ಆದಿ ಪರ್ವ: ಸಂಭವ ಪರ್ವ
೧೦೩
ಗಾಂಧಾರಿ
ಭೀಷ್ಮ-ವಿದುರರು ಧೃತರಾಷ್ಟ್ರ ಮತ್ತು ಪಾಂಡುವಿನ ವಿಬಾಹದ ಕುರಿತು ಯೋಚಿಸಿದುದು (೧-೮). ನೂರು ಮಕ್ಕಳ ತಾಯಿಯಾಗುವ ವರವನ್ನು ಪಡೆದ ಸೌಬಲನ ಮಗಳು ಗಾಂಧಾರಿಯೊಂದಿಗೆ ಧೃತರಾಷ್ಟ್ರನ ವಿವಾಹ (೯-೧೨). ಗಾಂಧಾರಿಯು ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಪಾತಿವ್ರತ್ಯವನ್ನು ಪಾಲಿಸಿದುದು (೧೩-೨೧).
01103001 ಭೀಷ್ಮ ಉವಾಚ|
01103001a ಗುಣೈಃ ಸಮುದಿತಂ ಸಮ್ಯಗಿದಂ ನಃ ಪ್ರಥಿತಂ ಕುಲಂ|
01103001c ಅತ್ಯನ್ಯಾನ್ಪೃಥಿವೀಪಾಲಾನ್ಪೃಥಿವ್ಯಾಮಧಿರಾಜ್ಯಭಾಕ್||
ಭೀಷ್ಮನು ಹೇಳಿದನು: “ಸುಗುಣಗಳಿಂದ ಸಮುದಿತ ಈ ಪ್ರಖ್ಯಾತ ಕುಲವು ಭೂಮಿಯಲ್ಲಿನ ಅನ್ಯ ಎಲ್ಲ ಪೃಥ್ವೀಪಾಲರಮೇಲೆ ಪ್ರಭುತ್ವವನ್ನು ಸ್ಥಾಪಿಸಿದೆ.
01103002a ರಕ್ಷಿತಂ ರಾಜಭಿಃ ಪೂರ್ವೈರ್ಧರ್ಮವಿದ್ಭಿರ್ಮಹಾತ್ಮಭಿಃ|
01103002c ನೋತ್ಸಾದಮಗಮಚ್ಚೇದಂ ಕದಾ ಚಿದಿಹ ನಃ ಕುಲಂ||
01103003a ಮಯಾ ಚ ಸತ್ಯವತ್ಯಾ ಚ ಕೃಷ್ಣೇನ ಚ ಮಹಾತ್ಮನಾ|
01103003c ಸಮವಸ್ಥಾಪಿತಂ ಭೂಯೋ ಯುಷ್ಮಾಸು ಕುಲತಂತುಷು||
ಪೂರ್ವದಲ್ಲಿ ಮಹಾತ್ಮ ಧರ್ಮವಿದ್ವಾಂಸ ರಾಜರಿಂದ ರಕ್ಷಿಸಿಕೊಂಡು ಬಂದ ಈ ಕುಲವು ಎಂದೂ ಅಧೋಗತಿಯನ್ನು ಹೊಂದಿಲ್ಲ. ಇದನ್ನು ಕುಲತಂತುಗಳಾದ ನಿಮ್ಮ ಮೇಲೆ ಸತ್ಯವತಿ, ಮಹಾತ್ಮ ಕೃಷ್ಣ ಮತ್ತು ನಾನು ಹೊರಿಸಿದ್ದೇವೆ.
01103004a ವರ್ಧತೇ ತದಿದಂ ಪುತ್ರ ಕುಲಂ ಸಾಗರವದ್ಯಥಾ|
01103004c ತಥಾ ಮಯಾ ವಿಧಾತವ್ಯಂ ತ್ವಯಾ ಚೈವ ವಿಶೇಷತಃ||
ಪುತ್ರ! ಈ ಕುಲವು ಸಾಗರದಂತೆ ವರ್ಧಿಸಲು, ನನಗಿಂಥ ಹೆಚ್ಚು, ನೀನು ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಬೇಕು.
