Ashramavasika Parva: Chapter 18

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೮

ಧೃತರಾಷ್ಟ್ರನಿಗೆ ಧನವನ್ನು ತನ್ನ ಕೋಶದಿಂದ ಕೊಡುತ್ತೇನೆಂದು ಅರ್ಜುನನು ಹೇಳಿದುದು (೧-೫). ಯುಧಿಷ್ಠಿರನು ಭೀಮನ ಮೇಲೆ ಧೃತರಾಷ್ಟ್ರನು ಸಿಟ್ಟಾಗಬಾರದೆಂದೂ, ಅರ್ಜುನನ ಮತ್ತು ತನ್ನ ಕೋಶಗಳಿಂದ ಬೇಗಾದಷ್ಟು ಧನವನ್ನು ಅವನು ಪಡೆದುಕೊಳ್ಳಬಹುದೆಂದೂ ವಿದುರನಿಗೆ ಹೇಳಿ ಕಳುಹಿಸಿದುದು (೬-೧೨).

15018001 ಅರ್ಜುನ ಉವಾಚ|

15018001a ಭೀಮ ಜ್ಯೇಷ್ಠೋ ಗುರುರ್ಮೇ ತ್ವಂ ನಾತೋಽನ್ಯದ್ವಕ್ತುಮುತ್ಸಹೇ|

15018001c ಧೃತರಾಷ್ಟ್ರೋ ಹಿ ರಾಜರ್ಷಿಃ ಸರ್ವಥಾ ಮಾನಮರ್ಹತಿ||

ಅರ್ಜುನನು ಹೇಳಿದನು: “ಭೀಮ! ನನಗಿಂತಲೂ ಹಿರಿಯವನಾಗಿರುವ ನೀನು ನನಗೆ ಗುರುವು. ನಿನ್ನ ಮುಂದೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ರಾಜರ್ಷಿ ಧೃತರಾಷ್ಟ್ರನು ಸರ್ವಥಾ ಗೌರವಕ್ಕೆ ಯೋಗ್ಯನಾಗಿದ್ದಾನೆ!

15018002a ನ ಸ್ಮರಂತ್ಯಪರಾದ್ಧಾನಿ ಸ್ಮರಂತಿ ಸುಕೃತಾನಿ ಚ|

15018002c ಅಸಂಭಿನ್ನಾರ್ಥಮರ್ಯಾದಾಃ ಸಾಧವಃ ಪುರುಷೋತ್ತಮಾಃ||

ಆರ್ಯಮರ್ಯಾದೆಯನ್ನು ಮೀರದಿರುವ ಪುರುಷಶ್ರೇಷ್ಠ ಸತ್ಪುರುಷರು ಇತರರ ಅಪರಾಧಗಳನ್ನು ಎಂದೂ ಸ್ಮರಿಸುವುದಿಲ್ಲ. ಉತ್ತಮ ಕರ್ಮಗಳನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ.

15018003a ಇದಂ ಮದ್ವಚನಾತ್ಕ್ಷತ್ತಃ ಕೌರವಂ ಬ್ರೂಹಿ ಪಾರ್ಥಿವಮ್|

15018003c ಯಾವದಿಚ್ಚತಿ ಪುತ್ರಾಣಾಂ ದಾತುಂ ತಾವದ್ದದಾಮ್ಯಹಮ್||

ಕ್ಷತ್ತ! ಕೌರವ ಪಾರ್ಥಿವನಲ್ಲಿ ನನ್ನ ಈ ಮಾತನ್ನು ಹೇಳು! ಅವನು ಪುತ್ರರ ಶ್ರಾದ್ಧಕ್ಕಾಗಿ ಎಷ್ಟು ಧನವನ್ನು ಅಪೇಕ್ಷಿಸುವನೋ ಅಷ್ಟನ್ನೂ ನಾನು ಕೊಡುತ್ತೇನೆ.

