇ ತುಲ್ಯಃ ಕಶ್ಚಿದಸ್ತಿ ನರಾಧಿಪ||
ಈ ನಾಯಿಯು ಭಕ್ತನೆಂದು ನೀನು ದೇವರಥವನ್ನು ತೊರೆದೆ. ನರಾಧಿಪ! ಆದುದರಿಂದ ಸ್ವರ್ಗದಲ್ಲಿ ಯಾರೂ ನಿನ್ನ ತುಲ್ಯರಾದವರು ಇಲ್ಲ!
17003021a ಅತಸ್ತವಾಕ್ಷಯಾ ಲೋಕಾಃ ಸ್ವಶರೀರೇಣ ಭಾರತ|
17003021c ಪ್ರಾಪ್ತೋಽಸಿ ಭರತಶ್ರೇಷ್ಠ ದಿವ್ಯಾಂ ಗತಿಮನುತ್ತಮಾಮ್||
ಭಾರತ! ಭರತಶ್ರೇಷ್ಠ! ಆದುದರಿಂದ ನೀನು ನಿನ್ನದೇ ಶರೀರದಲ್ಲಿ ಅಕ್ಷಯ ಲೋಕಗಳನ್ನೂ ದಿವ್ಯ ಅನುತ್ತಮ ಗತಿಯನ್ನೂ ಹೊಂದುತ್ತೀಯೆ.”
17003022a ತತೋ ಧರ್ಮಶ್ಚ ಶಕ್ರಶ್ಚ ಮರುತಶ್ಚಾಶ್ವಿನಾವಪಿ|
17003022c ದೇವಾ ದೇವರ್ಷಯಶ್ಚೈವ ರಥಮಾರೋಪ್ಯ ಪಾಂಡವಮ್||
ಅನಂತರ ಧರ್ಮ, ಶಕ್ರ, ಮರುತರು, ಅಶ್ವಿನಿಯರು, ದೇವತೆಗಳು, ಮತ್ತು ದೇವರ್ಷಿಗಳು ಪಾಂಡವನನ್ನು ರಥಕ್ಕೇರಿಸಿದರು.
17003023a ಪ್ರಯಯುಃ ಸ್ವೈರ್ವಿಮಾನೈಸ್ತೇ ಸಿದ್ಧಾಃ ಕಾಮವಿಹಾರಿಣಃ|
17003023c ಸರ್ವೇ ವಿರಜಸಃ ಪುಣ್ಯಾಃ ಪುಣ್ಯವಾಗ್ಬುದ್ಧಿಕರ್ಮಿಣಃ||
ಬೇಕಾದಲ್ಲಿ ಹೋಗ ಬಲ್ಲ ಆ ಸಿದ್ಧರೆಲ್ಲರೂ ತಮ್ಮ ತಮ್ಮ ವಿಮಾನಗಳಲ್ಲಿ ಪ್ರಯಾಣಿಸಿದರು. ಅವರೆಲ್ಲರೂ ಶುದ್ಧರೂ, ಪುಣ್ಯರೂ ಆಗಿದ್ದರು ಮತ್ತು ಪುಣ್ಯ ಮಾತು, ಯೋಚನೆ ಮತ್ತು ಕರ್ಮಗಳುಳ್ಳವರಾಗಿದ್ದರು.
17003024a ಸ ತಂ ರಥಂ ಸಮಾಸ್ಥಾಯ ರಾಜಾ ಕುರುಕುಲೋದ್ವಹಃ|
17003024c ಊರ್ಧ್ವಮಾಚಕ್ರಮೇ ಶೀಘ್ರಂ ತೇಜಸಾವೃತ್ಯ ರೋದಸೀ||
ಕುರುಕುಲೋದ್ವಹ ರಾಜನು ಆ ರಥದಲ್ಲಿ ಕುಳಿತು ತನ್ನ ತೇಜಸ್ಸಿನಿಂದ ಆಕಾಶ-ಪೃಥ್ವಿಗಳನ್ನು ಬೆಳಗಿಸುತ್ತಾ ಶೀಘ್ರವಾಗಿ ಮೇಲೆ ಹೋದನು.
