ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೨೩
ಕುಂತಿಯ ಮಾತು (೧-೨೧).
15023001 ಕುಂತ್ಯುವಾಚ|
15023001a ಏವಮೇತನ್ಮಹಾಬಾಹೋ ಯಥಾ ವದಸಿ ಪಾಂಡವ|
15023001c ಕೃತಮುದ್ಧರ್ಷಣಂ ಪೂರ್ವಂ ಮಯಾ ವಃ ಸೀದತಾಂ ನೃಪ||
ಕುಂತಿಯು ಹೇಳಿದಳು: “ಪಾಂಡವ! ನೃಪ! ಮಹಾಬಾಹೋ! ನೀನು ಹೇಳಿದುದು ಸರಿಯಾಗಿಯೇ ಇದೆ! ಹಿಂದೆ ನೀವು ಎದೆಗುಂದಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು.
15023002a ದ್ಯೂತಾಪಹೃತರಾಜ್ಯಾನಾಂ ಪತಿತಾನಾಂ ಸುಖಾದಪಿ|
15023002c ಜ್ಞಾತಿಭಿಃ ಪರಿಭೂತಾನಾಂ ಕೃತಮುದ್ಧರ್ಷಣಂ ಮಯಾ||
ದ್ಯೂತದಿಂದ ರಾಜ್ಯ-ಸುಖಗಳನ್ನು ಅಪಹರಿಸಲ್ಪಟ್ಟು ನೀವು ಜ್ಞಾತಿಬಾಂಧವರಿಂದಲೂ ತಿರಸ್ಕೃತರಾಗಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು.
15023003a ಕಥಂ ಪಾಂಡೋರ್ನ ನಶ್ಯೇತ ಸಂತತಿಃ ಪುರುಷರ್ಷಭಾಃ|
15023003c ಯಶಶ್ಚ ವೋ ನ ನಶ್ಯೇತ ಇತಿ ಚೋದ್ಧರ್ಷಣಂ ಕೃತಮ್||
ಪುರುಷರ್ಷಭರೇ! ಪಾಂಡುವಿನ ಸಂತತಿಯು ನಾಶವಾಗದೇ ಇರುವುದು ಮತ್ತು ನಿಮ್ಮ ಯಶಸ್ಸು ಕುಂದದೇ ಇರುವುದು ಹೇಗೆ ಎಂದು ಯೋಚಿಸಿ ನಾವು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023004a ಯೂಯಮಿಂದ್ರಸಮಾಃ ಸರ್ವೇ ದೇವತುಲ್ಯಪರಾಕ್ರಮಾಃ|
15023004c ಮಾ ಪರೇಷಾಂ ಮುಖಪ್ರೇಕ್ಷಾಃ ಸ್ಥೇತ್ಯೇವಂ ತತ್ಕೃತಂ ಮಯಾ||
ನೀವೆಲ್ಲರೂ ಇಂದ್ರನ ಸಮನಾದವರು. ಪರಾಕ್ರಮದಲ್ಲಿ ದೇವತೆಗಳ ಸಮಾನರು. ನೀವು ಜೀವಿಕೆಗಾಗಿ ಇನ್ನೊಬ್ಬರ ಮುಖನೋಡಬಾರದು ಎಂದು ನಾನು ಹಾಗೆ ಮಾಡಿದೆನು.
15023005a ಕಥಂ ಧರ್ಮಭೃತಾಂ ಶ್ರೇಷ್ಠೋ ರಾಜಾ ತ್ವಂ ವಾಸವೋಪಮಃ|
15023005c ಪುನರ್ವನೇ ನ ದುಃಖೀ ಸ್ಯಾ ಇತಿ ಚೋದ್ಧರ್ಷಣಂ ಕೃತಮ್||
ರಾಜಾ! ಧರ್ಮಭೃತರಲ್ಲಿ ಶ್ರೇಷ್ಠ ಮತ್ತು ಇಂದ್ರನ ಸಮನಾಗಿರುವ ನೀನು ಹೇಗೆ ಪುನಃ ವನದಲ್ಲಿ ದುಃಖಿಯಾಗಿರುವೆ ಎಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023006a ನಾಗಾಯುತಸಮಪ್ರಾಣಃ ಖ್ಯಾತವಿಕ್ರಮಪೌರುಷಃ|
15023006c ನಾಯಂ ಭೀಮೋಽತ್ಯಯಂ ಗಚ್ಚೇದಿತಿ ಚೋದ್ಧರ್ಷಣಂ ಕೃತಮ್||
ಸಾವಿರ ಆನೆಗಳ ಬಲವುಳ್ಳ, ವಿಕ್ರಮ-ಪೌರುಷಗಳಲ್ಲಿ ಖ್ಯಾತನಾದ ಈ ಭೀಮನು ನಾಶನಾಗಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023007a ಭೀಮಸೇನಾದವರಜಸ್ತಥಾಯಂ ವಾಸವೋಪಮಃ|
15023007c ವಿಜಯೋ ನಾವಸೀದೇತ ಇತಿ ಚೋದ್ಧರ್ಷಣಂ ಕೃತಮ್||
ಹಾಗೆಯೇ ಭೀಮಸೇನನ ಅನುಜನಾದ, ವಾಸವನಂತಿರುವ ಈ ವಿಜಯ ಅರ್ಜುನನೂ ಎದೆಗುಂದಬಾರದೆಂದು ನಾನು ಪ್ರೋತ್ಸಾಹಿಸಿದೆನು.
