Ashramavasika Parva: Chapter 17

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೭

ಧೃತರಾಷ್ಟ್ರನು ವಿದುರನ ಮೂಲಕ ಯುಧಿಷ್ಠಿರನಲ್ಲಿ ಶ್ರಾದ್ಧಕ್ರಿಯೆಗಳಿಗೆ ಧನವನ್ನು ಯಾಚಿಸಿದುದು (೧-೫). ದುರ್ಯೋಧನನ ಅಪರಾಧಗಳನ್ನು ಸ್ಮರಿಸಿಕೊಳ್ಳುತ್ತ ದೃಢಕ್ರೋಧ ಭೀಮಸೇನನು ಅದಕ್ಕೆ ಒಪ್ಪಿಕೊಳ್ಳದೇ ಇರನು ಅರ್ಜುನನು ಆಡಿದ ಮಾತು (೬-೧೪). ಭೀಮಸೇನನ ಮಾತು (೧೫-೨೩).

15017001 ವೈಶಂಪಾಯನ ಉವಾಚ|

15017001a ವ್ಯುಷಿತಾಯಾಂ ರಜನ್ಯಾಂ ತು ಧೃತರಾಷ್ಟ್ರೋಽಂಬಿಕಾಸುತಃ|

15017001c ವಿದುರಂ ಪ್ರೇಷಯಾಮಾಸ ಯುಧಿಷ್ಠಿರನಿವೇಶನಮ್||

ವೈಶಂಪಾಯನನು ಹೇಳಿದನು: “ರಾತ್ರಿಯು ಕಳೆದು ಬೆಳಗಾದೊಡನೆಯೇ ಅಂಬಿಕಾಸುತ ಧೃತರಾಷ್ಟ್ರನು ವಿದುರನನ್ನು ಯುಧಿಷ್ಠಿರನ ಅರಮನೆಗೆ ಕಳುಹಿಸಿದನು.

15017002a ಸ ಗತ್ವಾ ರಾಜವಚನಾದುವಾಚಾಚ್ಯುತಮೀಶ್ವರಮ್|

15017002c ಯುಧಿಷ್ಠಿರಂ ಮಹಾತೇಜಾಃ ಸರ್ವಬುದ್ಧಿಮತಾಂ ವರಃ||

ಸರ್ವಬುದ್ಧಿಮತರಲ್ಲಿ ಶ್ರೇಷ್ಠ ಮಹಾತೇಜಸ್ವಿ ವಿದುರನು ಅಚ್ಯುತ ಈಶ್ವರ ಯುಧಿಷ್ಠಿರನಲ್ಲಿಗೆ ಹೋಗಿ ಅವನಿಗೆ ರಾಜವಚನವನ್ನು ತಿಳಿಸಿದನು.

15017003a ಧೃತರಾಷ್ಟ್ರೋ ಮಹಾರಾಜ ವನವಾಸಾಯ ದೀಕ್ಷಿತಃ|

15017003c ಗಮಿಷ್ಯತಿ ವನಂ ರಾಜನ್ಕಾರ್ತ್ತಿಕೀಮಾಗತಾಮಿಮಾಮ್||

“ಮಹಾರಾಜ! ರಾಜನ್! ವನವಾಸದ ದೀಕ್ಷೆಯನ್ನು ತೊಟ್ಟಿರುವ ಧೃತರಾಷ್ಟ್ರನು ಬರುವ ಕಾರ್ತೀಕ ಹುಣ್ಣಿಮೆಯಂದು ವನಕ್ಕೆ ಹೊರಡಲಿದ್ದಾನೆ.

