Adi Parva: Chapter 111

ಆದಿ ಪರ್ವ: ಸಂಭವ ಪರ್ವ

೧೧೧

ಪಾಂಡುವಿನ ತಪಸ್ಸು (೧-೧೦). ಮಕ್ಕಳಿಲ್ಲದೇ ಪರಿತಪಿಸುತ್ತಿದ್ದ ಪಾಂಡುವಿಗೆ ಋಷಿಗಳು ಅವನು ದೇವೋಪಮ ಮಕ್ಕಳನ್ನು ಪಡೆಯುತ್ತಾನೆ ಎಂದು ತಮ್ಮ ದಿವ್ಯದೃಷ್ಟಿಯಿಂದ ಕಂಡು ಹೇಳುವುದು (೧೧-೨೦). ಪಾಂಡುವು ಅತ್ಯುತ್ತಮ ಬ್ರಾಹ್ಮಣನಿಂದ ಮಕ್ಕಳನ್ನು ಪಡೆಯುವಂತೆ ಕುಂತಿಗೆ ಹೇಳುವುದು (೨೧-೨೬).

01111001 ವೈಶಂಪಾಯನ ಉವಾಚ|

01111001a ತತ್ರಾಪಿ ತಪಸಿ ಶ್ರೇಷ್ಠೇ ವರ್ತಮಾನಃ ಸ ವೀರ್ಯವಾನ್|

01111001c ಸಿದ್ಧಚಾರಣಸಂಘಾನಾಂ ಬಭೂವ ಪ್ರಿಯದರ್ಶನಃ||

ವೈಶಂಪಾಯನನು ಹೇಳಿದನು: “ಅಲ್ಲಿಯೂ ಕೂಡ ಶ್ರೇಷ್ಠ ತಪೋನಿರತ ಆ ವೀರನು ಅಲ್ಲಿರುವ ಸಿದ್ಧ ಚಾರಣಗಣಗಳ ಪ್ರಿಯದರ್ಶನನಾದನು.

01111002a ಶುಶ್ರೂಷುರನಹಂವಾದೀ ಸಂಯತಾತ್ಮಾ ಜಿತೇಂದ್ರಿಯಃ|

01111002c ಸ್ವರ್ಗಂ ಗಂತುಂ ಪರಾಕ್ರಾಂತಃ ಸ್ವೇನ ವೀರ್ಯೇಣ ಭಾರತ||

ವಿಧೇಯ, ಅಹಂವಾದಿಯಲ್ಲದ, ಸಂಯತಾತ್ಮ, ಜಿತೇಂದ್ರಿಯ ಭಾರತನು ತನ್ನದೇ ವೀರ್ಯದಿಂದ ಸ್ವರ್ಗದ ದಾರಿಯನ್ನು ಗಳಿಸಿದನು.

01111003a ಕೇಷಾಂ ಚಿದಭವದ್ಭ್ರಾತಾ ಕೇಷಾಂ ಚಿದಭವತ್ಸಖಾ|

01111003c ಋಷಯಸ್ತ್ವಪರೇ ಚೈನಂ ಪುತ್ರವತ್ಪರ್ಯಪಾಲಯನ್||

ಕೆಲವರಿಗೆ ಸಹೋದರನಾಗಿದ್ದನು; ಇನ್ನು ಕೆಲವರಿಗೆ ಸಖನಾಗಿದ್ದನು. ಇನ್ನು ಕೆಲವು ಋಷಿಗಳು ಅವನನ್ನು ಪುತ್ರನಂತೆ ಪರಿಪಾಲಿಸುತ್ತಿದ್ದರು.

01111004a ಸ ತು ಕಾಲೇನ ಮಹತಾ ಪ್ರಾಪ್ಯ ನಿಷ್ಕಲ್ಮಷಂ ತಪಃ|

01111004c ಬ್ರಹ್ಮರ್ಷಿಸದೃಶಃ ಪಾಂಡುರ್ಬಭೂವ ಭರತರ್ಷಭ||

ಆ ಭರತರ್ಷಭ ಪಾಂಡುವು ಬಹಳ ಕಾಲದ ನಂತರ ತನ್ನ ನಿಷ್ಕಲ್ಮಶ ತಪಸ್ಸಿನಿಂದ ಬ್ರಹ್ಮರ್ಷಿ ಸದೃಶ್ಯತೆಯನ್ನು ಹೊಂದಿದನು.