15023008a ನಕುಲಃ ಸಹದೇವಶ್ಚ ತಥೇಮೌ ಗುರುವರ್ತಿನೌ|
15023008c ಕ್ಷುಧಾ ಕಥಂ ನ ಸೀದೇತಾಮಿತಿ ಚೋದ್ಧರ್ಷಣಂ ಕೃತಮ್||
ಗುರುಸೇವೆಯನ್ನೇ ಮಾಡಿಕೊಂಡುಬಂದಿರುವ ಈ ನಕುಲ-ಸಹದೇವರೂ ಕೂಡ ಹಸಿವೆಯಿಂದ ಎದೆಗುಂದಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023009a ಇಯಂ ಚ ಬೃಹತೀ ಶ್ಯಾಮಾ ಶ್ರೀಮತ್ಯಾಯತಲೋಚನಾ|
15023009c ವೃಥಾ ಸಭಾತಲೇ ಕ್ಲಿಷ್ಟಾ ಮಾ ಭೂದಿತಿ ಚ ತತ್ಕೃತಮ್||
ಎತ್ತರ ದೇಹವುಳ್ಳ ಈ ಶ್ಯಾಮಲವರ್ಣೆ, ಆಯತಲೋಚನೆ ಶ್ರೀಮತಿ ದ್ರೌಪದಿಯು ಪುನಃ ಸಭಾತಲದಲ್ಲಿ ವೃಥಾ ಕಷ್ಟವನ್ನನುಭವಿಸಬಾರದೆಂದು ನಾನು ಹಾಗೆ ಮಾಡಿದೆನು.
15023010a ಪ್ರೇಕ್ಷಂತ್ಯಾ ಮೇ ತದಾ ಹೀಮಾಂ ವೇಪಂತೀಂ ಕದಲೀಮಿವ|
15023010c ಸ್ತ್ರೀಧರ್ಮಿಣೀಮನಿಂದ್ಯಾಂಗೀಂ ತಥಾ ದ್ಯೂತಪರಾಜಿತಾಮ್||
15023011a ದುಃಶಾಸನೋ ಯದಾ ಮೌಢ್ಯಾದ್ದಾಸೀವತ್ಪರ್ಯಕರ್ಷತ|
15023011c ತದೈವ ವಿದಿತಂ ಮಹ್ಯಂ ಪರಾಭೂತಮಿದಂ ಕುಲಮ್||
ನೀವೆಲ್ಲರೂ ನೋಡುತ್ತಿದ್ದಂತೆಯೇ ಬಾಳೆಯ ಮರದಂತೆ ತರತರನೆ ನಡುಗುತ್ತಿದ್ದ ರಜಸ್ವಲೆಯಾಗಿದ್ದ ಶುಭಲಕ್ಷಣಯುಕ್ತಳಾಗಿದ್ದ, ದ್ಯೂತದಲ್ಲಿ ಪಣವಾಗಿಡಲ್ಪಟ್ಟು ಪರಾಜಿತಳಾಗಿದ್ದ ದ್ರೌಪದಿಯನ್ನು ಯಾವಾಗ ದುಃಶಾಸನನು ಮೌಢ್ಯದಿಂದ ದಾಸಿಯಂತೆ ತುಂಬಿದ ಸಭೆಗೆ ಎಳೆದು ತಂದನೋ – ಆಗಲೇ ನನಗೆ ಈ ವಂಶವು ವಿನಾಶವಾಗುವುದೆಂದು ತಿಳಿದಿತ್ತು.
