Ashramavasika Parva: Chapter 14

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೪

ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (೧-೧೭).

15014001 ಧೃತರಾಷ್ಟ್ರ ಉವಾಚ|

15014001a ಶಂತನುಃ ಪಾಲಯಾಮಾಸ ಯಥಾವತ್ಪೃಥಿವೀಮಿಮಾಮ್|

15014001c ತಥಾ ವಿಚಿತ್ರವೀರ್ಯಶ್ಚ ಭೀಷ್ಮೇಣ ಪರಿಪಾಲಿತಃ|

15014001e ಪಾಲಯಾಮಾಸ ವಸ್ತಾತೋ ವಿದಿತಂ ವೋ ನಸಂಶಯಃ||

ಧೃತರಾಷ್ಟ್ರನು ಹೇಳಿದನು: “ಶಂತನುವು ಈ ಭೂಮಿಯನ್ನು ಯಥಾವತ್ತಾಗಿ ಆಳಿಕೊಂಡಿದ್ದನು. ಹಾಗೆಯೇ ವಿಚಿತ್ರವೀರ್ಯ ಮತ್ತು ಭೀಷ್ಮರು ಪರಿಪಾಲಿಸಿದರು. ನನ್ನ ತಂದೆಯು ತತ್ತ್ವಜ್ಞನಾಗಿಯೇ ರಾಜ್ಯವಾಳಿದನೆನ್ನುವುದರಲ್ಲಿ ಸಂಶಯವಿಲ್ಲ.

15014002a ಯಥಾ ಚ ಪಾಂಡುಭ್ರಾತಾ ಮೇ ದಯಿತೋ ಭವತಾಮಭೂತ್|

15014002c ಸ ಚಾಪಿ ಪಾಲಯಾಮಾಸ ಯಥಾವತ್ತಚ್ಚ ವೇತ್ಥ ಹ||

ಅನಂತರ ನನಗೆ ಅತ್ಯಂತ ಪ್ರಿಯನಾಗಿದ್ದ ಸಹೋದರ ಪಾಂಡುವು ಕೂಡ ಯಥಾವತ್ತಾಗಿ ರಾಜ್ಯವನ್ನು ಪಾಲಿಸಿದನು. ಇದು ನಿಮಗೆ ತಿಳಿದೇ ಇದೆ.

15014003a ಮಯಾ ಚ ಭವತಾಂ ಸಮ್ಯಕ್ಶುಶ್ರೂಷಾ ಯಾ ಕೃತಾನಘಾಃ|

15014003c ಅಸಮ್ಯಗ್ವಾ ಮಹಾಭಾಗಾಸ್ತತ್ಕ್ಷಂತವ್ಯಮತಂದ್ರಿತೈಃ||

ಅನಘರೇ! ಅನಂತರ ನಾನೂ ಕೂಡ ನಿಮ್ಮ ಸೇವೆಯನ್ನು ಚೆನ್ನಾಗಿಯೇ ಮಾಡಿದ್ದೇನೆ. ಮಹಾಭಾಗರೇ! ನಾನೇನಾದರೂ ಸರಿಯಾಗಿ ನಡೆದುಕೊಳ್ಳದೇ ಇದ್ದಿದ್ದರೆ ಆಲಸ್ಯರಹಿತರಾದ ನೀವು ನನ್ನನ್ನು ಕ್ಷಮಿಸಬೇಕು.

15014004a ಯಚ್ಚ ದುರ್ಯೋಧನೇನೇದಂ ರಾಜ್ಯಂ ಭುಕ್ತಮಕಂಟಕಮ್|

15014004c ಅಪಿ ತತ್ರ ನ ವೋ ಮಂದೋ ದುರ್ಬುದ್ಧಿರಪರಾದ್ಧವಾನ್||

ಕಂಟಕರಹಿತವಾದ ಈ ರಾಜ್ಯವನ್ನು ದುರ್ಯೋಧನನು ಆಳುತ್ತಿದ್ದಾಗಲೂ, ಅವನು ಮಂದನೂ ದುರ್ಬುದ್ಧಿಯೂ ಆಗಿದ್ದರೂ ನಿಮ್ಮ ಕುರಿತು ಯಾವ ಅಪರಾಧವನ್ನೂ ಎಸಗಿರಲಿಲ್ಲ.

