Adi Parva: Chapter 120

ಆದಿ ಪರ್ವ: ಸಂಭವ ಪರ್ವ

೧೨೦

ಕೃಪ ಶಾರದ್ವತ

ಗೌತಮಿ ಶರದ್ವತನನ್ನು ಇಂದ್ರನ ಆದೇಶದಂತೆ ದೇವಕನ್ಯೆ ಜಾಲಪದಿಯು ಮೋಹಿಸುವುದು (೧-೧೦). ಸ್ಖಲಿತ ರೇತವನ್ನು ದರ್ಬೆಗಳ ಮೇಲೆ ಇಡಲು ಅದರಿಂದ ಅವಳಿ ಮಕ್ಕಳ ಜನನ (೧೧-೧೩). ಬೇಟೆಯಾಡಲು ಬಂದಿದ್ದ ಶಂತನುವು ಅವರಿಗೆ ಕೃಪ-ಕೃಪಿಯರೆಂದು ಹೆಸರಿತ್ತು ಸಾಕಿದುದು (೧೪-೧೮). ಶರದ್ವತನು ಬಂದು ಕೃಪನಿಗೆ ಧನುರ್ವಿದ್ಯೆಯನ್ನು ಕಲಿಸಿದುದು, ಕೃಪನು ಕೌರವ-ಪಾಂಡವರ ಗುರುವಾದುದು (೧೯-೨೧).

01120001 ಜನಮೇಜಯ ಉವಾಚ|

01120001a ಕೃಪಸ್ಯಾಪಿ ಮಹಾಬ್ರಹ್ಮನ್ಸಂಭವಂ ವಕ್ತುಮರ್ಹಸಿ|

01120001c ಶರಸ್ತಂಭಾತ್ಕಥಂ ಜಜ್ಞೇ ಕಥಂ ಚಾಸ್ತ್ರಾಣ್ಯವಾಪ್ತವಾನ್||

ಜನಮೇಜಯನು ಹೇಳಿದನು: “ಮಹಾಬ್ರಾಹ್ಮಣ! ಕೃಪನು ಶರಸ್ತಂಭಗಳಿಂದ ಹೇಗೆ ಜನಿಸಿದನು ಮತ್ತು ಅವನು ಹೇಗೆ ಅಸ್ತ್ರಗಳನ್ನು ಹೊಂದಿದನು ಎಂದು ಹೇಳು.”

01120002 ವೈಶಂಪಾಯನ ಉವಾಚ|

01120002a ಮಹರ್ಷೇರ್ಗೌತಮಸ್ಯಾಸೀಚ್ಶರದ್ವಾನ್ನಾಮ ನಾಮತಃ|

01120002c ಪುತ್ರಃ ಕಿಲ ಮಹಾರಾಜ ಜಾತಃ ಸಹ ಶರೈರ್ವಿಭೋ||

ವೈಶಂಪಾಯನನು ಹೇಳಿದನು: “ಮಹರ್ಷಿ ಗೌತಮನಿಗೆ ಶರದ್ವತ ಎನ್ನುವ ಹೆಸರಿನ ಮಗನಿದ್ದನು. ಮಹಾರಾಜ! ಆ ಮಗನು ಶರಗಳನ್ನು ಪಡೆದೇ ಹುಟ್ಟಿದ್ದನು.

01120003a ನ ತಸ್ಯ ವೇದಾಧ್ಯಯನೇ ತಥಾ ಬುದ್ಧಿರಜಾಯತ|

01120003c ಯಥಾಸ್ಯ ಬುದ್ಧಿರಭವದ್ಧನುರ್ವೇದೇ ಪರಂತಪ||

ಆ ಪರಂತಪನಿಗೆ ಧನುರ್ವೇದದಲ್ಲಿ ಎಷ್ಟು ಬುದ್ಧಿಯಿತ್ತೋ ಅಷ್ಟು ಬುದ್ಧಿ ವೇದಾಧ್ಯಯನದಲ್ಲಿ ಇರಲಿಲ್ಲ.