15017004a ಸ ತ್ವಾ ಕುರುಕುಲಶ್ರೇಷ್ಠ ಕಿಂ ಚಿದರ್ಥಮಭೀಪ್ಸತಿ|

15017004c ಶ್ರಾದ್ಧಮಿಚ್ಚತಿ ದಾತುಂ ಸ ಗಾಂಗೇಯಸ್ಯ ಮಹಾತ್ಮನಃ||

15017005a ದ್ರೋಣಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಧೀಮತಃ|

15017005c ಪುತ್ರಾಣಾಂ ಚೈವ ಸರ್ವೇಷಾಂ ಯೇ ಚಾಸ್ಯ ಸುಹೃದೋ ಹತಾಃ|

15017005e ಯದಿ ಚಾಭ್ಯನುಜಾನೀಷೇ ಸೈಂಧವಾಪಸದಸ್ಯ ಚ||

ಕುರುಕುಲಶ್ರೇಷ್ಠ! ಅವನು ನಿನ್ನಿಂದ ಸ್ವಲ್ಪ ಧನವನ್ನು ಅಪೇಕ್ಷಿಸುತ್ತಿದ್ದಾನೆ. ಮಹಾತ್ಮ ಗಾಂಗೇಯ, ದ್ರೋಣ, ಸೋಮದತ್ತ, ಧೀಮತ ಬಾಹ್ಲೀಕ, ಮತ್ತು ಹತರಾದ ತನ್ನ ಎಲ್ಲ ಪುತ್ರರು ಮತ್ತು ಸುಹೃದಯರಿಗಾಗಿ ಮತ್ತು ನೀನು ಸಮ್ಮತಿಸುವೆಯಾದರೆ ನೀಚ ಸೈಂಧವನಿಗೂ ಅವನು ಶ್ರಾದ್ಧಮಾಡಲು ಇಚ್ಛಿಸಿದ್ದಾನೆ.”

15017006a ಏತಚ್ಛೃತ್ವಾ ತು ವಚನಂ ವಿದುರಸ್ಯ ಯುಧಿಷ್ಠಿರಃ|

15017006c ಹೃಷ್ಟಃ ಸಂಪೂಜಯಾಮಾಸ ಗುಡಾಕೇಶಶ್ಚ ಪಾಂಡವಃ||

ವಿದುರನ ಈ ಮಾತನ್ನು ಕೇಳಿ ಯುಧಿಷ್ಠಿರ ಮತ್ತು ಪಾಂಡವ ಗುಡಾಕೇಶರು ಹೃಷ್ಟರಾಗಿ ಗೌರವಿಸಿದರು.

15017007a ನ ತು ಭೀಮೋ ದೃಢಕ್ರೋಧಸ್ತದ್ವಚೋ ಜಗೃಹೇ ತದಾ|

15017007c ವಿದುರಸ್ಯ ಮಹಾತೇಜಾ ದುರ್ಯೋಧನಕೃತಂ ಸ್ಮರನ್||

ಆದರೆ ದೃಢಕ್ರೋಧನಾದ ಮಹಾತೇಜಸ್ವೀ ಭೀಮನು ಮಾತ್ರ ದುರ್ಯೋಧನನ ಅಪರಾಧಗಳನ್ನು ಸ್ಮರಿಸಿಕೊಳ್ಳುತ್ತಾ ವಿದುರನ ಆ ಮಾತುಗಳನ್ನು ಸ್ವೀಕರಿಸಲಿಲ್ಲ.

15017008a ಅಭಿಪ್ರಾಯಂ ವಿದಿತ್ವಾ ತು ಭೀಮಸೇನಸ್ಯ ಫಲ್ಗುನಃ|

15017008c ಕಿರೀಟೀ ಕಿಂ ಚಿದಾನಮ್ಯ ಭೀಮಂ ವಚನಮಬ್ರವೀತ್||

ಭೀಮಸೇನನ ಅಭಿಪ್ರಾಯವನ್ನು ತಿಳಿದ ಫಲ್ಗುನ ಕಿರೀಟಿಯು ಭೀಮನಿಗೆ ನಮಸ್ಕರಿಸಿ ಈ ಮಾತನ್ನಾಡಿದನು:

15017009a ಭೀಮ ರಾಜಾ ಪಿತಾ ವೃದ್ಧೋ ವನವಾಸಾಯ ದೀಕ್ಷಿತಃ|

15017009c ದಾತುಮಿಚ್ಚತಿ ಸರ್ವೇಷಾಂ ಸುಹೃದಾಮೌರ್ಧ್ವದೇಹಿಕಮ್||

“ಭೀಮ! ವೃದ್ಧ ಪಿತ ರಾಜನು ವನವಾಸದ ದೀಕ್ಷೆಯನ್ನು ತೊಟ್ಟಿದ್ದಾನೆ. ಸರ್ವ ಸುಹೃದಯರಿಗೆ ಶ್ರಾದ್ಧಸಂಬಂಧವಾಗಿ ದಾನಮಾಡಲು ಬಯಸಿದ್ದಾನೆ.