15023012a ವಿಷಣ್ಣಾಃ ಕುರವಶ್ಚೈವ ತದಾ ಮೇ ಶ್ವಶುರಾದಯಃ|
15023012c ಯದೈಷಾ ನಾಥಮಿಚ್ಚಂತೀ ವ್ಯಲಪತ್ಕುರರೀ ಯಥಾ||
ನನ್ನ ಮಾವನೇ ಮೊದಲಾದ ಕುರುಗಳು ಅಲ್ಲಿ ಉಪಸ್ಥಿತರಿದ್ದರು. ಆದರೆ ಅವರ್ಯಾರೂ ಅವಳ ರಕ್ಷಣೆಗೆ ಬರದಿದ್ದಾಗ ಅವಳು ಹೆಣ್ಣು ಕಡಲಹದ್ದಿನಂತೆ ಗೋಳಾಡುತ್ತಿದ್ದಳು.
15023013a ಕೇಶಪಕ್ಷೇ ಪರಾಮೃಷ್ಟಾ ಪಾಪೇನ ಹತಬುದ್ಧಿನಾ|
15023013c ಯದಾ ದುಃಶಾಸನೇನೈಷಾ ತದಾ ಮುಹ್ಯಾಮ್ಯಹಂ ನೃಪ||
ನೃಪ! ಬುದ್ಧಿಗೆಟ್ಟಿದ್ದ ಪಾಪಿಷ್ಠ ದುಃಶಾಸನನು ಯಾವಾಗ ಅವಳ ತಲೆಗೂದಲನ್ನು ಹಿಡಿದು ಎಳೆದು ತಂದನೋ ಆಗ ನಾನು ದುಃಖದಿಂದ ಮೂರ್ಛಿತಳಾಗಿದ್ದೆ!
15023014a ಯುಷ್ಮತ್ತೇಜೋವಿವೃದ್ಧ್ಯರ್ಥಂ ಮಯಾ ಹ್ಯುದ್ಧರ್ಷಣಂ ಕೃತಮ್|
15023014c ತದಾನೀಂ ವಿದುರಾವಾಕ್ಯೈರಿತಿ ತದ್ವಿತ್ತ ಪುತ್ರಕಾಃ||
ನಿಮ್ಮ ತೇಜಸ್ಸನ್ನು ವೃದ್ಧಿಗೊಳಿಸಲು ನಾನು ವಿದುಲೆಯ ವಾಕ್ಯಗಳ ಮೂಲಕ ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು. ಮಕ್ಕಳೇ! ಇದನ್ನು ಅರ್ಥಮಾಡಿಕೊಳ್ಳಿ!
15023015a ಕಥಂ ನ ರಾಜವಂಶೋಽಯಂ ನಶ್ಯೇತ್ಪ್ರಾಪ್ಯ ಸುತಾನ್ಮಮ|
15023015c ಪಾಂಡೋರಿತಿ ಮಯಾ ಪುತ್ರ ತಸ್ಮಾದುದ್ಧರ್ಷಣಂ ಕೃತಮ್||
ನಿಮ್ಮಂಥಹ ಮಕ್ಕಳನ್ನು ಪಡೆದೂ ಪಾಂಡುವಿನ ಈ ರಾಜವಂಶವು ನಾಶವಾಗಬಾರದೆಂದು ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು.
15023016a ನ ತಸ್ಯ ಪುತ್ರಃ ಪೌತ್ರೌ ವಾ ಕುತ ಏವ ಸ ಪಾರ್ಥಿವ|
15023016c ಲಭತೇ ಸುಕೃತಾಽಲ್ಲೋಕಾನ್ಯಸ್ಮಾದ್ವಂಶಃ ಪ್ರಣಶ್ಯತಿ||
ಪಾರ್ಥಿವ! ಯಾರಿಂದ ವಂಶವು ನಾಶವಾಗುವುದೋ ಅವನ ಪುತ್ರ-ಪೌತ್ರರು ಯಾರೂ ಪುಣ್ಯಲೋಕಗಳನ್ನು ಹೊಂದುವುದಿಲ್ಲ.