01120004a ಅಧಿಜಗ್ಮುರ್ಯಥಾ ವೇದಾಂಸ್ತಪಸಾ ಬ್ರಹ್ಮವಾದಿನಃ|

01120004c ತಥಾ ಸ ತಪಸೋಪೇತಃ ಸರ್ವಾಣ್ಯಸ್ತ್ರಾಣ್ಯವಾಪ ಹ||

ಬ್ರಹ್ಮವಾದಿಗಳು ಹೇಗೆ ತಪಸ್ಸಿನಿಂದ ಪರಿಶ್ರಮಿಸಿ ವೇದಗಳನ್ನು ಪಡೆಯುತ್ತಾರೋ ಹಾಗೆ ಅವನೂ ಕೂಡ ತಪಸ್ಸಿನಿಂದಲೇ ಸರ್ವ ಅಸ್ತ್ರಗಳನ್ನೂ ಪಡೆದನು.

01120005a ಧನುರ್ವೇದಪರತ್ವಾಚ್ಚ ತಪಸಾ ವಿಪುಲೇನ ಚ|

01120005c ಭೃಶಂ ಸಂತಾಪಯಾಮಾಸ ದೇವರಾಜಂ ಸ ಗೌತಮಃ||

ಆ ಗೌತಮನ ವಿಪುಲ ತಪಸ್ಸು ಮತ್ತು ಧನುರ್ವೇದ ಪಾಂಡಿತ್ಯವು ದೇವರಾಜನನ್ನು ಸಾಕಷ್ಟು ಕಾಡಿತು.

01120006a ತತೋ ಜಾಲಪದೀಂ ನಾಮ ದೇವಕನ್ಯಾಂ ಸುರೇಶ್ವರಃ|

01120006c ಪ್ರಾಹಿಣೋತ್ತಪಸೋ ವಿಘ್ನಂ ಕುರು ತಸ್ಯೇತಿ ಕೌರವ||

ಕೌರವ! ಆಗ ಸುರೇಶ್ವರನು ಜಾಲಪದೀ ಎಂಬ ದೇವಕನ್ಯೆಯನ್ನು ಕರೆದು “ಅವನ ತಪಸ್ಸಿಗೆ ವಿಘ್ನವನ್ನುಂಟುಮಾಡು!””ಎಂದು ಕಳುಹಿಸಿದನು.

01120007a ಸಾಭಿಗಮ್ಯಾಶ್ರಮಪದಂ ರಮಣೀಯಂ ಶರದ್ವತಃ|

01120007c ಧನುರ್ಬಾಣಧರಂ ಬಾಲಾ ಲೋಭಯಾಮಾಸ ಗೌತಮಂ||

ಆ ಬಾಲೆಯು ಶರದ್ವತನ ರಮಣೀಯ ಆಶ್ರಮಪದವನ್ನು ಸೇರಿ, ಧನುರ್ಬಾಣಧರ ಗೌತಮನಲ್ಲಿ ಆಸೆಹುಟ್ಟಿಸಲು ಪ್ರಯತ್ನಿಸಿದಳು.

01120008a ತಾಮೇಕವಸನಾಂ ದೃಷ್ಟ್ವಾ ಗೌತಮೋಽಪ್ಸರಸಂ ವನೇ|

01120008c ಲೋಕೇಽಪ್ರತಿಮಸಂಸ್ಥಾನಾಮುತ್ಫುಲ್ಲನಯನೋಽಭವತ್||

ಆ ವನದಲ್ಲಿ ಒಂದೇ ಒಂದು ವಸ್ತ್ರವನ್ನು ಉಟ್ಟು ಲೋಕದಲ್ಲಿಯೇ ಅಪ್ರತಿಮ ನಿಲುವನ್ನು ಹೊಂದಿದ್ದ ಅಪ್ಸರೆಯನ್ನು ಗೌತಮನು ತೆರೆದ ಕಣ್ಣುಗಳಿಂದ ನೋಡಿದನು.

