ಆದಿ ಪರ್ವ: ಸಂಭವ ಪರ್ವ
೧೦೯
ಜನಮೇಜಯನು ಪಾಂಡವರ ಜನನದ ಕುರಿತು ಕೇಳುವುದು (೧-೫). ಜಿಂಕೆಯ ರೂಪದಲ್ಲಿ ರತಿಸುಖವನ್ನು ಪಡೆಯುತಿದ್ದ ಮುನಿ ಕಿಂದಮ ದಂಪತಿಗಳನ್ನು ಹೊಡೆದುದಕ್ಕೆ, ಸಂಭೋಗದ ಸಮಯದಲ್ಲಿ ಮೃತ್ಯುವೆಂದು ಪಾಂಡುವಿಗೆ ಶಾಪ (೬-೩೧).
01109001 ಜನಮೇಜಯ ಉವಾಚ|
01109001a ಕಥಿತೋ ಧಾರ್ತರಾಷ್ಟ್ರಾಣಾಮಾರ್ಷಃ ಸಂಭವ ಉತ್ತಮಃ|
01109001c ಅಮಾನುಷೋ ಮಾನುಷಾಣಾಂ ಭವತಾ ಬ್ರಹ್ಮವಿತ್ತಮ||
ಜನಮೇಜಯನು ಹೇಳಿದನು: “ಬ್ರಹ್ಮವಿತ್ತಮ! ಮನುಷ್ಯ ಧಾರ್ತರಾಷ್ಟ್ರರ ಘೋರ, ಉತ್ತಮ, ಅಮಾನುಷ ಜನ್ಮದ ಕುರಿತು ಹೇಳಿದೆ.
01109002a ನಾಮಧೇಯಾನಿ ಚಾಪ್ಯೇಷಾಂ ಕಥ್ಯಮಾನಾನಿ ಭಾಗಶಃ|
01109002c ತ್ವತ್ತಃ ಶ್ರುತಾನಿ ಮೇ ಬ್ರಹ್ಮನ್ಪಾಂಡವಾನಾಂ ತು ಕೀರ್ತಯ||
ಅವರ ಹೆಸರುಗಳನ್ನೂ ಕೂಡ ನೀನು ನನಗೆ ಸಂಪೂರ್ಣವಾಗಿ ತಿಳಿಸಿದ್ದೀಯೆ. ಬ್ರಹ್ಮನ್! ಈಗ ಪಾಂಡವರ ಕುರಿತು ಹೇಳು.
01109003a ತೇ ಹಿ ಸರ್ವೇ ಮಹಾತ್ಮಾನೋ ದೇವರಾಜಪರಾಕ್ರಮಾಃ|
01109003c ತ್ವಯೈವಾಂಶಾವತರಣೇ ದೇವಭಾಗಾಃ ಪ್ರಕೀರ್ತಿತಾಃ||
ಈ ಸರ್ವ ಮಹಾತ್ಮರೂ ದೇವರಾಜನಂತೆ ಪರಾಕ್ರಮಿಗಳಾಗಿದ್ದು ದೇವತೆಗಳ ಅಂಶಗಳೆಂದು ಅಂಶಾವತರಣದಲ್ಲಿ ನೀನೇ ಹೇಳಿದ್ದೆ.
01109004a ತಸ್ಮಾದಿಚ್ಛಾಮ್ಯಹಂ ಶ್ರೋತುಮತಿಮಾನುಷಕರ್ಮಣಾಂ|
01109004c ತೇಷಾಮಾಜನನಂ ಸರ್ವಂ ವೈಶಂಪಾಯನ ಕೀರ್ತಯ||
ವೈಶಂಪಾಯನ! ಈ ಅತಿಮಾನುಷಕರ್ಮಿಗಳ ಜನನದ ಕುರಿತು ಸರ್ವವನ್ನೂ ಕೇಳಬಯಸುತ್ತೇನೆ. ಹೇಳು.”