01111005a ಸ್ವರ್ಗಪಾರಂ ತಿತೀರ್ಷನ್ಸ ಶತಶೃಂಗಾದುದಮ್ಮುಖಃ|

01111005c ಪ್ರತಸ್ಥೇ ಸಹ ಪತ್ನೀಭ್ಯಾಮಬ್ರುವಂಸ್ತತ್ರ ತಾಪಸಾಃ|

01111005e ಉಪರ್ಯುಪರಿ ಗಚ್ಛಂತಃ ಶೈಲರಾಜಮುದಙ್ಮುಖಾಃ||

01111006a ದೃಷ್ಟವಂತೋ ಗಿರೇರಸ್ಯ ದುರ್ಗಾನ್ದೇಶಾನ್ಬಹೂನ್ವಯಂ|

01111006c ಆಕ್ರೀಡಭೂತಾನ್ದೇವಾನಾಂ ಗಂಧರ್ವಾಪ್ಸರಸಾಂ ತಥಾ||

01111007a ಉದ್ಯಾನಾನಿ ಕುಬೇರಸ್ಯ ಸಮಾನಿ ವಿಷಮಾಣಿ ಚ|

01111007c ಮಹಾನದೀನಿತಂಬಾಂಶ್ಚ ದುರ್ಗಾಂಶ್ಚ ಗಿರಿಗಹ್ವರಾನ್||

ಸ್ವರ್ಗದ ತೀರವನ್ನು ಸೇರಲಿಚ್ಛಿಸಿದ ಅವನು ಪತ್ನಿಯರನ್ನೊಡಗೊಂಡು ಶತಶೃಂಗವನ್ನು ಮೇಲೇರಿ ಉತ್ತರಾಭಿಮುಖನಾಗಿ ಹೊರಟನು. ಆಗ ಅಲ್ಲಿದ್ದ ತಾಪಸಿಗಳು ಅವನಿಗೆ ಹೇಳಿದರು: “ಈ ಪರ್ವತ ರಾಜನ ಮೇಲೆ ಹತ್ತಿ ಹೋಗುತ್ತಿದ್ದಂತೆ ನಾವು ದೇವತೆಗಳು, ಗಂಧರ್ವರು ಮತ್ತು ಅಪ್ಸರೆಯರು ಕ್ರೀಡಿಸುವ ಅಸಾದ್ಯ ಗಿರಿ-ತಪ್ಪಲುಗಳನ್ನೂ, ಏರು ಪೇರುಗಳ ಕುಬೇರನ ಉದ್ಯಾನಗಳನ್ನು, ಧುಮುಕುತ್ತಿರುವ ಮಹಾನದಿಗಳು, ದುರ್ಗ-ಗಿರಿಗಳು ಮತ್ತು ಗುಹೆಗಳನ್ನು ನೋಡಿದ್ದೇವೆ.

01111008a ಸಂತಿ ನಿತ್ಯಹಿಮಾ ದೇಶಾ ನಿರ್ವೃಕ್ಷಮೃಗಪಕ್ಷಿಣಃ|

01111008c ಸಂತಿ ಕೇ ಚಿನ್ಮಹಾವರ್ಷಾ ದುರ್ಗಾಃ ಕೇ ಚಿದ್ದುರಾಸದಾಃ||

ಅಲ್ಲಿ ಮರ, ಮೃಗ-ಪಕ್ಷಿಗಳ್ಯಾವುವೂ ವಾಸಿಸದಂಥಹ ನಿತ್ಯವೂ ಹಿಮದಿಂದ ಕೂಡಿದ ಪ್ರದೇಶಗಳಿವೆ. ಮತ್ತು ಅಲ್ಲಿ ಕಷ್ಟಕರ ಮಾರ್ಗಗಳನ್ನು ಹೊಂದಿದ ವಿಶಾಲ ಪ್ರದೇಶಗಳೂ ಇವೆ.