01120009a ಧನುಶ್ಚ ಹಿ ಶರಾಶ್ಚಾಸ್ಯ ಕರಾಭ್ಯಾಂ ಪ್ರಾಪತನ್ಭುವಿ|

01120009c ವೇಪಥುಶ್ಚಾಸ್ಯ ತಾಂ ದೃಷ್ಟ್ವಾ ಶರೀರೇ ಸಮಜಾಯತ||

ಧನುಸ್ಸು ಮತ್ತು ಬಾಣಗಳು ಅವನ ಕೈಗಳಿಂದ ನೆಲಕ್ಕೆ ಬಿದ್ದವು ಮತ್ತು ಅವಳನ್ನು ನೋಡಿ ಅವನ ಶರೀರದಲ್ಲಿ ಕಂಪನವುಂಟಾಯಿತು.

01120010a ಸ ತು ಜ್ಞಾನಗರೀಯಸ್ತ್ವಾತ್ತಪಸಶ್ಚ ಸಮನ್ವಯಾತ್|

01120010c ಅವತಸ್ಥೇ ಮಹಾಪ್ರಾಜ್ಞೋ ಧೈರ್ಯೇಣ ಪರಮೇಣ ಹ||

ಆದರೂ ಅವನ ಜ್ಞಾನ ಎಷ್ಟು ಮೇಲ್ಮಟ್ಟದ್ದಿತ್ತು ಮತ್ತು ತಪಸ್ಸು ಎಷ್ಟಿತ್ತೆಂದರೆ ಆ ಮಹಾಪ್ರಾಜ್ಞನು ಪರಮ ಧೈರ್ಯದಿಂದ ತನ್ನನ್ನು ತಾನೇ ಗಟ್ಟಿಯಾಗಿರಿಸಿಕೊಂಡನು.

01120011a ಯಸ್ತ್ವಸ್ಯ ಸಹಸಾ ರಾಜನ್ವಿಕಾರಃ ಸಮಪದ್ಯತ|

01120011c ತೇನ ಸುಸ್ರಾವ ರೇತೋಽಸ್ಯ ಸ ಚ ತನ್ನಾವಬುಧ್ಯತ||

ಆದರೂ ರಾಜನ್! ಅವನಲ್ಲಿ ಒಮ್ಮಿಂದೊಮ್ಮಲೇ ವಿಕಾರವುಂಟಾಗಿ ಅವನಿಗೆ ತಿಳಿಯದೆಯೇ ಅವನ ರೇತವು ಹೊರಬಿದ್ದಿತು.

01120012a ಸ ವಿಹಾಯಾಶ್ರಮಂ ತಂ ಚ ತಾಂ ಚೈವಾಪ್ಸರಸಂ ಮುನಿಃ|

01120012c ಜಗಾಮ ರೇತಸ್ತತ್ತಸ್ಯ ಶರಸ್ತಂಬೇ ಪಪಾತ ಹ||

ಆಗ ಆ ಮುನಿಯು ಆ ಆಶ್ರಮವನ್ನೂ ಅಪ್ಸರೆಯನ್ನೂ ಬಿಟ್ಟು ಹೊರಟುಹೋದನು. ಅವನ ರೇತವು ದರ್ಬೆಗಳ ಮೇಲೆ ಬಿದ್ದಿತು.

01120013a ಶರಸ್ತಂಬೇ ಚ ಪತಿತಂ ದ್ವಿಧಾ ತದಭವನ್ನೃಪ|

01120013c ತಸ್ಯಾಥ ಮಿಥುನಂ ಜಜ್ಞೇ ಗೌತಮಸ್ಯ ಶರದ್ವತಃ||

ದರ್ಬೆಗಳ ಮೇಲೆ ಬಿದ್ದ ತಕ್ಷಣವೇ ಅದು ಎರಡಾಗಿ ಒಡೆಯಿತು ಮತ್ತು ಅವುಗಳಿಂದ ಗೌತಮ ಶರದ್ವತನಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದರು.