01109005 ವೈಶಂಪಾಯನ ಉವಾಚ|
01109005a ರಾಜಾ ಪಾಂಡುರ್ಮಹಾರಣ್ಯೇ ಮೃಗವ್ಯಾಲನಿಷೇವಿತೇ|
01109005c ವನೇ ಮೈಥುನಕಾಲಸ್ಥಂ ದದರ್ಶ ಮೃಗಯೂಥಪಂ||
ವೈಶಂಪಾಯನನು ಹೇಳಿದನು: “ಒಮ್ಮೆ ರಾಜ ಪಾಂಡುವು ಜಿಂಕೆ ಮತ್ತು ಕ್ರೂರ ಮೃಗಗಳಿಂದೊಡಗೂಡಿದ ಮಹಾರಣ್ಯದಲ್ಲಿ ಸಂಭೋಗ ನಿರತ ಜಿಂಕೆಯ ಜೋಡಿಯನ್ನು ಕಂಡನು.
01109006a ತತಸ್ತಾಂ ಚ ಮೃಗೀಂ ತಂ ಚ ರುಕ್ಮಪುಂಖೈಃ ಸುಪತ್ರಿಭಿಃ|
01109006c ನಿರ್ಬಿಭೇದ ಶರೈಸ್ತೀಕ್ಷ್ಣೈಃ ಪಾಂಡುಃ ಪಂಚಭಿರಾಶುಗೈಃ||
ಆಗ ಪಾಂಡುವು ಗಂಡು ಮತ್ತು ಹೆಣ್ಣುಜಿಂಕೆಗಳೆರಡನ್ನೂ ಅತಿವೇಗದಲ್ಲಿ ಚಲಿಸುತ್ತಿದ್ದ, ಬಂಗಾರದ ಬಣ್ಣದ, ಐದು ಸುಂದರ ತೀಕ್ಷ್ಣಬಾಣಗಳಿಂದ ಹೊಡೆದನು.
01109007a ಸ ಚ ರಾಜನ್ಮಹಾತೇಜಾ ಋಷಿಪುತ್ರಸ್ತಪೋಧನಃ|
01109007c ಭಾರ್ಯಯಾ ಸಹ ತೇಜಸ್ವೀ ಮೃಗರೂಪೇಣ ಸಂಗತಃ||
ರಾಜನ್! ಅವನು ತಪೋಧನ ಋಷಿಯೋರ್ವನ ಪುತ್ರನಾಗಿದ್ದು ಮಹಾತೇಜಸ್ವಿಯಾಗಿದ್ದನು. ಆ ತೇಜಸ್ವಿಯು ಜಿಂಕೆಯ ರೂಪದಲ್ಲಿ ತನ್ನ ಪತ್ನಿಯೊಡನೆ ಕೂಡುತ್ತಿದ್ದನು.
01109008a ಸಂಸಕ್ತಸ್ತು ತಯಾ ಮೃಗ್ಯಾ ಮಾನುಷೀಮೀರಯನ್ಗಿರಂ|
01109008c ಕ್ಷಣೇನ ಪತಿತೋ ಭೂಮೌ ವಿಲಲಾಪಾಕುಲೇಂದ್ರಿಯಃ||
ಹೆಣ್ಣು ಜಿಂಕೆಯೊಡನೆ ಕೂಡಿಕೊಂಡಿದ್ದ ಅವನು ತಕ್ಷಣವೇ ಭೂಮಿಯ ಮೇಲೆ ಬಿದ್ದು ಶಕ್ತಿಯು ಕ್ಷೀಣಿಸುತ್ತಿದ್ದಂತೆಯೇ ಮಾನವ ಧ್ವನಿಯಲ್ಲಿ ವಿಲಪಿಸಿದನು.