15017010a ಭವತಾ ನಿರ್ಜಿತಂ ವಿತ್ತಂ ದಾತುಮಿಚ್ಚತಿ ಕೌರವಃ|

15017010c ಭೀಷ್ಮಾದೀನಾಂ ಮಹಾಬಾಹೋ ತದನುಜ್ಞಾತುಮರ್ಹಸಿ||

ಮಹಾಬಾಹೋ! ನೀನು ಗೆದ್ದಿರುವ ವಿತ್ತವನ್ನು ಕೌರವ ಧೃತರಾಷ್ಟ್ರನು ಭೀಷ್ಮಾದಿಗಳ ಪರವಾಗಿ ದಾನಮಾಡಲು ಬಯಸಿದ್ದಾನೆ. ಅದಕ್ಕೆ ನೀನು ಅನುಮತಿಯನ್ನು ನೀಡಬೇಕು.

15017011a ದಿಷ್ಟ್ಯಾ ತ್ವದ್ಯ ಮಹಾಬಾಹೋ ಧೃತರಾಷ್ಟ್ರಃ ಪ್ರಯಾಚತಿ|

15017011c ಯಾಚಿತೋ ಯಃ ಪುರಾಸ್ಮಾಭಿಃ ಪಶ್ಯ ಕಾಲಸ್ಯ ಪರ್ಯಯಮ್||

ಮಹಾಬಾಹೋ! ಹಿಂದೆ ನಾವು ಯಾವ ಧೃತರಾಷ್ಟ್ರನನ್ನು ಯಾಚಿಸಿದ್ದೆವೋ ಅವನೇ ಇಂದು ಸೌಭಾಗ್ಯವಶಾತ್ ನಮ್ಮನ್ನು ಯಾಚಿಸುತ್ತಿದ್ದಾನೆ! ಕಾಲದ ವೈಪರಿತ್ಯವನ್ನು ನೋಡು!

15017012a ಯೋಽಸೌ ಪೃಥಿವ್ಯಾಃ ಕೃತ್ಸ್ನಾಯಾ ಭರ್ತಾ ಭೂತ್ವಾ ನರಾಧಿಪಃ|

15017012c ಪರೈರ್ವಿನಿಹತಾಪತ್ಯೋ ವನಂ ಗಂತುಮಭೀಪ್ಸತಿ||

ಇಡೀ ಭೂಮಿಯ ಒಡೆಯನಾಗಿದ್ದ ಆ ನರಾಧಿಪನು ಇಂದು ಶತ್ರುಗಳಿಂದ ತನ್ನವರೆಲ್ಲರನ್ನೂ ಕಳೆದುಕೊಂಡು ಅನಾಥನಾಗಿ ಅರಣ್ಯಕ್ಕೆ ಹೋಗಲು ಬಯಸಿದ್ದಾನೆ.

15017013a ಮಾ ತೇಽನ್ಯತ್ಪುರುಷವ್ಯಾಘ್ರ ದಾನಾದ್ಭವತು ದರ್ಶನಮ್|

15017013c ಅಯಶಸ್ಯಮತೋಽನ್ಯತ್ ಸ್ಯಾದಧರ್ಮ್ಯಂ ಚ ಮಹಾಭುಜ||

ಪುರುಷವ್ಯಾಘ್ರ! ಮಹಾಭುಜ! ದಾನಮಾಡುತ್ತಿದ್ದೇನೆ ಎನ್ನುವುದು ಮಾತ್ರ ನಿನಗೆ ಕಾಣಲಿ. ಅನ್ಯಥಾ ನಾವು ಅಪಯಶಸ್ಸನ್ನು ಗಳಿಸುತ್ತೇವೆ ಮತ್ತು ಅದೊಂದು ಅಧರ್ಮವೂ ಎನಿಸಿಕೊಳ್ಳುತ್ತದೆ.

15017014a ರಾಜಾನಮುಪತಿಷ್ಠಸ್ವ ಜ್ಯೇಷ್ಠಂ ಭ್ರಾತರಮೀಶ್ವರಮ್|

15017014c ಅರ್ಹಸ್ತ್ವಮಸಿ ದಾತುಂ ವೈ ನಾದಾತುಂ ಭರತರ್ಷಭ|

15017014e ಏವಂ ಬ್ರುವಾಣಂ ಕೌಂತೇಯಂ ಧರ್ಮರಾಜೋಽಭ್ಯಪೂಜಯತ್||

ನಮ್ಮ ಹಿರಿಯಣ್ಣ ಈ ಈಶ್ವರ ರಾಜನಿಂದ ನೀನು ಕಲಿತುಕೋ! ದಾನಮಾಡುವುದು ನಿನಗೆ ಯೋಗ್ಯವಾಗಿದೆ. ಕೊಡದೇ ಇರುವುದಲ್ಲ!” ಹೀಗೆ ಹೇಳಿದ ಕೌಂತೇಯನನ್ನು ಧರ್ಮರಾಜನು ಪ್ರಶಂಸಿಸಿದನು.