01111009a ಅತಿಕ್ರಾಮೇನ್ನ ಪಕ್ಷೀ ಯಾನ್ಕುತ ಏವೇತರೇ ಮೃಗಾಃ|

01111009c ವಾಯುರೇಕೋಽತಿಗಾದ್ಯತ್ರ ಸಿದ್ಧಾಶ್ಚ ಪರಮರ್ಷಯಃ||

01111010a ಗಚ್ಛಂತ್ಯೌ ಶೈಲರಾಜೇಽಸ್ಮಿನ್ರಾಜಪುತ್ರ್ಯೌ ಕಥಂ ತ್ವಿಮೇ|

01111010c ನ ಸೀದೇತಾಮದುಃಖಾರ್ಹೇ ಮಾ ಗಮೋ ಭರತರ್ಷಭ||

ಪಕ್ಷಿಗಳು ಕೂಡ ಅದನ್ನು ದಾಟಿ ಹಾರಲು ಶಕ್ಯವಿಲ್ಲ, ಇನ್ನು ಪ್ರಾಣಿಗಳಾದರೂ ಹೇಗೆ? ವಾಯು ಮಾತ್ರ ಹೋಗಬಲ್ಲ ಅಲ್ಲಿಗೆ ಸಿದ್ಧರು ಮತ್ತು ಪರಮ ಋಷಿಗಳು ಹೋಗಬಲ್ಲರು. ಹಾಗಿರುವಾಗ, ಈ ಈರ್ವರು ರಾಜಪುತ್ರಿಯರು ಹೇಗೆ ತಾನೆ ಈ ಪರ್ವತವನ್ನು ಪಾರು ಮಾಡಿಯಾರು? ಅವರು ಈ ಕಷ್ಟಗಳಿಗೆ ಅರ್ಹರಲ್ಲ. ಹೋಗಬೇಡ, ಭರತರ್ಷಭ!”

01111011 ಪಾಂಡುರುವಾಚ|

01111011a ಅಪ್ರಜಸ್ಯ ಮಹಾಭಾಗಾ ನ ದ್ವಾರಂ ಪರಿಚಕ್ಷತೇ|

01111011c ಸ್ವರ್ಗೇ ತೇನಾಭಿತಪ್ತೋಽಹಮಪ್ರಜಸ್ತದ್ಬ್ರವೀಮಿ ವಃ||

ಪಾಂಡುವು ಹೇಳಿದನು: “ಮಹಾಭಾಗರೇ! ಮಕ್ಕಳಿಲ್ಲದವನಿಗೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವೆಂದು ಹೇಳುತ್ತಾರೆ. ಆದುದರಿಂದ ಮಕ್ಕಳಿಲ್ಲದ ನಾನು ತುಂಬಾ ಚಿಂತೆಗೊಳಗಾಗಿದ್ದೇನೆ. ನಿಮಗೆ ಹೇಳುತ್ತಿದ್ದೇನೆ.

01111012a ಋಣೈಶ್ಚತುರ್ಭಿಃ ಸಂಯುಕ್ತಾ ಜಾಯಂತೇ ಮನುಜಾ ಭುವಿ|

01111012c ಪಿತೃದೇವರ್ಷಿಮನುಜದೇಯೈಃ ಶತಸಹಸ್ರಶಃ||

ಭೂಮಿಯಲ್ಲಿ ಪಿತೃ, ದೇವ, ಋಷಿ ಮತ್ತು ಮನುಷ್ಯ ಈ ನಾಲ್ವರ ನೂರಾರು ಸಹಸ್ರಾರು ಋಣಗಳನ್ನು ತೀರಿಸಲು ಮನುಷ್ಯನಿಗೆ ಮಕ್ಕಳು ಹುಟ್ಟುತ್ತಾರೆ.

01111013a ಏತಾನಿ ತು ಯಥಾಕಾಲಂ ಯೋ ನ ಬುಧ್ಯತಿ ಮಾನವಃ|

01111013c ನ ತಸ್ಯ ಲೋಕಾಃ ಸಂತೀತಿ ಧರ್ಮವಿದ್ಭಿಃ ಪ್ರತಿಷ್ಠಿತಂ||

ಇವುಗಳನ್ನು ಯಥಾಕಾಲದಲ್ಲಿ ಯಾರು ನಡೆಸಿಕೊಳ್ಳುವುದಿಲ್ಲವೋ ಅವನಿಗೆ ಲೋಕಗಳು ದೊರೆಯುವುದಿಲ್ಲ ಎಂದು ಧರ್ಮವನ್ನು ತಿಳಿದವರು ನಿರೂಪಿಸಿದ್ದಾರೆ.