01109009 ಮೃಗ ಉವಾಚ|
01109009a ಕಾಮಮನ್ಯುಪರೀತಾಪಿ ಬುದ್ಧ್ಯಂಗರಹಿತಾಪಿ ಚ|
01109009c ವರ್ಜಯಂತಿ ನೃಶಂಸಾನಿ ಪಾಪೇಷ್ವಭಿರತಾ ನರಾಃ||
ಮೃಗವು ಹೇಳಿತು: “ಪಾಪದಲ್ಲಿಯೇ ರುಚಿಹೊಂದಿದ ನರರು ಬುದ್ಧಿರಹಿತರಾದರೂ ಕೂಡ ಕಾಮ-ಕ್ರೋಧಗಳಿಂದ ಆವೃತರಾದವರನ್ನು ಕೊಲ್ಲುವುದಿಲ್ಲ.
01109010a ನ ವಿಧಿಂ ಗ್ರಸತೇ ಪ್ರಜ್ಞಾ ಪ್ರಜ್ಞಾಂ ತು ಗ್ರಸತೇ ವಿಧಿಃ|
01109010c ವಿಧಿಪರ್ಯಾಗತಾನರ್ಥಾನ್ ಪ್ರಜ್ಞಾ ನ ಪ್ರತಿಪದ್ಯತೇ||
ಪ್ರಜ್ಞೆಯು ವಿಧಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ. ವಿಧಿಯೇ ಪ್ರಜ್ಞೆಯನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ವಿಧಿ ನಿಶೇಧಿಸಿದ ಏನನ್ನೂ ಪ್ರಜ್ಞೆಯು ಪಡೆಯಲು ಸಾಧ್ಯವಿಲ್ಲ.
01109011a ಶಶ್ವದ್ಧರ್ಮಾತ್ಮನಾಂ ಮುಖ್ಯೇ ಕುಲೇ ಜಾತಸ್ಯ ಭಾರತ|
01109011c ಕಾಮಲೋಭಾಭಿಭೂತಸ್ಯ ಕಥಂ ತೇ ಚಲಿತಾ ಮತಿಃ||
ಭಾರತ! ನೀನು ಸದ್ಧರ್ಮಾತ್ಮರ ಮುಖ್ಯ ಕುಲದಲ್ಲಿ ಜನಿಸಿದರೂ ಕೂಡ ಹೇಗೆ ನಿನ್ನ ಬುದ್ಧಿಯನ್ನು ಕಾಮಲೋಭದಲ್ಲಿ ತೊಡಗಿಸಿದೆ?”
01109012 ಪಾಂಡುರುವಾಚ|
01109012a ಶತ್ರೂಣಾಂ ಯಾ ವಧೇ ವೃತ್ತಿಃ ಸಾ ಮೃಗಾಣಾಂ ವಧೇ ಸ್ಮೃತಾ|
01109012c ರಾಜ್ಞಾಂ ಮೃಗ ನ ಮಾಂ ಮೋಹಾತ್ತ್ವಂ ಗರ್ಹಯಿತುಮರ್ಹಸಿ||
ಪಾಂಡುವು ಹೇಳಿದನು: “ಶತೃಗಳನ್ನು ವಧಿಸುವಂತೆ ಮೃಗಗಳನ್ನೂ ವಧಿಸುವುದು ರಾಜ ಪ್ರವೃತ್ತಿಯೆಂದೇ ಹೇಳುತ್ತಾರೆ. ಜಿಂಕೆಯೇ! ಮೋಹದಲ್ಲಿದ್ದ ನೀನು ನನ್ನನ್ನು ದೂರುವುದು ಸರಿಯಲ್ಲ.
01109013a ಅಚ್ಛದ್ಮನಾಮಾಯಯಾ ಚ ಮೃಗಾಣಾಂ ವಧ ಇಷ್ಯತೇ|
01109013c ಸ ಏವ ಧರ್ಮೋ ರಾಜ್ಞಾಂ ತು ತದ್ವಿದ್ವಾನ್ಕಿಂ ನು ಗರ್ಹಸೇ||
ಮರೆಯಲ್ಲಿದ್ದುಕೊಂಡು ಅಥವಾ ಮಾಯೆಯಿಂದ ಮೃಗಗಳನ್ನು ಕೊಲ್ಲಬಾರದು ಎನ್ನುವುದು ರಾಜರ ಧರ್ಮ. ಇದು ನಿನಗೆ ತಿಳಿದಿದೆ. ಆದರೂ ನನ್ನನ್ನು ಏಕೆ ದೂರುತ್ತಿರುವೆ?