15023017a ಭುಕ್ತಂ ರಾಜ್ಯಫಲಂ ಪುತ್ರಾ ಭರ್ತುರ್ಮೇ ವಿಪುಲಂ ಪುರಾ|
15023017c ಮಹಾದಾನಾನಿ ದತ್ತಾನಿ ಪೀತಃ ಸೋಮೋ ಯಥಾವಿಧಿ||
ಮಕ್ಕಳೇ! ಹಿಂದೆ ನಾನು ನನ್ನ ಪತಿಯ ರಾಜ್ಯಫಲವನ್ನು ವಿಪುಲವಾಗಿ ಭೋಗಿಸಿದ್ದೇನೆ. ಯಥಾವಿಧಿಯಾಗಿ ಮಹಾದಾನಗಳನ್ನು ನೀಡಿದ್ದೇನೆ ಮತ್ತು ಸೋಮವನ್ನೂ ಕುಡಿದಿದ್ದೇನೆ.
15023018a ಸಾಹಂ ನಾತ್ಮಫಲಾರ್ಥಂ ವೈ ವಾಸುದೇವಮಚೂಚುದಮ್|
15023018c ವಿದುರಾಯಾಃ ಪ್ರಲಾಪೈಸ್ತೈಃ ಪ್ಲಾವನಾರ್ಥಂ ತು ತತ್ಕೃತಮ್||
ನಾನು ನನ್ನ ಸ್ವಾರ್ಥಫಲಕ್ಕಾಗಿ ವಾಸುದೇವನ ಮೂಲಕ ವಿದುಲೆಯ ಆ ಪ್ರಲಾಪದ ಮಾತುಗಳನ್ನು ಹೇಳಿ ಕಳುಹಿಸಿರಲಿಲ್ಲ. ನಿಮ್ಮನ್ನು ಆ ಕಷ್ಟದಿಂದ ಪಾರುಮಾಡುವುದಕ್ಕಾಗಿಯೇ ಹಾಗೆ ಮಾಡಿದೆನು.
15023019a ನಾಹಂ ರಾಜ್ಯಫಲಂ ಪುತ್ರ ಕಾಮಯೇ ಪುತ್ರನಿರ್ಜಿತಮ್|
15023019c ಪತಿಲೋಕಾನಹಂ ಪುಣ್ಯಾನ್ಕಾಮಯೇ ತಪಸಾ ವಿಭೋ||
ಮಗನೇ! ನಾನು ಮಕ್ಕಳು ಗೆದ್ದ ರಾಜ್ಯಫಲವನ್ನು ಬಯಸುವುದಿಲ್ಲ. ವಿಭೋ! ತಪಸ್ಸಿನ ಮೂಲಕ ನಾನು ನನ್ನ ಪತಿಯು ಸೇರಿದ ಪುಣ್ಯಲೋಕಗಳನ್ನು ಬಯಸುತ್ತೇನೆ.
15023020a ಶ್ವಶ್ರೂಶ್ವಶುರಯೋಃ ಕೃತ್ವಾ ಶುಶ್ರೂಷಾಂ ವನವಾಸಿನೋಃ|
15023020c ತಪಸಾ ಶೋಷಯಿಷ್ಯಾಮಿ ಯುಧಿಷ್ಠಿರ ಕಲೇವರಮ್||
ಯುಧಿಷ್ಠಿರ! ವನವಾಸೀ ಅತ್ತೆ-ಮಾವಂದಿರ ಶುಶ್ರೂಷೆಯನ್ನು ಮಾಡುತ್ತಾ ತಪಸ್ಸಿನಿಂದ ನನ್ನ ಈ ಶರೀರವನ್ನು ಶೋಷಿಸುತ್ತೇನೆ.
15023021a ನಿವರ್ತಸ್ವ ಕುರುಶ್ರೇಷ್ಠ ಭೀಮಸೇನಾದಿಭಿಃ ಸಹ|
15023021c ಧರ್ಮೇ ತೇ ಧೀಯತಾಂ ಬುದ್ಧಿರ್ಮನಸ್ತೇ ಮಹದಸ್ತು ಚ||
ಕುರುಶ್ರೇಷ್ಠ! ಭೀಮಸೇನಾದಿಗಳೊಂದಿಗೆ ಹಿಂದಿರುಗು! ನಿನ್ನ ಬುದ್ಧಿಯು ಯಾವಾಗಲೂ ಧರ್ಮದಲ್ಲಿಯೇ ಸ್ಥಿರವಾಗಿರಲಿ ಮತ್ತು ನಿನ್ನ ಮನಸ್ಸೂ ವಿಶಾಲವಾಗಿರಲಿ!””
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಕುಂತೀವಾಕ್ಯೇ ತ್ರಯಾವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಕುಂತೀವಾಕ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.