15017015a ಭೀಮಸೇನಸ್ತು ಸಕ್ರೋಧಃ ಪ್ರೋವಾಚೇದಂ ವಚಸ್ತದಾ|

15017015c ವಯಂ ಭೀಷ್ಮಸ್ಯ ಕುರ್ಮೇಹ ಪ್ರೇತಕಾರ್ಯಾಣಿ ಫಲ್ಗುನ||

15017016a ಸೋಮದತ್ತಸ್ಯ ನೃಪತೇರ್ಭೂರಿಶ್ರವಸ ಏವ ಚ|

15017016c ಬಾಹ್ಲೀಕಸ್ಯ ಚ ರಾಜರ್ಷೇರ್ದ್ರೋಣಸ್ಯ ಚ ಮಹಾತ್ಮನಃ||

15017017a ಅನ್ಯೇಷಾಂ ಚೈವ ಸುಹೃದಾಂ ಕುಂತೀ ಕರ್ಣಾಯ ದಾಸ್ಯತಿ|

ಭೀಮಸೇನನಾದರೋ ಕ್ರೋಧದಿಂದ ಈ ಮಾತುಗಳನ್ನಾಡಿದನು: “ಫಲ್ಗುನ! ಭೀಷ್ಮ, ಸೋಮದತ್ತ, ನೃಪತಿ ಭೂರಿಶ್ರವ, ರಾಜರ್ಷಿ ಬಾಹ್ಲೀಕ, ಮಹಾತ್ಮ ದ್ರೋಣ ಮತ್ತು ಇತರ ಸುಹೃದಯರ ಪ್ರೇತಕಾರ್ಯಗಳನ್ನು ನಾವೇ ಮಾಡೋಣ! ಕುಂತಿಯು ಕರ್ಣನ ಸಲುವಾಗಿ ಪಿಂಡದಾನ ಮಾಡುತ್ತಾಳೆ.

15017017c ಶ್ರಾದ್ಧಾನಿ ಪುರುಷವ್ಯಾಘ್ರ ಮಾದಾತ್ಕೌರವಕೋ ನೃಪಃ||

15017018a ಇತಿ ಮೇ ವರ್ತತೇ ಬುದ್ಧಿರ್ಮಾ ವೋ ನಂದಂತು ಶತ್ರವಃ|

15017018c ಕಷ್ಟಾತ್ಕಷ್ಟತರಂ ಯಾಂತು ಸರ್ವೇ ದುರ್ಯೋಧನಾದಯಃ|

15017018e ಯೈರಿಯಂ ಪೃಥಿವೀ ಸರ್ವಾ ಘಾತಿತಾ ಕುಲಪಾಂಸನೈಃ||

ಪುರುಷವ್ಯಾಘ್ರ! ಇವರಿಗೆ ಕೌರವ ನೃಪನು ಶ್ರಾದ್ಧಗಳನ್ನು ಮಾಡದಿರಲಿ! ನಮ್ಮ ಶತ್ರುಗಳು ಸುಖವನ್ನು ಅನುಭವಿಸಬಾರದೆಂದು ನನ್ನ ಬುದ್ಧಿಯು ಹೇಳುತ್ತಿದೆ. ಭೂಮಿಯಲ್ಲಿರುವ ಸರ್ವವನ್ನೂ ನಾಶಗೊಳಿಸಿದ ಕುಲಘಾತಕ ದುರ್ಯೋಧನಾದಿ ಎಲ್ಲ ಶತ್ರುಗಳೂ ಕಷ್ಟಕ್ಕಿಂತಲೂ ಕಷ್ಟದ ನರಕಗಳನ್ನು ಪಡೆಯಲಿ!

15017019a ಕುತಸ್ತ್ವಮದ್ಯ ವಿಸ್ಮೃತ್ಯ ವೈರಂ ದ್ವಾದಶವಾರ್ಷಿಕಮ್|

15017019c ಅಜ್ಞಾತವಾಸಗಮನಂ ದ್ರೌಪದೀಶೋಕವರ್ಧನಮ್|

15017019e ಕ್ವ ತದಾ ಧೃತರಾಷ್ಟ್ರಸ್ಯ ಸ್ನೇಹೋಽಸ್ಮಾಸ್ವಭವತ್ತದಾ||

ದ್ರೌಪದಿಯ ಶೋಕವನ್ನು ಹೆಚ್ಚಿಸಿದ ಆ ಹನ್ನೆರಡು ವರ್ಷಗಳ ವನವಾಸ ಮತ್ತು ಅಜ್ಞಾತವಾಸದ ವೈರವನ್ನು ಇಂದು ಹೇಗೆ ತಾನೇ ನೀನು ಮರೆತುಬಿಟ್ಟಿರುವೆ? ಆಗ ಧೃತರಾಷ್ಟ್ರನ ಮೇಲಿನ ನಿನ್ನ ಈ ಸ್ನೇಹಭಾವವು ಕಾಣುತ್ತಿರಲಿಲ್ಲವಲ್ಲ?