15014005a ತಸ್ಯಾಪರಾಧಾದ್ದುರ್ಬುದ್ಧೇರಭಿಮಾನಾನ್ಮಹೀಕ್ಷಿತಾಮ್|

15014005c ವಿಮರ್ದಃ ಸುಮಹಾನಾಸೀದನಯಾನ್ಮತ್ಕೃತಾದಥ||

ಅವನ ಅಪರಾಧದಿಂದ, ದುರ್ಬುದ್ಧಿ-ಅಭಿಮಾನಗಳಿಂದ ಮತ್ತು ನನ್ನದೇ ಕೃತ್ಯದಿಂದ ಅಸಂಖ್ಯಾತ ರಾಜರ ಸಂಹಾರವಾಯಿತು!

15014006a ತನ್ಮಯಾ ಸಾಧು ವಾಪೀದಂ ಯದಿ ವಾಸಾಧು ವೈ ಕೃತಮ್|

15014006c ತದ್ವೋ ಹೃದಿ ನ ಕರ್ತವ್ಯಂ ಮಾಮನುಜ್ಞಾತುಮರ್ಹಥ||

ಆಗ ನಾನು ಒಳ್ಳೆಯದನ್ನೇ ಮಾಡಿರಬಹುದು ಅಥವಾ ಕೆಟ್ಟದ್ದನ್ನೇ ಮಾಡಿರಬಹುದು. ಅವುಗಳನ್ನು ಹೃದಯಕ್ಕೆ ತೆಗೆದುಕೊಳ್ಳದೇ ನನಗೆ ಅನುಜ್ಞೆಯನ್ನು ನೀಡಬೇಕು.

15014007a ವೃದ್ಧೋಽಯಂ ಹತಪುತ್ರೋಽಯಂ ದುಃಖಿತೋಽಯಂ ಜನಾಧಿಪಃ|

15014007c ಪೂರ್ವರಾಜ್ಞಾಂ ಚ ಪುತ್ರೋಽಯಮಿತಿ ಕೃತ್ವಾನುಜಾನತ||

ಇವನು ವೃದ್ಧನಾಗಿದ್ದಾನೆ. ಇವನು ಪುತ್ರರನ್ನು ಕಳೆದುಕೊಂಡವನಾಗಿದ್ದಾನೆ. ಇವನು ದುಃಖಿತನಾಗಿದ್ದಾನೆ. ಹಿಂದಿನ ರಾಜರ ಮಗನಾಗಿ ಜನಾಧಿಪನಾಗಿದ್ದಾನೆ ಎಂದು ತಿಳಿದುಕೊಂಡು ನನಗೆ ಅನುಮತಿಯನ್ನು ನೀಡಿ!

15014008a ಇಯಂ ಚ ಕೃಪಣಾ ವೃದ್ಧಾ ಹತಪುತ್ರಾ ತಪಸ್ವಿನೀ|

15014008c ಗಾಂಧಾರೀ ಪುತ್ರಶೋಕಾರ್ತಾ ತುಲ್ಯಂ ಯಾಚತಿ ವೋ ಮಯಾ||

ಕೃಪಣೆಯೂ, ವೃದ್ಧೆಯೂ ಆಗಿರುವ, ನನ್ನಂತೆಯೇ ಪುತ್ರರನ್ನು ಕಳೆದುಕೊಂಡು ಪುತ್ರಶೋಕಾರ್ತಳಾಗಿರುವ ಈ ತಪಸ್ವಿನೀ ಗಾಂಧಾರಿಯೂ ಕೂಡ ಬೇಡಿಕೊಳ್ಳುತ್ತಿದ್ದಾಳೆ.

15014009a ಹತಪುತ್ರಾವಿಮೌ ವೃದ್ಧೌ ವಿದಿತ್ವಾ ದುಃಖಿತೌ ತಥಾ|

15014009c ಅನುಜಾನೀತ ಭದ್ರಂ ವೋ ವ್ರಜಾವಃ ಶರಣಂ ಚ ವಃ||

ಈ ವೃದ್ಧರೀರ್ವರೂ ಪುತ್ರರನ್ನು ಕಳೆದುಕೊಂಡು ದುಃಖಿತರಾಗಿರುವರೆಂದು ತಿಳಿದು ನಮಗೆ ಅನುಮತಿಯನ್ನು ನೀಡಿ. ನಿಮಗೆ ಮಂಗಳವಾಗಲಿ. ನಾವು ನಿಮಗೆ ಶರಣಾಗತರಾಗಿದ್ದೇವೆ.