01109014a ಅಗಸ್ತ್ಯಃ ಸತ್ರಮಾಸೀನಶ್ಚಚಾರ ಮೃಗಯಾಂ ಋಷಿಃ|
01109014c ಆರಣ್ಯಾನ್ಸರ್ವದೈವತ್ಯಾನ್ಮೃಗಾನ್ಪ್ರೋಕ್ಷ್ಯ ಮಹಾವನೇ||
ಸತ್ರನಿರತ ಋಷಿ ಅಗಸ್ತ್ಯನು ಬೇಟೆಯಾಡಲು ಅರಣ್ಯಕ್ಕೆ ಹೋದನು. ಆ ಮಹಾವನದಲ್ಲಿ ಅವನು ದೇವತೆಗಳಿಗಾಗಿ ಎಲ್ಲೆಡೆಯಲ್ಲಿಯೂ ಜಿಂಕೆಗಳ ಪ್ರೋಕ್ಷಣೆಯನ್ನೇ ಮಾಡಿದನು.
01109015a ಪ್ರಮಾಣದೃಷ್ಟಧರ್ಮೇಣ ಕಥಮಸ್ಮಾನ್ವಿಗರ್ಹಸೇ|
01109015c ಅಗಸ್ತ್ಯಸ್ಯಾಭಿಚಾರೇಣ ಯುಷ್ಮಾಕಂ ವೈ ವಪಾ ಹುತಾ||
ಪ್ರಮಾಣದೃಷ್ಟ ಧರ್ಮದ ಪ್ರಕಾರ ನನ್ನನ್ನು ಹೇಗೆ ದೂರುತ್ತೀಯೆ? ಅಗಸ್ತ್ಯನ ಅಭಿಚಾರಣೆಯಿಂದ ನೀವೆಲ್ಲರೂ ಈಗಾಗಲೇ ಆಹುತಿಗಳಾಗಿಬಿಟ್ಟಿದ್ದೀರಿ.”
01109016 ಮೃಗ ಉವಾಚ|
01109016a ನ ರಿಪೂನ್ವೈ ಸಮುದ್ದಿಶ್ಯ ವಿಮುಂಚಂತಿ ಪುರಾ ಶರಾನ್|
01109016c ರಂಧ್ರ ಏಷಾಂ ವಿಶೇಷೇಣ ವಧಕಾಲಃ ಪ್ರಶಸ್ಯತೇ||
ಮೃಗವು ಹೇಳಿತು: “ಬಾಣಗಳನ್ನು ಬಿಡುವುದರ ಮೊದಲು ನಿನ್ನ ಶತ್ರುವಿನ ಕುರಿತು ಸ್ವಲ್ಪ ಯೋಚಿಸಬೇಕಿತ್ತು. ಅವರ ಶಕ್ತಿ ಕ್ಷೀಣಿಸುತ್ತಿರುವಾಗ ಕೊಲ್ಲುವುದು ವಿಶೇಷ ಕಾಲವೆಂದು ಹೇಳುತ್ತಾರೆ.”