15017020a ಕೃಷ್ಣಾಜಿನೋಪಸಂವೀತೋ ಹೃತಾಭರಣಭೂಷಣಃ|

15017020c ಸಾರ್ಧಂ ಪಾಂಚಾಲಪುತ್ರ್ಯಾ ತ್ವಂ ರಾಜಾನಮುಪಜಗ್ಮಿವಾನ್|

15017020e ಕ್ವ ತದಾ ದ್ರೋಣಭೀಷ್ಮೌ ತೌ ಸೋಮದತ್ತೋಽಪಿ ವಾಭವತ್||

ಅವರು ನಿನ್ನ ಆಭರಣಗಳೆಲ್ಲವನ್ನೂ ಅಪಹರಿಸಿ, ಕೃಷ್ಣಾಜಿನವನ್ನು ಹೊದಿಸಿ ಪಾಂಚಾಲಪುತ್ರಿಯೊಂದಿಗೆ ರಾಜನನ್ನು ಅನುಸರಿಸಿ ಕಾಡಿಗೆ ಹೋಗುವಂತೆ ಮಾಡಿದ್ದರು. ಆಗ ದ್ರೋಣ, ಭೀಷ್ಮ, ಸೋಮದತ್ತರು ಎಲ್ಲಿದ್ದರು?

15017021a ಯತ್ರ ತ್ರಯೋದಶ ಸಮಾ ವನೇ ವನ್ಯೇನ ಜೀವಸಿ|

15017021c ನ ತದಾ ತ್ವಾ ಪಿತಾ ಜ್ಯೇಷ್ಠಃ ಪಿತೃತ್ವೇನಾಭಿವೀಕ್ಷತೇ||

ಹದಿಮೂರು ವರ್ಷಗಳು ವನದಲ್ಲಿ ವನ್ಯಪದಾರ್ಥಗಳನ್ನು ತಿಂದು ಜೀವಿಸುತ್ತಿದ್ದಾಗ ನಿಮ್ಮ ಈ ಜ್ಯೇಷ್ಠ ತಂದೆಯು ನಮ್ಮನ್ನು ತಂದೆಯಂತೆ ಕಂಡಿರಲೇ ಇಲ್ಲ!

15017022a ಕಿಂ ತೇ ತದ್ವಿಸ್ಮೃತಂ ಪಾರ್ಥ ಯದೇಷ ಕುಲಪಾಂಸನಃ|

15017022c ದುರ್ವೃತ್ತೋ ವಿದುರಂ ಪ್ರಾಹ ದ್ಯೂತೇ ಕಿಂ ಜಿತಮಿತ್ಯುತ||

ಪಾರ್ಥ! ಇದೇ ಕುಲಪಾಂಸಕ ದುರ್ನಡತೆಯ ಧೃತರಾಷ್ಟ್ರನು ದ್ಯೂತದಲ್ಲಿ ಯಾರು ಗೆದ್ದರು ಎಂದು ವಿದುರನನ್ನು ಪ್ರಶ್ನಿಸುತ್ತಿದ್ದುದು ನಿನಗೆ ಮರೆತು ಹೋಗಿದೆಯೇ?”

15017023a ತಮೇವಂವಾದಿನಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

15017023c ಉವಾಚ ಭ್ರಾತರಂ ಧೀಮಾನ್ಜೋಷಮಾಸ್ವೇತಿ ಭರ್ತ್ಸಯನ್||

ಹೀಗೆ ಹೇಳುತ್ತಿದ್ದ ತಮ್ಮನನ್ನು ಗದರಿಸುತ್ತಾ ಧೀಮಾನ್ ರಾಜಾ ಕುಂತೀಪುತ್ರ ಯುಧಿಷ್ಠಿರನು “ಸಾಕು! ಸುಮ್ಮನಿರು!” ಎಂದು ಹೇಳಿದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಸಪ್ತದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಹದಿನೇಳನೇ ಅಧ್ಯಾಯವು.

Related image

Comments are closed.