15018004a ಭೀಷ್ಮಾದೀನಾಂ ಚ ಸರ್ವೇಷಾಂ ಸುಹೃದಾಮುಪಕಾರಿಣಾಮ್|

15018004c ಮಮ ಕೋಶಾದಿತಿ ವಿಭೋ ಮಾ ಭೂದ್ಭೀಮಃ ಸುದುರ್ಮನಾಃ||

ವಿಭೋ! ಭೀಷ್ಮಾದಿ ಸರ್ವ ಸುಹೃದಯರ ಮತ್ತು ಉಪಕಾರಿಗಳ ಶ್ರಾದ್ಧಕ್ಕಾಗಿ ನನ್ನ ಕೋಶದಿಂದ ಕೊಡುತ್ತೇನೆ. ಇದಕ್ಕಾಗಿ ಭೀಮನ ಮನಸ್ಸನ್ನು ಕೆಡಿಸುವುದು ಬೇಡ!””

15018005 ವೈಶಂಪಾಯನ ಉವಾಚ|

15018005a ಇತ್ಯುಕ್ತೇ ಧರ್ಮರಾಜಸ್ತಮರ್ಜುನಂ ಪ್ರತ್ಯಪೂಜಯತ್|

15018005c ಭೀಮಸೇನಃ ಕಟಾಕ್ಷೇಣ ವೀಕ್ಷಾಂ ಚಕ್ರೇ ಧನಂಜಯಮ್||

ವೈಶಂಪಾಯನನು ಹೇಳಿದನು: “ ಹೀಗೆ ಹೇಳಲು ಧರ್ಮರಾಜನು ಅರ್ಜುನನನ್ನು ಪ್ರಶಂಸಿಸಿದನು. ಭೀಮಸೇನನು ಕಡೆಗಣ್ಣಿನಿಂದ ಧನಂಜಯನನ್ನು ನೋಡಿದನು.

15018006a ತತಃ ಸ ವಿದುರಂ ಧೀಮಾನ್ವಾಕ್ಯಮಾಹ ಯುಧಿಷ್ಠಿರಃ|

15018006c ನ ಭೀಮಸೇನೇ ಕೋಪಂ ಸ ನೃಪತಿಃ ಕರ್ತುಮರ್ಹತಿ||

ಅನಂತರ ಧೀಮಾನ್ ಯುಧಿಷ್ಠಿರನು ವಿದುರನಿಗೆ ಇಂತೆಂದನು: “ಆ ನೃಪತಿಯು ಭೀಮಸೇನನ ಮೇಲೆ ಕೋಪಿಸಿಕೊಳ್ಳಬಾರದು.

15018007a ಪರಿಕ್ಲಿಷ್ಟೋ ಹಿ ಭೀಮೋಽಯಂ ಹಿಮವೃಷ್ಟ್ಯಾತಪಾದಿಭಿಃ|

15018007c ದುಃಖೈರ್ಬಹುವಿಧೈರ್ಧೀಮಾನರಣ್ಯೇ ವಿದಿತಂ ತವ||

ಏಕೆಂದರೆ ಭೀಮಸೇನನು ಅರಣ್ಯದಲ್ಲಿ ಮಂಜು, ಮಳೆ, ಬಿಸಿಲು ಮೊದಲಾದವುಗಳಿಂದ ಬಹುವಿಧದ ಕಷ್ಟ-ದುಃಖಗಳನ್ನು ಅನುಭವಿಸಿದ್ದಾನೆ. ಧೀಮಂತನಾದ ನಿನಗೆ ಇದು ತಿಳಿದೇ ಇದೆ.

15018008a ಕಿಂ ತು ಮದ್ವಚನಾದ್ಬ್ರೂಹಿ ರಾಜಾನಂ ಭರತರ್ಷಭಮ್|

15018008c ಯದ್ಯದಿಚ್ಚಸಿ ಯಾವಚ್ಚ ಗೃಹ್ಯತಾಂ ಮದ್ಗೃಹಾದಿತಿ||

ಆದರೆ ನೀನು ರಾಜ ಭರತರ್ಷಭನಿಗೆ ನನ್ನ ಈ ಮಾತನ್ನು ಹೇಳು. ಅವನಿಗೆ ಏನು ಬೇಕೋ ಅವೆಲ್ಲವನ್ನೂ ನನ್ನ ಅರಮನೆಯ ಬೊಕ್ಕಸದಿಂದ ತೆಗೆದುಕೊಳ್ಳಲಿ!