01111014a ಯಜ್ಞೈಶ್ಚ ದೇವಾನ್ಪ್ರೀಣಾತಿ ಸ್ವಾಧ್ಯಾಯತಪಸಾ ಮುನೀನ್|

01111014c ಪುತ್ರೈಃ ಶ್ರಾದ್ಧೈಃ ಪಿತೄಂಶ್ಚಾಪಿ ಆನೃಶಂಸ್ಯೇನ ಮಾನವಾನ್||

ಯಜ್ಞಗಳಿಂದ ದೇವತೆಗಳು, ಸ್ವಾಧ್ಯಾಯ ಮತ್ತು ತಪಸ್ಸುಗಳಿಂದ ಮುನಿಗಳು, ಪುತ್ರರು ಮತ್ತು ಶ್ರಾದ್ಧಗಳಿಂದ ಪಿತೃಗಳು, ಮತ್ತು ಅನುಕಂಪದಿಂದ ಮಾನವರು ಸಂತುಷ್ಟಗೊಳ್ಳುತ್ತಾರೆ.

01111015a ಋಷಿದೇವಮನುಷ್ಯಾಣಾಂ ಪರಿಮುಕ್ತೋಽಸ್ಮಿ ಧರ್ಮತಃ|

01111015c ಪಿತ್ರ್ಯಾದೃಣಾದನಿರ್ಮುಕ್ತಸ್ತೇನ ತಪ್ಯೇ ತಪೋಧನಾಃ||

ಧರ್ಮದ ಪ್ರಕಾರ ನಾನು ಋಷಿ, ದೇವ ಮತ್ತು ಮನುಷ್ಯರ ಋಣಗಳಿಂದ ಪರಿಮುಕ್ತನಾಗಿದ್ದೇನೆ. ತಪೋಧನರೇ! ನಾನಿನ್ನೂ ಪಿತೃಗಳ ಋಣದಿಂದ ಮುಕ್ತನಾಗಿಲ್ಲ ಎಂದು ಬೇಯುತ್ತಿದ್ದೇನೆ.

01111016a ದೇಹನಾಶೇ ಧ್ರುವೋ ನಾಶಃ ಪಿತೄಣಾಮೇಷ ನಿಶ್ಚಯಃ|

01111016c ಇಹ ತಸ್ಮಾತ್ಪ್ರಜಾಹೇತೋಃ ಪ್ರಜಾಯಂತೇ ನರೋತ್ತಮಾಃ||

ನನ್ನ ದೇಹನಾಶದಿಂದ ಪಿತೃಗಳೂ ಕೂಡ ನಾಶಹೊಂದುತ್ತಾರೆ ಎಂದು ನಿಶ್ಚಯ. ಮಕ್ಕಳನ್ನು ಪಡೆಯಲೋಸುಗವೇ ನರೋತ್ತಮರು ಜನ್ಮತಾಳುತ್ತಾರೆ.

01111017a ಯಥೈವಾಹಂ ಪಿತುಃ ಕ್ಷೇತ್ರೇ ಸೃಷ್ಟಸ್ತೇನ ಮಹಾತ್ಮನಾ|

01111017c ತಥೈವಾಸ್ಮಿನ್ಮಮ ಕ್ಷೇತ್ರೇ ಕಥಂ ವೈ ಸಂಭವೇತ್ಪ್ರಜಾ||

ನನ್ನ ತಂದೆಯ ಕ್ಷೇತ್ರದಲ್ಲಿ ನಾನು ಹೇಗೆ ಮಹಾತ್ಮನಿಂದ ಹುಟ್ಟಿದೆನೋ ಅದೇ ರೀತಿ ನನ್ನ ಕ್ಷೇತ್ರದಲ್ಲಿಯೂ ಮಕ್ಕಳನ್ನು ಹೇಗೆ ಪಡೆಯಬಹುದು?”

01111018 ತಾಪಸಾ ಊಚುಃ|

01111018a ಅಸ್ತಿ ವೈ ತವ ಧರ್ಮಾತ್ಮನ್ವಿದ್ಮ ದೇವೋಪಮಂ ಶುಭಂ|

01111018c ಅಪತ್ಯಮನಘಂ ರಾಜನ್ವಯಂ ದಿವ್ಯೇನ ಚಕ್ಷುಷಾ||

ತಾಪಸರು ಹೇಳಿದರು: “ಧರ್ಮಾತ್ಮ! ಅನಘ! ನಿನಗೆ ದೇವೋಪಮ ಸುಂದರ ಮಕ್ಕಳಾಗುತ್ತಾರೆಂದು ನಮ್ಮ ದಿವ್ಯ ದೃಷ್ಟಿಯಿಂದ ತಿಳಿದಿದ್ದೇವೆ.