01109017 ಪಾಂಡುರುವಾಚ|
01109017a ಪ್ರಮತ್ತಮಪ್ರಮತ್ತಂ ವಾ ವಿವೃತಂ ಘ್ನಂತಿ ಚೌಜಸಾ|
01109017c ಉಪಾಯೈರಿಷುಭಿಸ್ತೀಕ್ಷ್ಣೈಃ ಕಸ್ಮಾನ್ಮೃಗ ವಿಗರ್ಹಸೇ||
ಪಾಂಡುವು ಹೇಳಿದನು: “ಪ್ರಮತ್ತನಾಗಿರಲಿ ಅಥವಾ ಅಪ್ರಮತ್ತನಾಗಿರಲಿ, ಹೊರಗೆ ಕಂಡಾಗ ಅವನನ್ನು ಬಲ-ಉಪಾಯಗಳೊಂದಿಗೆ ತೀಕ್ಷ್ಣ ಬಾಣಗಳಿಂದ ಕೊಲ್ಲುತ್ತಾರೆ. ಜಿಂಕೆಯೇ! ಹೀಗಿದ್ದಾಗ ನನ್ನನ್ನೇಕೆ ದೂರುತ್ತಿದ್ದೀಯೆ?”
01109018 ಮೃಗ ಉವಾಚ|
01109018a ನಾಹಂ ಘ್ನಂತಂ ಮೃಗಾನ್ರಾಜನ್ವಿಗರ್ಹೇ ಆತ್ಮಕಾರಣಾತ್|
01109018c ಮೈಥುನಂ ತು ಪ್ರತೀಕ್ಷ್ಯಂ ಮೇ ಸ್ಯಾತ್ತ್ವಯೇಹಾನೃಶಂಸತಃ||
ಮೃಗವು ಹೇಳಿತು: “ರಾಜನ್! ನೀನು ಮೃಗವನ್ನು ಕೊಂದದ್ದಕ್ಕೆ ನನ್ನನ್ನೇ ಕಾರಣವನಾಗಿಟ್ಟುಕೊಂಡು ದೂರುತ್ತಿಲ್ಲ. ಸಂಭೋಗದಲ್ಲಿ ತೊಡಗಿದ್ದ ನಾನು ಮುಗಿಸುವವರೆಗೆ ಕಾದು ನಂತರ ಹೊಡೆಯಬಹುದಿತ್ತಲ್ಲ!
01109019a ಸರ್ವಭೂತಹಿತೇ ಕಾಲೇ ಸರ್ವಭೂತೇಪ್ಸಿತೇ ತಥಾ|
01109019c ಕೋ ಹಿ ವಿದ್ವಾನ್ಮೃಗಂ ಹನ್ಯಾಚ್ಚರಂತಂ ಮೈಥುನಂ ವನೇ|
ಸರ್ವ ಜೀವಿಗಳಿಗೂ ಹಿತಕರವಾದ ಮತ್ತು ಸರ್ವ ಜೀವಿಗಳೂ ಬಯಸುವ ಮೈಥುನ ಕಾಲದಲ್ಲಿರುವ ವನ್ಯ ಮೃಗಗಳನ್ನು ತಿಳಿದ ಯಾರು ತಾನೆ ಕೊಂದಾರು?
01109019e ಪುರುಷಾರ್ಥಫಲಂ ಕಾಂತಂ ಯತ್ತ್ವಯಾ ವಿತಥಂ ಕೃತಂ||
01109020a ಪೌರವಾಣಾಂ ಋಷೀಣಾಂ ಚ ತೇಷಾಮಕ್ಲಿಷ್ಟಕರ್ಮಣಾಂ|
01109020c ವಂಶೇ ಜಾತಸ್ಯ ಕೌರವ್ಯ ನಾನುರೂಪಮಿದಂ ತವ||
ಅಕ್ಲಿಷ್ಟಕರ್ಮಿ ಋಷಿ ಪೌರವರ ವಂಶದಲ್ಲಿ ಹುಟ್ಟಿದ ಕೌರವ್ಯ! ಓರ್ವನು ಬಯಸಿದ ಪುರುಷಾರ್ಥಫಲವು ದೊರೆಯದಂತೆ ಮಾಡಿದ ನಿನ್ನ ಈ ಕೃತ್ಯವು ನಿನಗೆ ಅನುರೂಪವಲ್ಲ.