01120014a ಮೃಗಯಾಂ ಚರತೋ ರಾಜ್ಞಃ ಶಂತನೋಸ್ತು ಯದೃಚ್ಛಯಾ|

01120014c ಕಶ್ಚಿತ್ಸೇನಾಚರೋಽರಣ್ಯೇ ಮಿಥುನಂ ತದಪಶ್ಯತ||

ರಾಜ ಶಂತನುವು ಬೇಟೆಯಾಡಲು ಅಲ್ಲಿಗೆ ಹೋಗಿದ್ದಾಗ ಅವನ ಓರ್ವ ಸೇನಾಚರನು ಅರಣ್ಯದಲ್ಲಿ ಈ ಅವಳಿ ಮಕ್ಕಳನ್ನು ನೋಡಿದನು.

01120015a ಧನುಶ್ಚ ಸಶರಂ ದೃಷ್ಟ್ವಾ ತಥಾ ಕೃಷ್ಣಾಜಿನಾನಿ ಚ|

01120015c ವ್ಯವಸ್ಯ ಬ್ರಾಹ್ಮಣಾಪತ್ಯಂ ಧನುರ್ವೇದಾಂತಗಸ್ಯ ತತ್|

ಅವರ ಪಕ್ಕದಲ್ಲಿ ಧನುರ್ಬಾಣಗಳನ್ನು ಮತ್ತು ಕೃಷ್ಣಾಜಿನಗಳನ್ನು ನೋಡಿ ಅವರು ಧನುರ್ವೇದಾಂತಗ ಓರ್ವ ಬ್ರಾಹ್ಮಣನ ಮಕ್ಕಳಿರಬೇಕೆಂದು ಯೋಚಿಸಿದನು.

01120015e ಸ ರಾಜ್ಞೇ ದರ್ಶಯಾಮಾಸ ಮಿಥುನಂ ಸಶರಂ ತದಾ||

01120016a ಸ ತದಾದಾಯ ಮಿಥುನಂ ರಾಜಾಥ ಕೃಪಯಾನ್ವಿತಃ|

01120016c ಆಜಗಾಮ ಗೃಹಾನೇವ ಮಮ ಪುತ್ರಾವಿತಿ ಬ್ರುವನ್||

01120017a ತತಃ ಸಂವರ್ಧಯಾಮಾಸ ಸಂಸ್ಕಾರೈಶ್ಚಾಪ್ಯಯೋಜಯತ್|

01120017c ಗೌತಮೋಽಪಿ ತದಾಪೇತ್ಯ ಧನುರ್ವೇದಪರೋಽಭವತ್||

ಅವನು ಬಾಣಗಳೊಂದಿಗೆ ಆ ಅವಳಿ ಮಕ್ಕಳನ್ನು ರಾಜನಿಗೆ ತೋರಿಸಿದನು. ಕೃಪಯಾನ್ವಿತ ರಾಜನು ಆ ಅವಳಿ ಮಕ್ಕಳನ್ನು “ಇವರು ನನ್ನ ಪುತ್ರರು. ಮನೆಗೆ ಕೊಂಡೊಯ್ಯುತ್ತೇನೆ” ಎಂದು ತನ್ನದಾಗಿ ಸ್ವೀಕರಿಸಿದನು. ಅವರಿಗೆ ಸಂಸ್ಕಾರಗಳನ್ನೆಲ್ಲ ನೆರವೇರಿಸಿ ಬೆಳೆಸಿದನು. ಗೌತಮನು ಧನುರ್ವೇದ ಪಾರಂಗತನಾದನು.