01111019a ದೈವದಿಷ್ಟಂ ನರವ್ಯಾಘ್ರ ಕರ್ಮಣೇಹೋಪಪಾದಯ|

01111019c ಅಕ್ಲಿಷ್ಟಂ ಫಲಮವ್ಯಗ್ರೋ ವಿಂದತೇ ಬುದ್ಧಿಮಾನ್ನರಃ||

ನರವ್ಯಾಘ್ರ! ತನ್ನ ಕರ್ಮಗಳಿಂದ ತಂದುಕೊಂಡ ದೈವಾದಿಷ್ಟ ಕಷ್ಟದಲ್ಲಿಯೂ ಬುದ್ಧಿವಂತ ಮನುಷ್ಯನು ಉತ್ತಮ ಫಲವನ್ನು ಹುಡುಕುತ್ತಾನೆ.

01111020a ತಸ್ಮಿನ್ದೃಷ್ಟೇ ಫಲೇ ತಾತ ಪ್ರಯತ್ನಂ ಕರ್ತುಮರ್ಹಸಿ|

01111020c ಅಪತ್ಯಂ ಗುಣಸಂಪನ್ನಂ ಲಬ್ಧ್ವಾ ಪ್ರೀತಿಮವಾಪ್ಸ್ಯಸಿ||

ಮಗೂ! ಕಾಣುತ್ತಿರುವ ಆ ಫಲಕ್ಕಾಗಿ ನೀನು ಪ್ರಯತ್ನ ಮಾಡಲೇ ಬೇಕು. ಗುಣಸಂಪನ್ನ ಮಕ್ಕಳನ್ನು ಪಡೆದು ನೀನು ಸಂತೋಷವನ್ನು ಹೊಂದುತ್ತೀಯೆ.””

01111021 ವೈಶಂಪಾಯನ ಉವಾಚ|

01111021a ತತ್ ಶ್ರುತ್ವಾ ತಾಪಸವಚಃ ಪಾಂಡುಶ್ಚಿಂತಾಪರೋಽಭವತ್|

01111021c ಆತ್ಮನೋ ಮೃಗಶಾಪೇನ ಜಾನನ್ನುಪಹತಾಂ ಕ್ರಿಯಾಂ||

ವೈಶಂಪಾಯನನು ಹೇಳಿದನು: “ತಪಸ್ವಿಗಳ ಆ ಮಾತುಗಳನ್ನು ಕೇಳಿ, ಜಿಂಕೆಯ ಶಾಪದಿಂದ ತಾನು ಆ ಕೆಲಸವನ್ನು ಮಾಡಲಿಕ್ಕಾಗುವುದಿಲ್ಲ ಎಂದು ತಿಳಿದಿದ್ದ ಪಾಂಡುವು ಚಿಂತಾಪರನಾದನು.

01111022a ಸೋಽಬ್ರವೀದ್ವಿಜನೇ ಕುಂತೀಂ ಧರ್ಮಪತ್ನೀಂ ಯಶಸ್ವಿನೀಂ|

01111022c ಅಪತ್ಯೋತ್ಪಾದನೇ ಯೋಗಮಾಪದಿ ಪ್ರಸಮರ್ಥಯನ್||

01111023a ಅಪತ್ಯಂ ನಾಮ ಲೋಕೇಷು ಪ್ರತಿಷ್ಠಾ ಧರ್ಮಸಂಹಿತಾ|

01111023c ಇತಿ ಕುಂತಿ ವಿದುರ್ಧೀರಾಃ ಶಾಶ್ವತಂ ಧರ್ಮಮಾದಿತಃ||

ಅವನು ಏಕಾಂತದಲ್ಲಿ ತನ್ನ ಧರ್ಮಪತ್ನಿ, ಯಶಸ್ವಿನೀ ಕುಂತಿಯಲ್ಲಿ ಹೇಳಿದನು: “ಮಕ್ಕಳನ್ನು ಪಡೆಯುವ ಹಲವಾರು ರೀತಿಗಳನ್ನು ಹೇಳಲಾಗಿದೆ. ಅಪತ್ಯ ಎಂಬ ಹೆಸರೇ ಧರ್ಮಸಂಹಿತಗಳಲ್ಲಿ ಲೋಕಗಳಲ್ಲಿ ನಡೆದುಕೊಂಡು ಬರುತ್ತಿದೆ. ಕುಂತಿ! ಹೀಗೆ ಮೊದಲಿನಿಂದರೂ ಶಾಶ್ವತ ಧರ್ಮವನ್ನು ತಿಳಿದ ಧೀರರು ತಿಳಿದಿದ್ದಾರೆ.