01103005a ಶ್ರೂಯತೇ ಯಾದವೀ ಕನ್ಯಾ ಅನುರೂಪಾ ಕುಲಸ್ಯ ನಃ|
01103005c ಸುಬಲಸ್ಯಾತ್ಮಜಾ ಚೈವ ತಥಾ ಮದ್ರೇಶ್ವರಸ್ಯ ಚ||
ನಮ್ಮ ಕುಲಕ್ಕೆ ಅನುರೂಪ ಯಾದವೀ ಕನ್ಯೆಯೊಬ್ಬಳು, ಸುಬಲನ ಮಗಳು ಮತ್ತು ಮದ್ರೇಶ್ವರನ ಮಗಳ ಕುರಿತು ಕೇಳಿದ್ದೇನೆ.
01103006a ಕುಲೀನಾ ರೂಪವತ್ಯಶ್ಚ ನಾಥವತ್ಯಶ್ಚ ಸರ್ವಶಃ|
01103006c ಉಚಿತಾಶ್ಚೈವ ಸಂಬಂಧೇ ತೇಽಸ್ಮಾಕಂ ಕ್ಷತ್ರಿಯರ್ಷಭಾಃ||
ಇವರೆಲ್ಲರೂ ಕುಲೀನರೂ, ರೂಪವತಿಯರೂ, ರಕ್ಷಣೆಯಲ್ಲಿದ್ದವರೂ ಆಗಿದ್ದು ಆ ಎಲ್ಲ ಕ್ಷತ್ರಿಯರ್ಷಭರೂ ನಮ್ಮೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳಲು ಸರಿಯಾದವರೇ ಆಗಿದ್ದಾರೆ.
01103007a ಮನ್ಯೇ ವರಯಿತವ್ಯಾಸ್ತಾ ಇತ್ಯಹಂ ಧೀಮತಾಂ ವರ|
01103007c ಸಂತಾನಾರ್ಥಂ ಕುಲಸ್ಯಾಸ್ಯ ಯದ್ವಾ ವಿದುರ ಮನ್ಯಸೇ||
ಈ ಕುಲದ ಸಂತಾನಾರ್ಥವಾಗಿ ಇವರನ್ನು ವರಿಸಬೇಕೆಂದು ನನ್ನ ಮತ. ಧೀಮಂತರಲ್ಲಿ ಶ್ರೇಷ್ಠ ವಿದುರ, ಇದರ ಕುರಿತು ನಿನ್ನ ಮತವೇನು?”
01103008 ವಿದುರ ಉವಾಚ|
01103008a ಭವಾನ್ಪಿತಾ ಭವಾನ್ಮಾತಾ ಭವಾನ್ನಃ ಪರಮೋ ಗುರುಃ|
01103008c ತಸ್ಮಾತ್ಸ್ವಯಂ ಕುಲಸ್ಯಾಸ್ಯ ವಿಚಾರ್ಯ ಕುರು ಯದ್ಧಿತಂ||
ವಿದುರನು ಹೇಳಿದನು: “ನೀನು ನಮ್ಮೆಲ್ಲರ ಪಿತ, ಮಾತ ಮತ್ತು ಪರಮ ಗುರು. ನಮ್ಮ ಈ ಕುಲಕ್ಕೆ ಹಿತವಾದದ್ದನ್ನು ನೀನೇ ಸ್ವಯಂ ವಿಚಾರಿಸಿ ನೆರವೇರಿಸಿಕೊಡು.””