01120018a ಕೃಪಯಾ ಯನ್ಮಯಾ ಬಾಲಾವಿಮೌ ಸಂವರ್ಧಿತಾವಿತಿ|

01120018c ತಸ್ಮಾತ್ತಯೋರ್ನಾಮ ಚಕ್ರೇ ತದೇವ ಸ ಮಹೀಪತಿಃ||

ಮಹೀಪತಿ! “ಈ ಬಾಲಕರೀರ್ವರನ್ನೂ ನಾನು ಕೃಪೆಯಿಂದ ಬೆಳೆಸಿದ್ದೇನೆ ಆದುದರಿಂದ ಅವರ ಹೆಸರೂ ಅದೇ ಆಗಲಿ!” ಎಂದನು.

01120019a ನಿಹಿತೌ ಗೌತಮಸ್ತತ್ರ ತಪಸಾ ತಾವವಿಂದತ|

01120019c ಆಗಮ್ಯ ಚಾಸ್ಮೈ ಗೋತ್ರಾದಿ ಸರ್ವಮಾಖ್ಯಾತವಾಂಸ್ತದಾ||

ತನ್ನ ತಪೋಬಲದಿಂದ ಗೌತಮನು ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಅಲ್ಲಿಗೆ ಬಂದು ರಾಜನಿಗೆ ಅವರ ಗೋತ್ರ ಮೊದಲಾದ ಎಲ್ಲವನ್ನೂ ತಿಳಿಸಿದನು.

01120020a ಚತುರ್ವಿಧಂ ಧನುರ್ವೇದಮಸ್ತ್ರಾಣಿ ವಿವಿಧಾನಿ ಚ|

01120020c ನಿಖಿಲೇನಾಸ್ಯ ತತ್ಸರ್ವಂ ಗುಹ್ಯಮಾಖ್ಯಾತವಾಂಸ್ತದಾ|

01120020e ಸೋಽಚಿರೇಣೈವ ಕಾಲೇನ ಪರಮಾಚಾರ್ಯತಾಂ ಗತಃ||

01120021a ತತೋಽಧಿಜಗ್ಮುಃ ಸರ್ವೇ ತೇ ಧನುರ್ವೇದಂ ಮಹಾರಥಾಃ|

01120021c ಧೃತರಾಷ್ಟ್ರಾತ್ಮಜಾಶ್ಚೈವ ಪಾಂಡವಾಶ್ಚ ಮಹಾಬಲಾಃ|

01120021e ವೃಷ್ಣಯಶ್ಚ ನೃಪಾಶ್ಚಾನ್ಯೇ ನಾನಾದೇಶಸಮಾಗತಾಃ||

ಅವನು ಕೃಪನಿಗೆ ಚತುರ್ವಿಧ ಧನುರ್ವೇದ ಮತ್ತು ವಿವಿಧ ಅಸ್ತ್ರಗಳ ಕುರಿತು ಎಲ್ಲವನ್ನೂ ಮತ್ತು ಅದರ ಗುಟ್ಟುಗಳೆಲ್ಲವನ್ನೂ ಹೇಳಿಕೊಟ್ಟನು. ಸ್ವಲ್ಪವೇ ಸಮಯದಲ್ಲಿ ಅವನು ಪರಮಾಚಾರ್ಯನೆನಿಸಿಕೊಂಡನು. ಎಲ್ಲ ಮಹಾರಥಿಗಳೂ-ಧೃತರಾಷ್ಟ್ರನ ಮಕ್ಕಳು, ಪಾಂಡವರು, ಮಹಾಬಲಶಾಲಿ ವೃಷ್ಣಿಗಳು ಮತ್ತು ಅನ್ಯ ನಾನಾ ದೇಶಗಳಿಂದ ಬಂದವರೆಲ್ಲರೂ ಧನುರ್ವೇದವನ್ನು ಅವನಿಂದಲೇ ಕಲಿತುಕೊಂಡರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕೃಪಾಚಾರ್ಯ ಜನ್ಮೇ ವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕೃಪಾಚಾರ್ಯ ಜನ್ಮ ಎನ್ನುವ ನೂರಾಇಪ್ಪತ್ತನೆಯ ಅಧ್ಯಾಯವು.

Comments are closed.