01111024a ಇಷ್ಟಂ ದತ್ತಂ ತಪಸ್ತಪ್ತಂ ನಿಯಮಶ್ಚ ಸ್ವನುಷ್ತಿತಃ|

01111024c ಸರ್ವಮೇವಾನಪತ್ಯಸ್ಯ ನ ಪಾವನಮಿಹೋಚ್ಯತೇ||

ತಾನಾಗಿಯೇ ದಾನವಾಗಿ ಕೊಟ್ಟಿದ್ದುದು, ತಪಿಸಿದ ತಪಸ್ಸು, ತಾನಾಗಿಯೇ ಅನುಷ್ಠಾನಗೊಳಿಸಿಕೊಂಡ ನಿಯಮಗಳು, ಇವೆಲ್ಲವೂ ಮಕ್ಕಳಿಲ್ಲದವನನ್ನು ಪಾವನಗೊಳಿಸುವುದಿಲ್ಲ. 

01111025a ಸೋಽಹಮೇವಂ ವಿದಿತ್ವೈತತ್ಪ್ರಪಶ್ಯಾಮಿ ಶುಚಿಸ್ಮಿತೇ|

01111025c ಅನಪತ್ಯಃ ಶುಭಾಽಲ್ಲೋಕಾನ್ನಾವಾಪ್ಸ್ಯಾಮೀತಿ ಚಿಂತಯನ್||

ಇವೆಲ್ಲವನ್ನೂ ತಿಳಿದ ನಾನು ಮುಂದಿನದನ್ನು ಯೋಚಿಸುತ್ತಿದ್ದೇನೆ. ಶುಚಿಸ್ಮಿತೇ! ಮಕ್ಕಳಿಲ್ಲದವನು ಶುಭ ಲೋಕಗಳನ್ನು ಹೊಂದುವುದಿಲ್ಲ ಎಂದು ಚಿಂತಿಸುತ್ತಿದ್ದೇನೆ.

01111026a ಮೃಗಾಭಿಶಾಪಾನ್ನಷ್ಟಂ ಮೇ ಪ್ರಜನಂ ಹ್ಯಕೃತಾತ್ಮನಃ|

01111026c ನೃಶಂಸಕಾರಿಣೋ ಭೀರು ಯಥೈವೋಪಹತಂ ತಥಾ||

ನಾನೇ ಮಾಡಿದ ಕರ್ಮದಿಂದ ಜಿಂಕೆಯ ಶಾಪಕ್ಕೊಳಗಾಗಿ ಮಕ್ಕಳನ್ನು ಪಡೆಯುವ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಭೀರು! ಈ ರೀತಿ ಕ್ರೂರ ಕರ್ಮದಿಂದ ನಾನು ಹತನಾಗಿದ್ದೇನೆ.

01111027a ಇಮೇ ವೈ ಬಂಧುದಾಯಾದಾಃ ಷಟ್ಪುತ್ರಾ ಧರ್ಮದರ್ಶನೇ|

01111027c ಷಡೇವಾಬಂಧುದಾಯಾದಾಃ ಪುತ್ರಾಸ್ತಾಂಶೃಣು ಮೇ ಪೃಥೇ||

ಧರ್ಮದರ್ಶನದ ಪ್ರಕಾರ ಒಟ್ಟು ಆರು ಪ್ರಕಾರದ ಪುತ್ರರು ಬಂಧು-ದಾಯಾದಿಗಳು ಆಗಬಲ್ಲರು ಮತ್ತು ಇನ್ನು ಆರು ಪ್ರಕಾರದ ಪುತ್ರರು ಬಂಧು ದಯಾದಿಗಳು ಎನ್ನಿಸಿಕೊಳ್ಳಲಾರರು. ಪೃಥೇ! ಅವುಗಳ ಕುರಿತು ಹೇಳುತ್ತೇನೆ ಕೇಳು.