17003025a ತತೋ ದೇವನಿಕಾಯಸ್ಥೋ ನಾರದಃ ಸರ್ವಲೋಕವಿತ್|
17003025c ಉವಾಚೋಚ್ಛೈಸ್ತದಾ ವಾಕ್ಯಂ ಬೃಹದ್ವಾದೀ ಬೃಹತ್ತಪಾಃ||
ಆಗ ದೇವತೆಗಳ ಮಧ್ಯದಲ್ಲಿದ್ದ ಸರ್ವಲೋಕಗಳನ್ನು ತಿಳಿದಿರುವ ಮಹಾವಾದೀ ಮಹಾತಪಸ್ವೀ ನಾರದನು ಉಚ್ಛಸ್ವರದಲ್ಲಿ ಈ ಮಾತನ್ನಾಡಿದನು:
17003026a ಯೇಽಪಿ ರಾಜರ್ಷಯಃ ಸರ್ವೇ ತೇ ಚಾಪಿ ಸಮುಪಸ್ಥಿತಾಃ|
17003026c ಕೀರ್ತಿಂ ಪ್ರಚ್ಚಾದ್ಯ ತೇಷಾಂ ವೈ ಕುರುರಾಜೋಽಧಿತಿಷ್ಠತಿ||
“ಈ ಕುರುರಾಜನು ಈ ಮೊದಲು ಇಲ್ಲಿಗೆ ಆಗಮಿಸಿದ್ದ ಅ ಎಲ್ಲ ರಾಜರ್ಷಿಗಳ ಕೀರ್ತಿಯನ್ನು ಮರೆಸಿದ್ದಾನೆ.
17003027a ಲೋಕಾನಾವೃತ್ಯ ಯಶಸಾ ತೇಜಸಾ ವೃತ್ತಸಂಪದಾ|
17003027c ಸ್ವಶರೀರೇಣ ಸಂಪ್ರಾಪ್ತಂ ನಾನ್ಯಂ ಶುಶ್ರುಮ ಪಾಂಡವಾತ್||
ತನ್ನ ನಡತೆಯಿಂದ ಸಂಪಾದಿಸಿದ ತೇಜಸ್ಸು ಮತ್ತು ಯಶಸ್ಸಿನಿಂದ ಇವನು ಲೋಕಗಳನ್ನೇ ತುಂಬಿಸಿಬಿಟ್ಟಿದ್ದಾನೆ. ಪಾಂಡವನಲ್ಲದೇ ಬೇರೆ ಯಾರೂ ಸ್ವಶರೀರದಿಂದ ಇವೆಲ್ಲವನ್ನೂ ಸಂಪಾದಿಸಿದುದನ್ನು ನಾನು ಕೇಳಿಲ್ಲ!”
17003028a ನಾರದಸ್ಯ ವಚಃ ಶ್ರುತ್ವಾ ರಾಜಾ ವಚನಮಬ್ರವೀತ್|
17003028c ದೇವಾನಾಮಂತ್ರ್ಯ ಧರ್ಮಾತ್ಮಾ ಸ್ವಪಕ್ಷಾಂಶ್ಚೈವ ಪಾರ್ಥಿವಾನ್||
ನಾರದನ ಮಾತನ್ನು ಕೇಳಿ ಧರ್ಮಾತ್ಮ ರಾಜನು ದೇವತೆಗಳಿಗೂ ಮತ್ತು ತನ್ನ ಪಕ್ಷದಲ್ಲಿದ್ದ ಪಾರ್ಥಿವರಿಗೂ ವಂದಿಸಿ ಹೀಗೆ ಹೇಳಿದನು:
17003029a ಶುಭಂ ವಾ ಯದಿ ವಾ ಪಾಪಂ ಭ್ರಾತೄಣಾಂ ಸ್ಥಾನಮದ್ಯ ಮೇ|
17003029c ತದೇವ ಪ್ರಾಪ್ತುಮಿಚ್ಚಾಮಿ ಲೋಕಾನನ್ಯಾನ್ನ ಕಾಮಯೇ||
“ಶುಭವಾಗಿರಲಿ ಅಥವಾ ಪಾಪದ್ದಾಗಿರಲಿ ಇಂದು ನಾನು ನನ್ನ ಸಹೋದರರು ಎಲ್ಲಿದ್ದಾರೋ ಅದೇ ಲೋಕವನ್ನು ಪಡೆಯಲು ಇಚ್ಛಿಸುತ್ತೇನೆ. ಬೇರಾವ ಲೋಕವನ್ನೂ ಬಯಸುವುದಿಲ್ಲ!”