15018009a ಯನ್ಮಾತ್ಸರ್ಯಮಯಂ ಭೀಮಃ ಕರೋತಿ ಭೃಶದುಃಖಿತಃ|

15018009c ನ ತನ್ಮನಸಿ ಕರ್ತವ್ಯಮಿತಿ ವಾಚ್ಯಃ ಸ ಪಾರ್ಥಿವಃ||

ತುಂಬಾ ದುಃಖಿತನಾಗಿ ಮಾತ್ಸರ್ಯಭಾವವನ್ನು ತೋರಿಸುತ್ತಿರುವ ಈ ಭೀಮನ ಮಾತುಗಳನ್ನು ಆ ರಾಜನು ಮನಸ್ಸಿಗೆ ತೆಗೆದುಕೊಳ್ಳಬಾರದು. ಇದನ್ನು ನೀನು ರಾಜನಿಗೆ ಹೇಳಬೇಕು.

15018010a ಯನ್ಮಮಾಸ್ತಿ ಧನಂ ಕಿಂ ಚಿದರ್ಜುನಸ್ಯ ಚ ವೇಶ್ಮನಿ|

15018010c ತಸ್ಯ ಸ್ವಾಮೀ ಮಹಾರಾಜ ಇತಿ ವಾಚ್ಯಃ ಸ ಪಾರ್ಥಿವಃ||

ನನ್ನ ಮತ್ತು ಅರ್ಜುನನ ಅರಮನೆಗಳಲ್ಲಿರುವ ಧನವೆಲ್ಲವಕ್ಕೂ ಆ ಪಾರ್ಥಿವ ಮಹಾರಾಜನೇ ಸ್ವಾಮಿ ಎಂದು ಹೇಳಬೇಕು.

15018011a ದದಾತು ರಾಜಾ ವಿಪ್ರೇಭ್ಯೋ ಯಥೇಷ್ಟಂ ಕ್ರಿಯತಾಂ ವ್ಯಯಃ|

15018011c ಪುತ್ರಾಣಾಂ ಸುಹೃದಾಂ ಚೈವ ಗಚ್ಚತ್ವಾನೃಣ್ಯಮದ್ಯ ಸಃ||

ರಾಜನು ವಿಪ್ರರಿಗಾಗಿ ಇಷ್ಟಬಂದಷ್ಟು ಖರ್ಚು ಮಾಡಲಿ. ದಾನನೀಡಲಿ. ಇಂದು ಅವನು ಮಕ್ಕಳ ಮತ್ತು ಸುಹೃದಯರ ಋಣದಿಂದ ಮುಕ್ತನಾಗಲಿ!

15018012a ಇದಂ ಚಾಪಿ ಶರೀರಂ ಮೇ ತವಾಯತ್ತಂ ಜನಾಧಿಪ|

15018012c ಧನಾನಿ ಚೇತಿ ವಿದ್ಧಿ ತ್ವಂ ಕ್ಷತ್ತರ್ನಾಸ್ತ್ಯತ್ರ ಸಂಶಯಃ||

ಜನಾಧಿಪ! ನನ್ನ ಈ ಶರೀರ ಮತ್ತು ಧನವು ನಿನಗೋಸ್ಕರವಾಗಿವೆ ಎನ್ನುವುದರಲ್ಲಿ ಸಂಶಯವೇ ಬೇಡ! ಕ್ಷತ್ತ! ಇದನ್ನು ರಾಜನಿಗೆ ತಿಳಿಸು!””

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಾನುಮೋದನೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಾನುಮೋದನ ಎನ್ನುವ ಹದಿನೆಂಟನೇ ಅಧ್ಯಾಯವು.

Related image

Comments are closed.