01111028a ಸ್ವಯಂಜಾತಃ ಪ್ರಣೀತಶ್ಚ ಪರಿಕ್ರೀತಶ್ಚ ಯಃ ಸುತಃ|

01111028c ಪೌನರ್ಭವಶ್ಚ ಕಾನೀನಃ ಸ್ವೈರಿಣ್ಯಾಂ ಯಶ್ಚ ಜಾಯತೇ||

ತನಗೇ ಹುಟ್ಟಿದ, ಬೇರೆಯವರು ಕೊಟ್ಟ, ಕ್ರಯಕ್ಕೆ ಖರೀದಿಸಿದ, ತನ್ನ ವಿಧವೆಯಲ್ಲಿ ಹುಟ್ಟಿದ, ವಿವಾಹಕ್ಕೆ ಮೊದಲೇ ಪತ್ನಿಯಲ್ಲಿ ಹುಟ್ಟಿದ ಮತ್ತು ವೇಶ್ಯೆಯಲ್ಲಿ ಹುಟ್ಟಿದ ಮಗನು ಬಂಧು ದಾಯಾದಿಯಾಗಬಲ್ಲನು.

01111029a ದತ್ತಃ ಕ್ರೀತಃ ಕೃತ್ರಿಮಶ್ಚ ಉಪಗಚ್ಛೇತ್ಸ್ವಯಂ ಚ ಯಃ|

01111029c ಸಹೋದೋ ಜಾತರೇತಾಶ್ಚ ಹೀನಯೋನಿಧೃತಶ್ಚ ಯಃ||

ಬೇರೆಯವರಿಗೆ ಕೊಟ್ಟ, ಮಾರಿದ, ಕೃತ್ರಿಮವಾಗಿ ಹುಟ್ಟಿದ, ತಾನಾಗಿಯೇ ಹುಟ್ಟಿದ, ಗೊತ್ತಿಲ್ಲದವನಿಗೆ ಹುಟ್ಟಿದ, ಹೀನಯೋನಿಯಲ್ಲಿ ಹುಟ್ಟಿದ ಮಗನು ಬಂಧು ದಾಯಾದಿ ಎನ್ನಿಸಿಕೊಳ್ಳಲಾರ.

01111030a ಪೂರ್ವಪೂರ್ವತಮಾಭಾವೇ ಮತ್ವಾ ಲಿಪ್ಸೇತ ವೈ ಸುತಂ|

01111030c ಉತ್ತಮಾದವರಾಃ ಪುಂಸಃ ಕಾಂಕ್ಷಂತೇ ಪುತ್ರಮಾಪದಿ||

ಮೊದಲಿನಿಂದ ಪ್ರಾರಂಭಿಸಿ ಕೊನೆಯವರೆಗೆ ಮಕ್ಕಳನ್ನು ಪಡೆಯಲು ಪ್ರಯತ್ನಿಸಬೇಕು. ಪುತ್ರರನ್ನು ಪಡೆಯಲು ಬಯಸಿದವರು ಉತ್ತಮ ಮತ್ತು ಶ್ರೇಷ್ಠರಿಂದ ಪುತ್ರರನ್ನು ಪಡೆಯಬೇಕು.

01111031a ಅಪತ್ಯಂ ಧರ್ಮಫಲದಂ ಶ್ರೇಷ್ಠಂ ವಿಂದಂತಿ ಸಾಧವಃ|

01111031c ಆತ್ಮಶುಕ್ರಾದಪಿ ಪೃಥೇ ಮನುಃ ಸ್ವಾಯಂಭುವೋಽಬ್ರವೀತ್||

ಪೃಥಾ! ಸ್ವಾಯಂಭು ಮನುವು ಹೇಳಿದಂತೆ ಸಾಧುಗಳು ತಮ್ಮ ವೀರ್ಯದಿಂದ ಹುಟ್ಟದಿದ್ದರೂ ಮಕ್ಕಳನ್ನು ಧರ್ಮಫಲದಾಯಕರೆಂದೂ ಶ್ರೇಷ್ಠರೆಂದೂ ತಿಳಿಯುತ್ತಾರೆ.