17003030a ರಾಜ್ಞಸ್ತು ವಚನಂ ಶ್ರುತ್ವಾ ದೇವರಾಜಃ ಪುರಂದರಃ|
17003030c ಆನೃಶಂಸ್ಯಸಮಾಯುಕ್ತಂ ಪ್ರತ್ಯುವಾಚ ಯುಧಿಷ್ಠಿರಮ್||
ರಾಜನ ಮಾತನ್ನು ಕೇಳಿ ದೇವರಾಜ ಪುರಂದರನು ಈ ದಯಾಯುಕ್ತ ಮಾತುಗಳನ್ನು ಯುಧಿಷ್ಠಿರನಿಗೆ ಹೇಳಿದನು:
17003031a ಸ್ಥಾನೇಽಸ್ಮಿನ್ವಸ ರಾಜೇಂದ್ರ ಕರ್ಮಭಿರ್ನಿರ್ಜಿತೇ ಶುಭೈಃ|
17003031c ಕಿಂ ತ್ವಂ ಮಾನುಷ್ಯಕಂ ಸ್ನೇಹಮದ್ಯಾಪಿ ಪರಿಕರ್ಷಸಿ||
“ರಾಜನ್! ನಿನ್ನ ಕರ್ಮಗಳಿಂದ ಗಳಿಸಿರುವ ಈ ಶುಭ ಸ್ಥಾನಗಳಲ್ಲಿ ವಾಸಿಸು. ಈಗಲೂ ಕೂಡ ಮಾನುಷ್ಯಕ ಸ್ನೇಹದಿಂದ ಸೆಳೆಯಲ್ಪಡುತ್ತಿದ್ದೀಯೆ!
17003032a ಸಿದ್ಧಿಂ ಪ್ರಾಪ್ತೋಽಸಿ ಪರಮಾಂ ಯಥಾ ನಾನ್ಯಃ ಪುಮಾನ್ಕ್ವ ಚಿತ್|
17003032c ನೈವ ತೇ ಭ್ರಾತರಃ ಸ್ಥಾನಂ ಸಂಪ್ರಾಪ್ತಾಃ ಕುರುನಂದನ||
ಬೇರೆ ಯಾವ ಪುರುಷನೂ ಎಂದೂ ಗಳಿಸಿರದ ಪರಮ ಸಿದ್ಧಿಯನ್ನು ನೀನು ಗಳಿಸಿರುವೆ. ಕುರುನಂದನ! ನಿನ್ನ ಭ್ರಾತರಿಗೆ ಈ ಸ್ಥಾನವು ದೊರಕಿಲ್ಲ!