15014010a ಅಯಂ ಚ ಕೌರವೋ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

15014010c ಸರ್ವೈರ್ಭವದ್ಭಿರ್ದ್ರಷ್ಟವ್ಯಃ ಸಮೇಷು ವಿಷಮೇಷು ಚ|

ಈಗ ಈ ಕೌರವ ಕುಂತೀಪುತ್ರ ಯುಧಿಷ್ಠಿರನು ನಿಮಗೆಲ್ಲರಿಗೆ ರಾಜನಾಗಿದ್ದಾನೆ. ಒಳ್ಳೆಯ ಸಮಯದಲ್ಲಿಯಾಗಲೀ ಕಷ್ಟದ ಸಮಯದಲ್ಲಾಗಲೀ ನೀವು ಅವನ ಕುರಿತು ಕೃಪೆಯಿಂದಿರಬೇಕು.

15014010e ನ ಜಾತು ವಿಷಮಂ ಚೈವ ಗಮಿಷ್ಯತಿ ಕದಾ ಚನ||

15014011a ಚತ್ವಾರಃ ಸಚಿವಾ ಯಸ್ಯ ಭ್ರಾತರೋ ವಿಪುಲೌಜಸಃ|

15014011c ಲೋಕಪಾಲೋಪಮಾ ಹ್ಯೇತೇ ಸರ್ವೇ ಧರ್ಮಾರ್ಥದರ್ಶಿನಃ||

ವಿಪುಲ ತೇಜಸ್ಸಿನ ಲೋಕಪಾಲರಂತಿರುವ ಧರ್ಮಾರ್ಥದರ್ಶಿಗಳಾದ ಅವನ ನಾಲ್ವರು ಸಹೋದರರೂ ಮಂತ್ರಿಗಳಾಗಿರುವ ಇವನು ಎಂದೂ ವಿಷಮ ಸ್ಥಿತಿಯನ್ನು ಹೊಂದುವುದಿಲ್ಲ.

15014012a ಬ್ರಹ್ಮೇವ ಭಗವಾನೇಷ ಸರ್ವಭೂತಜಗತ್ಪತಿಃ|

15014012c ಯುಧಿಷ್ಠಿರೋ ಮಹಾತೇಜಾ ಭವತಃ ಪಾಲಯಿಷ್ಯತಿ||

ಸರ್ವಪ್ರಾಣಿಗಳಿಗೂ ಜಗತ್ಪತಿಯಾಗಿರುವ ಪೂಜ್ಯ ಬ್ರಹ್ಮನಂತೆ ಮಹಾತೇಜಸ್ವಿಯಾಗಿರುವ ಯುಧಿಷ್ಠಿರನು ನಿಮ್ಮೆಲ್ಲರನ್ನೂ ಪಾಲಿಸುತ್ತಾನೆ.

15014013a ಅವಶ್ಯಮೇವ ವಕ್ತವ್ಯಮಿತಿ ಕೃತ್ವಾ ಬ್ರವೀಮಿ ವಃ|

15014013c ಏಷ ನ್ಯಾಸೋ ಮಯಾ ದತ್ತಃ ಸರ್ವೇಷಾಂ ವೋ ಯುಧಿಷ್ಠಿರಃ|

15014013e ಭವಂತೋಽಸ್ಯ ಚ ವೀರಸ್ಯ ನ್ಯಾಸಭೂತಾ ಮಯಾ ಕೃತಾಃ||

ನಾನು ಇದನ್ನು ಅವಶ್ಯವಾಗಿ ಹೇಳಬೇಕೆಂದು ಹೇಳುತ್ತಿದ್ದೇನೆ. ನಾನು ಯುಧಿಷ್ಠಿರನನ್ನು ನ್ಯಾಸರೂಪದಲ್ಲಿ ನಿಮ್ಮೊಡನೆ ವಹಿಸಿಕೊಡುತ್ತಿದ್ದೇನೆ. ಹಾಗೆಯೇ ನಿಮ್ಮೆಲ್ಲರನ್ನೂ ನ್ಯಾಸರೂಪದಲ್ಲಿ ಆ ವೀರನ ಬಳಿ ಇಡುತ್ತಿದ್ದೇನೆ.