01111032a ತಸ್ಮಾತ್ಪ್ರಹೇಷ್ಯಾಂಯದ್ಯ ತ್ವಾಂ ಹೀನಃ ಪ್ರಜನನಾತ್ಸ್ವಯಂ|

01111032c ಸದೃಶಾಚ್ಶ್ರೇಯಸೋ ವಾ ತ್ವಂ ವಿದ್ಧ್ಯಪತ್ಯಂ ಯಶಸ್ವಿನಿ||

ಆದುದರಿಂದ ಸ್ವಯಂ ಮಕ್ಕಳನ್ನು ಪಡೆಯಲು ಅಶಕ್ಯನಾದ ನಾನು ನನ್ನ ಯಶಸ್ವಿನಿ ಪತ್ನಿಯಾದ ನಿನ್ನನ್ನು ಇಂದು ಕಳುಹಿಸುತ್ತಿದ್ದೇನೆ. ನನ್ನ ಸರಿಸಮನಾದ ಅಥವಾ ನನಗಿಂಥಲೂ ಶ್ರೇಷ್ಠನಾದ ಯಾರಿಂದಲಾದರೂ ನನಗೆ ಒಂದು ಮಗುವನ್ನು ಪಡೆದುಕೊಂಡು ಬಾ.

01111033a ಶೃಣು ಕುಂತಿ ಕಥಾಂ ಚೇಮಾಂ ಶಾರದಂಡಾಯನೀಂ ಪ್ರತಿ|

01111033c ಯಾ ವೀರಪತ್ನೀ ಗುರುಭಿರ್ನಿಯುಕ್ತಾಪತ್ಯಜನ್ಮನಿ||

ಕುಂತಿ! ಹಿರಿಯರಿಂದ ಮಕ್ಕಳನ್ನು ಪಡೆಯಲು ನಿಯುಕ್ತಗೊಂಡ ಆ ವೀರಪತ್ನಿ ಶಾರದಂಡಾಯನಿಯ ಕಥೆಯನ್ನು ಕೇಳು.

01111034a ಪುಷ್ಪೇಣ ಪ್ರಯತಾ ಸ್ನಾತಾ ನಿಶಿ ಕುಂತಿ ಚತುಷ್ಪಥೇ|

01111034c ವರಯಿತ್ವಾ ದ್ವಿಜಂ ಸಿದ್ಧಂ ಹುತ್ವಾ ಪುಂಸವನೇಽನಲಂ||

01111035a ಕರ್ಮಣ್ಯವಸಿತೇ ತಸ್ಮಿನ್ಸಾ ತೇನೈವ ಸಹಾವಸತ್|

01111035c ತತ್ರ ತ್ರೀಂಜನಯಾಮಾಸ ದುರ್ಜಯಾದೀನ್ಮಹಾರಥಾನ್||

ಕುಂತಿ! ಅವಳು ಸ್ನಾತಳಾಗಿ ರಾತ್ರಿಯಲ್ಲಿ ನಾಲ್ಕು ರಸ್ತೆಗಳು ಕೂಡುವಲ್ಲಿ ಒಂದು ಹೂವನ್ನಿತ್ತು ಓರ್ವ ಸಿದ್ಧ ದ್ವಿಜನನ್ನು ವರಿಸಿದಳು. ಮಗನಿಗಾಗಿ ಅಗ್ನಿಯಲ್ಲಿ ಆಹುತಿ ಕರ್ಮಗಳನ್ನು ಪೂರೈಸಿ ಅವಳು ಅವನ ಜೊತೆ ವಾಸಿಸಿದಳು. ಅವನು ಅವಳಲ್ಲಿ ದುರ್ಜಯನೇ ಮೊದಲಾದ ಮೂರು ಮಹಾರಥಿಗಳನ್ನು ಪಡೆದನು.

01111036a ತಥಾ ತ್ವಮಪಿ ಕಲ್ಯಾಣಿ ಬ್ರಾಹ್ಮಣಾತ್ತಪಸಾಧಿಕಾತ್|

01111036c ಮನ್ನಿಯೋಗಾದ್ಯತ ಕ್ಷಿಪ್ರಮಪತ್ಯೋತ್ಪಾದನಂ ಪ್ರತಿ||

ಕಲ್ಯಾಣಿ! ನೀನೂ ಕೂಡ ಹಾಗೆ ನನ್ನ ಅಪ್ಪಣೆಯಂತೆ ತಪಸ್ಸಿನಲ್ಲಿ ಅತ್ಯುತ್ತಮ ಬ್ರಾಹ್ಮಣನಿಂದ ಇಂದು ಬೇಗನೇ ಮಗನನ್ನು ಪಡೆಯಬೇಕು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುಪೃಥಾಸಂವಾದೇ ಏಕಾದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುಪೃಥಾಸಂವಾದ ಎನ್ನುವ ನೂರಾಹನ್ನೊಂದನೆಯ ಅಧ್ಯಾಯವು.

Comments are closed.