17003033a ಅದ್ಯಾಪಿ ಮಾನುಷೋ ಭಾವಃ ಸ್ಪೃಶತೇ ತ್ವಾಂ ನರಾಧಿಪ|
17003033c ಸ್ವರ್ಗೋಽಯಂ ಪಶ್ಯ ದೇವರ್ಷೀನ್ಸಿದ್ಧಾಂಶ್ಚ ತ್ರಿದಿವಾಲಯಾನ್||
ನರಾಧಿಪ! ಈಗಲೂ ಮಾನುಷ ಭಾವವು ನಿನ್ನನ್ನು ಸ್ಪರ್ಶಿಸುತ್ತಿವೆ. ಇದು ಸ್ವರ್ಗ! ದೇವರ್ಷಿಗಳ ಮತ್ತು ಸಿದ್ಧರ ಆಲಯವಾದ ಈ ತ್ರಿದಿವವನ್ನು ನೋಡು!”
17003034a ಯುಧಿಷ್ಠಿರಸ್ತು ದೇವೇಂದ್ರಮೇವಂವಾದಿನಮೀಶ್ವರಮ್|
17003034c ಪುನರೇವಾಬ್ರವೀದ್ಧೀಮಾನಿದಂ ವಚನಮರ್ಥವತ್||
ದೇವತೆಗಳ ಈಶ್ವರ ಇಂದ್ರನು ಹೀಗೆ ಹೇಳುತ್ತಿದ್ದರೂ ಯುಧಿಷ್ಠಿರನು ಪುನಃ ಈ ಬುದ್ಧಿಪೂರ್ವಕ ಮಾತನ್ನಾಡಿದನು:
17003035a ತೈರ್ವಿನಾ ನೋತ್ಸಹೇ ವಸ್ತುಮಿಹ ದೈತ್ಯನಿಬರ್ಹಣ|
17003035c ಗಂತುಮಿಚ್ಚಾಮಿ ತತ್ರಾಹಂ ಯತ್ರ ಮೇ ಭ್ರಾತರೋ ಗತಾಃ||
17003036a ಯತ್ರ ಸಾ ಬೃಹತೀ ಶ್ಯಾಮಾ ಬುದ್ಧಿಸತ್ತ್ವಗುಣಾನ್ವಿತಾ|
17003036c ದ್ರೌಪದೀ ಯೋಷಿತಾಂ ಶ್ರೇಷ್ಠಾ ಯತ್ರ ಚೈವ ಪ್ರಿಯಾ ಮಮ||
“ದೈತ್ಯಸಂಹಾರೀ! ಅವರಿಲ್ಲದೇ ನನಗೆ ಇಲ್ಲಿ ವಾಸಿಸಲು ಉತ್ಸಾಹವಿಲ್ಲ! ನನ್ನ ಸಹೋದರರು ಎಲ್ಲಿಗೆ ಹೋಗಿದ್ದಾರೋ ಮತ್ತು ಶ್ಯಾಮೆ, ಬುದ್ಧಿಸತ್ತ್ವಗುಣಾನ್ವಿತೆ, ಸ್ತ್ರೀಯರಲ್ಲಿ ಶ್ರೇಷ್ಠೆ, ನನ್ನ ಪ್ರಿಯೆ ದ್ರೌಪದಿಯು ಎಲ್ಲಿದ್ದಾಳೋ ಅಲ್ಲಿಗೆ ಹೋಗಲು ಬಯಸುತ್ತೇನೆ.””
ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ಯುಧಿಷ್ಠಿರಸ್ವರ್ಗಾರೋಹೇ ತೃತೀಯೋಽಧ್ಯಾಯಃ ||
ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ಯುಧಿಷ್ಠಿರಸ್ವರ್ಗಾರೋಹ ಎನ್ನುವ ಮೂರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಮಹಾಪ್ರಸ್ಥಾನಿಕ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಮಹಾಪ್ರಸ್ಥಾನಿಕ ಪರ್ವವು|
ಇದೂವರೆಗಿನ ಒಟ್ಟು ಮಹಾಪರ್ವಗಳು – ೧೭/೧೮, ಉಪಪರ್ವಗಳು-೯೪/೧೦೦, ಅಧ್ಯಾಯಗಳು-೧೯೯೦/೧೯೯೫, ಶ್ಲೋಕಗಳು-೭೩೫೯೦/೭೩೭೮೪
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||