15014014a ಯದ್ಯೇವ ತೈಃ ಕೃತಂ ಕಿಂ ಚಿದ್ವ್ಯಲೀಕಂ ವಾ ಸುತೈರ್ಮಮ|

15014014c ಯದ್ಯನ್ಯೇನ ಮದೀಯೇನ ತದನುಜ್ಞಾತುಮರ್ಹಥ||

ನಿಮಗೆ ನನ್ನ ಮಕ್ಕಳಿಂದಾಗಲೀ ಅಥವಾ ನನ್ನಿಂದಾಗಲೀ ಯಾವುದೇ ಅಪರಾಧವು ನಡೆದಿದ್ದರೂ ಅದನ್ನು ಕ್ಷಮಿಸಿ ಅನುಮತಿಯನ್ನು ನೀಡಬೇಕು.

15014015a ಭವದ್ಭಿರ್ಹಿ ನ ಮೇ ಮನ್ಯುಃ ಕೃತಪೂರ್ವಃ ಕಥಂ ಚನ|

15014015c ಅತ್ಯಂತಗುರುಭಕ್ತಾನಾಮೇಷೋಽಂಜಲಿರಿದಂ ನಮಃ||

ಹಿಂದೆ ಎಂದೂ ನೀವು ನನ್ನ ಮೇಲೆ ಕೋಪಗೊಂಡಿರಲಿಲ್ಲ. ನೀವೆಲ್ಲರೂ ಅತ್ಯಂತಗುರುಭಕ್ತಿಯುಳ್ಳವರಾಗಿರುವಿರಿ. ನಿಮಗೆ ಕೈಜೋಡಿಸಿ ನಮಸ್ಕರಿಸುತ್ತಿದ್ದೇನೆ.

15014016a ತೇಷಾಮಸ್ಥಿರಬುದ್ಧೀನಾಂ ಲುಬ್ಧಾನಾಂ ಕಾಮಚಾರಿಣಾಮ್|

15014016c ಕೃತೇ ಯಾಚಾಮಿ ವಃ ಸರ್ವಾನ್ಗಾಂಧಾರೀಸಹಿತೋಽನಘಾಃ||

ಅನಘರೇ! ಅಸ್ಥಿರಬುದ್ಧಿಯ ಲುಬ್ಧರೂ ಕಾಮಚಾರಿಗಳೂ ಆಗಿದ್ದ ನನ್ನ ಮಕ್ಕಳ ಕುರಿತಾಗಿ ಗಾಂಧಾರಿಯ ಸಹಿತ ನಾನು ನಿಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತಿದ್ದೇನೆ.”

15014017a ಇತ್ಯುಕ್ತಾಸ್ತೇನ ತೇ ರಾಜ್ಞಾ ಪೌರಜಾನಪದಾ ಜನಾಃ|

15014017c ನೋಚುರ್ಬಾಷ್ಪಕಲಾಃ ಕಿಂ ಚಿದ್ವೀಕ್ಷಾಂ ಚಕ್ರುಃ ಪರಸ್ಪರಮ್||

ರಾಜನು ಹೀಗೆ ಹೇಳುತ್ತಿರಲು ಪೌರ-ಗ್ರಾಮೀಣಜನರು ಕಂಬನಿದುಂಬಿದ ಕಣ್ಣುಗಳುಳ್ಳವರಾಗಿ ಏನನ್ನೂ ಹೇಳಲಾರದೇ ಒಬ್ಬರನ್ನೊಬ್ಬರು ನೋಡುತ್ತಿದ್ದರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಪ್ರಾರ್ಥನೇ ಚತುರ್ದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಪ್ರಾರ್ಥನ ಎನ್ನುವ ಹದಿನಾಲ್ಕನೇ ಅಧ್ಯಾಯವು.

Related image

Comments are closed.