01109021a ನೃಶಂಸಂ ಕರ್ಮ ಸುಮಹತ್ಸರ್ವಲೋಕವಿಗರ್ಹಿತಂ|
01109021c ಅಸ್ವರ್ಗ್ಯಮಯಶಸ್ಯಂ ಚ ಅಧರ್ಮಿಷ್ಠಂ ಚ ಭಾರತ||
ಭಾರತ! ಈ ಅಸ್ವರ್ಗ್ಯ, ಅಯಶಸ್ವಿ, ಅಧರ್ಮಿಷ್ಠ ಕ್ರೂರ ಕರ್ಮವನ್ನು ಸರ್ವಲೋಕವೂ ಅಲ್ಲಗಳೆಯುತ್ತದೆ.
01109022a ಸ್ತ್ರೀಭೋಗಾನಾಂ ವಿಶೇಷಜ್ಞಃ ಶಾಸ್ತ್ರಧರ್ಮಾರ್ಥತತ್ತ್ವವಿತ್|
01109022c ನಾರ್ಹಸ್ತ್ವಂ ಸುರಸಂಕಾಶ ಕರ್ತುಮಸ್ವರ್ಗ್ಯಮೀದೃಶಂ||
ಸ್ತ್ರೀಭೋಗಗಳ ಕುರಿತು ವಿಶೇಷವಾಗಿ ತಿಳಿದ, ಶಾಸ್ತ್ರ-ಧರ್ಮಾರ್ಥಗಳ ತತ್ವಗಳನ್ನು ತಿಳಿದ, ಸುರಸಂಕಾಶ ನೀನು ಈ ರೀತಿ ಅಸ್ವರ್ಗ್ಯ ಕೃತ್ಯವನ್ನು ಮಾಡಬಾರದಾಗಿತ್ತು.
01109023a ತ್ವಯಾ ನೃಶಂಸಕರ್ತಾರಃ ಪಾಪಾಚಾರಾಶ್ಚ ಮಾನವಾಃ|
01109023c ನಿಗ್ರಾಹ್ಯಾಃ ಪಾರ್ಥಿವಶ್ರೇಷ್ಠ ತ್ರಿವರ್ಗಪರಿವರ್ಜಿತಾಃ||
ಪಾರ್ಥಿವಶ್ರೇಷ್ಠ! ನೀನೇ ಕ್ರೂರಕರ್ಮಿ, ಪಾಪಾಚಾರಿ ಮತ್ತು ತ್ರಿವರ್ಗಪರಿವರ್ಜಿತ ಮನುಷ್ಯರನ್ನು ನಿಗ್ರಹಿಸುವವನು.
01109024a ಕಿಂ ಕೃತಂ ತೇ ನರಶ್ರೇಷ್ಠ ನಿಘ್ನತೋ ಮಾಮನಾಗಸಂ|
01109024c ಮುನಿಂ ಮೂಲಫಲಾಹಾರಂ ಮೃಗವೇಷಧರಂ ನೃಪ|
01109024e ವಸಮಾನಮರಣ್ಯೇಷು ನಿತ್ಯಂ ಶಮಪರಾಯಣಂ||
ನರಶ್ರೇಷ್ಠ! ನೃಪ! ಗಡ್ಡೆ-ಫಲಗಳನ್ನು ತಿಂದು ನಿತ್ಯವೂ ಶಮಪರಾಯಣನಾಗಿ ಅರಣ್ಯದಲ್ಲಿ ವಾಸಿಸುವ, ಮೃಗವೇಷಧರ, ಅನಾಗಸ ಮುನಿ ನನ್ನನ್ನು ಕೊಂದು ನಿನಗೆ ಏನು ದೊರೆಯಿತು?