01103009 ವೈಶಂಪಾಯನ ಉವಾಚ|
01103009a ಅಥ ಶುಶ್ರಾವ ವಿಪ್ರೇಭ್ಯೋ ಗಾಂಧಾರೀಂ ಸುಬಲಾತ್ಮಜಾಂ|
01103009c ಆರಾಧ್ಯ ವರದಂ ದೇವಂ ಭಗನೇತ್ರಹರಂ ಹರಂ|
01103009e ಗಾಂಧಾರೀ ಕಿಲ ಪುತ್ರಾಣಾಂ ಶತಂ ಲೇಭೇ ವರಂ ಶುಭಾ||
ವೈಶಂಪಾಯನನು ಹೇಳಿದನು: “ಆಗ ಸುಬಲಾತ್ಮಜೆ ಶುಭೆ ಗಾಂಧಾರಿಯು ವರದ ದೇವ ಭಗನೇತ್ರಹರ ಹರನನ್ನು ಆರಾಧಿಸಿ ನೂರು ಮಕ್ಕಳ ವರವನ್ನು ಪಡೆದಿದ್ದಾಳೆ ಎಂದು ವಿಪ್ರರ ಮೂಲಕ ಕೇಳಿದನು.
01103010a ಇತಿ ಶ್ರುತ್ವಾ ಚ ತತ್ತ್ವೇನ ಭೀಷ್ಮಃ ಕುರುಪಿತಾಮಹಃ|
01103010c ತತೋ ಗಾಂಧಾರರಾಜಸ್ಯ ಪ್ರೇಷಯಾಮಾಸ ಭಾರತ||
ಭಾರತ! ಇದನ್ನು ಕೇಳಿದ ಕುರುಪಿತಾಮಹ ಭೀಷ್ಮನು ದೂತನೋರ್ವನನ್ನು ಗಾಂಧಾರರಾಜನಲ್ಲಿಗೆ ಕಳುಹಿಸಿದನು.
01103011a ಅಚಕ್ಷುರಿತಿ ತತ್ರಾಸೀತ್ಸುಬಲಸ್ಯ ವಿಚಾರಣಾ|
01103011c ಕುಲಂ ಖ್ಯಾತಿಂ ಚ ವೃತ್ತಂ ಚ ಬುದ್ಧ್ಯಾ ತು ಪ್ರಸಮೀಕ್ಷ್ಯ ಸಃ|
01103011e ದದೌ ತಾಂ ಧೃತರಾಷ್ಟ್ರಾಯ ಗಾಂಧಾರೀಂ ಧರ್ಮಚಾರಿಣೀಂ||
ಕುರುಡನೆಂದು ಚಿಂತಿಸಿ ಸುಬಲನು ಹಿಂಜರಿದನು. ಆದರೂ ಕುಲ, ಖ್ಯಾತಿ, ಇತಿಹಾಸವನ್ನು ಬುದ್ಧಿಪೂರ್ವಕ ಸಮೀಕ್ಷಿಸಿ ಅವನು ಧರ್ಮಚಾರಿಣಿ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಕೊಟ್ಟನು.
01103012a ಗಾಂಧಾರೀ ತ್ವಪಿ ಶುಶ್ರಾವ ಧೃತರಾಷ್ಟ್ರಮಚಕ್ಷುಷಂ|
01103012c ಆತ್ಮಾನಂ ದಿತ್ಸಿತಂ ಚಾಸ್ಮೈ ಪಿತ್ರಾ ಮಾತ್ರಾ ಚ ಭಾರತ||
ಭಾರತ! ಗಾಂಧಾರಿಯಾದರೂ ಧೃತರಾಷ್ಟ್ರನು ಕುರುಡ ಮತ್ತು ತಂದೆ ತಾಯಿಯರು ತನ್ನನ್ನು ಅವನಿಗೆ ಕೊಡಲು ಬಯಸುತ್ತಿದ್ದಾರೆಂದು ಕೇಳಿದಳು.
01103013a ತತಃ ಸಾ ಪಟ್ಟಮಾದಾಯ ಕೃತ್ವಾ ಬಹುಗುಣಂ ಶುಭಾ|
01103013c ಬಬಂಧ ನೇತ್ರೇ ಸ್ವೇ ರಾಜನ್ಪತಿವ್ರತಪರಾಯಣಾ|
01103013e ನಾತ್ಯಶ್ನೀಯಾಂ ಪತಿಮಹಮಿತ್ಯೇವಂ ಕೃತನಿಶ್ಚಯಾ||
ರಾಜನ್! ಆಗ ಆ ಪತಿವ್ರತಾಪರಾಯಣೆ ಶುಭೆಯು ಒಂದು ಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿ ಹಲವು ಮಡಿಕೆಗಳನ್ನು ಮಾಡಿ ತನ್ನ ಕಣ್ಣುಗಳನ್ನು ಕಟ್ಟಿಕೊಂಡು ತನ್ನ ಪತಿಗಿಂಥ ಅಧಿಕ ಅನುಭವವು ತನಗೆ ಬೇಡ ಎಂಬ ದೃಢನಿಶ್ಚಯ ಮಾಡಿದಳು.