01109025a ತ್ವಯಾಹಂ ಹಿಂಸಿತೋ ಯಸ್ಮಾತ್ತಸ್ಮಾತ್ತ್ವಾಮಪ್ಯಸಂಶಯಂ|
01109025c ದ್ವಯೋರ್ನೃಶಂಸಕರ್ತಾರಮವಶಂ ಕಾಮಮೋಹಿತಂ|
01109025e ಜೀವಿತಾಂತಕರೋ ಭಾವ ಏವಮೇವಾಗಮಿಷ್ಯತಿ||
ಮೋಹಪರವಶರಾದ ಈ ನಮ್ಮ ಜೋಡಿಯನ್ನು ಹೇಗೆ ಹಿಂಸಿಸಿದ್ದೀಯೋ ಹಾಗೆ ನೀನೂ ಕೂಡ ಕಾಮ ಮೋಹಿತನಾದಾಗ ನಿನ್ನ ಜೀವವು ಕೊನೆಗೊಳ್ಳುತ್ತದೆ. ನಿಸ್ಸಂಶಯವಾಗಿಯೂ ಹೀಗೆಯೇ ಆಗುತ್ತದೆ.
01109026a ಅಹಂ ಹಿ ಕಿಂದಮೋ ನಾಮ ತಪಸಾಪ್ರತಿಮೋ ಮುನಿಃ|
01109026c ವ್ಯಪತ್ರಪನ್ಮನುಷ್ಯಾಣಾಂ ಮೃಗ್ಯಾಂ ಮೈಥುನಮಾಚರಂ||
01109027a ಮೃಗೋ ಭೂತ್ವಾ ಮೃಗೈಃ ಸಾರ್ಧಂ ಚರಾಮಿ ಗಹನೇ ವನೇ|
01109027c ನ ತು ತೇ ಬ್ರಹ್ಮಹತ್ಯೇಯಂ ಭವಿಷ್ಯತ್ಯವಿಜಾನತಃ|
01109027e ಮೃಗರೂಪಧರಂ ಹತ್ವಾ ಮಾಮೇವಂ ಕಾಮಮೋಹಿತಂ||
ನಾನು ಕಿಂದಮ ಎಂಬ ಹೆಸರಿನ ಅಪ್ರತಿಮ ತಪಸ್ವಿ ಮುನಿ. ಮನುಷ್ಯರಿಂದ ನಾಚಿಕೊಂಡು ನಾನು ಮೃಗರೂಪದಲ್ಲಿ ಮೈಥುನದಲ್ಲಿ ತೊಡಗಿದ್ದೆ. ಜಿಂಕೆಯಾಗಿ ಜಿಂಕೆಯೊಡನೆ ಈ ದಟ್ಟ ವನದಲ್ಲಿ ಸಂಚರಿಸುತ್ತೇನೆ. ಜಿಂಕೆಯ ರೂಪವನ್ನು ಧರಿಸಿ ಕಾಮಮೋಹಿತನಾದ ನನ್ನನ್ನು ತಿಳಿಯದೆಯೇ ನೀನು ಕೊಂದಿದ್ದುದರಿಂದ ನಿನಗೆ ಬ್ರಹ್ಮಹತ್ಯಾ ದೋಷವು ತಗಲುವುದಿಲ್ಲ.
01109028a ಅಸ್ಯ ತು ತ್ವಂ ಫಲಂ ಮೂದ ಪ್ರಾಪ್ಸ್ಯಸೀದೃಶಮೇವ ಹಿ|
01109028c ಪ್ರಿಯಯಾ ಸಹ ಸಂವಾಸಂ ಪ್ರಾಪ್ಯ ಕಾಮವಿಮೋಹಿತಃ|
01109028e ತ್ವಮಪ್ಯಸ್ಯಾಮವಸ್ಥಾಯಾಂ ಪ್ರೇತಲೋಕಂ ಗಮಿಷ್ಯಸಿ||
ಮೂಢ! ಆದರೆ ನೀನೂ ಕೂಡ ಇದೇ ಫಲವನ್ನು ಪಡೆಯುತ್ತೀಯೆ. ಕಾಮವಿಮೋಹಿತನಾಗಿ ಪ್ರಿಯೆಯ ಜೊತೆ ಸಂಭೋಗ ಮಾಡುವಾಗ ನೀನೂ ಕೂಡ ಇದೇ ಅವಸ್ಥೆಯಲ್ಲಿ ಪ್ರೇತಲೋಕವನ್ನು ಸೇರುತ್ತೀಯೆ.