01103014a ತತೋ ಗಾಂಧಾರರಾಜಸ್ಯ ಪುತ್ರಃ ಶಕುನಿರಭ್ಯಯಾತ್|
01103014c ಸ್ವಸಾರಂ ಪರಯಾ ಲಕ್ಷ್ಮ್ಯಾ ಯುಕ್ತಾಮಾದಾಯ ಕೌರವಾನ್||
ನಂತರ ಗಾಂಧಾರರಾಜ ಪುತ್ರ ಶಕುನಿಯು ಅತ್ಯಂತ ಸಂಪತ್ತಿನೊಡನೆ ತನ್ನ ಅಕ್ಕನನ್ನು ಕೌರವನಿಗೋಸ್ಕರ ಕರೆತಂದನು.
01103015a ದತ್ತ್ವಾ ಸ ಭಗಿನೀಂ ವೀರೋ ಯಥಾರ್ಹಂ ಚ ಪರಿಚ್ಛದಂ|
01103015c ಪುನರಾಯಾತ್ಸ್ವನಗರಂ ಭೀಷ್ಮೇಣ ಪ್ರತಿಪೂಜಿತಃ||
ತಕ್ಕುದಾದ ಬಳುವಳಿಗಳೊಂದಿಗೆ ತನ್ನ ಅಕ್ಕನನ್ನಿತ್ತು ಭೀಷ್ಮನಿಂದ ಸತ್ಕರಿಸಲ್ಪಟ್ಟು ಆ ವೀರನು ತನ್ನ ನಗರಕ್ಕೆ ಹಿಂದಿರುಗಿದನು.
01103016a ಗಾಂಧಾರ್ಯಪಿ ವರಾರೋಹಾ ಶೀಲಾಚಾರವಿಚೇಷ್ಟಿತೈಃ|
01103016c ತುಷ್ಟಿಂ ಕುರೂಣಾಂ ಸರ್ವೇಷಾಂ ಜನಯಾಮಾಸ ಭಾರತ||
ಭಾರತ! ವರಾರೋಹೆ ಗಾಂಧಾರಿಯು ಶೀಲಾಚಾರ ವಿಚೇಷ್ಟೆಗಳಿಂದ ಕುರುಗಳೆಲ್ಲರನ್ನೂ ಸಂತುಷ್ಟಗೊಳಿಸಿದಳು.
01103017a ವೃತ್ತೇನಾರಾಧ್ಯ ತಾನ್ಸರ್ವಾನ್ಪತಿವ್ರತಪರಾಯಣಾ|
01103017c ವಾಚಾಪಿ ಪುರುಷಾನನ್ಯಾನ್ಸುವ್ರತಾ ನಾನ್ವಕೀರ್ತಯತ್||
ಅವರೆಲ್ಲರನ್ನೂ ತನ್ನ ನಡವಳಿಕೆಯಿಂದ ಆರಾಧಿಸಿದಳು. ಅವಳು ಎಷ್ಟು ಪತಿವ್ರತೆಯಾಗಿದ್ದಳೆಂದರೆ ಆ ಸುವ್ರತೆಯು ಅನ್ಯ ಪುರುಷರ ಕುರಿತು ಮಾತನ್ನೂ ಆಡುತ್ತಿರಲಿಲ್ಲ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಧೃತರಾಷ್ಟ್ರವಿವಾಹೇ ತ್ರ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಧೃತರಾಷ್ಟ್ರವಿವಾಹ ಎನ್ನುವ ನೂರಾಮೂರನೆಯ ಅಧ್ಯಾಯವು.