01109029a ಅಂತಕಾಲೇ ಚ ಸಂವಾಸಂ ಯಯಾ ಗಂತಾಸಿ ಕಾಂತಯಾ|
01109029c ಪ್ರೇತರಾಜವಶಂ ಪ್ರಾಪ್ತಂ ಸರ್ವಭೂತದುರತ್ಯಯಂ|
01109029e ಭಕ್ತ್ಯಾ ಮತಿಮತಾಂ ಶ್ರೇಷ್ಠ ಸೈವ ತ್ವಾಮನುಯಾಸ್ಯತಿ||
ಮತಿವಂತರಲ್ಲಿ ಶ್ರೇಷ್ಠ! ಅಂತ್ಯಕಾಲದಲ್ಲಿ ಯಾವ ಕಾಂತೆಯೊಡನೆ ಸಂಭೋಗದಲ್ಲಿ ತೊಡಗಿರುತ್ತೀಯೋ ಅವಳೂ ಕೂಡ ನಿನ್ನ ಮೇಲಿನ ಭಕ್ತಿಯಿಂದಾಗಿ ನಿನ್ನನ್ನೇ ಅನುಸರಿಸಿ ಸರ್ವಭೂತ ದುರತ ಪ್ರೇತರಾಜನ ವಶವನ್ನು ಹೊಂದುತ್ತಾಳೆ.
01109030a ವರ್ತಮಾನಃ ಸುಖೇ ದುಃಖಂ ಯಥಾಹಂ ಪ್ರಾಪಿತಸ್ತ್ವಯಾ|
01109030c ತಥಾ ಸುಖಂ ತ್ವಾಂ ಸಂಪ್ರಾಪ್ತಂ ದುಃಖಮಭ್ಯಾಗಮಿಷ್ಯತಿ||
ಸುಖವನ್ನು ಅನುಭವಿಸುತ್ತಿರುವಾಗ ನಿನ್ನಿಂದ ಹೇಗೆ ದುಃಖವನ್ನು ಹೊಂದಿದೆನೋ ಅದೇ ರೀತಿ ನೀನು ಸುಖವನ್ನು ಹೊಂದಿದಾಗ ಇದೇ ದುಃಖವು ನಿನಗೂ ದೊರೆಯುತ್ತದೆ.””
01109031 ವೈಶಂಪಾಯನ ಉವಾಚ|
01109031a ಏವಮುಕ್ತ್ವಾ ಸುದುಃಖಾರ್ತೋ ಜೀವಿತಾತ್ಸ ವ್ಯಯುಜ್ಯತ|
01109031c ಮೃಗಃ ಪಾಂಡುಶ್ಚ ಶೋಕಾರ್ತಃ ಕ್ಷಣೇನ ಸಮಪದ್ಯತ||
ವೈಶಂಪಾಯನನು ಹೇಳಿದನು: “ದುಃಖಾರ್ತನಾಗಿ ಹೀಗೆ ಹೇಳಿದ ಆ ಮೃಗವು ತನ್ನ ಜೀವವನ್ನು ತ್ಯಜಿಸಿತು. ಪಾಂಡುವಾದರೂ ಶೋಕಾರ್ತನಾಗಿ ಒಂದು ಕ್ಷಣ ಹಾಗೆಯೇ ನಿಂತುಕೊಂಡನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುಮೃಗಶಾಪೇ ನವಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುಮೃಗಶಾಪ ಎನ್ನುವ ನೂರಾಒಂಭತ್ತನೆಯ ಅಧ್ಯಾಯವು.